ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ

Date: 16-11-2022

Location: ಬೆಂಗಳೂರು


ಇಲ್ಲಿ ಇನ್ನೊಂದು ಇಂತದೆ ಮಹತ್ವದ ವಿಚಾರವನ್ನು ಮಾತಾಡೋಣ. ಅದೆಂದರೆ, ಕನ್ನಡದಲ್ಲಿ ಸಾಮಾನ್ಯವಾಗಿ ಒಂಟಿ ಅಕ್ಶರದ ಕೆಲವೆ ಕೆಲವು ಪದಗಳಾಗಿರುವ ಆ, ಈ, ಕೋ, ತಾ, ಬಾ, ಹೂ ಇಂತ ಕೆಲವೆ ಪದಗಳಲ್ಲಿ ಪದಕೊನೆಗೆ ಉದ್ದಸ್ವರ ಕಂಡುಬರುತ್ತದೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ’ ಬಗ್ಗೆ ಬರೆದಿದ್ದಾರೆ.

ಕನ್ನಡದಾಗ ಸ್ವರಗಳಲ್ಲಿ ಉಚ್ಚರಣೆಯ ಕಾಲ ಮಹತ್ವದ ಪಾತ್ರವನ್ನು ಹೊಂದಿದೆ. ದ್ವನಿ ಉಚ್ಚರಣೆಯ ಕಾಲವು ಕನ್ನಡದಲ್ಲಿ ದ್ವನಿಮಾಗಳನ್ನು ನಿರ‍್ದರಿಸುವ ಅಂಶಗಳಲ್ಲಿ ಒಂದು. ದ್ವನಿ/ದ್ವನಿಮಾಗಳ ಜೋಡಣೆಯೆ ಪದವಾಗಿರುವುದರಿಂದ ಅದು ಪದರಚನೆಯಲ್ಲಿ ತನ್ನದೆ ಆದ ಪಾತ್ರವನ್ನು ಹೊಂದಿರುತ್ತದೆ. ಕನ್ನಡದ ಪದಗಳು ಇಂದು ಸಾಮಾನ್ಯವಾಗಿ ಸ್ವರದಿಂದ ಕೊನೆಯಾಗುತ್ತವೆ ಎಂಬ ತಿಳುವಳಿಕೆಯನ್ನು ಹೆಚ್ಚಿನ ವ್ಯಾಕರಣಗಳು ಹೇಳುತ್ತವೆ. ಕೆಲವು ಒಳನುಡಿಗಳಲ್ಲಿ ಪದಗಳು ವ್ಯಂಜನಕೊನೆ ಆಗಿವೆ ಎಂಬ ಅನುಮಾನ ಬರುವಂತಿರುವುದೂ ನಿಜ. ಈ ವಿಚಾರ ಇಲ್ಲಿ ಬೇಡ. ಹಳೆಗನ್ನಡದಲ್ಲಿ ಹೆಚ್ಚಾಗಿ ಪದಗಳ ಕೊನೆಯಲ್ಲಿ ವ್ಯಂಜನಗಳು ಇದ್ದವು. ನಿಲ್, ನೀರ್, ಸಲ್, ಸಾರ್ ಮೊ. ಇವು ನಡುಗನ್ನಡದ ಕಾಲದಲ್ಲಿ ಸ್ವರಕೊನೆಗಳಾಗಿ ಬೆಳೆದಿವೆ. ಇಲ್ಲಿ ಪದರಚನೆಗೆ ಸಂಬಂದಿಸಿದ ಒಂದು ಕುತೂಹಲದ ವಿಚಾರವಿದೆ. ಅದನ್ನಿಲ್ಲಿ ಗಮನಿಸೋಣ.

