Date: 05-06-2023
Location: ಬೆಂಗಳೂರು
''ಪ್ರಕೃತಿಯ ಸೊಬಗನ್ನು ಚೆಂದವಾಗಿ ಸೆರೆಹಿಡಿದು ಬೇರೇಯವರಿಗೆ ತೋರಿಸಬೆಕೆಂಬ ಬಯಕೆ ಹೆಚ್ಚಾಯಿತು. ಹಾಗೂ ಹೀಗೂ ಪ್ರಯತ್ನ ಮಾಡಿ ಅದನ್ನು ಕಲಿತೆ, ಆ ಫೋಟೋಗಳನ್ನು ನಾನು ಕೂಡ ಅಪ್ಲೋಡ್ ಮಾಡಲು ಶುರುಮಾಡಿದೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದ್ದದ್ದನ್ನು ನೋಡಿ ಖುಷಿಯಾಗ್ತಿತ್ತು. ಅವಾಗೆಲ್ಲ ಇಂತಹ ಇನ್ನೂ ಹೆಚ್ಚು ಫೋಟೋ ತೆಗೆಯಬೇಕೆಂದು ಅನ್ನಿಸ್ತಾ ಇತ್ತು. ಆದರೆ ನನ್ನ ಬಳಿ ಸ್ವಂತ ಕ್ಯಾಮೆರಾ ಇಲ್ಲ ಹಾಗಾಗಿ ಫೋಟೋ ತೆಗೆಯಬೇಕೆಂದಾಗಲೆಲ್ಲ ಫೋಟೋ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ,'' ಎನ್ನುತ್ತಾರೆ ಅಂಕಣಗಾರ್ತಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ಸದ್ದಾಂಡಿ ಗುಮಗೇರಿ’ ಅವರ ಜೀವನ ಯಾನವನ್ನು ತೆರೆದಿಟ್ಟಿದ್ದಾರೆ.
ಅಚಾನಕ್ಕಾಗಿ ಬೆಳೆದು ಬಂದ ಉತ್ತಮ ಹವ್ಯಾಸವನ್ನು ಬಡತನದೊಂದಿಗೆ ಕಾಪಾಡಿಕೊಳ್ಳುವುದು ಅದನ್ನೇ ನಂಬಿಕೊಂಡು ಬದುಕುವುದು ಅಷ್ಟು ಸುಲಭವಲ್ಲ. ಜಾತಿ ಧರ್ಮಕ್ಕಿಂತ ಮಾನವೀಯತೆ ಮಿಗಿಲು. ಮಾನವೀಯತೆ ಮನುಷ್ಯನನ್ನು ಬೆಸೆಯುವ ಧರ್ಮ. ಫೋಟೋಗ್ರಫಿ ಎಂಬ ಹವ್ಯಾಸದಿಂದ ಬದುಕು ಕಟ್ಟಿಕೊಂಡು ಅವಶ್ಯವಿದ್ದವರಿಗೆ ರಕ್ತದಾನ, ಇತರೆ ಸಹಾಯ ಮಾಡುತ್ತ ಸಮಾಜಸೇವೆಯನ್ನು ತಮ್ಮ ಧ್ಯೇಯವಾಗಿಸಿಕೊಂಡು ಧರ್ಮದಾಚೆಗೆ ಮಾನವೀಯತೆಯ ಹಸ್ತ ಚಾಚಿರುವ ಕುಷ್ಟಗಿ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಸದ್ದಾಂಡಿ ಗುಮಗೇರಿಯವರ ಜೀವನ ಯಾನ ಅವರ ಮಾತುಗಳಲ್ಲಿ ಇಂದಿನ ನಿಮ್ಮ ಓದಿಗೆ.
