ಬ್ರಿಟಿಷರಿಗಿಂತ ಹೆಚ್ಚು ಬ್ರಿಟಿಷರ ಚರಿತ್ರೆ ಇದು


"ಈ “ಏರುಘಟ್ಟದ ಹಾದಿ” ಆ ಪ್ರಶ್ನೆಗೆ ಮಾತ್ರವಲ್ಲದೇ, ದೇಶದ ಪರಿಸರ ಸಂರಕ್ಷಣಾ ಕಾಯಿದೆ, ಅರಣ್ಯ ಹಕ್ಕುಗಳ ಕಾಯಿದೆಯಂತಹ ಹಲವು ಸಂಗತಿಗಳ ಬಗ್ಗೆ ನನಗೆ ಇದ್ದ ಹಲವು ಗೊಂದಲಗಳ ತೆರೆ ಸರಿಸಿದೆ. ಪರಿಸರದ ಕುರಿತು ಆಸಕ್ತಿ ಇರುವ ಪ್ರತಿಯೊಬ್ಬರೂ, ಆ ನಿಟ್ಟಿನಲ್ಲಿ ಒಂದು ಸಮಗ್ರ ಚಿತ್ರನ ಪಡೆಯುವುದಕ್ಕಾಗಿ ಓದಲೇಬೇಕಾದ ಪುಸ್ತಕ ಇದು," ಎನ್ನುತ್ತಾರೆ ರಾಜಾರಾಂ ತಲ್ಲೂರು. ಅವರು ಪ್ರೊ. ಮಾಧವ ಗಾಡ್ಗೀಳ ಅವರ ‘ಏರುಘಟ್ಟದ ನಡಿಗೆ’ ಕೃತಿ ಕುರಿತು ಬರೆದ ವಿಮರ್ಶೆ.

ಕನ್ನಡದ ಸಾಹಿತ್ಯೇತರ ಜ್ಞಾನ ಭಂಡಾರಕ್ಕೆ ಇತ್ತೀಚೆಗಿನ ಅಮೂಲ್ಯ ಸೇರ್ಪಡೆ ಈ “ಏರುಘಟ್ಟದ ನಡಿಗೆ” ಪ್ರೊ. ಮಾಧವ ಗಾಡ್ಗೀಳ್ ಅವರ ಜೀವನ ಚರಿತ್ರೆ “A Walk up the hill: Living with people and nature” ಯನ್ನು ಬಹಳ ಎಚ್ಚರಿಕೆ-ಶ್ರಮದಿಂದ ಕನ್ನಡಕ್ಕೆ ತಂದವರು ಹಿರಿಯರಾದ ಶಾರದಾ ಗೋಪಾಲ್ ಮತ್ತು ನಾಗೇಶ್ ಹೆಗಡೆ ಅವರು. ಪುಸ್ತಕವನ್ನು ಅಕ್ಕರಾಸ್ಥೆಯಿಂದ ನನಗೆ ತಲುಪಿಸಿದ ಆಕೃತಿ ಪ್ರಕಾಶನದ ನಾಗೇಶ್ ಕಲ್ಲೂರು ಅವರಿಗೆ, ಈ ಪುಸ್ತಕವನ್ನು ಪ್ರಕಟಿಸಿದ್ದಕ್ಕಾಗಿ ಕೃತಜ್ಞತೆಗಳು.

