Date: 16-07-2023
Location: ಬೆಂಗಳೂರು
''ಬದುಕು ಯಾವ ಹಂತದಲ್ಲಿ ಯಾವ ಭಾಗ್ಯವನ್ನು ನಮಗಾಗಿ ಹೊತ್ತು ತರುತ್ತದೋ ತಿಳಿಯದು. ಅದಕ್ಕಾಗಿ ಒಂದಿಷ್ಟು ತಾಳ್ಮೆ ಬೇಕು. ಪರಿಶ್ರಮದಿಂದ ಕೆಲಸ ಕಲಿತು ವೃತ್ತಿಯಲ್ಲಿ ಪ್ರಾಮಾಣಿಕತೆ, ಶ್ರದ್ಧೆ, ಬದ್ಧತೆ ರೂಢಿಸಿಕೊಂಡರೆ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ನಟ, ರಂಗಭೂಮಿ ಕಲಾವಿದ, ಬೆಳಕಿನ ವಿನ್ಯಾಸಕ, ರಂಗ ವಿನ್ಯಾಸಕ, ರಂಗ ಪರಿಕರಗಳ ನಿರ್ಮಾಣಕಾರನಾಗಿರುವ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ಹೆಬ್ಬಸೂರು ಗ್ರಾಮದ ಪ್ರಶಾಂತ್ ಕುಮಾರ್ ಸಾಕ್ಷಿಯಾಗಿದ್ದಾರೆ''. ಅಂಕಣಗಾರ್ತಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ “ರಂಗಭೂಮಿಯಿಂದ ಪ್ರಶಾಂತ್ ಕುಮಾರ್ ಅವರ ಬದುಕು ರೂಪುಗೊಂಡ ಬಗೆಯನ್ನು” ಕಟ್ಟಿಕೊಟ್ಟಿದ್ದಾರೆ.
ಇವರದು ಮಧ್ಯಮವರ್ಗದ ಕೃಷಿ ಕುಟುಂಬ. ತಂದೆ ಬಸವರಾಜು ತಾಯಿ ಶಿವಮ್ಮ ಅವರ ಮೂರು ಮಕ್ಕಳಲ್ಲಿ ಪ್ರಶಾಂತ್ ಒಬ್ಬರು. ಓದಿನಲ್ಲಿ ಪ್ರತಿಭೆ ಇಲ್ಲದಿದ್ದರೂ ರಂಗಭೂಮಿಯಲ್ಲಿ ಅವರ ಬದುಕು ರೂಪುಗೊಂಡಿದ್ದು ಹೇಗೆ ಎಂಬುದನ್ನು, ಅವರ ಆಸಕ್ತಿ ಅವರ ಬದುಕನ್ನು ಚೆಂದವಾಗಿಸಿದ ಬಗೆಯನ್ನು ಅವರ ಮಾತುಗಳಲ್ಲಿ ಓದಿಕೊಳ್ಳಿ.
'ಕೃಷಿ ಕುಟುಂಬದಲ್ಲಿ ಹುಟ್ಟಿದೆನಾದ್ದರಿಂದ ಕೃಷಿ ನಮ್ಮ ಬದುಕಿನ ಒಂದು ಅಂಗವಾಗಿತ್ತು. ಗದ್ದೆಯಲ್ಲಿ ಸಿಗುವ ಮಣ್ಣನ್ನು ತೆಗೆದುಕೊಂಡು ಎತ್ತಿನಗಾಡಿ, ಎತ್ತುಗಳು, ಗಣೇಶನನ್ನು ಮಾಡಿ ಆಟ ಆಡೋದು ಚಿಕ್ಕಂದಿನಲ್ಲಿ ಹವ್ಯಾಸವಾಗಿತ್ತು. ಓದಿನಲ್ಲಿ ಹಿಂದುಳಿದರೂ ಚಿತ್ರ ಬಿಡಿಸುವುದರಲ್ಲಿ ಪ್ರವೀಣನಾಗಿದ್ದೆ. ಎಸ್. ಎಸ್. ಎಲ್. ಸಿ. ಯಲ್ಲಿ ಫೇಲ್ ಆದಮೇಲೆ ಮುಂದೆ ಏನು ಮಾಡಬೇಕು ಎನ್ನುವ ಗೊಂದಲವಿತ್ತು. ನನ್ನ ನಾನು ಗುರುತಿಸಿಕೊಳ್ಳುವ ಹಾಗೆ ಆಗಬೇಕು ಎನ್ನುವ ಅತೀವ ಹಂಬಲವಿತ್ತು. ಹಾಗಾಗಿ ಮೊದಲಬಾರಿಗೆ ನಾನು ನನ್ನ ಸ್ನೇಹಿತ ಮೈಸೂರಿಗೆ ಬಂದೆವು. ಅಲ್ಲಿ ಸಿಕ್ಕಿದ ಅಂಗಡಿಗಳಲ್ಲೆಲ್ಲ ಕೆಲಸ ಕೇಳ್ತಾ ಹೋದೆವು. ಕೊನೆಗೆ ಬಾರ್ ನಲ್ಲಿ ಕೆಲಸ ಸಿಕ್ತು. ಕೆಲಸ ಮಾಡಲು ಪ್ರಾರಂಭಿಸಿದೆವು ಅಲ್ಲಿ ಕೊಟ್ಟ ಸಂಬಳದಿಂದ ಟ್ಯೂಷನ್ ಗೆ ಸೇರಿಕೊಂಡು ಮತ್ತೆ ಎಸ್. ಎಸ್. ಎಲ್. ಸಿ. ಪರೀಕ್ಷೆ ಕಟ್ಟಿದೆವು ನನ್ನ ಫ್ರೆಂಡ್ ಪಾಸ್ ಆದ. ನಾನು ಮತ್ತೆ ಫೇಲ್ ಆದೆ. ನಂತರ ರೂಮ್ ಬಾಯ್ ಆಗಿ ಲಾಡ್ಜ್ ವೊಂದರಲ್ಲಿ ಸ್ವಲ್ಪ ದಿನ ಕೆಲಸ ಮಾಡಿದೆ. ಅಲ್ಲಿಂದ ಸಿನೆಮಾ ನನ್ನ ಗಮನ ಸೆಳೆಯಿತು. ನಂತರ ಸಿನೆಮಾ ಡೈರೆಕ್ಟರ್, ಸ್ಕ್ರಿಪ್ಟ್ ಬರೆಯುವವರ ಪರಿಚಯವಾಗುತ್ತ ಹೋಯ್ತು. ಬೆಂಗಳೂರಿನ ಕಬ್ಬನ್ ಪೇಟೆ ಲಾಡ್ಜ್ ನಲ್ಲಿ ಕೆಲಸ ಮಾಡ್ತಾ ಗಾಂಧಿನಗರ ನನಗೆ ತುಂಬ ಹತ್ತಿರವಾಯ್ತು. ಸಿನೆಮಾ ರಂಗಕ್ಕೆ ಹೋಗಬೇಕು ಅಂತ ವೀಕೆಂಡ್ ಕ್ಲಾಸ್ ಗೆ ಸೇರಿಕೊಂಡೆ. ಬೆಳಗ್ಗೆ ಲಾಡ್ಜಿನಲ್ಲಿ ಕೆಲಸ ಮಾಡ್ತಾ ಸಂಜೆ ರಿಹರ್ಸಲ್ ಗೆ ಹೋಗುತ್ತಿದ್ದೆ. ನಾಟಕಗಳನ್ನು ಪ್ರಾಕ್ಟೀಸ್ ಮಾಡಿ ಮಾಡಿ ರೂಢಿಮಾಡಿಕೊಂಡೆ. ನಂತರ ಬೀದಿ ನಾಟಕಗಳನ್ನು ಮಾಡುತ್ತ ಸಾಕಷ್ಟು ಶೋಗಳನ್ನು ಮಾಡಿದೆ. ಅದಾದ ಎಷ್ಟೋ ವರ್ಷಗಳ ನಂತರ ಸೀರಿಯಲ್, ಸಿನೆಮಾ ಅಂತ ಆಡಿಷನ್ ಗೆ ಹೋಗ್ತಾ ಇದ್ದೆ. ಆದರೆ ಎಂತಹ ಬಟ್ಟೆ ಹಾಕಿಕೊಂಡು ಹೋಗಬೇಕು ಅಂತ ಗೊತ್ತಾಗ್ತಿರಲಿಲ್ಲ. ಹೇಗಿರುತ್ತಿದ್ದೆನೋ ಹಾಗೆ ಹೋಗಿ ಬಿಡುತ್ತಿದ್ದೆ. ಬ್ರ್ಯಾಂಡೆಡ್ ಬಟ್ಟೆ ಹಾಕಿಕೊಂಡು ಹೈಫೈಯಾಗಿ ಹೋಗುವುದು ಗೊತ್ತಿರಲಿಲ್ಲ. ಅವರು ಕೇಳಿದಾಗ ಒಂದು ಅಭಿನಯ ಮಾಡಿ ತೋರಿಸ್ತಾ ಇದ್ದೆ. ಸರಿ ಹೇಳುತ್ತೇನೆ ಹೋಗಿ ಅಂತಿದ್ರು. ಯಾರೂ ಕರೀತಾ ಇರಲಿಲ್ಲ. ಧಾರಾವಾಹಿಗಳಲ್ಲಿ, ಸಿನೆಮಾಗಳಲ್ಲಿ ಪಾತ್ರ ಮಾಡಬೇಕು ಅಂದ್ರೆ ಕಟ್ಟುಮಸ್ತಾದ ದೇಹ ಮಾಡಿಕೊಂಡು ಚೆಂದ ಕಾಣುವುದು, ಔಟ್ಲುಕ್ ಎಲ್ಲ ಲೆಕ್ಕಕ್ಕೆ ಬರತ್ತೆ ಅಂತ ಗೊತ್ತಾಗುವಷ್ಟರಲ್ಲಿ ತುಂಬ ಸಮಯ ಕಳೆದಿತ್ತು. ಆಗ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವುದು ಸೂಕ್ತ ಅಂತ ಅನ್ನಿಸ್ತು. 2007ರಲ್ಲಿ ಶೂಟ್ ಆಗಿ 2009ರಲ್ಲಿ 'ಅ' ಸಿನೆಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ನಾನು ನನ್ನ ಫ್ರೆಂಡ್ ಹರೀಶ್ ಸೇರಿ ಮಾಡಿದ್ವಿ. ಅದಾದ ಮೇಲೆ ಬೇರೆ ಬೇರೆ ಸಿನೆಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದೆ. ನನ್ನ ದುರದೃಷ್ಟವೋ ಏನೋ ಗೊತ್ತಿಲ್ಲ. ನಾನು ಹೋದ ಸಿನೆಮಾಗಳೆಲ್ಲ ಮುಹೂರ್ತ ಆದರೆ ಮುಗೀತು ಶೂಟಿಂಗ್ ಆಗದೇ ನಿಂತು ಹೋಗುತ್ತಿದ್ದವು'.
'ಹೀಗಿರುವಾಗ 2013 ರ ಫೆಬ್ರವರಿಯಲ್ಲಿ ಧಾರವಾಡದಿಂದ ಮಕ್ಕಳ ನಾಟಕಕ್ಕೆ ಆಫರ್ ಬಂತು. ನೀವು ಸೆಟ್ ಪ್ರಾಪರ್ಟಿ ವರ್ಕ್ ಮಾಡ್ತೀರಲ್ಲ ಹಾಗಾಗಿ ಇಲ್ಲಿ ಮಾಡುವ ನಮ್ಮ ಒಂಭತ್ತು ನಾಟಕಗಳಿಗೆ ನೀವೇ ಕೆಲಸ ಮಾಡಬೇಕು ಅಂತ ಹೇಳಿದರು. ಎಂಟು ನಾಟಕಗಳು ಮಕ್ಕಳವು, ಒಂದು ಶಿಕ್ಷಕರ ನಾಟಕ ಮಾಡಬೇಕಿತ್ತು. ಇಪ್ಪತ್ತೈದು ದಿನಗಳ ಸಮಯ ಇತ್ತು ಆಯ್ತು ಅಂತ ಒಪ್ಪಿಕೊಂಡೆ. ರಾತ್ರಿ ಹಗಲು