ಈ ವ್ಯಂಜನಕೊನೆ ಪದಗಳು ಸ್ವರಕೊನೆಗಳಾಗಿ ಬೆಳೆಯುವಾಗ ಸಾಮಾನ್ಯವಾಗಿ ಎಲ್ಲ ಪದಗಳ ಮೇಲೆ ಕೊನೆಯಲ್ಲಿ ಒಂದು ಸ್ವರ ಆದೇಶವಾಗಿ ಬಂದು ಸೇರುತ್ತದೆ. ವ್ಯಂಜನಕೊನೆಗಳು ಸ್ವರಕೊನೆಯಾಗುವ ಬಹುತೇಕ ಪ್ರಕ್ರಿಯೆಯಲ್ಲಿ ‘ಉ’ ಎಂಬ ಸ್ವರ ಮಾತ್ರ ಬಂದು ಸೇರುತ್ತದೆ. ನಿಲ್>ನಿಲ್ಲು, ನೀರ್>ನೀರು, ಸಲ್>ಸಲ್ಲು, ಸಾಲ್>ಸಾಲು ಎಂದು.

ಇಲ್ಲಿ, ಈ ಮೇಲೆ ನೋಡಿದ ಉದಾಹರಣೆಯಲ್ಲಿ ಒಂದು ಅಂಶ ಸ್ಪಶ್ಟವಾಗಿ ಕಾಣಿಸುತ್ತದೆ. ಅದೇನೆಂದರೆ, ಪದಗಳ ಮೊದಲಲ್ಲಿ ಗಿಡ್ಡಸ್ವರ ಇರುವ ನಿಲ್ ಮತ್ತು ಸಲ್ ಇವು ಮೇಲೆ ಸ್ವರವನ್ನು ಪಡೆದುಕೊಂಡಾಗ ಒತ್ತಕ್ಕರವಾಗಿ ಬೆಳೆಯುತ್ತವೆ. ಸಾಮಾನ್ಯ ಇದು, ಸಜಾತಿ ಒತ್ತಕ್ಕರವಾಗಿರುತ್ತದೆ. ಇದಕ್ಕೆದುರಾಗಿ ನೀರ್ ಮತ್ತು ಸಾರ್ ಇವು ಪದದ ಮೊದಲಲ್ಲಿ ಉದ್ದಕ್ಕರವನ್ನು ಹೊಂದಿವೆ. ಕೊನೆಯಲ್ಲಿ ಸ್ವರವನ್ನು ಪಡೆದಾಗ ಇವು ಈ ಮೇಲಿನ ಪದಗಳಂತೆ ಒತ್ತಕ್ಕರವನ್ನು ಪಡೆದುಕೊಳ್ಳುವುದಿಲ್ಲ. ಇದರಿಂದ ಕನ್ನಡ ಪದರಚನೆಯ ಒಂದು ಸಾಮಾನ್ಯ ನಿಯಮ ತಿಳಿಯುತ್ತದೆ. ಅದೆಂದರೆ, ಪದಮೊದಲಲ್ಲಿ ಉದ್ದಕ್ಕರ ಇದ್ದರೆ ಪದದ ಎರಡನೆಯ ಅಕ್ಶರದಲ್ಲಿ ಒತ್ತಕ್ಕರ ಬರುವುದಿಲ್ಲ. ಈ ಪದಗಳನ್ನು ಗಮನಿಸಿ,

ಆಳು, ಈಳು, ಊಳು, ಏಳು, ಓಳು
ಕಾಳು, ಕೀಳು, ಕೂಳು, ಕೇಳು, ಕೋಳು

ಇಲ್ಲಿ ಪದದ ಮೊದಲಲ್ಲಿ ಉದ್ದಕ್ಕರ ಇರುವುರಿಂದ ಪದದಲ್ಲಿ ಒತ್ತಕ್ಕರ ಬಂದಿಲ್ಲ, ಬರುವುದಿಲ್ಲ. ಕನ್ನಡದ ಯಾವುದೆ ಪದದಲ್ಲಿ ಇಂತ ರಚನೆ ಇರುವಲ್ಲಿ ಒತ್ತಕ್ಕರ ಬರುವುದಿಲ್ಲ.

ಪದಮೊದಲಲ್ಲಿ ಗಿಡ್ಡಕ್ಕರ ಇರುವಲ್ಲಿ ಒತ್ತಕ್ಕರ ಬರಬಹುದು. ಈ ಪದಗಳನ್ನು ಗಮನಿಸಿ.

