ಪುರಿ-ಜಗನ್ನಾಥ-ಕೋನಾರ್ಕ ಪ್ರವಾಸ


"ಉದಯಗಿರಿಯಲ್ಲಿ ನೆಲ ಅಂತಸ್ತು ಮಾತ್ರವಲ್ಲದೆ ಅದರ ಮೇಲೆ ಎರಡು ಅಂತಸ್ತುಗಳಿವೆ. ಒಳಗಿನಿಂದಲೇ ಮೇಲೆ ಹೋಗಬಹುದಾದ ಕಿಂಡಿಗಳೂ ಇವೆ. ಒಳಗೆ ಬೇರೆ ಬೇರೆ ಕೋಣೆಗಳಿವೆ. ಗೋಡೆಗಳ ಮೇಲೂ ಬಾಗಿಲುಗಳ ಹೊಸ್ತಿಲು-ದಾರಂದಗಳಲ್ಲೂ ಶಿಲ್ಪ ವಿನ್ಯಾಸಗಳೂ ಶಾಸನಗಳೂ ಇವೆ," ಎನ್ನುತ್ತಾರೆ ಪಾರ್ವತಿ ಜಿ. ಐತಾಳ್. ಅವರು ‘ಪುರಿ-ಜಗನ್ನಾಥ-ಕೋನಾರ್ಕ ಪ್ರವಾಸ’ದ ಕುರಿತು ಬರೆದ ಪ್ರವಾಸ ಕಥನ.

ಒಂದೊಮ್ಮೆಉತ್ಕಲ-ಕಳಿಂಗಗಳೆಂಬ ಹೆಸರನ್ನು ಹೊತ್ತಿದ್ದ ಇವತ್ತಿನ ಒಡಿಶಾದಲ್ಲಿ ಅನೇಕ ವೈಶಿಷ್ಟ್ಯಗಳುಳ್ಳ ದೇವಸ್ಥಾನಗಳಿವೆ ಎಂಬ ವಿಚಾರವನ್ನು ಓದಿ ತಿಳಿದುಕೊಂಡಿದ್ದೆ. ಒಮ್ಮೆ ಭೇಟಿಕೊಡಬೇಕೆಂಬ ಆಲೋಚನೆಯನ್ನೂ ಮಾಡಿದ್ದೆ. ಹಾಗೆ ನಾನು ಬಹಳವಾಗಿ ಇಷ್ಟ ಪಡುವ ಬೆಂಗಳೂರಿನ ಎಲಿಗೆಂಟ್‌ಟರ‍್ಸ್& ಟ್ರಾವೆಲ್ಸ್ನವರು ಒಡಿಶಾಟೂರ್‌ ಯೋಜನೆ ಹಾಕಿಕೊಂಡಿದ್ದಾರೆಂದು ತಿಳಿದ ಕೂಡಲೇ ನಾನು ಹೊರಟು ಬಿಟ್ಟೆ. 27 ಮಂದಿ ಪ್ರವಾಸಿಗಳಿದ್ದ ನಮ್ಮತಂಡ( ವ್ಯವಸ್ಥಾಪಕಿ ಶಾಲಿನಿಯವರು ಸೇರಿ 28 ಮಂದಿ) ಹೊರಟದ್ದು ನವೆಂಬರ್ 15, 2024ರಂದು ಬೆಳಗ್ಗೆ 3.45 ಗಂಟೆಗೆ. ವಿಮಾನಕ್ಕೆ ಬುಕ್ ಮಾಡಿದರೆ ಇರುವ ಒಂದು ತೊಂದರೆ ಎಂದರೆ ರಾತ್ರಿಯ ಅಪವೇಳೆಯಲ್ಲಿ ನಿಲ್ದಾಣಕ್ಕೆ ಹೋಗಿ ತಪಾಸಣೆಗಳನ್ನು ಮಾಡಿ ಅಲ್ಲಿ ಗಂಟೆಗಟ್ಟಲೆ ಕಾಯುವುದು. ಕೊನೆಗೂ 6.50ಕ್ಕೆ ನಾವು ಹೋಗಲಿರುವ ಭುವನೇಶ್ವರಕ್ಕೆ ಹೊಗುವ ವಿಮಾನ ಬಂತು. ನಾವು ಹತ್ತಿ ಕುಳಿತು ಟೂರ್ ವ್ಯವಸ್ಥಾಪಕರು ಕಟ್ಟಿಕೊಟ್ಟಿದ್ದ ತಿಂಡಿ ಪ್ಯಾಕೆಟ್ಟುಗಳನ್ನು ತೆರೆದುತಿಂದೆವು. ವಿಮಾನವು 8.5೦ಕ್ಕೆ ಸರಿಯಾಗಿ ಭುವನೇಶ್ವರ ತಲುಪಿತು.

ನಿಲ್ದಾಣದ ಹೊರಗೆ ನಾವು ಅಲ್ಲಿ ತಿರುಗಾಡಲಿರುವ ಬಸ್ಸು ನಮಗಾಗಿ ಕಾಯುತ್ತಿತ್ತು. ತಂಡದವರ ಊಟ-ತಿಂಡಿಗಳ ಅಗತ್ಯಗಳಿಗೆಂದು ನಿಯೋಜಿತರಾಗಿದ್ದ ಅಡುಗೆಯವರು ಮೊದಲೇ ಹೋಗಿ ನಮ್ಮ ಬ್ರೇಕ್ ಫಾಸ್ಟ್ಗೆ ಸಿದ್ದತೆ ಮಾಡಿಟ್ಟು ಬಸ್ಸಿನೊಳಗೆ ಹಾಕಿಟ್ಟಿದ್ದರು. ನಾವು ಬಸ್ಸನ್ನು ರಸ್ತೆ ಬದಿಯಲ್ಲಿ ಒಂದೆಡೆ ನಿಲ್ಲಿಸಿ ಕೈ-ಮುಖಗಳನ್ನು ತೊಳೆದು ತಿಂಡಿ ತಿಂದು ದುಕಾಫಿ-ಟೀ ಕುಡಿದೆವು. ನಂತರ ನಾವು ಮೊದಲು ಹೋಗಿದ್ದು ಸಮೀಪವೇ ಇದ್ದ ಉದಯಗಿರಿ ಮತ್ತು ಖಂಡಗಿರಿ ಗುಹೆಗಳ ಅವಶೇಷಗಳಿದ್ದ ಜಾಗಕ್ಕೆ. ಅಲ್ಲಿ ವ್ಯವಸ್ಥಾಪಕರು ನಿಯೋಜಿಸಿದ್ದ ಗೈಡ್ ನಮಗಾಗಿ ಕಾಯುತ್ತಿದ್ದರು. ಅವರು ಎಲ್ಲವನ್ನೂ ಹಿಂದಿಯಲ್ಲೇ ವಿವರಿಸಿ ಹೇಳುತ್ತಿದ್ದರು.

ಉದಯಗಿರಿ ಮತ್ತು ಖಂಡಗಿರಿ ಗುಹೆಗಳು ಭುವನೇಶ್ವರ ನಗರದಿಂದ ಸುಮಾರು 3ಕಿ.ಮೀ ದೂರದಲ್ಲಿಕುಮಾರಿ ಪರ್ವತ ಎಂಬ ಎರಡು ಅಕ್ಕಪಕ್ಕದ ಗುಡ್ಡಗಳಲ್ಲಿ ಅರ್ಧ ಪ್ರಾಕೃತಿಕ ಮತ್ತುಅರ್ಧ ಮನುಷ್ಯ ನಿರ್ಮಿತವಾಗಿ ಸುಂದರವಾಗಿ ಶೋಭಿಸುವ ಗುಹೆಗಳು. ಉದಯಗಿರಿಯಲ್ಲಿ ನೆಲ ಅಂತಸ್ತು ಮಾತ್ರವಲ್ಲದೆ ಅದರ ಮೇಲೆ ಎರಡು ಅಂತಸ್ತುಗಳಿವೆ. ಒಳಗಿನಿಂದಲೇ ಮೇಲೆ ಹೋಗಬಹುದಾದ ಕಿಂಡಿಗಳೂ ಇವೆ. ಒಳಗೆ ಬೇರೆ ಬೇರೆ ಕೋಣೆಗಳಿವೆ. ಗೋಡೆಗಳ ಮೇಲೂ ಬಾಗಿಲುಗಳ ಹೊಸ್ತಿಲು-ದಾರಂದಗಳಲ್ಲೂ ಶಿಲ್ಪ ವಿನ್ಯಾಸಗಳೂ ಶಾಸನಗಳೂ ಇವೆ. ಅಲ್ಲೇ ಹಿಂದೆಇರುವ ಹಾಥಿಗುಹೆಯಲ್ಲಿ ಈ ಕುರಿತು ಉಲ್ಲೇಖವಿದೆ. ಕ್ರಿ.ಪೂ.8ನೇ ಶತಮಾನದಲ್ಲಿ ರಾಜಾಖರವೇಲನ ಕಾಲದಲ್ಲಿ ಜೈನ ಸಂನ್ಯಾಸಿಗಳ ವಾಸಕ್ಕೋಸ್ಕರ ಈ ಗುಹಾ ನಿವಾಸಗಳನ್ನು ಕಟ್ಟಿಸಿದ್ದರಂತೆ. ಹಿಂದೆ ಇವುಗಳನ್ನು ಕಟಕ ಗುಹೆಗಳೆಂದು ಕರೆಯುತ್ತಿದ್ದರು. ಉದಯಗಿರಿ ಅಂದರೆ ಸೂರ್ಯೋದಯ ಕಾಣಿಸುವಬೆಟ್ಟ. ಅದು ರಸ್ತೆಯ ಬಲಭಾಗದಲ್ಲಿದೆ. ಅದರೊಳಗಿನ ಗುಹೆಗಳು ದೂರದಿಂದಲೇ ಕಾಣಿಸುತ್ತಿದ್ದವು. ಹತ್ತಿರ ಹೋಗಿ ನೋಡಿದರೆ ಎಲ್ಲವೂ ಜರ್ಝರಿತಗೊಂಡಿದ್ದು ಸ್ಪಷ್ಟವಾಯಿತು. ಉದಯಗಿರಿಯಲ್ಲಿ ಹಿಂದೆ ವಾಸ ಯೋಗ್ಯವಾದ 117 ಗುಹೆಗಳಿದ್ದವಂತೆ. ಇವತ್ತು 18 ಮಾತ್ರ ಇವೆ. ಇವುಗಳಲ್ಲಿ ಮುಖ್ಯವಾದುದು ರಾಣಿ ಗುಹೆ.

ಅದುಎರಡು ಅಂತಸ್ತುಗಳಿರುವ ಒಂದು ಆಶ್ರಮದಂತಿದೆ. ಪ್ರತಿ ಅಂತಸ್ತಿನಲ್ಲಿಯೂ ಮೂರು ವಿಭಾಗಗಳಿದ್ದು ಮಧ್ಯದ ವಿಭಾಗವು ವಿಶಾಲವಾಗಿದೆ. ಕೆಳ ಅಂತಸ್ತಿನ ಮಧ್ಯ ಭಾಗದಲ್ಲಿ ಏಳು ಪ್ರವೇಶ ದ್ವಾರಗಳಿವೆ. ಮೇಲಿನ ಅಂತಸ್ತಿನಲ್ಲಿ ಒಂಬತ್ತು ಅಂಕಣಗಳಿವೆ. ಮಧ್ಯದ ವಿಭಾಗದ ಛಾವಣಿಯಲ್ಲಿ ರಾಜನ ವಿಜಯೋತ್ಸವ ಮೆರವಣಿಗೆಯ ಚಿತ್ರಗಳಿವೆ. ಕೆಲವೆಲ್ಲ ಹಾಳಾಗಿ ತಿರುಚಲ್ಪಟ್ಟಿವೆ. ಮಧ್ಯಭಾಗವನ್ನು ಎಡ-ಬಲ ಭಾಗಳಿಗೆ ಸೇರುವಲ್ಲಿ ಕಾಡುಪ್ರಾಣಿಗಳು, ಹಣ್ಣು ಹೊತ್ತ ಮರಗಳು, ಮನುಷ್ಯರು, ಸಂಗೀತೋಪಕರಣಗಳನ್ನು ನುಡಿಸುತ್ತಿರುವ ಸ್ತ್ರೀಯರು, ಕಪಿಗಳು, ಮತ್ತು ತುಂಟಾಟವಾಡುವ ಆನೆಗಳಿವೆ. ಆಯತಾಕಾರದ ಕಂಬಗಳಲ್ಲಿ ಜೈನಧರ್ಮಕ್ಕೆ ಸಂಬಧಿಸಿದ ಅಲಂಕಾರಿಕ ಶಿಲ್ಪಗಳಿವೆ. ಹಾಥಿ ಗುಹೆ, ಅನಂತ ಗುಹೆ, ಗಣೇಶ ಗುಹೆ, ಜಯವಿಜಯ ಗುಹೆ, ಅಲಕಾಪುರಿ ಗುಹೆ, ಮಂಚಗಿರಿ ಗುಹೆ, ವ್ಯಾಘ್ರ ಗುಹೆ, ಸರ್ಪಗಿರಿ ಗುಹೆ ಮಂತಾದ ಗುಹೆಗಳಿವೆ. ಭಾರತೀಯ ಪುರಾತತ್ವ ಇಲಾಖೆಯವರು ಈ ಗುಹೆಗಳನ್ನು ಎಲ್ಲರೂ ನೋಡಲೇ ಬೇಕಾದ ಜಾಗವೆಂದು ಭಾರತೀಯ ಪರಂಪರೆಯ ಪಟ್ಟಿಯಲ್ಲಿ ಸೇರಿಸಿದ್ದಾರೆ. ಇದೊಂದು ಆದರ್ಶ ಸ್ಮಾರಕವೆಂದು ಘೋಷಿಸಿದ್ದಾರೆ. ಹಾಥಿ ಗುಹೆಗಳು ಮತ್ತು ಗಣೇಶ ಗುಹೆಗಳು ತಮ್ಮ ಬೆಡಗಿನ ಶಿಲ್ಪಕಲೆಗೆ ಪ್ರಸಿದ್ಧವಾಗಿವೆ. ರಾಣಿ ಗುಹೆಯು ಸಾಕಷ್ಟು ವಿಶಾಲವಾಗಿ ಅರಮನೆಯಂತಿದ್ದು ಸುಂದರ ಕೆತ್ತನೆ-ಮತ್ತು ಕುಸುರಿ ವಿನ್ಯಾಸಗಳಿಂದ ಕೂಡಿದೆ. ಹಾಥಿ ಗುಹೆಯ ಪ್ರವೇಶದ್ವಾರದಲ್ಲಿ ಆರು ಆನೆಗಳ ಕೆತ್ತನೆಗಳಿವೆ. ಅಲಕಾಪುರಿ ಗುಹೆಯ ಪ್ರವೇಶದ್ವಾರದಲ್ಲಿ ಒಂದು ಸಿಂಹವು ತನ್ನ ಬಾಯಲ್ಲಿ ಕೊಳ್ಳೆಯನ್ನು ಕಚ್ಚಿ ಹಿಡಿದುಕೊಂಡಿರುವ ಶಿಲ್ಪವಿದೆ. ಗುಹೆಯ ಒಳಗೆ ಕಂಬಗಳೂ ರೆಕ್ಕೆಗಳಿರುವ ಮನುಷ್ಯರೂ ಇದ್ದಾರೆ. ಅದಲ್ಲಿ ಎರಡು ಅಂತಸ್ತುಗಳಿವೆ. ಜಯವಿಜಯ ಗುಹೆಯಲ್ಲ್ಲೂಎರಡು ಅಂತಸ್ತುಗಳಿವೆ. ಅದರೊಳಗೆ ದೊಡ್ಡಗಾತ್ರದ ಕಿವಿಯೋಲೆಗಳನ್ನು, ಪಟ್ಟಿಗಳನ್ನೂ ಹಾಕಿ ಕೇಶಾಲಂಕಾರ ಮಾಡಿಕೊಂಡ ಸ್ತ್ರೀಯ ಚಿತ್ರಗಳಿವೆ. ಅವಳು ಒಂದುಕೈಯಲ್ಲಿ ಗಿಳಿಯನ್ನು ಹಿಡಿದುಇನ್ನೊಂದುಕೈಯಿಂದ ಸೊಂಟವನ್ನು ಹಿಡಿದುಕೊಂಡಿದ್ದಾಳೆ. ಮಂಚಪುರಿ ಗುಹೆಯಲ್ಲೂ ಎರಡು ಅಂತಸ್ತುಗಳಿವೆ. ಇಬ್ಬರು ಪುರುಷರು ಮತ್ತು ಇಬ್ಬರು ಸ್ತ್ರೀಯರಿದ್ದಾರೆ. ಇಲ್ಲಿ ಖರವೇಲನು ಕಳಿಂಗದಿಂದ ತಂದ ಜಿನನನ್ನುಆರಾಧಿಸುವ ಚಿತ್ರಗಳಿವೆ. ಇಲ್ಲಿ ಮೂರು ಶಾಸನಗಳಿವೆ. ಒಂದು ಶಾಸನವು ಖರವೇಲನ ಪಟ್ಟದರಾಣಿಯ ಕುರಿತೂ ಇನ್ನೆರಡು ಅವನ ಉತ್ತರಾಧಿಕಾರಿಯ ಬಗೆಗೂ ಇನ್ನೊಂದು ಅವನ ಮಗನ ಬಗೆಗೂ ಮಾತನಾಡುತ್ತವೆ.

ಗಣೇಶ ಗುಹೆಯು ಉದಯಗಿರಿಯ ಅತ್ಯಂತ ಹೆಚ್ಚು ಮಹತ್ವದ ಗುಹೆ. ಗುಹೆಯ ಬಲಬದಿಯಲ್ಲಿರುವ ಗಣೇಶನ ಕೆತ್ತನೆಯ ಮೂರ್ತಿಯಿಂದಾಗಿ ಆ ಹೆಸರು ಬಂತು. ಅದು ನಂತರದ ಕಾಲದಲ್ಲಿ ಕೆತ್ತಿದ್ದೂ ಆಗಿರಬಹುದು. ಇಲ್ಲಿ ಪ್ರವೇಶದ್ವಾರದಲ್ಲಿ ಎರಡು ಆನೆಗಳು ಹೂಮಾಲೆ ಹಿಡಿದು ನಿಂತ ಮೂರ್ತಿಗಳಿವೆ. ದ್ವಾರದಲ್ಲಿದ್ವಾರ ಪಾಲಕರ ಕೆತ್ತನೆಗಳಿವೆ. ಗುಹೆಯೊಳಗಿನ ಕೆತ್ತನೆಗಳು ವಾಸವದತ್ತೆಯು ತನ್ನ ಪ್ರಿಯಕರನಾದ ಕೋಸಾಂಬಿಯ ರಾಜಕುಮಾರ ಉದಯನನೊಂದಿಗೆ ಓಡಿಹೋದ ಕತೆಯನ್ನು ಚಿತ್ರಿಸುತ್ತದೆ. ವ್ಯಾಘ್ರಗುಹೆಯ ಪ್ರವೇಶದ್ವಾರವು ಹುಲಿಯ ಬಾಯಿಯ ಆಕಾರದಲ್ಲಿದೆ. ಒಳಗಿರುವ ಒಂದೇಕೋಣೆಯು ಹುಲಿಯ ಗಂಟಲಿನಂತಿದೆ. ಎಲ್ಲರೂ ತಮ್ಮ ಹೆಚ್ಚಿನ ಫೋಟೋಗಳನ್ನು ಇಲ್ಲಿ ತೆಗೆಯುತ್ತಾರೆ. ಹಾಥಿ ಗುಹೆಯು ಇಲ್ಲಿನ ಅತ್ಯಂತ ದೊಡ್ಡ ಗುಹೆ. ಇಲ್ಲಿ ಖರವೇಲನ ಶಾಸನವಿದೆ. ಅದು ಅವನ ಬಗಗೆ ಅನೇಕ ಮಾಹಿತಿಗಳನ್ನು ಒದಗಿಸುತ್ತದೆ. ಹೆಸರೇ ಸೂಚಿಸುವಂತೆ ಇದು ಆನೆಯ ಕೆತ್ತನೆಗಳಿರುವ ಗುಹೆ.

ಖಂಡಗಿರಿ ತುಸು ಎತ್ತರವಾಗಿದ್ದು ಭುವನೇಶ್ವರದಿಂದ ಬರುವಾಗ ರಸ್ತೆಯ ಎಡಬದಿಯಲ್ಲಿದೆ. ಅದರ ತುದಿಯಲ್ಲಿ ನಿಂತರೆ ಇಡೀ ಭುವನೇಶ್ವರದ ನಗರದ ನೋಟವು ಕಾಣಿಸುತ್ತದೆ. ಇಲ್ಲಿ 15 ಗುಹೆಗಳಿವೆ. ಸೋಮವಂಶಿ ವಂಶದರಾಜ ಉದ್ಯೋತ ಕೇಶರಿಯ ಆಡಳಿತ ಕಾಲದಲ್ಲಿ ಈ ಗುಹೆಗಳ ಪುನ ರ್ನಿರ್ಮಾಣಕಾರ್ಯ ನಡೆಯಿತು ಅನ್ನುತ್ತಾರೆ.

ತತೋಫ ಗುಹೆಯ ಮೇಲ್ಬಾಗದಲ್ಲಿ ಗಿಳಿಯ ಕೆತ್ತನೆಗಳಿವೆ. ಎರಡುದ್ವಾರ ಪಾಲಕರ ಚಿತ್ರಗಳೂ ಇವೆ. ಗುಹೆಯೊಳಗೆ ಸರಳು, ಕಮಾನು-ಕಳಸಗಳು ಇವೆ. ಒಳಗೆ ನಾಯಕಿಯರು, ಗಂಧರ್ವರು, ಬೇರೆ ಬೇರೆ ಪ್ರಾಣಿ-ಪಕ್ಷಿಗಳು, ಚೈತ್ಯ, ಕಮಾನು ಮತ್ತು ಇತರ ವಿನ್ಯಾಸಗಳೂ ಇವೆ. ತೊಲೆಗಳು ಮತ್ತು ಬಾಗಿದ ಕಮಾನುಗಳೂ ಇವೆ. ಅನಂತ ಗುಹೆಯಲ್ಲಿ ಹೆಂಗಸರು, ಆನೆಗಳು ಮತ್ತು ಬಾತುಕೋಳಿಗಳ ಚಿತ್ರಗಳಿವೆ. ತೆಂತೂಲಿ ಗುಹೆಯಲ್ಲಿ ಕಲ್ಲಿನಿಂದ ನಿರ್ಮಿಸಿದ ಏಕಮಾತ್ರ ಕೋಣೆಯಿದೆ. ಇಲ್ಲಿ ಎರಡು ಮಾಳಿಗೆಗಳಿವೆ. ಲಲಾಟೇಂದು ಕೇಶರೀ ಗುಹೆಯಲ್ಲಿ ರಿಷಭನಾಥನ ಎರಡು ಮೂರ್ತಿಗಳು ಮತ್ತು ಪಾರ್ಶ್ವ ನಾಥನ ಎರಡು ಮೂರ್ತಿಗಳಿವೆ. ಇಲ್ಲಿಕಲ್ಲಿನಿಂದ ನಿರ್ಮಿಸಿದ ಕಂಬದ ಮೇಲೆ ನಿಂತ ಒಂದೇ ಕೋಣೆಯಿದೆ. ಇದನ್ನು 11ನೆಯ ಶತಮಾನದಲ್ಲಿ ಸೇರಿಸಲಾಯಿತು ಎನ್ನುತ್ತಾರೆ. ಖಂಡಗಿರಿಯ ತುದಿಯಲ್ಲಿ ಒಂದು ಬೃಹತ್‌ ಜೈನ ದೇವಾಲಯವಿದೆ. ಅದರ ಜೀರ್ಣೋದ್ಧಾರ ಕ್ರಿಯೆ ನಡೆಯುತ್ತ ಇದ್ದುದರಿಂದ ದೇವಸ್ಥಾನದ ಒಳಗನ್ನು ನಮ್ಮಿಂದ ನೋಡಲಾಗಲಿಲ್ಲ.

ಗುಹೆಗಳ ವೀಕ್ಷಣೆಯ ನಂತರ ನಾವು ಭುವನೇಶ್ವರದ ರೈಲ್ವೇ ಸ್ಟೇಷನ್ ಬಳಿ ಇರುವ ಹೋಟೆಲ್‌ ಎಕ್ಸೆಲೆನ್ಸಿ ಎಂಬ ಲಕ್ಷ್ಮರಿ ಹೋಟೆಲಿನಲ್ಲಿ ಚೆಕ್-ಇನ್‌ ಆದೆವು. ತಂಡದ ಅಡುಗೆಯವರು ರುಚಿಕರವಾದ ಊಟವನ್ನು ಸಿಹಿಯೊಂದಿಗೆ ನಮಗಾಗಿ ಸಿದ್ಧ ಪಡಿಸಿದ್ದರು. ಊಟ ಮಾಡಿ ಸ್ವಲ್ಪ ಹೊತ್ತುರೆಸ್ಟ್ತೆಗೆದುಕೊಂಡು ಮೂರು ಗಂಟೆಗೆ ಮತ್ತೆ ನಮ್ಮತಿರುಗಾಟ ಆರಂಭಿಸಿದೆವು. ಮೊದಲು ಹೋಗಿದ್ದು ಧವಳಗಿರಿಯಲ್ಲಿರುವ ಶಾಂತಿಯ ಸ್ತೂಪಕ್ಕೆ. ಇದರ ಸ್ಥಾಪನೆಯ ಹಿಂದೆ ಸಾಮ್ರಾಟ್ ಅಶೋಕನ ಕಥೆಯಿದೆ. ಅಶೋಕನು ಎಲ್ಲಾ ರಾಜ್ಯಗಳನ್ನು ವಶಪಡಿಸಿಕೊಂಡು ಕೊನೆಗೆ ಕಳಿಂಗದೇಶ(ಈಗಿನ ಒಡಿಶಾ)ವೊಂದು ಬಾಕಿ ಉಳಿದಿದೆಯಲ್ಲಾ ಎಂದು ಆ ಪುಟ್ಟದೇಶದ ಮೇಲೆ ದಾಳಿ ಮಾಡಿದ. ಸ್ವಾಭಿಮಾನಿ ಕಳಿಂಗದೇಶ ತನ್ನ ಹಿಡಿದ ಪಟ್ಟು ಬಿಡಲಿಲ್ಲ. ಘನ ಘೋರಯುದ್ಧದಲ್ಲಿ ಕಳಿಂಗರು ಸೋತರು. ಲಕ್ಷಾಂತರ ಹೆಣಗಳುರುಳಿದವು. ರಕ್ತದ ಹೊಳೆಯೇ ಹರಿಯಿತು. ಕಳಿಂಗರು ಸೋತ ಕೊನೆಯ ಸ್ಥಳ ಈ ಧವಳ ಗಿರಿ. ಅಲ್ಲಿ ಬೆಟ್ಟದ ತುದಿಯಲ್ಲಿ ನಿಂತು ಅಶೋಕ ಕೆಳಗೆ ನೋಡಿದ. ನೋಡಿದರೆ ಹೆಣಗಳ ರಾಶಿಯ ಹೃದಯ ವಿದ್ರಾವಕದೃಶ್ಯ..!ತಕ್ಷಣ ಅವನಿಗೆ ತನ್ನ ತಪ್ಪಿನ ಅರಿವಾಯಿತು. ಅಧಿಕಾರ-ಐಶ್ವರ್ಯ-ರಾಜ್ಯಎಲ್ಲವೂ ಶಾಶ್ವತವಲ್ಲ, ಬರೇ ಶೂನ್ಯ ಎಂಬ ಭಾವನೆ ಬಂತು. ಅವನು ತಕ್ಷಣವೇ ತನ್ನ ಸಾಮ್ರಾಜ್ಯ ವಿಸ್ತರಣೆಯ ಕೆಲಸವನ್ನು ನಿಲ್ಲಿಸಿ ಅಹಿಂಸೆಯನ್ನು ಬೋಧಿಸುವ ಬೌದ್ಧಧರ್ಮಕ್ಕೆ ಶರಣಾದ. ಇಡೀ ಜಗತ್ತಿನಲ್ಲಿಯೇ ಶಾಂತಿ ನೆಲೆಸಲಿ ಎಂಬ ಉದ್ದೇಶದಿಂದ ಅಲ್ಲಲ್ಲಿ ಈ ರೀತಿಯ ಶಾಂತಿಯ ಸ್ತೂಪಗಳನ್ನು ನಿರ್ಮಿಸಿದ.

ಧವಳಗಿರಿಯು ಭುವನೇಶ್ವರ ನಗರದಿಂದ ಪುರಿಗೆ ಹೋಗುವ ದಾರಿಯಲ್ಲಿ ಸುಮಾರು 7 ಕಿ.ಮೀ.ದೂರದ ದಯಾ ನದಿಯ ದಡದಲ್ಲಿದೆ. ಇಲ್ಲಿ ಅತ್ಯಂತ ಹಳೆಯದಾದ ದೊಡ್ಡದೊಂದು ಬುದ್ಧನ ಮೂರ್ತಿಯಿದೆ. ಶಿಲೆಯಿಂದ ಕೆತ್ತಿದ ಒಂದು ಆನೆಯ ಮೂರ್ತಿಯೂ ಇದೆ. ಇಡೀ ಸ್ತೂಪವು ಅರ್ಧ ಗೋಳಾಕೃತಿಯಲ್ಲಿದೆ. ಕಲ್ಲಿನ ಹಲಗೆಗಳಲ್ಲಿ ಬುದ್ಧನ ಹೆಜ್ಜೆ ಗುರುತುಗಳು ಮತ್ತು ಬೋಧಿ ವೃಕ್ಷಗಳಿವೆ. ಅದೇ ರೀತಿ ಅಶೋಕನು ಬುದ್ಧನಿಗೆ ಶರಣಾಗಿ ತನ್ನ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟ ಚಿತ್ರವೂ ಇದೆ. ಶಾಂತಿಯ ಸ್ತೂಪವನ್ನು ಶಾಂತಿ-ಸಂಪತ್ತುಗಳ ಸಂಕೇತವಾಗಿ ಮತ್ತು ಬೌದ್ಧಧರ್ಮ ಸ್ಥಾಪನೆಯಾಗಿ 2500 ವರ್ಷಗಳಾದ ನೆನಪಿಗಾಗಿ ಸ್ಥಾಪಿಸಿದ್ದಾರೆ. ಇದು ಜಪಾನ್-ಭಾರತಗಳ ನಡುವಣ ಸೌಹಾರ್ದ ಸಂಬಂಧದ ಸಂಕೇತವೂ ಆಗಿದೆ. ಇಲ್ಲಿ ಸಂಜೆ ಹೊತ್ತು ಸುಡುಮದ್ದು -ಬೆಳಕುಗಳ ಪ್ರದರ್ಶನವಿರುತ್ತದೆ. ಈ ಸ್ತೂಪದ ಬಲ ಬದಿಯಲ್ಲಿ ಹಿಂದೆ ಒಂದು ಶಂಕರಲಿಂಗ ದೇವಸ್ಥಾನವೂ ಇದೆ. ಇಲ್ಲಿಗೆ ಹಿಂದೂಗಳೂ ಬೌದ್ಧರೂ ಎಲ್ಲರೂ ಹೋಗುತ್ತಾರೆ. ಇಲ್ಲಿಗೆ ಸಾವಿರಾರು ಶರಣರು ಬರುತ್ತಿರುತ್ತಾರೆ. ಇಲ್ಲಿ ಶಾಂತಿಯ ಸ್ತೂಪವನ್ನು ಕಟ್ಟುವಲ್ಲಿ ಅಶೋಕನಿಗೆ ಜಪಾನಿನ ಗುರೂಜಿಯೊಬ್ಬರು ಸಹಾಯ ಮಾಡಿದರು. ಇಲ್ಲಿ ಅಶೋಕನ ಬಹಳ ಮುಖ್ಯವಾದ ಒಂದು ಶಾಸನವೂ ಇದೆ. ಇಲ್ಲಿಗೆ ಎಲ್ಲ ಧರ್ಮಗಳ ಎಲ್ಲ ತಲೆಮಾರುಗಳ ಅನುಯಾಯಿಗಳೂ ಬರುತ್ತಾರೆ.

ಅಲ್ಲಿಂದ ಮುಂದೆ ನಾವು ಜಗತ್ಪ್ರಸಿದ್ಧವೂ ಭವ್ಯವೂ ಆದ ಲಿಂಗರಾಜ ದೇವಸ್ಥಾನವನ್ನು ನೋಡಲು ಹೋದೆವು. ಇಲ್ಲಿ ಯಾತ್ರಿಕರನ್ನು ತನ್ನ ನೂರಾರು ವೈಶಿಷ್ಟ್ಯಗಳಿಂದ ಸೆಳೆಯುವ ಶಿವ ದೇವಾಲಯವಿದೆ. ಶಿವನ ಪತ್ನಿ ಪಾರ್ವತಿ ದೇವಿಗೂ ಒಂದು ಗುಡಿಯಿದೆ. ಪಾರ್ವತಿಗೆ ಇಲ್ಲಿ ಅನ್ನಪೂರ್ಣೆ ಮತ್ತು ಗಿರಿಜೆ ಎಂಬ ಹೆಸರುಗಳಿವೆ. ದೇವಸ್ಥಾನದ ಕೇಂದ್ರ ಗೋಪುರದ ಎತ್ತರ 180 ಅಡಿ. ಕಳಿಂಗ ಶೈಲಿಯಲ್ಲೇ ದೇವಸ್ಥಾನವು ಕಟ್ಟಲ್ಪಟ್ಟಿದೆ. ಮಧ್ಯಕಾಲೀನ ಯುಗದಲ್ಲಿ ತನ್ನ ಶಿಖರವನ್ನು ತಲುಪಿದ ವಾಸ್ತು ಪರಂಪರೆ ಇಲ್ಲಿದೆ. ಇದನ್ನು ಸೋಮವಂಶಿ ರಾಜವಂಶದ ರಾಜರು ಮತ್ತು ಮುಂದೆ ಗಂಗರಸರು ಕಳಿಂಗ ವಿಶಿಷ್ಟವಾದ ದ್ಯೂಲಾ ಶೈಲಿಯಲ್ಲಿ ಕಟ್ಟಿಸಿದರು. ವಿಮಾನ( ಗರ್ಭಗೃಹದ ರಚನೆ). ಜಗಮೋಹನ( ಸಭಾ ಭವನ), ನಟ ಮಂದಿರ ( ಉತ್ಸವ ಭವನ), ಭೋಗಮಂಡಪ( ಪ್ರಸಾದ ಭವನ)ಎಂದು ಹೀಗೆ ನಾಲ್ಕು ವಿಭಾಗಗಳು ಇಲ್ಲಿವೆ. ಪ್ರತಿಯೊಂದು ಅಂಶವೂ ತನ್ನ ಹಿಂದಿನದ್ದಕ್ಕಿಂತ ಹೆಚ್ಚು ಎತ್ತರವಿದೆ. ದೇವಸ್ಥಾನದ ಆವರಣದಲ್ಲಿ 108 ಇತರ ಗುಡಿಗಳಿವೆ. ಸುತ್ತಲೂ ಬೃಹತ್‌ ಆವರಣಗೋಡೆಯಿದೆ.

