ರಚನಾ ಕೌಶಲದ ‘ಅಬ್ಬೋಲಿ’ ಕಥೆಗಳು


ಪ್ರೇಮದ ವಿವಿಧ ಆಯಾಮಗಳನ್ನು ಅತ್ಯಂತ ನವಿರಾಗಿ ಚಿತ್ರಿಸುವ ಹಾಗೂ ಮಹಿಳಾ ಸಬಲೀಕರಣದ ವ್ಯಕ್ತಿತ್ವಗಳನ್ನು‘ಮಾದರಿ’ಯಾಗಿಸುವ ರಚನಾ ಕೌಶಲವನ್ನು ಕಥೆಗಾರ್ತಿ ಅಕ್ಷತಾ ಕೃಷ್ಣಮೂರ್ತಿ ಅವರು, ತಮ್ಮ ‘ಅಬ್ಬೋಲಿ’ ಕಥಾ ಸಂಕಲನದ ಮೂಲಕ ಸಾಧ್ಯವಾಗಿಸಿದ್ದಾರೆ ಎಂದು ಪತ್ರಕರ್ತ ವೆಂಕಟೇಶ ಮಾನು ಅವರು ವಿಶ್ಲೇಷಿಸಿದ ಬರಹವಿದು.

ಪ್ರೇಮ ಎಂಬುದು ಗಂಡಿಗೆ ಬದುಕಿನ ಭಾಗ ಮಾತ್ರ, ಹೆಣ್ಣಿಗೆ ಇಡೀ ಬದುಕು.’! ಬ್ರಿಟನ್ ಕಾದಂಬರಿಗಾರ್ತಿ ಮೇರಿ ಕೊರೆಲಿ ಅವರ ಕಾದಂಬರಿಯ (open confession of a man from a woman) ಸಾಲು ಇದು .ಪ್ರೇಮ ವೈಫಲ್ಯದಲ್ಲಿ ಹೆಣ್ಣಿನ ನೋವು ಗಂಡಿಗಿಂತ ಭೀಕರ. ಅವಳು ಸಾಮಾಜಿಕ ಗೌರವವನ್ನು ಕಾಯ್ದುಕೊಂಡು ಶಮನಗೊಳಿಸಿಕೊಳ್ಳುವ ಪರಿ, ಹೆಣ್ಣಿನ ಪ್ರಬುದ್ಧ ವ್ಯಕ್ತಿತ್ವಕ್ಕೆ ಪ್ರತೀಕ. ಲೇಖಕಿ ಅಕ್ಷತಾ ಕೃಷ್ಣಮೂರ್ತಿ ಅವರ ‘ಅಬ್ಬೋಲಿ’ಯ 12 ಕಥೆಗಳ ಪೈಕಿ, ನಾಲ್ಕು ಕಥೆಗಳ ಹಂದರದಲ್ಲಿ ಇಂತಹ ಭಾವದ ಪರಿಕರಗಳಿವೆ. ಉಳಿದ ಕಥೆಗಳಲ್ಲಿ ಸಾಮಾಜಿಕ ವಿದ್ಯಮಾನದ ವಸ್ತುವಿದೆ. ಕಥೆಯ ವ್ಯಕ್ತಿ-ಘಟನೆ-ಸನ್ನಿವೇಶಗಳು ಕೇವಲ ‘ನೋಡು’, ‘ಕಾಣು’ ಮಟ್ಟದಲ್ಲಿರದೇ ‘ವೀಕ್ಷಣೆ’ಯ ಸೂಕ್ಷ್ಮ ಒಳನೋಟಗಳನ್ನು ಹೊಂದಿದ್ದು, ಕಥೆಯ ಗಂಭೀರತೆ ಹೆಚ್ಚಿಸಿವೆ.

