ರಬ್ಬರ್ ಪ್ರಜ್ಞೆ

Date: 17-02-2024

Location: ಬೆಂಗಳೂರು


"ಅಸಮಾನತೆ, ದಬ್ಬಾಳಿಕೆ, ದೌರ್ಜನ್ಯ, ಯಜಮಾನಿಕೆ, ಮತ್ತು ನಿಮ್ಮ ಸ್ಥಿತಿಯೆ ನಿಮ್ಮ ಹಣೆಬರಹ ಎಂದು ದೀನರನ್ನು, ಹೆಂಗಸರನ್ನು ನಂಬಿಸಿರುವ ಹುನ್ನಾರಗಳ ಪ್ರತಿರೋಧವೆ ಈ ಪದ್ಯದಲ್ಲಿನ ಕಾವ್ಯಕಾರ್ಯ. ಆದರೆ ರಾಚನಿಕತೆ ದೃಷ್ಟಿಯಿಂದ ಇದು ಭಾಷಣದ ಹಾಗೆ ಇದೆ. ಇವರು ದಲಿತ ಕಾವ್ಯಪ್ರಜ್ಞೆಯಿಂದ ನಿವೃತ್ತರಾಗಿ ತಮ್ಮ ವರಸೆ ಬದಲಿಸಿದ ನಂತರ ಬರೆದ ಬಹುಪಾಲು ಕಾವ್ಯ ಹೀಗೆ ಪೇಲವ ಆಗಿರುವ ಕಾವ್ಯವೆ," ಎನ್ನುತ್ತಾರೆ ಡಾ. ರಾಮಲಿಂಗಪ್ಪ ಟಿ.ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ‘ರಬ್ಬರ್ ಪ್ರಜ್ಞೆ’ ಕುರಿತು ಬರೆದಿದ್ದಾರೆ.

ಕಣ್ಣೀರಿನ ಮಳೆ ಸುರಿಯುತಿದೆ
ಗೋಳಿನ ನದಿಗಳು ಹರಿಯುತಿವೆ
ದುಃಖದ ಸಾಗರ ತುಂಬುತಿದೆ
ಕತ್ತಲೆ ಎಲ್ಲೆಡೆ ಹಬ್ಬುತಿದೆ

ನಡುಗುವ ಜೀವಕೆ ಬಿಡುಗಡೆ ಎಲ್ಲಿ
ಅತ್ಯಾಚಾರವೆ ನಿತ್ಯಾಚಾರ
ಮುಗ್ಧ ಸೋದರಿಯು ಬಲಿಪಶುವಾಗಿ
ಬಿದ್ದಳೆ ಬೀದಿಗೆ ಕಸವಾಗಿ

ಮರೆತು ಹೋದರೆ ದುಷ್ಟ ಮೃಗಗಳು
ಹೆತ್ತ ತಾಯಿಯನು
ಅಕ್ಕರೆಯನು ನೀಡಿ ಪೊರೆದ
ಅಕ್ಕ ತಂಗಿಯರ

ಕಂಗೆಟ್ಟವರನು ಕೇಳುವರಾರು
ಕೆಳಗೆ ಬಿದ್ದವರ ಮೇಲೆತ್ತಿ
ಒಡಹುಟ್ಟಿದ ಬಂಧುಗಳಿವರೆಂದು
ದಾರಿಯ ತೋರುವ ಜನವೆಲ್ಲಿ

ಉರಿಯುವ ಹಣತೆಯು ಆರಿದ ಗುಡಿಸಲ
ಕಗ್ಗತ್ತಲೆಯನು ಕಡೆಗಣಿಸಿ
ಭೂಮಂಡಲವನೆ ಖರೀದಿ ಮಾಡುವ
ಭಂಡರ ಆಟಕೆ ತಡೆಯೆಲ್ಲಿ

ಹರಿಯುವ ನದಿಗಳ ಕೊಂಡುಕೊಂಡರು
ಬೀಸುವ ಗಾಳಿಯ ಹರಾಜಿಗಿಟ್ಟರು
ತಿನ್ನುವ ಅನ್ನಕೆ ವಿಷ ಬೆರೆಸಿದರು
ಈ ನಯವಂಚಕರಿಗೆ ಕೊನೆ ಎಲ್ಲಿ

ಜಗದೆಲ್ಲೆಡೆ ಮುನ್ನಡೆಯದೆ
ಸಮತೆಯ ಯೋಧರ ಮೆರವಣಿಗೆ
ಕಟುಕರ ಎದೆಯಲಿ ಹೊಮ್ಮುತ ಚಿಮ್ಮದೆ
ಸೋದರ ಭಾವದ ಮೂಲಸೆಲೆ

