“ಶೇಷಾದ್ರಿಯವರು ಸಿನಿಮಾ ನಿರ್ದೇಶಕರು, ಮತ್ತು ಅವರ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಸಿಕ್ಕಿದೆ ಎಂದಷ್ಟೇ ಅಲ್ಲಿಯತನಕ ಗೊತ್ತಿದ್ದ ನನಗೆ (ಅವರು ಪತ್ರಕರ್ತ ರಾಗಿದ್ದುದರ ಸೂಚನೆ ಸಿಕ್ಕಿತ್ತು) ಅವರ ಇತರ ಗುಣ ಸ್ವಭಾವಗಳ ಪರಿಚಯವಾದದ್ದು ಮುಂದಿನ ದಿನಗಳಲ್ಲಿ”, ಎನ್ನುತ್ತಾರೆ ಗೋಪಾಲಕೃಷ್ಣ ಪೈ ಅವರು ತಮ್ಮ ಸಂಪಾದಕತ್ವದ "ಕಣ್ಣು ಕಂಡ ಕ್ಷಣಗಳು" ಕೃತಿಗೆ ಬರೆದ ಸಂಪಾದಕರ ಮಾತು.
ಶ್ರೀ. ಪಿ. ಶೇಷಾದ್ರಿಯವರ ಸಾಧನೆಗಳ ಬಗ್ಗೆ ಒಂದು ದಾಖಲೀಕರಣವಾಗಬೇಕು ಎಂದು ಹಿರಿಯ ನಟ ಶ್ರೀ ದತ್ತಣ್ಣ ಮಾಡಿದ ಪ್ರಸ್ತಾಪದ ಫಲ ಈ ಕೃತಿ. ಅದಕ್ಕೆ ಒಂದು ಕಾರಣವೂ ಇತ್ತು. ನಮ್ಮ ನಡುವಿನ ಖ್ಯಾತ, ನಮಗೆಲ್ಲರಿಗೂ ಆತ್ಮೀಯರಾಗಿದ್ದ ಹಿರಿಯ ಛಾಯಾಗ್ರಾಹಕ ಶ್ರೀ ಎಸ್. ರಾಮಚಂದ್ರ ಐತಾಳ್ ತೀರಿಕೊಂಡ ಮೇಲೆ, ಈ ಹತ್ತು ವರ್ಷಗಳಲ್ಲಿ ಅವರನ್ನು ಎಲ್ಲರೂ ಮರೆಯುವಂತಾಗಿತ್ತು. ನಮ್ಮ ಅನೇಕ ಪ್ರಯತ್ನಗಳು ನಡೆದಾಗ್ಯೂ ಅವರನ್ನು ನೆನಪಿಸಿಕೊಳ್ಳುವ ಯಾವುದೇ ಕಾರ್ಯಕ್ರಮ ನಡೆಯದೇ, ಅವರು ಇತಿಹಾಸದ ಮಡಿಕೆಗಳಲ್ಲಿ ಕಾಣೆಯಾಗಿದ್ದರು.
ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ, ಚಿತ್ರಕಲೆಯಿಂದ ಹಿಡಿದು ಪತ್ರಕರ್ತರಾಗಿ, ಟಿವಿ ಸರಣಿಗಳನ್ನು ನಿರ್ದೇಶಿಸಿ, ಸಿನಿಮಾಗಳನ್ನು ಮಾಡಿ ಗೆದ್ದ ಶ್ರೀ ಪಿ. ಶೇಷಾದ್ರಿಯವರ ಸಾಧನೆಗಳನ್ನು ದಾಖಲಿಸುವ ಬಗ್ಗೆ ಅನೇಕ ಗೆಳೆಯರು ಉತ್ಸಾಹ ತೋರಿಸಿದರು. ಇದಕ್ಕಾಗಿ ಒಂದು ಸಮಿತಿಯ ರಚನೆಯೂ ಆಯಿತು. ಶ್ರೀ ಗಿರೀಶ ಕಾಸರವಳ್ಳಿಯವರು ಅಧ್ಯಕ್ಷರಾಗಲು ಒಪ್ಪಿಕೊಂಡರು. ಶ್ರೀ ದತ್ತಣ್ಣ, ಶ್ರೀ ಗಿರೀಶರಾವ್ (ಜೋಗಿ), ಶ್ರೀ ಬಿ.ಎಸ್. ಲಿಂಗದೇವರು, ಶ್ರೀ ಹನೂರುಕೃಷ್ಣಮೂರ್ತಿ, ಶ್ರೀ ಸುಚೇಂದ್ರ ಪ್ರಸಾದ್, ಶ್ರೀ ಸತೀಶ್ ಚಪ್ಪರಿಕೆ, ಶ್ರೀ ಬಾ.