ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು

Date: 21-08-2021

Location: ಬೆಂಗಳೂರು


‘ಕಲಿಕಾ ಅನುವಿನ ಉಪಕ್ರಮಗಳ ಬಗ್ಗೆ ನಮ್ಮಲ್ಲಿ ಆದರ್ಶ ಮತ್ತು ವಾಸ್ತವಗಳ ನಡುವೆ ಸಾಕಷ್ಟು ಅಂತರ ಇದೆ. ಗುರಿ ಮತ್ತು ದಾರಿಗಳ ನಡುವೆ ತಾಳಮೇಳ ಇಲ್ಲದಿರುವುದು ಇಲ್ಲಿರುವ ಇನ್ನೊಂದು ಮುಖ್ಯವಾದ ಬಿಕ್ಕಟ್ಟು’ ಎನ್ನುತ್ತಾರೆ ಲೇಖಕ, ವಿಮರ್ಶಕ ಡಾ. ರಾಮಲಿಂಗಪ್ಪ ಟಿ.ಬೇಗೂರು. ತಮ್ಮ 'ನೀರು ನೆರಳು' ಅಂಕಣದಲ್ಲಿ ಪದವಿ ಪೂರ್ವ ಕನ್ನಡ ಪಠ್ಯಕ್ರಮಗಳ ಬಗ್ಗೆ ವಿಶ್ಲೇಷಿಸಿದ್ದಾರೆ.

ಕಲಿಕೆಗೆ ಅನುವು ಮಾಡಿಕೊಡುವ ಹಲವು ಉಪಕ್ರಮಗಳಲ್ಲಿ ಬೋಧನೆ ಒಂದು ಚಿಕ್ಕ ಅಂಗ ಮಾತ್ರ. ಕಲಿಕೆಯಲ್ಲಿ ಓದು, ಬರಹ, ಮನನ, ಅಭಿವ್ಯಕ್ತಿ ಮುಂತಾದುವೆಲ್ಲ ಇರುತ್ತವೆ. ಅದರಲ್ಲಿ ಅಭ್ಯಾಸ, ವಾಚನ, ಆಲಿಕೆ, ಉಕ್ತಲೇಖನ, ಮನೆಕೆಲಸ, ನಿಯೋಜಿತ ಕಾರ್ಯ, ಸೆಮಿನಾರ್, ಪ್ರಯೋಗ, ಚಿತ್ರರಚನೆ, ಆಟೋಟ, ನೋಟ-ಗ್ರಹಿಕೆ, ಸ್ವಯಂಕಲಿಕೆ, ಶೈಕ್ಷಣಿಕ ಪ್ರವಾಸ, ಕ್ಷೇತ್ರಕಾರ್ಯ, ಪರೀಕ್ಷೆ, ಮೌಲ್ಯಮಾಪನ, ಚಿಂತನ, ಮುಕ್ತಚರ್ಚೆ, ಗುಂಪುಚರ್ಚೆ, ಸಂವಾದ, ಭಾಷಣ, ಗಮಕ, ಗಾಯನ, ರಾಗಸಂಯೋಜನ, ರಂಗರೂಪಾಂತರ, ಹತ್ತಾರು ಬಗೆಯ ಚಟುವಟಿಕೆಗಳು ಇತ್ಯಾದಿ ಹಲವು ತೆರನ ಕಲಿಕೆಯ ಉಪಕ್ರಮಗಳು ಬರುತ್ತವೆ. ಇವುಗಳ ಜೊತೆಗೆ ಬೋಧನೆಯೂ ಒಂದು ಉಪಕ್ರಮವಷ್ಟೆ. ಬೋಧನೆಯು ಕಲಿಕೆಯ ಹಲವು ವಿಧಾನಗಳಲ್ಲಿ ಒಂದು ವಿಧಾನವೂ ಹೌದು.

ಶಿಕ್ಷಕನಾದವನು ಮೊದಲಿಗೆ ತಾನೂ ಒಬ್ಬ ಸಹಕಲಿಕಾರ್ಥಿ. ನಂತರ ಆತ ತರಗತಿಯಲ್ಲಿ ಮತ್ತು ಇತರೆಡೆ ಕಲಿಯಲು ಅನುವು ಮಾಡಿಕೊಡುವ ಅನುವಿಗ. (ಕೋಲರ್ನರ್=ಸಹಕಲಿಕಾರ್ಥಿ, ಫೆಸಿಲಿಟೇಟರ್=ಅನುವಿಗ) ಅಂದರೆ ಶಿಕ್ಷಣದಲ್ಲಿ ಕಲಿಕೆಗೆ ಅನುವು ಮಾಡಿಕೊಡುವ ಹಲವು ಚಟುವಟಿಕೆಗಳನ್ನು ಶಿಕ್ಷಕರು ನಿರ್ವಹಿಸಬೇಕಾಗುತ್ತದೆ. ಅವುಗಳಲ್ಲಿ ಬೋಧನೆ ಒಂದು ಅತ್ಯಂತ ಕಿರಿದಾದ ಚಟುವಟಿಕೆ ಆಗಬೇಕಷ್ಟೆ. ಆದರೆ ಅದೇ ಇಂದು ಸರ್ವವ್ಯಾಪಿ ಆಗಿ ಕುಳಿತಿದೆ. ಹಾಗಾಗಿ ಇಂದು ಕಲಿಕೆಯ ಅನುವಿನ ಉಪಕ್ರಮಗಳನ್ನು ಮುಖ್ಯವಾಗಿ ನಾವು ಶೋಧಿಸಿ ಕಂಡುಕೊಳ್ಳಬೇಕಾಗಿದೆ. ಸ್ಥಳೀಯ ಅಗತ್ಯತೆ, ಘಟಕವಾರು ಅಗತ್ಯತೆ, ಪಠ್ಯದ ಪ್ರಕಾರಗಳ ಅನುಸಾರ, ವಿದ್ಯಾರ್ಥಿಗಳ ಭಾಷಿಕ, ಪ್ರಾದೇಶಿಕ, ಸಾಂಸ್ಕೃತಿಕ ಹಿನ್ನೆಲೆಗಳ ಅನುಸಾರ ಇವುಗಳ ಶೋಧ, ಮರುಶೋಧ ನಿರಂತರವಾಗಿ ನಡೆಯಬೇಕಾದ ಅಗತ್ಯವಿದೆ. ಚಟುವಟಿಕೆಯನ್ನು ಆಧರಿಸಿ ಕಲಿಕೆಯನ್ನು ಆಗುಮಾಡುವುದು ಹೇಗೆ ಎಂದೇ ನಾವೆಲ್ಲ ಇಂದು ಹೆಚ್ಚು ಹೆಚ್ಚು ಚಿಂತಿಸಬೇಕಾಗಿದೆ. ಹೊಸ ಶಿಕ್ಷಣ ನೀತಿಯಲ್ಲು ಈ ಬಗ್ಗೆ ಕೆಲವು ಉಪಕ್ರಮಗಳಿವೆ.

ಪರಸ್ಪರ ತಾಳಮೇಳ: ಏನು, ಎಷ್ಟು, ಏತಕ್ಕೆ, ಹೇಗೆ?

ಕಲಿಕಾ ಅನುವಿನ ಉಪಕ್ರಮಗಳ ಬಗ್ಗೆ ನಮ್ಮಲ್ಲಿ ಆದರ್ಶ ಮತ್ತು ವಾಸ್ತವಗಳ ನಡುವೆ ಸಾಕಷ್ಟು ಅಂತರ ಇದೆ. ಗುರಿ ಮತ್ತು ದಾರಿಗಳ ನಡುವೆ ತಾಳಮೇಳ ಇಲ್ಲದಿರುವುದು ಇಲ್ಲಿರುವ ಇನ್ನೊಂದು ಮುಖ್ಯವಾದ ಬಿಕ್ಕಟ್ಟು. ವಿದ್ಯಾರ್ಥಿಗಳ ಕೌಶಲ ಮತ್ತು ಸಾಮರ್ಥ್ಯಗಳು ಏನಾಗಿರಬೇಕು ಮತ್ತು ಎಷ್ಟಿರಬೇಕು ಎಂಬ ಬೇಡಿಕೆ ಜಗತ್ತಿನಲ್ಲಿ ಸದಾ ಬದಲಾಗುತ್ತ ಇರುತ್ತದೆ. ಆದರೆ ನಮ್ಮ ಪಠ್ಯಕ್ರಮ ಹೊಸ ಅಪೇಕ್ಷೆಗಳಿಗೆ ತಕ್ಕಂತೆ ಬದಲಾಗುತ್ತಿಲ್ಲ. ಕನ್ನಡ ಭಾಷಾ ಪಠ್ಯಕ್ರಮವಂತು ಸಾಹಿತ್ಯದ ಚೌಕಟ್ಟುಗಳಿಂದ ಹೊರಗೆ ಬರಲು ತಯಾರೇ ಇಲ್ಲ. ಹೀಗಾಗಿ ಉದ್ದೇಶ ಮತ್ತು ಅದನ್ನು ಆಗು ಮಾಡುವ ಮಾರ್ಗಗಳ ನಡುವೆ ತಾಳಮೇಳ ಇಲ್ಲವಾಗಿದೆ. ಅವುಗಳ ಬಗ್ಗೆ ಸ್ಪಷ್ಟತೆಯೂ ಇಲ್ಲವಾಗಿದೆ. ಹೀಗಿರುವಾಗ ಬೋಧನಾ ವಿಧಾನಗಳ ಬಗ್ಗೆ ಮಾತ್ರವೆ ಮಾತಾಡುವುದು ಅಷ್ಟು ಸಾರ್ಥಕವಲ್ಲ.

ನಾವು ಇಂದು ಏನನ್ನು ಕಲಿಸಬೇಕು, ಎಷ್ಟನ್ನು ಕಲಿಸಬೇಕು ಮತ್ತು ಏತಕ್ಕೆ ಕಲಿಸಬೇಕು ಎಂಬ ಪ್ರಶ್ನೆಗಳನ್ನು ಸರಿಯಾಗಿ ಕೇಳಿ, ತರ್ಕಿಸಿ, ಉತ್ತರಿಸಿಕೊಳ್ಳದೆ ಹೇಗೆ ಕಲಿಯಲು ಅನುವು ಮಾಡಿಕೊಡಬೇಕು ಎಂಬ ಪ್ರಶ್ನೆಯನ್ನು ಕಂಡರಿಸಿಕೊಳ್ಳಲು ಆಗುವುದಿಲ್ಲ. ಗುರಿ ಮತ್ತು ದಾರಿಗಳ ತಾಳಮೇಳ ಎಷ್ಟು ಮುಖ್ಯವೋ ಆ ದಾರಿಯ ಬುತ್ತಿಯೂ ಅಷ್ಟೆ ಮುಖ್ಯ. ಅಂದರೆ ನಮ್ಮ ಕಲಿಕೆಯ ಉದ್ದೇಶ, ಅದಕ್ಕೆ ತಕ್ಕ ಕಲಿಕಾ ಅನುವಿನ ವಿಧಾನ ಮತ್ತು ಅದಕ್ಕೆ ಅಗತ್ಯವಾದ ಕಲಿಕಾ ಪಠ್ಯಕ್ರಮ ಈ ಮೂರೂ ಪರಸ್ಪರ ತಾಳಮೇಳ ಹೊಂದಬೇಕಾಗುತ್ತದೆ.

ಪಾಠಯೋಜನೆಯ ನೀಲನಕ್ಷೆ
ಮೊದಲು ಶಿಕ್ಷಕರು ಮಕ್ಕಳಿಗೆ ಕಲಿಯಲು ಇರಿಸಿರುವ ಪಠ್ಯಸಾಮಗ್ರಿಯನ್ನು ಶಿಕ್ಷಣದ ಉದ್ದೇಶಗಳ ಸಾಧನೆಗೆ ಹೇಗೆಲ್ಲ ಬಳಸಿಕೊಳ್ಳಬಹುದು ಎಂದೂ ಯೋಚಿಸಬೇಕಾಗುತ್ತದೆ. ಶಿಕ್ಷಕ ತನ್ನ ಪಾತ್ರವನ್ನು ನಿರ್ವಹಿಸುವುದಕ್ಕೆ ಬೇಕಾದ ಪೂರ್ವಸಿದ್ಧತೆ ಮತ್ತು ಯೋಜನೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಎರಡು ಅಗತ್ಯ ಕೆಲಸಗಳು ನಡೆಯಬೇಕು.

1. ವಿದ್ಯಾರ್ಥಿಗಳ ಗ್ರಹಿಕಾಶಕ್ತಿ, ಮನನ ಸಾಮರ್ಥ್ಯ, ಅಭಿವ್ಯಕ್ತಿ, ವ್ಯಾಖ್ಯಾನ, ಬರಹ ಸಾಮರ್ಥ್ಯಗಳ ಸಮೀಕ್ಷೆ ಮಾಡಬೇಕಾಗುತ್ತದೆ. ಆನಂತರ ಶಾಲೆ ಕಾಲೇಜಿನ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಕಲಿಕೆಗೆ ಅನುವು ಮಾಡಿಕೊಡುವ ವಿಧಾನಗಳನ್ನು ಮತ್ತು ಚಟುವಟಿಕೆಗಳನ್ನು ಮರುರೂಪಿಸಬೇಕಾಗುತ್ತದೆ. ಇದರ ಜೊತೆಗೆ

2. ಏನನ್ನು, ಎಷ್ಟನ್ನು, ಹೇಗೆ ಕಲಿಕೆಗೆ ಅನುವು ಮಾಡಿಕೊಡಬೇಕು; ಯಾವಾಗ ಮತ್ತು ಎಷ್ಟು ಸಮಯದಲ್ಲಿ ಅದನ್ನು ನಿರ್ವಹಿಸಬೇಕು ಎಂಬುದನ್ನೆಲ್ಲ ಒಳಗೊಂಡ ವಾರ್ಷಿಕ ಪಾಠಯೋಜನೆಯ ನೀಲನಕ್ಷೆ ತಯಾರಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ಘಟಕ, ಸಮಯ, ಸಾಮಗ್ರಿಯ ಗಾತ್ರ, ಹೂರಣ, ವಿಧಾನ-ಚಟುವಟಿಕೆ ಎಲ್ಲವೂ ಇರಬೇಕಾಗುತ್ತದೆ.