ಜೀವನ ಚರಿತ್ರೆ, ಕವನ ಸಂಕಲನ, ವಿಮರ್ಶೆ ಕೃತಿಗಳನ್ನು ರಚಿಸಿರುವ ಅಕ್ಷತಾ, ಇದೇ ಮೊದಲ ಬಾರಿ ‘ಅಬ್ಬೋಲಿ’ ಸಂಕಲನ ಮೂಲಕ ಕಥೆಗಳನ್ನು ಹೆಣೆಯುವ ಕೌಶಲ ತೋರಿದ್ದು, ವಸ್ತುಗಳ ಆಯ್ಕೆ, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ-ಸಂಭಾಷಣೆಯಲ್ಲೂ ಪ್ರಬುದ್ಧತೆ ಮೆರೆದಿದ್ದಾರೆ. ಸ್ವತಃ ಕವಯತ್ರಿ ಆಗಿರುವ ಲೇಖಕಿ, ಭಾವಗಳ ಕಾವ್ಯಾತ್ಮಕ ಬರಹದ ಸಾಮರ್ಥ್ಯವು ಕಥೆಗಳನ್ನು ಆಪ್ತವಾಗಿಸುತ್ತವೆ.

ನೀ ಬಂದಾಗಲೇ ಬೆಳಕು….!: ‘ಯಾರನ್ನೂ ನೋಯಿಸಬಾರದು’ ಎಂದು ಹೇಳುತ್ತಲೇ ನಡೆಯುವ ಪ್ರೇಮಿಯ ಈ ದೂರ, ಅನಂತ ಅನಂತ ಎಂದು ತಿಳಿದಿದ್ದರೂ, ಬದುಕಿನ ವೃತ್ತ ಪರಿಧಿಯಲ್ಲಿ ಯಾವುದೋ ಒಂದು ಬಿಂದುವಿನಲ್ಲಿ ಸಂಧಿಸುವ ಭರವಸೆ ಇಟ್ಟುಕೊಂಡು ‘ನೀ ಬಂದಾಗಲೇ ಬೆಳಕು’ ಎಂಬ ಭಾವದೊಂದಿಗೆ ಬದುಕುವ ಹೆಣ್ಣು- ಯಾಕೆ ಹೆದರಬೇಕು ವಸಂತಗಳಿಗೆ, ಗುಬ್ಬಚ್ಚಿ ಗೂಡು, ನೀನು ನನನ್ನಾವರಿಸಿದ ಪಾತ್ರ ಹಾಗೂ ಬಂಗಾರ ಬಣ್ಣದ ತೀರ-ಈ ಎಲ್ಲ ನಾಲ್ಕು ಕಥೆಗಳ ನಾಯಕಿ. ಈ ನಾಲ್ಕೂ ಕಥೆಗಳ ಕೇಂದ್ರ -ಪ್ರೇಮ. ಪ್ರೇಮದಲ್ಲಿ ಹೆಣ್ಣಿನ ಬದ್ಧತೆಯೇ ಕಥಾ ಪ್ರಜ್ಞೆ.

