ಬಯಲು ಸೀಮೆಯ ಭಾಷೆ, ಸಂಸ್ಕೃತಿ, ಸಮಸ್ಯೆ ಕಷ್ಟ ಕೋಟಲೆಗಳ ಚಿತ್ರಣವಿಲ್ಲಿದೆ


"'ದೊರೆ' ಕಥೆಯಲ್ಲಿ ಒಬ್ಬ ಚಿಕ್ಕ ಹುಡುಗನ ತುಂಟಾಟಗಳನ್ನು ಕೇಂದ್ರವಾಗಿಟ್ಟುಕೊಂಡು ಲಾಕ್ಡೌನ್ ವೇಳೆಯಲ್ಲಿ ನಮ್ಮ ಬಯಲು ಸೀಮೆಯ ವಲಸಿಗರ ಸ್ಥಿತಿಗತಿಗಳನ್ನು ಕಟ್ಟಿಕೊಟ್ಟ ಬಗೆ,ದೊರೆಯ ಆಕಸ್ಮಿಕ ಸಾವು ನಿಜಕ್ಕೂ ಮನಸ್ಸನ್ನು ಆರ್ದ್ರಗೊಳಿಸುತ್ತದೆ," ಎನ್ನುತ್ತಾರೆ ಕವಿತಾ ವಿರೂಪಾಕ್ಷ ಸಿರಿಗೆರೆ. ಅವರು ವೀರೇಂದ್ರ ರಾವಿಹಾಳ್ ಅವರ 'ಡಂಕಲ್ ಪೇಟೆ' ಕೃತಿ ಕುರಿತು ಬರೆದ ವಿಮರ್ಶೆ.

'ಡಂಕಲ್ ಪೇಟೆ'.. ನಾನು ಇತ್ತೀಚೆಗೆ ಓದಿದ ಲೇಖಕ ವೀರೇಂದ್ರ ರಾವಿಹಾಳ್ ಸರ್ ಅವರ ಆರು ಕಥೆಗಳ ಅದ್ಭುತ ಕಥಾ ಸಂಕಲನ. ಇದನ್ನು ಓದಲೇಬೇಕು ಎಂದು ಕೈಗೆತ್ತಿಕೊಂಡುದುದರ ಉದ್ದೇಶ ನಾನು ಇದೇ ಭಾಗದ ನಿವಾಸಿಯೇ ಆಗಿರುವುದರಿಂದ, ರಾಯಲಸೀಮೆಗೆ ಅಂಟಿಕೊಂಡಂತಹ ಬಯಲು ಸೀಮೆಯ ಲೇಖಕರ ಬರಹ, ಇತರ ಲೇಖಕರಿಗಿಂತ ಹೇಗೆ ಭಿನ್ನ ? ಹಾಗೂ ಇಲ್ಲಿನ ವಿಷಯ ವಸ್ತುವಿನ ಆಯ್ಕೆ ಹೇಗಿರುತ್ತದೆ? ಹಾಗೆ ಇಲ್ಲಿ ಪ್ರತಿ ಕಥೆಯನ್ನು ಪ್ರಾದೇಶಿಕ ಹಿನ್ನೆಲೆಯಲ್ಲಿ ಹೇಗೆ ಎಣಿದಿರುತ್ತಾರೆ ಎನ್ನುವ ಕುತೂಹಲದಿಂದ. ನಿಜಕ್ಕೂ ಪುಸ್ತಕವನ್ನು ಓದುತ್ತಾ ಹೋದಂತೆ ನನ್ನ ಎಲ್ಲಾ ಚಿಕ್ಕ ಚಿಕ್ಕ ಕುತೂಹಲವು ನೂರಕ್ಕೆ ನೂರು ತಣಿಯಿತು ಎಂಬುದು ಉತ್ಪ್ರೇಕ್ಷೆಯ ಮಾತಲ್ಲ.

ಇತ್ತೀಚೆಗೆ ಬರಹ ಪ್ರಾರಂಭಿಸಿದ ನನ್ನಂತಹ ಹಾಗೂ ಇತರೆ ಬಯಲು ಸೀಮೆಯ ಬರಹಗಾರರಿಗೆ ಡಂಕಲ್ ಪೇಟೆ ಓದುವುದರಿಂದ, ವಸ್ತುವಿನ ಆಯ್ಕೆ, ನಿರ್ವಹಣೆಯ ಬಗೆಗೆ ಉಪಯುಕ್ತ ಟಿಪ್ಸ್ ಸಿಗುವುದರಲ್ಲಿ ಸಂಶಯವಿಲ್ಲ.

