“ಕನ್ನಡದ ಮಟ್ಟಿಗೆ ಒಂದನೇ ಹಾಗೂ ಎರಡನೇ ಶತಮಾನದವರೆಗೆ ಹೋಗಿ ಒಂದು ಕಾದಂಬರಿಯನ್ನು ರಚಿಸಿರುವುದು ನಾನು ಮೊದಲು ಎಲ್ಲೂ ಓದಿಲ್ಲ. ಅಷ್ಟರ ಮಟ್ಟಿಗೆ ಇದೊಂದು ಅಪರೂಪದ ಪುಸ್ತಕ,” ಎನ್ನುತ್ತಾರೆ ಜಗದೀಶ್ ನಡನಳ್ಳಿ. ಅವರು ವಸುಧೇಂದ್ರ ಅವರ ‘ರೇಷ್ಮೆ ಬಟ್ಟೆ’ ಕೃತಿ ಕುರಿತು ಬರೆದ ಸಾಲುಗಳಿವು.
ಬಟ್ಟೆ ಎಂದರೆ ಬರಿ ವಸ್ತ್ರ ಎಂದು ತಿಳಿದಿದ್ದ ನನಗೆ ಅದು ಮಾರ್ಗ ಅಥವ ದಾರಿ ಎಂಬ ಇನ್ನೊಂದು ಅರ್ಥವನ್ನು ಕೊಡುತ್ತದೆ ಎನ್ನುವ ಹೊಸ ವಿಷಯ ತಿಳಿದಾಗಿಂದ ರೇಷ್ಮೆ ಬಟ್ಟೆಯನ್ನು ಓದುವ ಕೂತುಹಲ ಹೆಚ್ಚಾಗಿತ್ತು. ಅದರಂತೆ ಪುಸ್ತಕವನ್ನ ತರಿಸಿಕೊಂಡ ಎರಡೆ ವಾರಗಳಲ್ಲಿ ಅದನ್ನ ಓದಿ ಮುಗಿಸಿದೆ. ಅದು ನನಗೆ ಹೇಗನಿಸಿತು ಎನ್ನುವುದನ್ನ ಇಲ್ಲಿ ಬರೆದಿದ್ದೇನೆ.
ಕನ್ನಡದ ಮಟ್ಟಿಗೆ ಒಂದನೇ ಹಾಗೂ ಎರಡನೇ ಶತಮಾನದವರೆಗೆ ಹೋಗಿ ಒಂದು ಕಾದಂಬರಿಯನ್ನು ರಚಿಸಿರುವುದು ನಾನು ಮೊದಲು ಎಲ್ಲೂ ಓದಿಲ್ಲ. ಅಷ್ಟರ ಮಟ್ಟಿಗೆ ಇದೊಂದು ಅಪರೂಪದ ಪುಸ್ತಕ. ಮೊದಲನೇ ಶತಮಾನದಲ್ಲಿ ಶುರುವಾಗುವ ಈ ಕಾದಂಬರಿ ರೇಷ್ಮೆ ಬಟ್ಟೆ ಅಥವ ಸಿಲ್ಕ್ ರೂಟಿನಲ್ಲಿ ನಡೆಯುತ್ತಿದ್ದ ಆಗು ಹೋಗುಗಳನ್ನು ಒಂದಷ್ಟು ಪಾತ್ರಗಳ ಮೂಲಕ ಹೇಳುತ್ತ ಹೋಗುತ್ತದೆ. ಕುಶಾನರ ನಾಡಿನಿಂದ ಶುರುವಾಗಿ, ಪಾರಸಿಕರ ನಾಡನ್ನು ಮೆಟ್ಟಿ, ಚಿನಾದವರೆಗೆ ಕತೆ ಸಾಗುತ್ತದೆ. ಕುಶಾನರ ನಾಡಿನಲ್ಲಿ ನಮಗೆ ಹವಿನೇಮ ಹಾಗೂ ಸಗನೇಮಿಯ ಪಾತ್ರಗಳು ಸಿಕ್ಕರೆ, ಪಾರಸಿಕರ ನಾಡಾದ ಸಮರಖಂಡದಲ್ಲಿ ಮಿತ್ರವಂದಕ ಹಾಗೂ ಮುಧುಮಾಯಾರ ಜೋಡಿ ಮೋಡಿ ಮಾಡುತ್ತದೆ. ಇನ್ನು ಚೀನಾದಲ್ಲಿ ಲಿಹ್ವಾ, ವಾನ್ ಹಾಗೂ ಕಾಂಗ್ ಹೀ ಪಾತ್ರಗಳು ಕಾಣ ಸಿಗುತ್ತವೆ. ಎರಡು ನಾಡಿನ ಕತೆಗಳು ಪ್ರೇಮಕ್ಕೆ ಮುಡಿಪಾಗಿದ್ದರೆ, ಮೂರನೆಯ ನಾಡಿದ್ದು ಹೋರಾಟದ ಕತೆ. ಇವುಗಳ ನಡುವೆ ಶಿಖನೇಮ, ಜ್ಞಾನಸೇನ, ಬುದ್ಧಮಿತ್ರ, ಋತನೇಮ, ನಾನಾಪೋಷಕ ಹಾಗೂ ಇನ್ನು ಮುಂತಾದ ಪಾತ್ರಗಳು ಆ ಶತಮಾನದ ಚಿತ್ರಣವನ್ನು ಕಣ್ಣಿಗೆ ಕಟ್ಟಿ ಕೊಡುತ್ತವೆ. ಪುಸ್ತಕದಲ್ಲಿ ಧರ್ಮಗಳ ಬಗ್ಗೆ ಹಲವಾರು ಮಜಲುಗಳಲ್ಲಿ ಪಾತ್ರಗಳ ಮೂಲಕ ವಿಷಯಗಳನ್ನು ಓದುಗರಿಗೆ ಉಣಬಡಿಸಲಾಗಿದೆ. ಅದರಲ್ಲೂ ಬುದ್ಧನಂತೂ ಇಡಿ ಪುಸ್ತಕವನ್ನು ಆವರಿಸಿಕೊಂಡಿದ್ದಾನೆ ಎಂದು ಹೇಳಬಹುದು. ಪುಸ್ತಕವನ್ನು ಓದುತ್ತ ಹೋದಂತೆ ನಿಮ್ಮ ಮುಂದೆ ಒಂದು ಹಾಗೂ ಎರಡನೇ ಶತಮಾನಗಳ ದೃಶ್ಯಗಳು ಕಣ್ಣಿಗೆ ಕಟ್ಟುತ್ತವೆ. ಆ ಮಟ್ಟಿಗೆ ಲೇಖಕರು ತುಂಬ ಸಂಶೋಧನೆ ಮಾಡಿದ್ದಾರೆ ಹಾಗೂ ಆಗಿನ ಕಾಲದ ಸಾಕಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ. ಪುಸ್ತಕದಲ್ಲಿ ಆಗಿನ ಕಾಲದ ಮಾಹಿತಿಯ ಮಹಾಪೂರವೇ ಹರಿದಿದೆ ಎಂದರೆ ತಪ್ಪಾಗಲಾರದು. ಅದು ಓದುಗರ ಜ್ಞಾನವನ್ನು ನೂರಾರು ಪಟ್ಟು ಹೆಚ್ಚಿಸುವುದರಲ್ಲಿ ಸಂಶವಿಲ್ಲ.