ಈಗಾಗಲೇ ಪಿಯು ಶಿಕ್ಷಕರಿಗೆ ಇಲಾಖೆಯು ವಾರ್ಷಿಕ ಪಾಠಯೋಜನೆಯನ್ನು ಕಡ್ಡಾಯ ಮಾಡಿದೆ. ಆದರೆ ಪ್ರೌಢಶಾಲೆ, ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಇದು ಕಡ್ಡಾಯವಲ್ಲ! ಇಲ್ಲಿ ಶಿಕ್ಷಣ ವರ್ಷವು ಮೇ-ಜೂನ್‍ನಿಂದ ಆರಂಭವಾಗಿ ಫೆಬ್ರವರಿಗೆ ಮುಗಿಯುತ್ತದೆ. ಸಿಗುವ ಒಟ್ಟು ಸರಿಸುಮಾರು 120 ಗಂಟೆಗಳಿಗೆ ಪಠ್ಯಸಾಮಗ್ರಿಯನ್ನು ಹಂಚಿ ಪಾಠ ಯೋಜನೆಯನ್ನು ಇಲ್ಲಿ ತಯಾರಿಸಲಾಗಿದೆ. ಆದರೆ ವಿದ್ಯಾರ್ಥಿಗಳ ಕೌಶಲ, ಸಾಮರ್ಥ್ಯಗಳನ್ನು ಬೆಳೆಸುವ, ಅದಕ್ಕೆ ತಕ್ಕಾದ ಚಟುವಟಿಕೆಗಳನ್ನು ಜಾರಿಗೆ ತರುವ, ಅನುವಿನ ವಿಧಾನಗಳನ್ನು ಉಲ್ಲೇಖಿಸಿ ಜಾರಿ ಸಾಧ್ಯತೆಗಳನ್ನು ನಿರೂಪಿಸುವ, ಯೋಜಿಸುವ ಯಾವ ವಿವರಗಳೂ ಇಲ್ಲಿಲ್ಲ. ಪಾಠ ಮಾಡಿ ಮುಗಿಸುವುದು, ಕಂಟೆಂಟನ್ನು ಅರ್ಥೈಸಿ, ಸಾರಾಂಶವನ್ನು ಮನದಟ್ಟು ಮಾಡಿಸುವುದು, ಸಿಲಬಸ್ ಕವರ್ ಮಾಡುವುದು ಮಾತ್ರ ಇಲ್ಲಿದೆ. ಇದು ಮಾತ್ರ ಮುಖ್ಯವೋ?

ಈಗಿನ ಪಠ್ಯ ಸ್ವರೂಪ
ಈಗ ಇರುವ ಒಂದನೆ ಮತ್ತು ಎರಡನೆ ಪಿಯುಗಳ ಭಾಷಾ ಪಠ್ಯಸ್ವರೂಪ ಸರಿಸುಮಾರು ಒಂದೇ ರೀತಿ ಇದೆ. ಎರಡನೆ ವರ್ಷದಲ್ಲಿ ಚಟುವಟಿಕೆ ಮತ್ತು ಸರಳ ಪಠ್ಯವಾಗಿಸಿಕೊಳ್ಳುವ ಬಗೆ ಎಂಬ ಎರಡು ಘಟಕಗಳು ಹೆಚ್ಚಿಗೆ ಇವೆ. ಈ ಎರಡೂ ಘಟಕಗಳು ಮೊದಲ ವರ್ಷದಲ್ಲು ಇರುವುದು ಸೂಕ್ತ. ಪ್ರಶ್ನೆ ಪತ್ರಿಕೆ ಸ್ವರೂಪ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳು ಮೊದಲ ವರ್ಷದಲ್ಲಿ ಅಭ್ಯಾಸ ಪುಸ್ತಕದಲ್ಲಿದ್ದರೆ ಎರಡನೆ ಪಿಯುನಲ್ಲಿ ಪಠ್ಯಪುಸ್ತಕದಲ್ಲೆ ಇವೆ. ಎರಡೂ ಪಠ್ಯಪುಸ್ತಕದ ಸ್ವರೂಪದಲ್ಲಿ ಸಮರೂಪತೆ ಸಾಧಿಸುವುದು ಸೂಕ್ತ.

ಭಾಷಾಭ್ಯಾಸದ ವಿಚಾರದಲ್ಲಿ ಪ್ರಥಮ ವರ್ಷದ ಪಠ್ಯವು ಬೇಜವಾಬ್ದಾರಿಯಿಂದ ಕೂಡಿದೆ. ಅಲ್ಲಿ ಹೆಚ್ಚು ಪದ ಮತ್ತು ಪದಾರ್ಥಗಳಿಗೆ, ವ್ಯಾಕರಣ ವಿಚಾರಗಳಿಗೆ ಒತ್ತು ನೀಡಲಾಗಿದೆ. ಪದಕೋಶ, ವ್ಯಾಕರಣ, ಛಂದಸ್ಸುಗಳ ಆಚೆಗೆ ಭಾಷಾಭ್ಯಾಸ ಚಟುವಟಿಕೆಗಳು ನಿಜಕ್ಕು ಜಿಗಿತ ಪಡೆಯುವ ಅಗತ್ಯವಿದೆ. ಭಾಷಾ ಪಠ್ಯಗಳಲ್ಲಿ ಕೆಲವು ಅಧ್ಯಾಯಗಳಲ್ಲಿ ಒಂದೆರಡು ಭಾಷಾಭ್ಯಾಸಗಳನ್ನು ನೀಡಿದ್ದರೆ ಕೆಲವೆಡೆ ಐದಾರು ಅಭ್ಯಾಸಗಳನ್ನು ನೀಡಲಾಗಿದೆ. ಒಂದನೆ ಪಿಯುನಲ್ಲಿ ಕೆಲವೊಂದು ಅಧ್ಯಾಯಗಳಿಗೆ ಒಂದೂ ಭಾಷಾಭ್ಯಾಸಗಳಿಲ್ಲ. ಎಲ್ಲ ಕಡೆಗು ಒಂದೊಂದು ಅಧ್ಯಾಯಗಳಿಗು ಕನಿಷ್ಟ-ಗರಿಷ್ಟ ಎಷ್ಟು ಭಾಷಾಭ್ಯಾಸಗಳನ್ನು ನೀಡಬೇಕು ಎಂಬ ನಿಯಮ ರೂಪಿಸಿಕೊಳ್ಳುವುದು ಒಳಿತು. ಒಂದೇ ರೀತಿಯ ಭಾಷಾಭ್ಯಾಸಗಳು ಭಿನ್ನ ಅಧ್ಯಾಯಗಳಲ್ಲಿ ಪುನರಾವರ್ತನೆ ಆಗಿವೆ. ಹಾಗಾಗಕೂಡದು. ವಿದ್ಯಾರ್ಥಿಗಳಿಗೆ ಬೇಕಾದ ಭಾಷಾಕೌಶಲ ಮತ್ತು ಸಾಮರ್ಥ್ಯಗಳು ಯಾವುವು ಎಂಬ ಬಗ್ಗೆ ವಿಸ್ತಾರವಾದ ಚಿಂತನೆ ನಡೆಸಿ, ಪಟ್ಟಿ ಮಾಡಿಕೊಂಡು ಅವುಗಳಿಗೆ ತಕ್ಕ ಭಾಷಾಭ್ಯಾಸಗಳನ್ನು ರೂಪಿಸಿಕೊಳ್ಳಬೇಕು. ಇದಕ್ಕೆಲ್ಲ ಒಂದು ಕ್ರಿಯಾಸಂಶೋಧನಾ ಘಟಕ ಇರುವುದು ಅವಶ್ಯಕ.

ಪಠ್ಯವನ್ನು ಗಮನಿಸಿ ಭಾಷಾಭ್ಯಾಸಗಳನ್ನು ರೂಪಿಸುವುದಲ್ಲ. ಭಾಷಾಭ್ಯಾಸಗಳಿಗಾಗಿ ಪಠ್ಯಗಳನ್ನು ರೂಪಿಸುವ ಕೆಲಸ ಆಗಬೇಕಿತ್ತು. ಆದರೆ ಅದು ಆಗಿಲ್ಲ. ಅಂದರೆ ಈ ಹಿಂದೆ ಶುಷ್ಕವಾಗಿ ವ್ಯಾಕರಣ, ಛಂದಸ್ಸು, ಮೀಮಾಂಸೆಗಳೆಲ್ಲವನ್ನೂ ಮಕ್ಕಳಿಗೆ ಕಲಿಯಲು ಹೇರುತ್ತಿದ್ದೆವು. ಈಗ ಪಠ್ಯ ಸಂಬಂಧಿಯಾಗಿ ಭಾಷಾ-ಭ್ಯಾಸಗಳನ್ನು ರೂಪಿಸುತ್ತಿದ್ದೇವೆ. ಇನ್ನು ಮುಂದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿರ್ದಿಷ್ಟ ಉದ್ದೇಶದ ಭಾಷಾಭ್ಯಾಸಗಳಿಗಾಗಿ ಪಠ್ಯಗಳನ್ನು ರೂಪಿಸುವ ಕೆಲಸವನ್ನು ಮಾಡಬೇಕಿದೆ.

ಭಾಷಾ ಪಠ್ಯದಲ್ಲಿನ ಭಾಷಾಭ್ಯಾಸ ಮತ್ತು ಚಟುವಟಿಕೆಗಳಿಗು ಮತ್ತು ಐಚ್ಛಿಕದಲ್ಲಿನವಕ್ಕು ಅಂತಹ ವ್ಯತ್ಯಾಸಗಳಿಲ್ಲ. ಭಾಷಾಪಠ್ಯದಲ್ಲಿನ ಪ್ರಬಂಧ ರಚನೆ, ಪತ್ರಲೇಖನ, ಗಾದೆ ಮಾತಿನ ವಿಸ್ತರಣೆ ಪ್ರಶ್ನೆಗಳಿಗೆ ಬದಲಾಗಿ ಐಚ್ಛಿಕದಲ್ಲಿ ಅಲಂಕಾರ, ಛಂದಸ್ಸು, ಹಳಗನ್ನಡದ ಹೊಸಗನ್ನಡ ಅನುವಾದ ಕುರಿತ ಪ್ರಶ್ನೆಗಳಿವೆ. ಮಿಕ್ಕಂತೆ ಪ್ರಶ್ನೆಪತ್ರಿಕೆ, ಮೌಲ್ಯಮಾಪನ ಸ್ವರೂಪದಲ್ಲಿಯೂ ಇವೆರಡರ ನಡುವೆ ಅಂತಹ ವ್ಯತ್ಯಾಸಗಳು ಇಲ್ಲ. ಭಾಷೆಯಲ್ಲಿ ಏನನ್ನು ಕಲಿಸಬೇಕು ಮತ್ತು ಐಚ್ಛಿಕದಲ್ಲಿ ಏನನ್ನು ಕಲಿಸಬೇಕು ಎಂಬ ಸ್ಪಷ್ಟ ವ್ಯತ್ಯಾಸಪ್ರಜ್ಞೆ ರಚಕರಲ್ಲಿ ಇಲ್ಲದಿದ್ದಾಗ ಹೀಗಾಗುತ್ತದೆ. ಐಚ್ಛಿಕದಲ್ಲಿ ಛಂದಸ್ಸು, ಮೀಮಾಂಸೆ ವಿಚಾರದಲ್ಲಿಯು ಇಲ್ಲಿ ಹಳೆಯ ಆಲದ ಮರಕ್ಕೇ ಜೋತು ಬೀಳಲಾಗಿದೆ. ಈ ಎಲ್ಲ ವಿಚಾರಗಳಲ್ಲಿ ಲೋಕ ಮುಂದಿದೆ, ಪಠ್ಯ ಹಿಂದಿದೆ. ಕನ್ನಡಕ್ಕೆ ಕನ್ನಡದ್ದೆ ವ್ಯಾಕರಣ, ಕನ್ನಡದ್ದೆ ಮೀಮಾಂಸೆ, ಛಂದಸ್ಸುಗಳನ್ನು ಕಟ್ಟಿಕೊಳ್ಳುವ ವಿಚಾರದ ಬಗೆಗಿನ ಯಾವ ಸೂಚನೆಗಳೂ ಇಲ್ಲಿಲ್ಲ. ಅಷ್ಟೆ ಅಲ್ಲ ಶಿಷ್ಟ ಸಾಹಿತ್ಯ ಪ್ರಕಾರಗಳ ರೋಸ್ಟರ್ ಸಿಸ್ಟಮ್ ಭಾಷಾ ಮತ್ತು ಐಚ್ಛಿಕ ಪಠ್ಯಗಳೆರಡೂ ಕಡೆ ಮುಂದುವರೆದಿದೆ.

ಅಭ್ಯಾಸ ಪುಸ್ತಕ ಏತಕ್ಕೆ, ಹೇಗೆ ರೂಪಿಸಬೇಕು?
ಪ್ರಥಮ ಪಿಯುನ ಪ್ರಯೋಗ ಪ್ರಣತಿಯಲ್ಲಿ ಪಠ್ಯಪುಸ್ತಕದಿಂದಲೆ ಎಲ್ಲ ಒಂದು ಮತ್ತು ಎರಡು ಅಂಕದ ಪ್ರಶ್ನೆಗಳನ್ನು ಪುನರ್‍ಮುದ್ರಿಸಿ ಉತ್ತರಿಸಲು ಸ್ಥಳಾವಕಾಶ ನೀಡಿದ್ದಾರೆ. ಪಠ್ಯಪುಸ್ತಕದಲ್ಲಿ ಇರುವ ಪ್ರಶ್ನೋತ್ತರ ಅಭ್ಯಾಸಕ್ಕು ಮತ್ತು ಇಲ್ಲಿನ ಅಭ್ಯಾಸಗಳಿಗು ಏನೇನೂ ವ್ಯತ್ಯಾಸವಿಲ್ಲ. ಅಭ್ಯಾಸಪುಸ್ತಕ ರೂಪಿಸಬೇಕಲ್ಲಾ ಎಂಬ ಕಾರಣಕ್ಕೆ ಇದನ್ನು ರೂಪಿಸಲಾಗಿದೆ. ದ್ವಿತೀಯ ಪಿಯು ಪಲ್ಲವದಲ್ಲಿ ಸ್ವಲ್ಪ ಶ್ರದ್ಧೆಯಾದರೂ ಕಾಣುತ್ತದೆ. ಪ್ರಣತಿಯಲ್ಲಿ ಅದೂ ಇಲ್ಲ. ಪಲ್ಲವದಲ್ಲು ಮೊದಲಲ್ಲಿ ಇರುವ ಭಾವಾರ್ಥ ರಚನೆ, ಆನಂತರದ ಪತ್ರಲೇಖನ ಅಭ್ಯಾಸ ಮತ್ತು ಕೊನೆಯಲ್ಲಿ ಇರುವ ಲೇಖನ ಚಿಹ್ನೆಗಳ ವಿವರಣೆ ಈ ಮೂರನ್ನು ಬಿಟ್ಟರೆ ಮಿಕ್ಕಂತೆ ಪಠ್ಯದಲ್ಲಿನ ಭಾಷಾಭ್ಯಾಸ ಚಟುವಟಿಕೆಗಳಿಗು ಇಲ್ಲಿನ ಅಭ್ಯಾಸಗಳಿಗು ಏನೂ ವ್ಯತ್ಯಾಸವಿಲ್ಲ. ಕಲಿಕಾರ್ಥಿಗಳಿಗೆ ಅಭ್ಯಾಸ ಪುಸ್ತಕದ ಅಗತ್ಯ ಇದೆ. ಆದರೆ ಅದನ್ನು ಪಠ್ಯಪುಸ್ತಕಕ್ಕಿಂತ ಭಿನ್ನವಾಗಿ, ಪೂರಕವಾಗಿ, ಚಟುವಟಿಕೆ ಆಧಾರಿತವಾಗಿ ರೂಪಿಸುವ ಅಗತ್ಯ ಇದೆ.