13ನೆಯ ಶತಮಾನದ "ಏಕಾಮ್ರ ಪುರಾಣ" ಎಂಬ ಒಂದು ಸಂಸ್ಕೃತ ಬರಹದ ಪ್ರಕಾರ ಲಿಂಗರಾಜನು ಮೂಲತಃ ಒಂದು ಮಾವಿನ ಮರದಲ್ಲಿ ಇದ್ದುದರಿಂದ ಭುವನೇಶ್ವರಕ್ಕೆ ಏಕಾಮ್ರ ಕ್ಷೇತ್ರವೆಂಬ ಹೆಸರೂ ಇದೆ. ಪೂಜೆಗಳ ಆಚರಣೆಯಲ್ಲಿ ದೇವಸ್ಥಾನವು ಭುವನೇಶ್ವರದ ಇತರ ದೇವಸ್ಥಾನಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ಸಕ್ರಿಯವಾಗಿದೆ. ದೇವಸ್ಥಾನದಲ್ಲಿ ವಿಷ್ಣುವಿನ ಮೂರ್ತಿಯೂ ಇದೆ. ಪುರಿಯ ಜಗನ್ನಾಥ ಕ್ಷೇತ್ರವನ್ನು ಕಟ್ಟಿಸಿದ ಗಂಗರಸರು ಶ್ರೀವೈಷ್ಣವ ಪಂಥದ ಉದಯಕ್ಕೋಸ್ಕರ ಇಲ್ಲಿ ವಿಷ್ಣುಮೂರ್ತಿಯನ್ನು ಸ್ಥಾಪಿಸಿದ್ದಾಗಿರಬಹುದು. ಕ್ಷೇತ್ರದ ಕೇಂದ್ರವಾದ ಲಿಂಗರಾಜ ದೇವಾಲಯದಲ್ಲಿ ಶಿವರಾತ್ರಿ ಹಬ್ಬವನ್ನು ಪ್ರಮುಖ ಹಬ್ಬವನ್ನಾಗಿ ಆಚರಿಸುತ್ತಾರೆ.

ಲಿಂಗರಾಜ ದೇವಾಲಯದ ಆಡಳಿತವನ್ನು ವಿಶ್ವಸ್ಥ ಮಂಡಳಿ ಮತ್ತು ಭಾರತೀಯ ಪುರಾತತ್ವ ಇಲಾಖೆಯವರು ಜಂಟಿಯಾಗಿ ನೋಡಿಕೊಳ್ಳುತ್ತಾರೆ. ದೇವಸ್ಥಾನದ ಆವರಣದೊಳಕ್ಕೆ ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ. ಆದರೆ ಗೋಡೆಯ ಬದಿಯಲ್ಲಿ ಒಂದು ವೀಕ್ಷಕ ವೇದಿಕೆಯನ್ನು ಕಟ್ಟಿದ್ದಾರೆ. ಅಲ್ಲಿ ನಿಂತರೆ ದೇವಸ್ಥಾನದ ಪ್ರಮುಖ ಭಾಗಗಳು ಕಾಣಿಸುತ್ತವೆ. ಈ ವೇದಿಕೆಯನ್ನು ಹಿಂದೆ ಬ್ರಿಟಿಷ್ ವೈಸೆರಾಯ್‌ ಆಗಿದ್ದ ಲಾರ್ಡ್ಕರ್ಝನ್ ಬಂದಾಗ ಕಟ್ಟಲಾಗಿತ್ತು. ದೇವಸ್ಥಾನವನ್ನು 11ನೆಯ ಶತಮಾನದಲ್ಲಿ ಕಟ್ಟಲಾಗಿದೆ ಎಂದು ಹೇಳಿದರೂ 7ನೆಯ ಶತಮಾನದ ಕೆಲವು ಸಂಸ್ಕೃತ ಬರಹಗಳ ಪ್ರಕಾರ ಇದನ್ನು 6ನೇ ಶತಮಾನದಲ್ಲೇ ಕಟ್ಟಲಾಗಿತ್ತು ಅನ್ನುವ ಪ್ರತೀತಿಯೂ ಇದೆ. ಸಭಾ ಭವನ, ಗರ್ಭಗೃಹ ಮತ್ತು ಗೋಪುರಗಳನ್ನು 11ನೆಯ ಶತಮಾನದಲ್ಲೂ ಭೋಗ ಮಂಟಪವನ್ನು 12ನೆಯ ಶತಮಾನದಲ್ಲೂ ಕಟ್ಟಿದರೆಂದು ಹೇಳುತ್ತಾರೆ. ಲಿಂಗರಾಜ ದೇವಸ್ಥಾನವು ಕಟ್ಟಿ ಮುಗಿಯುವ ಹೊತ್ತಿಗೆ ಆ ಪ್ರದೇಶದಲ್ಲಿ ವೈಷ್ಣವ ಪಂಥ ಬೆಳವಣಿಗೆ ಸಾಧಿಸಿಯಾಗಿತ್ತು. ಹಾಗೆ ವಿಷ್ಣು ಮತ್ತು ಶಿವರು ಜತೆಯಾಗಿ ಅಸ್ತಿತ್ವಕ್ಕೆ ಬಂದಿದ್ದರು. ಗಂಗರಸರು ಶೈವ, ವೈಷ್ಣವ ಮತ್ತು ಶಕ್ತಿ ಪಂಥಗಳ ಅನುಯಾಯಿಗಳಾಗಿದ್ದರು. ಪುರಿಯಲ್ಲಿ ಕೂಡಾ 12ನೆಯ ಶತಮಾನದಲ್ಲಿ ಜಗನ್ನಾಥ ಕ್ಷೇತ್ರವು ಅಸ್ತಿತ್ವಕ್ಕೆ ಬಂತು.

ಕೆಲವು ಅಂಕಿ-ಅಂಶಗಳ ಪ್ರಕಾರ ಲಿಂಗರಾಜ ದೇವಸ್ಥಾನವನ್ನು ಸೋಮವಂಶಿ ರಾಜಯಯಾತಿ (1015-1040) 11ನೆಯ ಶತಮಾನದಲ್ಲಿಕಟ್ಟಿದ. ಯಯಾತಿಕೇಶರಿ ತನ್ನ ರಾಜಧಾನಿಯನ್ನು ಜೈಪುರದಿಂದ ಏಕಾಮ್ರ ಪುರವೆಂಬ ಭುವನೇಶ್ವರಕ್ಕೆ ವರ್ಗಾಯಿಸಿದ. ಬ್ರಹ್ಮ ಪುರಾಣದಲ್ಲಿ ಏಕಾಮ್ರ ಕ್ಷೇತ್ರವು ಒಂದು ಪ್ರಾಚೀನ ನಗರ. ಸೋಮವಂಶಿ ವಂಶದ ಒಬ್ಬ ರಾಣಿ ಅದನ್ನು ಈ ದೇವಸ್ಥಾನಕ್ಕೆ ಕೊಡುಗೆಯಾಗಿತ್ತಳು. ದೇವಸ್ಥಾನಕ್ಕೆ ಸೇರಿದ ಬ್ರಾಹ್ಮಣರಿಗೆ ತುಂಬಾ ಅನುದಾನ ಸಿಕ್ಕಿತು. ಶಕವರ್ಷ 1094ರಲ್ಲಿ ಎರಡನೆಯ ರಾಜ ರಾಜನಿಂದ ಧಾರಾಳ ಚಿನ್ನದ ನಾಣ್ಯಗಳು ಉಡುಗೊರೆಯಾಗಿ ಸಿಕ್ಕಿದ್ದವೆಂದು ಒಂದು ಶಾಸನ ಹೇಳುತ್ತದೆ.

ಲಿಂಗರಾಜದೇವಸ್ಥಾನವು ಹಿಂದೂ ದೇವಸ್ಥಾನಗಳಲ್ಲೇ ಅತಿ ಸುಂದರವಾದದ್ದು ಎಂದು ಹೇಳುತ್ತಾರೆ. ಇದರ ಆವರಣ ಗೋಡೆಯು ಕೆಂಪು ಇಟ್ಟಿಗೆಯದ್ದಾಗಿದ್ದು ಗೋಡೆ ಏಳೂವರೆ ಅಡಿಯಷ್ಟು ದಪ್ಪವಿದೆ. ಗಡಿ ಗೋಡೆಯ ಒಳಮುಖದಲ್ಲಿ ವೈರಿಗಳ ದಾಳಿಯಿಂದ ರಕ್ಷಣೆಗಾಗಿ ಒಂದು ತಾರಸಿ ಇದೆ. 148 ಅಡಿ ಎತ್ತರದ ಗೋಪುರದಲ್ಲಿ ಪ್ರತಿ ಇಂಚೂ ಶಿಲ್ಪಕಲೆಯಿಂದ ತುಂಬಿಕೊಂಡಿದೆ. ಪ್ರವೇಶದ್ವಾರದ ಬಾಗಿಲನ್ನು ಶ್ರೀಗಂಧದಿಂದ ಮಾಡಲಾಗಿದೆ.

ದೇವಸ್ಥಾನವು ಪೂರ್ವಕ್ಕೆ ಮುಖ ಮಾಡಿದ್ದು ಅದನ್ನು ಮರಳುಕಲ್ಲು ಮತ್ತು ಇಟ್ಟಿಗೆಗಳಿಂದ ಕಟ್ಟಲಾಗಿದೆ. ಮುಖ್ಯದ್ವಾರ ಪೂರ್ವಕ್ಕಿದೆ. ಉತ್ತರ ಮತ್ತು ದಕ್ಷಿಣಗಳಲ್ಲಿ ಚಿಕ್ಕ ದ್ವಾರಗಳಿವೆ. ನೃತ್ಯ ಭವನವು ಆ ಕಾಲದಲ್ಲಿ ದೇವದಾಸಿ ಪದ್ಧತಿಗೆ ಸಿಗತೊಡಗಿದ ಮಹತ್ವವನ್ನು ತಿಳಿಸುತ್ತವೆ. ಭೋಗ ಮಂಟಪದಿಂದ ಗರ್ಭಗೃಹದ ಮೇಲಿನ ಗೋಪುರಕ್ಕೆ ಎತ್ತರವು ಹೆಚ್ಚುತ್ತ ಹೋಗುತ್ತದೆ. ಗರ್ಭಗೃಹದ ಒಳಬದಿಯಲ್ಲಿ ಗೋಪುರದ ಗೋಡೆಗಳ ತುಂಬಾ ಸ್ತ್ರೀಯರ ವಿವಿಧ ಭಂಗಿಗಳ ಕೆತ್ತನೆಗಳಿವೆ. ದೇವಸ್ಥಾನದ ಅಂಗಳವು ವಿಶಾಲವಾಗಿದ್ದು ಅಲ್ಲಿ ಹಲವಾರು ಸಣ್ಣ ಸಣ್ಣ ಗುಡಿಗಳಿವೆ.

ಏಕಾಮ್ರ ಪುರಾಣದ ಪ್ರಕಾರ ಇಲ್ಲಿನ ಪ್ರಧಾನ ದೇವತೆ ಲಿಂಗ ರೂಪಿಯಾಗಿ ಕಾಣಿಸಿಕೊಂಡದ್ದಲ್ಲ. ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿ ಯುಗಗಳಲ್ಲಷ್ಟೇ ಲಿಂಗರೂಪದಲ್ಲಿ ಬಂತು ಅನ್ನುತ್ತದೆ. ಆರಂಭದಲ್ಲಿ ಅದು ಪ್ರಾಕೃತಿಕವಾಗಿ ಆಕಾರವಿಲ್ಲದ ಒಂದು ಕಲ್ಲಿನ ರೂಪದಲ್ಲಿತ್ತಂತೆ. ಅಂಥ ಲಿಂಗವನ್ನು ಕೃತಿವಾಸ ಅಥವಾ ಸ್ವಯಂಭೂ ಎಂದು ಕರೆಯುತ್ತಾರೆ. ಇಂಥ ಲಿಂಗವು ದೇಶದ 64 ಕಡೆಗಳಲ್ಲಿ ಇವೆ. ಗಂಗ ವಂಶದವರು 12ನೆಯ ಶತಮಾನದಲ್ಲಿ ಆಳ್ವಿಕೆಗೆ ಬಂದ ನಂತರ ಅಲ್ಲಿಗೆ ವೈಷ್ಣವ ಪಂಥವರು ಜಗನ್ನಾಥನನ್ನು ಕೊಂಡುತಂದರು. ಗಂಗರಸರು ದೇವಸ್ಥಾನವನ್ನು ಪುನರ್ನವೀಕರಣ ಮಾಡಿ ಜಯ ಮತ್ತು ಪ್ರಚಂಡರೆಂಬ ದ್ವಾರಪಾಲಕರ ಮೂರ್ತಿಗಳನ್ನು ಸ್ಥಾಪಿಸಿದರು. ದೇವಸ್ಥಾನದ ಧ್ವಜವು ಸಾಮಾನ್ಯವಾಗಿ ಶಿವದೇವಾಲಯಗಳಲ್ಲಿರುವಂತೆ ತ್ರಿಪಿಠಕದ ಮೇಲೆ ನಿಲ್ಲದೆ ಒಂದು ಪಿನಾಕ ಧನುಸ್ಸಿನ ಮೇಲೆ ನಿಂತಿದೆ.

