Date: 05-02-2025
Location: ಬೆಂಗಳೂರು
"ಸಣ್ಣ ಮಗುವಿನ ಮನಸ್ಸಿನಲ್ಲಿ ಸಂಬಂಧಗಳ ಮೌಲ್ವೀಕರಣವಾಗುವುದು ಸಹ ಆ ಸನ್ನಿವೇಶಕ್ಕೆ ತಕ್ಕಂತೆ ಸೂಕ್ತವೆನಿಸಿದಂತೆ ಭಾಸವಾಗುವುದು. ಯಾರಲ್ಲಿ ತಾನು ನ್ಯಾಯ ಹುಡುಕುವುದು? ಏನನ್ನು ಕಂಡುಕೊಳ್ಳುವುದು? ಯಾವುದು ಸರಿ? ಯಾವುದು ತಪ್ಪು? ಇಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವೇ ಇರದ ರಾಮು ಸೂಕ್ಷ್ಮ ಮನಸ್ಸಿಗೆ ಆ ಕ್ಷಣಕ್ಕೆ ಹೊಳೆದ ಅಪ್ಪುವಿನ ಪೀಪಿಯನ್ನು ಕೊಡುವಲ್ಲಿ ಒಂದು ಸಾರ್ಥಕತೆಯನ್ನು ಕಥೆ ದ್ವನಿಸುತ್ತದೆ,” ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಕೆ. ಸದಾಶಿವ ಅವರ "ರಾಮನ ಸವಾರಿ ಸಂತೆಗೆ ಹೋದದ್ದು" ಕಥೆಯ ಬಗ್ಗೆ ವಿಮರ್ಶಿಸಿದ್ದಾರೆ.
ನವ್ಯ ಸಾಹಿತ್ಯ ಸಂದರ್ಭದಲ್ಲಿ ಕೆ ಸದಾಶಿವ ಅವರ ಹೆಸರು ಬಹಳ ಪ್ರಾಮುಖ್ಯತೆಯನ್ನು ಪಡೆದು ಕೊಂಡಿರುವುದು. ಮೂಲತಃ ಕೊಪ್ಪದವರಾದ ಇವರು ಮೈಸೂರಿನ ಜೆ. ಎಸ್. ಎಸ್. ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ರಾಮಚಂದ್ರ ಶರ್ಮರಂತೆ ನವ್ಯದ ಆರಂಭದ ಕಥೆಗಾರರು ಇವರು. ಇವರ ಪ್ರಮುಖ ಕೃತಿಗಳೆಂದರೆ “ನಲ್ಲಿಯಲ್ಲಿ ನೀರು ಬಂದಿತು”. (1958 “)ಅಪರಿಚಿತರು” (1971) ಇವರ ‘ಪರಿಚಿತರು’ ಕೃತಿಗೆ ‘ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿದೆ ‘ನಲ್ಲಿಯಲ್ಲಿ ನೀರು ಬಂದಿತು’ ಕಥೆಯು ಇಂಗ್ಲಿಷ್, ಮಲಯಾಳಂ, ಹಿಂದಿ,ಭಾಷೆಗಳಿಗೆ ಅನುವಾದ ಗೊಂಡಿದೆ.
ಸದಾಶಿವ ಅವರು ತಮ್ಮ ಜೀವಿತ ಅವಧಿಯಲ್ಲಿ ಬರೆದದ್ದು ಕೇವಲ 23 ಕಥೆಗಳನ್ನು ಮಾತ್ರ. ಬರೆದ ಎಲ್ಲ ಕತೆಗಳು ಪ್ರಸಿದ್ಧಿ ಪಡೆಯದೆ ಹೋದರು ಕೆಲವು ಎಂದಿಗೂ ಸಹ ಕಾಡುವಂತಹ ಮನದಾಳದಲ್ಲಿ ಅಚ್ಚಳಿಯದೆ ಉಳಿಯುವಂತಹ ಕಥೆಗಳಾಗಿವೆ. ಬಹುಶಃ ಅವರು ಇನ್ನಷ್ಟು ಮಹತ್ತರವಾದ ಸಾಹಿತ್ಯ ಕೃಷಿ ನಡೆಸುತ್ತಿದ್ದರೋ ಏನೋ ಆದರೆ ಅವರು 1977ರಲ್ಲಿ ತಮ್ಮ 44ನೇ ವಯಸ್ಸಿನಲ್ಲೇ ವಿಧಿವಶರಾದರು. ಇವರ “ರಾಮನ ಸವಾರಿ ಸಂತೆಗೆ ಹೋದದ್ದು” ಕಥೆ ಕನ್ನಡದಲ್ಲಿ ಟೆಲಿಚಿತ್ರವಾಗಿದೆ. ರಾಮಚಂದ್ರ ಶರ್ಮ ಅವರು ಪೆಂಗ್ವಿನ್ ಪ್ರಕಾಶನ ಸಂಸ್ಥೆಗೆ ಸಂಪಾದಿಸಿಕೊಟ್ಟ Form Cauvery to Godavari ಎಂಬ ಇಂಗ್ಲೀಷ್ ಸಂಕಲನದಲ್ಲಿ ಈ ಕಥೆ ಸೇರ್ಪಡೆಗೊಂಡಿದೆ.
ಇವರ ಸಮಗ್ರ ಕಥೆಗಳಲ್ಲಿ ಈ ಎಲ್ಲ ಕತೆಗಳನ್ನು ಕಾಣಬಹುದು. “ಅಗೆದರೆ ಸಿಗುವುದು ಮಣ್ಣಲ್ಲ” ಎಂಬ ಕಥೆಯಲ್ಲಿ ಒಬ್ಬ ವಿಧವೆಯ ಸುತ್ತಾ ಕಥೆ ಸುತ್ತಿದರೆ, “ಮುಂಜಾವಿನ ಮುಸುಕಿನಲ್ಲಿ” ಈ ಕಥೆಯು ಮರದ ಮೇಲಿಂದ ಕಳ್ಳತನ ಮಾಡುವಾಗ ಹಾವು ಕಚ್ಚುವುದು ಹಸಿವು ಬಡತನ ಇತ್ಯಾದಿಗಳ ಕಡೆ ಹೊರಳುತ್ತದೆ.
“ನೆಲ ಕೊಟ್ಟ ಕೆಂಪು” ಕಥೆಯು ಮಾನಸಿಕ ಸ್ಥಿಮಿತತೆ ಇರದೆ ಲೈಂಗಿಕತೆ ಜಾಗೃತೆಗೊಂಡದರ ಹಿನ್ನೆಲೆಯಲ್ಲಿದ್ದರೆ,” ನಾ ಹೀಗೆ ಇದ್ದೇನೆ” ಎಂಬ ಕಥೆಯು ಲೈಂಗಿಕತೆಯನ್ನು ನೈತಿಕತೆಯಾ? ಅಥವಾ ಅನೈತಿಕತೆಯೋ? ಎಂಬ ವಿಚಾರದಡಿಯಲ್ಲಿ ತೆರೆದಿಡುತ್ತದೆ. ಮತ್ತು ‘ನಲ್ಲಿಯಲ್ಲಿ ನೀರು ಬಂದಿತು”. ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ನಿಲುವಿದ್ದರು ಅದರ ಅನ್ಯೋನ್ಯತೆ ವೈಮನಸಿನ ವೈರುದ್ಯತೆ ತೋರುತ್ತದೆ. “ಜಾನಿ ಮೆಟ್ಟಿಲು ಹತ್ತಿದಳು” ಎಂಬ ಕತೆಯಲ್ಲಿ ಒಂದು ಹೆಣ್ಣಿನ ಅಸಹಾಯಕ ಸ್ಥಿತಿಯ ದನಿಯನ್ನು ಕಾಣಬಹುದು. ಮತ್ತು “ಗಿಡ್ಡಿ” ಎಂಬ ಕತೆಯಲ್ಲಿ ಸಂಸಾರಿಕ ಚೌಕಟ್ಟಿನಲ್ಲಿ ಕಾಮದ ಹರಿಯುಕೆ ಕಾಣುವಂತದ್ದು. “ಅಪರಿಚಿತರು” ಕಥೆಯಲ್ಲಿ ದೇಹ ಮನಸ್ಸಿನ ಸಮ್ಮೀಳಿತದ ವಸ್ತು ವಿಚಾರ ಕುರಿತು ವ್ಯಕ್ತಪಡಿಸುತ್ತದೆ. ಹಾಗೂ “ನೆರಳು ಬೆಳಕಿನಾಟದಲ್ಲಿ ಕಂಡಿದ್ದೇನು”, “ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ”, “ನೋಡಿದೆಯಾ ಅಮ್ಮ ಅವಳ ಧಿಮಾಕು”. ಹೀಗೆ ಅವರ ಕಥಾಲೋಕದ ತುಂಬಾ ಹಲವಾರು ತರದ ಕಥೆಗಳು ಒಂದೊಂದಾಗಿ ಹೊಸ ಹೊಸ ಲೋಕದ ಅನಾವರಣ ಮಾಡುತ್ತವೆ.
