ಅನಿಲ್ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಹಿಡಿದಿರುವರು


"‘ಲಿಂಗಾಯತ ಖಾನಾವಳಿ’ ಇಡೀ ಕಥಾಸಂಕಲನದಲ್ಲಿ ಕ್ಲಾಸಿಕ್ ಕಥೆ. ಬದುಕು ಹುಡುಕಿ ನಗರಕ್ಕೆ ಬರುವ ಮುಗ್ಧ ಮಾದೇವನ ಮೂಲಕ ಕ್ರೌರ್ಯ ಹಾಗೂ ಮಾನವೀಯತೆ ಎರಡರ ದರ್ಶನ ಓದುಗನಿಗೆ ಮಾಡಿಸುವಲ್ಲಿ ಕಥೆ ಯಶಸ್ವಿಯಾಗಿದೆ," ಎನ್ನುತ್ತಾರೆ ರಾಜಕುಮಾರ ಕುಲಕರ್ಣಿ. ಅವರು ಅನಿಲ್ ಗುನ್ನಾಪೂರ ಅವರ ‘ಸರ್ವೆ ನಂಬರ್-97’ ಕೃತಿ ಕುರಿತು ಬರೆದ ವಿಮರ್ಶೆ.

ಸರ್ವೆ ನಂಬರ್-97 ಯುವ ಕಥೆಗಾರ ಅನಿಲ್ ಗುನ್ನಾಪೂರ ಅವರ ಎರಡನೆ ಕಥಾಸಂಕಲನ. ತಮ್ಮ ಮೊದಲ ಕಥಾಸಂಕಲನ ‘ಕಲ್ಲು ಹೂವಿನ ನೆರಳು’ ಮೂಲಕ ಕಥಾಲೋಕದಲ್ಲಿ ಭದ್ರವಾಗಿ ನೆಲೆಯೂರಿ ನಿಲ್ಲುವ ಭರವಸೆ ಮೂಡಿಸಿರುವ ಅನಿಲ್ ಅವರ ಎರಡನೆ ಕಥಾಸಂಕಲನದ ಕುರಿತು ಸಹಜವಾಗಿಯೆ ಓದುಗ ವಲಯದಲ್ಲಿ ಕುತೂಹಲವಿತ್ತು. ಚೆಂದದ ಕಥೆಗಳ ಮೂಲಕ ಅನಿಲ್ ಮತ್ತೊಮ್ಮೆ ತಮ್ಮ ಓದುಗ ಬಳಗಕ್ಕೆ ಮುಖಾಮುಖಿಯಾಗಿರುವರು.

ಕಥಾಸಂಕಲನದಲ್ಲಿ ಒಟ್ಟು ಆರು ಕಥೆಗಳಿವೆ. ಕಥೆಗಳಲ್ಲಿ ಭಾಷೆಯನ್ನು ದುಡಿಸಿಕೊಂಡ ರೀತಿ ಮತ್ತು ಕಥನ ಕಟ್ಟುವ ಶೈಲಿ ತುಂಬ ವಿಶಿಷ್ಟವಾಗಿದೆ. ‘ಲಿಂಗಾಯತ ಖಾನಾವಳಿ’ ಇಡೀ ಕಥಾಸಂಕಲನದಲ್ಲಿ ಕ್ಲಾಸಿಕ್ ಕಥೆ. ಬದುಕು ಹುಡುಕಿ ನಗರಕ್ಕೆ ಬರುವ ಮುಗ್ಧ ಮಾದೇವನ ಮೂಲಕ ಕ್ರೌರ್ಯ ಹಾಗೂ ಮಾನವೀಯತೆ ಎರಡರ ದರ್ಶನ ಓದುಗನಿಗೆ ಮಾಡಿಸುವಲ್ಲಿ ಕಥೆ ಯಶಸ್ವಿಯಾಗಿದೆ. ಖಾನಾವಳಿಯ ಧಣಿ ಧರೆಪ್ಪ ಕಾಕಾನ ದೃಷ್ಟಿಯಲ್ಲಿ ಮುಗ್ಧ ಮಾದ್ಯಾ ‘ಮಾದೇವ’ನಾಗಿ ಬೆಳೆಯುವದರೊಂದಿಗೆ ಕಥೆ ಮುಗಿಯುತ್ತದೆ. ಜಾತಿ ಎಂಬ ಸೋಂಕು ಪೆಡಂಭೂತವಾಗಿ ಮನುಷ್ಯ ಬದುಕಿನ ಭೂತ, ವರ್ತಮಾನ, ಭವಿಷ್ಯವನ್ನು ಆಕ್ರಮಿಸಿಕೊಳ್ಳುತ್ತಿದೆ ಎನ್ನುವ ದಟ್ಟ ವಿಷಾದವನ್ನು ಕಥೆ ಕಟ್ಟಿಕೊಡುತ್ತದೆ. ಇಂಥದ್ದೊಂದು ವಿಷಾದದ ನಡುವೆಯೂ ಧರೆಪ್ಪ ಕಾಕಾನಂಥವರು ಜಾತಿಯ ಚೌಕಟ್ಟನ್ನು ಮೀರಿ ಬದುಕಲು ಪ್ರಯತ್ನಿಸುತ್ತಿರುವುದು ಹೊಸ ಆಶಾಕಿರಣವಾಗಿ ಗೋಚರಿಸುತ್ತದೆ. ‘ಮೊದ್ಲು ಹೊರಗ ಹೋಗೋ ಮಾರಾಯಾ. ನಮ್ಮ ನೆಮ್ಮದಿ ಕೆಡಸ್ಲಾಕ ಯಾಕ ಬರ್ತೀರಿ’ ಎನ್ನುವ ಧರೆಪ್ಪಕಾಕಾ ಅಂತ:ಕರಣದ ಮೂರ್ತಿಯಾಗಿ ಬಹುಕಾಲ ಮನಸ್ಸಿನಲ್ಲಿ ಉಳಿಯುವನು.