-ಡಾ.ಸಿದ್ಧಲಿಂಗಯ್ಯ

ರಬ್ಬರ್ ಪ್ರಜ್ಞೆಯ ಅಳಲು ಕವಿತೆ

ಡಾ.ಸಿದ್ಧಲಿಂಗಯ್ಯನವರ ಹೊಸ ಕವಿತೆ ಇದು. ಆಕಾಶವಾಣಿಯ ಈ ಸಾಹಿತ್ಯ ಉತ್ಸವಕ್ಕಾಗಿಯೆ ಬರೆದದ್ದು. ಈ ಕವಿತೆಯನ್ನು ನೇರವಾಗಿ ಪ್ರವೇಶಿಸುವುದಕ್ಕಿಂತ ಮೊದಲು ಸಿದ್ಧಲಿಂಗಯ್ಯನವರ ಮೊದಲ ಸಂಕಲನದ ಒಂದೆರಡು ಸಾಲುಗಳನ್ನು ನೆನಪಿಸಿಕೊಂಡು ಮುಂದುವರಿಯುವುದು ಒಳ್ಳೆಯದು. ‘ಹಣೆಬರವು ಎಂಬ ನಾಟಕವು’ ಎಂಬ ಕವಿತೆಯ ಎರಡು ಸಾಲುಗಳಿವು;

‘ಕೆಂಪಿಂಕೇಲ್ ಬರುದಿರ್ಲಿ ಕಪ್ಪಿಂಕೇಲ್ ಬರುದಿರ್ಲಿ
ಅಳುಸ್ತೀನಿ ನನ್ತಾವು ರಬ್ಬರದೆ’

ಹೀಗೆ ಬ್ರಹ್ಮನು ನಿಮ್ಮ ಹಣೆ ಬರಹವನ್ನು ಹೀಗೇ ಬರೆದಿದ್ದಾನೆಂದು ದಲಿತರನ್ನು ನಂಬಿಸಿರುವ ಸಂಗತಿಯನ್ನು ಅಳಿಸುವ ರಬ್ಬರ್ ಆಗಿ ಕಾವ್ಯವನ್ನು ಸಿದ್ಧಲಿಂಗಯ್ಯ ತಮ್ಮ ಮೊದಲ ಸಂಕಲನದಲ್ಲೆ ಬಳಸಿದವರು. ಇವರ ಕಾವ್ಯವೆ ನಮ್ಮಲ್ಲಿ ಬರೆಯಲ್ಪಟ್ಟಿರುವ ಮತ್ತು ಬದುಕುತ್ತಿರುವ ತಾರತಮ್ಯವನ್ನು ಅಳಿಸುವ ರಬ್ಬರ್ ಇದ್ದ ಹಾಗೆ. ಇದು ನಮ್ಮ ನಮ್ಮವರ ಹಣೆಬರಹವನ್ನು ಅನ್ಯರು ಬರೆದರೆ ಅದನ್ನು ಅಳಿಸಬಲ್ಲ ರಬ್ಬರ್. ಇಂತಹ ಒಂದು ರಬ್ಬರ್ ಪ್ರಜ್ಞೆಯ ಮುಂದುವರಿದ ಭಾಗ ಆಗಿಯೆ ಈ ಅಳಲು ಕವಿತೆ ಇದೆ. ಅಸಮಾನತೆ, ದಬ್ಬಾಳಿಕೆ, ದೌರ್ಜನ್ಯ, ಯಜಮಾನಿಕೆ, ಮತ್ತು ನಿಮ್ಮ ಸ್ಥಿತಿಯೆ ನಿಮ್ಮ ಹಣೆಬರಹ ಎಂದು ದೀನರನ್ನು, ಹೆಂಗಸರನ್ನು ನಂಬಿಸಿರುವ ಹುನ್ನಾರಗಳ ಪ್ರತಿರೋಧವೆ ಈ ಪದ್ಯದಲ್ಲಿನ ಕಾವ್ಯಕಾರ್ಯ. ಆದರೆ ರಾಚನಿಕತೆ ದೃಷ್ಟಿಯಿಂದ ಇದು ಭಾಷಣದ ಹಾಗೆ ಇದೆ. ಇವರು ದಲಿತ ಕಾವ್ಯಪ್ರಜ್ಞೆಯಿಂದ ನಿವೃತ್ತರಾಗಿ ತಮ್ಮ ವರಸೆ ಬದಲಿಸಿದ ನಂತರ ಬರೆದ ಬಹುಪಾಲು ಕಾವ್ಯ ಹೀಗೆ ಪೇಲವ ಆಗಿರುವ ಕಾವ್ಯವೆ.