ಇವರ “ರಾಮನ ಸವಾರಿ ಸಂತೆಗೆ ಹೋದದ್ದು” ಕಥೆಯಲ್ಲಿ ರಾಮ ಪುಟ್ಟ ಹುಡುಗ. ರಾಮನ ತಾಯಿ ಪಾರ್ವತಿ. ಅಜ್ಜ ಮಂಜಯ್ಯ, ಅಜ್ಜಿ ಕಲ್ಯಾಣಿ. ಇನ್ನೂ ರಾಮುವಿಗಿಂತ ಅಪ್ಪು ದೊಡ್ಡವನು ಪಕ್ಕದ ಮನೆಯ ಹುಡುಗ. ರಾಮು ಸಂತೆಗೆ ಹೋದಾಗ ನಡೆದ ಘಟನೆ ಇಂದಾಗಿ ಪಾರ್ವತಿ ಗಂಡನನ್ನು ಬಿಟ್ಟು ಬಂದು ಮನೆಯಲ್ಲಿ ಕೂತವಳೆಂದು ಅರಿವಾಗುತ್ತದೆ. ತನ್ನ ಮಗನನ್ನು ( ಪಾರ್ವತಿಯ ಗಂಡ) ಯಾರಿಗೂ ತಿಳಿಯದಂತೆ ಸಂತೆಯಿಂದ ಕರೆದೊಯ್ಯುತ್ತಿರುವ ವಿಷಯ ತಿಳಿದ ಮಂಜಯ್ಯ ಅಳಿಯನನ್ನು ದಾರಿ ಮಧ್ಯದಲ್ಲೇ ಅಡ್ಡ ಹಾಕಿ ಮಾತಿನ ಚಕಮಕಿಯೊಂದಿಗೆ ಮೊಮ್ಮಗನನ್ನು ಮನೆಗೆ ಕರೆತರುತ್ತಾರೆ. ಎಂದೂ ಅಪ್ಪನ ಮುಖವನ್ನೇ ನೋಡದ ರಾಮು ಅವರು ನೀಡಿದ ಸಿಹಿ ತಿಂಡಿ ಬತ್ತಾಸು ಅವರ ಸವಿ ಮಾತಿಗೆ ಮರುಳಾಗಿ ತನ್ನಮ್ಮ ಇದ್ದಲ್ಲಿಗೆ ಕರೆದೊಯ್ಯುತ್ತಾರೆಂದು ಭ್ರಮೆಯಲ್ಲಿ ಎತ್ತಿನಗಾಡಿ ಹತ್ತಿ ಕುಳಿತಿದ್ದೇನೊ ಸರಿ. ಆದರೆ ಗಾಡಿ ಬೇರೆ ಕಡೆ ತಿರುಗಿದಾಗ ಅವನ ಮನದಲ್ಲಿ ಉಂಟಾದ ತಲ್ಲಣ ಆತಂಕ ಅಳು ಒಂದೆಡೆಯಾಗಿ ಕಾಣುವುದು, ಮೊಮ್ಮಗನನ್ನು ಕರೆತಂದು ಮನೆಯಲ್ಲಿ ಆನಂತರ ಉಂಟಾದ ಜಗಳ. ಮಗಳು ಪಾರ್ವತಿಯು ತಾಯಿಯ ಮಾತಿಂದ ಹಾಳಾಗಿ ತವರು ಮನೆಯಲ್ಲಿ ಕೂತಳು ಎಂಬ ಆಕ್ಷೇಪಣೆ ಮಂಜಯ್ಯನವರದು. ಇದರ ಮಧ್ಯಸ್ಥಿಕೆ ವಹಿಸಲು ಬಂದ ಸದಾನಂದ ಭಟ್ಟರಿಗೂ ಸಹ ಪಾರ್ವತಿ ಬೈಯುವುದನ್ನು ಸಹಿಸದ ಮಂಜಯ್ಯ ಕೆಂಡಮಂಡಲವಾಗುವಿಕೆ, ಇದನ್ನೆಲ್ಲ ನೋಡಿದ ಪುಟ್ಟರಾಮ ಅಪ್ಪುವಿನ ಹತ್ತಿರ ಕದ್ದು ತಂದ ಪೀಪಿಯನ್ನು ಅವನಿಗೆ ವಾಪಾಸ್ ಕೊಡಲು ಹೋಗುವಲ್ಲಿ ಕಥೆ ಮುಕ್ತಾಯಗೊಳ್ಳುವುದು.
