ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್

Date: 02-02-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಇಂಗ್ಲೆಂಡ್ ನ ಪಾಪ್ ಆರ್ಟ್ ಕಲಾವಿದ ಪೀಟರ್ ಬ್ಲೇಕ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಪೀಟರ್ ಬ್ಲೇಕ್ (Peter Blake)
ಜನನ: 25 ಜೂನ್, 1932
ಶಿಕ್ಷಣ: ರಾಯಲ್ ಕಾಲೇಜ್ ಆಫ್ ಆರ್ಟ್
ವಾಸ: ಲಂಡನ್, ಇಂಗ್ಲೆಂಡ್
ಕವಲು: ಪಾಪ್ ಆರ್ಟ್
ವ್ಯವಸಾಯ: ಪೇಂಟಿಂಗ್, ಪ್ರಿಂಟ್‌, ಗ್ರಾಫಿಕ್‌ಆರ್ಟ್‌ಗಳು

ಪೀಟರ್ ಬ್ಲೇಕ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಪೀಟರ್ ಬ್ಲೇಕ್ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ದ್ವಿತೀಯ ಮಹಾಯುದ್ಧದ ಬಳಿಕ, 60ರ ದಶಕದಲ್ಲಿದ್ದ ಅಮೆರಿಕದ ಬದುಕು ಸುಂದರ ಎಂಬ ಕಲ್ಪನೆಯ ಬೆನ್ನೇರಿ ಹೊರಟ ಉತ್ಸಾಹ, ಆಶಾಭಾವನೆಗಳ ಜೊತೆಗೆ ಬಾಲ್ಯದ ಮುಗ್ಧತೆಗಳನ್ನು ಭಾವನಾತ್ಮಕವಾಗಿ ನೆನಪಿಸಿಕೊಳ್ಳುವ ಸರ್ ಪೀಟರ್ ಬ್ಲೇಕ್ ಅವರ ಚಿತ್ರಗಳು ಸಾಮಾನ್ಯವಾಗಿ ಜನಪ್ರಿಯ ಪ್ರಕಾರದ [ಪಾಪ್ಯುಲರ್ ಆರ್ಟ್ (ಪಾಪ್ ಆರ್ಟ್)] ಕಲೆಯನ್ನು ಬಿಂಬಿಸುತ್ತವೆ. ಅಲ್ಲಿ ದೈನಂದಿನ ಬಳಕೆಯ ವಸ್ತುಗಳು, ಪರಿಸರ, ಮುದ್ರಿತ ಚಿತ್ರಗಳು-ಫೋಟೋಗಳ ಕೊಲ್ಯಾಜ್, ಕಾಮಿಕ್ ಸ್ಟ್ರಿಪ್‌ಗಳು, ಜಾಹೀರಾತು ತುಣುಕುಗಳ ಕೊಲ್ಯಾಜ್ ಜೊತೆಗೆ ದಿಟ್ಟವಾದ ಜಾಮೆಟ್ರಿಕಲ್ ಆಕೃತಿಗಳು, ಖಡಕ್ ಬಣ್ಣಗಳು ಢಾಳಾಗಿ ಬಳಕೆ ಆಗಿರುತ್ತವೆ. ಈ “ಪಾಪ್ ಆರ್ಟ್” ಕಲಾಪ್ರಕಾರದ ಮೂಲಕ ಇಂಗ್ಲೆಂಡಿನ ಸಾಂಪ್ರದಾಯಿಕ ಕಲೆಯಿಂದ ಭಿನ್ನಹಾದಿ ತುಳಿಯುವಲ್ಲಿ ಗಣನೀಯ ಪಾತ್ರ ವಹಿಸಿದ ಬ್ಲೇಕ್ ಅವರನ್ನು “ಬ್ರಿಟಿಷ್ ಪಾಪ್ ಆರ್ಟಿನ ಗಾಡ್‌ಫಾದರ್” ಎಂದು ಪರಿಗಣಿಸಲಾಗುತ್ತದೆ.