ಪ್ರೊ. ಗಾಡ್ಗೀಳ್, ಮತ್ತು ರಂಜಿತ್ ಡೇನಿಯಲ್ಸ್ ಅವರ ಹೆಸರನ್ನು ನಾನು ಮೊದಲ ಬಾರಿಗೆ ಕೇಳಿದ್ದು, 80ರ ದಶಕದಲ್ಲಿ. ಆಗ ನನ್ನ ಮಾವ (ಅಮ್ಮನ ತಮ್ಮ) ಸದಾನಂದ ತಲ್ಲೂರು ಶಿರ್ಸಿಯಲ್ಲಿ ಬ್ಯಾಂಕರ್ ಆಗಿದ್ದರು. ಹಕ್ಕಿಗಳ ಫೊಟೋಗ್ರಫಿ ಹವ್ಯಾಸ ಇದ್ದ ಅವರಿಗೆ ಅಲ್ಲಿ ಜೊತೆಯಾಗಿದ್ದವರು ದಿವಂಗತ ಪಿ. ಡಿ. ಸುದರ್ಶನ್. ಸುದರ್ಶನ್ ಅವರು ಅಲ್ಲಿನ ಪಕ್ಷಿ ಗಣತಿಗೆ ಕೆಲಸ ಮಾಡುತ್ತಿದ್ದಾಗ, ಅವರೊಂದಿಗೆ ಜೊತೆ ಇದ್ದವರು ನನ್ನ ಮಾವ ಸದಾನಂದ ತಲ್ಲೂರು. ಆಗೆಲ್ಲ ಗಾಡ್ಗೀಳ್ ಅಲ್ಲಿಗೆ ಬರುತ್ತಿದ್ದರು; ನನ್ನ ಮಾವನ ಬ್ಯಾಂಕಿಗೂ ಅವರು ಭೇಟಿ ನೀಡಿದ್ದರು.

ಹೀಗೆ ಕಿವಿಗೆ ಬಿದ್ದಿದ್ದ ಗಾಡ್ಗೀಳರು, ಮತ್ತೊಮ್ಮೆ ನನ್ನ ಗಮನ ಸೆಳೆದದ್ದು, ಅವರ ಪಶ್ಚಿಮ ಘಟ್ಟಗಳ ವರದಿಯ ಕಾರಣದಿಂದಾಗಿ. ಪತ್ರಕರ್ತನಾಗಿ ಪರಿಸರದ ಬಗ್ಗೆ ನನಗೆ ಇದ್ದ ಆಸಕ್ತಿಯ ಕಾರಣಕ್ಕೆ ಆ ವರದಿಯನ್ನು ಡೌನ್‌ಲೋಡ್ ಮಾಡಿಕೊಂಡು, ಆಮೂಲಾಗ್ರವಾಗಿ ಓದುವ ಅವಕಾಶ ನನ್ನದಾಗಿತ್ತು. ಆ ವರದಿ, ನನಗೆ ನನ್ನ ಕರಾವಳಿಯ ಕುರಿತಾದ ಇಂದಿನ ಪರಿಸರ ಸಂಬಂಧಿ ನಿಲುವುಗಳ ಬೀಜ ಎಂದೇ ನಾನು ತಿಳಿದುಕೊಂಡಿದ್ದೇನೆ. ಈ ವರದಿ ಓದಿದ ಬಳಿಕ, ಮತ್ತೆ ಬಂದ ಕಸ್ತೂರಿ ರಂಗನ್ ವರದಿ ಮತ್ತು ಅದೂ ಬೇಡ ಎಂಬ ಜನರ ಕೂಗು ಅರ್ಥವೇ ಆಗುತ್ತಿರಲಿಲ್ಲ. ಯಾಕೆ ಜನ ಹೀಗೆ “ತಾವು ಕುಳಿತ ರೆಂಬೆಯನ್ನೇ ಕತ್ತರಿಸಿಕೊಂಡು ಸಾಯಲು ಹೊರಟಿದ್ದಾರೆ?!” ಎಂಬ ಪ್ರಶ್ನೆ ಯಾವತ್ತೂ ಮೂಡುತ್ತಿತ್ತು. ಈ ಬಗ್ಗೆ ಇಲ್ಲೇ ಹಲವು ಬಾರಿ ದಾಖಲಿಸಿರುವೆ.