ನಮ್ಮಗೈಡ್‌ ಇಷ್ಟೆಲ್ಲ ವಿವರಿಸಿ ನಮ್ಮೆಲ್ಲರನ್ನು ದೇವಸ್ಥಾನಕ್ಕೆ ಒಂದು ಸುತ್ತು ಹಾಕಿಸಿ ಒಳಗೆ ಕರೆದುಕೊಂಡು ಹೋಗಿ ಎಲ್ಲವನ್ನೂ ತೋರಿಸಿದರು. ಅಲ್ಲಿಂದ ಹೊರಗೆ ಬರುವಾಗಲೇ ಗಂಟೆ ಆರಾಗಿತ್ತು. ಭುವನೇಶ್ವರದಲ್ಲಿ ಸಂಜೆ ಐದು ಗಂಟೆಗೆಲ್ಲಾ ಕತ್ತಲಾಗಿ ಬಿಡುತ್ತದೆ. ನಾವು ಬೇಗ ಬೇಗನೆ ಬಸ್ಸು ಹತ್ತಿ ಹೋಟೆಲಿಗೆ ಬಂದು ಊಟ ಮಾಡಿ ಮಲಗಿದೆವು. ಮರುದಿನ ಸುಮಾರು ಎಂಟು ಗಂಟೆ ಪ್ರಯಾಣವೇ ಇರುತ್ತದೆಂದೂ ಅದಕ್ಕಾಗಿ ಬೆಳಗ್ಗೆ ಬೇಗ ಹೊರಟು ಹೋಟೆಲ್‌ ಚೆಕೌಟ್ ಮಾಡಬೇಕೆಂದೂ ಶಾಲಿನಿ ಮೇಡಂ ಹೇಳಿದರು. ಮರು ದಿವಸ ಬೆಳಗ್ಗೆ ಏಳು ಗಂಟೆಗೇ ಹೊರಟು ನಾಲ್ಕು ಗಂಟೆ ಪ್ರಯಾಣ ಮಾಡಿ ನಾವು ಹೋಗಿದ್ದು ಪುರುಷೋತ್ತಮ ಪುರ ಎಂಬ ಹಳ್ಳಿಯಲ್ಲಿ ಕುಮಾರಿ ಬೆಟ್ಟದ ಮೇಲಿರುವತಾರಾತಾರಿಣಿ ಶಕ್ತಿಪೀಠಕ್ಕೆ. ಇದು ಋಷಿಕುಲ್ಯಾ ನದೀತಟದಲ್ಲಿ, ಕುಮಾರಿಬೆಟ್ಟದ ತುದಿಯಲ್ಲಿರುವ ಆದಿಶಕ್ತಿ ದೇವಸ್ಥಾನ. ಒಡಿಶಾ ದಗಂಜಮ್‌ ಜಿಲ್ಲೆಯಲ್ಲಿ ಬ್ರಹ್ಮಪುರ ಎಂಬ ನಗರದಿಂದ 28ಕಿ.ಮೀ ದೂರದಲ್ಲಿದೆ. ರಸ್ತೆಯಲ್ಲಿ ಮೇಲೇರಬೇಕಾದ್ದರಿಂದ ನಮ್ಮ ಹೆವಿ ವಾಹನಗಳು ಹೋಗುವುದಿಲ್ಲ, ಸರಕಾರಿ ಸಿಟಿ ಬಸ್ಸಿನಲ್ಲೇ ಹೋಗಬೇಕು ಎಂದಾಯಿತು. ಆ ಬಸ್ಸಿನಲ್ಲೋ ಉಸಿರು ಕಟ್ಟುವಷ್ಟು ನೂಕು ನುಗ್ಗಲು. ಹೇಗೋ ಎರಡು ಕಿ.ಮೀ.ಪ್ರಯಾಣ ಮಾಡಿ ಗಮ್ಯವನ್ನು ತಲುಪಿದೆವು. ಆದರೆ ತುಂಬಾ ತಿರುವುಗಳ ಮೂಲಕ ಮೇಲೆ ಹತ್ತುವ ಆ ದಾರಿಯ ಇಕ್ಕೆಲಗಳಲ್ಲೂ ಹಸಿರು ಕಾಡುದಟ್ಟವಾಗಿದ್ದು ಚಾಮುಂಡಿ ಬೆಟ್ಟಕ್ಕೆ ಹೋಗುವ ದಾರಿಯನ್ನು ನೆನಪಿಸಿತು. ಶಕ್ತಿಪೀಠಗಳೆಂದರೆ ದಕ್ಷಯಜ್ಞದ ಸಂದರ್ಭದಲ್ಲಿ ತನಗಾದ ಅಪಮಾನವನ್ನು ಸಹಿಸಲಾರದೆ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಹಾರಿ ಸತ್ತಾಗ ಶಿವನು ಸಿಟ್ಟಾಗಿ ಅವಳನ್ನೆತ್ತಿಕೊಂಡು ರುದ್ರತಾಂಡವ ನೃತ್ಯ ಮಾಡಿ ಎಲ್ಲೆಂದರಲ್ಲಿ ತಿರುಗಾಡಿದಾಗ ಅವಳ ದೇಹದ ವಿವಿಧ ಭಾಗಗಳು ಅಲ್ಲಲ್ಲಿ ಬಿದ್ದು ಅಲ್ಲಿ ದೇವಸ್ಥಾನಗಳು ಹುಟ್ಟಿಕೊಂಡವು ಎನ್ನುವುದು ಕಥೆ. ಭಾರತದಾದ್ಯಂತ-ಮುಖ್ಯವಾಗಿ ಉತ್ತರ ಭಾರತದಲ್ಲಿ- ಒಟ್ಟು 51 ಶಕ್ತಿ ಪೀಠಗಳಿವೆಯಂತೆ. ತಾರಾತಾರಿಣಿಯಲ್ಲಿ ದೇವಿಯ ಸ್ತನಗಳು ಬಿದ್ದವೆಂದು ಪ್ರತೀತಿ. ಈ ಶಕ್ತಿಪೀಠವು ಪ್ರಮುಖವಾದ ನಾಲ್ಕು ಆದಿಶಕ್ತಿ ಪೀಠಗಳಲ್ಲೊಂದು. ಕಾಮಾಖ್ಯ ದೇವಾಲಯದಲ್ಲಿದೇ ವಿಯಯೋ ನಿಭಾಗ, ವಿಮಲಾ ದೇವಾಲಯದಲ್ಲಿ ಅವಳ ಪಾದಗಳು ಮತ್ತು ಕಾಳಿಘಾಟ್‌ನ ಕಾಳಿ ದೇವಾಲಯದಲ್ಲಿ ಅವಳ ಬಲಪಾದದ ಹೆಬ್ಬೆರಳು ಬಿದ್ದಿತ್ತೆಂದೂ ನಂಬಿಕೆಯಿದೆ. ತಾರತಾರಿಣಿ ಪೀಠದಗರ್ಭಗೃಹದಲ್ಲಿ ಕಲ್ಲುಗಳಿಂದಾದ ಸ್ತ್ರೀಮುಖಗಳು ಚಿನ್ನ-ಬೆಳ್ಳಿ ಆಭರಣಗಳಿಂದ ಅಲಂಕೃತವಾಗಿದೆ. ಅವರ ಜ್ವಲಂತ ಪ್ರತಿಮೆಗಳನ್ನು ಸಂಕೇತಿಸುವ ಎರಡು ಹಿತ್ತಾಳೆಯ ತಲೆಗಳು ಇವುಗಳ ಮಧ್ಯೆ ಇವೆ. ಗರ್ಭಗೃಹದಲ್ಲಿ ಒಂದುಚಿಕ್ಕ ಬುದ್ಧನ ಪ್ರತಿಮೆಯಿದೆ.

ಶಕ್ತಿಪೀಠದ ಆರಾಧನೆಯು ಇಲ್ಲಿ ತಲೆತಲಾಂತರಗಳಿಂದ ನಡೆಯುತ್ತಲೇ ಬಂದಿದೆ. ಚೈತ್ರ ಮಾಸದ ಮಂಗಳವಾರಗಳಲ್ಲಿ ಇಲ್ಲಿ ಚೈತ್ರ ಜಾತ್ರೆ ಅಥವಾ ತಾರಾ ತಾರಿಣಿ ಜಾತ್ರೆ ನಡೆಯುತ್ತದೆ. ಈ ಅವಧಿಯಲ್ಲಿ ಮಕ್ಕಳ ತಲೆಗಳನ್ನು ಬೋಳಿಸಿದರೆ ಶುಭವೆಂದು ತಿಳಿಯಲಾಗುತ್ತದೆ. ಆದ್ದರಿಂದ ಚೈತ್ರ ಮಾಸದಲ್ಲಿ ಇಲ್ಲಿಗೆ ನೂರಾರು ಮಂದಿ ಕ್ಷೌರಿಕರನ್ನು ಕರೆಸಲಾಗುತ್ತದೆ. ಉತ್ಸವದ ಸಮಯದಲ್ಲಿ ವಿಶೇಷ ಖಿಚಡಿ ನೈವೇದ್ಯವನ್ನು ದೇವಿಗೆ ಅರ್ಪಿಸಲಾಗುತ್ತದೆ. ಪ್ರತಿ ತಿಂಗಳ ಸಂಕ್ರಾಂತಿಯಂದು ಇಲ್ಲಿ ಸಂಕ್ರಾಂತಿ ಮೇಳವನ್ನು ಆಚರಿಸುತ್ತಾರೆ. ಇದು ತಂತ್ರ ಸಾಧಕರಿಗೆ ಶುಭತರುವ ದಿನ. ಒಡಿಶಾದ ಮನೆಮನೆಗಳಲ್ಲಿ ತಾರಾ ತಾರಿಣಿದೇವಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ.

ಕುಮಾರಿ ಪರ್ವತವು ಹೆಚ್ಚು ಕಡಿಮೆ 708ಅಡಿ ಎತ್ತರವಾಗಿದೆ. ಈ ಪ್ರದೇಶದ ಸುತ್ತಮುತ್ತಲ ಭೂಮಿ ಸುಮಾರು 180 ಎಕರೆ ಇದೆ. ಈ ಪರ್ವತ ಪ್ರದೇಶದ ಪ್ರಕೃತಿ ಸೌಂದರ್ಯ ಅನುಪಮವಾಗಿದೆ. ನಿಸರ್ಗದ ಸೊಬಗೂ ದೇವಿಯ ದಿವ್ಯತೆಯೂ ನೋಡುಗನಿಗೆ ಅನನ್ಯ ಅನುಭವ ನೀಡುತ್ತದೆ. ಬೆಟ್ಟದ ಮೇಲೆ ಹೋಗಲು ರಸ್ತೆ ಇರುವುದರೊಂದಿಗೆ 999 ಮೆಟ್ಟಲುಗಳೂ ಇವೆ. ದೇವಸ್ಥಾನದ ಸುತ್ತುಮುತ್ತ ಅಗತ್ಯ ವಸ್ತುಗಳನ್ನು ಮಾರುವ ಅಂಗಡಿಗಳೂ ಇವೆ.

ತಾರಾ ತಾರಿಣಿದೇವಿಯನ್ನು ಶಕ್ತಿದೇವತೆಯನ್ನಾಗಿ ಪರಿವರ್ತಿಸಿದ್ದು ಒಂದು ಬುಡಕಟ್ಟುಜನಾಂಗ ಎಂದು ಹೇಳಲಾಗುತ್ತದೆ. ತಾರಾ ಬೌದ್ಧರ ಮಹಾಯಾನ ಪಂಥದ ಒಂದು ಮುಖ್ಯದೇವತೆಯ ಹೆಸರು. ಇದು ತಾರಾತಾರಿಣಿಯ ಮೇಲೆ ಬೌದ್ಧಧರ್ಮದ ಪ್ರಭಾವವನ್ನು ಸೂಚಿಸುತ್ತದೆ. ಬುಡಕಟ್ಟು ಸಂಸ್ಕೃತಿಯು ಬೌದ್ಧ ಸಂಸ್ಕೃತಿಯೊಂದಿಗೆ ಬಹಳ ಹಿಂದೆಯೇ ಬೆರೆತಿತ್ತು ಅನ್ನುವುದನ್ನುಇದು ಸೂಚಿಸುತ್ತದೆ.

ಬೌದ್ಧಧರ್ಮದ ನಂಬಿಕೆಯೊಂದಿಗೆ ತಾಂತ್ರಿಕ ಆಚರಣೆಗಳು ಹೇಗೆ ಸೇರಿಕೊಂಡವು ಅನ್ನುವುದಕ್ಕೆ ಐತಿಹಾಸಿಕ ದಾಖಲೆಗಳಿಲ್ಲ. ಚೀನಾ, ಟಿಬೆಟ್, ಸಿಂಹಳ, ನೇಪಾಳ ಮತ್ತು ಭಾರತಗಳಲ್ಲಿ ದೊರಕಿದ ಕೆಲವು ದಾಖಲೆಗಳಿಂದ ಕೆಲವು ವಿಚಾರಗಳನ್ನು ತರ್ಕಿಸಬಹುದು. ಹಾಗೆ ನೋಡಿದಾಗ ಅಶೋಕನ ಕಾಲದಲ್ಲಿ ಒಡಿಶಾದ ಗಂಜಮ್ ಎಂಬ ಈ ಜಿಲ್ಲೆಯಲ್ಲಿ ಬೌದ್ಧಧರ್ಮದ ಪ್ರಭಾವ ಬಹಳವಾಗಿತ್ತು. ಕಳಿಂಗದ ರಾಜಧಾನಿಯಾಗಿದ್ದ ಸಂಪಾ (ಈಗಿನ ಜಾವಗಢ) ಎಂಬಲ್ಲಿ ತಾರಾತಾರಿಣಿ ಬೆಟ್ಟದಿಂದ ಸುಮಾರು 4 ಕಿ.ಮೀ. ದೂರದಲ್ಲಿ ಅಶೋಕನ ವಿಶೇಷ ಕಲ್ಲಿನ ಸ್ತಂಭದಲ್ಲಿ ಇದು ಸ್ಪಷ್ಟವಾಗುತ್ತದೆ. ತಾರಾ ಬೌದ್ಧರ ದೇವತೆ.
ವಿಮಲ ಪಾದಖಂಡಂ ಚ/ಸ್ತನ ಖಂಡಂ ಚ ತಾರಿಣಿ/ಕಾಮಾಖ್ಯಾಯೋನಿ ಖಂಡಂ ಚ/
ಮುಖ ಖಂಡಂ ಚ ಕಾಳಿಕಾ/ ಅಂಗ ಪ್ರತ್ಯಂಗ ಸಂಗೇನ /ವಿಷ್ಣು ಚಕ್ರಕ್ಷತೇ ನ ಚ
ಮೇಲಿನ ಶ್ಲೋಕದ ಪ್ರಕಾರದೇವಿಯದೇಹದ ಭಾಗಗಳು ಛಿದ್ರವಾಗಿದ್ದು ವಿಷ್ಣುವಿನ ಸುದರ್ಶನಚಕ್ರದಿಂದ ಎಂಬ ಕಥೆ ವ್ಯಕ್ತವಾಗುತ್ತದೆ.

ಋಷಿ ಕುಲ್ಯಾ ನದಿಗೆ "ಗಂಗಯಾ ಶ್ರೇಷ್ಠ ಭಗಿನಿ" ಎಂಬ ಹೆಸರಿದೆ. ನೀಲ ಹೊದಿಕೆ ಹೊದ್ದುಕೊಂಡ ತಾರಿಣಿ ಪರ್ವತ ಒಂದು ಜೀವಂತ ಪ್ರತಿಮೆ. ಇಲ್ಲಿ ಪೂಜೆ ಮಾಡಿದರೆ ಚತುರ್ವಿಧ ಪುರುಷಾರ್ಥಗಳನ್ನು ಹೊಂದಬಹುದು ಎಂಬ ನಂಬಿಕೆಯಿದೆ.
ತಾರಾತಾರಿಣಿ ಶಕ್ತಿಪೀಠದಲ್ಲಿ ದೇವಿಯ ದರ್ಶನಕ್ಕೆ ಮಧ್ಯಾಹ್ನ ಹೊತ್ತು ತುಂಬಾ ದೊಡ್ಡಕ್ಯೂ ಇತ್ತು. ತುಂಬಾ ಹೊತ್ತು ಕಾದ ನಂತರ ಒಳಗೆ ಹೊಗುವ ಅವಕಾಶ ಸಿಕ್ಕಿತು. ನಾವು ಸ್ವಲ್ಪ ಹೊತ್ತು ದೇವಸ್ಥಾನದ ಆವರಣದಲ್ಲಿ ಸುತ್ತಾಡಿ ಮುಗಿಸಿ ಬಸ್ಸಿಗೆ ಕಾದೆವು. ಬಸ್ಸಿನಲ್ಲಿ ಬೆಟ್ಟ ಇಳಿದು ಅಲ್ಲೇ ಸಮೀಪವಿದ್ದ ಒಂದು ಹೋಟೆಲಿನಲ್ಲಿ ನಮ್ಮಅಡುಗೆಯವರು ಬಸ್ಸಿನಲ್ಲಿ ತಂದಿದ್ದ ಊಟ ಮಾಡಿದೆವು. ಬಿಸಿ ಬೇಳೆ ಭಾತ್ ಮತ್ತು ಮೊಸರನ್ನದರು ಚಿಕಟ್ಟಾದ ಸರಳ ಊಟ. ಊಟ ಮುಗಿಸಿ ಮತ್ತೆ ಪುರಿಯಕಡೆಗೆ ಪ್ರಯಾಣ ಬೆಳೆಸಿದೆವು. ದಾರಿಯುದ್ದಕ್ಕೂ ಎರಡೂ ಬದಿಗಳಲ್ಲಿ ಹಸಿರು ತುಂಬಿದ ಬತ್ತದ ಗದ್ದೆಗಳು. ಅಂಚುಗಳಲ್ಲಿ ಹೆಚ್ಚಾಗಿ ತಾಳೆ ಮರಗಳು. ಅಪರೂಪಕ್ಕೆತೆಂಗಿನ ಮರಗಳೂ ಇಲ್ಲದಿಲ್ಲ. ಪುರಿ ತಲುಪಿದಾಗ ಆರು ಗಂಟೆಯಾಗಿತ್ತು. ಸಮುದ್ರತೀರದ ಸುಂದರ ಹೋಟೆಲ್‌ಕೋಶಲ್‌ನಲ್ಲಿ ನಮಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಹೋಟೆಲಿನಲ್ಲಿ ಇಳಿದ ಕೂಡಲೇ ಅವರುಕೊಟ್ಟ ವೆಲ್ಕಂ ಡ್ರಿಂಕ್ (ತಂಪಾದ ಸಿಹಿಮಿಶ್ರಿತ ಜಲಜೀರಾ) ಕುಡಿದೆವು. ಸ್ವಲ್ಪ ಹೊತ್ತಿನಲ್ಲಿ ಪುರಿ ಜಗನ್ನಾಥ ದೇವಸ್ಥಾನವನ್ನು ನಮಗೆ ತೋರಿಸುವ ಓರ್ವ ಅರ್ಚಕ ಗೈಡ್ ಬಂದು ಮರುದಿನ ನಾವು ದೇವಸ್ಥಾನದಲ್ಲಿ ಮಾಡಬೇಕಾದ ಅನ್ನದಾನ ಸೇವೆ ಮತ್ತು ಸೂಖಾ ಪ್ರಸಾದಗಳ ಬಗ್ಗೆ ನಮಗೆ ತಿಳಿಹೇಳಿದರು. ಪುರಿಗೆ ಬಂದ ನಂತರ ದೇವರ ದರ್ಶನ, ಅನ್ನದಾನ, ಸಮುದ್ರಸ್ನಾನಗಳನ್ನು ಮಾಡಲೇ ಬೇಕು ಎಂದು ಸಲಹೆ ನೀಡಿದರು. ಮರುದಿನ ಭಾನುವಾರವಾದ್ದರಿಂದ ಎಂದಿಗಿಂತ ರಷ್ ಹೆಚ್ಚಿರಬಹುದು, ಬೆಳಗ್ಗೆ ಬೇಗ ಎದ್ದು ಹೊರಡಬೇಕು ಅಂದರು.