ಈ ಕಥೆಯನ್ನು ವಿಮರ್ಶಿಸಿದಾಗ ಕಥೆ ಸಾಧಾರಣ ಕಥಾಹಂದರವನ್ನು ಹೊಂದಿರುವುದೇನು ನಿಜ. ಆದರೆ ಕಥೆಗಾರರು ಈ ಕಥೆಯನ್ನು ಆ ಪುಟ್ಟ ಮಗು ರಾಮುವಿನ ದೃಷ್ಟಿಕೋನದಿಂದ ತೂಗಿ ಅಳೆಯುತ್ತಿದ್ದಾರೆ. ವಿಷಮ ದಾಂಪತ್ಯದಿಂದ ದೂರವಾಗಿ ಬಂದ ಪಾರ್ವತಿಯು ಮಂಜಯ್ಯ ಅವರ ಮಗಳು. ಈ ಪಾರ್ವತಿ ಮದುವೆ ಮಾಡಿಕೊಟ್ಟ ಕೆಲವೇ ದಿನಕ್ಕೆ ಆತನ ಮನೆಯಿಂದ ಬಂದಿದ್ದಳು. “ಈ ಇವಳು ಬೇವರ್ಸಿ ಲಗ್ನವಾದ ಮೂರೇ ಮೂರು ದಿನಕ್ಕೆ ನನ್ನಿಂದ ಆಗದು ಎಂದು ಆತನ ಮನೆಯಿಂದ ಓಡಿ ಬಂದವಳಲ್ಲವೇ”. “ಈ ರಾಮನ ಬಸುರಿಯಲ್ಲಿ ಬಂದೇ ಬಿಟ್ಟಳು. ಮತ್ತೆ ಅಲ್ಲಿಗೆ ಹೋಗುವುದಿಲ್ಲವೆಂದು”,,, “ನನ್ನ ಮಗಳು ನನಗೆ ಹೊರೆಯಲ್ಲ ಎಂದಳು, ಅವಳು”. ಹೀಗೆ ಮಂಜಯ್ಯ ಭೂತಕಾಲದಲ್ಲಿ ನಡೆದ ವಿಷಯವನ್ನು ಜ್ಞಾಪಿಸಿ ಸದಾನಂದಭಟ್ಟರಿಗೆ ಮಂಜಯ್ಯ ಹೀಗೆ ಹೇಳುತ್ತಿದ್ದಂತೆ,,”,ಅವರ ಒಟ್ಟಿಗೆ ಇರುವುದು ಬೇಡವೆಂದು ಬಂದೇನೇ”? ಅವರು ಕೊಟ್ಟ ಕಿರುಕುಳ ಒಂದೇ ಎರಡೇ?”. ಹೀಗೆ ಭಾಷಣ ಆರೋಪವನ್ನು ಮಂಜಯ್ಯ ಸದಾನಂದ ಭಟ್ಟರ ಎದುರಿನಲ್ಲಿ ಒದರಿದಳು ಪಾರ್ವತಿ. ಇವರೆಲ್ಲರ ಒದರಾಟ ಕಿರುಚಾಟ ಚಿಕ್ಕ ರಾಮುಗೆ ಬೇರೊಂದು ರಾಜ್ಯದಲ್ಲಿ ತಾನಿದಂತೆ ಭಾಸವಾಗುತ್ತದೆ. ಇಲ್ಲಿ ಏನು ನಡೆಯುತ್ತಿದೆ? ಯಾಕೆ ನಡೆಯುತ್ತಿದೆ? ಅಮ್ಮ ಯಾಕೆ ಕಿರಿಚಿಕೊಂಡು ತಲೆ ಚಚ್ಚಿಕೊಳ್ಳುತ್ತಿದ್ದಾಳೆ? ಅಜ್ಜ ಯಾಕೆ ಗದರಿಸುತ್ತಿದ್ದಾರೆ? ನಿತ್ರಾಣವಾಗಿ ಮಲಗಿದ್ದ ಅಜ್ಜಿ ಏನೋ ಪ್ರಶ್ನೆ ಮಾಡುತ್ತಿರುವುದು, ಯಾವುದರ ಅರಿವು ಇರದ ಪುಟ್ಟರಾಮನಿಗೆ ಇವೆಲ್ಲ ಸಂಗತಿಗಳು ಅಯೋಮಯ ಎನಿಸುವುದು. ಗಂಡ ಎನಿಸಿಕೊಂಡವ ನಾಲ್ಕು ಸರಿ ಮನೆಬಾಗಿಲಿಗೆ ಬಂದವನನ್ನು ಹೀಯಾಳಿಸಿ ಹೊರಗೆ ಅಟ್ಟಿದವರು ಇದೇ ಅಮ್ಮ ಮಗಳು ಎಂಬ ಮಾತನ್ನು ಮಂಜಯ್ಯ ಹೇಳಿದ್ದನ್ನು ನೆನಪಿಸಿಕೊಂಡು ಅರುಹಿದರು ಸದಾನಂದ ಭಟ್ಟರು.
ಈ ಕಥೆಯ ವಿಚಾರವಿರಬಹುದು ಅಥವಾ ಬೇರೆ ಯಾವುದೇ ವಸ್ತು ವಿಚಾರ ಆ ಕ್ಷಣಕ್ಕೆ ಸೂಕ್ತ ಎನಿಸುವುದು ಸರಿಯಷ್ಟೇ ಆದರೆ ವರ್ತಮಾನಕ್ಕೆ ಸರಿದೂಗಬಹುದಾ ಎಂದು ವಿವೇಚಿಸ ಬೇಕಾದ ಅನಿವಾರ್ಯತೆ ಪ್ರತಿಯೊಬ್ಬ ಮನುಷ್ಯನಲ್ಲೂ ಇರಬೇಕಾದ್ದೆ. ಆದರೆ ಈ ಕಥೆಯಲ್ಲಿ ತಾಯಿಯ ಮಾತಿಗೆ ಮಗಳು ಕುಣಿದದ್ದು, ಮಗಳ ಮಾತಿಗೆ ತಾಯಿ ಕುಮ್ಮಕ್ಕು ನೀಡಿರುವುದರ ಫಲಿತವೇ ಇಂದು ಸಂತೆಗೆ ಹೋದ ರಾಮನನ್ನು ಅನಿವಾರ್ಯವಾಗಿ ಆತನ ಅಪ್ಪ ಕದ್ದು ಒಯ್ಯುವಂತಹ ಸ್ಥಿತಿ ಏರ್ಪಟ್ಟಿರುವುದು ಗೋಚರಿಸುತ್ತದೆ. ಈ ಕಥೆಯಲ್ಲಿ ಇಬ್ಬರ ವಿಷಮ ದಾಂಪತ್ಯದ ಅಂಶಗಳು ಎದ್ದು ಕಾಣುತ್ತದೆ. ಇಬ್ಬರ ನಡುವಿನ ಮನಸ್ತಾಪ ಜಗಳದಿಂದಾಗಿ ಮಗುವಿನ ಬದುಕು ಮುರಾಬಟ್ಟೆಯಾಗಿರುವುದರ ಹಿನ್ನೆಲೆಯಲ್ಲಿ ಈ ಕಥೆಯನ್ನು ಅವಲೋಕಿಸಬಹುದು.” ಇವರ ಬರವಣಿಗೆಯಲ್ಲಿ ಸಾಮಾನ್ಯವಾಗಿ ಅಚ್ಚುಕಟ್ಟು ಇದೆ ದಾಂಪತ್ಯದ ವಿರಸ ರಂಪಾಟ ವಸ್ತುವನ್ನು ಒಳಗೊಂಡಿದೆ. ವಿಶಿಷ್ಟ ತಂತ್ರವೇನೂ ಇರದೆ ನೇರ ನಿರೂಪಣೆ ಹಾಗೂ ವಸ್ತುವಿನ ದೃಷ್ಟಿಯಿಂದ ಜೀವನ ಉತ್ಸಾಹ ತುಂಬಿದ ಹುಡುಗನ ದೃಷ್ಟಿಗೆ ಪ್ರಾಧ್ಯಾನತೆ ನೀಡಿ ಈ ಕಥೆಯು ಹಿರಿಯರ ಬದುಕಿನ ರಂಪಾಟದ ಮೂಲಕ ವಿಡಂಬಿಸುತ್ತದೆ”.