ನಾ. ಸುಬ್ರಹ್ಮಣ್ಯ, ಶ್ರೀ ಬಿ.ಎಂ. ಹನೀಫ್, ಶ್ರೀಮತಿ ಸುಕನ್ಯ ಮಾರುತಿ ಮತ್ತು ನಾನು ಸದಸ್ಯರಾದೆವು. ಸಮಿತಿಯ ಮೊದಲ ಸಭೆಯಲ್ಲಿಯೇ ಶೇಷಾದ್ರಿಯವರ ಬಗ್ಗೆ, ಅವರ ಸಾಧನೆಗಳ ಬಗ್ಗೆ ವಿಶ್ಲೇಷಣಾತ್ಮಕವಾದ ಲೇಖನಗಳನ್ನು ತಜ್ಞರಿಂದ ಬರೆಸಿ ಪುಸ್ತಕವನ್ನು ಹೊರತರಬೇಕೆಂಬ ನಿರ್ಣಯವಾಯಿತು, ಹಾಗೂ ಅದರ ಸಂಪಾದಕತ್ವದ ಹೊಣೆಯನ್ನು ನನ್ನ ಹೆಗಲಿಗೆ ಏರಿಸಿದರು.
ಪ್ರತಿಯೊಬ್ಬ ವ್ಯಕ್ತಿಯೂ ಒಂದು ಗ್ರಂಥದಂತೆ, ನಮಗೆ ಅದನ್ನು ಓದಲು ಸಾಧ್ಯವಾಗಬೇಕು, ಅಷ್ಟೇ ಎಂಬ ನಾಣ್ಣುಡಿಯನ್ನು ನಂಬಿದವನು ನಾನು. ಆದರೆ ಶ್ರೀ. ಶೇಷಾದ್ರಿಯವರು ಸಿನಿಮಾ ನಿರ್ದೇಶಕರು, ಮತ್ತು ಅವರ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಸಿಕ್ಕಿದೆ ಎಂದಷ್ಟೇ ಅಲ್ಲಿಯತನಕ ಗೊತ್ತಿದ್ದ ನನಗೆ (ಅವರು ಪತ್ರಕರ್ತ ರಾಗಿದ್ದುದರ ಸೂಚನೆ ಸಿಕ್ಕಿತ್ತು) ಅವರ ಇತರ ಗುಣ ಸ್ವಭಾವಗಳ ಪರಿಚಯವಾದದ್ದು ಮುಂದಿನ ದಿನಗಳಲ್ಲಿ, ತೀರ ಸಣ್ಣವರಿದ್ದಾಗ, ಚಿತ್ರಕಲೆಯಲ್ಲಿ ಆಸಕ್ತಿ ತಳೆದು ಖ್ಯಾತನಾಮರಾದ ಶ್ರೀ. ಎಂ.ಟಿ.ವಿ. ಆಚಾರ್ಯರಿಂದ ಅಂಚೆಶಿಕ್ಷಣ ಪಡೆದು ಶಾಭಾಷೆಗಿರಿ ಪಡೆದಿದ್ದರಂತೆ. ಶೇಷಾದ್ರಿ ಅವರೇ ಚಿತ್ರಿಸಿದ ಆಚಾರ್ಯರ ದೊಡ್ಡ ಒಂದು ಸ್ಕೆಚ್ ಆಚಾರ್ಯರ ರುಜು ಸಮೇತ ಅವರ ಕಛೇರಿಯಲ್ಲಿ ಗಮನ ಸೆಳೆಯುವಂತೆ ನೇತು ಹಾಕಿದೆ. ಆಚಾರ್ಯರೇ ಹೇಳಿ ಶೇಷಾದ್ರಿಯವರಿಗೆ ನವಕರ್ನಾಟಕದಲ್ಲಿ ಕೆಲಸ ಕೊಡಿಸಿದ್ದರು. ಅಲ್ಲಿಂದ ಸುದ್ದಿ ಸಂಗಾತಿಗೆ ಸೇರಿ ಪತ್ರಕರ್ತರಾದರು. ಅಲ್ಲಿ ಸಹೋದ್ಯೋಗಿ ಎನ್.ಎಸ್. ಶಂಕರ್ ಜೊತೆ ಸಿನಿಮಾಕ್ಕೆ ಸಹಾಯಕನಾಗಿ ಸೇರಿದ ಶೇಷಾದ್ರಿ ಮುಂದೆ ಅಶೋಕ್ ಬಾದರದಿನ್ನಿ, ನಾಗಾಭರಣ, ಟಿ.ಎನ್. ಸೀತಾರಾಮ್ ಇವರೊಡನೆ ಕೆಲಸ ಮಾಡಿ, ಸಹಕಾರೀ ತತ್ವದಡಿಯಲ್ಲಿ ಸ್ವತಂತ್ರ ಸಿನಿಮಾ ನಿರ್ದೇಶಕರಾದದ್ದು ಒಂದು ಪವಾಡವೆಂದು ನನಗೆ ಕಾಣುತ್ತದೆ.
