ಪ್ರೀತಿಯ ‘ವಾಸುವೇಟ್ಟಾ’ಗೆ ನುಡಿನಮನ..

Date: 26-12-2024

Location: ಬೆಂಗಳೂರು


"ಸಾಹಿತ್ಯ ದಿಗ್ಗಜ, ಬಹುಮುಖ ಪ್ರತಿಭೆ ಎಂ.ಟಿ.ವಾಸುದೇವನ್ ನಾಯರ್, ತಮ್ಮ 92ನೆಯ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಕಣ್ಣುಗಳು ತುಂಬುತ್ತಿವೆ. ಮನಸ್ಸು ಭಾರವಾಗಿದೆ. ವಯಸ್ಸು ಆಗಿದ್ದರೂ ನಮಗೆ ಹತ್ತಿರವಾದವರು ಎಷ್ಟು ಕಾಲ ನಮ್ಮ ಜತೆಗಿದ್ದರೂ ಅದು ಕಡಿಮೆಯೇ ಅನ್ನಿಸುವುದು ಸಹಜ. ಅವರು ಬಿಟ್ಟು ಹೋದ ಮಹಾ ಶೂನ್ಯವನ್ನು ಯಾರು ತಾನೇ ತುಂಬಬಲ್ಲರು?," ಎನ್ನುತ್ತಾರೆ ಪಾರ್ವತಿ ಜಿ. ಐತಾಳ್. ಅವರು ಎಂ.ಟಿ.ವಾಸುದೇವನ್ ನಾಯರ್ ಅವರ ಅಗಲಿಕೆಯ ಕುರಿತು ಬರೆದ ನುಡಿನಮನ..

ನಾನು ಪ್ರೀತಿಯಿಂದ 'ವಾಸುವೇಟ್ಟಾ' ಎಂದು ಕರೆಯುತ್ತಿದ್ದ ಪ್ರಿಯ ಲೇಖಕ, ಮಲೆಯಾಳ ಸಾಹಿತ್ಯ ದಿಗ್ಗಜ, ಬಹುಮುಖ ಪ್ರತಿಭೆ ಎಂ.ಟಿ.ವಾಸುದೇವನ್ ನಾಯರ್, ತಮ್ಮ 92ನೆಯ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಕಣ್ಣುಗಳು ತುಂಬುತ್ತಿವೆ. ಮನಸ್ಸು ಭಾರವಾಗಿದೆ. ವಯಸ್ಸು ಆಗಿದ್ದರೂ ನಮಗೆ ಹತ್ತಿರವಾದವರು ಎಷ್ಟು ಕಾಲ ನಮ್ಮ ಜತೆಗಿದ್ದರೂ ಅದು ಕಡಿಮೆಯೇ ಅನ್ನಿಸುವುದು ಸಹಜ. ಅವರು ಬಿಟ್ಟು ಹೋದ ಮಹಾ ಶೂನ್ಯವನ್ನು ಯಾರು ತಾನೇ ತುಂಬಬಲ್ಲರು?