ಇನ್ನುಳಿದ ಕಥೆಗಳಲ್ಲೂ ಅನಿಲ್ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಹಿಡಿದಿರುವರು. ಕಸ್ತೂರಿ, ಲ್ಯಾಂಬ್ಟನ್, ಪೀರಪ್ಪ, ನೀಲವ್ವ ಪಾತ್ರಗಳ ಓದು ಓದುಗನಲ್ಲಿ ವಿಷಾದ ಮತ್ತು ಸಂಕಟವನ್ನು ಮೂಡಿಸುತ್ತವೆ. ಪರೋಪಕಾರಿ ಲ್ಯಾಂಬ್ಟನ್ ಮೋಸಕ್ಕೆ ಬಲಿಯಾಗುವುದು, ಭಾಷೆ ಅರಿಯದ ನಾಡಿನಲ್ಲಿ ಕಸ್ತೂರಿ ಕಾಮಕ್ಕೆ ಬಲಿಯಾಗುವುದು ಇನ್ನಿಲ್ಲದಂತೆ ಕಾಡುತ್ತವೆ. ರಮೇಶ್ ಆಪ್ತನಾಗುತ್ತಾನೆ. ಪೀರಪ್ಪ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುತ್ತಾನೆ. ಒಟ್ಟಾರೆ ಇಲ್ಲಿನ ಕಥೆಗಳ ಮೂಲಕ ಅನಿಲ್ ಮನುಷ್ಯ ಬದುಕಿನ ಅನೇಕ ಸಂಕಟಗಳನ್ನು ಬೇರೆ ಮನುಷ್ಯರಿಗೆ ಮುಟ್ಟಿಸುವ ಪ್ರಯತ್ನ ಮಾಡಿರುವರು. ಕಥೆ ಎನ್ನುವುದು ಎಷ್ಟೆಂದರೂ ಜೊತೆಯ ಜೀವದ ಜೀವನವನ್ನು ಬೇರೊಂದು ಜೀವಕ್ಕೆ ಮುಟ್ಟಿಸುವುದು ಎಂದಿರುವರು ಮಾಸ್ತಿ ಅವರು.

ಅನಿಲ್ ಗುನ್ನಾಪೂರ ತಮ್ಮ ಅನುಭವಕ್ಕೆ ನಿಲುಕಿದ ಜೊತೆಯ ಜೀವಗಳ ಜೀವನವನ್ನು ಬೇರೆ ಜೀವಗಳಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೀಗೊಬ್ಬ ಓದುಗ
- ರಾಜಕುಮಾರ ಕುಲಕರ್ಣಿ

MORE FEATURES

ಪುರಿ-ಜಗನ್ನಾಥ-ಕೋನಾರ್ಕ ಪ್ರವಾಸ

25-11-2024 ಬೆಂಗಳೂರು

"ಉದಯಗಿರಿಯಲ್ಲಿ ನೆಲ ಅಂತಸ್ತು ಮಾತ್ರವಲ್ಲದೆ ಅದರ ಮೇಲೆ ಎರಡು ಅಂತಸ್ತುಗಳಿವೆ. ಒಳಗಿನಿಂದಲೇ ಮೇಲೆ ಹೋಗಬಹುದಾದ ಕಿಂ...

ಸಿನಿಮಾ ಸೇರಿದಂತೆ ದೃಶ್ಯ ಮಾಧ್ಯಮ ಒಂದು ಸಮಷ್ಟಿ ಕಲೆ

25-11-2024 ಬೆಂಗಳೂರು

“ಶೇಷಾದ್ರಿಯವರು ಸಿನಿಮಾ ನಿರ್ದೇಶಕರು, ಮತ್ತು ಅವರ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಸಿಕ್ಕಿದೆ...

ಧರ್ಮ ಇರೋದು ನಾವು ಸುಖವಾಗಿ ಬಾಳೋದಕ್ಕಂತಲೇ ಹೊರತು…

24-11-2024 ಬೆಂಗಳೂರು

“ಕನ್ನಡದ ಮಟ್ಟಿಗೆ ಒಂದನೇ ಹಾಗೂ ಎರಡನೇ ಶತಮಾನದವರೆಗೆ ಹೋಗಿ ಒಂದು ಕಾದಂಬರಿಯನ್ನು ರಚಿಸಿರುವುದು ನಾನು ಮೊದಲು ಎಲ್...