1ನೆ ಪಿಯುನಲ್ಲಿ ಮೂರು ಘಟಕಕ್ಕೆ ಮಾತ್ರ ಚಟುವಟಿಕೆ ಇವೆ. (ಕಾವ್ಯ 3, 14, 15) ಒಟ್ಟಾರೆ ಇಲ್ಲಿ 06 ಚಟುವಟಿಕೆಗಳನ್ನು ಮಾತ್ರ ನಮೂದಿಸಿದೆ. ಮೂರು ಕಾವ್ಯಘಟಕಗಳಿಗೆ ಮಾತ್ರ ಚಟುವಟಿಕೆ, ಅದೂ ಕಾಟಾಚಾರಕ್ಕೆ ರೂಪಿಸಿ ಮಿಕ್ಕಂತೆ ಯಾವ ಘಟಕಗಳಿಗೂ ಚಟುವಟಿಕೆ ರೂಪಿಸದೆ ಇರುವುದರ ಹಿಂದೆ ನಿರ್ದಿಷ್ಟ ಮಾನದಂಡ ಇಲ್ಲ! ಮೊದಲ ಪಿಯು ಚಟುವಟಿಕೆಗಳನ್ನು ರೂಪಿಸುವಲ್ಲಿ ಸಂಪಾದಕರ ಜ್ಞಾನದಾರಿದ್ರ್ಯ ಎದ್ದು ಕಾಣುತ್ತದೆ. 2ನೆ ಪಿಯುನಲ್ಲಿ ನಾಲ್ಕು ಘಟಕಕ್ಕೆ ಚಟುವಟಿಕೆ ಇಲ್ಲ. (ಕಾವ್ಯ 4, 5. ಗದ್ಯ-5, 8) ಮಿಕ್ಕಂತೆ ಇಲ್ಲಿ ಒಟ್ಟಾರೆ 52 ಚಟುವಟಿಕೆಗಳು ಇವೆ. ಇಲ್ಲಿನ ಕೆಲವು ಚಟುವಟಿಕೆಗಳು ನಿಜಕ್ಕು ಉಪಯುಕ್ತವಾದುವು. ಕೆಲವಂತು ಪಿಎಚ್.ಡಿ. ಥೀಸಿಸ್ ಟಾಪಿಕ್ ಥರ ಇವೆ. (ನೋಡಿ-6, 8, 11, 21, 30, 42, 49) ಎರಡೂ ವರ್ಷಗಳ ಚಟುವಟಿಕೆಗಳಿಗೆ ವಾರ್ಷಿಕ ಪಾಠಯೋಜನೆಯಲ್ಲಿ ಸ್ಥಾನವಿಲ್ಲ. ಚಟುವಟಿಕೆಗಳಿಗೂ ಪಠ್ಯದ ಜೊತೆಯೆ ಇರುವ ಭಾಷಾಭ್ಯಾಸಗಳಿಗು ಸ್ಪಷ್ಟ ವ್ಯತ್ಯಾಸವಿಲ್ಲ. ಪಠ್ಯಪುಸ್ತಕ, ಭಾಷಾಭ್ಯಾಸ, ಚಟುವಟಿಕೆಗಳು, ಮಾದರಿ ಪ್ರಶ್ನೆಪತ್ರಿಕೆ, ಅಭ್ಯಾಸಪುಸ್ತಕ, ವಾರ್ಷಿಕ ಪಾಠಯೋಜನೆ ಇವೆಲ್ಲವುಗಳ ನಡುವೆ ಸಾತತ್ಯ, ಸಮನ್ವಯ ಇಲ್ಲದಿರುವುದು ಎದ್ದು ಕಾಣುತ್ತದೆ.

ಸಮಗ್ರ ಚಿಂತನಾ ಕೈಪಿಡಿ
ಪಠ್ಯ, ಅಭ್ಯಾಸಪುಸ್ತಕ, ಚಟುವಟಿಕೆಗಳು, ಪ್ರಶ್ನೆಪತ್ರಿಕೆಯ ಸ್ವರೂಪ, ಪರೀಕ್ಷೆಗಳು, ಮೌಲ್ಯಮಾಪನ ಕ್ರಮ, ಇವೆಲ್ಲವುಗಳ ಸ್ವರೂಪವು ನಮ್ಮ ಕಲಿಕೆಯ ಉದ್ದೇಶಗಳಿಗೆ ಅನುಗುಣವಾಗಿ ರೂಪಗೊಳ್ಳಬೇಕಲ್ಲವೆ? ಸಮಗ್ರವಾಗಿ ಪಿಯು ಶಿಕ್ಷಣದ ಉದ್ದೇಶಗಳೇನು, ಕನ್ನಡ ಭಾಷಾ ವಿಷಯವು ಆ ಉದ್ದೇಶಗಳಿಗೆ ಪೂರಕವಾಗಿ ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ರೂಪಗೊಳ್ಳಬೇಕು, ಆನಂತರ ಕಲಿಕಾ ಅನುವಿನ ವಿಧಾನಗಳು ಪರೀಕ್ಷಾ ಮತ್ತು ಮೌಲ್ಯಮಾಪನ ಕ್ರಮಗಳು ಹೇಗಿರಬೇಕು ಎಂಬ ಬಗ್ಗೆ ಇಲಾಖೆಯು ಸಮಗ್ರ ಚಿಂತನಾ ಕೈಪಿಡಿಯೊಂದನ್ನು ರಚಿಸಬೇಕಾಗುತ್ತದೆ. ಎಜುಕೇಶನ್ ಪಾಲಿಸಿಯೊಂದು ಪದವಿ ಪೂರ್ವ ಹಂತಕ್ಕೇ ವಿಶಿಷ್ಟವಾಗಿ ನಮ್ಮಲ್ಲಿ ರೂಪಗೊಂಡಿಲ್ಲ. ಸರ್ಕಾರ/ಇಲಾಖೆ/ಪಠ್ಯಸಮಿತಿ ಆ ಕೆಲಸ ಮಾಡಬೇಕು. ಅಲ್ಲದೆ ಪ್ರತಿಯೊಬ್ಬ ಶಿಕ್ಷಕನೂ ತನ್ನದೇ ಉದ್ದೇಶ ಮತ್ತು ಅದಕ್ಕೆ ಅನುಗುಣವಾದ ಅನುವಿನ ಉಪಕ್ರಮಗಳ ಕೋಶವೊಂದನ್ನು ಕಟ್ಟಿಕೊಳ್ಳಬೇಕು. ಅದು ವಾರ್ಷಿಕ ಪಾಠಯೋಜನಾ ನೀಲನಕ್ಷೆಯಲ್ಲಿ ಪ್ರತಿಬಿಂಬಿತ ಆಗಬೇಕು. ಇಲ್ಲದೆ ಹೋದರೆ ನಾವು ರೂಢಿ, ಸಂಪ್ರದಾಯಗಳ ಗಿಳಿಪಾಠ ಒಪ್ಪಿಸಬೇಕಾಗುತ್ತದೆ. ಬರಿದೆ ಬೋಧಕ ಅಥವಾ ಸಿಲಬಸ್ ಕವರ್ ಮಾಡಿ ಕೈ ತೊಳೆದುಕೊಳ್ಳುವ ಉಪನ್ಯಾಸಕರು ಆಗಬೇಕಾಗುತ್ತದೆ.

ಭಾಷಾ ಪ್ರಯೋಗಾಲಯ: ಪ್ರಾಯೋಗಿಕ ತರಗತಿ

ಭಾಷೆ ಕೂಡ ಒಂದು ವಿಜ್ಞಾನವೇ. ವಿಜ್ಞಾನ ತರಗತಿಗಳಿಗೆ ಪ್ರಯೋಗಾಲಯ ಮತ್ತು ಪ್ರಾಯೋಗಿಕ ತರಗತಿಗಳು ಇರುವುದಾದರೆ ಭಾಷೆಗೇಕೆ ಭಾಷಾ ಪ್ರಯೋಗಾಲಯ ಮತ್ತು ಪ್ರಾಯೋಗಿಕ ತರಗತಿಗಳು ಇರಬಾರದು? ನಮ್ಮ ಈಗಿನ ಪಠ್ಯದಲ್ಲಾಗಲೀ, ಅಭ್ಯಾಸ ಪುಸ್ತಕದಲ್ಲಾಗಲೀ, ಪರೀಕ್ಷಾ ವ್ಯವಸ್ಥೆಯಲ್ಲಿ ಆಗಲೀ ಭಾಷಾ ಪ್ರಯೋಗ ಮತ್ತು ತತ್ಸಂಬಂಧಿ ಪ್ರಯೋಗಾಲಯದ ಬಳಕೆ ಬಗ್ಗೆ ಯಾವುದೇ ಸೂಚನೆ ಇಲ್ಲ. ಹಾಗೆ ನೋಡಿದರೆ ಪ್ರಾಥಮಿಕ, ಪ್ರೌಢ, ಪಿಯು ಮತ್ತು ಉನ್ನತ ಶಿಕ್ಷಣ ಎಲ್ಲ ಕಡೆಗೂ ಆಯಾ ಇಲಾಖೆಗಳು ಭಾಷಾ ಪ್ರಯೋಗಾಲಯಗಳನ್ನು ಕಡ್ಡಾಯ ಮಾಡಬೇಕಿದೆ.

ಧ್ವನಿಬ್ಯಾಂಕ್, ಒಳಗೊಳ್ಳುವಿಕೆ
ನಿಜವಾಗಿಯೂ ಸಾಹಿತ್ಯಕನ್ನಡಗಳ ಗ್ರಹಿಕೆ ಮತ್ತು ವಿಶ್ಲೇಷಣಾ ಸಾಮರ್ಥ್ಯಗಳ ವೃದ್ಧಿಯು ಹೆಚ್ಚು ಕೇಂದ್ರೀಕೃತ ಆಗಬೇಕಿರುವುದು ಐಚ್ಛಿಕ ತರಗತಿಗಳಲ್ಲಿ. ಭಾಷಾ ತರಗತಿಗಳಲ್ಲಿ ಅಲ್ಲ. ಇಲ್ಲಿ ಆಡಳಿತ ಕನ್ನಡ, ನಿರ್ವಹಣ ಕನ್ನಡ, ವಿಜ್ಞಾನ ಕನ್ನಡ, ನ್ಯಾಯಾಂಗ ಕನ್ನಡ, ಗಣಕ ಕನ್ನಡ (ಯೂನಿಕೋಡ್‍ಗಳು) ಇತ್ಯಾದಿಗಳ ಗ್ರಹಿಕೆ, ತಿಳುವಳಿಕೆ ಮತ್ತು ಬಳಕೆಯ ಕೌಶಲಗಳ ವೃದ್ಧಿ ಆಗಬೇಕಿದೆ. ಇವುಗಳಿಗೆ ಬೇಕಾದ ಪಠ್ಯ, ಅಭ್ಯಾಸ, ಪ್ರಯೋಗಾಲಯ ಚಟುವಟಿಕೆಗಳನ್ನು ನಾವು ಅಳವಡಿಸಬೇಕಾಗಿದೆ. ಸಾಹಿತ್ಯಕ ಪ್ರತಿನಿಧೀಕರಣಗಳ ಅಭ್ಯಾಸದ ಮೂಲಕ ಮಾತ್ರವೆ ಅಲ್ಲದೆ ಭಿನ್ನ ಬಳಕೆಯ ಧ್ವನಿ ಮುದ್ರಿತ ಕೇಳು ಪಠ್ಯಗಳ ಮೂಲಕ ಗುಲ್ಬರ್ಗ ಕನ್ನಡ, ಮಂಗಳೂರು ಕನ್ನಡ, ಕುಂದಾಪ್ರ ಕನ್ನಡ, ಮೈಸೂರು ಕನ್ನಡ, ಕೋಲಾರ ಕನ್ನಡ, ಧಾರವಾಡ ಕನ್ನಡ, ಕಾಸರಗೋಡು ಕನ್ನಡ ಮೊದಲಾದ ಕನ್ನಡ ಸಾಮಾಜಿಕ ಭಾಷಾ ಪ್ರಭೇದಗಳ ಗ್ರಹಿಕೆಯ ಸಾಮರ್ಥ್ಯವನ್ನು ವೃದ್ಧಿಸುವ ಉಪಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದಕ್ಕಾಗಿ ಬೇಕಾದ ಚಟುವಟಿಕೆಗಳನ್ನೂ ರೂಪಿಸಿಕೊಳ್ಳಬೇಕಾಗಿದೆ. ನಮ್ಮ ನಮ್ಮ ಭಾಷಾ ಪ್ರಯೋಗಾಲಯಗಳಲ್ಲಿ ಇಂತಹ ಭಿನ್ನ ಸಾಮಾಜಿಕ ಭಾಷಾ ಪ್ರಭೇದಗಳ ಧ್ವನಿ ಬ್ಯಾಂಕ್ ಒಂದು ಎಲ್ಲ ಕಡೆಗೂ ಕಡ್ಡಾಯವಾಗಿ ಇರಬೇಕಾಗುತ್ತದೆ. ಹಾಗೇ ಧ್ವನಿ ಬ್ಯಾಂಕ್ ಸೃಷ್ಟಿಸುವ ಕೆಲಸವು ಒಮ್ಮೆ ಹಾಗೆ ಮಾಡಿ ಮುಗಿಯುವುದಲ್ಲ; ಅದು ನಿರಂತರವಾಗಿ ಬದಲಾಗುತ್ತಿರಬೇಕು. ಭಾಷೆಯೇ ಸ್ವತಃ ಬದಲಾಗುವ ಸಂಗತಿಯಾಗಿದ್ದು ಇಂತಹ ಧ್ವನಿ ಬ್ಯಾಂಕ್ ಕೂಡ ಕಾಲಕಾಲಕ್ಕೆ ಅಪ್‍ಡೇಟ್ ಆಗಬೇಕಾಗುತ್ತದೆ. ಹೀಗಾಗಿ ಇದೊಂದು ನಿರಂತರ ಚಾಲ್ತಿಯಲ್ಲಿರುವ ಯೋಜನೆ (ಪ್ರಾಜೆಕ್ಟ್) ಆಗಬೇಕಿದೆ. ಈ ಕೆಲಸವನ್ನು ‘ರಾಜ್ಯ ಕ್ರಿಯಾ ಸಂಶೋಧನಾ ಘಟಕ’ವು ನಿರ್ವಹಿಸಬೇಕಾಗುತ್ತದೆ.