ಈ “ಏರುಘಟ್ಟದ ಹಾದಿ” ಆ ಪ್ರಶ್ನೆಗೆ ಮಾತ್ರವಲ್ಲದೇ, ದೇಶದ ಪರಿಸರ ಸಂರಕ್ಷಣಾ ಕಾಯಿದೆ, ಅರಣ್ಯ ಹಕ್ಕುಗಳ ಕಾಯಿದೆಯಂತಹ ಹಲವು ಸಂಗತಿಗಳ ಬಗ್ಗೆ ನನಗೆ ಇದ್ದ ಹಲವು ಗೊಂದಲಗಳ ತೆರೆ ಸರಿಸಿದೆ. ಪರಿಸರದ ಕುರಿತು ಆಸಕ್ತಿ ಇರುವ ಪ್ರತಿಯೊಬ್ಬರೂ, ಆ ನಿಟ್ಟಿನಲ್ಲಿ ಒಂದು ಸಮಗ್ರ ಚಿತ್ರನ ಪಡೆಯುವುದಕ್ಕಾಗಿ ಓದಲೇಬೇಕಾದ ಪುಸ್ತಕ ಇದು.

ಪರಿಸರವನ್ನು ಸಹಜವಾದ ಪರಿಸರದ್ದೇ (ಜನ ಕೂಡ ಅದರ ಭಾಗ) ದೃಷ್ಟಿಕೋನದಿಂದ ನೋಡುವ, ಅತಿಯಾಸೆಯ ಬದುಕು ಪರಿಸರದ ಜೊತೆ ನಮ್ಮನ್ನೂ ಸರ್ವನಾಶದೆಡೆಗೆ ಒಯ್ಯುತ್ತಿರುವುದನ್ನು ಸೋದಾಹರಣವಾಗಿ ವಿವರಿಸುವ ಈ ಪುಸ್ತಕ ಬ್ರಿಟಿಷರು ಹೇಗೆ ತಮ್ಮ ವಾಣಿಜ್ಯ ಉದ್ದೇಶಗಳಿಗೆ ಇಲ್ಲಿನ ಸನ್ನಿವೇಶವನ್ನು ಬಳಸಿಕೊಂಡರು ಮತ್ತು, ಈಗ ಸ್ವತಂತ್ರ ಭಾರತದಲ್ಲಿ ಸರ್ಕಾರಗಳು ಹೇಗೆ ತಮ್ಮ ಕ್ರೋನಿಗಳಿಗೆ ನೀತ್ಯಾತ್ಮಕ ಅನುಕೂಲಗಳನ್ನು ಮಾಡಿಕೊಡುತ್ತಿದ್ದಾರೆ, ಉಳ್ಳವರು ಈಗೀಗ ಹೇಗೆ ಬ್ರಿಟಿಷರಿಗಿಂತ ಹೆಚ್ಚು ಬ್ರಿಟಿಷರೆನ್ನಿಸಿಕೊಳ್ಳುತ್ತಿದ್ದಾರೆ – ಆರ್ಥಿಕ ಅಸಮಾನತೆ ಹೇಗೆ ಭುಗಿಲೇಳುತ್ತಿದೆ ಎಂಬುದಕ್ಕೆ ನೆಲಮಟ್ಟದಿಂದಲೇ ಉದಾಹರಣೆಗಳನ್ನು ಎತ್ತಿಕೊಟ್ಟಿದ್ದಾರೆ.

ಪುಸ್ತಕವನ್ನು ಓದುವ ಸುಖಕ್ಕೆ ಅಡ್ಡಿ ಬರಬಾರದೆಂಬ ಕಾರಣಕ್ಕೆ ನಾನು ಪುಸ್ತಕದ ವಿವರಗಳಿಗೆ ಹೋಗುವುದಿಲ್ಲ. ಆಯಕಟ್ಟಿನ ಜಾಗದಲ್ಲಿ ಅಕಾಡೆಮಿಕ್ ಸಂಪನ್ಮೂಲವಾಗಿ ಕಾರ್ಯಾಚರಿಸಿದ ಕಾರಣಕ್ಕೆ ಗಾಡ್ಗೀಳ್ ಅವರ ಮಾತುಗಳನ್ನು ಅಂದಿನ ಪ್ರಭುತ್ವ ಕಡೆಯ ಪಕ್ಷ (ಕೆಲಸ ಮಾಡದಿದ್ದರೂ) ಕೇಳಿಸಿಕೊಂಡಿತು. ನಾವೀಗ ಅದನ್ನೂ ದಾಟಿದ ಸ್ಥಿತಿಯಲ್ಲಿದ್ದೇವೆ. 2014ರ ಬಳಿಕ ಅಂತಹವರಿಗೆ ಮಣೆ ಇಲ್ಲ. ಏನಿದ್ದರೂ ಆನಿಗಳು ಹೇಳಿದ್ದೇ “ಉದ್ಯೋಗ ನೀತಿ, ಕಾರ್ಮಿಕ ನೀತಿ, ಪರಿಸರ ನೀತಿ!”

ಗೋವಾ ಕರಾವಳಿಯಲ್ಲೂ ಅವರು ಸಾಕಷ್ಟು ಕೆಲಸ ಮಾಡಿರುವುದರಿಂದ, ನಾನು ಇಂದು ಕರ್ನಾಟಕದ ಕರಾವಳಿಯ ಕುರಿತು ಆಗಾಗ ಹೇಳುತ್ತಿರುವುದನ್ನು ಅವರು 1960ರ ದಶಕದಲ್ಲೇ ಗುರುತಿಸಿದ್ದಾರೆ. ಸಾಂಪ್ರದಾಯಿಕ- ಪರಿಸರ ಸಹ್ಯ ಮೀನುಗಾರಿಕೆಯ ಜಾಗದಲ್ಲಿ ಪರ್ಸೀನ್ ಬೋಟುಗಳು, ಟ್ರಾಲ್‌ಗಳು ಗೋವಾಕ್ಕೆ ಆಗಷ್ಟೇ ಬಂದಿದ್ದವು. ಈಗಂತೂ ನಾವು ಮತ್ತೊಂದೇ ಹಂತದಲ್ಲಿದ್ದೇವೆ. ಲೈಟ್ ಫಿಷಿಂಗ್, ಡೀಪ್ ಸೀ ಫಿಷಿಂಗ್ ಇತ್ಯಾದಿ ಸಮುದ್ರವನ್ನೇ ಖಾಲಿ ಮಾಡುತ್ತಿವೆ!

ಪರಿಸರ ನಾಶಕ್ಕೆ ಸರ್ಕಾರವೊಂದು ದ್ವೀಪ, ಉದ್ಯಮಪತಿಗಳು ಒಂದು ದ್ವೀಪ, ಕಾರ್ಯಾಂಗ ಒಂದು ದ್ವೀಪ. ಇವುಗಳೆಲ್ಲ ಹರಿದು ತಿನ್ನುವುದು ಜನಸಾಮಾನ್ಯರನ್ನು. ಈ ದ್ವೀಪಗಳ ನಡುವಿನ ಸಾಮಾನ್ಯರಿಗೆ ಕಾಣಿಸದ ಮಸುಕಾದ ಚಿತ್ರಗಳನ್ನೆಲ್ಲ ಈ ಪುಸ್ತಕ ಸ್ಪಷ್ಟವಾಗಿ ಕಾಣಿಸುವ ಕೆಲಸ ಮಾಡುತ್ತದೆ ಎಂದರೆ, ಪುಸ್ತಕದ ಹೂರಣ ಏನೆಂದು ಒಂದೇ ಮಾತಿನಲ್ಲಿ ಹೇಳಿದಂತೆ. ನಾನಿದನ್ನು ಇನ್ನೆರಡು ಬಾರಿ ಓದಬೇಕಿದೆ!