'ತಂದೆ ದಾವಲಸಾಬ್ ಗುಮಗೇರಿ ತಾಯಿ ಚಂದಾ ಬೀ ಗುಮಗೇರಿ. ಅಪ್ಪ ಲಾರಿ ಡ್ರೈವರ್ ಅಮ್ಮ ಮಕ್ಕಳನ್ನು ನೋಡಿಕೊಂಡು ಬೇರೆಯವರ ಹೊಲದಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಬಡತನದಲ್ಲೂ ಬದುಕು ಶ್ರೀಮಂತವಾಗಿತ್ತು. 2008ರಲ್ಲಿ ಅಚಾನಕ್ಕಾಗಿ ಅಪ್ಪ ತೀರಿಕೊಳ್ಳುತ್ತಾರೆ. ಮೊದಲೇ ಬಡತನದಲ್ಲಿ ಮುಳುಗಿದ್ದ ನಮ್ಮ ಕುಟುಂಬದ ಪರಿಸ್ಥಿತಿ ಅಪ್ಪನ ಮರಣದ ಇನ್ನಷ್ಟು ಬಿಗಡಾಯಿಸಿತು. ಕುಟುಂಬದ ಜವಾಬ್ದಾರಿ ನಮ್ಮ ಅಣ್ಣಂದಿರ ಮೇಲೆ ಬಿತ್ತು ಅವರ ಜೊತೆಗೆ ನಾನು ಪಿ. ಯು. ಸಿ.ವರೆಗೆ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡಿದ್ದೆ. ಅವ್ವ ಮತ್ತು ಅಣ್ಣಂದಿರ ಜೊತೆಗೆ ನಾನು ಅಲ್ಪ ಸ್ವಲ್ಪ ಸಂಸಾರದ ಜವಾಬ್ದಾರಿ ಹೊತ್ತು ಏಳನೇ ತರಗತಿಯಿಂದಲೇ ಕಿರಾಣಿ ಶಾಪ್, ಸಂತೆ ಮಾರ್ಕೆಟ್, ಬೆಳಗ್ಗೆ ಎದ್ದು ಮನೆಗೆ ನ್ಯೂಸ್ ಪೇಪರ್ ಹಾಕುವುದು ಹೀಗೆ ಹಲವಾರು ಕೆಲಸಗಳನ್ನು ಮನೆಯ ಪರಿಸ್ಥಿತಿ ನಿಭಾಯಿಸಲು ಮಾಡುತ್ತಿದ್ದೆ. ಪತ್ರಿಕೆ ಹಾಕುವುದರಿಂದ ನಾಲ್ಕು ನೂರು ರೂಪಾಯಿ ಕೊಡುತ್ತಿದ್ದರು. ಸಂತೆ ಮಾರ್ಕೆಟ್ ನಲ್ಲಿ ಕೆಲಸ ಮಾಡಿದ್ರೆ ಕಾಯಿ ಪಲ್ಯ ಕೊಡುತ್ತಿದ್ದರು. ದಿನಸಿ ಅಂಗಡಿಯಲ್ಲಿ ದಿನಕ್ಕೆ ಇಪ್ಪತ್ತೈದು ರೂಪಾಯಿ ಕೊಡುತ್ತಿದ್ದರು. ನಂತರ ನನ್ನ ಆರೋಗ್ಯವೂ ಹದಗೆಡುತ್ತ ಬಂತು. ಕಾಲಿಗೆ ಪೆಟ್ಟಾಯ್ತು ಕೆಲಸ ನಿರ್ವಹಿಸುವುದು ಕಷ್ಟವಾಯಿತು. ಅಮ್ಮ ತುಂಬು ಕಷ್ಟಗಳ ನಡುವೆ ತುಂಬ ಮುತುವರ್ಜಿಯಿಂದ ನೋಡಿಕೊಂಡರು. ಅಣ್ಣಂದಿರ ಮೇಲೆ ಮತ್ತಷ್ಟು ಕುಟುಂಬ ಜವಾಬ್ದಾರಿ ಹೆಚ್ಚಾಯಿತು. ಹೀಗಾಗಿ ಬೇಗನೇ ಹುಷಾರಾಗಿ ಕೆಲಸಕ್ಕೆ ಮತ್ತೆ ಹೊರಟೆ. ಕೆಲವು ದಿನಗಳು ಎಲ್ಲವೂ ಸರಿಯಾಗುತ್ತಿದೆ ಎನ್ನುವಷ್ಟರಲ್ಲಿ ನನ್ನ ದುರಾದೃಷ್ಟವೆಂಬಂತೆ ಕಿವಿ ನೋವು ಶುರುವಾಯಿತು. ಕೆಲವು ದಿನಗಳ ನಂತರ ವೈದ್ಯರಿಗೆ ತೋರಿಸಿದಾಗ ಅವರು ಕಿವಿಯೊಳಗೆ ಗಡ್ಡೆಯಾಗಿದೆ ಆಪರೇಷನ್ ಮಾಡಬೇಕೆಂದರು. ನಮ್ಮ ಜೀವನ ನಿರ್ವಹಣೆಯೇ ಹಾಸುಹೊಚ್ಚು ಎನ್ನುವಂತ ಸಂದಿಗ್ಧ ಸ್ಥಿತಿಯಲ್ಲಿಯಲ್ಲಿರುವಾಗ ಈ ಆಪರೇಷನ್ ಎನ್ನುವ ಶಬ್ಧ ಅತೀವ ಹಿಂಸೆಯಾಯಿತು. ಆಪರೇಷನ್ ಮಾಡಿಸುವುದು ಕೂಡ ಇನ್ನೂ ದೊಡ್ಡ ಹಿಂಸೆಯಾಗಿತ್ತು ಏಕೆಂದರೆ ನಾವು