ಇನ್ನು ಪುಸ್ತಕದಲ್ಲಿ ಅಡಗಿರುವ ಕತೆಯ ವಿಚಾರಕ್ಕೆ ಬಂದರೆ, ಅದು ತುಂಬ ಸರಳವಾಗಿದೆ ಎಂದು ಹೇಳಬಹುದು. ಕಾಡನ್ನು ಬಿಟ್ಟು ನಾಡಿಗೆ ಹೋಗಿ ತಮ್ಮ ಬಾಳನ್ನು ಬೆಳಗಿಸಿಕೊಳ್ಳಬೇಕು ಎಂದು ಹಂಬಲಿಸುವ ಹವಿನೇಮ ಹಾಗೂ ಸಗನೇಮಿ ಆಗಿರಲಿ, ಪಾರಂಪರಿಕವಾದ ವ್ಯವಸಾಯವನ್ನು ಬಿಟ್ಟು ವ್ಯಾಪರದ ಕಡೆಗೆ ಮುಖ ಮಾಡಲು ಅವಸರಿಸುತ್ತಿರುವ ಮಿತ್ರವಂದಕ ಹಾಗೂ ಮಧುಮಾಯರ ಕತೆಯಾಗಲಿ, ಅರಮನೆಗೆ ರಾಜನ ಮೂರನೇ ದರ್ಜೆಯ ಪತ್ನಿಯಾಗಿ ತೆರಳುವ ಲಿಹ್ವಾಳ ಹಾಗೂ ಅವಳ ಸೇವಕಿ ಹೀ ಯ ಕತೆಯಾಗಲಿ ಎಲ್ಲವೂ ಸುಸೂತ್ರವಾಗಿ ಸಾಗುತ್ತವೆ. ಇವರ ಕತೆಗಳ ಜೊತೆಗೆ ಜ್ಞಾನಸೇನ, ಬುದ್ಧಮಿತ್ರ ಹಾಗೂ ನಾನಾಪೋಷಕರ ಧರ್ಮದ ಬಗ್ಗೆ ಎದ್ದ ದ್ವಂದಗಳು ಸಹ ಓದುಗರ ಮನಸ್ಸಿನಲ್ಲಿ ಹಲವಾರು ಪ್ರಶ್ನೇಗಳನ್ನ ಎತ್ತುತ್ತವೆ.
ಪುಸ್ತಕ ಮುಗಿಸಿ ಒಮ್ಮೆ ಅವಲೋಕಿಸಿದಾಗ, ಪುಸ್ತಕದಲ್ಲಿ ಕತೆಗಿಂತ ಮಾಹಿತಿಯೇ ಹೆಚ್ಚಿದೆ ಎಂದು ನನಗೆ ಅನಿಸಿದ್ದು ಏಕೆ ಎಂದು ಗೊತ್ತಾಗಲಿಲ್ಲ. ಪುಸ್ತಕದಲ್ಲಿರುವ ಎಲ್ಲ ಕತೆಗಳಲ್ಲಿ ನನಗೆ ಅಷ್ಟಾಗಿ ಆಳ ಹಾಗು ತೀವ್ರತೆ ಕಂಡುಬರಲಿಲ್ಲ. ಒಂದಷ್ಟು ಕಡೆ ಪಾತ್ರಗಳ ನಡುವಿನ ಕತೆಯನ್ನು ಬಿಟ್ಟು ಆಗಿನ ಕಾಲದ ವಿವರಣೆಗಳು ಜಾಸ್ತಿಯಾಗಿದ್ದರಿಂದ ಕತೆ ನಡುವಿನಲ್ಲೇ ಬಿಟ್ಟ ಹಾಗೆ ಅನಿಸುತ್ತದೆ. ಮತ್ತೆ ಆ ಕತೆ ಮುಂದುವರೆದಾಗ ಏನಾಗಿತ್ತು ಎಂದು ಪುಟ ತಿರುಗಿಸಿ ನೋಡುವ ಹಾಗೆ ಆಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಪುಸ್ತಕದ ಅಂತ್ಯ ಧಿಡೀರನೇ ಬಂದುಬಿಟ್ಟಿತೇನೋ ಎಂದು ಭಾಸವಾಗುತ್ತದೆ. ಒಂದು ಕ್ಷಣ ಯೋಚಿಸಿದ ಮೇಲೆ ಎಲ್ಲ ಕತೆಗಳ ಜಾಡನ್ನು ಮತ್ತೋಮ್ಮೆ ಅವಲೋಕಿಸಿ ಓದುಗರೇ ಅಂತ್ಯವನ್ನು ಕಂಡುಕೊಳ್ಳಬೇಕು. ಅಷ್ಟರಮಟ್ಟಿಗೆ ಪುಸ್ತಕ ನನ್ನಲ್ಲಿ ಕೊಂಚ ನಿರಾಶೆ ಮೂಡಿಸಿತು.