( ಕನ್ನಡ ಸಣ್ಣ ಕಥೆಗಳು ಜಿ.ಹೆಚ್ ನಾಯಕ್ ಪ್ರಸ್ತಾವನೆಯಿಂದ) ಈ ಕಥೆಯಲ್ಲಿ ದಾಂಪತ್ಯ ಬಿರುಕು ಇದೆ ಎಂಬುದನ್ನು ಹೇಳಲಾಗಿದೆ. ಆದರೆ ಆ ದಾಂಪತ್ಯದ ಬಿರುಕಿಗೆ ಕಾರಣಗಳು, ಸನ್ನಿವೇಶಗಳು, ಪರಿಸ್ಥಿತಿಗಳ, ಕುರಿತು ಎಲ್ಲಿಯೂ ಉಲ್ಲೇಖ ಇರುವುದಿಲ್ಲ. ಸಾಮಾನ್ಯವಾಗಿ ಓದುಗರೆ ಅರ್ಥೈಸಬೇಕಾದ ವಿಚಾರ ಪ್ರೇಮವೋ ಕಾಮವೋ ಹೀಗೆ ಹಲವು ಮಗ್ಗುಲಿನಿಂದ ವಿಶ್ಲೇಷಣೆ ಮಾಡಬೇಕಿದೆ.
ಸದಾಶಿವ ಅವರು "ನವ್ಯರಂತೆ ಪ್ರಕಾರವನ್ನು ಬಳಸಿದರೂ ಭಾಷೆಯನ್ನು ಬಳಸುವಲ್ಲಿ ನವ್ಯರ ಕಲೆ ಅಥವಾ ಕಲಾಕೌಶಲ್ಯ ಇವರಲ್ಲಿ ಕಾಣುವುದಿಲ್ಲ.ಇವರ ಕಥೆಗಳಲ್ಲಿ ಸಾಧಾರಣವಾಗಿ ಗಂಡು ಹೆಣ್ಣುಗಳ ಲೈಂಗಿಕ ಸಂಬಂಧದಲ್ಲಿ ಸಿಕ್ಕಿರುವ ಚಿತ್ರ ಇರುತ್ತದೆ". (ಶತಮಾನದ ಕನ್ನಡ ಸಾಹಿತ್ಯ-1- ಪು. ಸಂ 346) ಈ ಅಂಶದಿಂದ ಅವಲೋಕಿಸಿದಾಗ ಪಾರ್ವತಿಗೆ ಗಂಡನ ಮನೆಯಲ್ಲಿ ಉಂಟಾಗಿರಬಹುದಾದ ತೊಂದರೆ ಕಿರುಕುಳ ಇತ್ಯಾದಿಗಳನ್ನು ಸೂಕ್ಷ್ಮವಾದ ಒಳನೋಟ ಸಹೃದಯರು ಗ್ರಹಿಸ ಬೇಕೇ ವಿನಹ ಲೇಖಕ ಪಾರದರ್ಶಕವಾಗಿ ಸಮಸ್ಯೆಯನ್ನು ಬಿಚ್ಚಿಡುವುದಿಲ್ಲ. ಆದರೆ ಇಲ್ಲಿ ವಿಷಮ ದಾಂಪತ್ಯದ ಪರಿಣಾಮ ನಮಗೆ ಗೋಚರಿಸುವಷ್ಟು ಪುಟ್ಟ ರಾಮನ ಕಣ್ಣಿನಲ್ಲಿ ನೋಡುವುದು ವಿಭಿನ್ನ. “ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು” ಎನ್ನುವ ಸತ್ಯ ಸಾರ್ವಕಾಲಿಕವಾಗಿಯೂ ಸತ್ಯಾಂಶವನ್ನು