“ಇಲ್ಲಿ ಲೇಖಕಿಯು ವೇಶ್ಯೆಯ ಮಗಳು ಸಮಾಜದಲ್ಲಿ ಎದುರಿಸುವ ಸವಾಲು ಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಹಾಗೂ ಆಕೆಯ ಮಾನಸಿಕ ತೊಳಲಾಟವನ್ನು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ,” ಎನ್ನುತ್ತಾರೆ ಚೇತನ ಭಾರ್ಗವ. ಅವರು ದಿವ್ಯ ಶ್ರೀಧರ್ ರಾವ್ ಅವರ "ಮೌನ ಧ್ವನಿಸಿತು" ಕೃತಿ ಕುರಿತು ಬರೆದ ವಿಮರ್ಶೆ.
ಮೌನ ಧ್ವನಿಸಿತು ಕಾದಂಬರಿಯು ಹೆಣ್ಣಿನ ಮಾನಸಿಕ ತುಮುಲ ಒದ್ದಾಟ, ತಾಯಿಯೊಬ್ಬಳು ಮಾಡಿದ ತಪ್ಪು ಕೆಲಸದಿಂದಾಗಿ ಮಗಳ ಜೀವನದಲ್ಲಿ ಉಂಟಾಗುವ ಭೀಕರ ಪರಿಣಾಮ ಹಾಗೂ ಎಲ್ಲಾ ಕಷ್ಟಗಳನ್ನು ಎದುರಿಸುತ್ತಾ, ದಾರಿ ತಪ್ಪದೇ ಒಳ್ಳೆಯ ಮಾರ್ಗದಿಂದಲೇ ತನ್ನ ಬದುಕನ್ನು ಕಟ್ಟಿಕೊಂಡ ಹೆಣ್ಣು ಮಗಳ ಜೀವನಗಾಥೆ. ಇಲ್ಲಿ ಲೇಖಕಿಯು ವೇಶ್ಯೆಯ ಮಗಳು ಸಮಾಜದಲ್ಲಿ ಎದುರಿಸುವ ಸವಾಲು ಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಹಾಗೂ ಆಕೆಯ ಮಾನಸಿಕ ತೊಳಲಾಟವನ್ನು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾದಂಬರಿಯ ಕಥಾನಾಯಕಿ ಸೌಮ್ಯ. ಅವಳ ಬದುಕಿನ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಸೌಮ್ಯಳಿಗೆ ತನ್ನ ತಂದೆ ಯಾರು ಎಂದು ತಿಳಿದಿರುವುದಿಲ್ಲ. ತಂದೆ ಯಾರೆಂದು ತಿಳಿದುಕೊಳ್ಳುವ ತವಕದಲ್ಲಿದ್ದರೂ, ಊರ ಜನರೆಲ್ಲರೂ ದೂರದ ಊರಿನಲ್ಲಿ ನಮಗಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿರುವ ಅಮ್ಮನ ಬಗ್ಗೆ ಏಕೆ ತಿರಸ್ಕಾರ, ತುಚ್ಚವಾಗಿ ಮಾತನಾಡುತ್ತಾರೆ ಎಂಬ ಗೊಂದಲದಲ್ಲಿ ಇರುತ್ತಾಳೆ. ಅಜ್ಜಿಯ ಪ್ರೀತಿ ಅಕ್ಕರೆಯ ಸವಿಯನ್ನು ಕಂಡರೂ ಅಮ್ಮನ ಸಾಮೀಪ್ಯ ಇಲ್ಲದ ಕೊರಗು ಅವಳನ್ನು ಕಾಡುತ್ತಿರುತ್ತದೆ. ಅಜ್ಜಿ ಎಷ್ಟೇ ಪ್ರೀತಿಯಿಂದ ನೋಡಿಕೊಂಡರು ಅಜ್ಜಿ ಅಜ್ಜಿಯೇ ಅಮ್ಮನೇ ಎನ್ನುವ ಭಾವ ಅವಳದಾಗಿತ್ತು.