ಅದಕ್ಕೆ ಬೇಕಾದ ಹಣಕಾಸನ್ನು ಹೊಂದಿಸುವುದು ಬಲುಕಷ್ಟಕರವಾಗಿತ್ತು. ಆಗ ನಮ್ಮ ಅಣ್ಣಂದಿರ ಸಹಾಯ ಹಸ್ತದಿಂದ ನನಗೆ ಆಪರೇಷನ್ ಮಾಡಿಸಿಕೊಂಡೆ. ಒಂದೆರಡು ತಿಂಗಳ ಆರೈಕೆಯ ನಂತರ ಮತ್ತೆ ಕೆಲಸಕ್ಕೆ ಹೋಗಲು ಸಿದ್ಧವಾದೆ. ನನ್ನ ಫ್ರೆಂಡ್ ಒಬ್ಬ ಫೋಟೋ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅವನು ಫೋಟೋ ಕಟ್ ಮಾಡೋದು ಎಡಿಟ್ ಮಾಡೋದು ಮಾಡ್ತಿದ್ದ. ನಾನು ಆ ಸಮಯದಲ್ಲಿ ಪಾರ್ಲೆ ಜಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೆ. ಒಂದಿನ ಅವನು ನನಗೆ ಫೋಟೋ ಅಂಗಡಿಯಲ್ಲಿ ಕೆಲಸ ಮಾಡುವ ಬಗ್ಗೆ ಹೇಳಿತ್ತಿದ್ದ. ಅವನು ಹೇಳುವಾಗ ನನಗೂ ಅಲ್ಲಿ ಕೆಲಸ ಮಾಡಬೇನ್ನುವ ಆಸೆಯುಂಟಾಗಿ ಅವನಿಗೆ ಹೇಳಿದೆ. ಅವನು ನನ್ನನ್ನು ಸ್ಟುಡಿಯೋದಲ್ಲಿ ಕೆಲಸ ಮಾಡಲು ಕರೆತಂದ. ಅಲ್ಲಿ ಕಲಿಕೆಯ ಜೊತೆಗೆ ಕೆಲಸ ಮಾಡುತ್ತಿದ್ದೆ. ಈಗ ಊಮಾ ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದೆನೆ ಅಲ್ಲಿ 4500/- ಸಂಬಳ ಕೊಡುತ್ತಿದ್ದಾರೆ. ಮೊದಲಿಗೆ ಫೋಟೋಗ್ರಫಿ ನನಗೆ ಹವ್ಯಾಸದಂತಾಗಿತ್ತು ನಂತರ ಬದುಕಿಗೆ ಆಧಾರವಾಗಿದೆ. ಇದು ನನಗೆ ಫೋಟೋಗ್ರಾಫರ್ ಆಗುವ ಯಾವ ಕನಸೂ ಇಲ್ಲದೆ ನಾನು ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ'.
'ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯವರು ತಾವು ತೆಗೆದ ಫೋಟೋಗಳನ್ನು ಹಾಕುವುದು ನೋಡಿದಾಗ ನಾನೂ ಅವರ ಹಾಗೆ ಫೋಟೋ ತೆಗೆಯಬೇಕು ಸೋಶಿಯಲ್ ಮೀಡಿಯಾಗಳಲ್ಲಿ ಹಾಕಬೇಕೆಂದು ಅಂದುಕೊಳ್ಳುತ್ತಿದ್ದೆ. ಆದರೆ ನಿಸರ್ಗವನ್ನು ಆಕರ್ಷಕವಾಗಿ ಸೆರೆಹಿಡಿಯುವುದು ಆಗ ನನಗಿನ್ನೂ ಅಷ್ಟು ತಿಳಿದಿರಲಿಲ್ಲ. ಪ್ರಕೃತಿಯ ಸೊಬಗನ್ನು ಚೆಂದವಾಗಿ ಸೆರೆಹಿಡಿದು ಬೇರೇಯವರಿಗೆ ತೋರಿಸಬೆಕೆಂಬ ಬಯಕೆ ಹೆಚ್ಚಾಯಿತು. ಹಾಗೂ ಹೀಗೂ ಪ್ರಯತ್ನ ಮಾಡಿ ಅದನ್ನು ಕಲಿತೆ, ಆ ಫೋಟೋಗಳನ್ನು ನಾನು ಕೂಡ ಅಪ್ಲೋಡ್ ಮಾಡಲು ಶುರುಮಾಡಿದೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದ್ದದ್ದನ್ನು ನೋಡಿ ಖುಷಿಯಾಗ್ತಿತ್ತು. ಅವಾಗೆಲ್ಲ ಇಂತಹ ಇನ್ನೂ ಹೆಚ್ಚು ಫೋಟೋ ತೆಗೆಯಬೇಕೆಂದು ಅನ್ನಿಸ್ತಾ ಇತ್ತು. ಆದರೆ ನನ್ನ ಬಳಿ ಸ್ವಂತ ಕ್ಯಾಮೆರಾ ಇಲ್ಲ ಹಾಗಾಗಿ ಫೋಟೋ ತೆಗೆಯಬೇಕೆಂದಾಗಲೆಲ್ಲ ಫೋಟೋ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಕುಷ್ಟಗಿ ತಾಲೂಕಿನ ಇತಿಹಾಸಕ್ಕೆ ಸಂಬಂಧಿಸಿದ ಫೋಟೋಗಳನ್ನು ತೆಗೆಯಬೇಕೆಂಬುದು ನನ್ನ ದೊಡ್ಡ ಕನಸಾಗಿತ್ತು. ನನ್ನ ಬಳಿ ಸ್ವಂತ ಕ್ಯಾಮೆರಾ ಇಲ್ಲದ್ದರಿಂದ ಒಂದು ದಿನಕ್ಕೆ ಐದು ನೂರು ರೂಪಾಯಿ ಬಾಡಿಗೆ ಕೊಟ್ಟು ಕ್ಯಾಮೆರಾ ತೆಗೆದುಕೊಂಡು ಕುಷ್ಟಗಿ ತಾಲ್ಲೂಕಿನ ಐತಿಹಾಸಿಕ ಫೋಟೋಗಳನ್ನು ತೆಗೆದು ಅವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಗೂಗಲ್ ನಿಂದ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದೆ. ವೈಲ್ಡ್ ಲೈಫ್, ಪ್ರಕೃತಿ, ಹಕ್ಕಿಗಳು ಹೀಗೆಲ್ಲಾ ಭಿನ್ನ ಭಿನ್ನವಾಗಿ ಫೋಟೋ ತೆಗೆಯುವುದು ನನಗೆ ಅತ್ಯಂತ ಖುಷಿ ಕೊಡುವ ಕೆಲಸ. ಯಾವುದರ ನಿರೀಕ್ಷೆಯಿಲ್ಲದೇ ನಿಸರ್ಗದ ಸೌಂದರ್ಯವನ್ನು ಕ್ಯಾಮೆರಾ ಕಣ್ಣಲ್ಲಿ ಹಿಡಿದಿಡುತ್ತಿದ್ದ ನನಗೆ ಕೆಲವು ಪ್ರಶಸ್ತಿಗಳು ಅರಸಿ ಬಂದವು. 2022 ರಲ್ಲಿ ದಾವಣಗೆರೆಯಲ್ಲಿ ನಡೆದ ಕನ್ನಡ ಸಾಂಸ್ಕೃತಿಕ ಗತವೈಭವ ಹಾಗೂ ವಿವಿಧೋದ್ದೇಶ ಸಂಸ್ಥೆ (ರಿ) ದಾವಣಗೆರೆ, ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ, ಹಾಗೂ ಭೂಮಾತಾ ಪ್ರಕಾಶನ ದೇವರನಿಂಬರಗಿ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗತವೈಭವ ಛಾಯಾಗ್ರಾಹಕ ಎಂಬ ರಾಜ್ಯ ಪ್ರಶಸ್ತಿ ಸಿಕ್ಕಿತು. Evening Studio & D50mm Studio Ilkal ಇವರು ನಡೆಸಿದ ರಾಜ್ಯ ಮಟ್ಟದ ಮೊಬೈಲ್ ಫೋಟೋಗ್ರಫಿ ಸ್ಪರ್ಧೆಯಲ್ಲಿ #Best_Photography ಎಂದು ನಾನು ತೆಗದ ನಿಸರ್ಗದ ಛಾಯಾಚಿತ್ರ ಆಯ್ಕೆಯಾಗಿ ಶ್ರೀ ವಿಜಯ ಚಿತ್ರಕಲಾ ಮಹಾವಿದ್ಯಾಲಯ ಇಳಕಲ್ಲಿನಲ್ಲಿ ಪ್ರಶಸ್ತಿ ಪತ್ರವನ್ನು ಕೊಟ್ಟು ಗೌರವಿಸಿದರು'. ಇದು ಸದ್ದಾಂ ಅವರ ಜೀವನ ಕುರಿತ ಅವರ ಮಾತುಗಳು.
ಸದ್ದಾಂ ಅವರ ವೃತ್ತಿಜೀವನದಲ್ಲಿ ಯಶಸ್ಸು ಲಭಿಸಲಿ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬರಲಿ. ಅವರ ಸಮಾಜಸೇವೆಗೆ ಸಾಕಷ್ಟು ಬಲ ಬೆಂಬಲ ಸಿಗಲಿ.
ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.