ಎಪ್ಪತ್ತರ ದಶಕದಿಂದ ಈಚೆಗೆ ಕನ್ನಡದಲ್ಲಿ ಹುಟ್ಟಿದ ದಲಿತ-ಬಂಡಾಯ ಕಾವ್ಯ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಬಹು ಬಲವಾಗಿ ಕೇಳುತ್ತ ಬಂದಿದೆ. ಸಾಮಾಜಿಕ ಅಸಮಾನತೆಯ ಜೊತೆಗೆ ಕೋಮುವಾದದ ಕುರಿತ ಪ್ರತಿರೋಧ ಮತ್ತು ಅಸ್ಪೃಶ್ಯತೆಯ ಕುರಿತ ಪ್ರತಿರೋಧ ಇವೆರಡೂ ಒಟ್ಟಿಗೆ ಇಲ್ಲಿ ಹುಟ್ಟಿದವು. ಪುರೋಹಿತಶಾಹಿ-ವೈದಿಕಶಾಹಿಯ ವಿರೋಧ ಮತ್ತು ಶ್ರಮಣಧಾರೆಗಳ ಚಿಂತನೆಯ ಪ್ರತಿಪಾದನೆಗಳು ಇಲ್ಲಿ ಪ್ರಧಾನ ನೆಲೆಗೆ ಬಂದವು. ದಲಿತ-ಬಂಡಾಯವು ಎತ್ತಿದ ಸಾಮಾಜಿಕ ನ್ಯಾಯದ ಪ್ರಶ್ನೆಯಲ್ಲಿ ಜಾತಿ ಮತ್ತು ವರ್ಗದ ನೆಲೆಯ ಶೋಷಣೆ, ತಾತರಮ್ಯಗಳೆ ಮುಖ್ಯವಾಗಿ ಇದ್ದವು. ಆದರೆ ದಲಿತ-ಬಂಡಾಯದ ಒಡನೆಯೆ ಹುಟ್ಟಿದ ಸ್ತ್ರೀವಾದವು ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಲಿಂಗನ್ಯಾಯದ ಪ್ರಶ್ನೆಯನ್ನಾಗಿಯೂ ಮಂಡಿಸಿತು. ದಲಿತ ಬಂಡಾಯ ಕಾವ್ಯವು ಆನಂತರ ತನ್ನ ಸಾಮಾಜಿಕ ನ್ಯಾಯದ ಪ್ರಶ್ನೆಯಲ್ಲಿ ಲಿಂಗನ್ಯಾಯದ ಪ್ರಶ್ನೆಯನ್ನೂ ಒಳಗೊಂಡಿತು. ಇಂತಹ ಒಂದು ಲಿಂಗನ್ಯಾಯದ ಪ್ರಶ್ನೆಯನ್ನು ಒಳಗೊಳ್ಳುವ ಕಾಳಜಿಯ ಅಭಿವ್ಯಕ್ತಿಯಾಗಿ ಕೂಡ ಈ ‘ಅಳಲು’ ಕವಿತೆಯನ್ನು ನೋಡಬಹುದು.

ಅತ್ಯಾಚಾರವೆ ನಿತ್ಯಾಚಾರ ಆಗುತ್ತಿರುವ; ಮುಗ್ಧ ಸೋದರಿಯರು ಬೀದಿಯ ಕಸವಾಗಿ ಬೀಳುತ್ತಿರುವ ಈ ದಿನಮಾನಗಳಲ್ಲಿ ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸುವ ಕೆಲಸವನ್ನು ಈ ಕವಿತೆ ಮಾಡುತ್ತಿದೆ. ದುಷ್ಟ ಮೃಗಗಳು ಹೆತ್ತ ತಾಯಿಯನ್ನು ಮತ್ತು ಒಡಹುಟ್ಟಿದ ಅಕ್ಕ ತಂಗಿಯರನ್ನು ಮರೆತ ಸ್ಥಿತಿಯನ್ನು ಈ ಕವಿತೆ ನೋವಿನಿಂದ ಮಂಡಿಸುತ್ತಿದೆ. ನಿತ್ಯವೂ ಗೋಳಿನ ನದಿಗಳು ಹರಿಯುತ್ತಿರುವ, ಕತ್ತಲೆ ಎಲ್ಲಡೆ ಹಬ್ಬುತ್ತಿರುವ ಸ್ಥಿತಿಯನ್ನು ಕವಿ ಆತಂಕ ಮತ್ತು ವಿಷಾದದಿಂದ ಇಲ್ಲಿ ಮಂಡಿಸುತ್ತಿದ್ದಾನೆ. ಈ ಕವಿತೆ ಇಂತಹ ಕೃತ್ಯವನ್ನು ಕುರಿತ ಅಳಲನ್ನು ತೋಡಿಕೊಳ್ಳುತ್ತಲೆ ನಮ್ಮೆಲ್ಲರ ಅಂದರೆ ವಿಶೇಷವಾಗಿ ಪುರುಷರ ಆತ್ಮಸಾಕ್ಷಿಯನ್ನು ಪ್ರಶ್ನಿಸುತ್ತದೆ. ಎಲ್ಲಿಗೆ ಬಂತು ಯಾರಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ? ಎಂಬಂತಹ ಪ್ರಶ್ನೆಗಳನ್ನೆ ಇವರ ಕಾವ್ಯ ಮೊದಲಿನಿಂದಲು ಕೇಳುತ್ತ ಬಂದಿದೆ. ಸ್ವಾತಂತ್ರ್ಯ ಎಂದರೆ ಸ್ವಾಭಿಮಾನ ಮತ್ತು ಸಮಾನತೆ ಎರಡೂ ಇರುವಂಥದ್ದು. ಹೆಣ್ಣಿಗೆ ನಮ್ಮ ‘ಸ್ವತಂತ್ರ’ ಭಾರತದಲ್ಲಿ ಈ ಸ್ವಾಂತಂತ್ರ್ಯ ಬಂದಿದೆಯೆ ಎಂಬ ಪ್ರಶ್ನೆಯನ್ನು ಈ ಕವಿತೆ ಕೇಳುತ್ತದೆ. ಜೊತೆಗೆ ತನ್ನ ದೇಹದ ಮೇಲೇನೆ ತನಗೆ ಹಕ್ಕು ಇಲ್ಲದ ಹೆಣ್ಣಿನ ಸ್ಥಿತಿಯನ್ನು ಈ ಕವಿತೆ ಹೇಳುತ್ತಿದೆ.