ಅಕ್ಷರರಾಶಿ ಮಾತ್ರ ಪಠ್ಯವೇ?
ಈಗಿನ ಪಠ್ಯಗಳನ್ನು ಗಮನಿಸಿದರೆ ಅಕ್ಷರರಾಶಿ ಮಾತ್ರ ಪಠ್ಯ ಎಂಬ ನಂಬಿಕೆ ಇರುವಂತಿದೆ. ಕೇಳುಪಠ್ಯ, ದೃಶ್ಯಪಠ್ಯ, ಚಿತ್ರಪಠ್ಯ, ಡಿಜಿಟಲ್ ರೂಪ, ಅಂತರ್ಜಾಲ ಇವುಗಳನ್ನೂ ಪಠ್ಯದ ಒಳಕ್ಕೆ ತೆಗೆದುಕೊಳ್ಳಬೇಕಲ್ಲವೆ? ಆದರೆ ಇಲ್ಲಿ ಅಂತಹ ಯಾವ ಲಕ್ಷಣಗಳೂ ಇಲ್ಲ. ಒಂದೆರಡು ಚಿತ್ರಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲು ಇದಕ್ಕೆ ಅವಕಾಶವಿಲ್ಲ. ಕೇಳು ನೋಡು ಮತ್ತು ಓದುಗಳೆಲ್ಲ ಇಂದು ಕಲಸಿಕೊಳ್ಳುತ್ತಿವೆ. ಲೋಕದಲ್ಲಿ ಟಿವಿ, ಸಿನೆಮಾ, ರೇಡಿಯೋಗಳನ್ನು ಶಿಕ್ಷಣದಲ್ಲಿ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಸಾಕಷ್ಟು ಸಂಶೋಧನೆ, ಆಚಾರಗಳು ಚಾಲ್ತಿಯಲ್ಲಿವೆ. ಆನ್‍ಲೈನ್ ಕಲಿಕೆ, ಉಪಗ್ರಹ ಆಧಾರಿತ ಕಲಿಕೆ ಕೂಡ ಈಗ ಚಾಲ್ತಿಯಲ್ಲಿ ಇದೆ. ದೃಶ್ಯಪಠ್ಯ ನಿಜಕ್ಕು ಓದು ಪಠ್ಯಕ್ಕಿಂತ ಹೆಚ್ಚು ಶಕ್ತಿಶಾಲಿ ಎಂಬುದು ಈಗಾಗಲೇ ಸಾಬೀತಾಗಿದೆ. ಹೀಗಿರುವಾಗ ನಮ್ಮ ಪಠ್ಯಗಳಲ್ಲು ದೃಶ್ಯಪಠ್ಯಗಳನ್ನು ಒಳಗೊಳ್ಳಬೇಕಾದ ಮತ್ತು ಕಲಿಕೆಯ ಅನುವಿನ ಉಪಕ್ರಮಗಳಲ್ಲಿ ದೃಶ್ಯಪಠ್ಯ ನೋಡುವ, ವಿಶ್ಲೇಷಿಸುವ, ಸೃಷ್ಟಿಸುವ ಮತ್ತು ಸಹಸಂಬಂಧಿ ಚಟುವಟಿಕೆಗಳನ್ನು ಒಳಗೊಳ್ಳಬೇಕಾದ ತುರ್ತು ಇಂದು ಇದೆ. ನಮ್ಮ ನಮ್ಮ ಪಾಠಯೋಜನೆಗಳಲ್ಲು ಇವುಗಳನ್ನು ಒಳಗೊಳ್ಳಬೇಕಿದೆ.

ಇಲಾಖೆಯ ಕ್ರಿಯಾಸಂಶೋಧನಾ ಘಟಕವು ತನ್ನದೇ ವೆಬ್‍ಸೈಟ್ ಒಂದನ್ನು ತೆರೆದು ಅಲ್ಲಿ ಪ್ರತಿಯೊಂದು ಪಿಯು ಕಾಲೇಜೂ ಲಾಗಿನ್ ಆಗಿ ದೃಶ್ಯಪಠ್ಯ, ಡಿಜಿಟಲ್ ಪಠ್ಯ, ಸ್ಥಿರಚಿತ್ರ, ವರ್ಣ-ರೇಖಾಚಿತ್ರಗಳು, ಆಡಿಯೋ ಕ್ಲಿಪ್ಪುಗಳನ್ನು ನೋಡುವಂತೆ, ವಿದ್ಯಾರ್ಥಿಗಳಿಗೆ ಬೇಕಾದಾಗ ಪ್ರದರ್ಶಿಸುವಂತೆ ಒಂದು ಜಾಲವನ್ನು ನಿರ್ಮಿಸುವ ಕೆಲಸವನ್ನು ಮಾಡಬೇಕಿದೆ. ಪ್ರತಿಯೊಂದು ಪಿಯು ಕಾಲೇಜೂ ತನ್ನದೇ ಆದ ಜಾಲತಾಣ, ವೆಬ್ ವಿಳಾಸ ಹೊಂದಿದ್ದು ಕೇಂದ್ರ ತಾಣದೊಂದಿಗೆ ಕೊಂಡಿ-ಸಂಪರ್ಕ ಹೊಂದಿರುವುದು ಇಂದಿನ ಡಿಜಿಟಲ್ ಕಾಲದಲ್ಲಿ ಅತ್ಯಂತ ಅಪೇಕ್ಷಣೀಯ. ಶೈಕ್ಷಣಿಕ ಉದ್ದೇಶಕ್ಕಾಗಿ ಅಧ್ಯಾಪಕರು ಸಾಮಾಜಿಕ ಜಾಲತಾಣಗಳನ್ನೂ ಸಮರ್ಥವಾಗಿ ಬಳಸಬಹುದು. ಇಲಾಖೆ ತತ್ಸಂಬಂಧಿ ಆಪ್‍ಗಳನ್ನು ರೂಪಿಸುವ ಅಗತ್ಯ ಕೂಡ ಇದೆ.

ನಮ್ಮಲ್ಲಿ ಇಂದು ಜನಪ್ರಿಯ ಸಿನೆಮಾ, ಜನಪ್ರಿಯ ರಂಗಭೂಮಿ, ಜನಪ್ರಿಯ ಟಿವಿ ಸೀರಿಯಲ್ಲುಗಳು, ಜನಪ್ರಿಯ ಪ್ರಿಂಟ್ ಮೀಡಿಯಾ, ಜನಪ್ರಿಯ ಚಿತ್ರಮುದ್ರಿತ ಮೊಬೈಲ್ ಮೆಸೇಜುಗಳು ನಮ್ಮ ಸಮಾಜದ ಬಗ್ಗೆ ಕಟ್ಟಿಕೊಡುವ ಕಲ್ಪನೆಯೇ ಬೇರೆ: ತರಗತಿಯ ಸಾಹಿತ್ಯ ಪಠ್ಯಗಳು ಕಟ್ಟಿಕೊಡುವ ಕಲ್ಪನೆಯೇ ಬೇರೆ. ಇವತ್ತು ನಮ್ಮ ಯುವ ಜನತೆಯ ವರ್ತನೆ; ಭಾವನೆ; ನಂಬಿಕೆಗಳನ್ನು ಟಿ.ವಿ, ಸಿನೆಮಾ, ಅಂತರ್ಜಾಲ ಪ್ರಭಾವಿಸಿದಷ್ಟು ಶೈಕ್ಷಣಿಕ ಪಠ್ಯಗಳು ಪ್ರಭಾವಿಸುತ್ತಿಲ್ಲ. ಅವುಗಳು ಇವರ ನೆನಪಿನ ಭಾಗ ಆಗುತ್ತಿರುವಷ್ಟು ಇವುಗಳು ಆಗುತ್ತಿಲ್ಲ. ಇದನ್ನು ನಾವೆಲ್ಲ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ತೆಗೆದುಕೊಂಡು ಅವುಗಳನ್ನೆಲ್ಲ ನಮ್ಮ ಪಠ್ಯದ ಭಾಗ ಮಾಡಬೇಕಾಗಿದೆ. ಒಳಗೊಳ್ಳಬೇಕಾಗಿದೆ. ಸಾಹಿತ್ಯಪಠ್ಯದ ಪರಿಕಲ್ಪನೆಗಳನ್ನೆ ಬದಲಿಸಿಕೊಳ್ಳಬೇಕಿದೆ. ಪಠ್ಯ-ಪಠ್ಯಪುಸ್ತಕದ ಪರಿಕಲ್ಪನೆಗಳನ್ನೆ ಬದಲಿಸಿಕೊಳ್ಳಬೇಕಿದೆ. ಕಲಿಕೆಯ ಅನುವಿನ ಪರಿಕಲ್ಪನೆಗಳನ್ನೆ ಬದಲಿಸಿಕೊಳ್ಳಬೇಕಿದೆ. ಕಲಿಕೆಯ ಉದ್ದೇಶಗಳನ್ನೆ ಮರು ರೂಪಿಸಿಕೊಳ್ಳಬೇಕಿದೆ.

ಉದ್ದೇಶಗಳೇನು?
ಈಗ ಚಲಾವಣೆಯಲ್ಲಿ ಇರುವ ಪಠ್ಯ, ಅಭ್ಯಾಸಪುಸ್ತಕ, ಪಾಠಯೋಜನೆಗಳನ್ನು ನೋಡಿದರೆ ನಮ್ಮ ಶಿಕ್ಷಣದ ಉದ್ದೇಶ ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ನಿರ್ಮಾಣ ಅಲ್ಲ; ಪರೀಕ್ಷಾ ಕೇಂದ್ರಿತ ತರಬೇತಿ ಎನ್ನಿಸುತ್ತದೆ. ವಿದ್ಯಾರ್ಥಿಯನ್ನು ಅಂಕಯಂತ್ರ ಆಗಿಯೂ, ಮಾಹಿತಿ ಕಣಜ ಆಗಿಯೂ ನಾವು ಉತ್ಪಾದಿಸುತ್ತಿದ್ದೇವೆ ಎನ್ನಿಸುತ್ತದೆ. ನಮ್ಮ ಶಿಕ್ಷಣದ ಉದ್ದೇಶ ಸಮಗ್ರ ವ್ಯಕ್ತಿತ್ವದ ನಿರ್ಮಾಣ ಅಲ್ಲ; ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕೋಚಿಂಗ್ ಸೆಂಟರುಗಳಾಗಿ ನಮ್ಮ ಪಿಯು ಕಾಲೇಜುಗಳನ್ನು ನಾವು ಪರಿವರ್ತಿಸುತ್ತಿದ್ದೇವೆ. ಕೈಗಾರಿಕೆಗಳಿಗೆ ಜೀವಂತ ಯಂತ್ರಗಳನ್ನು ಇಲ್ಲವೆ ಉದ್ಯಮಿಗಳಿಗೆ ತಲೆಬಗ್ಗಿಸಿ ದುಡಿಯುವ ಸೇವಕರನ್ನು ತಯಾರು ಮಾಡಲು ನಾವು ಹೊರಟಿದ್ದೇವೆ. ಅಷ್ಟೇ ಅಲ್ಲ; ಎಂದಿಗೂ ಮರಳಿಮಣ್ಣಿಗೆ ಹೋಗಿ ತಮ್ಮ ಬದುಕುಗಳನ್ನು ಕಟ್ಟಿಕೊಳ್ಳಲು ಆಗದ ನಿರುಪಯುಕ್ತರನ್ನು ತಯಾರಿಸುತ್ತಿದ್ದೇವೆ. ಇವ್ಯಾವುವೂ ನಮ್ಮ ಪಿಯು ಶಿಕ್ಷಣದ ಉದ್ದೇಶಗಳಾಗಬೇಕಿಲ್ಲ. ಆದರೆ ನಾವು ನಿರಂತರ ಇವುಗಳ ಹಿಂದೆಯೇ ಓಡುತ್ತಿದ್ದೇವೆ. ಪದವಿ ಶಿಕ್ಷಣದಲ್ಲು ಇದಕ್ಕಿಂತ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.

