ರಾಮಾಯಣ ಸಂಕಥನ 2

Date: 21-08-2023

Location: ಬೆಂಗಳೂರು


''ಜನಪದ ಪರಂಪರೆಗಳಲ್ಲಿ ದೇಶ, ಭಾಷೆ, ಜನಾಂಗ, ಪಂಥಗಳಿಗೆ ಅನುಗುಣವಾಗಿ ಹಲವು ಭಿನ್ನ ರಾಮಾಯಣಗಳಿವೆ. ಜನಪದದಲ್ಲಿ ತಂಬೂರಿ ಸಂಪ್ರದಾಯ, ಕಂಸಾಳೆ ಸಂಪ್ರದಾಯ, ಚೌಡಿಕೆ ಸಂಪ್ರದಾಯ, ಯಕ್ಷಗಾನ ಸಂಪ್ರದಾಯ ಹೀಗೆ ಹಲವು ಸಂಪ್ರದಾಯಗಳೆ ರೂಪಗೊಂಡಿವೆ,'' ಎನ್ನುತ್ತಾರೆ ಅಂಕಣಕಾರ ಬೇಗೂರು ರಾಮಲಿಂಗಪ್ಪ. ಅವರು ತಮ್ಮ ‘ನೀರು ನೆರಳು' ಅಂಕಣದಲ್ಲಿ ‘ರಾಮಾಯಣ ಸಂಕಥನ 2' ವಿಚಾರದ ಕುರಿತು ಬರೆದಿದ್ದಾರೆ.

ರಾಮಾಯಣ ಸಂಕಥನ 2

ನಮ್ಮಲ್ಲಿ ಬೌದ್ಧ ಪರಂಪರೆ, ಜೈನರಾಮಾಯಣ ಪರಂಪರೆ, ವೈಷ್ಣವ-ವೈದಿಕ ಪರಂಪರೆ, ಜನಪದ ಪರಂಪರೆ ಹೀಗೆ ಹಲವು ರಾಮಾಯಣ ಪರಂಪರೆಗಳು ಇವೆ. ವೈಷ್ಣವ-ವೈದಿಕ ಪರಂಪರೆಯಲ್ಲಿ ಅದ್ಭುತ ರಾಮಾಯಣ, ಅಧ್ಯಾತ್ಮ ರಾಮಾಯಣ, ಶೇಷ ರಾಮಾಯಣ, ಉತ್ತರ ರಾಮಾಯಣ, ವಾಶಿಷ್ಠ ರಾಮಾಯಣ ಹೀಗೆ ಹಲವು ಪರಂಪರೆಗಳಿವೆ. ಕಿರುಕಾವ್ಯ, ಖಂಡಕಾವ್ಯ, ಮಹಾಕಾವ್ಯ, ನಾಟಕ, ನೃತ್ಯರೂಪಕ, ಯಕ್ಷಗಾನ, ಬಯಲಾಟ, ಕಥನ, ಹರಿಕಥನ, ಕೀರ್ತನ, ಭಜನಾ ಹೀಗೆ ಹಲವು ಬಗೆಯ ಸಾಹಿತ್ಯ ಪ್ರಕಾರಗಳಲ್ಲಿ ಇವು ಸಂಭವಿಸಿವೆ. ಹಾಗೆಯೆ ಜನಪದ ಪರಂಪರೆಗಳಲ್ಲಿ ದೇಶ, ಭಾಷೆ, ಜನಾಂಗ, ಪಂಥಗಳಿಗೆ ಅನುಗುಣವಾಗಿ ಹಲವು ಭಿನ್ನ ರಾಮಾಯಣಗಳಿವೆ. ಜನಪದದಲ್ಲಿ ತಂಬೂರಿ ಸಂಪ್ರದಾಯ, ಕಂಸಾಳೆ ಸಂಪ್ರದಾಯ, ಚೌಡಿಕೆ ಸಂಪ್ರದಾಯ, ಯಕ್ಷಗಾನ ಸಂಪ್ರದಾಯ ಹೀಗೆ ಹಲವು ಸಂಪ್ರದಾಯಗಳೆ ರೂಪಗೊಂಡಿವೆ.

ಜೈನ ರಾಮಾಯಣ ಪಂರಂಪರೆಗಳಲ್ಲಿ ವಿಮಲಸೂರಿ ಪರಂಪರೆ, ಸಂಘದಾಸ -ಹರಿಷೇಣ ಪರಂಪರೆ ಮತ್ತು ಗುಣಭದ್ರ ಪರಂಪರೆ ಎಂದು ಮೂರು ಪರಂಪರೆಗಳಿವೆ. ಈ ಮೂರರಲ್ಲು ಕಥಾವಸ್ತುವಿನ ಮತ್ತು ಅದರ ನಿರ್ವಹಣೆಯ ನೆಲೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಚಾವುಂಡರಾಯ ಪುರಾಣದಲ್ಲಿ ಬರುವ ರಾಮಕಥಾ (ಗುಣಭದ್ರನ ಉತ್ತರಪುರಾಣದ ಸಂಕ್ಷಿಪ್ತ ರೂಪವಿದು), ಬಂಧುವರ್ಮನ ಜೀವಸಂಬೋಧನಾ, ನಾಗರಾಜನ ಪುಣ್ಯಾಸ್ರವ, ದೇವಪ್ಪಕವಿಯ ರಾಮವಿಜಯ ಕಾವ್ಯ ಇವೆಲ್ಲವೂ ಗುಣಭದ್ರ ಪರಂಪರೆಗೆ ಸೇರಿದರೆ ನಾಗಚಂದ್ರ, ಕುಮುದೇಂದು, ಚಂದ್ರಸಾಗರ ವರ್ಣಿ, ದೇವಚಂದ್ರರ ರಾಮಾಯಣಗಳು ವಿಮಲಸೂರಿ ಪರಂಪರೆಗೆ ಸೇರುತ್ತವೆ. ಸಂಘದಾಸ ಪರಂಪರೆ ಕನ್ನಡದಲ್ಲಿ ಬೆಳೆದಂತಿಲ್ಲ. ರಾಮನು ಈ ಯಾವ ಕಥನಗಳಲ್ಲು ದೇವರಲ್ಲ; ಸಾಮಾನ್ಯ ಮನುಷ್ಯ. 10ನೆ ತೀರ್ಥಂಕರನಾದ ಮುನಿಸುವ್ರತನ ಕಾಲದ ಬಲದೇವ ಮಾತ್ರ. ರಾಮನೂ ರಾವಣನೂ ಇಬ್ಬರೂ ಶಲಾಕಾಪುರುಷರು. ಬಾಲಕಾಂಡದಿಂದ ಯುದ್ಧಕಾಂಡದವರೆಗೆ ಮಾತ್ರವೆ ಮೊದಲು ರಾಮಾಯಣ ಇದ್ದದ್ದು; ಇಲ್ಲು ಸೀತಾರಾಮರಿಗೆ ದೈವತ್ವವಿಲ್ಲ. ಅವರು ಸಾಮಾನ್ಯ ಮನುಷ್ಯರಷ್ಟೆ. 10ನೆ ಶತಮಾನದವರೆಗು ರಾಮನಿಗಾಗಿ ಎಲ್ಲು ದೇಗುಲಗಳೆ ನಿರ್ಮಾಣವಾಗಿಲ್ಲ ಎಂದು ಡಾ. ಬಿ ರಾಜೇಂದ್ರಪ್ರಸಾದರನ್ನು ಉಲ್ಲೇಖಿಸಿ ಎಚ್.ಡಿ. ಸಂಕಾಲಿಯಾ ಹೇಳುತ್ತಾರೆ.