ಅತ್ತು, ಇಕ್ಕು, ಉತ್ತು, ಎತ್ತು, ಒತ್ತು
ಕತ್ತು, ಕಿತ್ತು, ಕುತ್ತು, ಕೊಬ್ಬು, ಕೆತ್ತು

ಈ ಪದಗಳಲ್ಲಿ ಪದಮೊದಲಿಗೆ ಗಿಡ್ಡಕ್ಕರ ಇದ್ದು ಒತ್ತಕ್ಕರ ಬಂದಿದೆ. ಆದರೆ, ಗಿಡ್ಡಕ್ಕರ ಇರುವಲ್ಲೆಲ್ಲ ಎರಡನೆ ಅಕ್ಕರದಲ್ಲಿ ಒತ್ತಕ್ಕರ ಬರಬೇಕು ಎಂಬ ನಿಯಮವೇನೂ ಇಲ್ಲ. ಪದಮೊದಲಲ್ಲಿ ಗಿಡ್ಡಕ್ಕರ ಇದ್ದೂ ಒತ್ತಕ್ಕರ ಬಾರದೆಯೂ ಇರಬಹುದು. ಕೆಳಗಿನ ಪದಗಳನ್ನು ಗಮನಿಸಿ.

ಅರಿ, ಇರಿ, ಉರಿ, ಎರಿ, ಒರೆ
ಕರು, ಕಿರು, ಕುರು, ಕೆರು, ಕೊಡು

ಅಂದರೆ, ಪದಮೊದಲಿಗೆ ಗಿಡ್ಡಕ್ಕರ ಇರುವಾಗ ಎರಡನೆ ಅಕ್ಕರದಲ್ಲಿ ಒತ್ತಕ್ಕರ ಬರಬಹುದು ಇಲ್ಲವೆ ಬರದಿರಬಹುದು. ಇದಕ್ಕೆ ಯಾವುದೆ ನಿಯಮ ಇಲ್ಲ. ಆದರೆ, ಪದಮೊದಲಲ್ಲಿ ಉದ್ದಕ್ಕರ ಇದ್ದರೆ, ಅದರ ಎರಡನೆ ಅಕ್ಕರದಲ್ಲಿ ಒತ್ತಕ್ಕರ ಬರುವುದಿಲ್ಲ ಎಂಬ ನಿಯಮ ಕನ್ನಡದಲ್ಲಿ ಇದೆ.

ಕುತೂಹಲವೆಂಬಂತೆ ಇಂಗ್ಲೀಶ್ ಬಾಶೆಯಿಂದ ತೆಗೆದುಕೊಂಡ ಪದಗಳಲ್ಲಿಯೂ ಈ ನಿಯಮ ಕ್ರಿಯಾಶೀಲವಾಗಿದೆ. ಇಂಗ್ಲೀಶಿನಲ್ಲಿ ಕನ್ನಡದಲ್ಲಿ ಇರುವಂತೆ ಗಿಡ್ಡಕ್ಕರ-ಉದ್ದಕ್ಕರ ಈ ವ್ಯತ್ಯಾಸ ಸ್ಪಶ್ಟವಾಗಿಲ್ಲ, ಅಂದರೆ, ಸ್ವರ ಉಚ್ಚರಣೆಯಲ್ಲಿ ಕಾಲ ಕನ್ನಡದಲ್ಲಿ ಇದ್ದಂತೆ ಇಂಗ್ಲೀಶಿನಲ್ಲಿ ದ್ವನಿಮಾತ್ಮಕ ಅಲ್ಲ. ಹಾಗಾಗಿ, ಇಂತ ಇಂಗ್ಲೀಶಿನ ಪದಗಳನ್ನು ಕನ್ನಡಕ್ಕೆ ತೆಗೆದುಕೊಳ್ಳುವಾಗ ಕೆಲವೆಡೆ ಗಿಡ್ಡಕ್ಕರವನ್ನೂ ಇನ್ನು ಕೆಲವೆಡೆ ಉದ್ದಕ್ಕರವನ್ನೂ ಗ್ರಹಿಸಿಕೊಳ್ಳಲಾಗುವುದು. ಅದರಂತೆ ಆ ಪದಗಳನ್ನು ಉಚ್ಚರಿಸಲಾಗುವುದು. ಇಂಗ್ಲೀಶಿನಲ್ಲಿ ಈ ವ್ಯತ್ಯಾಸ ಇರುವಲ್ಲಿ ಕನ್ನಡಕ್ಕೆ ಅವು ಬರುವಾಗ ಕನ್ನಡದ ಪದಗಳಲ್ಲಿನ ಪದರಚನೆಯ ನಿಯಮ ಕಾಣಿಸುತ್ತದೆ. ಈ ಕೆಳಗಿನ ಪದಗಳನ್ನು ಗಮನಿಸಿ.