ಕಲಿಕೆಗೆ ಬೇಕಾದ ಚಟುವಟಿಕೆಗಳು
ಈಗಿನ ಪಠ್ಯ ಮತ್ತು ಕಲಿಕೆಗಳು ಲೇಖಕ ಕೇಂದ್ರಿತ, ಸಾಹಿತ್ಯಪ್ರಕಾರ ಕೇಂದ್ರಿತ ಆಗಿವೆ. ಆದರೆ ಇವು ಕೌಶಲಕೇಂದ್ರಿತ, ಸಾಮರ್ಥ್ಯಕೇಂದ್ರಿತ, ಚಟುವಟಿಕೆ ಆಧಾರಿತ ಆಗಿರಬೇಕಾದ ಅಗತ್ಯವಿದೆ. ಸಮಯ, ಸಂದರ್ಭ, ಪಿಯು ವರ್ಷ, ಉದ್ದೇಶಕ್ಕೆ ತಕ್ಕಂತೆ ಚಟುವಟಿಕೆಗಳನ್ನು ಶಿಕ್ಷಕರು ರೂಪಿಸಿಕೊಂಡು, ಯೋಜಿಸಿಕೊಂಡು ಜಾರಿಗೆ ತರಬೇಕಾಗುತ್ತದೆ. ಚಟುವಟಿಕೆಗಳ ಹಿಂದಿನ ಉದ್ದೇಶ, ಸಿದ್ಧಿಸಬಹುದಾದ ಕೌಶಲ ಮತ್ತು ಸಾಮರ್ಥ್ಯಗಳು ಮತ್ತು ಚಟುವಟಿಕೆಗಳ ಜಾರಿ ಸಾಧ್ಯತೆ ಹಾಗೂ ನಂತರದ ಪರಿಣಾಮಗಳನ್ನು ಚರ್ಚೆಯನ್ನು ಕ್ರಿಯಾ ಸಂಶೋಧನಾ ಘಟಕವು ವಿಸ್ತಾರವಾಗಿ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಆಯಾ ಶಿಕ್ಷಕರೇ ಚಿಂತಿಸಿ, ವಿದ್ಯಾರ್ಥಿಗಳ ಅಪೇಕ್ಷೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಕಲ್ಪಿಸಿಕೊಳ್ಳಬೇಕು.

ಯಾವತ್ತೂ ನಮ್ಮ ಸ್ವಪ್ರಯತ್ನದಿಂದ ಮತ್ತು ಸ್ವಾನುಭವದಿಂದ ಗಳಿಸುವ ಜ್ಞಾನ, ಕೌಶಲ, ಸಾಮರ್ಥ್ಯಗಳು ಹೆಚ್ಚು ನಮ್ಮನ್ನು ಸಮರ್ಥರನ್ನಾಗಿ ಮತ್ತು ಸ್ವತಂತ್ರ ವ್ಯಕ್ತಿತ್ವ, ಅಸಾಧಾರಣ ಮನೋಬಲ, ಆತ್ಮಶಕ್ತಿ ಇರುವವರನ್ನಾಗಿ ಮಾಡಬಲ್ಲವು. ಆದರೆ ಕಟ್ಟಿಕೊಟ್ಟ ನೆನಪಿನ ಬುತ್ತಿ ಹೆಚ್ಚು ಕಾಲ ಉಳಿಯದು. ವಿದ್ಯಾರ್ಥಿಗಳನ್ನು ಹೀಗೆ ಸ್ವತಂತ್ರ ಅನುಭವಿಗಳನ್ನಾಗಿಯೂ, ಆತ್ಮಶಕ್ತರನ್ನಾಗಿಯೂ ಮಾಡಬೇಕಾದುದು ನಮ್ಮ ಕರ್ತವ್ಯ. ಇಷ್ಟೆಲ್ಲ ಮಾಡಲು ಸೌಕರ್ಯ, ಸಮಯ ಬೇಕಲ್ಲ; ಇವೆಲ್ಲ ಮಾಡುತ್ತ ಕೂತರೆ ಸಿಲಬಸ್ ಕವರ್ ಮಾಡುವುದು ಯಾವಾಗ ಎಂದು ಅಧ್ಯಾಪಕರು ಕೇಳಬಹುದು. ಅದಕ್ಕೇ ನಮ್ಮ ಪಠ್ಯದ ಕಲ್ಪನೆ, ಕಲಿಕೆಯ, ಪರೀಕ್ಷೆ-ಮೌಲ್ಯಮಾಪನಗಳ, ಶಿಕ್ಷಕರ ಪಾತ್ರದ ಕಲ್ಪನೆಯೆಲ್ಲವೂ ಬದಲಾಗಬೇಕು. ನಮ್ಮ ಆಲೋಚನಾ ಕ್ರಮದಲ್ಲಿಯೇ ಪ್ರಾಥಮಿಕವಾಗಿ ಬದಲಾವಣೆಗಳು ಆಗಬೇಕಿದೆ. ಚಟುವಟಿಕೆಗಳ ಮೂಲಕ ಕಲಿಕೆಗೆ ಅನುವು ಮಾಡಿಕೊಡುವ ಅನುವಿಗರ ಪಾತ್ರವನ್ನು ನಿರ್ವಹಿಸಲು ನಾವೆಲ್ಲ ಪಠ್ಯವನ್ನು ಒಂದು ನೆಪ ಮಾಡಿಕೊಳ್ಳಬೇಕಷ್ಟೆ. ಪರೀಕ್ಷೆಗಳನ್ನೂ ನಿರಂತರ ಕಲಿಕೆಯ ಭಾಗಗಳನ್ನಾಗಿ ಮಾಡಬೇಕಿದೆಯಷ್ಟೆ.

ಪರೀಕ್ಷೆ, ಕಲಿಕೆ, ನಿರಂತರ ಮೌಲ್ಯಮಾಪನ, ವಿದ್ಯಾರ್ಥಿ ಕೇಂದ್ರಿತ ದೃಷ್ಟಿ
ಪಿಯು ಪಾಠ ಮಾಡಲು ವಾರ್ಷಿಕ ಸುಮಾರು 120 ಗಂಟೆಗಳು ಸಿಗಬಹುದು. ಅಷ್ಟು ಗಂಟೆಗಳಲ್ಲಿ ದೀರ್ಘ ಗದ್ಯ, ನಾಟಕ ಒಂದನ್ನು ಪಾಠ ಮಾಡಲು ಹತ್ತೊ ಹನ್ನೆರಡೊ ಗಂಟೆ ಮಾತ್ರ ಸಿಗುತ್ತವೆ. ಅಂದಾಗ ಅಷ್ಟು ಗಂಟೆಗಳಲ್ಲಿ ಕಾದಂಬರಿಯನ್ನು/ನಾಟಕವನ್ನು ತರಗತಿಯಲ್ಲಿ ಓದಿ ಮುಗಿಸಲು ಆಗುತ್ತದೆಯೆ? ಕಾದಂಬರಿ, ನಾಟಕಗಳನ್ನು ಕಲಿಯಲು ಬಳಸುವಾಗ ನಾವು ಉಪನ್ಯಾಸ, ಚರ್ಚೆ, ಸೆಮಿನಾರು, ದೃಶ್ಯಪಠ್ಯದ ಚರ್ಚೆ, ಪರೀಕ್ಷಾಮುಖಿ ಚರ್ಚೆ ಹೀಗೆ ಚರ್ಚಿಸಿ ಮುಗಿಸಲು ತಕ್ಕಾದ ಲೆಸನ್‍ಪ್ಲಾನಿಂಗ್, ಟೀಚಿಂಗ್ ಪ್ಲಾನಿಂಗ್, ಮೆತೆಡ್ ಪ್ಲಾನಿಂಗ್, ಕಂಟಿನ್ಯುಯಸ್ ಇವ್ಯಾಲ್ಯುಯೇಶನ್ ಪ್ಲಾನಿಂಗ್ ಮಾಡಿಕೊಳ್ಳಬೇಕಾಗುತ್ತದೆ.

ನಮ್ಮ ಬಹುಪಾಲು ಪ್ರಶ್ನೆಪತ್ರಿಕೆ ಮಾದರಿಗಳು ಮೌಲ್ಯಮಾಪನ ಸ್ನೇಹಿ ಆಗಿವೆ! ಅಧ್ಯಾಪಕ ಸ್ನೇಹಿ ಆಗಿವೆ! (ಪದವಿಯಲ್ಲಂತು ಇವು ಕಣ್ಣಿಗೆ ರಾಚುತ್ತವೆ) ಇದೆಲ್ಲದರ ಬಗ್ಗೆ ವಿದ್ಯಾರ್ಥಿಗಳ ಅಭಿಮತವನ್ನು ಸಂಗ್ರಹಿಸಿ, ವಿಶ್ಲೇಷಿಸಿ ಅದರ ಫಲಿತಗಳನ್ನು ಗಂಭಿರವಾಗಿ ಪರಿಗಣಿಸುವ ಬಗೆಗೂ ಚಿಂತಿಸಬೇಕಿದೆ. ಹಾಗೆಯೇ ನಮ್ಮಲ್ಲಿನ ಪ್ರಾಥಮಿಕದಿಂದ ಪದವಿವರೆಗೆ ಕಲಿಕೆಯಲ್ಲಿ ಇರುವ ಸಮನ್ವಯದ ಕೊರತೆಯನ್ನು ತುಂಬಲು ನಮ್ಮದೇ ಆದ ರಾಜ್ಯಮಟ್ಟದ ‘ಕರ್ನಾಟಕ ರಾಜ್ಯ ಶಿಕ್ಷಣ ಸಮನ್ವಯ ಸಮಿತಿ’ ಒಂದರ ಅಗತ್ಯ ಇದೆ. ಇದು ಪೂರ್ವ ಪ್ರಾಥಮಿಕದಿಂದ ಸ್ನಾತಕೋತ್ತರದವರೆಗಿನ ಕಲಿಕಾ ಅನುವಿನ ವಿಧಾನ, ಪಠ್ಯ ಸ್ವರೂಪಗಳ ನಡುವೆ ಸಾತತ್ಯ ಮತ್ತು ಸಮನ್ವಯಗಳನ್ನು ಸಾಧಿಸುವ ಕೆಲಸ ಮಾಡಬೇಕಿದೆ. ಪ್ರಶ್ನೆಪತ್ರಿಕೆ ತಯಾರಿ, ಮೌಲ್ಯಮಾಪನಗಳಿಗೂ ಅಧ್ಯಾಪಕರಿಗೆ ಸರಿಯಾದ ತರಬೇತಿ ನೀಡಬೇಕಿದೆ.

ಪರೀಕ್ಷೆ ಎಂದರೆ ನಾವಿಂದು ಕಲಿಕಾರ್ಥಿಗಳು ಕಲಿತದ್ದನ್ನು ಅಳೆಯುವ ಮಾರ್ಗ ಎಂದು ತಿಳಿದಿದ್ದೇವೆ. ಪರೀಕ್ಷೆ ಕೂಡ ಕಲಿಕೆಯ ವಿಧಾನಗಳಲ್ಲಿ ಒಂದು ಎಂದು ನಾವು ತಿಳಿದೇಯಿಲ್ಲ. ಇಂದಿನ ಅಂಕಪಟ್ಟಿಗಳು ಜ್ಞಾನವನ್ನು ನಿಜವಾಗಿಯೂ ಪ್ರತಿನಿಧಿಸುವ ಕನ್ನಡಿಗಳಾಗಿಲ್ಲ. ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಮಕ್ಕಳನ್ನು ಅಂಕವೀರರನ್ನಾಗಿ ತಯಾರಿಸುವ ಅಗತ್ಯವಿಲ್ಲ. ಅಂಕ ಗಳಿಸಿದ ಮಾತ್ರಕ್ಕೆ ಯಾರೂ ಜೀವನಕ್ಕೆ ಸಜ್ಜುಗೊಳ್ಳುವುದಿಲ್ಲ ಮತ್ತು ಅಂಕ ಗಳಿಸಿದ ಮಾತ್ರಕ್ಕೆ ಯಾರೊಬ್ಬರೂ ಎಲ್ಲಕ್ಕು ಸಮರ್ಥರಲ್ಲ, ಜ್ಞಾನಿಗಳಲ್ಲ. ಪರೀಕ್ಷೆ ಎನ್ನುವುದು ಕಲಿಯಲು ಇರುವ ಮತ್ತು ಕಲಿತಿರುವುದನ್ನು ತಿದ್ದಿಕೊಳ್ಳಲು ಇರುವ ಒಂದು ಅವಕಾಶ. ಭಾಷಾ ಪ್ರಯೋಗಾಲಯದಲ್ಲಿ ನಮ್ಮ ಭಾಷೆಯನ್ನು ನಾವು ಮರುಪರಿಶೀಲನೆ ಮಾಡಲು ಹೇಗೆ ಸಾಧ್ಯವಿದೆಯೋ ಹಾಗೆ ಪರೀಕ್ಷೆಯಲ್ಲು ನಮ್ಮ ಕಲಿಕೆಯ ಮರುಪರಿಶೀಲನೆಯ ಸಾಧ್ಯವಾಗಬೇಕು.

ಕಲಿಕೆಯ ಮೌಲ್ಯಮಾಪನವು ಒಂದು ನಿರ್ಧಿಷ್ಟ ಅವಧಿಯಲ್ಲಿ ನಡೆದ ಬರವಣಿಗೆಯ ಮೌಲ್ಯಮಾಪನವಲ್ಲ. ಅದು ಕಲಿಕೆಯಲ್ಲಿ ನಿರಂತರ ನಡೆಯಬೇಕಾದ ಚಟುವಟಿಕೆ. ಅಂತಹ ನಿರಂತರವಾಗಿ ಮೌಲ್ಯಮಾಪನದ ಒಂದು ಸಾಧ್ಯತೆ ಆಂತರಿಕ ಅಂಕಪದ್ಧತಿ. ಆದರೆ ನಾವು ಅದರ ದುರುಪಯೋಗಕ್ಕೆ ಅವಕಾಶ ನೀಡಿ ಅದನ್ನು ಅನುಪಯುಕ್ತ ಮಾಡಿದ್ದೇವೆ! ಪರೀಕ್ಷೆ ಮತ್ತು ಮೌಲ್ಯಮಾಪನಗಳ ಉದ್ದೇಶ ಮತ್ತು ಸಾಧ್ಯತೆ ಹಾಗೂ ಪರಿಣಾಮಗಳ ಬಗ್ಗೆ ಸರಿಯಾದ ಚಿಂತನೆ, ಕಲ್ಪನೆ ಇಲ್ಲದಿದ್ದಾಗ ಇಂಥ ಅವಕಾಶಗಳನ್ನು ನಾವು ವಿಫಲ ಮಾಡಿಬಿಡುತ್ತೇವೆ. ಅಂಥಲ್ಲಿ ಎಲ್ಲ ಒಳ್ಳೆಯ ಐಡಿಯಾಗಳು ಜಾರಿ ಹಂತದಲ್ಲಿ ವಿಫಲಗೊಳ್ಳುತ್ತವೆ. ಕಂಟಿನ್ಯುಯಸ್ ಕಾಂಪ್ರಿಹೆನ್ಸಿವ್ ಇವ್ಯಾಲ್ಯುಯೇಶನ್ (ಸಿಸಿಇ) ಪದ್ಧತಿ ಈಗಾಗಲೇ ರದ್ದಾಗಿರುವುದೇ ಇದಕ್ಕೆ ನಿದರ್ಶನ. ನಾವು ಯಾವುದನ್ನು ತಾತ್ವಿಕವಾಗಿ ಉತ್ತಮ ಎಂದುಕೊಂಡಿರುತ್ತೇವೊ ಅದು ಪ್ರಾಯೋಗಿಕವಾಗಿ ವಿಫಲ ಆಗಬಹುದು. ಅದಕ್ಕೆ ಆ ಪದ್ಧತಿಯ ದೋಷವೇ ಕಾರಣವಾಗಬೇಕಿಲ್ಲ. ವ್ಯವಸ್ಥೆಯಲ್ಲಿ ಅದನ್ನು ಜಾರಿಗೆ ತರುವವರಿಗೆ ಇಚ್ಛಾಶಕ್ತಿ ಮತ್ತು ಕಮಿಟ್‍ಮೆಂಟ್ ಇಲ್ಲದಿದ್ದರೆ ಅದು ಹಾಳಾಗುವುದೇ.