ಪ್ರಶಿಸುವ ಧಾಟಿಯನ್ನು ತಮ್ಮ ಒಂದು ಅಭಿವ್ಯಕ್ತಿ ಕ್ರಮವಾಗಿ ಸಿದ್ಧಲಿಂಗಯ್ಯ ಮೊದಲಿನಿಂದಲು ಬಳಸುತ್ತ ಬಂದಿದ್ದಾರೆ. ಈ ಅಳಲು ಕವಿತೆಯಲ್ಲಿ ಕೂಡ ಹಲವು ಪ್ರಶ್ನೆಗಳಿವೆ. ಕಂಗೆಟ್ಟವರನು ಕೇಳುವರಾರು? ನಡುಗುವ ಜೀವಕೆ ಬಿಡುಗಡೆ ಎಲ್ಲಿ? ದಾರಿಯ ತೋರುವ ಜನವೆಲ್ಲಿ? ಈ ನಯವಂಚಕರಿಗೆ ಕೊನೆ ಎಲ್ಲಿ? ಹೀಗೆ ಹಲವು ಪ್ರಶ್ನೆಗಳನ್ನು ಈ ಕವಿತೆ ಎತ್ತುತ್ತದೆ. ಪ್ರಶ್ನಾ ಧಾಟಿಯ ಮೂಲಕವೆ ವರ್ತಮಾನದ ಈ ನಮ್ಮ ಕತ್ತಲಿಗೆ ಕಾರಣಗಳೇನು ಎಂದು ಕಾರಣ ಪರಿಶೋಧನೆಗೂ ಈ ಕವಿತೆ ತೊಡಗುತ್ತದೆ.

ಲೋಕವನ್ನು ಕತ್ತಲು ಮತ್ತು ಬೆಳಕು ಎಂದು ಬೈನರಿ ದೃಷ್ಟಿಯಲ್ಲಿ ನೋಡುವುದು ಒಂದು ಆದಿಪ್ರಾಚೀನವಾದ ಮತ್ತು ವರ್ತಮಾನದ ನೋಟಕ್ರಮ. ಕತ್ತಲೆ ಇಲ್ಲಿ ಅಜ್ಞಾನ, ಬಡತನ, ಶೋಷಿತ ಸ್ಥಿತಿ, ದೀನ, ದರಿದ್ರ ಸ್ಥಿತಿಗಳ ಸಂಕೇತವೂ ಹೌದು. ಹಾಗೆಯೆ ಹೆಣ್ಣಿನ ದುಃಖ, ನೋವು, ಗೋಳು, ಸಾವುಗಳ ಸಂಕೇತವೂ ಹೌದು. ಇಲ್ಲಿ ಕಣ್ಣೀರಿನ ಮಳೆ ಸುರಿಯುತಿದೆ. ಗೋಳಿನ ನದಿಗಳು ಹರಿಯುತಿವೆ, ದುಃಖದ ಸಾಗರ ತುಂಬುತಿದೆ ಹಾಗಾಗಿಯೆ ಇಲ್ಲಿ ಕತ್ತಲೆ ಎಲ್ಲೆಡೆ ಹಬ್ಬುತಿದೆ! ಅಂದರೆ ಕತ್ತಲೆ ಇಲ್ಲಿ ತಾರತಮ್ಯ ಮತ್ತು ಶೋಷಣೆಯ ಸಂಕೇತವಷ್ಟೆ ಅಲ್ಲ ಸಾಮಾಜಿಕ ಅಧಃಪತನದ ಸಂಕೇತ ಕೂಡ ಹೌದು. (ಕತ್ತಲೆ ಇಂಥವಕ್ಕೆಲ್ಲ ಯಾತಕ್ಕೆ ಸಂಕೇತ ಆಗಬೇಕು? ಕತ್ತಲೆ ಮತ್ತು ಬೆಳಕು ಎಂಬಂತೆ ಬೈನರಿಯಾಗಿ ಲೋಕವನ್ನು ನೋಡುವುದು ಸರಿಯೊ? ನಿಜಕ್ಕು ಕತ್ತಲೆ ಎಂಬ ಸ್ಥಿತಿಯೆ ಇವನ್ನೆಲ್ಲ ಪ್ರತಿನಿಧಿಸಬೇಕೇಕೆ? ನಮ್ಮ ಸಂಸ್ಕೃತಿಯಲ್ಲಿ ಕಪ್ಪಾದ ಕತ್ತಲನ್ನು ಇಂಥವಕ್ಕೆಲ್ಲ ಸಂಕೇತ ಎಂಬಂತೆ ಬಂಬಿಸಿರುವ ಹಿಂದಿನ ಸಾಮಾಜಿಕ ರಾಜಕಾರಣ ಯಾವುದು? ಇಷ್ಟಕ್ಕು ಕೆಲವು ಕವಿತೆಗಳು ಹೆಚ್ಚು ಭಾರವನ್ನು ಹೊರಲಾರವು. ಒಂದು ಸರಳ, ಸಾಂದರ್ಭಿಕ, ಪೇಲವ ಕವಿತೆಯ ಮೇಲೆ ಎಷ್ಟು ಭಾರ ತಾನೆ ಹೊರಿಸುವುದಕ್ಕೆ ಸಾಧ್ಯ?)