ಬೆಳಗ್ಗೆ ಐದು ಗಂಟೆಗೇ ರೆಡಿಯಾದ ನಾವು 5 ಕಿ.ಮೀ.ದೂರವಿದ್ದ ಜಗನ್ನಾಥ ದೇವಸ್ಥಾನಕ್ಕೆ ಬಸ್ಸು ಹೋಗಲು ಅನುಮತಿ ಇಲ್ಲದ್ದರಿಂದ ಅಟೊ ರಿಕ್ಷಾಗಳಲ್ಲಿ ಹೋದೆವು. ಗೈಡು ಅಲ್ಲಿ ನಮಗಾಗಿ ಕಾಯುತ್ತಿದ್ದರು. ಮೊದಲು ಪಶ್ಚಿಮ ದ್ವಾರದ ಮೂಲಕ ದೇವಸ್ಥಾನವನ್ನು ಪ್ರವೇಶಿಸಿದ ನಾವು ಗೈಡು ಸೂಚಿಸಿದಂತೆ ಒಂದೊಂದೇ ಮುಖ್ಯ ಗುಡಿಗಳನ್ನು ಸಂದರ್ಶಿಸುತ್ತ ನಡೆದೆವು. ಪೂರ್ವದ್ವಾರದಲ್ಲಿ ತುಂಬಾ ರಷ್‌ ಇರುತ್ತದೆ, ಆದ್ದರಿಂದ ಅಲ್ಲಿಗೆ ಆಮೇಲೆ ಹೋಗೋಣ ಅಂದರು. ಅಲ್ಲಿಗೆ ಪ್ರವೇಶಿಸುವಲ್ಲಿ ಒಂದು ಕಪ್ಪು ಶಿಲೆ(ಕಾಲಾಪತ್ಥರ್‌ಅಥವಾ ಯಮಶಿಲಾ) ಇದೆ, ಅದನ್ನು ಮೆಟ್ಟಬಾರದೆಂಬ ನಿಯಮವಿದೆ, ಯಾಕೆಂದರೆ ಮೆಟ್ಟಿದರೆ ದೇವಸ್ಥಾನ ದರ್ಶನ ಮಾಡಿದ ಪುಣ್ಯವೆಲ್ಲಾ ನಷ್ಟವಾಗಿ ಹೋಗುತ್ತದೆಂಬ ನಂಬಿಕೆಯಿದೆ ಅಂದರು.

ಜಗನ್ನಾಥ ದೇವಸ್ಥಾನವು ವಿಷ್ಣುವಿನ ಆವಾಸ ಸ್ಥಾನ. ದೇವಸ್ಥಾನದ ದಾಖಲೆಗಳ ಪ್ರಕಾರ ಇದನ್ನು ಆವಂತಿ ದೇಶದ ರಾಜಾಇಂದ್ರದ್ಯುಮ್ನನು ಕಟ್ಟಿಸಿದ. ಈಗಿರುವ ದೇವಸ್ಥಾನವನ್ನು 10ನೇ ಶತಮಾನದಿಂದ ತೊಡಗಿ ಆವರಣದಲ್ಲಿದ್ದ ಇತರ ದೇವಸ್ಥಾನಗಳ ಜತೆಗೆ ಪೂರ್ವ ಗಂಗವಂಶದ ಮೊದಲ ರಾಜ ಅನಂತವರ್ಮಚೋಡಗಂಗನು ಪುನರ್ನವೀಕರಣಗೊಳಿಸಿದನು. ದೇವಸ್ಥಾನದಲ್ಲಿ ಹೆಚ್ಚಿನ ಪೂಜಾ ವಿಧಿಗಳು ಮಹಾಯಾನ ತಂತ್ರದ ಪರಿಷ್ಕೃತ ರೂಪಗಳಾದ ಒಡಿಯಾನ ತಂತ್ರ ಹಾಗೂ ಬುಡಕಟ್ಟಿನ ಜನರು ನಂಬಿರುವ ಶಬರಿ ತಂತ್ರಗಳ ಮೇಲೆ ಆಧಾರಿತವಾಗಿವೆ. ಸ್ಥಳೀಯ ದಂತಕಥೆಗಳು ಇಲ್ಲಿನ ಮೂರ್ತಿಗಳನ್ನು ಆದಿವಾಸಿಗಳ ವಂಶದವರೊಂದಿಗೆ ತಳಕು ಹಾಕುತ್ತವೆ. ಈ ದೇವಸ್ಥಾನವು ವೈಷ್ಣವ ಪಂಥದ 108ಹೆಮ್ಮೆಯ ಕ್ಷೇತ್ರಗಳಲ್ಲಿ ಒಂದಾಗಿದೆ.
ಜಗನ್ನಾಥ ಕ್ಷೇತ್ರದ ರಥಯಾತ್ರಾ ಉತ್ಸವ ಪ್ರಸಿದ್ಧವಾಗಿದೆ. ಮೂರು ಮುಖ್ಯ ದೇವತೆಗಳನ್ನು ಅಲಂಕರಿಸಿ ರಥದಲ್ಲಿ ಕುಳ್ಳಿರಿಸಿ ಎಳೆಯುತ್ತಾರೆ. ಇಲ್ಲಿ ಪೂಜೆ ಮಾಡುವವರು ಭಿಲ್ಲ ಮತ್ತು ಶಬರ ಬುಡಕಟ್ಟು ಜನಾಂಗಕ್ಕೆ ಸೇರಿದ ಪುರೋಹಿತರು. ಇತರ ಹಿಂದೂ ದೇವಾಲಯಗಳಲ್ಲಿರುವಂತೆ ಇಲ್ಲಿಕಲ್ಲು ಅಥವಾ ಲೋಹಗಳಿಂದ ಮಾಡಿದ ಮೂರ್ತಿಗಳಿಲ್ಲ. ಬದಲಾಗಿ ಮರದ ಮೂರ್ತಿಗಳಿವೆ. ಮತ್ತು ಪ್ರತಿ 12-19 ವರ್ಷಗಳಿಗೊಮ್ಮೆ ತದ್ರೂಪಿ ಮೂರ್ತಿಗಳನ್ನು ತಯಾರಿಸಿ ಬದಲಾಯಿಸಿ ಇಡುವ ಪದ್ಧತಿ ಬೆಳೆದು ಬಂದಿದೆ. ಹಳೆಯ ಮೂರ್ತಿಗಳನ್ನು ಒಂದೆಡೆ ಸಮಾಧಿ ಮಾಡಿ ಇಡುತ್ತಾರೆ. ಆ ಸಮಾಧಿ ಪ್ರದೇಶ ಕೂಡಾ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.

ಜಗನ್ನಾಥ ದೇವಾಲಯವು ದೇಶದ ಪವಿತ್ರ ಚತುರ್ಧಾಮಗಳಲ್ಲಿ ಒಂದು. ಅನೇಕ ದಂತ ಕಥೆಗಳ ಪ್ರಕಾರ ಕೃಷ್ಣನ ನಿರ್ವಾಣದ ನಂತರ ಅವನ ಹೃದಯವನ್ನು ಇಲ್ಲಿ ತಂದು ಇಡಲಾಗಿದೆ. ಪ್ರತಿ ಏಳು ವರ್ಷಗಳಿಗೊಮ್ಮೆ ಅದನ್ನೂ ಬದಲಾಯಿಸುತ್ತಾರೆ. ವೈಷ್ಣವ ಪರಂಪರೆಯ ಈ ದೇವಾಲಯದೊಂದಿಗೆ ವೈಷ್ಣವ ಸಂತರಾದ ರಾಮಾನುಜಾಚಾರ್ಯ, ಮಧ್ವಾಚಾರ್ಯ, ನಿಂಬರಕಾಚಾರ್ಯ, ವಲ್ಲಭಾಚಾರ್ಯ, ಮತ್ತು ರಮಾನಂದರು ನಿಕಟವಾಗಿದ್ದರು. ರಾಮಾನುಜರು ದೇವಾಲಯದ ಆಗ್ನೇಯ ದಿಕ್ಕಿನಲ್ಲಿನ ಏಮಾರು ಮಠವನ್ನೂ, ಆದಿ ಶಂಕರಾಚಾರ್ಯರು ಗೋವರ್ಧನ ಮಠವನ್ನೂಇಲ್ಲಿ ಸ್ಥಾಪಿಸಿದರು.

ದೇವಸ್ಥಾನವನ್ನು ಪುರ್ನವೀಕರಿಸಿದ ಅನಂತವರ್ಮಚೋಡಗಂಗನು ಒಬ್ಬ ಶೈವನಾಗಿದ್ದ. ದೇವಸ್ಥಾನವಿರುವ ಉತ್ಕಲ ದೇಶವನ್ನು ಸೋಲಿಸಿದ ನಂತರ ಅವನು ವೈಷ್ಣವನಾಗಿ ಪರಿವರ್ತಿತನಾದ. ಶಾಸನಗಳು ದೇವಾಲಯಕ್ಕೆ ಅವನ ಕೊಡುಗೆಯ ಬಗ್ಗೆ ಹೇಳುತ್ತವೆ. ದಾಖಲೆಗಳು ದೇವಸ್ಥಾನವು ಅನಂಗಭೀಮದೇವನಿಂದ ರಚಿತವಾಯಿತು ಎನ್ನುತ್ತವೆ. ಪುನರ್ನವೀಕರಣದ ಕೆಲಸವು 12ನೇ ಶತಮಾನದಲ್ಲಿ ಆರಂಭವಾಗಿ 13ನೇ ಶತಮಾನದಲ್ಲಿ-ಅಂದರೆ- ಅನಂಗಭೀಮನ ಕಾಲದಲ್ಲಿ ಕೊನೆಯಾಯಿತು. ದೇವಸ್ಥಾನದ ಉಳಿದ ಅಭಿವೃದ್ಧಿ-ವಿಸ್ತರಣಾ ಕಾರ್ಯಗಳು ಅವರ ನಂತರ ಬಂದ ಗಂಗವಂಶ ಮತ್ತು ಗಜಪತಿ ವಂಶದವರ ಕಾಲದಲ್ಲಿ ಆಯಿತು ಎನ್ನುತ್ತವೆ. ದೇವಸ್ಥಾನದ ಮೇಲೆ ಕಾಲಾಪಹಾಡ್ ಎಂಬ ಮುಸಲ್ಮಾನನಾಗಿ ಪರಿವರ್ತಿತನಾದ ಅಧಿಕಾರಿಯಿಂದ 18 ಬಾರಿ ಆಕ್ರಮಣ ಮತ್ತು ಲೂಟಿಗಳು ನಡೆದಿದ್ದವು.

ಜಗನ್ನಾಥ-ಸುಭದ್ರಾದೇವಿ ಮತ್ತು ಬಲಭದ್ರರು ಇಲ್ಲಿ ಪೂಜಿಸಲ್ಪಡುವ ತ್ರಿಮೂರ್ತಿ ದೇವತೆಗಳು. ಕಹಿಬೇವಿನ ಮರದಿಂದ(ದಾರುವೃಕ್ಷ) ಕೆತ್ತಲ್ಪಟ್ಟ ಈ ಮೂರ್ತಿಗಳು ರತ್ನವೇದಿ ಎಂಬ ಅಲಂಕೃತ ವೇದಿಕೆಯ ಮೇಲೆ ಸುದರ್ಶನ ಚಕ್ರ , ಮದನ ಮೋಹನ, ಶ್ರೀದೇವಿ ಮತ್ತು ವಿಶ್ವಧಾತ್ರಿ ಎಂಬ ದೇವತೆಗಳೊಂದಿಗೆ ನಿಲ್ಲಿಸಲ್ಪಟ್ಟಿವೆ. ಈ ಎಲ್ಲ ಮೂರ್ತಿಗಳಿಗೆ ವಸ್ತ್ರಾಭರಣಗಳನ್ನು ಋತುಮಾನಗಳಿಗೆ ಸರಿಹೊಂದುವಂತೆ ತೊಡಿಸಲಾಗುತ್ತದೆ. ಈ ದೇವತೆಗಳ ಪೂಜೆಯು ಪ್ರಾಚೀನ ಬುಡಕಟ್ಟು ಜನರಿಂದ ದೇವಸ್ಥಾನ ಕಟ್ಟುವುದಕ್ಕೆ ಮೊದಲೇ ಆರಂಭವಾಗಿರಬೇಕು.

ಜಗನ್ನಾಥ ಮೂರ್ತಿಯು ದ್ವಾಪರ ಯುಗದ ಕೊನೆಯಲ್ಲಿ ಒಂದು ಆಲದ ಮರದ ಸಮೀಪದಲ್ಲಿ ನದಿಯ ದಡದಲ್ಲಿ ಒಂದು ಇಂದ್ರನೀಲ ಮಣಿಯ ರೂಪದಲ್ಲಿ ಕಾಣಿಸಿಕೊಂಡಿತ್ತಂತೆ. ಅದು ಎಷ್ಟು ಕಾಂತಿಯುತವಾಗಿತ್ತೆಂದರೆ ಅದಕ್ಕೆ ತಕ್ಷಣವೇ ಮೋಕ್ಷ ದಯಪಾಲಿಸುವ ಶಕ್ತಿಯಿತ್ತು. ಆದ್ದರಿಂದ ಧರ್ಮದೇವತೆಯು ಅದನ್ನು ಭೂಮಿಯಿಂದ ಅಡಗಿಸಿಡಲು ಪ್ರಯತ್ನಿಸುವಲ್ಲಿ ಯಶಸ್ವಿಯಾಯಿತು. ಕಲಿಯುಗದಲ್ಲಿ ರಾಜಾಇಂದ್ರದ್ಯುಮ್ನನು ಅದನ್ನು ಪಡೆಯಲು ತಪಸ್ಸಿಗೆ ಕುಳಿತನು. ವಿಷ್ಣುವು ಪ್ರತ್ಯಕ್ಷನಾಗಿ ಅವನಿಗೆ ಪುರಿಯ ಸಮುದ್ರತೀರಕ್ಕೆ ಹೋಗಿ ಅಲ್ಲಿ ತೇಲುತ್ತಿರುವ ಒಂದು ಮರದ ದಿಮ್ಮಿಯನ್ನು ಕೆತ್ತಿಸಿ ಮೂರ್ತಿರಚಿಸಲು ಹೇಳಿದನು. ಆ ಪ್ರಕಾರ ಇಂದ್ರದ್ಯುಮ್ನನಿಗೆ ಆ ಮರದ ದಿಮ್ಮಿ ಸಿಕ್ಕಿತು. ಅವನು ಒಂದು ಯಜ್ಞವನ್ನು ಏರ್ಪಡಿಸಿದನು. ನರಸಿಂಹನು ಪ್ರತ್ಯಕ್ಷನಾಗಿ ನಾರಾಯಣನು ನಾಲ್ಕು ಪಟ್ಟುದೊಡ್ಡವನಾಗಿಯೂ (ವಾಸುದೇವ ಪರಮಾತ್ಮನಾಗಿ),ಅವನ ಸಂರಕ್ಷಕನಾಗಿ ಬಲಭದನ್ರೂ, ಯೋಗಮಾಯೆಯಾಗಿ ಸುಭದ್ರಾದೇವಿಯೂ, ಅವನ ಶಕ್ತಿಯು ಸುದರ್ಶನ ಚಕ್ರವಾಗಿಯೂ ಆಗಿರಲೆಂದು ಸೂಚನೆಯಿತ್ತ. ಅನಂತರ ವಿಶ್ವಕರ್ಮನು ಸ್ವತಃಕಲಾವಿದನಾಗಿ ಬಂದು ಬಲಭದ್ರ-ಸುಭದ್ರೆ-ಜಗನ್ನಾಥರ ಮೂರ್ತಿಗಳನ್ನು ಕೆತ್ತದನೆಂಬುದು ಕಥೆ.