ಕುಳಿತುಕೊಂಡು ಅದಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಅಲ್ಲಿಯವರೆಗೆ ನಮ್ಮ ತಂಡದಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದೆ. ಎರಡು ಮೂರು ದಿನಕ್ಕೆ ಕೆಲಸ ಚೆನ್ನಾಗಿ ಸಾಗುತ್ತ ಸಾಕಷ್ಟು ಖುಷಿಕೊಟ್ಟಿತು. ಅಲ್ಲಿಂದಾಚೆಗೆ ಏನು ಬೇಕಾದರೂ ಮಾಡುವಂತಾದೆ. ಅಲ್ಲಿಂದ ಹೊರಗಡೆ ಬಂದ ಮೇಲೆ ರಂಗಭೂಮಿಯವರು ನನ್ನನ್ನು ಗುರುತಿಸಲು ಪ್ರಾರಂಭಿಸಿದರು. ಪ್ರಶಾಂತ್ ಚೆನ್ನಾಗಿ ಕೆಲಸ ಮಾಡುತ್ತಾನೆ ಅಂತ ಮಾತನಾಡುತ್ತಿದ್ದರು. ನಾಟಕದಲ್ಲಿ ಎಲ್ಲಕ್ಕಿಂತ ಹೈಲೈಟ್ ಆಗಿದ್ದು ಸೆಟ್, ಪ್ರಾಪರ್ಟಿ. ಡೈರೆಕ್ಟರ್ ಫೋನ್ ಮಾಡಿ ಸೆಟ್ ಪ್ರಾಪರ್ಟಿ ತುಂಬ ಚೆನಾಗಿದೆ ಅಂತ ಹೇಳುತ್ತಿದ್ದರು. ಹೀಗೆ ಅದು ಫೇಮಸ್ ಆಯ್ತು. ಅದೇ ನನ್ನ ಬದುಕಿಗೆ ಒಳ್ಳೆಯ ತಿರುವಾಯ್ತು. ಆಗ ನನ್ನ ಸ್ನೇಹಿತೆ ಗಂಗಾ NSD (National School of Drama) ಬೆಂಗಳೂರಿನಲ್ಲಿ ಥಿಯೇಟರ್ ಕೋರ್ಸಿಗೆ ಅರ್ಜಿ ಹಾಕಿದರು. ಆಯ್ಕೆ ಆಯ್ತು, ಅಲ್ಲಿಂದ ಆರು ತಿಂಗಳು ಕಲಿಯಲು ಪ್ರಾರಂಭಿಸಿದೆ. ಕೋಲಾಟ, ಕಲಹರಿ, ಕಥಕ್ಕಳಿ, ಯಕ್ಷಗಾನ, ಪಪ್ಪೆಟ್ ಶೋ, ಯೋಗಾಸನ, ಮಲ್ಟಿ ಮೀಡಿಯಾ ಥೀಯೇಟರ್ ಗಳ ಬಗ್ಗೆ ತರಬೇತಿಯಲ್ಲಿ ಕಲಿಯುವ ಅವಕಾಶವಿತ್ತು. ಪ್ರತೀದಿನ ಸ್ಟೇಜ್ ಮೇಲೆ ನಾಟಕ ಮಾಡೋದು ಇರುತ್ತಿತ್ತು. ಆಗ ಸ್ಟೇಜ್ ಫಿಯರ್ ಹೋಗಿಬಿಡ್ತು. ಲೈಟ್ಸ್, ಕಾಸ್ಟ್ಯೂಮ್ಸ್, ಮೇಕ್ಅಪ್, ಸೆಟ್ ಪ್ರಾಪರ್ಟಿ, ವಿನ್ಯಾಸ ಅಂದರೇನು ಅಂತ ಆಳವಾಗಿ ಅರ್ಥವಾಗುತ್ತಾ ಹೋಯ್ತು. ಅಲ್ಲಿಗೆ ಹೋದಾಗ ಸೆಟ್ ಪ್ರಾಪರ್ಟಿ ಬಗ್ಗೆ ಇನ್ನೊಂದಷ್ಟು ಯೋಚನೆಗಳು ಬಂದವು.'