ಶ್ರೀ. ಶೇಷಾದ್ರಿಯವರು ಇಲ್ಲಿಯ ತನಕ 12 ಪೂರ್ಣ ಪ್ರಮಾಣದ ಕಥಾಚಿತ್ರಗಳನ್ನು ಮಾಡಿದ್ದಾರೆ. 9 ರಾಷ್ಟ್ರ ಪ್ರಶಸ್ತಿಗಳನ್ನೂ, ರಾಜ್ಯ ಪ್ರಶಸ್ತಿಗಳನ್ನೂ, ಮಲಯಾಳಂ ಚಿತ್ರರಂಗದ ನಿರ್ದೆಶಕ ಅರವಿಂದನ್ ಅವರ ಸ್ಮರಣೆಯಲ್ಲಿ ಕೊಡುವ ಅರವಿಂದನ್ ಪುರಸ್ಕಾರವನ್ನೂ ಪಡೆದ ಶೇಷಾದ್ರಿಯವರ ಸಿನಿಮಾ ಸಾಧನೆಗಳ ಬಗ್ಗೆ ಮೂಡಿದ ಈ ಕೃತಿಯ ಸಂಪಾದನೆಗೆ ಸಮಿತಿಯ ಸದಸ್ಯರು ಕೆಲವು ಮೌಲಿಕ ಸೂಚನೆಗಳನ್ನು ಕೊಟ್ಟಿದ್ದು ನನಗೆ ಸಹಾಯಕ ವಾಗಿದೆ. ಲೇಖನಗಳನ್ನು ಬರೆಯುವಾಗ ಶ್ರೀ ಶೇಷಾದ್ರಿಯವರ ಪೂರ್ಣ ಸಿನಿಮಾಯಾನದ ಬಗ್ಗೆಯೂ ಕೆಲವರು ವಿಸ್ತ್ರತವಾಗಿ ಬರೆದಿದ್ದಾರಲ್ಲದೇ ಕನ್ನಡದ ಚಿತ್ರರಂಗದ ಬಗ್ಗೆಯೂ ಟಿಪ್ಪಣಿಗಳನ್ನು ಮಾಡಿದ್ದಾರೆ. ಶ್ರೀ ಗಿರೀಶ ಕಾಸರವಳ್ಳಿಯವರಂತೆ ಕೆಲವರು ಶ್ರೀ ಶೇಷಾದ್ರಿ ಅವರ ಸಿನಿಮಾಗಳಿಗೆ ಹೊಸ ವ್ಯಾಖ್ಯಾನವನ್ನು ಮಾಡಿರುವುದು ನನಗೆ ಸಾರ್ಥಕ ಮನೋಭಾವವನ್ನು ಕೊಟ್ಟಿದೆ. ಮುಂದಿನ ತಲೆಮಾರಿಗೆ ಆಕೃತಿ ಅಧ್ಯಯನ ಯೋಗ್ಯವಾಗಿದೆ ಎನ್ನುವುದು ನನ್ನ ನಂಬಿಕೆ.