ಕೆಳಮಧ್ಯಮ ವರ್ಗದ ಇಲೆಕ್ಟ್ರೀಷಿಯನ್ ಒಬ್ಬರ ಮಗನಾದ ಬ್ಲೇಕ್, ಬಾಲ್ಯದಲ್ಲಿ ಮಹಾಯುದ್ಧದ ಕಾರಣಕ್ಕಾಗಿ ಜನ್ಮಸ್ಥಳ ಕೆಂಟ್‌ನಿಂದ ಸ್ಥಳಾಂತರಗೊಳ್ಳಬೇಕಾಗುತ್ತದೆ. ಬಾಲ್ಯದ ಏಕಾಕಿತನ ಮತ್ತು ನಾಚಿಕೆಯ ಸ್ವಭಾವದ ಜೊತೆ ಗ್ರೇವ್ಸೆಂಡ್ ಕಲಾಶಾಲೆಯಲ್ಲಿ ಗ್ರಾಫಿಕ್ ಆರ್ಟ್ ಕಲಿತ ಬ್ಲೇಕ್ 17ನೇ ವಯಸ್ಸಿನಲ್ಲಿ ತೀವ್ರ ಸ್ವರೂಪದ ಸೈಕಲ್ ಅಪಘಾತಕ್ಕೆ ತುತ್ತಾಗಿ ವಿರೂಪಗೊಂಡ ಮುಖವನ್ನು ಮುಚ್ಚಿಕೊಳ್ಳಲು ಗಡ್ಡ ಬಿಡಬೇಕಾಗುತ್ತದೆ. ಬಳಿಕ ರಾಯಲ್ ಕಾಲೇಜಿಗೆ ಗ್ರಾಫಿಕ್ಸ್ ಕಲಿಯಲೆಂದು ಅರ್ಜಿ ಸಲ್ಲಿಸಿದ ಅವರ ಪೇಂಟಿಂಗ್ ಒಂದನ್ನು ಕಂಡ ಕಾಲೇಜು ಅವರಿಗೆ ಗ್ರಾಫಿಕ್ಸ್ ಬದಲು ಪೇಂಟಿಂಗ್ ಕಲಿಯಲು ಪ್ರವೇಶ ನೀಡುತ್ತದೆ. ಸಾಂಪ್ರದಾಯಿಕ ಕಲೆ, ಮ್ಯೂಸಿಯಂಗಳ ಭೇಟಿಯ ಬದಲು ಕುಸ್ತಿಪಟುಗಳು, ಸ್ಟ್ರಿಪ್ ನೃತ್ಯಗಾತಿಯರ ಚಿತ್ರ ಬಿಡಿಸುವಲ್ಲಿ ಆಸಕ್ತಿ ತೋರಿದ ಬ್ಲೇಕ್ 1957ರ ಹೊತ್ತಿಗೆ ಕಲಾ ಅಧ್ಯಾಪನದಲ್ಲಿ ತೊಡಗಿಕೊಂಡರು. ಆಗಲೇ ಅವರಿಗೆ ಗಂಭೀರವಾದ ಆಸಕ್ತಿ ಕಲೆಯಲ್ಲಿ ಮೂಡಿದ್ದು. ಬ್ರಿಟಿಷ್ ಯುವ ಕಲಾವಿದರ ಗುಂಪಿನ ಜೊತೆ ಪ್ರದರ್ಶನಗಳನ್ನು ನೀಡಿದ ಬ್ಲೇಕ್ ಕಲಾಜಗತ್ತಿನ ಗಮನ ಸೆಳೆಯುತ್ತಿರುವಂತೆಯೇ 1962ರಲ್ಲಿ ಬಿಬಿಸಿ ಪ್ರಸಾರ ಮಾಡಿದ ಪಾಪ್ ಆರ್ಟ್ ಕುರಿತ ಕಾರ್ಯಕ್ರಮ ಬ್ಲೇಕ್ ಅವರಿಗೆ ಪ್ರಸಿದ್ಧಿ ತಂದುಕೊಟ್ಟಿತು. ಆ ಬಳಿಕ ಬೀಟಲ್ಸ್ ಸಂಗೀತತಂಡದ ಆಲ್ಬಂಗೆ ಅವರು ರಚಿಸಿದ ಕೊಲ್ಯಾಜ್ ಕವರ್ ಪೇಜ್ ಅವರಿಗೆ ವಿಶ್ವವಿಖ್ಯಾತಿ ತಂದುಕೊಟ್ಟಿತು. Sgt Pepper's Lonely Hearts Club Band ಹೆಸರಿನ ಈ ಕವರ್‌ಗೆ ಅವರಿಗೆ ಸಿಕ್ಕಿದ್ದು ಕೇವಲ 200 ಪೌಂಡ್!

60ರ ದಶಕದ ಕೊನೆಯಲ್ಲಿ, ಒಂದು ಹಂತದಲ್ಲಿ ಲಂಡನ್ ತ್ಯಜಿಸಿ ಅವೊನ್ ಎಂಬ ಹಳ್ಳಿಗೆ ತೆರಳಿ, ಅಲ್ಲಿ ಗ್ರಾಮೀಣ ಕಲಾವಿದರ ತಂಡ ಕಟ್ಟಿಕೊಂಡಿದ್ದ ಬ್ಲೇಕ್ ತನ್ನ ಮೊದಲ ಪತ್ನಿ ಕಲಾವಿದೆ ಜಾನ್ ಹಾವರ್ಥ್ ಅವರಿಂದ ವಿಚ್ಛೇದನ ಪಡೆದಾಗ ಮತ್ತೆ ಲಂಡನ್‌ಗೆ ಬಂದು ನೆಲೆಸಿ, ಇಲ್ಲಿ ಕ್ರಿಸ್ಸಿ ವಿಲ್ಸನ್ ಅವರನ್ನು ಮದುವೆಯಾದರು.