ಕಾರು, ಕೋಡು, ಬಾರು, ಬೀರು, ಸೀಡು

ಈ ಪದಗಳಲ್ಲಿ ಪದಮೊದಲಿಗೆ ಉದ್ದಕ್ಕರ ಬಂದಿರುವುದರಿಂದ ಪದದ ಎರಡನೆ ಅಕ್ಕರದಲ್ಲಿ ಒತ್ತಕ್ಕರ ಬಂದಿಲ್ಲ. ಇದಕ್ಕೆದುರಾಗಿ ಪದದ ಮೊದಲಲ್ಲಿ ಗಿಡ್ಡಕ್ಕರ ಬಂದಿರುವ ಪದಗಳನ್ನು ಗಮನಿಸೋಣ.

ಕಿಸ್ಸು, ಬಸ್ಸು, ಮೆಸ್ಸು

ಇಲ್ಲಿ ಪದಮೊದಲಿಗೆ ಗಿಡ್ಡಕ್ಕರ ಬಂದಿರುವುದರಿಂದ ಪದದಲ್ಲಿ ಒತ್ತಕ್ಕರ ಬಂದಿದೆ. ಇಲ್ಲಿ ಒಂದು ಮುಕ್ಯವಾದ ಅಂಶವನ್ನು ಗಮನಿಸಬೇಕು. ಈ ಮೇಲೆ ನೋಡಿದಂತೆ ಕಲ್ ಎಂಬ ಪದಮೊದಲಲ್ಲಿ ಗಿಡ್ಡಕ್ಕರ ಇರುವ ಮತ್ತು ಕಾಲ್ ಎಂಬ ಉದ್ದಕ್ಕರ ಇರುವ ಪದಗಳು ಹಳಗನ್ನಡದಲ್ಲಿ ವ್ಯಂಜನಕೊನೆ ಪದಗಳಾಗಿದ್ದು ಆನಂತರ ಸ್ವರಕೊನೆಗಳಾಗಿ ಬೆಳೆಯುವಾಗ ಮೊದಲನೆಯದು ಒತ್ತಕ್ಕರವನ್ನು ಪಡೆದುಕೊಂಡರೆ, ಎರಡನೆಯದು ಒತ್ತಕ್ಕರ ಪಡೆದುಕೊಳ್ಳುವುದಿಲ್ಲ. ಇದರಂತೆಯೆ ಇಂಗ್ಲೀಶಿನಲ್ಲಿ ಬಸ್ ಪದದ ಮೊದಲಲ್ಲಿ ಗಿಡ್ಡಕ್ಕರ ಇದೆ ಮತ್ತು ಕಾರ್ ಪದದಲ್ಲಿ ಪದಮೊದಲಿಗೆ ಉದ್ದಕ್ಕರ ಇದೆ. ಇವು, ಕನ್ನಡಕ್ಕೆ ಬರುವಾಗ ಪದಕೊನೆಯಲ್ಲಿ ಸ್ವರವನ್ನು ಪಡೆದುಕೊಳ್ಳುತ್ತವೆ. ಈ ಪ್ರಕ್ರಿಯೆಯಲ್ಲಿ ಹಳಗನ್ನಡದ ಪದಗಳು ಯಾವ ನಿಯಮವನ್ನು ಅನುಸರಿಸುತ್ತವೆಯೊ ಅದೆ ನಿಯಮವನ್ನು ಇಂಗ್ಲೀಶಿನಿಂದ ತೆಗೆದುಕೊಂಡ ಪದಗಳೂ ಅನುಸರಿಸುತ್ತವೆ.