ಈ ಕೃತಿಯಲ್ಲಿ ಶ್ರೀ ಶೇಷಾದ್ರಿಯವರು ರಚಿಸಿದ ಕಿರುಚಿತ್ರ ಮಾಸ್ತಿಯವರ 'ಸುಬ್ಬಣ್ಣ' ಬಗ್ಗೆ ಕನ್ನಡದ ಖ್ಯಾತ ವಿಮರ್ಶಕರಾದ ಶ್ರೀ ಟಿ.ಪಿ. ಅಶೋಕ ಅವರೂ ಹಾಗೂ ಶ್ರೀ ಬೊಳುವಾರು ಬರೆದ 'ಒಂದು ತುಂಡು ಗೋಡೆ' ಕಥೆಯ ಆಧರಿಸಿದ ಸಿನಿಮಾಗಳ ಬಗ್ಗೆ ಅಪೂರ್ವ ಒಳನೋಟಗಳಿರುವ ಶ್ರೀ. ಮನು ಚಕ್ರವರ್ತಿಯವರೂ ಬರೆದಿದ್ದಾರೆ. ಅಲ್ಲದೇ 'ದೇವಕಾರು' ಎಂಬ ಸಾಕ್ಷ್ಯಚಿತ್ರದ ಬಗ್ಗೆ ಶ್ರೀ ಮನು ಚಕ್ರವರ್ತಿಯವರೂ, ಸಾಹಿತಿ ಶ್ರೀ ಸತೀಶ್ ಚಪ್ಪರಿಕೆಯವರೂ ಬೇರೆ ಬೇರೆ ಲೇಖನಗಳನ್ನು ಬರೆದಿದ್ದಾರೆ. ಇವಲ್ಲದೇ ಶ್ರೀ ಶೇಷಾದ್ರಿಯವರು ಕೆಲವು ಕಿರುಚಿತ್ರಗಳನ್ನೂ ಸಾಕ್ಷ್ಯಚಿತ್ರಗಳನ್ನೂ ರಚಿಸಿದ್ದಾರೆ. ಅವರ ಜೊತೆ ಕೆಲವದರಲ್ಲಿ ಕೆಲಸ ಮಾಡಿದ ಛಾಯಾಗ್ರಾಹಕ ಶ್ರೀ ಬಿ.ಎಸ್. ವಿಶ್ವನಾಥ್ ಬರೆದ ಶೇಷಾದ್ರಿಯ ಕೆಲಸದ ವೈಖರಿಯ ಬಗ್ಗೆ ದೀರ್ಘವಾದ ಒಂದು ಲೇಖನವೂ ಇದೆ.
ಕಳೆದ ಶತಮಾನದ 80ರ ದಶಕದಲ್ಲಿ ಶ್ರೀ ಶೇಷಾದ್ರಿಯವರು ಶ್ರೀ ಟಿ.ಎನ್. ಸೀತಾರಾಮ್ ಹಾಗೂ ಶ್ರೀ ನಾಗೇಂದ್ರ ಶಾ ಜೊತೆಗೂಡಿ ದೂರದರ್ಶನಕ್ಕಾಗಿ ಕಥೆಗಾರ ಅನ್ನುವ ಒಂದು ಅಪೂರ್ವ ಟಿವಿ ಸರಣಿಯ ಚಿತ್ರಗಳನ್ನು ಮಾಡಿ, ಕನ್ನಡದ ಅನೇಕ ಕಥೆಗಾರರ ಕಥೆಗಳನ್ನು ಆಯ್ದು ಅವುಗಳನ್ನು ದೃಶ್ಯ ಮಾಧ್ಯಮದಲ್ಲಿ ಪ್ರಸ್ತುತಪಡಿಸಿದರು. ಅದು ನೂರಕ್ಕಿಂತ ಹೆಚ್ಚು ಕಂತುಗಳಾಗಿ ಮೂಡಿ ಬಂದು ಭಾರತೀಯ ಟಿವಿ ಇತಿಹಾಸದಲ್ಲಿಯೇ ವಿಶಿಷ್ಟವೆನಿಸಿ ಜನಮನ್ನಣೆ ಗಳಿಸಿತು. ಅವುಗಳಲ್ಲಿ ಶ್ರೀ ಶೇಷಾದ್ರಿಯವರು ನಿರ್ದೇಶಿಸಿದ 36 ಕಂತುಗಳಿದ್ದುವು. ಅವನ್ನು ಕುರಿತು ಏಳು ಜನ ಸಾಹಿತಿಗಳು ಬರೆದ ವಿಮರ್ಶಾ ಲೇಖನಗಳೂ ಇಲ್ಲಿ ಸೇರಿಸಲ್ಪಟ್ಟಿವೆ.