ಶೈವ-ವೈಷ್ಣವ ಸಂಘರ್ಷದ ಕುರುಹಾಗಿ ರಾಮಾಯಣವನ್ನು ನೋಡುವಂತೆಯೆ ಜೈನ-ವೈದಿಕ ಸಂಘರ್ಷದ ಕುರುಹಾಗಿಯೂ ನೋಡುವುದಕ್ಕೆ ಸಾಧ್ಯವಿದೆ. ಇದಕ್ಕೆ ಸಾಕಷ್ಟು ಪುರಾವೆಗಳು ಜೈನ ರಾಮಾಯಣಗಳಲ್ಲಿನ ಕಥಾವ್ಯತ್ಯಾಸದಲ್ಲಿ ಕಾಣುತ್ತವೆ. ಸೀತೆಯನ್ನು ರಾಮ ಶಂಕಿಸಿ ಕಾಡಿಗೆ ಅಟ್ಟಿದ ಪ್ರಸಂಗ, ಹನುಮನು ಸಾಗರೋಲ್ಲಂಘನ ಮಾಡಿದ ಪ್ರಸಂಗಗಳ ಬಗ್ಗೆ ಜಾಕೋಬಿ ಎಂಬ ಜರ್ಮನ್‌ ವಿದ್ವಾಂಸ ಚರ್ಚೆ ಮಾಡುತ್ತ ಅವು ವಾಲ್ಮೀಕಿ ರಾಮಾಯಣಕ್ಕೆ ಆನಂತರ ಸೇರ್ಪಡೆಯಾದ ಪ್ರಸಂಗಗಳು ಎಂದೂ ಹೇಳಿದ್ದಾರೆ (1893). ಈ ಬಗ್ಗೆ ಪಾಂಕ್ತ (ರಚಿತ) ಮತ್ತು ಪ್ರಕ್ಷಿಪ್ತ (ಆನಂತರದ ಸೇರ್ಪಡೆ) ಕುರಿತ ಚರ್ಚೆ ನಮ್ಮಲ್ಲಿ ಸಾಕಷ್ಟು ನಡೆದಿದೆ.* ಇನ್ನು ಬುದ್ಧನ ಜಾತಕ ಕಥೆಗಳಲ್ಲಿ ತ್ರಿಪಿಟಕಗಳಲ್ಲಿ ರಾಮಾಯಣದ ಕಥನಗಳಿವೆ. ಆದಾಗ್ಯೂ ಬೌದ್ಧ ಸಾಹಿತ್ಯವನ್ನು ನಮ್ಮವರು ಸಾಕಷ್ಟು ಸುಟ್ಟುಹಾಕಿ, ಗಡೀಪಾರು ಮಾಡಿರುವುದರಿಂದ ಬೌದ್ಧ ರಾಮಾಯಣ ಪರಂಪರೆಗಳು ಬೆಳೆಯಲು ಇಲ್ಲಿ ಸಾಧ್ಯವಾಗಿಲ್ಲ. ಅಂದರೆ ಹಲವಾರು ರಾಮಾಯಣಗಳನ್ನು ನಾಶ ಮಾಡಲಾಗಿದೆ ಮತ್ತು ಅದೆಷ್ಟೋ ಮತ್ತೆ ಮತ್ತೆ ಬರೆಯಲ್ಪಟ್ಟಿವೆ ಕೂಡ. ಮೂಲ ಎಂಬುದು ಇಲ್ಲಿ ಇಲ್ಲ: ಪಠ್ಯ ಪ್ರತಿಪಠ್ಯ ಎಂಬುವೂ ಇಲ್ಲ. ಇರುವುವೆಲ್ಲವೂ ಕಾಲದೇಶಗಳಿಂದ ಹರಿದು ಬಂದಿರುವ ನದಿಪಾತ್ರಗಳು.

*(ಈಗ ರಾಮಾಯಣದಲ್ಲಿ 24000 ಶ್ಲೋಕಗಳಿದ್ದರೆ, ಮೂಲದಲ್ಲಿ ಅದರ ಅರ್ಧದಷ್ಟೂ ಇರಲಿಲ್ಲ ಎಂದು ತಮ್ಮ ವಿಶ್ವವಿಖ್ಯಾತ ಸಂಶೋಧನಾ ಗ್ರಂಥ ‘ರಾಮಕಥಾ’ದಲ್ಲಿ ಕಾಮುಲ್ ಬುಲ್ಕೆ ಹೇಳುತ್ತಾರೆ:

“ಮೂರನೆಯ ಶತಮಾನದ ಉತ್ತರಾರ್ಧದಲ್ಲಿ ರಚನೆಯಾದ ಅಭಿಧರ್ಮ ಮಹಾವಿಭಾಷಾದಲ್ಲಿ ರಾಮಾಯಣದ ಉಲ್ಲೇಖವಿದೆ. ಇದರ ಚೀನೀ ಅನುವಾದ ಸುರಕ್ಷಿತವಾಗಿದೆ. ಅದರಲ್ಲಿ ರಾಮಾಯಣವೆಂಬ 12000 ಶ್ಲೋಕಗಳ ಒಂದು ಗ್ರಂಥವಿದೆ. ಅದರಲ್ಲಿ ಇರುವ ಮುಖ್ಯ ವಿಷಯ ಎರಡೇ 1. ರಾವಣನಿಂದ ಸೀತೆಯ ಅಪಹರಣ ಮತ್ತು 2. ರಾಮನಿಂದ ಸೀತೆಯ ಪುನರ್‍ಪ್ರಾಪ್ತಿ ಹಾಗೂ ಅಯೋಧ್ಯೆಗೆ ಪ್ರತ್ಯಾಗಮನ. ಇದರರ್ಥ ಇಂದಿರುವ ರಾಮಾಯಣದ ಅರ್ಧಾಂಶವಷ್ಟೇ ಹಿಂದಿತ್ತು”. ಹೆಚ್ಚಿನ ವಿವರಗಳಿಗೆ ನೋಡಿ: https://www.facebook.com/938642066242512/photos/a.940228479417204/1033067753466609/?type=3 )