ಅವರ ಕಾದಂಬರಿಗಳನ್ನು ಕಾಸರಗೋಡು ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಓದಿ ಇಷ್ಟಪಟ್ಟಿದ್ದೆನಾದರೂ ಅವರನ್ನು ನೇರವಾಗಿ ಭೇಟಿಯಾದದ್ದು 1999 ಆಗಸ್ಟ್ 12ರಂದು ನನ್ನ ಮೊದಲ ಅನುವಾದ ವೆಟ್ಟೂರು ರಾಮನ್ ನಾಯರರ 'ಬದುಕಲು ಮರೆತ ಸ್ತ್ರೀ' ಎಂಬ ಕಾದಂಬರಿಯನ್ನು ಅವರು ತಮ್ಮ ಅಮೃತ ಹಸ್ತದಿಂದ ಬಿಡುಗಡೆ ಮಾಡಿದಾಗ. ತ್ರಿಶ್ಶೂರಿನ ಕೇರಳ ಸಾಹಿತ್ಯ ಅಕಾಡೆಮಿ ಹಾಲ್ ನಲ್ಲಿ. ಅಲ್ಲಿ ಎಲ್ಲರೂ ಎಂ.ಟಿ.ಬಗ್ಗೆ ಮಾತನಾಡುತ್ತಿದ್ದುದನ್ನು ನೋಡಿದಾಗ ಅಲ್ಲಿನ ಜನರಿಗೆ ಅವರೆಂದರೆ ಎಷ್ಟೊಂದು ಭಯ-ಭಕ್ತಿ-ಪ್ರೀತಿ-ಗೌರವ ಅನ್ನುವುದು ನನಗೆ ಅರ್ಥವಾಯಿತು. ಜನರ ದೃಷ್ಟಿಯಲ್ಲಿ ಅವರೊಂದು ಲಿವಿಂಗ್ ಲೆಜೆಂಡ್ ಆಗಿದ್ದಾರೆ ಅನ್ನಿಸಿತು.‌ ಕಾರ್ಯಕ್ರಮ ಆರಂಭವಾಗುವುದಕ್ಕೆ ಮೊದಲು ವೆಟ್ಟೂರರು ಬಂದು 'ಎಂ.ಟಿ.ಪಾರ್ವತಿಯೆ ವಿಳಿಕ್ಕುನ್ನು' (ಎಂ.ಟಿ.ಪಾರ್ವತಿಯನ್ನು ಕರೆಯುತ್ತಿದ್ದಾರೆ) ಎಂದಾಗ ನಾನು ರೋಮಾಂಚನಗೊಂಡೆ. ಅವರ ಛೇಂಬರಿಗೆ ಹೋಗಿ ಕಂಪಿಸುತ್ತ 'ನಮಸ್ಕಾರ'ಎಂದೆ. ಸರಳವಾಗಿ ಮುಂಡು-ಷರಟು ಧರಿಸಿದ್ದರೂ ಎಂಥ ಧೀಮಂತ ವ್ಯಕ್ತಿತ್ವ ಎಂದು ನನಗನ್ನಿಸಿತು. ಯಾವ ಹಮ್ಮು-ಬಿಮ್ಮು ಇಲ್ಲದ ಸೌಜನ್ಯಪೂರ್ಣ ನಡವಳಿಕೆ. ನೇರ ಮಾತು. ಅವರ ಧ್ವನಿಯಲ್ಲಿ ಸ್ನೇಹಪೂರ್ಣ ಮಾರ್ದವತೆ ತುಂಬಿತ್ತಾದರೂ ಮುಖದಲ್ಲಿ ನಗು ಇಲ್ಲ. (ಅವರು ನಗುವುದಿಲ್ಲ ಎಂದೇ ಪ್ರಸಿದ್ಧ). ಅವರು ನನಗೆ ಮಲೆಯಾಳ ಸಾಹಿತ್ಯದ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳಿ ಕನ್ನಡದ ಕೆಲವು ಸಾಹಿತಿಗಳ ಮತ್ತು ಅನುವಾದದ ಮೂಲಕ ಅವರ ಕೃತಿಗಳ ಪರಿಚಯ ತನಗಿದೆ ಎಂದರು. ನಾನು ಅವರ ಕೆಲವು ಕಾದಂಬರಿಗಳನ್ನು ಓದಿ ಇಷ್ಟ ಪಟ್ಟ ಬಗ್ಗೆ ಹೇಳಿದೆ. ಅವರ ಹತ್ತಿರ ಮೊದಲ ಬಾರಿ ಅಷ್ಟು ಮಾತನಾಡಿದ್ದು ಒಂದು ಅವಿಸ್ಮರಣೀಯ ಅನುಭವ. ನಂತರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಸಾಹಿತ್ಯ ಕೃತಿಗಳ ಅನುವಾದ-ಆದಾನ ಪ್ರದಾನ-ಗಳ ಅಗತ್ಯದ ಬಗ್ಗೆ ತುಂಬಾ ಹೊತ್ತು ಮಾತನಾಡಿದರು ವಿದಾಯ ಹೇಳುವಾಗ ನಾನು ಅವರ ಅಂಚೆ ವಿಳಾಸ ತಗೊಂಡೆ.