ಈ ಅಳಲು ಕವಿತೆ ಲೋಕವನ್ನು ಒಳಿತು ಮತ್ತು ಕೆಡುಕು; ಒಳ್ಳೆಯವರು ಮತ್ತು ಕೆಟ್ಟವರು, ಶೋಷಿತರು ಮತ್ತು ಶೋಷಕರು ಹೀಗೆ ಬೈನರಿ ವರ್ಗೀಕರಣದಲ್ಲೆ ನೋಡುತ್ತದೆ. ಒಳಿತು ಮತ್ತು ಕೆಡುಕು ಎಂದೆ ಲೋಕವನ್ನು ನೋಡುವುದು ನಮ್ಮ ಆದಿಪ್ರಾಚೀನ ಮತ್ತು ನಿತ್ಯನೂತನ ಕವಿಸಮಯಗಳಲ್ಲಿ ಒಂದು. ನಮ್ಮ ಸಾಹಿತ್ಯ ಪರಂಪರೆಯ ಉದ್ದಕ್ಕು ಇರುವ ಒಂದು ಲೋಕದೃಷ್ಟಿ ಇದು. ಅಳಲು ಕವಿತೆಯಲ್ಲಿ ಕೂಡ ಈ ಲೋಕದೃಷ್ಟಿ ಇದೆ. ಇದೇ ಮುಂದುವರಿದು ಗಂಡು ಮತ್ತು ಹೆಣ್ಣು ಎಂದು ಬೈನರಿಯಾಗಿ ಲೋಕವನ್ನು ಒಡೆದು ನೋಡುವ ದೃಷ್ಟಿಯಾಗಿಯೂ ಇಲ್ಲಿ ಪ್ರಕಟವಾಗಿದೆ. ಹಾಗೆ ನೋಡಿದರೆ ನಮ್ಮ ಸಂಸ್ಕೃತಿಯಲ್ಲಿ ‘ರಚನೆ’ ಆಗಿರುವ ಕಲ್ಪಿತಗಳನ್ನು ಕವಿದೃಷ್ಟಿ ಮೀರುವುದು ಒಂದು ಸವಾಲೆ ಸರಿ.

ಲಿಂಗನ್ಯಾಯದ ಪ್ರಶ್ನೆಯಲ್ಲಿ ಮಾತ್ರವೆ ಈ ಕವಿತೆ ವಿರಮಿಸುವುದಿಲ್ಲ. ಒಟ್ಟು ಸಮಾಜದ ಕೆಡುಕಿನ ಕಾರಣಗಳನ್ನು ಶೋಧಿಸುವ ಕಡೆಗೂ ಇದು ಚಲಿಸುತ್ತದೆ. ಭೂಮಂಡಲವನ್ನೆ ಖರೀದಿ ಮಾಡುವ ಭಂಡರ ಆಟದ ಒಂದು ಭಾಗ ಆಗಿಯೆ ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಈ ಕವಿತೆ ಕಾಣಿಸುತ್ತದೆ. ಜಗದೆಲ್ಲೆಡೆ ವ್ಯಾಪಾರದ ‘ಆಟ’ ಅಂದರೆ ವ್ಯಾಪಾರದ ಯುದ್ಧ ನಡೆಯುತ್ತಿರುವುದರಿಂದ ಇದರ ನಿವಾರಣೆಗೆ ಸಮತೆಯ ಯೋಧರ ಪಡೆಯೊಂದು ಮೆರವಣಿಗೆ ಹೊರಡಬೇಕಾಗಿದೆ. ಎಂಥ ಕಟುಕರ ಎದೆಯಲ್ಲು ಸೋದರ ಭಾವದ ಮೂಲಸೆಲೆಯೊಂದು ಇದ್ದೇ ಇರುತ್ತದೆ. ಆ ಸೋದರ ಭಾವದ ಮೂಲ ಸೆಲೆಯನ್ನು ಬೆಳಕಿಗೆ ತರುವ ಸಮತೆಯ ಯೋಧರ ಮೆರವಣಿಗೆಯೊಂದು ನಡೆಯಬೇಕಾಗಿದೆ. ಅಂತಹ ಸದಾಶಯದೊಂದಿಗೆ ಕವಿತೆ ಮುಕ್ತಾಯ ಆಗುತ್ತದೆ. ಆದರೆ ಸಿದ್ಧಲಿಂಗಯ್ಯನವರ ನಾನು ಮೆಚ್ಚುವ ಕೆಲವು ಕವಿತೆಗಳಿಗೆ ಹೋಲಿಸಿದರೆ ಇದೊಂದು ಸಾಧಾರಣವಾದ ಕವಿತೆ. ಆದರೂ ಇಂದಿನ ವರ್ತಮಾನದ ಸಮಾಜದ ಬಹು ದೊಡ್ಡ ಗಾಯ ಹೆಣ್ಣಿನ ದೇಹದ ಮೇಲಿನ ದಾಳಿ; ಹೆಣ್ಣನ್ನು ಅಧೀನ ಮಾಡಿಕೊಳ್ಳುವ ಈ ಗಂಡುಹುನ್ನಾರ ಏನಿದೆ ಅದಕ್ಕೆ ಸೂಕ್ಷ್ಮ ಸಂವೇದಿ ಕವಿಯೊಬ್ಬ ಪ್ರತಿಕ್ರಿಯಿಸಿರುವ ಕವಿತೆ ಇದು.