ಜನನ ಸಂಕಥನಗಳ ಮೌಲ್ಯರಾಜಕಾರಣ

ಸೀತೆಯ ಜನನದ ಕುರಿತು; ರಾಮ ಮತ್ತು ಅವನ ಸೋದರರು ಹಾಗೂ ರಾವಣ ಮತ್ತು ಅವನ ಸೋದರರ ಜನನಕ್ಕೆ ಸಂಬಂಧಿಸಿದಂತೆ ಜೈನರಲ್ಲಿ ಎಲ್ಲೂ ಅವಾಸ್ತವಿಕವಾದ ಅಥವಾ ಕಾವ್ಯಸಂಕೇತ ನೆಲೆಯ ಬಣ್ಣನೆಗಳು ಇಲ್ಲ. ನಿಗೂಢತೆಯೂ ಇಲ್ಲ. ಎಲ್ಲರೂ ಮೂರೂ ಜೈನ ಪರಂಪರೆಗಳಲ್ಲಿ ನಮ್ಮ ನಿಮ್ಮ ಹಾಗೆ ಅವರವರ ತಂದೆ ತಾಯಿಗಳಿಗೆ ಸಹಜವಾಗಿ ಜನಿಸುತ್ತಾರೆ. ಅಂದರೆ ಎಲ್ಲರೂ ಯೋನಿಜರು. ವಿಮಲಸೂರಿ ಪರಂಪರೆಯ ಪ್ರಕಾರ ಸೀತೆಯು ಜನಕ ಮತ್ತು ವಿದೇಹಿಗೆ ಹುಟ್ಟಿದ ಮಗಳು. ಸಾಕುಮಗಳಲ್ಲ. ರಾಮ, ಲಕ್ಷ್ಮಣ, ಭರತ, ಶತೃಜ್ಞರೆಲ್ಲರೂ ಸಹಜವಾಗಿಯೆ ಅವರ ತಂದೆ ತಾಯಿಗೆ ಜನಿಸುತ್ತಾರೆ. ಆದರೆ ಗೊಂಡರ ರಾಮಾಯಣದ ಪ್ರಕಾರ ಸೀತೆ ರೈತನಾದ ಜನಕನಿಗೆ ನೆಲ ಉಳುವಾಗ ಸಿಗುತ್ತಾಳೆ. ಅಲ್ಲಿ ಆಕೆ ಅವಳ ತಂದೆ ತಾಯಿ ಯಾರೆಂದು ಗೊತ್ತಿಲ್ಲದ ಅನಾಥೆ. ವೈದಿಕ-ವೈಷ್ಣವ ಧಾರೆಯಲ್ಲಿ ಹಾಗಲ್ಲ; ಅಲ್ಲಿ ಸೀತೆ ಅಯೋನಿಜೆ. ಅವಳು ಹೊಲ ಉಳುವಾಗ ಜನಕನಿಗೆ ಸಿಕ್ಕ ಸಾಕುಮಗಳು. ನೆಲದಲ್ಲಿ ನೇಗಿಲ ಗೆರೆಯಲ್ಲಿ ಸಿಕ್ಕದ್ದರಿಂದ ಆಕೆಯನ್ನು ಇಲ್ಲಿ ಸೀತೆ ಎಂದು ಕರೆಯಲಾಗುತ್ತದೆ.

ಜನಪದ ರಾಮಾಯಣದ ಪ್ರಕಾರ ಆಕೆ ರಾವಣನ ಮೂಗಿನಿಂದ ಅವನು ಸೀತಾಗ ಜನಿಸುತ್ತಾಳೆ. ಅಂದರೆ ಅವಳು ಮಂಡೋದರಿಗೆ ಜನಿಸಿದವಳಲ್ಲ. ರಾವಣನಿಗೆ ಜನಿಸಿದವಳು. ಆನಂತರ ಅವರಿಂದ ತ್ಯಜಿಸಲ್ಪಟ್ಟು ಬ್ರಾಹ್ಮಣರಿಗೆ ದಾನವಾಗಿ ಕೊಡಲ್ಪಟ್ಟು; ಆನಂತರ ಗಂಗೆಯಲ್ಲಿ ತೇಲಿಬಿಡಲ್ಪಡುತ್ತಾಳೆ. ಅಗಸನೊಬ್ಬ ಬಟ್ಟೆ ಒಗೆಯುವಾಗ ಆ ಮಗುವನ್ನು ಕಂಡು ದೊರೆ ಜನಕನಿಗೆ ತೆಗೆದುಕೊಂಡು ಹೋಗಿ ಕೊಡುತ್ತಾನೆ. ಈ ಕಥನ ಸ್ವಲ್ಪ ಕಾವ್ಯಸಾಂಕೇತಿಕತೆಯಿಂದ ಬಿಡುಗಡೆ ಪಡೆದು ವಾಸ್ತವಕ್ಕೆ ಹತ್ತಿರವಾಗಿದೆ.

ಗುಣಭದ್ರ ಪರಂಪರೆಯ ಪ್ರಕಾರ ಸೀತೆ ಮಂಡೋದರಿಯ ಮಗಳು. ಆದರೆ ಅವಳು ರಾವಣನಿಗೆ ಹುಟ್ಟಿದವಳಲ್ಲ. ಋಷಿಗಳ ರಕ್ತವನ್ನು ಮಂಡೋದರಿಯು ಕುಡಿದಿದ್ದರಿಂದ ಆಕೆಗೆ ಮಗಳಾಗಿ ಜನಿಸಿದವಳು. ರಾವಣನೆ ಕಿರುಕುಳ ಕೊಟ್ಟು ಋಷಿಗಳ ರಕ್ತವನ್ನು ತಂದು ಕುಂಬದಲ್ಲಿ ಸಂಗ್ರಹಿಸಿ ಮನೆಯಲ್ಲಿ ಇಟ್ಟು ತಾನು ಬೇರೆ ಹೆಂಗಸರ ಸಹವಾಸ ಮಾಡಲು ಹೋಗಿದ್ದಾಗ ಅವನ ವರ್ತನೆಗೆ ಬೇಸತ್ತು ಮಂಡೋದರಿ ಆ ರಕ್ತವನ್ನು ವಿಷವೆಂದು ಭ್ರಮಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಕುಡಿದು ಬಸಿರಾಗಿ ಸೀತೆಯನ್ನು ಹೆರುತ್ತಾಳೆ. ಜನಾಪವಾದ ಭಯದಿಂದ ಮಗುವನ್ನು ಕಬ್ಬಿಣದ ಪೆಟ್ಟಿಗೆಗೆ ಹಾಕಿ ನೀರಿನ ದಡದಲ್ಲಿ ಇಡಿಸುತ್ತಾಳೆ.