ಕೈ ತುಂಬಾ ಹಣ ಸಂಪಾದಿಸಿ ಬಣ್ಣ ಬಣ್ಣದ ಉಡುಪನ್ನು ಕಳಿಸುವ ಅಮ್ಮ, ಮಾಡುತ್ತಿರುವ ಕೆಲಸವಾದರೂ ಏನು? ಎಂಬ ಕುತೂಹಲ ಸೌಮ್ಯಳಿಗಿತ್ತು. ಆದರೆ ಅವಳಿಗೆ ಅಮ್ಮ ಮಾಡುವ ಕೆಲಸದ ಬಗ್ಗೆ ಯಾರಿಂದಲೂ ಸರಿಯಾದ ಉತ್ತರ ಸಿಗುತ್ತಿರಲಿಲ್ಲ. ಸೌಮ್ಯಳಿಗೆ ತನ್ನ ತಾಯಿಯ ಪ್ರೀತಿಯಿಂದ ವಂಚಿತಳಾಗಿದ್ದರ ಬಗ್ಗೆ ಅಪಾರವಾದ ನೋವಿತ್ತು. ಗಂಡನಿದ್ದೂ, ಮಕ್ಕಳಿದ್ದೂ, ಅವರಿಂದೆಲ್ಲಾ ದೂರವಾಗಿ ಎಲ್ಲರಿಂದ ಹುಚ್ಚಿ ಎಂದು ಕರೆಸಿಕೊಳ್ಳುತ್ತಾ, ರಾತ್ರಿ ಹೊತ್ತು ಶಾಲೆಯ ಜಗುಲಿಯಲ್ಲಿ ಮಲಗಿ, ಸಮಯ ಸಿಕ್ಕಾಗೆಲ್ಲ ಸೌಮ್ಯಳ ಒಡನೆ ಆಡುತ್ತಿದ್ದ, ಅವಳ ನೋವು ನಲುವಿಗೆ ಸ್ಪಂದಿಸುತ್ತಿದ್ದ, ಗುಬ್ಬಿಯಲ್ಲಿಯೇ ತನ್ನ ತಾಯಿಯ ಪ್ರೀತಿಯನ್ನು ಕಾಣುತ್ತಿದ್ದಳು. ಆದರೆ ಅವಳಿಗೆ ತಾಯಿಯ ನೆನಪು ತುಂಬಾ ಕಾಡುತ್ತಿತ್ತು. ತನ್ನ ಅಜ್ಜಿ ರುಕ್ಮಿಣಿಯ ಬಳಿ ದಿನಂಪ್ರತಿ "ಅಮ್ಮ ಎಂದು ಬರುವಳೆಂದು" ಕೇಳುತ್ತಲೇ ಇರುತ್ತಿದ್ದಳು.
ಮದುವೆಯಾಗದೆ ಮಗುವನ್ನು ಪಡೆದು ಊರಲ್ಲಿ ಇರಲಾರದೆ ದೂರದ ಮುಂಬೈಗೆ ಹೋಗಿ ವೇಶ್ಯಾವಾಟಿಕೆ ಯನ್ನೇ ತನ್ನ ಕಸುಬಾಗಿ ಮಾಡಿಕೊಂಡ ಅವಳ ತಾಯಿ ಸುಂದರಿಗೂ ತನ್ನ ಮಗಳ ನೆನಪಾಗುತ್ತಿತ್ತು. ಹರಸಹಾಸ ಪಟ್ಟು ಆಕೆಯ ಒಡತಿ ಅಪ್ಪಣೆ ಪಡೆದು ಮಗಳನ್ನು ನೋಡಲು ಊರಿಗೆ ಹೊರಟಳು.