ತೆರೆದಿಡುತ್ತದೆ. “ದಾಂಪತ್ಯದ ವಿಷಮತೆಯ ಪರಿಣಾಮವನ್ನು ಮಕ್ಕಳ ನಿಟ್ಟಿನಲ್ಲಿ ನೋಡಿರುವಲ್ಲಿ ಈ ಕಥೆಯ ವೈಶಿಷ್ಟತೆ ಇದೆ” (ಇಪ್ಪತ್ತನೇಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು ಪು. ಸಂ.117). ರಾಮನಿಗೆ ಸರಿ ತಪ್ಪುಗಳ ಗೊಡವೆಗಳು ಬೇಕಿಲ್ಲ. ಮತ್ತು ಅವುಗಳ ಚಿಂತನೆಗಳ ಅರ್ಥ ಅವನಿಗಾಗುವುದಿಲ್ಲ. ಆ ಕ್ಷಣ ಮನೆ ರಣರಂಗ ಆಗಿರುವುದರ ಸನ್ನಿವೇಶ ಮಾತ್ರ ಆತನಿಗೆ ಭಯಂಕರವಾಗಿ ಕಾಣಿಸಿತು. “ಅಮ್ಮ ಥೇಟು ಕಥೆಯಲ್ಲಿ ಬರುವ ರಾಕ್ಷಸಿಯಂತೆ ಕಂಡಳು”,,, ಈ ಕಥೆಯಲ್ಲಿ ಬಹಳ ಮುಖ್ಯವಾದ ವಸ್ತು ವಿಷಯವೆಂದರೆ ಹಿಂದೆ ಎಂದೊ ಅಪ್ಪುವಿನಿಂದ ಕದ್ದು ತಂದಿದ್ದ ಆ ಪೀಪಿ ಆ ಕ್ಷಣಕ್ಕೆ ಇವರೆಲ್ಲರ ಅಬ್ಬರದ ನಡುವೆ ಜೇಬಿಗೆ ಕೈ ಹೋದಾಗ ಪೀಪಿ ತಗುಲಿದ ಆ ಸಂದರ್ಭ,, ಆ ಸಂದರ್ಭವನ್ನು ನೆನೆದು “ಕದ್ದರೆ ರಾಕ್ಷಸರು ಬಂದು,,,,,,” ತಾಯಿ ಹೇಳಿದ ನೆನಪಿನಿಂದಾಗಿ ಆ ಪೀಪಿಯನ್ನು ಹಿಂದಿರುಗಿಸಲು ಅಪ್ಪುವಿನ ಮನೆ ಕಡೆಗೆ ರಾಮ ಓಡುವುದನ್ನು ಕಥೆಗಾರರು ಇದೊಂದು ರೂಪಕವಾಗಿ ನಮಗೆ ದೃಷ್ಟಾಂತದ ಮೂಲಕ ಹೊಸದನ್ನು ಹೇಳಲು ಹೊರಟಂತಿದೆ. ಹೀಗೆ ಹೇಳುವುದು ಕೂಡ ಕಥೆಯ ಬೆಳವಣಿಗೆಗೆ ಪೂರಕವಾಗಿದೆ.ಆ ಮನೆಗೆ ಸೇರಿದವರು ಇವರ ಮನೆಯಲ್ಲಿ ಇರುವುದು ಎಂದಿಗೂ ಶ್ರೇಯಸ್ಕರವಲ್ಲ. ವಾಪಾಸು ಕಳಿಸುವುದೇ ಸೂಕ್ತ ಎನ್ನುವ ಸೂಕ್ಷ್ಮತೆಯನ್ನು ಕಥೆಗಾರ ರಾಮುವಿನಲ್ಲಿದ್ದ ಪೀಪಿಯ ಮೂಲಕ ಹೇಳಲು ಹೊರಟಂತೆ ಕಾಣುತ್ತದೆ.