ಸ್ನಾನಕ್ಕೆಂದು ಅಲ್ಲಿಗೆ ಜನಕ ಬಂದಾಗ ಅವನಿಗೆ ಈಕೆ ಸಿಕ್ಕು ಅವನ ಸಾಕುಮಗಳಾಗುತ್ತಾಳೆ. ವಿಮಲಸೂರಿ ಪರಂಪರೆಯ ಪ್ರಕಾರ (ದೇವಪ್ಪಕವಿಯ ರಾಮವಿಜಯ ಕಾವ್ಯದಲ್ಲಿ ಈ ಕಥನವಿದೆ) ಸೀತೆಯು ರಾವಣ ಮತ್ತು ಮಂಡೋದರಿಗೆ ನೇರವಾಗಿ ಜನಿಸಿದ ಮಗಳು. ಆಕೆ ಜನಿಸಿದಾಗ ಬೆಂಕಿಮಳೆ, ಬಿರುಗಾಳಿ, ಉತ್ಪಾತಗಳು ಉಂಟಾದ್ದರಿಂದ ‘ಪುರೋಹಿತರ ಸಲಹೆ’ಯಂತೆ ಮಗುವನ್ನು ಒಂದು ಪೆಟ್ಟಿಗೆಯಲ್ಲಿ ಇಟ್ಟು ಸೇವಕನ ಮೂಲಕ ದೂರ ಬಿಟ್ಟು ಬರಲು ಸೂಚಿಸಿ ಕೊಟ್ಟು ಕಳಿಸಲಾಗುತ್ತದೆ. ಆ ಸೇವಕನು ಮಿಥಿಲೆಯಲ್ಲಿ ಹೊಲದಲ್ಲಿ ಅದನ್ನು ಮುಚ್ಚಿಟ್ಟು ಬರುತ್ತಾನೆ. ಅದು ಅಲ್ಲಿನ ರೈತನೊಬ್ಬನಿಗೆ ಸಿಗುತ್ತದೆ. ಪೆಟ್ಟಿಗೆಯಲ್ಲಿ ಮಗುವಿನ ವಂಶವಿವರವನ್ನು ಬರೆದಿಟ್ಟ ಚೀಟಿಯೂ ಇರುತ್ತದೆ. ಅದನ್ನು ಆ ರೈತ ಜನಕನಿಗೆ ತಲುಪಿಸುತ್ತಾನೆ. ಅಂದರೆ ಇಲ್ಲಿ ಸೀತೆ ಅಯೋನಿಜೆ ಅಲ್ಲ. ನೇರವಾಗಿ ರಾವಣ ಮಂಡೋದರಿಯರ ಮಗಳು. ಶಾಕ್ತ ಪ್ರಭಾವ ಉಳ್ಳ ವೈದಿಕ ಪರಂಪರೆಯ ಅದ್ಭುತ ರಾಮಾಯಣದ ಪ್ರಕಾರವು ಸೀತೆ ರಾವಣ ಮಂಡೋದರಿಯರ ಮಗಳು. ಇಲ್ಲಿ ಈಕೆ ರಾಮನಿಗಿಂತ ಬಲಶಾಲಿ ಮತ್ತು ಮಹಾಕಾಳಿಯ ಪ್ರತಿರೂಪ. (ವಿವರಗಳಿಗೆ ನೋಡಿ: ಮುದ್ದಣದ ಅದ್ಭುತ ರಾಮಾಯಣ)

ಕುಂಕಣಾ ಎಂಬ ಬುಡಕಟ್ಟು ರಾಮಾಯಣದ (ಗುಜರಾತ್‌ – ಮಹಾರಾಷ್ಟ್ರ ಗಡಿಭಾಗದ ಡಾಂಗ್‌ ಜಿಲ್ಲೆಯಲ್ಲಿ ವಾಸಿಸುವ ಬುಡಕಟ್ಟು-ಕುಂಕಣಾ) ಪ್ರಕಾರ ರಾವಣ ಪ್ರಸಿದ್ಧ ಆರು ಮಂದಿ ದರೋಡೆಕೋರರಲ್ಲೆ ಕಿರಿಯನಾದವನು. ಸೀತೆಯಾದರೊ ರಾವಣನ ತಪಸ್ಸಿನಿಂದ ಅವನ ಹಿಂದೆ ಬಂದ ಮಾಯಾ ಪಾರ್ವತಿಯ ಮಗಳು. ಅಂದರೆ ರಾವಣ ಮತ್ತು ಆತನ ವರಪಡೆದ ಮಾಯಾಪತ್ನಿ ಪಾರ್ವತಿಯರ ಮಗಳು. ಈ ಕಥೆ ಬಹಳ ಭಿನ್ನವಾಗಿದೆ. (ವಿವರಗಳಿಗೆ ನೋಡಿ: Painted Words-ed. Ganesh Devi, Pengvin books India-2002, pg 35-59) ಇನ್ನು ಜಾತಕ ಕಥೆಗಳ ಪ್ರಕಾರ ಸೀತೆ ಮತ್ತು ರಾಮ ಇಬ್ಬರೂ ಅಣ್ಣತಂಗಿಯರು. ದಶರಥನ ಮಕ್ಕಳು. ಒಂದೆ ಕುಟುಂಬದಲ್ಲಿ ಅವರಿಬ್ಬರ ನಡುವೆಯೆ ಮುಂದೆ ಮದುವೆ ಜರುಗುತ್ತದೆ. ಅಣ್ಣತಂಗಿಯರೆ ಒಂದೊಮ್ಮೆ ಮದುವೆ ಆಗುತ್ತಿದ್ದ ಸಂಪ್ರದಾಯ ಅಸ್ತಿತ್ವದಲ್ಲಿ ಇದ್ದ ಪ್ರಾಗ್ರೂಪ ಇದು.