ಅಮ್ಮ ತನ್ನನ್ನು ನೋಡಲು ಬರುತ್ತಿಲ್ಲವೆಂದು ವ್ಯಥೆ ಪಡುತ್ತಾ ಕುಳಿತ ಸೌಮ್ಯಳಿಗೆ, ಹಿಂದೆಯಿಂದ ಮೆಲ್ಲಗೆ ಬಂದು ಸುಂದರಿ ಅವಳ ಕಣ್ಣನ್ನು ಮುಚ್ಚಿದಳು. ಸೌಮ್ಯ, ಗುಬ್ಬಿಯೇ ಕಣ್ಣು ಮುಚ್ಚಿ ಇರಬೇಕೆಂದುಕೊಂಡು, ನಿನಗೆ ನನ್ನ ಅಪ್ಪನಾರೆಂದು ಗೊತ್ತೇ? ಶಾಲೆಯಲ್ಲಿ ಟೀಚರ್, ನಿನ್ನ ಅಪ್ಪನ ಹೆಸರೇನು ಎಂದು ಕೇಳಿದ್ರೆ ಉಳಿದ ಮಕ್ಕಳೆಲ್ಲ ನಗುತ್ತಿದ್ದರು. ನೀವೆಲ್ಲ ಯಾಕೆ ನಕ್ಕಿರಿ ಎಂದು ಕೇಳಿದರೆ, ನಿನ್ನ ಅಮ್ಮನಿಗೆ ಗಂಡನಿದ್ರೆ ಅಲ್ವಾ, ನಿನಗೆ ಅಪ್ಪನಿರುವುದು ಎಂದು ಹೇಳಿ ಅಪಹಾಸ್ಯ ಮಾಡುತ್ತಾರೆ ಎನ್ನುತ್ತಾ, ಕೈಯನ್ನು ಬಿಡಿಸಿ ನೋಡಿದರೆ ಅಲ್ಲಿ ಅವಳ ಅಮ್ಮನಿದ್ದಳು. ಈ ಮಾತನ್ನು ಕೇಳಿದ ಆಕೆಯ ತಾಯಿಯು ನಡುಗಿ ಹೋದಳು. ಸೌಮ್ಯಳಿಗೆ ಉತ್ತರಿಸಲಾಗದೆ ತತ್ತರಿಸಿ ಹೋದಳು. ಇಲ್ಲಿ ಲೇಖಕಿಯು ವೇಶ್ಯಾವಾಟಿಕೆ ಮಾಡಿ ಜೀವನ ನಡೆಸುವ ತಾಯಿಯ ಅಂತರಾಳ ಅವಳ ಬದುಕು, ಇದರಿಂದ ಅವಳ ಮಗಳ ಜೀವನಕ್ಕೆ ಬೀರುವ ಪರಿಣಾಮ ಗಳನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.
ಹಸಿವು ಆಸೆ ಆಕಾಂಕ್ಷೆ ಬಡತನ ಅನಿವಾರ್ಯತೆಗಳಿಂದ ಈ ಕಸುಬಿಗೆ ಇಳಿದು, ಈಗ ಅಸಹ್ಯವೆನಿಸಿದರೂ ಅದರಿಂದ ಆಚೆ ಬರಲಾಗದ ವೇಶ್ಯೆಯರ ಪರಿಸ್ಥಿತಿಯನ್ನು ಇಲ್ಲಿ ಚಿತ್ರಿಸಲಾಗಿದೆ.
ಮುಂದೆ ಸುಂದರಿ ಮುಂಬೈಗೆ ಹಳೆಯ ಕೆಲಸಕ್ಕಾಗಿ ಹಿಂದಿರುಗಿದ ಮೇಲೆ ತನ್ನ ಮಗಳು ದೊಡ್ಡವಳಾಗಿದ್ದಾಳೆ ಎಂದು ತಿಳಿದು, ಮಗಳು ಈ ದಾರಿ ಹಿಡಿಯ ಬಾರದೆಂದು ಎಚ್ಚರಿಸುವ ಬಗೆ, ನಂತರ ಇವಳೇ ಹೊಸ ಗೆಜ್ಜೆಯನ್ನು ತಂದುಕೊಟ್ಟು ನಿನಗೆ ಗೆಜ್ಜೆ ಶಾಸ್ತ್ರ ಮಾಡಿಸಬೇಕು ನನ್ನ ಜೊತೆ ಸಮಾಜ ಸೇವೆಗೆ ಮುಂಬೈಗೆ ಹೊರಡು ಎನ್ನುವ ಸನ್ನಿವೇಶವನ್ನು ಲೇಖಕಿಯು ಪ್ರಬುದ್ಧವಾಗಿ ವರ್ಣಿಸಿದ್ದಾರೆ. ಇದು ಓದುಗನ ಮನವನ್ನು ತಟ್ಟುತ್ತದೆ.