ತಂದೆ-ತಾಯಿ-ಬಂಧು-ಬಳಗ ಹೀಗೆ ಅವರಿವರು ಹೇಳಿದಂತೆ ಬೆಳೆಯುತ್ತಾ ಬಂದ ಹೆಣ್ಣು(ಆವಂತಿಕಾ) ತನ್ನತನವನ್ನು ಕಾಣುವುದು ಈ ಪ್ರೇಮದ ಮೂಲಕ ಎಂಬುದನ್ನು ತೋರುವ ಕಥೆ-ಯಾಕೆ ಹೆದರಬೇಕು ವಸಂತಗಳಿಗೆ..!.‘ನನ್ನಿಂದ ಬೇರೆಯವರಿಗೆ ನೋವಾಗುವುದಾದರೆ ನಾನು ಈ ಕ್ಷಣಕ್ಕೇ ದೂರವಾಗುತ್ತೇನೆ’ ಎನ್ನುವ (ಪಾತ್ರ ಹೃಷಿಕೇಶ) ಮಾತು, ಗಂಡಿನ ಪ್ರೇಮದ ಆದರ್ಶವಾಗಿ ಮೇಲ್ನೋಟಕ್ಕೆ ಕಂಡು ಬಂದರೂ ಅದು ಪ್ರೇಮಿಯಿಂದ ದೂರವಾಗುವ ರಕ್ಷಣಾತ್ಮಕ ತಂತ್ರವೂ ಆಗುವುದು. ಏಕೆಂದರೆ,‘ ನನ್ನ ಪ್ರೇಮಕ್ಕೆ ಬೆಲೆ ಇಲ್ಲವೇ? ಸ್ನೇಹವೇ ಆಗಿದ್ದರೆ ಇಷ್ಟೆಲ್ಲ ಹತ್ತಿರವಾಗುತ್ತಿದ್ದೇವಾ ಹೇಳು’ ಎಂದು ಆಕೆ ಪ್ರಶ್ನಿಸುತ್ತಾಳೆ. ಪ್ರೇಮದಂತಹ ವಿಷಯದಲ್ಲೂ ಪುರುಷ ಪ್ರಾಧಾನ್ಯತೆ ಮೆರೆಯುವುದನ್ನು ಕಂಡ ನಾಯಕಿ, ‘ಇನ್ನು ಮುಂದೆ ಬೇರೆಯವರು ಬಯಸಿದಂತೆ ಇರಲಾರೆ. ಇಪ್ಪತ್ತೆಂಟಲ್ಲ, ಮೂವ್ವತ್ತಾಗಲಿ, ಮೂವ್ವತ್ತೈದಾಗಲಿ, ನಲವತ್ತಾಗಲಿ...ಯಾಕೆ ಹೆದರಬೇಕು ವಸಂತಗಳಿಗೆ…? ಎಂದು ಪ್ರಶ್ನಿಸುವ ಮೂಲಕ ಪ್ರೇಮದ ನೆಪದಲ್ಲಿ ಹೆಣ್ಣಿನ ಮನಸ್ಸನ್ನು ನೋಯಿಸುವ ಪುರುಷರ ಈವರೆಗಿನ ಎಲ್ಲ ಸಂಚುಗಳ ವಿರುದ್ಧ ಸವಾಲು ಎಸೆಯುತ್ತಾಳೆ. ಮಾತ್ರವಲ್ಲ; ಎಲ್ಲೋ ಒಂದು ಕಡೆ, ಕಣ್ಣಿಗೆ ಕಾಣದಿದ್ದರೂ ಖುಷಿಯ ಬೆಳಕಾಗಿ ನೀನು ಇರುವೆ. ಕಾಯುತ್ತಿದ್ದೇನೆ. ನೀ ಬಂದಾಗಲೇ ಬೆಳಕು’ ಎಂದು ಹೆಣ್ಣಿಗೆ ಮಾತ್ರ ಪ್ರೇಮದ ಬದ್ಧತೆ ಇರುವುದು ಎಂಬುದು ಕಥೆಯ ಖಚಿತ ಧ್ವನಿ. ಇದು, ಸದಾ ಎಚ್ಚರದ ಪ್ರಜ್ಞೆಯಾಗಿಯೂ ಇದೆ. ಪ್ರೇಮದಲ್ಲಿ ಬದ್ಧತೆ ಎಂಬುದು ಹೆಣ್ಣಿನ ಘನತೆಯ ಶಾಶ್ವತ ಅಸ್ತಿತ್ವವೇ ಆಗಿದೆ ಎಂಬ ಸಂದೇಶವೂ ಇದೆ. ಅದಕ್ಕಾಗಿ, ‘ಯಾಕೆ ಹೆದರಬೇಕು ವಸಂತಗಳಿಗೆ’ ಎಂಬ ಶೀರ್ಷಿಕೆಯು ಹೆಣ್ಣಿನ ದೌರ್ಬಲ್ಯಗಳನ್ನು ಅವಹೇಳನ ಮಾಡುವ ಸಾಂಪ್ರದಾಯಿಕ ನಡೆಗೆ ಸೂಕ್ತ ಉತ್ತರವೂ ನೀಡುತ್ತದೆ.