ಇನ್ನು ರಾಮಾದಿ ಸೋದರರ ಜನನದ ಕಥನದಲ್ಲು ಜೈನ-ವೈದಿಕ ಸಂಕಥನಗಳಲ್ಲಿ ಭಿನ್ನವಾದ ಕಥನಗಳಿವೆ. ರಾಮಾದಿಗಳು ಎಲ್ಲ ಜೈನ ಪರಂಪರೆಗಳಲ್ಲು ಸಹಜವಾಗಿ ಅವರ ತಂದೆ ತಾಯಿಗಳಿಗೆ ಜನಿಸುತ್ತಾರೆ. ಆದರೆ ವೈದಿಕದಲ್ಲಿ ದಶರಥನಿಗೆ ಬಹಳ ಕಾಲ ಮಕ್ಕಳಾಗದೆ ಹೋದಾಗ ಅವನು ಪುತ್ರಕಾಮೇಷ್ಠಿ ಯಾಗ ಮಾಡಿ; ಅಲ್ಲಿಂದ ಪಾಯಸದ ಬಟ್ಟಲನ್ನು ದೇವತೆಗಳಿಂದ ಪಡೆದು; ಆ ಪಾಯಸವನ್ನು ಅವನ ಪತ್ನಿಯರು ಕುಡಿದು (ಶುಂಗನೆಂಬ ಮುನಿಯಿಂದ ಪಿಂಡ ಪಡೆದು ತಿಂದು) ಮಕ್ಕಳು ಜನಿಸುತ್ತಾರೆ. ಇದನ್ನೆ ಆಧರಿಸಿ ಶುಂಗ ಎಂಬ ಮುನಿಯ ಕೂಟದಿಂದ ಕೌಸಲ್ಯೆಗೆ ಜನಿಸಿದ ಮಗ ರಾಮ ಎಂದು ಡಾ. ಅಂಬೇಡ್ಕರ್‌ ವ್ಯಾಖ್ಯಾನಿಸುತ್ತಾರೆ ಕೂಡ. (ನೋಡಿ: ರಾಮ-ಕೃಷ್ಣ: ಹಿಂದೂ ಧರ್ಮದಲ್ಲಿನ ಒಗಟುಗಳು, ಅನು: ಮನಜ)

ಇನ್ನು ರಾವಣ ಕುಂಭಕರ್ಣರ ಜನನ ಸಂಕಥನದಲ್ಲು ಜೈನ ಮತ್ತು ವೈದಿಕ ಧಾರೆಗಳ ನಡುವೆ ಭಿನ್ನತೆಗಳಿವೆ. ಆದರೆ ಜನಪದ ಧಾರೆ ಮತ್ತು ವೈದಿಕ ಧಾರೆಗಳ ನಡುವೆ ಹೆಚ್ಚಿನ ಭಿನ್ನತೆಗಳಿಲ್ಲ. ಜನಪದರು ಜೈನಕಥನಗಳನ್ನು ಅನ್ಯವೆಂದೆ ಭಾವಿಸಿದ್ದಾರೆ. ಕೆಲವೊಂದು ರಾಮಾಯಣಗಳು ರಾವಣ ಕುಂಭಕರ್ಣ ವಿಭೀಷಣರ ಜನನದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿಲ್ಲ. ಯಾಕೆಂದರೆ ಅಲ್ಲಿ ರಾಮಕಥನ ಮುಖ್ಯವೆ ಹೊರತು ರಾವಣ ಕಥನವಲ್ಲ. (ಕುಂಕಣಾ ರಾಮಾಯಣದಲ್ಲಿ ರಾವಣ ಕಥನವೆ ಮುಖ್ಯ) ವೈಕುಂಠದಲ್ಲಿ ವಿಷ್ಣುವಿನ ದ್ವಾರಪಾಲಕರಾದ ಜಯ ವಿಜಯರು ತಾವು ಮಾಡಿದ ಸಣ್ಣ ತಪ್ಪಿಗಾಗಿ ಶಾಪಕ್ಕೆ ಗುರಿಯಾಗಿ ಬೇರೆ ಬೇರೆ ಜನ್ಮಗಳನ್ನು ಎತ್ತಿ ಕೊನೆಯಲ್ಲಿ ರಾವಣ ಕುಂಭಕರ್ಣರಾಗಿ ಜನಿಸುತ್ತಾರೆ. ಇವರ ಜನ್ಮವು ಯಾವ ನಿಗೂಢಗಳೂ ಇಲ್ಲದೆ ಸಹಜವಾಗಿ ಆಗುತ್ತವೆ. ಆದರೆ ರಾಮ ಸೀತೆಯರು ಹೇಗೆ ಅವತಾರವೋ ಹಾಗೆಯೆ ಇವರೂ ಅವತಾರಗಳು. ಹೀಗೆ ಜೈನರಲ್ಲಿ ಭವಾವಳಿ ಕಲ್ಪನೆ ಇದ್ದರೆ ವೈದಿಕರಲ್ಲಿ ಅವತಾರದ ಕಲ್ಪನೆ ಇರುವುದನ್ನು ನಾವು ಕಾಣಬಹುದು.

ಋಷಿಮುನಿಗಳ ರಕ್ತ ಕುಡಿಯುವುದರಿಂದ ಮಕ್ಕಳಾಗುವುದು; ಪಾಯಸ ಕುಡಿಯುವುದರಿಂದ ಮಕ್ಕಳಾಗುವುದು, ಪಿಂಡ ತಿಂದು ಮಕ್ಳಳಾಗುವುದು, ಮಕ್ಕಳಾಗುವುದಕ್ಕೆಂದೆ ಪುತ್ರಕಾಮೇಷ್ಠಿ ಯಾಗ ಮಾಡುವುದು ಮತ್ತು ಸೀತು ಮೂಗಿನಿಂದ ಮಕ್ಕಳಾಗುವುದು ಹಾಗೂ ಗಂಡಸರೆ ಮಕ್ಕಳನ್ನು ಹೆರುವುದು, ಅಯೋನಿಜರಾಗಿ ಜನಿಸುವುದು ಇತ್ಯಾದಿ ಜನನ ಸಂಕಥನಗಳನ್ನು ಯಾವನ್ನೂ ನಾವು ಸುಮ್ಮನೆ ಅವಾಸ್ತವಿಕ ನಿರೂಪಣೆಗಳೆಂದು ತಳ್ಳಿಹಾಕಲು ಬರುವುದಿಲ್ಲ. ಹಿಂದಿನ ಕಾಲದಿಂದಲು ನಮ್ಮ ಸಮಾಜದ ನಡಾವಳಿಗಳನ್ನು ರೂಪಿಸಲು ಕಥನಗಳನ್ನು ಸಾಧನಗಳನ್ನಾಗಿ ಬಳಸುತ್ತ ಬಂದಿರುವುದನ್ನು ಇವುಗಳಿಂದ ಗ್ರಹಿಸಬಹುದಾಗಿದೆ. ಅಂದರೆ ವಿವಾಹಪೂರ್ವ ಮತ್ತು ವಿವಾಹೇತರ ಲೈಂಗಿಕತೆ ಹಾಗೂ ಪಿತೃತ್ವ-ತಾಯ್ತನಗಳ ಕುರಿತು ನಮ್ಮಲ್ಲಿ ಕಾಲಕಾಲಕ್ಕೆ ಹಲವಾರು ವಿಧಿನಿಷೇಧಗಳು ಏರ್ಪಡುತ್ತ ಬಂದಿವೆ. ಇವುಗಳನ್ನು ಆಚಾರಬದ್ಧ ಮೌಲ್ಯಗಳಾಗಿ ಸ್ಥಾಪಿಸಲು ಮತ್ತು ಅವುಗಳ ಸ್ವರೂಪವನ್ನು ನಿಗಧಿಸಲು ಅಕ್ಷರರೂಪಿ ಸಂಕಥನಗಳು ಕಾಲಕಾಲಕ್ಕೆ ಹಲವಾರು ಕಾವ್ಯರೂಪಕಗಳನ್ನು ಬಳಸುತ್ತ ಬಂದಿವೆ. ಅಂತಹ ಪ್ರಯತ್ನಗಳ ಗುರುತುಗಳಾಗಿ ಈ ನಿರೂಪಣೆಗಳನ್ನು ಕಾಣಬಹುದು.