ಸಮುದ್ರದಲ್ಲಿ ಮರದ ದಿಮ್ಮಿಯನ್ನು ನೋಡಿದಾಗ ಅದರ ಕಣ್ಣು ಕುಕ್ಕುವ ಕಾಂತಿಯನ್ನು ನೋಡಿ ನಾರದರು ಅದರಿಂದ ಮೂರು ಮೂರ್ತಿಗಳನ್ನು ಮಾಡಿ ವೇದಿಕೆಯ ಮೇಲೆ ಸ್ಥಾಪಿಸಲು ರಾಜನಿಗೆ ಹೇಳಿದರಂತೆ. ಆ ಪ್ರಕಾರ ರಾಜನು ವಿಶ್ವಕರ್ಮನನ್ನು ಕರೆತಂದನಂತೆ. ಆದರೆ ಸ್ವತಃ ವಿಷ್ಣುವೇ ಒಬ್ಬ ಬಡಗಿಯ ರೂಪದಲ್ಲಿ ಬಂದುತಾನು ಮೂರ್ತಿಯ ಕೆಲಸವನ್ನು ಮುಗಿಸುವ ತನಕ ಯಾರೂ ತನಗೆ ತೊಂದರೆ ಮಾಡಬಾರದು ಎಂದು ಷರತ್ತು ಹಾಕಿದನಂತೆ. ಎರಡು ವಾರಗಳ ನಂತರ ಕೋಣೆಯಿಂದ ಏನೂ ಸದ್ದು ಕೇಳಿಸದಿರಲು ಇಂದ್ರದ್ಯುಮ್ನನ ಪತ್ನಿಯು ಬಾಗಿಲು ತೆರೆದು ಇಣಿಕಿ ನೋಡಿದಳಂತೆ. ತಕ್ಷಣ ಬಡಗಿಯು ಕೆಲಸವನ್ನು ಅರ್ಧದಲ್ಲೇ ನಿಲ್ಲಿಸಿ ಹೊರಟು ಹೋದನಂತೆ. ಹಾಗೆ ಜಗನ್ನಾಥನ ಮೂರ್ತಿಗೆ ಕೈಗಳು ಇಲ್ಲವಾದವು. ಹಾಗಿದ್ದರೂ ಆ ಮೂರ್ತಿಗಳನ್ನು ಸ್ಥಾಪಿಸಬೇಕೆಂದು ಅಶರೀರವಾಣಿ ಕೇಳಿಸಿತಂತೆ.

ಜಗನ್ನಾಥನಿಂದ ತೊಡಗಿ ಇಲ್ಲಿನ ಎಲ್ಲ ದೇವತೆಗಳು ಬುಡಕಟ್ಟು ಜನರಾದ ಭಿಲ್ಲರು ಮತ್ತು ಶಬರರಿಂದ ಅಲಂಕರಿಸಲ್ಪಡುತ್ತಾರೆ. ಜಗನ್ನಾಥನು ನಾರಾಯಣನ ಸಂಕೇತ. ಇನ್ನೊಂದು ಕಥೆಯ ಪ್ರಕಾರ ಜಗನ್ನಾಥನು ನೀಲಮಾಧವ. ನೀಲ ಹರಳುಗಳಿಂದ ಮಾಡಲ್ಪಟ್ಟ ನಾರಾಯಣ. ಬುಡಕಟ್ಟು ಜನರಿಂದ ಬಲಭದ್ರ-ಸುಭದ್ರೆಯರ ಜತೆಗೆ ಪೂಜಿಸಲ್ಪಡುವವನು. ಮೂರ್ತಿಗಳನ್ನು ಮಾಡಿದ ಮರಗಳೂ ವನವಾಸಿಗಳೊಂದಿಗೆ ಸಂಬಂಧ ಇರುವುದನ್ನು ಹೇಳುತ್ತವೆ. ಮಾತ್ರವಲ್ಲ ದೈತಪತಿಗಳು( ಗುಡ್ಡಗಾಡು ಜನಾಂಗದವರು) ಕೂಡಾ ದೇವಸ್ಥಾನದೊಳಗೆ ನಡೆಯುವ ಪೂಜಾ ಚರಣೆಗಳಲ್ಲಿ ಹಕ್ಕಿರುವವರು. ಆದ್ದರಿಂದ ಒಡಿಶಾದ ಸಾಂಸ್ಕೃತಿಕ ರಾಜದಾನಿಯೆಂದು ಕರೆಯಲ್ಪಡುವ ಈ ಕ್ಷೇತ್ರವು ಹಿಂದೂ ಬುಡಕಟ್ಟು ಜನಾಂಗಗಳ ಮೇಲೆ ನಿಂತಿದೆ. ಇಲ್ಲಿನ ದೇವತೆಗಳು ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್ ಚರಿತೆಗಳೆಂಬ ರತ್ನತ್ರಯಗಳ ಸಂಕೇತಗಳಾಗಿದ್ದು(ಇವು ಜೈನ ಸಂಸ್ಕೃತಿಯ ಮೂರು ರತ್ನಗಳು) ಇವುಗಳನ್ನು ಅಳವಡಿಸಿಕೊಂಡರೆ ಸರ್ವಾಂತರ್ಯಾಮಿತ್ವ ಮತ್ತು ಮೋಕ್ಷಗಳ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ದೇವಸ್ಥಾನದ ಆವರಣವು ಒಟ್ಟು 37,000 ಚದರಮೀಟರ್ ವಿಸ್ತೀರ್ಣವಿದ್ದು 6,1 ಮೀಟರ್‌ ಎತ್ತರದ ಆವರಣ ಗೋಡೆಗಳಿವೆ. ಮುಖ್ಯ ದೇವಸ್ಥಾನದ ಸುತ್ತಮುತ್ತ ಸುಮಾರು 120 ಗುಡಿಗಳಿವೆ. ಕಳಿಂಗ ಶಿಲ್ಪಕಲೆಯ ಸೌಂದರ್ಯದಿಂದ ಕಂಗೊಳಿಸುವ ಇದು ಇಡೀ ಭಾರತದಲ್ಲೇ ಅತ್ಯಂತ ಸುಂದರವಾದ ಕ್ಷೇತ್ರ. ಇದರ ಮುಖ್ಯ ಗೋಪುರವು ಕಲ್ಲಿನಿಂದ ಮಾಡಲ್ಪಟ್ಟಿದ್ದು ಇದನ್ನು 214 ಅಡಿ ಎತ್ತರದ ವೇದಿಕೆಯಲ್ಲಿ ಗರ್ಭಗುಡಿಯ ಮೇಲೆ ಕಟ್ಟಲಾಗಿದೆ. ಗೋಪುರದ ತುದಿಯಲ್ಲಿ ವಿಷ್ಣುವಿನ ನೀಲ ಚಕ್ರವಿದೆ. ಇದು ಅಷ್ಟ ಲೋಹಗಳಿಂದ ಮಾಡಲ್ಪಟ್ಟಿದ್ದು ಅತ್ಯಂತ ಪವಿತ್ರವೆನ್ನಿಸಲ್ಪಟ್ಟಿದೆ. ಇದು ಒಂದು ಟನ್ ಭಾರವಿದೆಯೆಂದು ಹೇಳುತ್ತಾರೆ. ಅಷ್ಟು ಭಾರದ ಚಕ್ರವನ್ನು ಅಷ್ಟು ಎತ್ತರದಲ್ಲಿ ಹೇಗೆ ತೆಗೆದುಕೊಂಡು ಹೋಗಿ ಇಟ್ಟರು ಎನ್ನುವುದೇ ಒಂದು ಸೋಜಿಗ. ದೇವಸ್ಥಾನದ ಪಿರಮಿಡ್‌ ಆಕೃತಿಯ ಮಾಡುಗಳಿಂದ ಮೇಲೆ ಹೋಗಲು ಮೆಟ್ಟಲುಗಳಿವೆ. ಗೋಪುರದ ಶಿಖರದಲ್ಲಿ ನೀಲಚಕ್ರವಿದೆ. ಈ ಚಕ್ರದ ಮೇಲಿನಿಂದ ಧ್ವಜವನ್ನು ಹಾರಿಸುತ್ತಾರೆ. ಧ್ವಜವನ್ನು ಪ್ರತಿದಿನ ಸಂಜೆ ಬದಲಾಯಿಸುತ್ತಾರೆ. ಈ ರೀತಿ ಧ್ವಜವನ್ನು ಬದಲಾಯಿಸುವುದನ್ನು ನೋಡಲು ಕೆಳಗೆ ಜನಜಾತ್ರೆ ನೆರೆಯುತ್ತದೆ. ಈ ಚಕ್ರಕ್ಕೆ ಪತಿತ ಪಾವನ ಎಂಬ ಹೆಸರಿದೆ. ಇದು ಗರ್ಭಗೃಹದಲ್ಲಿರುವ ದೇವತೆಗಳಷ್ಟೇ ಪವಿತ್ರವಾದದ್ದಾಗಿದೆ. ಈ ನೀಲಚಕ್ರದ ಹೊರ ಪರಿಧಿಯಲ್ಲಿ ನವಗುಂಜಾರವಿದೆ( ಹಿಂದೂ ಧರ್ಮದಲ್ಲಿ ಹೇಳುವ ಒಂಬತ್ತು ಪ್ರಾಣಿಗಳು ಬೆಸೆದಚಿತ್ರ). ಎಲ್ಲವೂ ಧ್ವಜಸ್ತಂಭಕ್ಕೆ ಮುಖಮಾಡುತ್ತವೆ.

ದೇವಸ್ಥಾನಕ್ಕೆ ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಉತ್ತರ ದಿಕ್ಕುಗಳಲ್ಲಿ ಪ್ರವೇಶದ್ವಾರಗಳಿವೆ. ಪೂರ್ವದ್ವಾರದಲ್ಲಿ ಎರಡೂ ಬದಿಯಲ್ಲಿ ಎರಡು ಸಿಂಹಗಳ ಬಾಗು ಭಂಗಿಯ ಮೂರ್ತಿಗಳಿವೆ. ಇದನ್ನು ಸಿಂಹದ್ವಾರವೆಂದು ಕರೆಯುತ್ತಾರೆ. ಇಲ್ಲಿಂದ 22 ಮೆಟ್ಟಲುಗಳನ್ನು ಹತ್ತಿ ಆವರಣದೊಳಗೆ ಪ್ರವೇಶಿಸಬೇಕು. ಪ್ರವೇಶದ್ವಾರದ ಬಲಬದಿಯಲ್ಲಿ ಪತಿತ ಪಾವನನ ವರ್ಣಮಯ ಮೂರ್ತಿಯಿದೆ. ಪ್ರಾಚೀನಕಾಲದಲ್ಲಿ ಅಸ್ಪೃಶ್ಯರಿಗೆ ದೇವಸ್ಥಾನ ಪ್ರವೇಶ ಇಲ್ಲದಿದ್ದ ಕಾಲದಲ್ಲಿ ಅವರು ಈ ಪತಿತ ಪಾವನನನ್ನು ಪ್ರಾರ್ಥಿಸಿ ಹೋಗುತ್ತಿದ್ದರು. ಬಾಗಿಲಿನ ಎರಡೂ ಬದಿಗಳಲ್ಲಿ ಜಯ-ವಿಜಯರ ಮೂರ್ತಿಗಳಿವೆ. ರಥಯಾತ್ರೆಯ ಸಮಯದಲ್ಲಿ ದೇವತಾ ಮೂರ್ತಿಗಳನ್ನು ಈ ದ್ವಾರದ ಮೂಲಕವೇ ಹೊರಗೆ ಕರೆ ತರುತ್ತಾರೆ. ಈ ದ್ವಾರದ ಮುಂಭಾಗದಲ್ಲಿ 16 ಬದಿಗಳಿರುವ ಏಕ ಶಿಲಾ ಸ್ತಂಭವಾದ ಅರುಣ ಸ್ತಂಭವಿದೆ. ಅದರಲ್ಲಿ ಸೂರ್ಯದೇವನ ಸಾರಥಿ ಅರುಣನ ಚಿತ್ರವಿದೆ. ಮೊದಲು ಇದು ಕೋನಾರ್ಕದ ಸೂರ್ಯ ದೇವಾಲಯದಲ್ಲಿತ್ತಂತೆ. ವೈರಿಗಳ ಆಕ್ರಮಣದ ಬಗ್ಗೆ ತಿಳಿಯುತ್ತಲೇ ಮರಾಠಾಗುರು ಬ್ರಹ್ಮಚಾರಿ ಗೋಸಾಯಿನ್‌ ಅದನ್ನು ಇಲ್ಲಿಗೆ ತಂದು ಸ್ಥಾಪಿಸಿದರಂತೆ.

ದೇವಸ್ಥಾನದ ಉಳಿದ ಮೂರು ಪ್ರವೇಶ ದ್ವಾರಗಳಲ್ಲಿ ದ್ವಾರಪಾಲಕರಾಗಿ ಪ್ರಾಣಿಗಳಿವೆ. ಆದ್ದರಿಂದ ಅವುಗಳನ್ನು ಹಾಥಿದ್ವಾರ, ವ್ಯಾಘ್ರದ್ವಾರ ಮತ್ತು ಅಶ್ವ ದ್ವಾರಗಳೆಂದು ಆ ಪ್ರಾಣಿಗಳ ಹೆಸರಿನಿಂದಲೇ ಕರೆಯುತ್ತಾರೆ. ಗಣೇಶಗುಡಿ, ವಿಮಲಾ ಮಾತೆಯ ಗುಡಿ, ಸರಸ್ವತಿ, ಶಿವ, ಸೂರ್ಯ, ನೀಲಮಾಧವ , ಭುವನೇಶ್ವರಿ, ಹನುಮ, ಗೋಪಾಲವಲ್ಲಭ, ಮಹಾಲಕ್ಷ್ಮಿ ಮೊದಲಾದ ಗುಡಿಗಳು ಸುತ್ತ ಮುತ್ತ ಇವೆ. ವಿಮಲಾದೇವಿಯ ಗುಡಿಯು ಬಹಳ ಮಹತ್ವವುಳ್ಳ ಶಕ್ತಿ ಪೀಠವೂ ಹೌದು.
ದೇವಸ್ಥಾನದಲ್ಲಿ ಪ್ರತಿದಿನ ಆರು ಬಾರಿ ನೈವೇದ್ಯ ಅರ್ಪಣೆ ಮಾಡಲಾಗುತ್ತದೆ. ಇಲ್ಲಿನ ಅಡುಗೆ ಮನೆ ಬಹಳ ವಿಶಿಷ್ಟವಾದದ್ದು. ಇದಕ್ಕೆ ಪ್ರಪಂಚದಲ್ಲಿ ಎರಡನೇ ಸ್ಥಾನವಿದೆ. ಇಲ್ಲಿಕಟ್ಟಿಗೆ ಉರಿಸಿ ಬೇಯಿಸುವ 752 ದೊಡ್ಡ ದೊಡ್ಡ ಒಲೆಗಳಿವೆ. ಇಲ್ಲಿ ತಯಾರಾಗುವ ಅನ್ನ ಪ್ರಸಾದವನ್ನು ಸ್ವತಃದೇವಿ ಲಕ್ಷ್ಮಿಯೇ ನೋಡಿಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ. ಯಾಕೆಂದರೆ ಇಲ್ಲಿ ಒಂದು ಪವಾಡ ನಡೆಯುತ್ತದೆ. ಏಳು ಮಡಕೆಗಳಲ್ಲಿ ಅಕ್ಕಿ ತುಂಬಿಸಿ ನೀರು ಹಾಕಿ ಒಂದರ ಮೇಲೆ ಒಂದು ಜೋಡಿಸಿ ಒಲೆಯ ಮೇಲೆ ಇಟ್ಟರೆ ಅತ್ಯಂತ ಮೇಲೆ ಇರುವ ಮಡಕೆಯಲ್ಲಿ ಅನ್ನ ಮೊದಲು ಬೇಯುತ್ತದೆಯಂತೆ. ತಯಾರಿಸಿದ ನೈವೇದ್ಯದಲ್ಲಿ ಏನಾದರೂ ದೋಷವಿದ್ದರೆ ಒಂದು ಛಾಯಾ ಶ್ವಾನವು ತನ್ನ ಅಸಮಾಧಾನವನ್ನು ತೋರಿಸಲು ಬಾಗಿಲಲ್ಲಿ ಬಂದು ನಿಲ್ಲುತ್ತದೆಂದೂ ಒಂದು ವೇಳೆ ಹಾಗೆ ಬಂದು ನಿಂತರೆ ಮಾಡಿದ ಅಡುಗೆ ಎಲ್ಲವನ್ನೂ ಹುಗಿದು ಹಾಕಿ ಹೊಸತನ್ನು ಬೇಯಿಸಲಾಗುತ್ತದೆಯೆಂದೂ ನಮ್ಮಗೈಡ್ ಹೇಳಿದರು. ಬೆಳ್ಳುಳ್ಳಿ-ಈರುಳ್ಳಿಗಳನ್ನು ಹಾಕದ, ಸಸ್ಯಾಹಾರಿ ಆಹಾರವನ್ನೇ 56 ವೈವಿಧ್ಯ ಪದಾರ್ಥಗಳೊಂದಿಗೆ ದೇವರಿಗೆ ಅರ್ಪಿಸಲಾಗುತ್ತದೆಯಂತೆ.