ಸಿನಿಮಾ ಸೇರಿದಂತೆ ದೃಶ್ಯ ಮಾಧ್ಯಮ ಒಂದು ಸಮಷ್ಟಿ ಕಲೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಒಬ್ಬನೇ ಅದನ್ನು ಸೃಷ್ಟಿಸಲಾರ. ಅದಕ್ಕೆ ಅನೇಕ ಟ್ಯಾಲೆಂಟ್ಸ್ ಗಳ ಸಹಕಾರ ಬೇಕು. ಅರ್ಥಾತ್ ಅವರೆಲ್ಲ ಶ್ರೀ ಶೇಷಾದ್ರಿಯವರ ಒಡನಾಡಿಗಳು. ಅವರಲ್ಲಿ ಅನೇಕರನ್ನು ಸಂಪರ್ಕಿಸಿದೆ. ಈ ಒಡನಾಡಿಗಳಲ್ಲಿ ಕೆಲವರು ಲೇಖಕರಲ್ಲದಿದ್ದರೂ ನಾನು ಅವರನ್ನು ಕೇಳಿದ ಕೂಡಲೇ ಶೇಷಾದ್ರಿಯವರ ಮೇಲಿನ ಅಭಿಮಾನದಿಂದ ಅತ್ಯುತ್ಸಾಹದಿಂದ ಲೇಖನಗಳನ್ನು ಬರೆದುಕೊಟ್ಟರು. ಎಲ್ಲರೂ ತಾವು ಕಂಡ ಶ್ರೀ ಶೇಷಾದ್ರಿಯವರ ವ್ಯಕ್ತಿತ್ವವನ್ನು ಅವರು ಅನಾವರಣ ಮಾಡಿದ್ದಾರೆ. ಪ್ರತಿಯೊಬ್ಬರೂ ಶ್ರೀ ಶೇಷಾದ್ರಿಯವರ ಅಚ್ಚುಕಟ್ಟುತನ, ಶ್ರದ್ಧೆ, ಪ್ರಾಮಾಣಿಕತೆ, ಸ್ಪಷ್ಟತೆ, ವಾಗ್ನಿತೆ, ಶಾಂತತೆ, ಮುಂತಾದುವುಗಳ ಬಗ್ಗೆ ಮುಕ್ತವಾಗಿ ದಾಖಲಿಸಿದ್ದಾರೆ. ಅವನ್ನೆಲ್ಲ ಓದಿದಾಗ ಮೊದಲಿಗೆ ನನಗೆ ಅನ್ನಿಸಿದ್ದು ಶ್ರೀ ಶೇಷಾದ್ರಿ ಚಿತ್ರರಂಗದ ಅಜಾತಶತ್ರು ಎನ್ನುವ ಭಾವ.
ಇಲ್ಲಿ ಬಳಸಿದ 'ಸ್ಟಿಲ್ಸ್'ಗಳ ಜೊತೆಗೆ ಶ್ರೀ ಶೇಷಾದ್ರಿಯವರೇ ರಚಿಸಿದ ಕೆಲವು ಚಿತ್ರಗಳನ್ನು ಅವರು ತೆಗೆದುಕೊಡುವಾಗ ನಾನು ಗಮನಿಸಿದ ಒಂದು ವಿಶೇಷವೆಂದರೆ ಶೇಷಾದ್ರಿಯವರು ಎಲ್ಲವನ್ನೂ ಅಚ್ಚುಕಟ್ಟಾಗಿ ಸಂಗ್ರಹಿಸಿಡುವ ಕ್ರಮ. 'ಜನುಮದ ಜೋಡಿ' ಚಿತ್ರದ ಜನಪ್ರಿಯ ಹಾಡು "ಹುಟ್ಟಿದರೆ ಕನ್ನಡ ನಾಡಲ್ಲಿ......" ರೆಕಾರ್ಡ್ ಮಾಡುವಾಗ ತಮ್ಮ ಸುಂದರ ಕೈಬರಹದ ಪ್ರತಿಯನ್ನು ಶ್ರೀ ಶೇಷಾದ್ರಿ ಡಾ. ರಾಜಕುಮಾರ್ ಅವರಿಗೆ ಕೊಟ್ಟದ್ದು, ಅದರಲ್ಲಿ ಒಂದೆರಡು ಶಬ್ದಗಳನ್ನು ಅಣ್ಣಾವು ತಿದ್ದಿಕೊಟ್ಟದ್ದನ್ನು ಅವರು ಪ್ರಸಾದ ರೂಪವಾಗಿ ಶೇಖರಿಸಿ ಇಟ್ಟದ್ದನ್ನು (ಈ ವಿಚಾರ ಸಂಕೇತ್ಗುರುದತ್ರು ತಮ್ಮ ಲೇಖನದಲ್ಲಿ ವಿವರವಾಗಿ ಬರೆದಿದ್ದಾರೆ) ಇದರಲ್ಲಿ ಸೇರಿಸಲು ಸಾಧ್ಯವಾದದ್ದು ನನ್ನ ಪುಣ್ಯವಿಶೇಷ. ಶ್ರೀ ಶೇಷಾದ್ರಿಯವರು ಒಬ್ಬ ಅತ್ಯುತ್ತಮ ಓದುಗರೂ ಹೌದು. ಆದುದರಿಂದ ಅವರ ಕಛೇರಿ ಸಾವಿರಾರು ಪುಸ್ತಕಗಳು ಹಾಗೂ ಅವರಿಗೆ ದೊರೆತ ಪ್ರಶಸ್ತಿಗಳ ಫಲಕಗಳ ಜೊತೆ, ಅಸಂಖ್ಯ ಫೋಟೋಗಳೂ ಸೇರಿ ಒಂದು ಮ್ಯೂಸಿಯಂ ಹಾಗಿದ್ದು, ಅವರು ಬರೆದ ಚಿತ್ರಕಲೆಯ ಸಂಗ್ರಹ, ಲೇಖನಗಳ ಸಂಗ್ರಹ, ಇತ್ಯಾದಿಗಳ ಮೇಲೆ ಕಣ್ಣಾಡಿಸಿದಾಗ ಅವರ ಅನೇಕ (ಇನ್ನೂ ಸಿನಿಮಾ ಮಾಡಿರದ) ಚಿತ್ರಕಥೆಗಳೂ ಕಂಡವು. ಆಗಲೇ ನನಗೆ ಅವರ ಮಹತ್ವಾಕಾಂಕ್ಷೆಯ ಕಿಟ್ಟೆಲ್ ಬಗ್ಗೆ ಮಾಡ ಬಯಸುವ ಬಯೋಪಿಕ್ ಒಂದರ ಚಿತ್ರಕಥೆಯೂ, ಅದಕ್ಕೆ ಸಂಬಂಧಿಸಿದ ನೂರಾರು ಟಿಪ್ಪಣಿಗಳೂ ಇದ್ದು ಸೂಕ್ತ ನಿರ್ಮಾಪಕರನ್ನು ಕಾಯುತ್ತಿದೆ ಎನ್ನುವುದು ನನ್ನ ಗಮನಕ್ಕೆ ಬಂತು.
- ಗೋಪಾಲಕೃಷ್ಣ ಪೈ
"ಉದಯಗಿರಿಯಲ್ಲಿ ನೆಲ ಅಂತಸ್ತು ಮಾತ್ರವಲ್ಲದೆ ಅದರ ಮೇಲೆ ಎರಡು ಅಂತಸ್ತುಗಳಿವೆ. ಒಳಗಿನಿಂದಲೇ ಮೇಲೆ ಹೋಗಬಹುದಾದ ಕಿಂ...
"‘ಲಿಂಗಾಯತ ಖಾನಾವಳಿ’ ಇಡೀ ಕಥಾಸಂಕಲನದಲ್ಲಿ ಕ್ಲಾಸಿಕ್ ಕಥೆ. ಬದುಕು ಹುಡುಕಿ ನಗರಕ್ಕೆ ಬರುವ ಮುಗ್ಧ ...
“ಕನ್ನಡದ ಮಟ್ಟಿಗೆ ಒಂದನೇ ಹಾಗೂ ಎರಡನೇ ಶತಮಾನದವರೆಗೆ ಹೋಗಿ ಒಂದು ಕಾದಂಬರಿಯನ್ನು ರಚಿಸಿರುವುದು ನಾನು ಮೊದಲು ಎಲ್...
©2024 Book Brahma Private Limited.