ರಾಮಾಯಣ ಮಹಾಭಾರತಗಳ ಆಂತರ್ಯದಲ್ಲಿ ಶಿವಸಂಸ್ಕೃತಿ ಮತ್ತು ವೈಷ್ಣವಸಂಸ್ಕೃತಿಗಳ ನಡುವಣ ಸಂಘರ್ಷ ಇರುವುದನ್ನು ಹಲವಾರು ದೃಷ್ಟಾಂತಗಳಿಂದ ಸಾಬೀತು ಮಾಡಲು ಸಾಧ್ಯವಿದೆ. ರಾಮ-ಲಕ್ಷ್ಮಣರು ವನವಾಸ ಹೋಗಲಿಲ್ಲ; ದಿಗ್ವಿಜಯಕ್ಕೆ ಹೋದರು ಮತ್ತು ಮರಳಿ ಬರುವಾಗಲು ದಿಗ್ವಿಜಯ ಮಾಡಿಕೊಂಡೆ ಬಂದರು ಹಾಗೂ ಹಾಗೆ ಹೋಗುಬಾಗ ಮತ್ತು ಬರುವಾಗ ಅವರು ಹಲವಾರು ಋಷಿಮುನಿಗಳ ಆಶ್ರಮಕ್ಕೆ ಭೇಟಿ ಮಾಡಿ ಅವರಿಗೆ ಕಾಟ ಕೊಡುತ್ತಿದ್ದ ರಕ್ಕಸರನ್ನು ಕೊಂದರು ಎಂಬ ಸಂಕಥನವು ನಿರ್ವಿವಾದವಾಗಿ ಅನ್ಯ ಸಂಸ್ಕೃತಿಯ ಜನರನ್ನು ದಮನ ಮಾಡುವ ಕಥನವೆ ಆಗಿದೆ. ಅವರಲ್ಲಿ ಶಿವಸಂಸ್ಕೃತಿಯ ಜನರೂ ಯತೇಚ್ಛವಾಗಿ ಇದ್ದಾರೆ. ಇದೆ ನೆಲೆಯಲ್ಲಿ ರಾಮಾಯಣದಲ್ಲಿ ಸೀತಾ ಜನನ ಸಂಕಥನದಲ್ಲಿ ಶಿವಸಂಸ್ಕೃತಿ ಮತ್ತು ವೈಷ್ಣವ ಸಂಸ್ಕೃತಿಯ ಸಂಘರ್ಷದ ರೂಪಕವಾಗಿ ಋಷಿ ಮುನಿಗಳಿಗೆ ರಾವಣ ಕಾಟ ಕೊಟ್ಟು ಅವರ ರಕ್ತವನ್ನು ಸಂಗ್ರಹಿಸಿ ಇಟ್ಟಿರುವುದನ್ನು ನಾವು ಭಾವಿಸಬಹುದು. ಅಲ್ಲದೆ;

ರಾವಣನಿಗಲ್ಲದೆ ಋಷಿಸಮುದಾಯದಿಂದ ಮಂಡೋದರಿಗೆ ಮಕ್ಕಳು ಆಗಿರುವ ಸಾಧ್ಯತೆಯಾಗಿಯು ಇದನ್ನು ನೋಡುವುದು ಸಾಧ್ಯ. ಮತ್ತು ಸ್ವತಃ ತಮ್ಮ ಹೆಣ್ಣುಮಕ್ಕಳನ್ನೆ ಒಂದಾನೊಂದು ಕಾಲದಲ್ಲಿ ತಂದೆಗಳು ಮದುವೆ ಆಗುತ್ತಿದ್ದ ಪರಿಪಾಠ ಇರಿಸಿಕೊಂಡಿದ್ದನ್ನು ನಿಷೇಧಿಸುವ ಪಳೆಯುಳಿಕೆ ಆಗಿಯೂ ಇದನ್ನು ನೋಡಬಹುದು: ಹೀಗೆ ಮಂಡೋದರಿಯು ಋಷಿಮುನಿಗಳ ರಕ್ತಪಾನ ಮಾಡಿ ಬಸಿರಾಗುವುದನ್ನು ಈ ಎರಡು ದೃಷ್ಟಿಗಳಿಂದಲು ನೋಡಲು ಸಾಧ್ಯವಿದೆ. ರಾವಣನ ಮೂಗಿನಿಂದ ಅವನು ಸೀತಾಗ ಸೀತೆಯು ಜನಿಸುವ ನಮ್ಮ ಜನಪದರ ಕಲ್ಪನೆ ಕೂಡ ಬೀಜರೂಪದಲ್ಲಿ ಒಂದೊಮ್ಮೆ ನಮ್ಮ ನೆಲದಲ್ಲಿ ಇದ್ದಿರಬಹುದಾದ ತಂದೆ ಮಗಳ ಸಂಬಂಧವನ್ನು ನಿಷೇಧಿಸುವ ಕಥನವಾಗಿಯೆ ನಿರೂಪಣೆಯಾಗಿದೆ. ಸೀತೆ ನಿಜವಾಗಿಯು ರಾವಣನ ಮಗಳು ಹೌದೋ ಅಲ್ಲವೊ ಎಂಬ ಪ್ರಶ್ನೆಗಿಂತ ಆ ರೀತಿಯ ಕಥನದ ಉದ್ದೇಶ ಮಾತ್ರ ಅಂತಹ ಸಂಬಂಧವನ್ನು ಶಿಕ್ಷಾರ್ಹ ನಿಷೇಧಿತ ಸಂಬಂಧ ಎಂದು ನಿರೂಪಿಸುವುದು ಎಂಬುದರಲ್ಲಿ ಎರಡು ಮಾತಿಲ್ಲ.