ಪ್ರಶ್ನೆಗಳು ಎಂಥವು, ಯಾವುದಕ್ಕೆ ಎಷ್ಟು ಅಂಕ?
ಇಂದು ನಾವು ನಡೆಸುತ್ತಿರುವ ಪರೀಕ್ಷೆಗಳಲ್ಲಿ ಕೇಳುತ್ತಿರುವ ಪ್ರಶ್ನೆಗಳು ಬರಿ ಮಾಹಿತಿ ಕೇಂದ್ರಿತ, ಅರ್ಥಕೇಂದ್ರಿತ, ನೆನಪು ಕೇಂದ್ರಿತ ಪ್ರಶ್ನೆಗಳೇ ಆಗಿವೆ. ಲೋಕಕೇಂದ್ರಿತ, ತರ್ಕಕೇಂದ್ರಿತ, ನೆನಪುಕೇಂದ್ರಿತ, ವಿಶ್ಲೇಷಣಾ ಸಾಮರ್ಥ್ಯ ಕೇಂದ್ರಿತ, ಸ್ವಂತ ಆಲೋಚನಾ ಕೇಂದ್ರಿತ, ನಡೆ ಕೇಂದ್ರಿತ ಅಥವಾ ನೀತಿ ಕೇಂದ್ರಿತ, ನುಡಿ ಅಥವಾ ಮಾತಿನ ಕೌಶಲ್ಯಕೇಂದ್ರಿತ, ಮಾಹಿತಿ ಆಧಾರಿತ ವೈವಿಧ್ಯಮಯ ಪ್ರಶ್ನೆಗಳು ನಮ್ಮಲ್ಲಿ ಕಡಿಮೆ. ಕೌಶಲ ಕೇಂದ್ರಿತ, ಸಾಮರ್ಥ್ಯ ಕೇಂದ್ರಿತ ಆಗಿ ನಮ್ಮ ಕಲಿಕೆ ಇಲ್ಲದಿರುವುದರಿಂದ ನಮ್ಮ ಪರೀಕ್ಷೆಗಳೂ ಈ ದಿಸೆಯಲ್ಲಿ ರೂಪಗೊಂಡಿಲ್ಲ. ಬಿಕ್ಕಟ್ಟು ನಿಭಾವಣೆ ಸಾಮರ್ಥ್ಯ ಪರಿಶೀಲಿಸುವ, ಭಾವನಾತ್ಮಕತೆ ಮತ್ತು ಬೌದ್ಧಿಕತೆಗಳ ಮಟ್ಟಗಳನ್ನು ಪರಿಶೀಲಿಸಿಕೊಳ್ಳುವ ಪ್ರಶ್ನೆಗಳೂ ನಮ್ಮಲ್ಲಿ ಕಡಿಮೆ. ವರ್ಣನಾತ್ಮಕ, ಕಲ್ಪನಾತ್ಮಕ, ಸೃಜನಶೀಲ ಪ್ರಶ್ನೆಗಳು, ಸಂಕ್ಷೇಪೀಕರಣ-ವಿಸ್ತಾರೀಕರಣ ಪ್ರಶ್ನೆಗಳು, ಪ್ರಶ್ನೆಗಳನ್ನು ರೂಪಿಸುವ ಪ್ರಶ್ನೆಗಳು ಹೀಗೆ ಹತ್ತು ಹಲವು ರೀತಿಯಲ್ಲಿ ಪ್ರಶ್ನೆಗಳನ್ನು ರೂಪಿಸುವ ಸಾಧ್ಯತೆಗಳಿವೆ. ಹಾಗೆಯೇ ನಿರಂತರ ಮೌಲ್ಯಮಾಪನ ಜಾರಿ ಆದರೆ ಆಗ ಇವನ್ನೆಲ್ಲ ಕಲಿಕೆಯಲ್ಲಿ ಚಟುವಟಿಕೆ, ಪರೀಕ್ಷೆ ಮತ್ತು ಮೌಲ್ಯಮಾಪನ ಉಪಕ್ರಮಗಳ ಮೂಲಕ ಸಿದ್ಧಿಗೆ ಅನುವು ಮಾಡಿಕೊಡಲೂ ಸಾಧ್ಯ ಆಗುತ್ತದೆ.

ಒಂದನೆ ಪಿಯುನಲ್ಲಿ ಜ್ಞಾನಾಧಾರಿತ ಪ್ರಶ್ನೆಗಳಿಗೆ 22%, ಗ್ರಹಿಕೆ ಆಧಾರಿತ ಪ್ರಶ್ನೆಗಳಿಗೆ 27%, ಅಭಿವ್ಯಕ್ತಿ ಆಧಾರಿತ ಪ್ರಶ್ನೆಗಳಿಗೆ 22%, ಪ್ರಶಂಸೆ ಆಧಾರಿತ ಪ್ರಶ್ನೆಗಳಿಗೆ 19% ಹೀಗೆ ಒಟ್ಟು 90 ಅಂಕಗಳಿಗೆ ಯಾವ ರೀತಿಯ ಪ್ರಶ್ನೆಗಳನ್ನು ಕೇಳಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ. ಎರಡನೆ ಪಿಯುನಲ್ಲಿ ಜ್ಞಾನಾಧಾರಿತ ಪ್ರಶ್ನೆಗಳಿಗೆ 35%, ಗ್ರಹಿಕೆ/ತಿಳುವಳಿಕೆ ಆಧಾರಿತ ಪ್ರಶ್ನೆಗಳಿಗೆ 25%, ಅಭಿವ್ಯಕ್ತಿ/ಅನ್ವಯ ಆಧಾರಿತ ಪ್ರಶ್ನೆಗಳಿಗೆ 30%, ಕೌಶಲ್ಯ/ಮೆಚ್ಚುಗೆ ಆಧಾರಿತ ಪ್ರಶ್ನೆಗಳಿಗೆ 10% ಹೀಗೆ ಒಟ್ಟು 100 ಅಂಕಗಳಿಗೆ ಯಾವ ರೀತಿಯ ಪ್ರಶ್ನೆಗಳನ್ನು ಕೇಳಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ. ಒಂದನೆ ಪಿಯುನಲ್ಲಿ ಕೌಶಲ್ಯ ಆಧಾರಿತ ಪ್ರಶ್ನೆಗಳ ಬಗ್ಗೆ ಪ್ರಸ್ತಾಪ ಇಲ್ಲ. ಎರಡನೆ ಪಿಯುನಲ್ಲಿ ಅತ್ಯಂತ ಕಡಿಮೆ ಪ್ರಾಶಸ್ತ್ಯ ಇರುವ ಭಾಗ ಅದು. ಆದಾಗ್ಯೂ ಪ್ರಶ್ನೆಪತ್ರಿಕೆಯನ್ನು ನೋಡಿದರೆ ಕೌಶಲ್ಯ ಎಂದರೆ ಸರಿಯಾದ ವ್ಯಾಖ್ಯಾನ ಇಲ್ಲ ಮತ್ತು ಅದನ್ನು ಅನ್ವಯಿಸುವ ಬಗ್ಗೆ ಸರಿಯಾದ ಸೂಚನೆಗಳಿಲ್ಲ. ವ್ಯಾಕರಣ ಮತ್ತು ಪದಕೋಶ ಜ್ಞಾನಕ್ಕೆ ಭಾಷಾಭ್ಯಾಸದ ಹೆಸರಿನಲ್ಲಿ 13 ಅಂಕಗಳಿಗೆ ಪ್ರಶ್ನೆ ಕೇಳಲಾಗುತ್ತಿದೆ. ಗಾದೆ ಮಾತಿನ ವಿಸ್ತರಣೆ, ಪ್ರಬಂಧ ರಚನೆ, ಪತ್ರಲೇಖನಗಳಿಗೆ 12 ಅಂಕಗಳನ್ನು ಇರಿಸಲಾಗಿದೆ. ಮೊದಲನೆ ಪಿಯುನಲ್ಲಿ ಗಾದೆ, ಪ್ರಬಂಧ, ಪತ್ರಲೇಖನಗಳಿಗೆ 90 ಅಂಕಗಳ ಪ್ರಶ್ನೆಪತ್ರಿಕೆಯಲ್ಲಿ ಅವಕಾಶ ಇಲ್ಲ. 100 ಅಂಕದ ಪತ್ರಿಕೆಯಲ್ಲಿ ಅವಕಾಶ ಇದೆ.

ಒಂದನೆ ಪಿಯುನಲ್ಲಿ ಒಟ್ಟಾರೆ ಪ್ರಶ್ನೆಪತ್ರಿಕೆಯಲ್ಲಿ 22% ಸುಲಭವಾದ ಪ್ರಶ್ನೆಗಳನ್ನೂ, 68% ಸಾಧಾರಣ ಪ್ರಶ್ನೆಗಳನ್ನೂ, 10% ಕಠಿಣ ಪ್ರಶ್ನೆಗಳನ್ನೂ ಕೇಳಬೇಕು ಎಂದು ಸೂಚನೆಗಳಿವೆ. ಎರಡನೆ ಪಿಯುನಲ್ಲಿ ಒಟ್ಟಾರೆ ಪ್ರಶ್ನೆಪತ್ರಿಕೆಯಲ್ಲಿ ಸುಲಭವಾದ ಪ್ರಶ್ನೆಗಳನ್ನೂ, ಸಾಮಾನ್ಯ ಪ್ರಶ್ನೆಗಳನ್ನೂ, ಕಠಿಣ ಪ್ರಶ್ನೆಗಳನ್ನೂ ಕೇಳಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ. ಆದರೆ ಇಲ್ಲಿ ಎಷ್ಟೆಷ್ಟು ಶೇಕಡವಾರು ಪ್ರಾತಿನಿಧ್ಯ ಇರಬೇಕು ಎಂಬ ಸೂಚನೆಗಳಿಲ್ಲ. ಅಲ್ಲದೆ ಇಲ್ಲಿ ಕೌಶಲ್ಯ, ಸಾಮರ್ಥ್ಯ, ನಡೆನುಡಿ, ನಿಲುವು ಇತ್ಯಾದಿಗಳ ಬಗೆಗೆ ಪ್ರಶ್ನೆಗಳಿಲ್ಲ. ಮೊದಲ ಮತ್ತು ಎರಡನೆ ಪಿಯುಗಳಲ್ಲಿ 12+05=17 ಅಂಕಗಳಿಗೆ ಸಂದರ್ಭ ಸೂಚಿ ಮತ್ತು ಭಾವಾರ್ಥದ ಪ್ರಶ್ನೆಗಳಿಗೆ ಕವಿಯ ಕಾಲ ಮತ್ತು ಕೃತಿಯ ವಿವರಗಳನ್ನು ಅಪೇಕ್ಷಿಸಲಾಗುತ್ತದೆ. ಇದು ಅವರ ನೆನಪಿನ ಮೇಲಿನ ಅನಗತ್ಯ ಹೊರೆ ಅಲ್ಲವೆ? ಸಂದರ್ಭ ಸೂಚಿಸಿ ಸ್ವಾರಸ್ಯ ವಿವರಿಸುವ ಮತ್ತು ಭಾವಾರ್ಥ ಬರೆಯುವ ಪ್ರಶ್ನೆಗಳಿಗೆ ಹಾಗೂ ಪ್ರಬಂಧ ರಚನೆ, ಗಾದೆ ಮಾತಿನ ವಿಸ್ತರಣೆ, ಪತ್ರಲೇಖನಗಳಿಗೆ ಪದಮಿತಿ ಸೂಚಿಸುವುದು ಒಳಿತು. ಇಲ್ಲದಿದ್ದರೆ ಇಲ್ಲಿ ಕಲಿಕಾರ್ಥಿಗಳು ಸಮಯ ವ್ಯರ್ಥ ಮಾಡುವ ಅಥವಾ ಪರೀಕ್ಷೆಯ ಕೊನೆಯಲ್ಲಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.

ಶಿಕ್ಷಕ ವಿದ್ಯಾರ್ಥಿ ಅನುಪಾತ
ಗರಿಷ್ಠ 80 ವಿದ್ಯಾರ್ಥಿಗಳು ಒಂದು ಸೆಕ್ಷನ್‍ನಲ್ಲಿ ಇರಬಹುದು ಎಂದು ಪಿಯು ಇಲಾಖಾ ನಿಯಮಗಳು ಹೇಳುತ್ತವೆ. ಅಲ್ಲಿ ಶಿಕ್ಷಕರು ವಯಕ್ತಿಕವಾಗಿ ಎಲ್ಲರಿಗು ಗಮನ ಕೊಡಲು ಸಾಧ್ಯ ಆಗುವುದಿಲ್ಲ. ಕೆಲವೊಂದು ಕಡೆ ವಿದ್ಯಾರ್ಥಿ ಶಿಕ್ಷಕ ಅನುಪಾತ ಒಟ್ಟಾರೆ ಕಾಲೇಜಿನಲ್ಲಿ 1:100ಗಿಂತ ಹೆಚ್ಚಿಗೆ ಇರುತ್ತದೆ! ಇದರ ಹಿಂದೆ ಯಾವ ವೈಜ್ಞಾನಿಕ, ವೈಚಾರಿಕ, ಸಾಮಾನ್ಯಜ್ಞಾನದ ತಳಹದಿಯೂ ಇಲ್ಲ! ಇದರಿಂದ ಯಾವ ಗುಣಮಟ್ಟವನ್ನೂ ಕಾಯ್ದುಕೊಳ್ಳಲು ಆಗುವುದಿಲ್ಲ. ಇಂಥಲ್ಲಿ ನಿರಂತರ ಮೌಲ್ಯಮಾಪನ ಕ್ರಮಗಳನ್ನು ಜಾರಿ ಆಗಿ ಇಡುವುದು ವಾಸ್ತವವಾಗಿ ಕಷ್ಟವೆ.