ಹೇಳುವುದನ್ನು ರೂಪಕದಲ್ಲಿ ಹೇಳಲಿ, ಸಂಕೇತದಲ್ಲಿ ಹೇಳಲಿ; ಎಲ್ಲರಿಗು ತಿಳಿಯುವಂತೆ ಸರಳವಾದ ಭಾಷೆಯಲ್ಲಿ ಹೇಳುವುದು ಸಿದ್ಧಲಿಂಗಯ್ಯನವರ ಕಾವ್ಯದ ಇನ್ನೊಂದು ಲಕ್ಷಣ. ಅಂದರೆ ದಪ್ಪ ದಪ್ಪ ಸಂಸ್ಕೃತದ ಶಬ್ದಗಳನ್ನು ಬಳಸದೆ, ಸಾಮಾನ್ಯರು ಬಳಸಬಹುದಾದ ತಿಳಿಕನ್ನಡವನ್ನು ಬಳಸುವುದೆ ಇವರ ಕಾವ್ಯದ ಲಕ್ಷಣ. ಇಂತಹ ಸರಳತೆ ಈ ಅಳಲು ಕವಿತೆಯಲ್ಲು ಇದೆ. ಓದುಗನನ್ನು ಓಲೈಸುವ, ಇಂಪ್ರೆಸ್ ಮಾಡುವ ಉದ್ದೇಶದಿಂದ ಇವರ ಕಾವ್ಯ ರಚನೆ ಆಗುವುದಿಲ್ಲ. ತನ್ನ ಸಮಾಜದ ಹೊಟ್ಟೆ ಒಳಗಿನ ನೋವನ್ನು ಬಿಡಿಸಿ ಇಡುವ ಕೆಲಸವನ್ನು ಇವರ ಕಾವ್ಯ ಮಾಡುತ್ತದೆ. ಅದು ವಯಕ್ತಿಕ, ಜಾನಾಂಗಿಕ ಮತ್ತು ಸಾಮಾಜಿಕ ಎಲ್ಲವೂ ಹೌದು. ಇವರ ಹೋರಾಟದ ಹಾಡುಗಳನ್ನು ನೋಡಿದರೂ ಇದು ತಿಳಿಯುತ್ತದೆ.

ಅಧ್ಯಾಪಕನೊಬ್ಬ ಕವಿತೆಯೊಂದನ್ನು ತರಗತಿಯಲ್ಲಿ ಓದಿ ಚರ್ಚಿಸುವಾಗ ಸಾಮಾನ್ಯವಾಗಿ ಅರ್ಥ ಹೇಳುವುದು, ಆಶಯ ಹೇಳುವುದು, ಸಾರಾಂಶ ಹೇಳುವುದು, ಪರೀಕ್ಷೆ ದೃಷ್ಟಿಯಿಂದ ಪ್ರಶ್ನೆಗಳು ಬಂದರೆ ಒಳ್ಳೆಯ ಅಂಕಗಳನ್ನು ಪಡೆಯಲು ಉತ್ತರಗಳನ್ನು ಬರೆಯುವುದು ಹೇಗೆ ಎಂದು ಹೇಳುವುದು ಹೀಗೆಲ್ಲ ಮಾಡುವುದುಂಟು. ಆದರೆ ಈ ಕವಿತೆಯನ್ನು ಓದುವಾಗ ಇದರ ಅರ್ಥ ಹೇಳುವ ಅಗತ್ಯವಿಲ್ಲ. ಇದರ ಆಶಯವನ್ನು ಹೇಳುವ ಅಗತ್ಯವೆ ಇಲ್ಲ. ಇದರ ಸಾರಾಂಶ ಕೂಡ ಹೇಳುವ ಅಗತ್ಯ ಇಲ್ಲ. ಏಕೆಂದರೆ ಇದು ನೇರವಾಗಿ ಅರ್ಥವಾಗುತ್ತದೆ. ಇದರ ಆಶಯ ಏನೆಂದು ಓದಿದ ಕೂಡಲೆ ತಿಳಿಯುತ್ತದೆ. ವರ್ತಮಾನದ ಆಗುಹೋಗುಗಳ ಕನಿಷ್ಟ ಅರಿವು ಇದ್ದರೂ ಸಾಕು, ಇದರ ವಸ್ತುವಿಚಾರ ಏನು ಎಂದು ಓದಿದ ಕೂಡಲೆ ತಿಳಿಯುತ್ತದೆ. ಹಾಗಾದರೆ ತರಗತಿಯಲ್ಲಿ ಈ ಕವಿತೆಯನ್ನು ವಿದ್ಯಾರ್ಥಿಗಳೊಂದಿಗೆ ಓದುವಾಗ ಏನು ಮಾಡಬೇಕು?