ಇನ್ನು ಡಂಕಲ್ ಪೇಟೆಯ ಒಳ ಹೊಕ್ಕಾಗ ನನಗೆ ತಿಳಿದುಬಂದ ವಿಷಯಗಳೆಂದರೆ,

ನಾವು ಸಮಾಜದಲ್ಲಿ ನೋಡುವ ತೀರಾ ಗಣನೆಗೆ ಸಿಕ್ಕದ ಪಾತ್ರಗಳೆಲ್ಲವೂ ಇಲ್ಲಿ ಅದ್ಭುತ ಚಿತ್ರಣಗಳಾಗಿ ಸೃಷ್ಟಿಯಾಗಿರುವ ಪರಿ ನಿಜಕ್ಕೂ ವಿಶೇಷ.

'ದೊರೆ' ಕಥೆಯಲ್ಲಿ ಒಬ್ಬ ಚಿಕ್ಕ ಹುಡುಗನ ತುಂಟಾಟಗಳನ್ನು ಕೇಂದ್ರವಾಗಿಟ್ಟುಕೊಂಡು ಲಾಕ್ಡೌನ್ ವೇಳೆಯಲ್ಲಿ ನಮ್ಮ ಬಯಲು ಸೀಮೆಯ ವಲಸಿಗರ ಸ್ಥಿತಿಗತಿಗಳನ್ನು ಕಟ್ಟಿಕೊಟ್ಟ ಬಗೆ,ದೊರೆಯ ಆಕಸ್ಮಿಕ ಸಾವು ನಿಜಕ್ಕೂ ಮನಸ್ಸನ್ನು ಆರ್ದ್ರಗೊಳಿಸುತ್ತದೆ.

'ಶ್ವಾನಶೂಲ' ಕಥೆಯಲ್ಲಿ 'ಕಾಡಿ' ಎನ್ನುವ ಸಾಮಾನ್ಯ ಬೀದಿನಾಯಿ ಹಲವಾರು ಸಹಜ ಸಾಮಾಜಿಕ ಪ್ರಕ್ರಿಯೆಗಳಿಗೆ ಆಕಸ್ಮಿಕವಾಗಿ ಒಳಪಟ್ಟು ಅಸಮಾನ್ಯವಾಗಿ ರೂಪಗೊಳ್ಳುವ ಬಗೆ ಮೂಕವಿಸ್ಮಿತರನ್ನಾಗಿ ಮಾಡುತ್ತದೆ..! ಮುಕುಡೆಪ್ಪನನ್ನು ಕಾಡುವ ಕಾಡಿ, ಹನುಮಪ್ಪ ನಾಯಕನ ಆಶ್ರಯದ ತೆಕ್ಕೆಯಲ್ಲಿ ದೈವಿ ಸ್ವರೂಪವನ್ನು ಪಡೆಯುವ ಬಗೆಯಂತೂ ಇಂದಿನ ಸಾಮಾಜಿಕ ಸ್ಥಿತ್ಯಂತರಗಳಿಗೆ ಹಿಡಿದ ಕೈಗನ್ನಡಿಯಂತೆ ಬಿಂಬಿತವಾಗಿದೆ.

'ಉತ್ಖನನ' ಕಥೆಯಲ್ಲಿ ಚಾಮುಂಡಮ್ಮನ ಅಸಹಾಯಕತೆ ದಾಮೋದರನ ಪೈಶಾಚಿಕ ಕೃತ್ಯ, ಅನಂತನ ಸಾವು ಮನುಷ್ಯನ ವರ್ತನೆಗಳು ಕಾಲದಂತೆ, ಅನಿವಾರ್ಯತೆಗೆ, ಅವಶ್ಯಕತೆಗಳಿಗೆ ಒಳಪಟ್ಟು ಹೇಗೆಲ್ಲಾ ಬದಲಾಗುತ್ತಾ ಸಾಗುತ್ತವೆ ಎಂಬುದು ಅದ್ಭುತವಾಗಿ ಸೃಜಿಸಿರುವುದು ವೇದ್ಯವಾಗುತ್ತದೆ.

ಇನ್ನು ಕಲ್ಯಾಣಿ ಕಥೆಯಲ್ಲಂತೂ ಕಾರಣವೇ ಇಲ್ಲದೆ ಹುಟ್ಟುವ ಕ್ರಶ್ ಗಳು, ಹೆಣ್ಣಿಗೆ ಸರಿಯಾದ ಭದ್ರತೆ ಇರದಿದ್ದರೆ ಬೇಲಿಯೇ ಎದ್ದು ಹೊಲವ ಮೇಯ್ದಂತೆ ತನ್ನವರದೇ ಕುಕೃತ್ಯಗಳಿಗೆ ಹೇಗೆಲ್ಲಾ ಬಲಿಯಾಗುತ್ತಾಳೆ ಎನ್ನುವುದು ಎದೆಯಲ್ಲಿ ಸಣ್ಣ ನಡುಕ ಹುಟ್ಟಿಸುವ ದುರಂತ ಕಥೆಯಾಗಿ ಬಿಂಬಿತವಾಗಿರುವುದರ ಜೊತೆಗೆ, ನನಗೆ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಥೆಯನ್ನು ನೆನಪಿಸಿತು. ಕುವೆಂಪುರವರ ಕಾದಂಬರಿಯಲ್ಲಿ ವ್ಯಕ್ತವಾಗಿರುವಂತೆ ನಮ್ಮ ಸಾಮಾಜಿಕ ಸ್ತರಗಳಲ್ಲಿ, ಮೇಲ್ವರ್ಗ, ಮಧ್ಯಮ ವರ್ಗ, ಕೆಳವರ್ಗಗಳಲ್ಲಿ ಲೈಂಗಿಕ ವಾಂಛೆಗಳು, ಕಾಮನೆಗಳು ಕೆಲ ಸ್ತರಗಳಲ್ಲಿ ಅಸಹಜವೆನಿಸಿದರೆ, ಇನ್ನೂ ಕೆಲ ಸ್ತರಗಳಲ್ಲಿ ಅದನ್ನು ಸಹಜ ಎಂಬಂತೆ ಪರಿಗಣಿಸುವ ಪರಿ ಕಥೆಯಲ್ಲಿ ಸೂಕ್ಷ್ಮವಾಗಿ ವೇದ್ಯವಾಗಿದೆ.

'ಹಾವು ಏಣಿ' ಕಥೆಯಲ್ಲಿ ಮನುಷ್ಯನ ಬದುಕು ಹಣದಿಂದ ಒಮ್ಮೊಮ್ಮೆ ಮೇಲಕ್ಕೆ, ಕೆಳಕ್ಕೆ ಇಳಿದು, ಹಣ ಮನುಷ್ಯನನ್ನು ಹೇಗೆಲ್ಲಾ ಬದಲಾಯಿಸುತ್ತದೆ ಎನ್ನುವುದರ ಜೊತೆಗೆ ಇನ್ನೂ ಭೂಮಿಯ ಮೇಲೆ ಪ್ರಾಮಾಣಿಕತೆ ಸತ್ತಿಲ್ಲ ಎನ್ನುವುದು 'ಯರಿಸ್ವಾಮಿ' ಪಾತ್ರದ ಮೂಲಕ ವ್ಯಕ್ತವಾಗಿ ನಿಟ್ಟುಸಿರು ಬಿಡುವಂತೆ ಮಾಡುತ್ತದೆ.

'ಊರ ಮುಂದಲ ಹೊಲ' ಕಥೆಯಂತೂ ವೀರನಗೌಡರ ಕೆಚ್ಚೆದೆಯ ಸ್ವಾಭಿಮಾನ ಅವರ ಮಗನಾದ ಮಂಜಣ್ಣನ ಅಸಹಾಯಕತೆ, ಹೋರಾಟ ಹಾಗೂ ಅಸ್ತಿತ್ವದ ಉಳಿಯುವಿಕೆಯ ತೊಳಲಾಟ ಚಂದವಾಗಿ ಮೂಡಿ ಬಂದಿರುವುದರವುದರ ಜೊತೆಗೆ ಬಳ್ಳಾರಿ, ಸಿರುಗುಪ್ಪ, ರಾಯಚೂರಿಗರ ಬದುಕು ಬವಣೆಗಳನ್ನು, ವಾಸ್ತವದಲ್ಲಿ ನಿಜಕ್ಕೂ ಅವರು ಅನುಭವಿಸಿದ, ಅನುಭವಿಸುತ್ತಿರುವ ಅವರ ಪಾಡನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ .

ಒಟ್ಟಾರೆ ಬಯಲು ಸೀಮೆಯ ಭಾಷೆ, ಸಂಸ್ಕೃತಿ, ಸಮಸ್ಯೆ ಕಷ್ಟ ಕೋಟಲೆಗಳ ಇಡೀ ಬದುಕನ್ನು ಹಿಡಿಯಾಗಿ ಈ ಆರು ಕಥೆಗಳಲ್ಲಿ ತುಂಬಾ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

ಕಥೆ ಎಂದರೆ ಕೇವಲ ಊಹಿಸುವುದಲ್ಲ, ಕಲ್ಪನೆಯೂ ಅಲ್ಲ, ಅದು ತಾನು ನಿಂತ ನೆಲದ ವಾಸ್ತವತೆ. ಅದನ್ನು ತನ್ನ ಕಣ್ಣಾರೆ, ಮನಸಾರೆ ಒಬ್ಬ ಲೇಖಕ ಅನುಭವಿಸಿದಾಗ ಮಾತ್ರ ಬರಹದ ಮೂಲಕ ಅದನ್ನು ಉನ್ನತವಾಗಿ ಕಟ್ಟಿಕೊಡಬಲ್ಲ ಎಂಬುದಕ್ಕೆ ಈ ಆರು ಕಥೆಗಳು ಸಾಕ್ಷಿಯಾಗಿ ನಿಲ್ಲುತ್ತವೆ.

ಉತ್ತಮ ಕಥೆಗಳನ್ನು "ಡಂಕಲ್ ಪೇಟೆಯ" ಮೂಲಕ ಕಟ್ಟಿಕೊಟ್ಟಂತಹ ರಾವಿಹಾಳ್ ಸರ್ ರವರಿಗೆ ರಾಶಿ ಧನ್ಯವಾದಗಳು...🙏🏻

MORE FEATURES

ಆಧುನಿಕತೆ ತಂದಿರುವ ಸವಾಲಿನಲ್ಲಿ ಮೊಬೈಲ್ ಗೀಳು ಕೂಡ ಒಂದು

07-04-2025 ಬೆಂಗಳೂರು

“ಲೇಖಕಿ ಗಾಯತ್ರಿ ಅನಂತ್ ಮಹಿಳಾ ಹಾಗೂ ಯುವ ಬರಹಗಾರರಿಗೆ ಉತ್ತೇಜನ ನೀಡುವ ಅಗತ್ಯತೆಯ ಬಗ್ಗೆ ಅರಿವು ಚೆಲ್ಲಿದ್ದಾರೆ...

ಲೇಖಕರಿಗೆ ಕೌತುಕಮಯವಾಗಿ ಬರೆಯುವ ಕಲೆ ಒಲಿದಿದೆ

07-04-2025 ಬೆಂಗಳೂರು

“ಬರೆಹ ಸರಳವಾಗಿದೆ. ಸ್ವಾರಸ್ಯಕರವಾಗಿದೆ, ಪುಸ್ತಕದಲ್ಲಿ ಪದ-ಅಕ್ಷರಗಳ ಲೋಪಗಳಿಲ್ಲ, ಎಲ್ಲೂ ಅನಗತ್ಯವಾದ ವಿಶ್ಲೇಷಣೆ...

ನಾಟಕರಂಗದ ಚಿತ್ರಣವನ್ನು ನೀಡುವ ಕಾದಂಬರಿ ‘ಗೆದ್ದವರು ಯಾರು’

07-04-2025 ಬೆಂಗಳೂರು

"ನಾಟಕದ ಬಗ್ಗೆ ಆಸಕ್ತಿ ಇರದ ಶ್ರೀಕಂಠಯ್ಯನು ಈ ಯೋಜನೆಗೆ ಒಪ್ಪಿಕೊಂಡಿರುವುದು ಸಂಗೀತ, ವೀಣಾವಾದನ ಮತ್ತು ನೃತ್ಯದಲ್ಲ...