ಆದರೆ, ಕೆಲವೊಮ್ಮೆ ಪದಮೊದಲಲ್ಲಿ ಉದ್ದಕ್ಕರ ಇದ್ದೂ ಪದದ ಎರಡನೆ ಅಕ್ಶರದಲ್ಲಿ ಒತ್ತಕ್ಕರ ಬರುವ ಸಾದ್ಯತೆ ಇರುತ್ತದೆ. ಇಂತ ಕೆಲವು ಪದಗಳಲ್ಲಿ ಈ ನಿಯಮ ಅನುಸರಣೆ ಆಗುತ್ತಿಲ್ಲ. ಇದನ್ನು ಇನ್ನಶ್ಟು ಸೂಕ್ಶ್ಮವಾಗಿ ಗಮನಿಸಬೇಕು.

ಆಸ್ಕು, ಈಸ್ಟು
ಕಾಸ್ಟು, ಕೋರ‍್ಟು, ಸಾಲ್ಟು
ಇನ್ನು ಎರಡಕ್ಕಿಂತ ಹೆಚ್ಚು ಅಂದರೆ ಮೂರು ಇಲ್ಲವೆ ನಾಲ್ಕು ಅಕ್ಶರಗಳು ಇರುವ ಪದಗಳಾದರೆ ಹೇಗೆ? ಇಂತದೆ ರಚನೆ ಅಲ್ಲಿಯೂ ಕಂಡುಬರುತ್ತದೆ. ಈ ಮೂರಕ್ಕರದ ಪದಗಳನ್ನು ಗಮನಿಸಿ,

ಕಟ್ಟಿಗೆ, ಕಿತ್ತಲಿ, ಕೆತ್ತನೆ, ಕೊಟ್ಟಿಗೆ
ಕಾಲುವೆ, ಕೀಟಕ, ಕೂರಿಗೆ, ಕೇಡುಗ, ಕೋಡಗ

ಇಲ್ಲೆಲ್ಲ ಮೇಲಿನ ನಿಯಮದಂತೆ ಪದಗಳ ರಚನೆ ಕಂಡುಬರುತ್ತದೆ. ಅಂದರೆ, ಪದಮೊದಲಲ್ಲಿ ಉದ್ದಕ್ಕರ ಇರುವಲ್ಲಿ ಎರಡನೆ ಅಕ್ಕರದಲ್ಲಿ ಒತ್ತಕ್ಕರ ಬಂದಿಲ್ಲ. ಗಿಡ್ಡಕ್ಕರ ಇದ್ದಾಗ ಎರಡನೆ ಪದದಲ್ಲಿ ಒತ್ತಕ್ಕರ ಬರಬಹುದು,

ಕಟ್ಟಿಗೆ, ಕಿತ್ತಲೆ, ಕುತ್ತಿಗೆ, ಕೆತ್ತನೆ, ಕೊತ್ತಳ,
ಆದರೆ, ಬರಬೇಕು ಎಂಬ ನಿಯಮವಿಲ್ಲ ಎಂಬುದನ್ನು ಕೂಡ ಈ ಕೆಳಗಿನ ಪದಗಳಲ್ಲಿ ಅವಲೋಕಿಸಬಹುದು.

ಕಡಲು, ಕಿಡಕಿ, ಕುಡಕಿ, ಕೆಡುಕು, ಕೊಡಲಿ
ಹೀಗೆ, ಕನ್ನಡದ ಪದಗಳ ಮೊದಲ ಅಕ್ಕರದಲ್ಲಿ ಇರುವ ಸ್ವರ ಕನ್ನಡ ಪದರಚನೆಯ ಒಂದು ಮಹತ್ವದ ಅಂಶ.

ಈ ಗಿಡ್ಡಸ್ವರ ಮತ್ತು ಉದ್ದಸ್ವರಗಳು ಪದರಚನೆಯಲ್ಲಿ ಇನ್ನೂ ಹಲವು ಬಗೆಯಲ್ಲಿ ಪಾತ್ರವಹಿಸುತ್ತವೆ.