ಇಷ್ಟೇಲ್ಲ ಇದ್ದರೂ ಓದಿದ ಮೇಲೆ ಬುದ್ಧನಂತೂ ನನ್ನ ಬುದ್ಧಿಯ ಮೇಲೆ ಏರಿ ಕೂತಿದ್ದು ಸುಳ್ಳಲ್ಲ. ಜೋರಾತುಷ್ಟ್ರ ಹಾಗೂ ಅಹಿಹ್ರಮಾನರ ಬಗ್ಗೆ ತಿಳುವಳಿಕೆ ಹೆಚ್ಚಾಗಿದ್ದು ಹುಸಿಯಲ್ಲ. ಬುದ್ಧಮಿತ್ರ ಕೊನೆಯಲ್ಲಿ ತನ್ನ ಧರ್ಮದ ಬುಡಕ್ಕೆ ಕೊಡಲಿ ಪೆಟ್ಟು ಕೊಡುವಂತ ನಿರ್ಧಾರ ತೆಗೆದುಕೊಂಡಿದ್ದು ಅಚ್ಚರಿ ಮೂಡಿಸದೇ ಇರಲಿಲ್ಲ. ಒಟ್ಟಿನಲ್ಲಿ ಪುಸ್ತಕ ಓದಿದ ಎರಡುವಾರಗಳು ಒಂದನೇ ಹಾಗೂ ಎರಡನೇ ಶತಮಾಗಳಲ್ಲಿ ನಾನು ಇದ್ದದ್ದು ಮಾತ್ರ ಸತ್ಯ ಎಂದು ಹೇಳದೇ ಇರಲಾಗುವುದಿಲ್ಲ. ನೀವು ಓದಿ, ಓದಿ ಓದಿ ಮರುಳಾಗಿ.
ಕೊನೆಯಲ್ಲಿ ನನಗೆ ಪುಸ್ತಕದಲ್ಲಿ ತುಂಬ ಇಷ್ಟವಾದು ಮಾತು...
"ಧರ್ಮ ಇರೋದು ನಾವು ಸುಖವಾಗಿ ಬಾಳೋದಕ್ಕಂತಲೇ ಹೊರತು, ನಾವು ಬದುಕು ಮಾಡೋದು ಧರ್ಮ ಸುಖವಾಗಿರಲಿ ಅಂತಲ್ಲ."
“ಹೆಣ್ಣು ಮಗುವಿನ ಬಾಲ್ಯ ಮತ್ತು ಹದಿಹರೆಯದ ಸಂವೇದನಾಶೀಲತೆಗೆ ಸಿಕ್ಕ, ಸಂಕೀರ್ಣ ಸಮಾಜದ ಒಳನೋಟದ ಅನಾವರಣ ಇಲ್ಲಿದೆ....
"ನನಗೆ ತಿಳಿದ ಮಟ್ಟಿಗೆ ಕವಿತೆಯಲ್ಲಿ ಸೌಂದರ್ಯ ಮೀಮಾಂಸೆ (Aesthetics) ಇರಬೇಕು, ಜೊತೆಗೆ ವಿಚಾರ ಲಹರಿಯು ಸೇರಿರಬೇ...
“ನಾನು ಇದನ್ನು ಓದುತ್ತಾ ಅಚ್ಚರಿಗೊಂಡಿದ್ದೇನೆ; ದಿಗ್ಭ್ರಾಂತನಾಗಿದ್ದೇನೆ; ಕಣ್ಣಂಚನ್ನು ಒದ್ದೆಯಾಗಿಸಿಕೊಂಡಿದ್ದೇನ...
©2024 Book Brahma Private Limited.