ತಾಯಿ ಮಾಡುವ ಕೆಲಸದ ಅರಿವೇ ಇಲ್ಲದೆ, ಶ್ರೇಷ್ಠವಾದ ಸಮಾಜ ಸೇವೆ ಮಾಡುತ್ತಿದ್ದಾಳೆ ಎಂದು ತಿಳಿದು ಸೌಮ್ಯಳಿಗೆ ತಾಯಿಯ ಮೇಲೆ ಮೂಡುವ ಗೌರವ ಭಾವನೆ ಯ ಚಿತ್ರಣ ಮನೋಜ್ಞವಾಗಿದೆ. ಆದರೆ ಸೌಮ್ಯ ದೊಡ್ಡವಳಾದ ಮೇಲೆ, ಊರ ಜನರ ನಡುವಳಿಕೆ, ಇವಳನ್ನು ನೋಡುತ್ತಿರುವ ದೃಷ್ಟಿ ಎಲ್ಲವೂ ಇವಳನ್ನು ಕಾಡ ತೊಡಗುತ್ತದೆ. ಅಜ್ಜಿ, ಗುಬ್ಬಿ, ಮಾವ ಯಾರಿಂದಲೂ ಉತ್ತರ ಸಿಗದಿದ್ದಾಗ, ಅಜ್ಜಿ ಕೆಲಸ ಮಾಡಲು ಹೋಗುತ್ತಿದ್ದ ಶಾಂತಮ್ಮನವರ ಬಳಿ ಉತ್ತರವನ್ನು ಪಡೆಯಲು ಸೌಮ್ಯ ಮುಂದಾಗುತ್ತಾಳೆ.
ಶಾಂತಮ್ಮನವರಿಗೆ ಸೌಮ್ಯಳ ಗುಣ ನಡತೆ ಕಂಡರೆ ಪ್ರೀತಿ. ಶಾಂತಮ್ಮನವರು ಆಕೆಯ ತಾಯಿ ಮಾಡುತ್ತಿರುವ ಕೆಲಸದ ಬಗ್ಗೆ ವಾಸ್ತವವನ್ನು ತೆರೆದಿಡುತ್ತಾರೆ. ಆಗ ತಾಯಿಯ ಬಗ್ಗೆ ಇವಳಿಗೆ ಅಸಹ್ಯ ಎನಿಸುತ್ತದೆ. ಪ್ರತಿಕ್ಷಣ ತಾಯಿಗಾಗಿ ಪರಿ ತಪ್ಪಿಸುತ್ತಿದ್ದವಳಿಗೆ ಅಮ್ಮ ಎಂದರೆ ತಿರಸ್ಕಾರ ಭಾವ ಮೂಡುತ್ತದೆ. ಅವಳು ಕೊಡಿಸಿದ ಬಟ್ಟೆ ಒಡವೆ ಎಲ್ಲಾ ವಸ್ತುಗಳನ್ನು ಸುಟ್ಟು ಹಾಕುತ್ತಾಳೆ. ಅವಳ ಮನಸ್ಸು ಜ್ವಾಲಾಮುಖಿಯಂತಾಗುತ್ತದೆ. ಅವಳ ಮನದಲ್ಲಿ ಅಮ್ಮನ ಬಗ್ಗೆ ಇರುವ ಭಾವನೆಯ ಬದಲಾವಣೆ, ಅವಳ ಮನಸ್ಸಿಗೆ ಆಗುವ ಆಘಾತವನ್ನು ಲೇಖಕಿಯು ಭಾವನಾತ್ಮಕವಾಗಿ ಚಿತ್ರಿಸಿದ್ದಾರೆ.
ಆಕೆಯನ್ನು ಅವಳ ತಾಯಿಯು ತನ್ನ ಕಸುಬಿಗೆ ಕರೆದೊಯ್ಯಲು ಯತ್ನಿಸಿ ವಿಫಲಳಾಗುತ್ತಾಳೆ. ಸೌಮ್ಯ ಕೂಲಿ ಮಾಡಿ ಪ್ರಾಮಾಣಿಕವಾಗಿ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ನಂತರದ ದಿನಗಳಲ್ಲಿ ಸುಂದರಿ ಏಡ್ಸ್ ನಿಂದ ಹಾಸಿಗೆ ಹಿಡಿಯುತ್ತಾಳೆ, ಆದರೆ ಆ ಸಮಯದಲ್ಲಿ ಸೌಮ್ಯಳು ಅವಳನ್ನು ತಿರಸ್ಕರಿಸುವುದು ಸರಿಯಲ್ಲ, ಅಮ್ಮನಿಗೆ ನಾನು ತಾಯಿ ಆಗಬೇಕೆಂದು ಅವಳ ಅಂತರಂಗ ನುಡಿಯುವ ಪರಿ ಅದ್ಭುತವಾಗಿ ಮೂಡಿ ಬಂದಿದೆ.