'ಭಾರತ ಭಾಗ್ಯವಿಧಾತ, ರಾಮಾಯಣ ದರ್ಶನಂನಲ್ಲಿ ಸೆಟ್ ಪ್ರಾಪರ್ಟಿ ಮೇಕಿಂಗ್ ಜೊತೆಗೆ ಲೈಟಿಂಗ್ ಅನ್ನೋದು ಇತ್ತು. ಮೊದಲ ಬಾರಿಗೆ ಕುವೆಂಪುರವರ 'ಮಲೆಗಳಲ್ಲಿ ಮಧುಮಗಳು' ಒಂಭತ್ತು ತಾಸಿನ ನಾಟಕಕ್ಕೆ ಲೈಟಿಂಗ್ ಮಾಡಿದೆ. ಕೆಲವೊಂದು ನಾಟಕಗಳಿಗೆ ಲೈಟಿಂಗ್, ಕೆಲವೊಂದು ನಾಟಕಗಳಿಗೆ ಸೆಟ್ ಪ್ರಾಪರ್ಟಿ, ಕಾಸ್ಟ್ಯೂಮ್ ಡಿಸೈನ್ ಮಾಡ್ತಾ ಈ ರೀತಿಯಾಗಿ ಮೂರು ವಿಭಾಗಗಳಲ್ಲಿ ಕೆಲಸ ಮಾಡುತ್ತ ಬಂದೆ. ನಾಟಕದಲ್ಲಿ ಎಲ್ಲಾ ಕಡೆ ಮೊದಲು ತೋರಿಸೋದೆ ಬೆಳಕು. ನಾವು ಏನೇ ಮೇಕ್ಅಪ್ ಮಾಡಿದ್ರೂ, ಏನೇ ನಾಟಕ ಮಾಡಿದ್ರೂ ಅದನ್ನು ಸ್ಪಷ್ಟವಾಗಿ ಜನರಿಗೆ ತೋರಿಸೋದು ಬೆಳಕು. ಅದಕ್ಕೆ ನಾವು ಮೊದಲ ಆದ್ಯತೆ ಬೆಳಕಿಗೆ ಕೊಡಬೇಕಾಗುತ್ತದೆ. ಬೆಳಕಿಗೆ ಕಲರ್, ಎಫೆಕ್ಟ್, ಮೋಡ್, ಮೂನ್ ಸೋರ್ಸ್, ಇಂಟೆನ್ಸಿಟಿ ಲೆವೆಲ್, ಯಾವಾಗ ಏನು ಬದಲಾವಣೆ ಮಾಡಬೇಕು ಎನ್ನುವ ಎಲ್ಲವನ್ನು ಗಮನಿಸಿ ಬೆಳಕಿನ ನಿರ್ವಹಣೆ ಮಾಡಬೇಕಾಗುತ್ತದೆ. ನಾನು ಈ ಕೆಲಸ ಕಲಿತಿದ್ದೇನೆ ಅಂದರೆ ನರಸಿಂಹಯ್ಯ ಸರ್, ಸುರೇಶ್, ಜಿ. ಕುನ್ನಿ, ಪ್ರಮೋದ್ ಸರ್ ಕಾರಣ. ಇವರ ಜೊತೆಗೆ ಕೆಲಸ ಮಾಡ್ತಾ ಎಷ್ಟು ಕಲರ್ಫುಲ್ ಆಗಿ ವಿನ್ಯಾಸ ಮಾಡಬಹುದು ಅನ್ನೋದನ್ನು ಕಲಿತೆ. ನಾಟಕ ಎಂದ ಕೂಡಲೇ ಸಂಬಂಧಿಕರು ಜರಿದರು, ವಿರೋಧಿಸಿದರು. ಇವತ್ತು ಪ್ರತೀ ಜಿಲ್ಲೆಯಲ್ಲೂ ಶೋ ಮಾಡ್ತಾ ಓಡಾಡ್ತಾ ಇದ್ದೇನೆ. ಅಲ್ಲದೆ ದೆಹಲಿಯವರೆಗೆ ಹೋಗಿ ಬಂದಿದ್ದೇನೆ. ರಂಗಭೂಮಿಯಿಂದ, ನಾಟಕದಿಂದ ಇದೆಲ್ಲ ಸಾಧ್ಯವಾಗಿದ್ದು. ನಮ್ಮ ಕುಟುಂಬದ ಎಲ್ಲರೂ ಇವತ್ತು ನೆಮ್ಮದಿಯಿಂದ ಊಟ ಮಾಡುತ್ತಿದ್ದೇವೆ ಅಂದ್ರೆ ಅದು ಈ ರಂಗಭೂಮಿಯ ದುಡಿಮೆಯಿಂದಲೇ. ಸಾಮಾನ್ಯವಾಗಿ ವರ್ಷಕ್ಕೆ ಸಾವಿರಾರು ಮಂದಿ ನಟರು ಬಂದು ಹೋಗುತ್ತಾರೆ. ಆದರೆ ಸ್ಟೇಜಿನ ಹಿಂದೆ ಕೆಲಸ ಮಾಡಲು ಬಹುತೇಕರು ಮನಸ್ಸು ಮಾಡಲ್ಲ. ಆದರೆ ಈ ಕೆಲಸ ನನಗೆ ಖುಷಿ ಕೊಡುತ್ತಿದೆ. ಇಡೀ ರಾತ್ರಿ ಕೂತು ಕೆಲಸ ಮಾಡುತ್ತೇನೆ. ಮಕ್ಕಳ ನಾಟಕಗಳನ್ನು ಮಾಡುವಾಗ ತುಂಬ ಖುಷಿ ಕೊಡತ್ತೆ. ಹಲವಾರು ಪ್ರಯೋಗಗಳನ್ನು ಮಾಡುತ್ತಿರುತ್ತೇನೆ. ನಾನು ಮಾಡಿದ ಸೆಟ್ ಪ್ರಾಪರ್ಟಿ ಅಂದ್ರೆ ಈಗ ತುಂಬ ಜನ ಖುಷಿ ಪಡುವವರೇ. ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮಾಡಿರುತ್ತಾರೆ ಎನ್ನುವ ನಿರೀಕ್ಷೆ ಇರುತ್ತದೆ. ಕಾರ್ಡ್ ಬೊರ್ಡ್ ಶೀಟ್, ಥರ್ಮಾಕೋಲ್, ಪೇಂಟಿಂಗ್ಸ್, ಹ್ಯಾಂಡ್ ಮೇಡ್ ಶೀಟ್, ಬ್ಯಾನರ್, ಬಟ್ಟೆ ಹೀಗೆ ಇತ್ಯಾದಿ ವಸ್ತುಗಳನ್ನು ಬಳಸಿಕೊಂಡು ನಾಟಕಕ್ಕೆ ಬೇಕಾಗುವ ಸೆಟ್ ಪ್ರಾಪರ್ಟಿ ಮಾಡುತ್ತೇನೆ. ನನ್ನ ಬದುಕು ನಡೆಯಬೇಕು ನಾನು ರಂಗಭೂಮಿಯಲ್ಲೇ ಇರಬೇಕು'.
ಬಿಡುವಿರದೆ ಅವಕಾಶಗಳು ಇವರನ್ನು ಅರಸಿ ಬರುತ್ತಿರುವುದು ಇವರ ವೃತ್ತಿಬದ್ಧತೆಗೆ ಸಾಕ್ಷಿ. ಜೊತೆಗೆ ಇವರು ಮಕ್ಕಳ ತಂಡ ಕಟ್ಟಿಕೊಂಡು ತಮ್ಮ ಕಲಾ ನೈಪುಣ್ಯತೆಯನ್ನು ಅವರಿಗೆ ಧಾರೆಯೆರೆದು ಕಲಾವಿದರನ್ನು ಸೃಷ್ಟಿಸುತ್ತಿದ್ದಾರೆ. ಬದುಕಿನ ನೂರಾರು ಜಂಜಡಗಳಲ್ಲೂ ಕುಗ್ಗದೆ, ಹಗಲು ರಾತ್ರಿ ಎನ್ನದೆ ಅಚ್ಚುಕಟ್ಟಾಗಿ, ಪ್ರಾಮಾಣಿಕವಾಗಿ ವೃತ್ತಿಯಲ್ಲಿ ತೊಡಗಿಕೊಂಡು ಪ್ರಸ್ತುತ ಶಿವಮೊಗ್ಗ ರಂಗಾಯಣದಲ್ಲಿ ಕಲಾ ನಿರ್ದೇಶಕರಾಗಿ, ಬೆಳಕಿನ ವಿನ್ಯಾಸ, ರಂಗ ವಿನ್ಯಾಸ, ರಂಗ ಪರಿಕರಗಳ ನಿರ್ಮಾಣಕನಾಗಿ ಪ್ರೀತಿಯಿಂದ ಖುಷಿಯಿಂದ ಬದುಕನ್ನು ಕಟ್ಟಿಕೊಂಡಿರುವ ಪ್ರಶಾಂತ್ ಅವರ ಮುಂದಿನ ಬದುಕು ಬಣ್ಣಮಯವಾಗಿರಲಿ ಎಂಬುದು ನಮ್ಮ ಹಾರೈಕೆ.
ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಬರಹಗಳು:
ವಿನು ಮಾವುತ ಅವರ ಗಜಪ್ರೀತಿ
ರಂಗಭೂಮಿಯ ಆರಾಧಕ, ಸಾಹಿತ್ಯ ಪ್ರೇಮಿ ನಂದಕುಮಾರ
ಫೋಟೋಗ್ರಾಫರ್ ಆಗುವ ಕನಸೂ ಇಲ್ಲದೆ ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ
ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್
ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.