ನೀ ಕಣ್ಣು ಬಿಟ್ಟಾಗಲೇ ಬೆಳಕು…!: ‘ಯಾಕೆ ಹೆದರಬೇಕು ವಸಂತಗಳಿಗೆ’ ಎಂಬ ಕಥೆಯ ಜಾಡಿನಲ್ಲಿ ಹೆಜ್ಜೆ ಇರಿಸುವ ‘ಗುಬ್ಬಚ್ಚಿ ಗೂಡು’ ಕಥೆಯಲ್ಲೂ ಅದೇ ಹೆಸರಿನ ನಾಯಕ-ಹೃಷಿಕೇಶ. ‘ತನ್ನಷ್ಟು ಸುಂದರವಾದ ಹೆಣ್ಣು ಸಿಕ್ಕಿದ್ದು ಅತನ ಅಹಂಕಾರದ ಕಿರೀಟಕ್ಕೆ ಸಿಕ್ಕಿಸಿಕೊಂಡ ನವಿಲುಗರಿ ಮಾತ್ರ’ ಎಂದು ಅರಿವಾಗುವ ಹೊತ್ತಿಗೆ ನಾಯಕಿ ಮಾಧುರ್ಯ ಸಿರಿ, ಪ್ರೇಮದ ತಂಗಾಳಿಯೂ ಸುಡುತ್ತಿರುತ್ತದೆ. ಆದರೂ..ಅವನಿಗೆ ಅನುಕೂಲವಾಗುವಂತೆ ತನ್ನ ಮನಸ್ಥಿತಿಯನ್ನು ಸಿದ್ಧ ಮಾಡಿಕೊಂಡಿರುವೆ ಎನ್ನುವಂತೆ ‘ದೀಪ ಹಚ್ಚಿದರೂ ಕಣ್ಣು ಮುಚ್ಚಿಕೊಂಡಿರುವೆ ನೀನು, ನೀ ಕಣ್ಣು ಬಿಟ್ಟಾಗಲೇ ಬೆಳಕು’ ಎಂದು ಹೇಳುತ್ತಾಳೆ. ಇಲ್ಲಿಯೂ, ಪ್ರೇಮದ ವಿಷಯುದಲ್ಲಿ ಹೆಣ್ಣಿಗೆ ಬದ್ಧತೆ ಹೆಚ್ಚು ಎಂಬುದನ್ನು ಈ ಕಥೆ ನಿರೂಪಿಸುತ್ತದೆ.

ಸಂಬಂಧಗಳು ನೋವು ತರುತ್ತವೆ…! ಪ್ರೇಮದಲ್ಲಿ ಮನಸ್ಸುಗಳ ಬೆಸುಗೆ ಇದೆ; ಸಂಬಂಧಗಳ ಅನುಬಂಧವಿದೆ. ಬಹುತೇಕ ವೇಳೆ, ಈ ಬಂಧಗಳಿಗೆ ಮಾತೇ ಹೊರಡದು. ಮೌನವಾಗಿಯೇ ಇದ್ದು, ಸುಡುಗಾಡು ನಿರ್ಮಿಸಿ, ಹೊಗೆಯಾಡುತ್ತವೆ; ಈ ಕಥೆಗಳು- ನೀನು ನನ್ನಾವರಿಸಿದ ಪಾತ್ರ ಹಾಗೂ ಬಂಗಾರ ಬಣ್ಣದ ತೀರ. ‘ನೀನು ನನ್ನಾವರಿಸಿದ ಪಾತ್ರ’ ಕಥೆಯಲ್ಲಿ ಪ್ರೇಮದ ಹೆಸರಿನಲ್ಲಿರುವ ಪುರುಷ ಪ್ರೇಮಿಯ ಮುಖವಾಡದ ಕಳಚುವಿಕೆ ಇದೆ. ವಿಶೇಷವಾಗಿ, ‘ಸಾಹಿತಿ’ ಎನ್ನಿಸಿಕೊಂಡ ಡಾ. ಅಭಿನವ ನಾಯಕ್, ತನ್ನ ಪ್ರೇಯಸಿ -ಆವಂತಿಕಾಳ ಸಾಹಿತ್ಯ ಪ್ರೇಮ, ಸಾಹಿತ್ಯ ಕೃತಿಗಳ ಪ್ರಕಟಣೆ, ಸಾಹಿತ್ಯ ವಲಯದಲ್ಲಿ ಅವಳಿಗೆ ದೊರೆಯುವ ಮನ್ನಣೆ ಇತ್ಯಾದಿ ಸಹಿಸಲಾರ. ‘ಅವನ ಗಡ್ಡದ ಪ್ರತಿ ಕೂದಲ ಎಳೆಯಲ್ಲೂ ಅಹಂ ಇದೆ’ ಎಂದು ಆಕೆ ಗ್ರಹಿಸುತ್ತಾಳೆ. ಆದರೂ, ಪ್ರೇಮ ಗುಪ್ತಗಾಮಿನಿಯಾಗಿದ್ದು, ಈ ಇಬ್ಬರ ಎದೆಯಲ್ಲಿ ನದಿ ಹರಿದ ತಂಪಿನ ಅನುಭವ. ಆದರೆ, ಪ್ರೇಮಾಭಿವ್ಯಕ್ತಿಯಲ್ಲಿ ಬಹುತೇಕ ವೇಳೆ ಜೊತೆಯಾಗೇ ಇರುವ ಬಿಂಕ-ಬಿಗುಮಾನಗಳು ಅವರನ್ನು ದೂರ ಇರಿಸುತ್ತವೆ.