ಏಕರೂಪ ಮಾನ?
ಒಂದೆ ತರಗತಿಯಲ್ಲಿ ಆಮೆಯೂ ಇರಬಹುದು, ಮೊಲವೂ, ಮೀನೂ, ಹಕ್ಕಿಯೂ ಇರಬಹುದು. ಅಂದರೆ ಭಿನ್ನ ಸಾಮರ್ಥ್ಯ, ಭಿನ್ನ ಪ್ರತಿಭೆ ಇರುವವರನ್ನು ಒಂದೇ ರೀತಿ ಪರೀಕ್ಷೆಗೆ ಗುರಿ ಮಾಡುವುದು ಹೇಗೆ ಸರಿಯಿಲ್ಲವೋ ಹಾಗೇ ಒಂದೆ ಆಗಿ ಎನ್ನುವುದೂ ಕೂಡ ಸರಿಯಲ್ಲ. ಆಮೆಗೆ ಹಾರಲು ಆಗದೆ ಇರಬಹುದು, ಹಕ್ಕಿಗೆ ನೆಲದಲ್ಲಿ ಮೊಲದ ಜೊತೆ ಓಡಲು ಆಗದೆ ಇರಬಹುದು. ಹಾಗೆಂದ ಮಾತ್ರಕ್ಕೆ ಆಮೆಗೆ ಹಾರುವ ಪರೀಕ್ಷೆ ಇಟ್ಟು, ಹಕ್ಕಿಗೆ ಓಡುವ ಪರೀಕ್ಷೆ ಇಟ್ಟು ಆಮೆಯನ್ನಾಗಲೀ ಹಕ್ಕಿಯನ್ನಾಗಲೀ ನಾವಿಟ್ಟ ಪರೀಕ್ಷೆಯಲ್ಲಿ ನೀನು ಫೇಲ್ ಎಂದರೆ ಹೇಗೆ? ನಾವು ಹೇಳುವ ಹಾಗೆಯೆ ನೀವು ಆಗಿ ಎಂದರೆ ಹೇಗೆ? ನಿಯೋಜಿತ ಕಾರ್ಯ, ಪ್ರಾಜೆಕ್ಟ್ ವರ್ಕ್, ಆಂತರಿಕ ಮೌಲ್ಯಮಾಪನ, ಸೆಮಿನಾರ್, ಸಿಂಪೋಸಿಯಮ್, ಗುಂಪು ಕಲಿಕಾ ತರಗತಿಗಳ ಆಯೋಜನೆ ಇತ್ಯಾದಿ ಕ್ರಮಗಳನ್ನು ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕ. ಅಂತಿಮವಾಗಿ ವ್ಯಕ್ತಿಶಕ್ತಿ, ಪ್ರಜ್ಞೆ, ಪ್ರವೃತ್ತಿ, ಪ್ರತಿಭೆಗಳು ಭಿನ್ನ ಭಿನ್ನ ಆಗಿರುವಾಗ ಒಂದೇ ರೀತಿಯ ಸಾಮೂಹಿಕ ಪರೀಕ್ಷೆ ಖಂಡಿತಾ ಒಳ್ಳೆಯದಲ್ಲ.

ಕೆಫೆ ಪದ್ಧತಿ, ಆಯ್ಕೆಯ ಅವಕಾಶ
ಹೋಟೆಲಿಗೆ ಹೋದರೆ ಅನ್ನವನ್ನು ಪಾಯಸದ ಜೊತೆ, ಇಡ್ಲಿಯನ್ನು ಕೇಸರಿಬಾತಿನ ಜೊತೆ ತಿನ್ನುವ ಅವಕಾಶ ಇರುವುದಿಲ್ಲವೆ? ಹಾಗೆ ಕಾಲೇಜಿನಲ್ಲು ಆಯ್ದ ಕಲಿಕೆಗೆ ಅವಕಾಶ ಇರಬೇಕು. ಐಚ್ಛಿಕ ಕನ್ನಡ, ಸಂಗೀತ, ಪತ್ರಿಕೋದ್ಯಮ, ಭೌತಶಾಸ್ತ್ರಗಳ ಕಾಂಬಿನೇಶನ್ ಅಥವಾ ಐಚ್ಛಿಕ ಕನ್ನಡ, ಸಂವಹನ ಇಂಗ್ಲಿಶ್, ಪತ್ರಿಕೋದ್ಯಮ, ರಸಾಯನಶಾಸ್ತ್ರ ಇಂತಹ ವಿಷಯಕೂಟ ಓದಲು ಯಾರಾದರು ಇಚ್ಛೆಪಟ್ಟಲ್ಲಿ ನಮ್ಮಲ್ಲಿ ಆ ವಿಷಯಕೂಟಗಳು ಪಿಯುನಲ್ಲಿ ದೊರೆಯವುದಿಲ್ಲ. ಭಿನ್ನ ಆಯ್ಕೆ ಉಳ್ಳ ‘ಕೆಫೆಟೇರಿಯ’ ಸಾಧ್ಯತೆಯನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕಿದೆ. ಹಳೆಯದೆ ಆದ ಕಂಪಾರ್ಟ್‍ಮೆಂಟುಗಳನ್ನೂ ಮೀರಬೇಕಿದೆ. ಕಲೆ, ವಿಜ್ಞಾನ, ವಾಣಿಜ್ಯ, ನಿರ್ವಹಣೆ ಇತ್ಯಾದಿ ಚೀಲಗಳನ್ನೂ ಒಡೆಯಬೇಕಿದೆ. ಇದು ಜಿ.ಆರ್.ಇ. ಹೆಚ್ಚಿಸುವ ಒಂದು ಒಳ್ಳೆಯ ಮಾರ್ಗವೂ ಹೌದು. ಹೊಸ ಶಿಕ್ಷಣ ನೀತಿಯಲ್ಲಿ ಈ ಬಗ್ಗೆ ಭರವಸೆಗಳಿವೆ; ಆದರೆ ಜಾರಿಯಲ್ಲಿ ಸೋರಿಹೋದರೆ!

ಪಿಯುನ ಎರಡು ವರ್ಷಗಳಲ್ಲಿ ನಾಲ್ಕು ಭಾಷೆಯ ಘಟಕಗಳನ್ನು ಯಾವಾಗ ಬೇಕಾದರೂ ವಿದ್ಯಾರ್ಥಿಗಳು ಕಲಿಯುವ ಅವಕಾಶ ನೀಡುವುದು ಒಳಿತು. ಹಾಗೆ ನೀಡಿ ಈಗಿನ ವಿಷಯಾಧಾರಿತ ಪಠ್ಯಕ್ರಮದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿ ಭಿನ್ನ ಭಿನ್ನ ಕೌಶಲಗಳನ್ನು ಮತ್ತು ಜ್ಞಾನಗಳನ್ನು ಒದಗಿಸುವ ಭಾಷಾ ಅಧ್ಯಯನ ಘಟಕಗಳನ್ನು ರೂಪಿಸುವುದು ಒಳ್ಳೆಯದು. ಉದಾಹರಣೆಗೆ 1. ಸ್ಕ್ರಿಪ್ಟ್ ರೈಟಿಂಗ್ ಘಟಕ, 2. ಭಾಷಾಂತರ ಘಟಕ, 3. ಸಂವಹನ ಕೌಶಲ: ಆಂಕರಿಂಗ್: ಭಾಷಣ ಕಲೆ ಘಟಕ, 4. ಗಣಕ ಕನ್ನಡ ಘಟಕ (ಡಿ.ಟಿ.ಪಿ), 5. ಸಾಹಿತ್ಯ ಮತ್ತು ಸಂಸ್ಕೃತಿ ಘಟಕ, 6. ಹಳಗನ್ನಡ-ಶಾಸ್ತ್ರೀಯ ಘಟಕ, 7. ಆಡಳಿತ (ನ್ಯಾಯಾಂಗ, ಆಡಳಿತಾಂಗ, ಶಾಸನಾಂಗ), ವ್ಯವಹಾರ-ವಾಣಿಜ್ಯ ಘಟಕ, 8. ರಂಗಭೂಮಿ ಸಾಹಿತ್ಯ ಘಟಕ, 9. ಸಿನಿಮಾ ಸಾಹಿತ್ಯ ಘಟಕ, 10. ವಿಜ್ಞಾನ ಸಾಹಿತ್ಯ, ತಂತ್ರಜ್ಞಾನ, ವೈದ್ಯ ಸಾಹಿತ್ಯ ಘಟಕ, 11. ವಿಮರ್ಶೆ-ಸಂಶೋಧನೆ ಘಟಕ 12. ಸಾಹಿತ್ಯ ಚರಿತ್ರೆ-ಪರಂಪರೆಗಳ ಘಟಕ ಹೀಗೆ ಹತ್ತು ಹಲವು ಘಟಕಗಳನ್ನು ಮಾಡಿ ಅವುಗಳಲ್ಲಿ ಎರಡು ವರ್ಷದಲ್ಲಿ ನಾಲ್ಕು ಘಟಕಗಳನ್ನು ಕಡ್ಡಾಯವಾಗಿ ಕಲಿಯಬೇಕಾದ ಆಯ್ಕೆ ನೀಡುವುದು ಒಳ್ಳೆಯದು. ಇದರಿಂದ ವಿದ್ಯಾರ್ಥಿಗಳಿಗೆ ನಾವು ನೀಡಿದ್ದನ್ನೆ ಓದುವ ಬಲವಂತಕ್ಕಿಂತ ತಮ್ಮ ಇಚ್ಛೆಯ ಆಯ್ಕೆಗಳನ್ನು ಮಾಡಿಕೊಳ್ಳುವ ಅವಕಾಶ ಆದೀತು. ಆ ಮೂಲಕ ಪರೀಕ್ಷೆಗಳಲ್ಲು ಸುಧಾರಣೆ ತರಲು; ಶಿಕ್ಷಕರೂ ನಿರಂತರ ಕಲಿಕಾರ್ಥಿ ಆಗಿರಲು ಸಾದ್ಯ ಆದೀತು. ಇದರಿಂದ ಪಿಯುನಲ್ಲು ಸಿಬಿಸಿಎಸ್ ಅಳವಡಿಸಲು ಸಾಧ್ಯವಾದೀತು.

ಕೊನೆಯ ಮಾತು
ಇಂದು ಜಾರಿಯಲ್ಲಿ ಇರುವ ನಮ್ಮ ಶಿಕ್ಷಣದ ಕಲ್ಪನೆ, ಪಠ್ಯ, ಅಭ್ಯಾಸಪಠ್ಯ, ಭಾಷಾಭ್ಯಾಸ ಮತ್ತು ಚಟುವಟಿಕೆಗಳು, ಅನುವಿನ ವಿಧಾನಗಳು, ವಾರ್ಷಿಕ ಪಾಠಯೋಜನೆ ಎಲ್ಲವೂ ಅಮೂಲಾಗ್ರವಾಗಿ ಬದಲಾವಣೆ ಆಗಬೇಕು. ಅದಕ್ಕೆ ನಾವೆಲ್ಲರೂ ಮೊದಲು ಸಜ್ಜಾಗಬೇಕು. ಆನಂತರ ಬೇರೆ ಕಡೆ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯ. ಮೊದಲು ಶಿಕ್ಷಕರಾದ ನಾವೇ ಬದಲಾವಣೆಯನ್ನು ಅಪೇಕ್ಷಿಸದಿದ್ದರೆ ಏನೂ ಆಗುವುದಿಲ್ಲ. ಹಾಗೊಂದು ವೇಳೆ ಆಗದಿದ್ದರೆ; ಆಗ ನಾವೆಲ್ಲರೂ ಸೇರಿ ಈಗ ಇರುವ ಕನ್ನಡ ಭಾಷೆ (ಪ್ರಥಮ ಭಾಷೆ, ದ್ವಿತೀಯ ಭಾಷೆ) ಎಂಬ ಪರಿಕಲ್ಪನೆಯನ್ನೆ ಬದಲಿಸಿ ಅದಕ್ಕೆ ಕನ್ನಡ ಸಾಹಿತ್ಯ ಮತ್ತು ವ್ಯಾಕರಣ ಎಂದು ಮರುನಾಮಕರಣ ಮಾಡುವುದು ಒಳ್ಳೆಯದು. (ಐಚ್ಛಿಕಕ್ಕೆ ಕನ್ನಡ ಸಾಹಿತ್ಯ ಮತ್ತು ಸಾಹಿತ್ಯಶಾಸ್ತ್ರ ಎಂದು ಮರುನಾಮಕರಣ ಮಾಡುವುದು ಒಳ್ಳೆಯದು) ನಾವು ಭಾಷೆಯ ತರಗತಿಗಳಲ್ಲಿ ಕಲಿಸುತ್ತಿರುವುದು ಭಾಷಾ ಕೌಶಲ ಮತ್ತು ಸಾಮರ್ಥ್ಯಗಳನ್ನು ಅಲ್ಲ ಅಂದ ಮೇಲೆ ಕನ್ನಡ ಭಾಷೆ ಎಂದೇಕೆ ಅದಕ್ಕೆ ಹೆಸರು ಇರಬೇಕು? ಅದನ್ನು ಬದಲಿಸಿಕೊಳ್ಳುವುದು ಒಳಿತು. ಇರಲಿ; ಹಾಗೆ ನೋಡಿದರೆ ಈ ಬರವಣಿಗೆಯೆ ಅಪೂರ್ಣ. ಇಲ್ಲಿನ ಎಲ್ಲ ಪ್ರಶ್ನೆಗಳಿಗು, ವಿಚಾರಗಳಿಗು ಅಂತಿಮ ಉತ್ತರ ಎಂಬುದು ಇಲ್ಲ. ವಿಚಾರಪರರು ತಮ್ಮದೇ ಅನುಭವದ ಹಿನ್ನೆಲೆಯಲ್ಲಿ ಮತ್ತು ಕ್ರಿಯಾಸಂಶೋಧನೆಯ ಹಿನ್ನೆಲೆಯಲ್ಲಿ ಇಲ್ಲಿನ ವಿಚಾರಗಳನ್ನು ಮರುರೂಪಿಸಬಹುದು. ಇದೊಂದು ನಿರಂತರವಾಗಿ ನಡೆಯುತ್ತ ಇರಬೇಕಾದ ಕ್ರಿಯೆ.