ಪುಸ್ತಕದಲ್ಲಿ ನನಗೆ ಇಷ್ಟವಾಗದ ಭಾಗ ಎಂದರೆ ಆಧುನಿಕ ತಂತ್ರಜ್ಞಾನದ ಬಗ್ಗೆ ಗಾಡ್ಗೀಳ್ ಅವರಿಗಿರುವ ಬೆರಗು. ವಿಕಿಪೀಡಿಯಾ, ಗೂಗಲ್ ಬಗ್ಗೆ ಅವರ ಬೆರಗುಗಣ್ಣಿನ ನೋಟ (ಹೆಚ್ಚಿನಂಶ ಜನರೇಷನ್ ಗ್ಯಾಪ್ ಕಾರಣಕ್ಕೆ) ನನಗೆ ಹಿತವೆನ್ನಿಸಲಿಲ್ಲ. ಉದ್ಯಮಪತಿಗಳು ಪರಿಸರಕ್ಕೆ ಮಾಡಿದ್ದನ್ನೇ ಈ “ಡೇಟಾಧಿಪತಿಗಳು” ನಮ್ಮ ಡೇಟಾ ಜಗತ್ತಿಗೆ ಮಾಡುತ್ತಿದ್ದಾರೆ ಎಂಬವನು ನಾನು.

ಕಸ್ತೂರಿ ರಂಗನ್ ವರದಿ ಬೇಡವೇ ಬೇಡ ಎಂದು ಗೋಗರೆಯುತ್ತಿರುವವರೆಲ್ಲ ದಯವಿಟ್ಟು ಈ ಪುಸ್ತಕವನ್ನು ಕೊಂಡು ಓದಿ. ಆ ಬಳಿಕ ಸಾಧ್ಯವಾದರೆ, ಪಶ್ಚಿಮ ಘಟ್ಟಗಳ ಕುರಿತು ಗಾಡ್ಗೀಲ್ ವರದಿಯನ್ನೂ ಓದಿ.

MORE FEATURES

ಪ್ರಧಾನವಾಗಿ ಇದು ಭಾವ ಪರಿವಶತೆಯ ಉದ್ದೀಪನ ಕಾವ್ಯ

10-04-2025 ಬೆಂಗಳೂರು

“ಈ ಕಾವ್ಯ ಅನುಸರಿಸಿದ್ದು ಸರಳ ಮಾದರಿಯ ತಂತ್ರವನ್ನೇ ಆಯ್ಕೆ ಮಾಡಿಕೊಂಡಿದೆ. ವೈಯಕ್ತಿಕ ಬದುಕಿನ ನಿಷೇಧಗಳು, ಪಾಪ ಪ...

ಕವನಗಳೆಂದರೆ ಭಾವದ ಅನಾವರಣ

10-04-2025 ಬೆಂಗಳೂರು

"ಪಾರಿಜಾತದ ಸುವಾಸನೆಯ ಕುರಿತಾದ ಒಂದು ಕವನ. ಬಹಳ ನಾಜೂಕಾದ, ದೂರ ದೂರದವರೆಗೂ ತನ್ನ ಘಮವನ್ನು ಹಬ್ಬಿ ಸೆಳೆಯುವ ಪುಷ್...

ಭಾರತ ಕತೆಯಲ್ಲಿ ನಿರ್ಣಾಯಕವಾಗಿ ಕಾಣಿಸುವುದು ಕುರುಕ್ಷೇತ್ರದ ಆ ಹದಿನೆಂಟು ದಿನಗಳು

10-04-2025 ಬೆಂಗಳೂರು

“ನಮಗೆಲ್ಲಾ ಗೊತ್ತೇ ಇರುವ ಕತೆಯನ್ನು ಅಕ್ಷರದ ಮೇಲೆ ಅಕ್ಷರವಿಟ್ಟು ಪೋಣಿಸಿದ ಈ ಕೃತಿ ನಮ್ಮನ್ನು ಹೊಸಹೊಳಹುಗಳತ್ತ ಹ...