ಈ ಕವಿತೆ ಓದಿ ಅರ್ಥ ಹೇಳುವ ಕವಿತೆ ಅಲ್ಲ. ನನ್ನ ಪ್ರಕಾರ ಇಂಥ ಕವಿತೆಗಳು ವರ್ತಮಾನದ ತಲ್ಲಣಗಳನ್ನು – ವಿಸಂಗತಿಗಳನ್ನು ಚರ್ಚಿಸಲು ಒದಗುವ ಮೀಟುಗೋಲುಗಳು. ಇಂತಹ ಕವಿತೆಗಳು ನಮ್ಮ ವರ್ತಮಾನದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ನಾವೆಲ್ಲರೂ ಆತ್ಮಸಾಕ್ಷಿಯಾಗಿ ಪರಿಶೀಲಿಸಲಿಕ್ಕೆ; ಇಂತಹ ಪರಿಸ್ಥಿತಿಯಲ್ಲಿ ನಮ್ಮ ಪಾತ್ರ ಮತ್ತು ನಿಲುವು ಏನಾಗಬೇಕು ಎಂದು ಚಿಂತಿಸುವುದಕ್ಕೆ ಪ್ರಚೋದಕವಾಗಿ ಒದಗುತ್ತವೆ. ಆ ಮೂಲಕ ನಮ್ಮ ನಿಲವು, ನಡಾವಳಿಗಳನ್ನು ರೂಪಿಸಿಕೊಳ್ಳುವ ಕಡೆಗೆ ಪ್ರೇರಿಸುತ್ತವೆ. ಆ ಮೂಲಕ ಸಮೂಹದ ಆತ್ಮಸಾಕ್ಷಿಯೊಂದನ್ನು – ಎಚ್ಚರವೊಂದನ್ನು ರೂಪಿಸುವ ಜವಾಬ್ದಾರಿಯನ್ನು ಕೂಡ ಇಂತಹ ಕವಿತೆಗಳು ನಿರ್ವಹಿಸುತ್ತವೆ. ಸಾಮಾಜಿಕ ಬದಲಾವಣೆ ಎನ್ನುವುದು ಹಾಗೆ ನಾವು ನೋಡುವಂತೆ ವಸ್ತುಸಾಮಗ್ರಿಗಳಲ್ಲಿ ಮಾತ್ರವೆ ಬಹಿರಂಗವಾಗಿ ಕಾಣುವುದಲ್ಲ, ಮಾನಸಿಕವಾಗಿ, ಅಂತರಂಗದಲ್ಲೆ ಆತ್ಮಪ್ರಜ್ಞೆಯಲ್ಲೆ ಆಗುವ ವಿಕಾಸ ಮತ್ತು ಸಮುದಾಯದ ನಡಾವಳಿಯಲ್ಲೆ ಆಗುವ ವಿಕಾಸ ಕೂಡ. ಅಂತಹ ಬದಲಾವಣೆಯಲ್ಲಿ ಇಂತಹ ಕವಿತೆಗಳು ಪ್ರಧಾನ ಪಾತ್ರ ವಹಿಸುತ್ತವೆ. ಸಾಹಿತ್ಯಕ ಸೌಂದರ್ಯದ ನೆಲೆಯಲ್ಲಿ ಕಾವ್ಯ ಎಂಬ ಸೋ ಕಾಲ್ಡ್ ಚೌಕಟ್ಟಿನ ನೆಲೆಯಲ್ಲಿ ‘ಶ್ರೇಷ್ಠ’(?) ಅಲ್ಲದಿದ್ದರೂ ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಇಂಥ ಕವಿತೆಗಳು ಉಪಯುಕ್ತ ಎನ್ನಿಸುತ್ತವೆ.

ಈ ಕವಿತೆ ಇಲ್ಲಿಗೆ ಮಾತ್ರವೆ ನಿಲ್ಲುವುದಿಲ್ಲ. ಹರಿಯುವ ನದಿಗಳನ್ನು ಕೊಂಡುಕೊಳ್ಳುವ; ಬೀಸುವ ಗಾಳಿಯನ್ನು ಹರಾಜು ಮಾಡುವ; ತಿನ್ನುವ ಅನ್ನಕ್ಕೆ ವಿಷ ಬೆರೆಸುವ; (ಇವೆಲ್ಲವು ಸಾಮಾಜಿಕ ಅವನತಿಯನ್ನು ಬಣ್ಣಿಸುವ ಬೇರೆ ಬೇರೆ ಮಾತುಗಳೆ) ಉರಿಯುವ ಹಣತೆ ಆರಿಹೋಗಿರುವ ಗುಡಿಸಲುಗಳಲ್ಲಿ ಕಗ್ಗತ್ತಲೆ ಆವರಿಸಿರುವ ಸ್ಥಿತಿಯನ್ನೂ, ಕಣ್ಣೆತ್ತಿ ನೋಡದೆ ಭೂಮಂಡಲವನ್ನೆ ಖರೀದಿ ಮಾಡುವ ಈ ಭಂಡರ ಆಟ ಇದೆಯಲ್ಲ ಇಂತಹ ‘ಆಟ’ವನ್ನು ನಾವೆಲ್ಲರೂ ಪ್ರತಿರೋಧಿಸುವ ಕಡೆಗೆ ನಮ್ಮನ್ನು ಈ ಕವಿತೆ ಪ್ರಚೋದಿಸುತ್ತದೆ. ಜೊತೆಗೆ ಇಂತಹ ಆಟಗಳನ್ನು ಅಳಿಸುವ ರಬ್ಬರ್‌ಗಳಂತೆ ನಾವೆಲ್ಲರೂ ಆಗಬೇಕಾದ ಅಗತ್ಯವನ್ನು ಈ ಕವಿತೆ ಹೇಳುತ್ತದೆ. ಕವಿತೆ ಕೊನೆಯಲ್ಲಿ ಸೋದರಭಾವ ಮತ್ತು ಸಮತೆಯ ಅಪೇಕ್ಷೆಯೊಂದಿಗೆ ಕೊನೆಗೊಳ್ಳುತ್ತದೆ. ನಾವು ನಡೆಯಬೇಕಾಗಿರುವ ಮತ್ತು ರೂಪಿಸಬೇಕಾಗಿರುವ ಹಾದಿಯೆ ಸೋದರತೆ ಮತ್ತು ಸಮತೆ. ಅದು ಜಾತಿಯಾಗಲಿ, ವರ್ಗವಾಗಲಿ, ದೇಶವಾಗಲಿ, ಭಾಷೆಯಾಗಲಿ, ಲಿಂಗವಾಗಲಿ, ನಿರ್ಲಿಂಗವಾಗಲಿ ಸೋದರತೆ ಮತ್ತು ಸಮತೆಗಳು ಮಾತ್ರವೆ ನಮ್ಮ ದಾರಿಗಳಾಗಲಿ ಎಂಬ ಸದ್ಭಾವನೆ ಈ ಕವಿತೆಯ ಅಪೇಕ್ಷೆಯಾಗಿದೆ. ಮೌಲ್ಯವಾಗಿದೆ. ಇಂತಹ ಮೌಲ್ಯಗಳನ್ನು ಬಿತ್ತುವ ಮತ್ತು ಬಿತ್ತಿಕೊಳ್ಳುವ ದಾರಿಗಳನ್ನಾಗಿ ತರಗತಿಗಳಲ್ಲಿ ಇಂಥ ಕವಿತೆಗಳನ್ನು ಚರ್ಚಿಸಬಹುದು, ಬಳಸಬಹುದು.