ಕೆಲವು ಸಲಹೆಗಳು:

1.ಪ್ರತಿ ಕಾಲೇಜಿನಲ್ಲು ಕಡ್ಡಾಯವಾಗಿ ವಿಷಯವಾರು ಕ್ರಿಯಾ ಸಂಶೋಧನಾ ಘಟಕಗಳನ್ನು ಸ್ಥಾಪಿಸುವುದು. ಸಂಶೋಧನಾ ಫಲಿತಗಳ ಕೋಠಿ ನಿರ್ಮಿಸುವುದು.

2.ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಸಾತತ್ಯ ಮತ್ತು ಸಮನ್ವಯ ಕಾಪಾಡಿಕೊಳ್ಳಲು ರಾಜ್ಯ ಶಿಕ್ಷಣ ಸಮನ್ವಯ ಸಮಿತಿ ಒಂದನ್ನು ರಚಿಸುವುದು.

3.ಪೂರ್ವಪ್ರಾಥಮಿಕದಿಂದ ಸ್ನಾತಕೋತ್ತರದವರೆಗೆ ಕರ್ನಾಟಕದಲ್ಲಿ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯ ಮಾಡುವುದು. ಅದಕ್ಕಾಗಿ ಇಲಾಖೆಯು ಕಡ್ಡಾಯ ಕನ್ನಡ ಕಲಿಕಾ ಕಾಯಿದೆ ರೂಪಿಸಿಸಲು ಶ್ರಮಿಸುವುದು. (ಈ ಹಿನ್ನೆಲೆಯಲ್ಲಿ ಕೋರ್ಟಿನ ಅಡೆತಡೆ ನಿವಾರಿಸಲು ಸಂಸತ್ತಿನಲ್ಲಿ ಕಾಯಿದೆ ರೂಪಿಸಿಸುವುದು)

4.ಪಿಯು ಶಿಕ್ಷಣಕ್ಕೆ ವಿಶಿಷ್ಟವಾದ ಶಿಕ್ಷಣ ನೀತಿಯನ್ನು ರೂಪಿಸುವುದು.

5.ಪ್ರತಿ ಕಾಲೇಜಿನಲ್ಲು ಕಡ್ಡಾಯವಾಗಿ ಭಾಷಾ ಪ್ರಯೋಗಾಲಯ ಸ್ಥಾಪಿಸುವುದು, ಭಾಷಾ ಪ್ರಾಯೋಗಿಕ ಅವಧಿಗಳನ್ನು ಕಡ್ಡಾಯವಾಗಿ ನಿಗಧಿಪಡಿಸುವುದು. ಹಾಗೆಯೇ ಭಾಷಾ ಪ್ರಯೋಗಾಲಯಗಳಲ್ಲಿ ಧ್ವನಿಬ್ಯಾಂಕ್‍ಗಳನ್ನು ನಿರ್ಮಿಸುವುದು; ಆಕ್ಟಿವಿಟಿ ಚಾರ್ಟ್‍ಗಳನ್ನು ಸೃಷ್ಟಿಸುವುದು; ಫೀಡ್‍ಬ್ಯಾಕ್ ಕೋಠಿ, ಕೌಶಲ್ಯ ಕೋಠಿಗಳನ್ನು ನಿರ್ಮಿಸುವುದು.

6.ಪಿಯುನ ಎರಡು ವರ್ಷಗಳಲ್ಲಿ ಎರಡು ಅಥವಾ ನಾಲ್ಕು ಭಾಷೆಯ ಘಟಕಗಳನ್ನು ಯಾವಾಗ ಬೇಕಾದರೂ ವಿದ್ಯಾರ್ಥಿಗಳು ಕಲಿಯುವ ಹಾಗೆ ಈಗಿನ ವಿಷಯಾಧಾರಿತ ಪಠ್ಯಕ್ರಮದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿ ಭಿನ್ನ ಭಿನ್ನ ಕೌಶಲಗಳನ್ನು ಮತ್ತು ಜ್ಞಾನಗಳನ್ನು ಒದಗಿಸುವ ಭಾಷಾ ಅಧ್ಯಯನ ಘಟಕಗಳನ್ನು ರೂಪಿಸುವುದು ಮತ್ತು ಅವುಗಳಲ್ಲೆ ಆಯ್ಕೆಗೆ ಅವಕಾಶ ನೀಡುವುದು. ಕೆಫೆಟೇರಿಯ ಅಪ್ರೋಚ್‍ಗೆ ಅವಕಾಶ ಒದಗಿಸುವುದು.

7.ನಿರ್ದಿಷ್ಟ ಅವಧಿಯ ಮುಚ್ಚಿದ ಪುಸ್ತಕ ಪರೀಕ್ಷೆಯನ್ನು ರದ್ದು ಮಾಡುವುದು. ಆಗದಿದ್ದರೆ ಅಂಕಗಳನ್ನು ಕಡಿಮೆ ಮಾಡುವುದು; ನಿರಂತರ ಪರೀಕ್ಷಾ ಮತ್ತು ನಿರಂತರ ಮೌಲ್ಯಮಾಪನ ಕ್ರಮಗಳನ್ನು ಅಳವಡಿಸುವುದು. ಹಾಗೆಯೇ ಅಂಕಪಟ್ಟಿಗಳ ಬದಲಿಗೆ ಗ್ರೇಡುಪಟ್ಟಿಗಳನ್ನು ನೀಡುವ ವ್ಯವಸ್ಥೆಯನ್ನು ಜಾರಿಗೆ ತರುವುದು.

8.ಶಿಕ್ಷಕ ವಿದ್ಯಾರ್ಥಿ ಅನುಪಾತವನ್ನು 1:15ಕ್ಕೆ ನಿಗಧಿಸುವುದು; ಪ್ರತಿ ತರಗತಿಯ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯಾಪ್ರಮಾಣವನ್ನು 20ಕ್ಕೆ ಮಿತಿಗೊಳಿಸುವುದು; ಪ್ರತಿ 10 ವಿದ್ಯಾರ್ಥಿಗಳಿಗೆ ಒಬ್ಬರಂತೆ ಶಿಕ್ಷಕ ಮೆಂಟರ್‍ಗಳನ್ನು ನೇಮಿಸುವುದು.

9.ಸಾಮಾನ್ಯ ಮಾದರಿ ವಾರ್ಷಿಕ ಪಾಠಯೋಜನಾ ನೀಲನಕ್ಷೆ ಕಡ್ಡಾಯಗೊಳಿಸಿ ಶಿಕ್ಷಕರಿಗೆ ಅದನ್ನು ಮುರಿದು ಕಟ್ಟಿಕೊಳ್ಳಲು ಸ್ವಾತಂತ್ರ್ಯ ನೀಡುವುದು. ಹಾಗೆಯೇ ವಾರ್ಷಿಕ ಕಾರ್ಯಯೋಜನೆ ತಯಾರಿಸುವ ಮೊದಲು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಗಳ ಸರ್ವೇಕ್ಷಣೆ ಮಾಡುವುದನ್ನು ಕಡ್ಡಾಯ ಮಾಡುವುದು.

10.ಎಲ್ಲ ಕಾಲೇಜುಗಳಿಗು ತಮ್ಮ ತಮ್ಮದೆ ಜಾಲತಾಣ ನಿರ್ಮಿಸಿ, ನಿರ್ವಹಿಸುವುದನ್ನು ಕಡ್ಡಾಯ ಮಾಡುವುದು. ಇಲಾಖಾ ಜಾಲಕೊಡೆಯ ಅಡಿಯಲ್ಲಿ ಎಲ್ಲ ಕಾಲೇಜು ತಾಣಗಳನ್ನು ತರುವುದು. ಹಾಗೆಯೇ ಮಾದರಿ ಪಾಠಗಳ ಆಡಿಯೋ ವಿಡಿಯೋ ತಯಾರಿಸಿ, ಇಲಾಖಾ ಜಾಲತಾಣದಲ್ಲಿ ಒದಗಿಸುವುದು. ಡಿಜಿಟಲ್ ಕಲಿಕೆಗೂ ಅವಕಾಶ, ಸಾಧ್ಯತೆ ತೆರೆಯುವುದು.

11.ಪಠ್ಯ ರೂಪಣೆ, ಪಠ್ಯ ಬೋಧನೆ, ಪರಿಷ್ಕರಣೆಗಳ ಬಗ್ಗೆ ತರಬೇತಿ ಕಮ್ಮಟಗಳನ್ನು ಆಯೋಜಿಸುವುದು. ಕ್ರಿಯಾಸಂಶೋಧನಾ ಘಟಕದ ಸಂಶೋಧನೆಗಳನ್ನೂ ಒಳಗೊಂಡು ಪಠ್ಯಗಳನ್ನು ರೂಪಿಸುವುದು. ದೃಶ್ಯಪಠ್ಯ, ಚಿತ್ರಪಠ್ಯ, ಶ್ರವ್ಯಪಠ್ಯ, ಜಾಲತಾಣ, ಬಾರ್‍ಕೋಡುಗಳನ್ನೆಲ್ಲ ಒಳಗೊಳ್ಳುವುದು. ಪಠ್ಯಪುಸ್ತಕ ರಚನಾ-ಪರಿಷ್ಕರಣ ಸಮಿತಿಯಲ್ಲಿ ಹಿರಿಯ ವಿದ್ಯಾರ್ಥಿ ಪ್ರತಿನಿಧಿಗೆ ಅವಕಾಶ ನೀಡುವುದು. ಮಲ್ಟಿಮೀಡಿಯಾ ಸಜ್ಜಿತ ಡಿಜಿಟಲ್ ಪಠ್ಯವನ್ನು ನಿರ್ದಿಷ್ಟ ಜಾಲತಾಣದಲ್ಲಿ ಸಿಗುವಂತೆ ಒದಗಿಸುವುದು.

12.ಪಠ್ಯಸಮಿತಿಯು ಮೊದಲಿಗೆ ಕಲಿಕೆಯ ಉದ್ದೇಶ, ಕನ್ನಡ ಪಠ್ಯ-ಕಲಿಕಾ ಅನುವಿನ ವಿಧಾನ, ನಿರಂತರ ಪರೀಕ್ಷಾ ಮತ್ತು ಮೌಲ್ಯಮಾಪನ ಕ್ರಮ ಇವುಗಳ ಬಗ್ಗೆ ಸಮಗ್ರ ಚಿಂತನಾ ಕೈಪಿಡಿ ಒಂದನ್ನು ತಯಾರಿಸುವಂತೆ ನಿರ್ದೇಶಿಸುವುದು.

13.ಭಾಷಾ ಪಠ್ಯಗಳನ್ನು ಸಾಹಿತ್ಯ ಪ್ರಕಾರ, ಪ್ರಾದೇಶಿಕ ಮತ್ತು ಲೇಖಕ ಪ್ರಾತಿನಿಧ್ಯಗಳ ಯಾಜಮಾನ್ಯದಿಂದ ಬಿಡುಗಡೆ ಮಾಡುವುದು; ಕೌಶಲ್ಯ, ಸಾಮರ್ಥ್ಯ, ಪ್ರತಿಭೆ, ಪ್ರಜ್ಞೆಗಳ ವೃದ್ಧಿಯ ಉದ್ದೇಶಕ್ಕೆ ಚಟುವಟಿಕೆ ಆಧಾರಿತವಾಗಿ ಪಠ್ಯಗಳನ್ನು ರೂಪಿಸುವುದು. ಚಟುವಟಿಕೆ ಆಧಾರಿತದಲ್ಲಿ ಸಹಭಾಗಿ ಕಲಿಕೆಯನ್ನು ಉತ್ತೇಜಿಸುವುದು. ಚಟಿವಟಿಕೆ ಆಧಾರಿತ ಅಭ್ಯಾಸ ಪುಸ್ತಕವನ್ನು ಕಡ್ಡಾಯ ಮಾಡುವುದು. ಕನಿಷ್ಟ-ಗರಿಷ್ಟ ಎಷ್ಟು ಭಾಷಾಭ್ಯಾಸಗಳನ್ನು ನೀಡಬೇಕು ಎಂಬ ನಿಯಮ ರೂಪಿಸಿಕೊಳ್ಳುವುದು.

14.ವಾಣಿಜ್ಯ, ಕಲಾ ಮತ್ತು ವಿಜ್ಞಾನ ಶಾಖೆಗಳಿಗೆ ಪ್ರತ್ಯೇಕ ಭಾಷಾ ಪಠ್ಯಗಳನ್ನು (ಕಲಿಕಾ ಆಯ್ಕೆಯ ಘಟಕಗಳನ್ನು) ರೂಪಿಸುವುದು. ಐಚ್ಛಿಕ ಕನ್ನಡದಲ್ಲಿ ಸಿಲಬಸ್ಸನ್ನು ಮಾತ್ರ ಇಡುವುದು. (ಐಚ್ಛಿಕದಲ್ಲು ಮುಕ್ತ ಆಯ್ಕೆಗೆ ಘಟಕಗಳನ್ನು ಸೃಜಿಸುವುದು)

15.ಪ್ರತಿ ಕಾಲೇಜಿನಲ್ಲು ಗ್ರಂಥಾಲಯ ಸ್ಥಾಪನೆ ಕಡ್ಡಾಯ ಮಾಡುವುದು. ಪ್ರತಿ ವಿದ್ಯಾರ್ಥಿಗಳಿಗು ಕಂಪ್ಯೂಟರ್ ಕಲಿಕೆ ಕಡ್ಡಾಯ ಮಾಡುವುದು, ಅದಕ್ಕಾಗಿ ಲ್ಯಾಪ್‍ಟಾಪನ್ನು ಉಚಿತವಾಗಿ ವಿತರಿಸುವುದು.

ಪ್ರಾಥಮಿಕ ಆಕರಗಳು: ಪಿಯುಸಿ ಭಾಷಾ ಮತ್ತು ಐಚ್ಛಿಕ ಪಠ್ಯಗಳು ಹಾಗೂ ಅಭ್ಯಾಸ ಪುಸ್ತಕಗಳು: ಸಾಹಿತ್ಯ ಸಂಚಲನ, ಸಾಹಿತ್ಯ ಸಂಪದ, ಪ್ರಯೋಗ ಪ್ರಣತಿ, ಪಲ್ಲವ, ಸಾಹಿತ್ಯ ಸ್ಪಂದನ, ಪಿಯು ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಬೆಂಗಳೂರು.

ಈ ಅಂಕಣದ ಹಿಂದಿನ ಬರೆಹಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...