ಅದು ಪತ್ರ ವಿನಿಮಯಗಳ ಕಾಲ. ಊರಿಗೆ ಬಂದ ನಂತರ ನಾನು ಅವರಿಗೆ ಪತ್ರಗಳನ್ನು ಬರೆದೆ.ಪ್ರತಿ ಪತ್ರಕ್ಕೂ ಅವರು ಉತ್ತರಿಸುತ್ತಿದ್ದರು. ನಾನು ಮಲೆಯಾಳದಲ್ಲಿ ಪತ್ರ ಬರೆಯುತ್ತಿದ್ದುದನ್ನು ನೋಡಿ ಅವರಿಗೆ ಖುಷಿಯಾಗಿತ್ತು. ಆ ಮೇಲೆ ನಾನು ಒಂದಾದ ಮೇಲೊಂದರಂತೆ ಅವರ ಎರಡು ಕಾದಂಬರಿಗಳನ್ನು, ಎರಡು ಕಥಾ ಸಂಕಲನಗಳನ್ನು ಕನ್ನಡಕ್ಕೆ ಅನುವಾದಿಸುವುದಲ್ಲದೆ ಅವರ ಬದುಕು-ಬರಹಗಳ ಬಗ್ಗೆ ಒಂದು ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಗೋಸ್ಕರ ಬರೆದೆ. ಇಷ್ಟೆಲ್ಲಾ ಮುಗಿಸುವಷ್ಟರಲ್ಲಿ ಅವರು ನನಗೆ ತುಂಬಾ ಆತ್ಮೀಯರಾಗಿದ್ದರು. ನಾನು ಎರಡು ಬಾರಿ ಅವರ ಮನೆಗೆ ಹೋಗಿ ಅವರ ಆತಿಥ್ಯ ಸ್ವೀಕರಿಸಿದ್ದೆ. ಅವರು ತಮ್ಮ 'ತೀರ್ಥಾಟನಂ'ಎಂಬ ಸಿನಿಮಾದ ಷೂಟಿಂಗಿಗೆ ಕುಟಜಾದ್ರಿಗೆ ಬಂದಾಗ ನಮ್ಮ ಮನೆಗೂ ಬಂದಿದ್ದರು. ನಾನು ಆಗಾಗ ಅವರಿಗೆ ಫೋನ್ ಮಾಡುತ್ತಿದ್ದೆ. ಅಗೆಲ್ಲ ನನ್ನ ಬರವಣಿಗೆಯನ್ನು ಅವರು ಪ್ರೋತ್ಸಾಹಿಸುತ್ತಲೇ ಇದ್ದರು. ಕಳೆದ ವರ್ಷವಷ್ಟೇ ಅವರಲ್ಲಿಗೆ ಹೋಗಿದ್ದಾಗ ನಾನು ಅನುವಾದದ ಬಗ್ಗೆ ಅವರದ್ದೊಂದು ಸಣ್ಣ ಸಂದರ್ಶನ ನಡೆಸಿದ್ದೆ. 'ನೀನು ಬಹಳ ಒಳ್ಳೆಯ ಕೆಲಸ ಮಾಡ್ತಾ ಇದ್ದೀ ಪಾರ್ವತೀ' ಎಂದು ಮೆಚ್ಚುಗೆ ತೋರಿಸಿ ಅವರು ಸದಾ ನನ್ನನ್ನು ಹುರಿದುಂಬಿಸುತ್ತಲೇ ಬಂದರು. ಅವರು ನನ್ನ ಮೇಲೆ ತೋರಿಸಿದ ಈ ವಾತ್ಸಲ್ಯದ ಋಣವನ್ನು ತೀರಿಸುವುದು ಸಾಧ್ಯವೇ ಇಲ್ಲ.