ಈ ಕವಿತೆಯ ಬಗ್ಗೆ ಯಾರು ಏನೇ ಹೇಳಲಿ, ತರಗತಿಯಲ್ಲಿ ಎಷ್ಟು ವಿದ್ಯಾರ್ಥಿನಿಯರು ಇರುತ್ತಾರೊ ಅಷ್ಟು ಅಭಿಪ್ರಾಯಗಳು ಕವಿತೆಯ ಬಗ್ಗೆ ಕೇಳುತ್ತಲೆ ಮೂಡುತ್ತ್ತಿರುತ್ತವೆ ಮತ್ತು ಬದಲಾಗುತ್ತ ಇರುತ್ತವೆ. ಹೀಗಿರುವಾಗ ಅಧ್ಯಾಪಕರು ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಏನೂ ಇಲ್ಲದ ಕವಿತೆಯಲ್ಲಿ ಏನೇನೊ ಇದೆ ಎಂದೆಲ್ಲ ಹೇಳುತ್ತ ಇದ್ದರೆ ತಮ್ಮದೆ ವಿವೇಚನೆಯಿಂದ ಅವರು ತಮಗೆ ಬೇಕಾದ ಪಠ್ಯವನ್ನು ಕಟ್ಟಿಕೊಳ್ಳುತ್ತ ಇರುತ್ತಾರೆ. (ಕವಿತೆ ಅವರ ಬೌದ್ಧಿಕತೆಯನ್ನು ಹಿಗ್ಗಿಸದೆ ಇದ್ದರೆ, ಅವರಿಗೆ ರುಚಿಸದೆ ಇದ್ದರೆ) ಪದ್ಯಕ್ಕಿಂತ ಮೇಷ್ಟು ಹೇಳಿದ ಪಾಠವೆ ಚೆನ್ನಾಗಿತ್ತು ಎನ್ನಬಹುದು. ಹೀಗಿರುವಾಗ ಒಂದು ಮಾತಿನಿಂದ ಈ ಕವಿತೆಯ ವ್ಯಾಖ್ಯಾನವನ್ನು ಮುಗಿಸುತ್ತೇನೆ. ಮಾತಿನ ಮೊದಲಲ್ಲೆ ಸಿದ್ಧಲಿಂಗಯ್ಯನವರ ಕಾವ್ಯ ನಮ್ಮ ಸಮಾಜದ ಅಸಮಾನತೆಯನ್ನು ಅಳಿಸುವ ರಬ್ಬರ್ ಎಂದು ಹೇಳಿದ್ದೇನೆ. ಆದರೆ ಈ ‘ಅಳಲು’ ಕವಿತೆ ಅಂಥಾ ಒಳ್ಳೆಯ ರಬ್ಬರ್ ಅಲ್ಲ ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತದೆ. ಆದರೆ ನಮ್ಮ ಇಂದಿನ ವರ್ತಮಾನದ ಉರಿಯುವ ಸಮಸ್ಯೆ ಆದ ಹೆಣ್ಣಿನ ದೇಹದ ಮೇಲಿನ ದಾಳಿಯನ್ನು ಕುರಿತ ಕವಿತೆ ಇದಾಗಿರುವುದರಿಂದ ಇದೊಂದು ವಿಚಾರಚರ್ಚೆಗೆ ಗ್ರಾಸ ಒದಗಿಸುವ ಕವಿತೆ ಎಂದು ನನ್ನ ಭಾವನೆ.

(ಆಕಾಶವಾಣಿಯ ಸಾಹಿತ್ಯೋತ್ಸವದಲ್ಲಿ ಮಂಡಿಸಿದ ಕವಿತೆಯ ವಿಶ್ಲೇಷಣೆ)

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...