ರಕ್ತ ಕುಡಿಯುವುದರಿಂದಲು ಮಕ್ಕಳಾಗುವುದಿಲ್ಲ; ಪಾಯಸ ಕುಡಿಯುವುದರಿಂದಲು ಮಕ್ಕಳಾಗುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಪುತ್ರಕಾಮೇಷ್ಠಿ ಯಾಗ ಮಾಡುವುದು ಮತ್ತು ಅದರಿಂದ ದೇವತಗಳನ್ನು ಸಂಪ್ರೀತಗೊಳಿಸಿ ಪಾಯಸ ಗಳಿಸಿ, ಅದನ್ನು ಕುಡಿದು ಮಕ್ಕಳಾಗುವುದು ವಾಸ್ತವಿಕವಾಗಿ ಅಸಂಭವ. ಅಂದರೆ ಯಾಗ ಮಾಡುವುದರಿಂದ ಮಕ್ಕಳಾಗುವುದಿಲ್ಲ; ನಿಜ. ಆದರೆ ಯಾಗ ಮಾಡುವುದೆ ಖಂಡಿತವಾಗಿಯು ಜನಸಾಮಾನ್ಯರನ್ನು ದಾಂಪತ್ಯದಾಚೆಗಿನ ಸಂಬಂಧಗಳಿಂದ ಮಕ್ಕಳನ್ನು ಪಡೆಯುತ್ತಿಲ್ಲ ಎಂದು ನಂಬಿಸಲು. ಕಳೆದುಹೋಗಬಹುದಾದ ರಾಜ್ಯಾಧಿಕಾರದ ವಾರಸುದಾರಿಕೆಯನ್ನು ಉಳಿಸಿಕೊಳ್ಳಲು ರಾಜನಿಗೇ ಮಕ್ಕಳಾಗಬೇಕೆಂದಿಲ್ಲ; ಆದರೆ ಯಾರೂ ವಾರಸವನ್ನು ಪ್ರಶ್ನಿಸದಂತೆ ರಾಣಿಗೆ ಮಕ್ಕಳಾದರೆ ಸಾಕು. ಅದಕ್ಕೆ ಏನೆಲ್ಲ ಸಮಾಜದಲ್ಲಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು ಮತ್ತು ಹಾಗೆ ಪಡೆದ ಮಕ್ಕಳೇ ರಾಜಸಂತಾನ; ಆ ಮಕ್ಕಳದ್ದೆ ನಿಜ ವಾರಸುದಾರಿಕೆ ಎಂದು ಜನರನ್ನು ನಂಬಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ರಾಮಾದಿಗಳ ಜನನದ ಪ್ರಸಂಗವನ್ನು ನೋಡಬಹುದು.

ಪ್ರಾಚೀನ ಕಾವ್ಯರೂಪಕಗಳ ಗಿಳಿಪಾಠ ಮತ್ತು ಮಿಸ್‍ರೀಡಿಂಗ್

ಕೆಲವೊಮ್ಮೆ ಮಿಸ್‍ರೀಡಿಂಗುಗಳು ಉಪಯುಕ್ತ ಆಗಿಯೂ ಇರಬಹುದು. ಕೆಲವೊಮ್ಮೆ ಅಪಾರ್ಥ, ಅವಾಸ್ತವಿಕತೆ ಮತ್ತು ವಾಚ್ಯತೆಗಳಿಗು ದಾರಿ ಮಾಡಿಕೊಡಬಹುದು. ರಾಮಾಯಣದ ಜನನ ಸಂಕಥನಗಳು ಇಂಥದ್ದನ್ನೆ ಹೇಳುತ್ತವೆ. ಕಾವ್ಯರೂಪಕ, ಸಂಕೇತಗಳನ್ನು ವಾಚ್ಯವಾಗಿ ಗ್ರಹಿಸಿ ಮರುನಿರೂಪಿಸಿದಾಗ ಅವು ತಮ್ಮ ರೂಪಕ ಸಾಧ್ಯತೆಗಿಂತ ಯಾಂತ್ರಿಕ ನಿರೂಪಣೆಗಳಾಗಿ ಉಳಿದುಕೊಳ್ಳುತ್ತವೆ. ಸೀತಾಪಹರಣದ ಸಂದರ್ಭದ ಚಿನ್ನದ ಜಿಂಕೆ ಮತ್ತು ಲಕ್ಷ್ಮಣ ರೇಖೆಗಳ ವಿಚಾರ ಕೂಡ ಕಾವ್ಯರೂಪಕಗಳೆ ಹೌದು. ತನ್ನ ಅಪಹರಣದ ಸಂದರ್ಭದಲ್ಲಿ ಸೀತೆ ಚಿನ್ನದ ಜಿಂಕೆಯನ್ನು ಬಯಸುವುದು ಚಿನ್ನದ ಬಣ್ಣದ ಚರ್ಮವಿದ್ದ ಜಿಂಕೆಯನ್ನು ಬಯಸುವುದು ಎಂದು ಮಾತ್ರ ತೆಗೆದುಕೊಳ್ಳಬೇಕಿಲ್ಲ; ಅದು ಯಾವುದೆ ಬಗೆಯ ಅಪಾಯಕಾರಿಯಾದ ಬಯಕೆಗಳ ರೂಪಕ ಆಗಬಲ್ಲುದು.