ಇಲ್ಲಿ ಇನ್ನೊಂದು ಇಂತದೆ ಮಹತ್ವದ ವಿಚಾರವನ್ನು ಮಾತಾಡೋಣ. ಅದೆಂದರೆ, ಕನ್ನಡದಲ್ಲಿ ಸಾಮಾನ್ಯವಾಗಿ ಒಂಟಿ ಅಕ್ಶರದ ಕೆಲವೆ ಕೆಲವು ಪದಗಳಾಗಿರುವ ಆ, ಈ, ಕೋ, ತಾ, ಬಾ, ಹೂ ಇಂತ ಕೆಲವೆ ಪದಗಳಲ್ಲಿ ಪದಕೊನೆಗೆ ಉದ್ದಸ್ವರ ಕಂಡುಬರುತ್ತದೆ. ಉಳಿದಂತೆ ಸಾಮಾನ್ಯವಾಗಿ ಉದ್ದಸ್ವರ ಕನ್ನಡದಲ್ಲಿ ಪದಕೊನೆಗೆ ಬರುವುದೆ ಇಲ್ಲ, ಬರಿಯ ಗಿಡ್ಡಕ್ಕರ ಮಾತ್ರ ಬರುತ್ತದೆ. ಗಮನಿಸಿ,

ಅರು, ಆರು, ಇರು, ಈರು, ಉರು, ಊರು, ಎರು, ಏರು, ಒರು, ಓರು
ಕರು, ಕಾರು, ಕಿರು, ಕೀರು, ಕುರು, ಕೂರು, ಕೆರು, ಕೇರು, ಕೊಡು, ಕೋರು
ಇಂತದೆ, ಉದ್ದಕ್ಕರಕ್ಕೆ ಸಂಬಂದಿಸಿದ ಇನ್ನೊಂದು ಮುಕ್ಯವಾದ ವಿಚಾರವಿದೆ. ಅದೆಂದರೆ, ಮೂರಕ್ಕರದ ಪದಗಳಲ್ಲಿ ಪದನಡುವೆ ಉದ್ದಕ್ಕರ ಸಾಮಾನ್ಯವಾಗಿ ಕನ್ನಡದ ಪದಗಳಲ್ಲಿ ಕಾಣಿಸುವುದಿಲ್ಲ. ಗಮನಿಸಿ,

ಅದುರು, ಇದಿರು, ಉದುರು, ಎದುರು, ಒದರು
ಕಡಲು, ಕಿವುಡು, ಕುದುರು, ಕೆದರು, ಕೊಡವು
ಹೀಗೆ, ಮೂರಕ್ಕರದ ಪದಗಳಲ್ಲಿ ಪದನಡುವೆ ಉದ್ದಕ್ಕರ ಬಂದರೆ, ಸಾಮಾನ್ಯವಾಗಿ ಅದು ಎರಡು ಪದಗಳು ಸೇರಿರುವ ಸಮಾಸವಾಗಿರಬಹುದು,

ಕಾದಾಟ, ಕೀಟಲೆ, ಕೂಡಾಟ, ಕೇಡಾಟ, ಕೋಲಾಟ
ಇಲ್ಲವೆ ಬೇರೆ ಬಾಶೆಗಳಿಂದ ಬಂದಿರುವ ಪದವಾಗಿರಬೇಕು.
ಅಮಾನ್ಯ, ಆದಾರ, ಉದಾರ,
ಕಮಾನು, ಗಮಾರ, ಸಮಾಸ

ಹೀಗೆ, ಗಿಡ್ಡಕ್ಕರ ಮತ್ತು ಉದ್ದಕ್ಕರ ಇವು ಕನ್ನಡದ ಪದರಚನೆಯನ್ನು ಗುರುತಿಸುವುದಕ್ಕೆ ಮತ್ತು ಕನ್ನಡದ ಪದಗಳನ್ನು ಗುರುತಿಸುವುದಕ್ಕೂ ಸಹಾಯ ಮಾಡುತ್ತವೆ. ಇದಕ್ಕೆ ಅಪವಾದವಾಗಿ ಪದಗಳು ಇಲ್ಲವೆ ಇಲ್ಲವೆನ್ನುವಶ್ಟು ಮಟ್ಟಿಗೆ ಈ ನಿಯಮ ಕನ್ನಡದಲ್ಲಿ ಕೆಲಸ ಮಾಡುತ್ತದೆ.

-ಬಸವರಾಜ ಕೋಡಗುಂಟಿ

 

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...