‘ಬಂಗಾರ ಬಣ್ಣದ ತೀರ’ ಎಂಬುದು ಮತ್ತೊಂದು ಕಥೆ. ‘‘ಸಂಬಂಧಗಳು ನೋವು ತರುತ್ತವೆ’ ಎಂಬ ಸಮರ್ಥನೆಯು ಪ್ರೇಮವನ್ನು ಸ್ನೇಹಕ್ಕೆ ತಿರುಗಿಸುವ ಪ್ರಿಯಕರನ ಸಂಚೂ ಆಗುವುದನ್ನುಈ ಕಥೆಯು ತುಂಬಾ ಸೂಕ್ಷ್ಮವಾಗಿ ರಚನಾ ಕೌಶಲವನ್ನು ಪಡೆದಿದೆ. ಆಡು ಮಾತಿನ ಸೊಗಸನ್ನಿಟ್ಟು ವಾಟ್ಸ್ಯಾಪ್ ನಲ್ಲಿ ಸಂದೇಶ ಕಳುಹಿಸುವ ಪ್ರಿಯಕರ ಅಂದು ‘ನಿನ್ನಂತಹ ಗೆಳತಿ ಸಿಕ್ಕಿದ್ದು ನನ್ನ ಭಾಗ್ಯ’ ಎಂದು ಪುಸ್ತಕದ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದು, ಕಥಾನಾಯಕಿಯ ಪ್ರೇಮಲೋಕಕ್ಕೆ ಹೊಸದು. ‘ಈ ದಿನ ನಿನಗೆ ಚೆನ್ನಾಗಿರಲಿ’ಎಂದು ಆಶಿಸುವ ಆತನ ವಾಟ್ಸ್ಯಾಪ್ ಸಂದೇಶ, ಕೆಳಗಡೆ ಹೃದಯಾಕಾರದ ಐಕಾನ್ ಸಹ ಮೂಡಿಸಿರುತ್ತಾನೆ. ಇಲ್ಲಿ, ‘ಪ್ರೀತಿ ಇದೆ ಆದರೆ, ಸ್ನೇಹಿತರನ್ನಾಗಿ ಇರೋಣ’ ಎಂಬ ಜಾರುವಿಕೆಯೂ ಇದೆ. ಹೀಗೆ...ಪ್ರೇಮದ ವೈವಿಧ್ಯಮಯವಾದ ಆಯಾಮಗಳನ್ನು ಈ ಕಥೆಗಳು ಸಮರ್ಥವಾಗಿ ತೋರುತ್ತವೆ.