ಅವರಿಗೆ ಹೃದಯಾಘಾತವಾಗಿ ಕ್ಯಾಲಿಕಟ್ ನಲ್ಲಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರೆಂದು ನನಗೆ ಮೊದಲೇ ಗೊತ್ತಾಗಿತ್ತು. 20ನೇ ತಾರೀಕು ಶುಕ್ರವಾರದಂದು ಅವರ 'ಕೊನೆಯ ಗಂಟೆಗಳು' ಎಂದು ಡಾಕ್ಟರುಗಳು ಘೋಷಿಸಿದ್ದರು. ಆದರೆ ವೈದ್ಯಕೀಯ ಕ್ಷೇತ್ರವನ್ನೇ ಬೆಚ್ಚಿ ಬೀಳಿಸುವಂತೆ ಅದುವರೆಗೆ ನಿಶ್ಚೇಷ್ಟಿತರಾಗಿದ್ದ ಅವರಲ್ಲಿ ಚಲನೆ ಕಂಡು ಬಂತು. ಅದಕ್ಕೆ ಕಾರಣ ಅವರ ಮನೋಬಲ ಮತ್ತು ಮೆದುಳಿನ ಶಕ್ತಿ ಎಂದು ಡಾಕ್ಟರುಗಳು ಹೇಳಿದರು. ಅನಂತರ ನಿನ್ನೆಯ ತನಕ ಪರಿಸ್ಥಿತಿ ಹೆಚ್ಚು ಕಡಿಮೆ ಆಗುತ್ತಲೇ ಇದ್ದು ನಿನ್ನೆ ಕೊನೆ ತಲುಪಿತು. ಈಗ ಅವರಿಲ್ಲ ಅನ್ನುವ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಅಂತ್ಯವಾಗಿದೆ, ಎಂ.ಟಿ.ಯುಗದ ಅಂತ್ಯವಾಗಿದೆ ಹೌದು.

ನಾನೀಗ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಕೋಝಿಕ್ಕೋಡಿಗೆ ಹೋಗುತ್ತಿದ್ದೇನೆ.ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದೂ ಅವರ ಆಶೀರ್ವಾದ ಸದಾ ನನ್ನ ಮೇಲಿರಲೆಂದೂ ದೇವರಲ್ಲಿ ಪ್ರಾರ್ಥಿಸಿ ಅವರಿಗೆ ಅಂತಿಮ‌ ನಮನ ಸಲ್ಲಿಸಿ ಬರಬೇಕೆಂದಿದ್ದೇನೆ.

MORE NEWS

ಆರ್ಥಿಕ ಸುಧಾರಣೆಗಳ ಹರಿಕಾರ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಇನ್ನಿಲ್ಲ..

26-12-2024 ಬೆಂಗಳೂರು

ದೆಹಲಿ: ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಖಾಯಿಲೆಯಿಂದ ಬಳಲ...

ಸಮಾಜಮುಖಿ ವಾರ್ಷಿಕ ಕಥಾಪುರಸ್ಕಾರ-2024ಕ್ಕೆ ಅರ್ಜಿ ಆಹ್ವಾನ

26-12-2024 ಬೆಂಗಳೂರು

ಬೆಂಗಳೂರು: ಸಮಾಜಮುಖಿ ವಾರ್ಷಿಕ ಕಥಾಪುರಸ್ಕಾರ-2024ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಐದು ಬಹುಮಾನಿತ ಕಥೆಗಳಿಗೆ ತಲಾ ...

ಕಿ.ರಂ. ನಾಗರಾಜ ಪ್ರಶಸ್ತಿ ಪ್ರದಾನ ಸಮಾರಂಭ

25-12-2024 ಬೆಂಗಳೂರು

ಬೆಂಗಳೂರು: ಪ್ರೊ.ಕಿರಂ ನೆನಪಿನ ಕವಿಗೋಷ್ಠಿ ಮತ್ತು ಪ್ರೊ.ಕಿ.ರಂ ನಾಗರಾಜ ಸಂಸ್ಕೃತಿ ಪ್ರಶಸ್ತಿ ಪ್ರದಾನ ಸಮಾರಂಭವು 2024 ...