ಲಕ್ಷ್ಮಣರೇಖೆ ಕೂಡ ಕೇವಲ ರೇಖೆ ಅಲ್ಲ; ಅವು ಹೆಣ್ಣಿಗೆ ಗಂಡು ವಿಧಿಸಿದ ನಿರ್ಬಂಧಗಳ ಸಂಕೇತ. ಕೆಲವೊಮ್ಮೆ ಹೆಣ್ಣು ಗಂಡಸರ ರಕ್ಷಣೆಯಲ್ಲೆ ಇರಬೇಕು, ಸದಾ ಗಂಡಸರ ಗೈರುಹಾಜರಿಯಲ್ಲಿ ಅವರು ಹೇಳಿದ ಗೃಹಪರಿಧಿಯನ್ನು ದಾಟಿ (ಹೊಸಲು ದಾಟಿ) ಹೋಗಬಾರದು ಎಂಬ ವಿಧಿನಿಷೇಧಗಳ ಸಂಕೇತ. ಅದು ಕೇವಲ ಹೊಸಿಲು ದಾಟುವ ಸಂಗತಿ ಮಾತ್ರವಲ್ಲ; ಗಂಡಿನ ಗೈರುಹಾಜರಿಯಲ್ಲಿ ಹೆಣ್ಣು ಲೈಂಗಿಕ ಸಾಹಸಗಳನ್ನು ಮಾಡಬಾರದೆಂಬ ಕಟ್ಟಳೆಯ ಸಂಕೇತ ಕೂಡ. ಕುಟುಂಬ, ದಾಂಪತ್ಯ ಸಂಸ್ಥೆಗಳು ವಿಧಿಸಿರುವ ನಿರ್ಬಂಧಗಳ ಸಂಕೇತ ಕೂಡ. ಲೈಂಗಿಕ ಕಟ್ಟಳೆಗಳನ್ನು ಮೀರುವ ಗಂಡುಗಳ ವರ್ತನೆಯನ್ನು ಅಧರ್ಮ, ಅನೀತಿ, ಶಿಕ್ಷಾರ್ಹ ಅಪರಾಧ ಎಂದೂ ನಮ್ಮಲ್ಲಿ ಭಾವಿಸಲಾಗಿತ್ತು. ಶೂರ್ಪನಖಿ ಮತ್ತು ರಾವಣ ಇಬ್ಬರಿಗೂ ಅದಕ್ಕಾಗಿ ಶಿಕ್ಷೆ ವಿಧಿಸುವ ಕಥನವೇ ರಾಮಾಯಣ. ರಾವಣ ಮತ್ತು ಶೂರ್ಪನಖಿ ಇಬ್ಬರಿಗು ಸಹಕರಿಸುವ ಎಲ್ಲರಿಗು ಇಲ್ಲಿ ಶಿಕ್ಷೆ ಆಗುತ್ತದೆ. ಅವರು ಎಷ್ಟೆ ಪರಾಕ್ರಮಿಗಳಾದರೂ ಅವರಿಗೆ ಸೋಲು ತಪ್ಪಿದ್ದಲ್ಲ.

ವೀರಪ್ಪ ಮೊಯಿಲಿ ಅವರ ಶ್ರೀರಾಮಾಯಣ ಮಹಾನ್ವೇಷಣಂ ಕಾವ್ಯದಲ್ಲಿ ಎರಡು ಕಡೆ ಸೀತಾಪಹರಣ ಪರಸಂಗದಲ್ಲಿ ಸೀತೆಗೆ ಲಕ್ಷ್ಮಣ ಎಳೆದ ರೇಖೆಗಳ ಬಗ್ಗೆ ಎರಡು ಮಾತುಗಳಿವೆ. ಮೊದಲಿಗೆ ‘ಲಕ್ಷ್ಮಣನ ರೇಖೆಯೆನೆ ತರಳೆಯರ ರಕ್ಷಿಸುವ ಕೋಟೆಯದು’ (ಪ್ರಸ್ಥಾನ: 74-ಸಾಲು 70) ಎಂಬ ಮಾತು ಇಲ್ಲಿ ಬರುತ್ತದೆ. ರೇಖೆಗಳನ್ನು ರೂಪಕವಾಗಿ ತೆಗೆದುಕೊಳ್ಳದೆ ವಾಚ್ಯವಾಗಿ ತೆಗೆದುಕೊಂಡದ್ದರ ಪರಿಣಾಮವಿದು. ಮುಂದೆ ತನ್ನ ಅಪಹರಣವಾದಾಗ ಸೀತೆಯೆ ಸ್ವತಃ ‘ಸ್ವರ್ಣಮೃಗ ಮೋಹಕ್ಕೆ

ಶಿಕ್ಷೆಯಾಗಿಹುದೆನಗೆ’ ಎಂದು ಹೇಳುವ ಮಾತು ಬರುತ್ತದೆ. (ಪ್ರಸ್ಥಾನ 75: ಸಾಲು 5-6) ಅಪರಾಧ ಮತ್ತು ಶಿಕ್ಷೆಯ ನೆಲೆಯಲ್ಲಿ ಸೀತಾಪರಹಣವನ್ನು ಇಲ್ಲಿ ನೋಡಲಾಗಿದೆ. ಲಕ್ಷ್ನಣನನ್ನು ನಿಂದಿಸಿ ದೂರ ಕಳಿಸಿದ ಮತ್ತು ರೇಖೆಗಳನ್ನು ದಾಟಿದ ಆಕೆಯ ಅಪರಾಧಕ್ಕೆ ಅಪಹರಣದ ಮತ್ತು ಆನಂತರದ ಶಿಕ್ಷೆಗಳು ಆಕೆಗೆ ಆಗುತ್ತವೆ ಎಂಬುದು ಇಲ್ಲಿ ಕಾವ್ಯದ ನಂಬಿಕೆ. ಅಂದರೆ ಪ್ರಾಚೀನ ಕಾವ್ಯರೂಪಕಗಳನ್ನು ಅದರಲ್ಲು ಕುಟುಂಬ, ದಾಂಪತ್ಯ, ಲೈಂಗಿಕತೆಯ ಸಂಕಥನಗಳನ್ನು ಹೊಂದಿರುವ ಪ್ರಸಂಗಗಳ ಯಥಾವತ್ ಗಿಳಿಪಾಠ ಒಪ್ಪಿಸುವ ಮತ್ತು ಅವನ್ನು ವಾಚ್ಯವಾಗಿಸುವ ಎರಡೂ ಕೆಲಸಗಳನ್ನು ನಮ್ಮ ಬಹುಪಾಲು ರಾಮಾಯಣ ಕಾವ್ಯಗಳು ಮಾಡುತ್ತ ಬಂದಿವೆ. ನಮ್ಮ ಸಮಾಜ ಮೌಲ್ಯಾತ್ಮಕವಾಗಿ ಪಲ್ಲಟವಾಗದೆ ಕಾವ್ಯದ ರೂಪಕಗಳು ಗಿಳಿಪಾಠದಿಂದ ಬದಲಾಗಲಾರವು.

(ಮುಂದುವರೆಯುವುದು...)

ಈ ಅಂಕಣದ ಹಿಂದಿನ ಬರೆಹಗಳು:
ರಾಮಾಯಣ ಸಂಕಥನ-1
ಕೆರೆಯ ನೀರನು ಕೆರೆಗೆ ಚೆಲ್ಲಿ
ಕೊಂಡಿ ಎಲ್ಲಿ ಕಳಚಿದೆ?
ಯಾರದೊ ಅಜೆಂಡಾ ಮಾರಮ್ಮನ ಜಾತ್ರೆ

ಹೊಸಕಾವ್ಯದ ಭಾಷೆ, ಗಾತ್ರ, ಹೂರಣ
ಗೌರಿಯರು: ಕುಟುಂಬ - ದಾಂಪತ್ಯ ಸಂಕಥನ
ರಾಷ್ಟ್ರೀಯತೆಯ ಆಚರಣೆಯ ಸುತ್ತ
ನೆನ್ನೆ ಮನ್ನೆ-1
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...