ಶ್ರೀಜಗನ್ನಾಥ ಕಾರಿಡಾರ್ ಎಂಬ ಶ್ರೀಮಂದಿರ ಪರಿಕ್ರಮದ ಉದ್ದ 75 ಮೀಟರ್. ಭಕ್ತಾದಿಗಳಿಗೆ ಸರಿಯಾದ ರೀತಿಯಲ್ಲಿ ದೇವರ ದರ್ಶನವನ್ನು ಮಾಡಿಸುವ ಉದ್ದೇಶದಿಂದ ವಾರಣಾಸಿಯಂತೆಯೇ ಇಲ್ಲೂ ಕಾರಿಡಾರನ್ನು ನಿರ್ಮಿಸಲಾಗಿದೆ. ವ್ಯವಸ್ಥೆಗಳು ಎಷ್ಟೇ ಇದ್ದರೂ ದೇವರ ದರ್ಶನಕ್ಕೆ ಕಾಯುವ ಜನರ ನೂಕು ನುಗ್ಗಲು ನೋಡಿದಾಗ ಎಲ್ಲಿ ಕಾಲ್ತುಳಿತಕ್ಕೊಳಗಾಗಿ ಬಿದ್ದು ಬಿಡುತ್ತೇವೆಯೋ ಎಂದು ನಮಗೆಲ್ಲರಿಗೂ ಭಯವಾಗಿದ್ದಂತೂ ನಿಜ. ದುಡ್ಡುಕೊಟ್ಟವರಿಗೆ ಸ್ಪೆಷಲ್‌ದರ್ಶನ ಎಂಬ ವ್ಯವಸ್ಥೆ ಇಲ್ಲಿಲ್ಲ. ಎಲ್ಲರೂ ಕಾದು ಕಷ್ಟಪಟ್ಟೇ ದೇವರದರ್ಶನ ಪಡೆಯಬೇಕು. ಇತರ ನೂರಾರು ದೊಡ್ಡ ಕ್ಷೇತ್ರಗಳಂತೆ ದುಡ್ಡಿದ್ದವರಿಗೆ ಮಣೆ ಹಾಕುವ ದೇವಸ್ಥಾನ ಇದಲ್ಲವೆಂದು ತಿಳಿದು ನನಗೆ ತುಂಬಾ ಖುಷಿಯಾಯಿತು. ಮತ್ತು ವೈದಿಕರಿಂದಷ್ಟೇ ದೇವರ ಪೂಜೆ ಸಾಧ್ಯವೆಂದು ನಂಬಿಕೊಂಡ ಮತ್ತು ಜಾತಿಪದ್ಧತಿಯ ಅನಿಷ್ಟಗಳಿಂದ ಛಿದ್ರಗೊಂಡ ನಮ್ಮ ದೇಶದಲ್ಲಿ ಬುಡಕಟ್ಟು ಜನಾಂಗದವರಿಂದಲೂ ದೇವಸ್ಥಾನದೊಳಗಿನ ಪೂಜಾಚರಣೆಗಳು ಅತ್ಯಂತ ವ್ಯವಸ್ಥಿತವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಯುತ್ತಿರುವುದನ್ನು ನೋಡಿ ಶ್ರೀನಾರಾಯಣಗುರುಗಳು ಹೇಳಿದ "ಒಂದೇಜಾತಿ, ಒಂದೇ ಮತ, ಒಂದೇದೈವ" ಎಂಬ ಮಾತುಗಳು ಇಲ್ಲಿ ನಿಜವಾಗಿಯೂ ಅನುಷ್ಠಾನಗೊಂಡಿವೆ ಅನ್ನಿಸಿತು.

ಬೆಳಗ್ಗೆ ಇಡೀ ದೇವಸ್ಥಾನವನ್ನು ನೋಡಿ ಮುಗಿಸಿ ನಾವು ಉಪಾಹಾರಕ್ಕೆಂದು ಹೋಟೆಲಿಗೆ ಹೋದೆವು. ಸ್ವಲ್ಪ ಫ್ರೆಷ್‌ಅಪ್ ಮಾಡಿಕೊಂಡು ನಂತರ ಪುರಿಯಿಂದ ವಾಯವ್ಯ ದಿಕ್ಕಿನಲ್ಲಿ ಕರಾವಳಿಯುದ್ದದ ರಸ್ತೆಯಲ್ಲಿ ಸುಮಾರು 35 ಕಿ.ಮೀ,ದೂರದಲ್ಲಿರುವ ಜಗತ್ಪ್ರಸಿದ್ಧ ಕೋನಾರ್ಕದ ಸೂರ್ಯದೇವಾಲಯವನ್ನು ನೋಡಲು ಹೋದೆವು. ಇದುಕ್ರಿ.ಶ.13ನೆಯ ಶತಮಾನದಲ್ಲಿ ಕಟ್ಟಿದ ಹಿಂದೂ ದೇವಾಲಯ. ಪೂರ್ವ ಗಂಗ ವಂಶದ ಒಂದನೇ ನರಸಿಂಗ ದೇವನು ಕಟ್ಟಿಸಿದ ದೇವಾಲಯವಿದು. ದೇವಾಲಯದ ಸಂಕೀರ್ಣದಲ್ಲಿ 100 ಅಡಿ ಎತ್ತರದ ರಥದಾಕಾರದ ಕಟ್ಟಡವಿದೆ. ಈ ರಥಕ್ಕೆ 24 ಬೃಹತ್ ಗಾಲಿಗಳಿವೆ. ರಥವನ್ನೆಳೆಯುವ ಏಳು ಕುದುರೆಗಳಿವೆ. ಹಿಂದೆ 200 ಅಡಿಗಳಿಗಿಂತಲೂ ಹೆಚ್ಚು ಎತ್ತರವಾಗಿದ್ದ ಈ ದೇವಾಲಯವು ಇವತ್ತು ಅದರ ಶಿಖರ ಗೋಪುರವು ಮುರಿದು ಬಿದ್ದು ಹಾಳಾಗಿರುವುದರಿಂದ ತನ್ನ ಮೂಲ ಸೊಬಗನ್ನು ಕಳೆದುಕೊಂಡಿದೆ. ಕಳಿಂಗ ವಾಸ್ತು ಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಈ ದೇವಾಲಯ ನಿಂತಿದೆಯಾದರೂ ಈಗ ಇಲ್ಲಿ ಉಳಿದಿರುವುದು ಅವಶೇಷಗಳು ಮಾತ್ರ. ಇದು ನಾಶವಾಗಲು ನಿಖರವಾದ ಕಾರಣಗಳು ಇನ್ನೂ ಗೊತ್ತಿಲ್ಲ. ಗರ್ಭಗೃಹದಲ್ಲಿ ಬೃಹತ್ ಪ್ರಮಾಣದ ಅಯಸ್ಕಾಂತಗಳಿದ್ದವು, ಅವುಗಳ ಆಧಾರದ ಮೇಲೆ ಗೋಪುರವನ್ನು ಹೊತ್ತ ಕಂಬಗಳು ನಿಂತಿದ್ದವು. ಆಕ್ರಮಣಕಾರರು( ಪೋರ್ಚುಗೀಸರು ಎಂದು ನಮ್ಮಗೈಡ್ ಹೇಳಿದರು) ಎಲ್ಲ ಅಯಸ್ಕಾಂತಗಳನ್ನೂ ಕಿತ್ತುಕೊಂಡು ಹೋದಾಗ ಆಧಾರ ಸ್ತಂಭಗಳೆಲ್ಲವೂ ಕುಸಿದು ಬಿದ್ದವಂತೆ. ಯೂರೋಪಿನ ನಾವಿಕರ ವಿವರಣೆಯ ಪ್ರಕಾರ ಈ ಕಟ್ಟಡವು ಒಂದು ನಾವಿಕರಿಗೆ ದಾರಿ ತೋರಿಸುವ ಕಪ್ಪು ಪಗೋಡಾವಾಗಿತ್ತು. ಪುರಿಯ ಜಗನ್ನಾಥ ಕ್ಷೇತ್ರವನ್ನು ಬಿಳಿಯ ಪಗೋಡಾ ಅನ್ನುತ್ತಿದ್ದರಂತೆ. ಬಂಗಾಳ ಕೊಲ್ಲಿಯಲ್ಲಿ ಪ್ರಯಾಣಿಸುವ ಹಡಗುಗಳಿಗೆ ಇವು ಎರಡೂ ದಾರಿ ತೋರಿಸುವ ಚಿಹ್ನೆಗಳಾಗಿದ್ದವು. ಇಲ್ಲಿ ಈಗ ಅರ್ಧಾಂಶವಾದರೂ ಅವಶೇಷಗಳನ್ನು ಉಳಿಸಿದವರು ಬ್ರಿಟಿಷ್‌ ಇಂಡಿಯಾ ಕಾಲದ ಪುರಾತತ್ವ ಇಲಾಖೆಯವರು. ಪ್ರತಿ ವರ್ಷ ಇಲ್ಲಿ ನಡೆಯುವ ಚಂದ್ರಭಾಗಾ ಮೇಳದಲ್ಲಿ ಬೃಹತ್ ಸಂಖ್ಯೆಯ ಹಿಂದೂಗಳು ಬಂದು ಸೇರುತ್ತಾರೆ.

ಕೋನ(ಒಂದು ಮೂಲೆ) ಮತ್ತು ಅರ್ಕ(ಸೂರ್ಯ) ಎಂಬ ಎರಡು ಶಬ್ದಗಳು ಸೇರಿ ಕೋನಾರ್ಕವಾಯಿತು.. ಹಿಂದೂ ವೇದಗಳ ಪ್ರಕಾರ ಸೂರ್ಯದೇವನು ಬೆಳಗ್ಗೆ ಅರುಣನೆಂಬ ಸಾರಥಿಯಿಂದ ನಡೆಸಲ್ಪಡುವ ಏಳು ಕುದುರೆಗಳು ಎಳೆಯುವ ರಥವನ್ನೇರಿ ಮೂಡು ದಿಕ್ಕಿನಲ್ಲಿ ಉದಯಿಸುತ್ತಾನೆ. ಕೋನಾರ್ಕದಲ್ಲಿ ಅವನು ಎರಡೂ ಕೈಗಳಲ್ಲಿ ಕಮಲ ಪುಷ್ಪಗಳನ್ನು ಹಿಡಿದು ರಥದಲ್ಲಿ ಸವಾರಿ ಮಾಡುವಂತೆ ಚಿತ್ರಿಸಲ್ಪಟ್ಟಿದ್ದಾನೆ. ಈ ಏಳು ಕುದುರೆಗಳು ಸಂಸ್ಕೃತದ ಗಾಯತ್ರಿ, ಬೃಹತಿ, ಉಷಿತ, ಜಗತಿ, ತ್ರಿಸ್ತುಭ, ಅನುಸ್ತುಭ ಮತ್ತು ಪಂಕ್ತಿ ಎಂಬ ಏಳು ಛಂದಸ್ಸುಗಳ ಹೆಸರುಗಳಿಂದ ಕರೆಯಲ್ಪಡುತ್ತವೆ. ಸೂರ್ಯನಿಗೆ ಅಡ್ಡಲಾಗಿ ಉದಯದೇವತೆಗಳನ್ನು ಪ್ರತಿನಿಧಿಸುವ ಉಷಾ ಮತ್ತು ಪ್ರತ್ಯೂಷಾ ಎಂಬ ಸ್ತ್ರೀದೇವತೆಗಳಿದ್ದಾರೆ. ಅವರು ಕತ್ತಲನ್ನು ಓಡಿಸುತ್ತೇವೆಂದು ಸವಾಲು ಹಾಕಿದವರಂತೆ ಬಾಣ ಹೊಡೆಯುವ ಭಂಗಿಯಲ್ಲಿದ್ದಾರೆ. ರಥದ ಹನ್ನೆರಡು ಜತೆ ಗಾಲಿಗಳು ಹಿಂದೂ ಕ್ಯಾಲೆಂಡರಿನ 12 ತಿಂಗಳುಗಳು, ಮತ್ತು ಪ್ರತಿ ತಿಂಗಳ ಎರಡು ಪಕ್ಷಗಳನ್ನು ಸಂಕೇತಿಸುತ್ತವೆ. ಕೋನಾರ್ಕ ದೇವಾಲಯವು ಈ ವಿಶಿಷ್ಟ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೊರಿಸುತ್ತದೆ. 24 ಬೃಹತ್‌ಗಾತ್ರದ 12 ಅಡಿ ವ್ಯಾಸದಕಲ್ಲು ಗಾಲಿಗಳ ಒಳಭಾಗದಲ್ಲಿ ಹೆಣ್ಣಿನ ಋತುಚಕ್ರವನ್ನು ಪ್ರತಿನಿಧಿಸುವ ಗಾಲಿಕಡ್ಡಿಗಳಿವೆ. ಒಳ ಪ್ರದೇಶದಿಂದ ಸೂರ್ಯೋದಯ ಮತ್ತು ಸೂರ್ಯಾಸ್ತದ ಹೊತ್ತಿಗೆ ನೋಡಿದರೆ ರಥಾಕೃತಿಯ ದೇವಸ್ಥಾನವು ನೀಲಿ ಸಮುದ್ರದ ಆಳದಿಂದ ಸೂರ್ಯನನ್ನು ಹೊತ್ತು ತರುವಂತೆ ಕಾಣುತ್ತದೆ.

ಸೂರ್ಯದೇವಾಲಯದ ಯೋಜನೆಯು ಒಂದು ಹಿಂದೂ ದೇವಾಲಯದ ಚೌಕಾಕಾರದ ನಕಾಶೆ ಯಲ್ಲಿ ಜೋಡಿಸಲ್ಪಟ್ಟಿದೆ. ಕಪಿಲ ವಾತ್ಸ್ಯಾಯನನ ಪ್ರಕಾರ ನೆಲ ಅಂತಸ್ತಿನ ಯೋಜನೆ ಮತ್ತು ಶಿಲ್ಪ ವಿನ್ಯಾಸಗಳು ಚೌಕ ಮತ್ತು ವೃತ್ತ ಜ್ಯಾಮಿತಿಯನ್ನು ಅನುಸರಿಸುತ್ತವೆ. ಕೋನಾರ್ಕ ದಡ್ಯೂಲಾ ಎಂದು ಕರೆಯಲ್ಪಡುವ ವಿಶಿಷ್ಟ ಶಿಲ್ಪ ವಿನ್ಯಾಸವು ಈಗ ಇಲ್ಲ. ರಥಾಕೃತಿಯ ಸುತ್ತ ಹಿಂದೂ ದೇವತೆಗಳನ್ನು ಚಿತ್ರಿಸುವ ಕಿಂಡಿಗಳಿರುವ, ಸೂರ್ಯನ ವಿವಿಧ ಅಂಶಗಳನ್ನು ಚಿತ್ರಿಸುವ ಸಣ್ಣ ಸಣ್ಣ ಗುಡಿಗಳಿವೆ. ಡ್ಯೂಲಾವನ್ನು ಅತ್ಯಂತ ಎತ್ತರದಲ್ಲಿ ಕಟ್ಟಲಾಗಿತ್ತು. ಮೂಲತಃ ಈ ದೇವಾಲಯವು ರೇಖಾಡ್ಯೂಲಾ( ಸರಳ ರೇಖೆಯಲ್ಲಿ ಮೇಲಕ್ಕೆ ನೇರವಾಗಿ ಹೋಗುವ) ಮತ್ತು ಬಡಾ ಡ್ಯೂಲಾಗಳಿಂದ ಮಾಡಿದ ಮುಖ್ಯಗರ್ಭಗೃಹವನ್ನು ಹೊಂದಿದ ಒಂದು ಸಂಕೀರ್ಣವಾಗಿತ್ತು. ಅದರ ಎದುರಿಗೆ ಜಗಮೋಹನ(ಸಭಾಭವನ), ಅದಕ್ಕೆ ಜೋಡಿಸಿದ ಪೀಡಾಡ್ಯೂಲಾ( ಚೌಕಾಕೃತಿಯ ಮಂಟಪ ಮತ್ತು ಪಿರಮಿಡ್‌ ಆಕೃತಿಯ ಮಾಡು)ಗಳಿವೆ. ಈ ಎಲ್ಲಾ ರಚನೆಗಳೂ ಒಳತನಕ ಚೌಕಾ ಕೃತಿಯಲ್ಲಿದ್ದು ವೈವಿಧ್ಯಮಯ ಬಾಹ್ಯ ಭಾಗಗಳೊಂದಿಗೆ ಪಂಚರಥ ಯೋಜನೆಯನ್ನು ಹೊಂದಿವೆ. ಕೇಂದ್ರದ ಉಬ್ಬು(ರಾಹ)ಬದಿಯ ಉಬ್ಬುಗಳಿಗಿಂತ ದೊಡ್ಡದಾಗಿದ್ದು ಕಾನಿಕಾ-ಪಾಗಾ ಎಂದು ಕರೆಯಲ್ಪಡುವ ಸೂರ್ಯನ ನೆರಳು-ಬೆಳಕುಗಳ ಆಟವೇ ಇದರ ಗುರಿ. ಇದು ಇಡೀ ದಿನ ನೋಡುಗರ ಕಣ್ಣುಗಳಿಗೆ ಹಬ್ಬವುಂಟು ಮಾಡುತ್ತದೆ. ಈ ರಚನಾ ವಿನ್ಯಾಸದ ವಿವರಗಳನ್ನು ಪ್ರಾಚೀನ ಒಡಿಶಾದ ಶಿಲ್ಪ ಶಾಸ್ತ್ರದಲ್ಲಿ ಕಾಣಬಹುದು.