ಪ್ರೇಮದಲ್ಲಿ ಪುರುಷ ತನ್ನ ಸ್ವಾರ್ಥಕ್ಕಾಗಿ ‘ಸಂಬಂಧಗಳು ನೋವು ತರುತ್ತವೆ. ಯಾರಿಗೂ ನೋವಾಗಬಾರದು ಎಂದು ದೂರವಾಗುತ್ತಿದ್ದೇನೆ. ನಿನ್ನ ಒಳ್ಳೆಯದಕ್ಕೆ ಹೀಗೆ ಮಾಡುತ್ತಿದ್ದೇನೆ’ ಎಂದೆಲ್ಲ ಹೇಳುವ ಮೂಲಕ ರಕ್ಷಣಾತ್ಮಕ ತಂತ್ರಗಳನ್ನು ಬಳಸುತ್ತಾನೆ. ಇದರಿಂದ, ಹೆಣ್ಣಿನ ಮನಸ್ಸಿನಲ್ಲಿ ಆಳವಾಗಿ ಇಳಿಯುವ ಆ ನೆನಪುಗಳು ಹಗಲು -ರಾತ್ರಿ ಉರುಳಿದಂತೆ ಹೋಗಿ-ಬರುತ್ತಲೂ ಕೊಯ್ಯುವ ಗರಗಸದಂತೆ ಗಾಯ ಮಾಡುತ್ತಿರುತ್ತವೆ ಎಂಬ ಕನಿಷ್ಟ ಜ್ಞಾನ ಆತನನ್ನು ಕಾಡುವುದಿಲ್ಲ. ಆದರೆ, ನೀರಿನಲ್ಲಿ ಕೊಚ್ಚಿ ಹೋಗುವವನಿಗೆ ಹುಲ್ಲು ಕಡ್ಡಿಯೂ ಆಸರೆ ಎನ್ನುವಂತೆ ಆತನ ನೆನಪಿನ ಎಳೆ ಹಿಡಿದೇ ಬದುಕನ್ನು ಎಳೆದೊಯ್ಯುವ ಅನಿವಾರ್ಯತೆ ಅವಳದು. ಈ ರೀತಿಯ ಮನಸ್ಥಿತಿ ಇರುವುದು ಹೆಣ್ಣುಗಳಿಗೆ ಮಾತ್ರ ಎಂಬ ಸೂಕ್ಷ್ಮತೆಯೂ ಕಥೆಯಲ್ಲಿ ಹುದುಗಿಸಿಟ್ಟ ಲೇಖಕಿಯ ಪರಿ ಅಭಿಮಾನ ಮೂಡಿಸುತ್ತದೆ.

‘ಮಾದರಿ’ ಮಹಿಳಾ ಪಾತ್ರಗಳು: ಉತ್ತರ ಕನ್ನಡದ ಹಸಿರಿನ ಬೆಟ್ಟಗಳ ಏರಿಳಿತದಲ್ಲಿ ವಾಸಿಸುವ ಕಥೆಗಾರ್ತಿ ಅಕ್ಷತಾ ಕೃಷ್ಣಮೂರ್ತಿ ಅಂತಹವರ ಬರವಣಿಗೆಯಲ್ಲೂ ಕಲ್ಪನೆಗಳಿರುವುದು ಸಹಜ. ಪ್ರಾಣಿಗಳ ಭೀಕರತೆಗಿಂತಲೂ ಆ ಪ್ರದೇಶಗಳ ಬೆಟ್ಟ,ಗುಡ್ಡ, ಕಣಿವೆ, ಹಸಿರು, ಪಕ್ಷಿಗಳ ಕಲರವ, ನೀರಿನ ಜುಳುಜುಳು, ಸಂಕ ಇತ್ಯಾದಿ ಕಥೆಗಾರ್ತಿಗೆ ಕಾಡುತ್ತವೆ. ಮಾತ್ರವಲ್ಲ; ಭಾಷೆಯೂ ಕಾವ್ಯಾತ್ಮಕತೆಯನ್ನು ಬಿಟ್ಟುಕೊಡುವುದಿಲ್ಲ. ಉದಾ: ‘ನೀ ದೂರ ಹೊರಟಿದ್ದೆ. ನನ್ನ ಪುಟ್ಟ ಲೋಕದಿಂದ. ಈ ಲೋಕದಲ್ಲಿ ನನ್ನ ಜೊತೆ ಕೆಲವೇ ಕೆಲವು ಜನರಿದ್ದರು. ಅವರಲ್ಲಿ ಹೇಳಲಾರದ್ದನ್ನು ನಿನ್ನಲ್ಲಿ ಹೇಳಿಕೊಂಡ ದಿನಗಳಿದ್ದವು. ಹೀಗೆ ಯಾವುದೇ ಭಾವವಿರಲಿ; ಅದಕ್ಕೆ ಕಾವ್ಯದ ಸ್ಪರ್ಶವಿದೆ (ಕಥೆ: ಯಾಕೆ ಹೆದರಬೇಕು ವಸಂತಗಳಿಗೆ),