ಅಲ್ಲಿಂದೀಚೆಗೆ ಹಲವು ಮಹತ್ವದ ಕಲಾಕೃತಿಗಳು, ಕಲಾ ಯೋಜನೆಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಸರ್ ಪೀಟರ್ ಬ್ಲೇಕ್ ಇಂಗ್ಲಂಡಿನ ಎಲ್ಲ ಪ್ರಮುಖ ಕಲಾಪ್ರಶಸ್ತಿಗಳಿಂದ ಅಲಂಕೃತರು. ಆಂಡಿ ವಾರೋಲ್ ಅವರಂತಹ ಮಹತ್ವದ ಕಲಾವಿದರಿಗೆ ಸ್ಪೂರ್ತಿಯಾಗಿರುವ ಬ್ಲೇಕ್, ಡೇವಿಡ್ ಹಾಕ್ನಿ ಅವರ ಜೊತೆ ಒಡನಾಟ ಹೊಂದಿದ್ದರು.

ಸಮೂಹ ಮಾಧ್ಯಮಗಳ ಮೂಲಕ ಬರುವ ಬಾಹ್ಯ ಪ್ರಭಾವಗಳು ಮತ್ತು ಅವುಗಳಿಂದ ಪ್ರೇರಿತ ಸಾಂಸ್ಕೃತಿಕ ಪಲ್ಲಟಗಳ ಮಾನವೀಯ ಅನುಭವದ ಮುಖವನ್ನು ಬಿಂಬಿಸುವ ಬ್ಲೇಕ್ ಹೊಸ ಕಲೆ ಕೂಡ ಅದರ ಚರಿತ್ರೆ ಇಲ್ಲದೆ ಹುಟ್ಟಲಾರದು ಎನ್ನುತ್ತಾರೆ. ತಾನು ಪಾಪ್ ಸಂಗೀತಕ್ಕೆ ಸಮನಾದ ದೃಶ್ಯಕಲೆ ರಚಿಸುವ ಉದ್ದೇಶ ಹೊಂದಿದ್ದೇನೆ ಎಂದು ಅವರು ಹೇಳಿದ್ದಿದೆ.

ಐರಿಷ್ ಟೈಮ್ಸ್ ಕಲಾ ಸಂಪಾದಕ ಹ್ಯೂ ಲಿನೆಹಾನ್ ಅವರು ಮಾಡಿರುವ ಪೀಟರ್ ಬ್ಲೇಕ್ ಸಂದರ್ಶನ:

ಕಲಾವಿದ ಡೇಮಿಯನ್ ಹರ್ಸ್ಟ್ ಅವರು ಪೀಟರ್ ಬ್ಲೇಕ್ ಅವರ ಸ್ಟುಡಿಯೊಗೆ ಭೇಟಿ ನೀಡಿದ್ದು:

ಚಿತ್ರ ಶೀರ್ಷಿಕೆಗಳು:

ಪೀಟರ್ ಬ್ಲೇಕ್ ಅವರ ‘The Meeting’ or ‘Have a Nice Day, Mr Hockney’ (1981)

ಪೀಟರ್ ಬ್ಲೇಕ್ ಅವರ Illustration to the cover of ‘Face Dances’ (1981)

ಪೀಟರ್ ಬ್ಲೇಕ್ ಅವರ In Homage to Kurt Schwitters 2, (2008)

ಪೀಟರ್ ಬ್ಲೇಕ್ ಅವರ Late Period – Study for ‘Party’ 3, (2018)

ಪೀಟರ್ ಬ್ಲೇಕ್ ಅವರ Marilyn, (2010)

ಪೀಟರ್ ಬ್ಲೇಕ್ ಅವರ On the Balcony, (1955)

ಪೀಟರ್ ಬ್ಲೇಕ್ ಅವರ Queen Elizabeth, (2012)

ಪೀಟರ್ ಬ್ಲೇಕ್ ಅವರ Regent’s Park – The Runaway Donkeys, (2012)

ಪೀಟರ್ ಬ್ಲೇಕ್ ಅವರ Self-Portrait with Badges, (1961)

ಪೀಟರ್ ಬ್ಲೇಕ್ ಅವರ Sgt. Pepper’s Lonely Hearts Club Band, (1967)

ಪೀಟರ್ ಬ್ಲೇಕ್ ಅವರ Tattooed Man 2, (2015)

ಪೀಟರ್ ಬ್ಲೇಕ್ ಅವರ The Dazzle Alphabet Letter Set, (2017)

ಪೀಟರ್ ಬ್ಲೇಕ್ ಅವರ The First Real Target, (1961)

ಪೀಟರ್ ಬ್ಲೇಕ್ ಅವರ Well this is grand! said Alice, (1970)

ಈ ಅಂಕಣದ ಹಿಂದಿನ ಬರೆಹಗಳು:

ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್

ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...