ಸಣ್ಣ ಮಗುವಿನ ಮನಸ್ಸಿನಲ್ಲಿ ಸಂಬಂಧಗಳ ಮೌಲ್ವೀಕರಣವಾಗುವುದು ಸಹ ಆ ಸನ್ನಿವೇಶಕ್ಕೆ ತಕ್ಕಂತೆ ಸೂಕ್ತವೆನಿಸಿದಂತೆ ಭಾಸವಾಗುವುದು. ಯಾರಲ್ಲಿ ತಾನು ನ್ಯಾಯ ಹುಡುಕುವುದು? ಏನನ್ನು ಕಂಡುಕೊಳ್ಳುವುದು? ಯಾವುದು ಸರಿ? ಯಾವುದು ತಪ್ಪು? ಇಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವೇ ಇರದ ರಾಮು ಸೂಕ್ಷ್ಮ ಮನಸ್ಸಿಗೆ ಆ ಕ್ಷಣಕ್ಕೆ ಹೊಳೆದ ಅಪ್ಪುವಿನ ಪೀಪಿಯನ್ನು ಕೊಡುವಲ್ಲಿ ಒಂದು ಸಾರ್ಥಕತೆಯನ್ನು ಕಥೆ ದ್ವನಿಸುತ್ತದೆ.
ಈ ಕಥೆಯ ಸಾಧಾರಣ ವಸ್ತು ವಿಷಯವನ್ನು ಹೊಂದಿದ್ದರು ಆ ಚಿಕ್ಕ ಕಂದ ರಾಮುವಿನ ಮುಖಾಂತರ ಕಥೆಗಾರ ಆಗಾದವಾದ ವಿಚಾರವನ್ನು ಹೇಳಿ ಕಥೆಗೆ ಒಂದು ವಿಶಿಷ್ಟ ಚೌಕಟ್ಟನ್ನು ನೀಡಿರುತ್ತಾರೆ. ಈ ಕಥೆ ಸಮಕಾಲಿನ ಸಂದರ್ಭಕ್ಕೂ ಸಹ ಮುಖಾಮುಖಿಯಾಗುತ್ತದೆ. ಕಾಲ ದೇಶ ಭಾಷೆ ಬೇರೆಯಾದರು ಪರಿಸ್ಥಿತಿ ಸನ್ನಿವೇಶಗಳಲ್ಲಿ ಬದಲಾವಣೆ ಇಲ್ಲ ಸಂಬಂಧವನ್ನು ಕೇವಲ ವಿಚ್ಛೇದನದ ಮೂಲಕ ತುಂಡರಿಸಿಕೊಳ್ಳುವ ದಂಪತಿಗಳು, ಮಕ್ಕಳ ಜಾಗದಲ್ಲಿ ನಿಂತು ಬಾಂಧವ್ಯವನ್ನು ಸಮಾಜವನ್ನು,ಪರಿಸ್ಥಿತಿಯನ್ನು ವೀಕ್ಷಿಸುವುದಿಲ್ಲ. ಈ ಎಲ್ಲಾ ಕಾರಣದಿಂದಾಗಿ ನವ್ಯ ಸಾಹಿತ್ಯ ಸಂದರ್ಭಕ್ಕೂ, ಸಮಕಾಲೀನ ಸಂದರ್ಭಕ್ಕೂ ತನ್ನ ವಿಶಿಷ್ಟವಾದ ಗಟ್ಟಿತನವನ್ನು ಉಳಿಸಿಕೊಂಡು ಬಂದಿದೆ ಎಂಬುದನ್ನು ಈ ಮೂಲಕ ವ್ಯಕ್ತಪಡಿಸಬಹುದು.
"ನಮ್ಮಲ್ಲಿ ಡಿ. ಆರ್. ನಾಗರಾಜರ ಬರವಣಿಗೆಗಳನ್ನು ದಾರ್ಶನಿಕ - ತತ್ವಜ್ಞಾನಿಕ ಮಾರ್ಗದಲ್ಲಿಯೂ, ಸಬಾಲ್ಟರ್ನ್ ಮಾರ್ಗದ...
"ಈ ಕಥೆಯನ್ನು ಪರಾಮರ್ಶಿಸುವುದಾದಲ್ಲಿ ವೀಣಾ ಶಾಂತೇಶ್ವರ ಅವರ ಕಥಾನಾಯಕಿಯರಾರು ದುರ್ಬಲರಲ್ಲ. ಬದಲಾಗಿ ವಿದ್ಯಾವಂತರು...
"ಬಾರತದ ಜನಗಣತಿ ಮಾಹಿತಿ ಪ್ರಕಾರ ಅನುಸೂಚಿತ ಬಾಶೆಗಳನ್ನು ಆಡುವವರ ಸಂಕೆ ಸುಮಾರು 1,17,11,03,853 ಮಂದಿ ಅಂದರೆ ಬಾ...
©2025 Book Brahma Private Limited.