ಗಾವ್ಡಿ -ಕಥೆಯು ಉತ್ತರ ಕನ್ನಡದ ಭಾಷಾ ಸೊಗಸಿನಲ್ಲಿ ಮೈದಳಿದಿದೆ. ಸಂಕಲನ ಶೀರ್ಷಿಕೆಯ ‘ಅಬ್ಬೋಲಿ’ ಕಥೆಯು ಮಹಿಳಾ ಸಬಲೀಕರಣದ ಮೂಲ ಶಕ್ತಿಯಾಗಿ ವ್ಯವಸ್ಥೆಯ ವಿರುದ್ಧ ಧ್ವನಿಯಾಗುವ ಚಿತ್ರಣವಿದೆ. ನಗರೀಕರಣದ, ಆ--ಈ-- ಸಿದ್ಧಾಂತದ ಗೊಡವೆ ಇರದ ಅಬ್ಬೋಲಿ, ಮಹಿಳಾ ಶಕ್ತಿಯ ನೈಜ ಸಾಮರ್ಥ್ಯದ ಪ್ರತಿನಿಧಿಯಾಗುತ್ತಾಳೆ. ತೀರಾ ಕಡಿಮೆ ಮನೆಗಳಿರುವ ಕಾಡಿನ ಜನರ ಜೀವನ ಚಿತ್ರಣವನ್ನು ಇಲ್ಲಿಯ ಕಥೆಗಳು ನಿರೂಪಿಸುತ್ತವೆ. ‘ಗೆಳತಿ’ ಕಥೆಯು ಜಾತಿಯ ಕಂದಕಗಳನ್ನು ಮೀರುವ ಮೌನ ಪ್ರತಿಭಟನಾತ್ಮಕ ಗುಣವನ್ನು ಒಳಗೊಂಡಿದೆ. ಅಲ್ಲಿಯ ನಮ್ರತಾ-ಪ್ರತಿಭಾ-ಟೀಚರಮ್ಮ, ಸಮಾನ ಸಮಾಜದ ಆಶಯಗಳನ್ನಿಟ್ಟು ಕೊಂಡ ಪಾತ್ರಗಳು ಮಾದರಿ ಎನಿಸುತ್ತವೆ. ‘ಸ್ವೇಟರ್’ ಕಥೆಯು ಕಾಡು, ಅಲ್ಲಿಯ ಶಾಲೆ, ಮಕ್ಕಳ ಕನಸುಗಳು ಎಲ್ಲವೂ ಆ ಬದುಕಿನೊಂದಿಗೆ ಸೆಣಸಾಡಲೇ ಬೇಕಾದ ಅನಿವಾರ್ಯತೆಯನ್ನು ಕಟ್ಟಿಕೊಡುವ ಸುಂದರ ಕಥೆ. ಕೌಟುಂಬಿಕವಾಗಿ ಸಾವಿರ ಸಮಸ್ಯೆಗಳಿದ್ದರೂ ಶಾಲೆ ಅಡುಗೆಗಾರ್ತಿ ‘ಸಾಳು’ ಕಥೆ. ಆಕೆಯ ಸಾಮಾಜಿಕ ಕಳಕಳಿ, ಅದಕ್ಕೆ ಸಮಾಜದ ಅವಹೇಳನ ಹೀಗೆ ಕಥೆಯಲ್ಲಿ ಸೃಷ್ಟಿಸಿದ ‘ಮಾದರಿ ಎನ್ನಬಹುದಾದ ’ಮಹಿಳಾ ಪಾತ್ರಗಳು ‘ ಲೇಖಕಿಯ ಸಾಹಿತ್ಯ ಕೇಂದ್ರದ ಸಾಮಾಜಿಕ ಪ್ರಜ್ಞೆಯಾಗುವುದು ವಿಶೇಷ. ಈ ಎಲ್ಲ ಕಥೆಗಳ ಹಿಂದೆ ಲೇಖಕಿಯ ಸೂಕ್ಷ್ಮ ವೀಕ್ಷಣೆ ಇದೆ. ಬಹುತೇಕ ಕಥೆಗಳ ಕೇಂದ್ರ ಹೆಣ್ಣು ಎಂಬುದು ಗಮನಾರ್ಹ. ಸಾಮಾಜಿಕ ಪ್ರಜ್ಞೆಯ ಸಾಕಷ್ಟು ಸಂವೇದನೆಗಳೊಂದಿಗೆ ಬೀಗುವ ಇಲ್ಲಿಯ ಕಥೆಗಳು, ‘ಮೊದಲ ಸಂಕಲನ’ ಎಂಬ ವಿನಾಯಿತಿಯನ್ನು ಬೇಡುವುದಿಲ್ಲ. ಅವು ಸಮೃದ್ಧ ರಚನಾ ಕೌಶಲಗಳೊಂದಿಗೆ ಓದುಗರ ಗಮನ ಸೆಳೆಯುತ್ತವೆ.