ಮುಖ್ಯ ದೇವಾಲಯದ ಪೂರ್ವ ದಿಕ್ಕಿನಲ್ಲಿ ನಾಟ್ಯ ಪ್ರದರ್ಶನಕ್ಕಾಗಿ ನಟ ಮಂದಿರವಿದೆ, ಅದುಕೆತ್ತನೆಯ ವಿನ್ಯಾಸಗಳಿರುವ ಒಂದು ವೇದಿಕೆಯ ಮೇಲೆ ನಿಂತಿದೆ. ಈ ವೇದಿಕೆಯ ಎತ್ತರಕ್ಕಿಂತ ಇಮ್ಮಡಿ ಅಗಲವಿರುವ ಜಗಮೋಹನದ ಗೋಡೆಗಳು 100 ಅಡಿ ಎತ್ತರ ಇವೆ. ಈಗ ಉಳಿದಿರುವ ರಚನೆಯಲ್ಲಿ ಆರು ಪೀಠಗಳಿರುವ ಮೂರು ಅಂತಸ್ತುಗಳಿವೆ. ಇವು ಮೇಲಿನಿಂದ ಕೆಳಗೆ ಕಡಿಮೆಯಾಗುತ್ತ ಬಂದು ಕೆಳಗಿನ ಮಾದರಿಗಳು ಪುನರಾವರ್ತನೆಗೊಳ್ಳುತ್ತವೆ. ಪೀಠಗಳು ತಾರಸಿಗಳಾಗಿ ವಿಭಾಗಿಸಲ್ಪಟ್ಟಿವೆ. ಈ ಪ್ರತಿ ತಾರಸಿಗಳ ಮೇಲೆ ಸಂಗಿತಗಾರರ ಮೂರ್ತಿಗಳಿವೆ.

ದೇವಾಲಯದ ಗೋಡೆಗಳನ್ನು ತುಂಬಿರುವ ಶಿಲ್ಪಗಳಲ್ಲಿ ಅಂದಿನ ಕಾಲದ ಜೀವನ ಕ್ರಮ ಮತ್ತು ಸಂಸ್ಕೃತಿಗಳ ವಿವರವಾದ ಚಿತ್ರಗಳಿವೆ. ಶೃಂಗಾರ ಭರಿತ ಕಾಮ ಮತ್ತು ಮಿಥುನ ಶಿಲ್ಪಗಳಿವೆ. ಮನುಷ್ಯ ಜೀವನದ ವಿವಿಧ ಹಂತಗಳು, ಅವರ ಸ್ವಭಾವ ವೈಚಿತ್ಯ್ರಗಳು, ಸಂಬಂಧಗಳು, ಅವರು ಮಾಡುವ ವಿವಿಧ ವೃತ್ತಿಗಳು, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಚಟುವಟಿಕೆಗಳು. ವಿವಿಧ ರೀತಿಯ ವಸ್ತ್ರ ವಿನ್ಯಾಸ ಮತ್ತು ಕೇಶ ವಿನ್ಯಾಸಗಳು- ಎಲ್ಲವನ್ನೂ ನೋಡಿದಾಗ ಅವುಗಳನ್ನು ನಿರ್ಮಿಸಿದ್ದ ಶಿಲ್ಪಿಗಳ ಕಲ್ಪನಾ ಶಕ್ತಿಯ ಬಗ್ಗೆ ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ.

ಕೋನಾರ್ಕದಿಂದ ಎಲ್ಲವನ್ನೂ ನೋಡಿ ಹೊರಟಾಗ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ಹೋಟೆಲಿಗೆ ಬಂದು ಊಟ ಮುಗಿಸಿದೆವು. ಜಗನ್ನಾಥ ಕ್ಷೇತ್ರದ ಅನ್ನ ಪ್ರಸಾದಕ್ಕೆಂದು ನಾವು ದುಡ್ಡು ಕೊಟ್ಟಿದ್ದರೂ ಅದು ಸಿಗುವಾಗ ಮೂರು ಗಂಟೆಯಾದೀತು ಎಂದಿದ್ದರು. ಮೂರೂವರೆಗೆ ನಾವು ಮತ್ತೆ ಜಗನ್ನಾಥ ದೇವಸ್ಥಾನಕ್ಕೆ ಗೋಪುರದ ತುದಿಯ ಧ್ವಜ ಬದಲಾಯಿಸುವುದನ್ನು ನೋಡಲೆಂದು ಹೋದೆವು. ಎರಡು-ಮೂರು ಮಂದಿ ಆಗಲೇ ಗೋಪುರದತುದಿ ತಲುಪಿಯಾಗಿದ್ದನ್ನು ನೋಡಿದೆವು. ಅಷ್ಟು ಎತ್ತರದ ಗೋಪುರದ ಮೇಲೆ ಹತ್ತಿ ಅಲ್ಲಿ ಇದ್ದ ಧ್ವಜವನ್ನು ಬಿಡಿಸಿ ಹೊಸತನ್ನು ಕಟ್ಟುವ ಕೆಲಸ ಸಣ್ಣ ಸಾಹಸವೇನಲ್ಲ. ನಾವು ಆ ದೃಶ್ಯವನ್ನು ನೋಡಿ ಕಣ್ಣು ತುಂಬಿಕೊಂಡೆವು. ಒಂದಷ್ಟು ಹೊತ್ತು ದೇವಸ್ಥಾನದ ಸುತ್ತ ಮುತ್ತ ಷಾಪಿಂಗ್ ಮಾಡಿ ಮತ್ತೆ ಹೋಟೆಲಿಗೆ ಮರಳುವಾಗ ಆರು ಗಂಟೆಯಾಗಿತ್ತು. ರಾತ್ರಿಯ ಊಟಕ್ಕೆ ಪ್ರಸಾದವೇ ಬೇಕಾದಷ್ಟು ಇತ್ತು. ನೆಲದ ಮೇಲೆಯೇ ಕುಳಿತು ಊಟ ಮಾಡಬೇಕು ಮತ್ತು ಎಲೆಗೆ ಹಾಕಿಕೊಂಡ ಅನ್ನವನ್ನಾಗಲೀ, ಧಾಲ್-ಪಲ್ಯ-ಸಿಹಿಯನ್ನಾಗಲಿ ಸ್ವಲ್ಪವೂ ಬಿಸಾಕ ಕೂಡದು ಎನ್ನುವುದು ಅವರ ಕಟ್ಟು ನಿಟ್ಟಾದ ಸೂಚನೆಯಾಗಿತ್ತು.

ಮರುದಿನ ನಮ್ಮ ಟೂರಿನ ಕೊನೆಯ ದಿನ. ಜಗನ್ನಾಥಕ್ಕೆ ಬಂದ ಮೇಲೆ ದೇವರ ದರ್ಶನ, ಅನ್ನಪ್ರಸಾದ ಸೇವನೆ, ಸಮುದ್ರ ಸ್ನಾನಗಳನ್ನು ಮಾಡಿಯೇ ಹೋಗಬೇಕು ಎಂಬ ನಿಯಮದಂತೆ ನಮ್ಮ ಸಮುದ್ರ ಸ್ನಾನ ಬಾಕಿಯಾಗಿದ್ದನ್ನು ಬೆಳಗ್ಗೆ ಬೇಗ ಎದ್ದು ಹೋಟೆಲಿಗೆ ಕೇವಲ ಇನ್ನೂರು ಮೀಟರ್‌ ದೂರದಲ್ಲಿದ್ದ ಸಮುದ್ರತೀರಕ್ಕೆ ಹೋಗಿ ಸ್ನಾನ ಮಾಡಿ ಬಂದೆವು. ಏಳು ಗಂಟೆಗೆ ಉಪಾಹಾರ ಮುಗಿಸಿ ಚೆಕ್‌ ಔಟ್ ಮಾಡಿ ಮತ್ತೆ ಬಸ್ಸಿನಲ್ಲಿ ಕುಳಿತೆವು. ಅವತ್ತು ಮೊದಲು ಹೋಗಿದ್ದು ಭುವನೇಶ್ವರದ ದಾರಿಯಲ್ಲಿದ್ದ ಜಗತ್ಪ್ರಸಿದ್ಧ ಚಿಲಿಕಾ ಸರೋವರಕ್ಕೆ. ತುಂಬಾ ಸುಂದರವೂ ವಿಶಾಲವೂ ಆಗಿದ್ದಚಿಲಿಕಾ ಸರೋವರದಲ್ಲಿ ದೋಣಿ ವಿಹಾರಕ್ಕೆ ಎರಡು ಗಂಟೆಗಳೇ ಬೇಕಾದವು. ನಮ್ಮಟೂರಿನ ಸಂತೋಷಕ್ಕೆ ಕಳಶ ಪ್ರಾಯವಾದಂಥ ಮಿರಿ ಮಿರಿ ಮಿಂಚುವ ನೀರ ಮೇಲಣ ಆ ವಿಹಾರ ಎಂದಿಗೂ ಮರೆಯುವಂತಿಲ್ಲ. ಅಲ್ಲೇ ಊಟ ಮುಗಿಸಿ ಬಸ್ಸು ಭುವನೆಶ್ವರದತ್ತ ಚಲಿಸಿತು. ದಾರಿಯಲ್ಲಿ ಸಿಕ್ಕಿದ ಸಾಕ್ಷಿ ಗೋಪಾಲ ದೇವಸ್ಥಾನ ಮತ್ತು ಮುಕ್ತೇಶ್ವರ ದೇವಸ್ಥಾನಗಳ ಬಗ್ಗೆ ನಾವು ಹೆಚ್ಚೇನೂ ಕೇಳಿರದಿದ್ದರೂ ಪ್ರಶಾಂತ ಪ್ರಕೃತಿಯ ಮಧ್ಯೆ ಸುತ್ತಮುತ್ತ ತುಂಬಿದ ಹಲವಾರು ಚಿಕ್ಕ-ಪುಟ್ಟ ಗುಡಿಗಳ ಜತೆಗೆ ಅವುಗಳ ಸುಂದರ ನೋಟವು ಮನಸ್ಸಿಗೆ ಮುದ ನೀಡಿದವು.

ಆಗಲೇ ನಾಲ್ಕು ಗಂಟೆಯಾಗಿತ್ತು. ನಾವು ಸೀದಾ ವಿಮಾನ ನಿಲ್ದಾಣಕ್ಕೆ ಬಂದು ಅಗತ್ಯವಿರುವ ಎಲ್ಲ ತಪಾಸಣೆಗಳಿಗೊಳಗಾಗಿ ವಿಮಾನ ಹೊರಡುವ ಗೇಟನ್ನುತಲುಪಿದೆವು. ವಿಮಾನ ಒಂದು ಗಂಟೆ ತಡವಾಗಿ ಬಂದರೂ ಸವಿ ನೆನಪುಗಳ ಬುತ್ತಿಯನ್ನು ಹೊತ್ತುಕೊಂಡು ಮನೆಗೆ ಹೋಗುವ ಸಂಭ್ರಮದಲ್ಲಿ ಅದು ಗೊತ್ತಾಗಲೇ ಇಲ್ಲ.

ನಮ್ಮ 27 ಮಂದಿಯ ತಂಡದ ಬಗ್ಗೆ ಇಲ್ಲಿ ಒಂದು ಮಾತನ್ನು ಹೇಳದಿದ್ದರೆ ಲೇಖನ ಅಪೂರ್ಣವಾಗುತ್ತದೆ. ತಂಡದಲ್ಲಿ ಹಿರಿಯ ನಾಗರಿಕರೂ ಮಧ್ಯ ವಯಸ್ಸಿನವರೂ ಯುವಕರೂ ಮಕ್ಕಳೂ ಎಲ್ಲರೂ ಇದ್ದರು. ಆದರೆ ಎಲ್ಲರೂ ಒಬ್ಬರಿಗೊಬ್ಬರು ಹೊಂದಿಕೊಳ್ಳುವುದರಲ್ಲಿ ವಯಸ್ಸುಅಡ್ಡಿಯಾಗಲಿಲ್ಲ. ಎಲ್ಲರೂ ಸಹೋದರ-ಸಹೋದರಿಯರಂತೆ ಒಟ್ಟಿಗೆಇದ್ದ ನಾಲ್ಕು ದಿನ ಪರಸ್ಪರ ಸಹಕರಿಸುತ್ತ, ಖುಷಿಯಿಂದ ಮಾತನಾಡುತ್ತಾ, ಬಸ್ಸಿನಲ್ಲಿ ಹಾಡುಗಳನ್ನು ಹಾಡುತ್ತಾ ಖುಷಿ ಪಟ್ಟಿದ್ದೆವು. ಎಲ್ಲ ಕೆಲಸಗಳನ್ನೂ ಜವಾಬ್ದಾರಿ ತೆಗೆದುಕೊಂಡು ಮುತುವರ್ಜಿಯಿಂದ ನಿರ್ವಹಿಸುವ ಮಂಡ್ಯದ ಉದ್ಯಮಿ ಹರೀಶ್, ಬಸ್ಸಿನಲ್ಲಿ ಹಾಡುತ್ತ ಕಥೆಗಳನ್ನು ಹೇಳುತ್ತ ರಂಜಿಸಿದ ವೈಟ್ ಫೀಲ್ಡಿನ ಆರ್.ವಿ.ಎನ್.ಬಾಬು, ಹಿರಿಯರ ಬೇಕು-ಬೇಡಗಳಿಗೆ ಸ್ಪಂದಿಸುತ್ತ ಸಹಾಯ ಮಾಡುತ್ತಿದ್ದ ಹೊನಲು, ನಿತ್ಯಶ್ರೀ, ಭವ್ಯಶ್ರೀ ಮೊದಲಾದ ಮಕ್ಕಳು-ಇವರೆಲ್ಲರೂ ಸದಾ ನಮ್ಮ ನೆನಪಿನಲ್ಲಿ ಉಳಿಯುವವರು. ಆನಂದ್ ಮತ್ತು ಕರುಣಾ ಎಂಬ ಇಬ್ಬರ ಹುಟ್ಟುಹಬ್ಬವನ್ನು ಸಂತೋಷದಿಂದ ಆಚರಿಸಿ ಒಂದು ಕುಟುಂಬದವರಂತೆ ಸಂಭ್ರಮಿಸಿದ್ದೂ ಒಂದು ಸುಂದರ ಅನುಭವ. ಟೂರ್ ಮ್ಯಾನೇಜರ್ ಶಾಲಿನಿ ಮೇಡಂ, ಭುವನೇಶ್ವರದವರಾದ ಧನಂಜಯ್ ಮತ್ತು ಸ್ನೇಹಪೂರ್ಣ ವ್ಯಕ್ತಿತ್ವದ ಯುವಕ ದೆಬಾಸಿಸ್ ಕೂಡಾ ಬಸ್ಸಿನಲ್ಲಿ ಹೋಗುವಾಗಲೇ ಹೋಗುವ ಸ್ಥಳಗಳ ಕುರಿತು ಹಲವಾರು ಮಾಹಿತಿಗಳನ್ನು ನಮ್ಮೊಂದಿಗೆ ಹಂಚಿಕೊಂಡು, ಹೆಜ್ಜೆ ಹೆಜ್ಜೆಗೂ ನಮ್ಮನ್ನು ಬಹಳ ಪ್ರೀತಿಯಿಂದ ನಡೆಸಿಕೊಂಡದ್ದು ನಮ್ಮ ಯಶಸ್ಸಿಗೊಂದು ಪ್ಲಸ್ ಪಾಯಿಂಟ್.

ಪಾರ್ವತಿಜಿ.ಐತಾಳ್.

 

MORE FEATURES

ಸಿನಿಮಾ ಸೇರಿದಂತೆ ದೃಶ್ಯ ಮಾಧ್ಯಮ ಒಂದು ಸಮಷ್ಟಿ ಕಲೆ

25-11-2024 ಬೆಂಗಳೂರು

“ಶೇಷಾದ್ರಿಯವರು ಸಿನಿಮಾ ನಿರ್ದೇಶಕರು, ಮತ್ತು ಅವರ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಸಿಕ್ಕಿದೆ...

ಅನಿಲ್ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಹಿಡಿದಿರುವರು

25-11-2024 ಬೆಂಗಳೂರು

"‘ಲಿಂಗಾಯತ ಖಾನಾವಳಿ’ ಇಡೀ ಕಥಾಸಂಕಲನದಲ್ಲಿ ಕ್ಲಾಸಿಕ್ ಕಥೆ. ಬದುಕು ಹುಡುಕಿ ನಗರಕ್ಕೆ ಬರುವ ಮುಗ್ಧ ...

ಧರ್ಮ ಇರೋದು ನಾವು ಸುಖವಾಗಿ ಬಾಳೋದಕ್ಕಂತಲೇ ಹೊರತು…

24-11-2024 ಬೆಂಗಳೂರು

“ಕನ್ನಡದ ಮಟ್ಟಿಗೆ ಒಂದನೇ ಹಾಗೂ ಎರಡನೇ ಶತಮಾನದವರೆಗೆ ಹೋಗಿ ಒಂದು ಕಾದಂಬರಿಯನ್ನು ರಚಿಸಿರುವುದು ನಾನು ಮೊದಲು ಎಲ್...