MORE FEATURES

ಹದಿನೈದು ಕಥೆಗಳೂ ಹದಿನೈದು ಲೋಕವನ್ನು ತೋರಿಸುವಂತವು

03-04-2025 ಬೆಂಗಳೂರು

"ಈ ಕಥಾಸಂಕಲನದಲ್ಲಿ ಬರೀ ನೇರಳೆ ಬಣ್ಣ ಮಾತ್ರವಲ್ಲದೇ ಅವರೊಳಗೆ ಕಾಡಿದ ಬದುಕಿನ ಎಲ್ಲಾ ಬಣ್ಣಗಳೂ ಇವೆ.. ಮುಖ್ಯವಾಗಿ ...

ಬಯಲು ಸೀಮೆಯ ಭಾಷೆ, ಸಂಸ್ಕೃತಿ, ಸಮಸ್ಯೆ ಕಷ್ಟ ಕೋಟಲೆಗಳ ಚಿತ್ರಣವಿಲ್ಲಿದೆ

02-04-2025 ಬೆಂಗಳೂರು

"'ದೊರೆ' ಕಥೆಯಲ್ಲಿ ಒಬ್ಬ ಚಿಕ್ಕ ಹುಡುಗನ ತುಂಟಾಟಗಳನ್ನು ಕೇಂದ್ರವಾಗಿಟ್ಟುಕೊಂಡು ಲಾಕ್ಡೌನ್ ವೇಳೆಯಲ್ಲಿ ...

ಬ್ರಿಟಿಷರಿಗಿಂತ ಹೆಚ್ಚು ಬ್ರಿಟಿಷರ ಚರಿತ್ರೆ ಇದು

02-04-2025 ಬೆಂಗಳೂರು

"ಈ “ಏರುಘಟ್ಟದ ಹಾದಿ” ಆ ಪ್ರಶ್ನೆಗೆ ಮಾತ್ರವಲ್ಲದೇ, ದೇಶದ ಪರಿಸರ ಸಂರಕ್ಷಣಾ ಕಾಯಿದೆ, ಅರಣ್ಯ ಹಕ್ಕು...