ಸ್ವಲ್ಪ ದಿನಗಳ ನಂತರ ಅಜ್ಜಿಯು ತೀರಿಹೋಗಿ ಸೌಮ್ಯಳು ನಿಜವಾಗಿಯೂ ಅನಾಥಳಾಗುತ್ತಾಳೆ. ತಾಯಿ ಮಾಡಿದ ತಪ್ಪಿಗೆ ಸೌಮ್ಯಳನ್ನು ಸಮಾಜ ಹೇಗೆ ಹೊಣೆ ಮಾಡುತ್ತದೆ. ಇವಳನ್ನು ಸಮಾಜವು ನೋಡುವ ದೃಷ್ಟಿಕೋನದ ಸ್ವರೂಪವು ಇಲ್ಲಿ ಮನಮುಟ್ಟುವ ಹಾಗೆ ಮೂಡಿಬಂದಿದೆ. ಅನಾಥಳಾದ ಸೌಮ್ಯಳಿಗೆ ಮೌನವೇ ಧ್ವನಿಯಾಯಿತು.
ಆಕೆಯ ಕಷ್ಟ ನೋವನ್ನು ನೋಡಿ ಶಾಂತಮ್ಮನವರು ತಮ್ಮ ಮುಂದಾಳತ್ವದಿಂದ ತಮ್ಮ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಸಂತೋಷ್ ಎಂಬ ಹುಡುಗನ ಜೊತೆ ಮದುವೆ ಮಾಡಿಸುತ್ತಾರೆ. ಕತ್ತಲಾಗಿದ್ದ ಆಕೆಯ ಬದುಕಿಗೆ ಸಂತೋಷ ನ ಆಗಮನದಿಂದ ಬೆಳಕಿನ ಸಿಂಚನ ಮೂಡಿದಂತಾಗುತ್ತದೆ. ತನ್ನ ತಾಯಿ ದುಡಿದ ಆಸ್ತಿಯೆಲ್ಲಾ ಮಾವ ಶಂಕರನಿಗೆ ಒಪ್ಪಿಸಿ, ಊರವರೆಲ್ಲರ, ನಿಂದನೆ ಕುಹಕದ ಮಾತನ್ನು ಸಹಿಸದೆ, ಸೌಮ್ಯ ದಂಪತಿಗಳು ಸಂತೋಷನ ಅಣ್ಣ ಸಮೀರ್ ಇದ್ದ ದೂರದ ಊರಿಗೆ ಹೋಗಿ ಅಲ್ಲಿಯೇ ಇಬ್ಬರು ಕೆಲಸ ಮಾಡುತ್ತಾರೆ. ಇವರ ಪ್ರೀತಿಯ ಫಲವು ಸೌಮ್ಯಳ ಒಡಲಿನಲ್ಲಿ ಚಿಗುರೊಡೆಯುತ್ತದೆ. ಈ ಸಮಯದಲ್ಲಿ ಸಂತೋಷನ ಆರೈಕೆ ಗೆಳತಿ ಸುಮಾಳ ಅಕ್ಕರೆ ಸೌಮ್ಯಳ ಬಾಳಿನಲ್ಲಿ ಸುಖದ ಭರವಸೆಯ ಅಲೆಯೂ ಬೀಸಿದರೂ ಈ ಸಂತೋಷ ಹೆಚ್ಚು ದಿನ ಉಳಿಯುವುದಿಲ್ಲ. ಮಗಳ ಹುಟ್ಟಿದ ದಿನದಂದೇ ಸೌಮ್ಯಳು ಪತಿಯನ್ನು ಕಳೆದುಕೊಳ್ಳುತ್ತಾಳೆ. ಅವಳಿಗೆ ಸುಮಾಳೊಡನೆ ಊರಿಗೆ ಹೋದ ಮೇಲೆ ಈ ವಿಷಯ ತಿಳಿಯುತ್ತದೆ. ಜೀವಕ್ಕೆ ಜೀವವಾಗಿದ್ದ ಪತಿಯನ್ನು ಕಳೆದುಕೊಂಡು ಕಣ್ಣೀರ ಕೋಡಿಯನ್ನೇ ಸೌಮ್ಯಳು ಹರಿಸುತ್ತಾಳೆ. ಅವಳ ಕಷ್ಟಕ್ಕೆ ಶಾಂತಮ್ಮ ಸುಮಾ ಗುಬ್ಬಿ ಮರಗುತ್ತಾರೆ.
ತಂದೆಯ ಮುಖ ನೋಡದ, ತಾಯಿ ಪ್ರೀತಿ ಕಾಣದ, ಅಕ್ಕರೆಯಿಂದ ಸಾಕಿದ ಅಜ್ಜಿಯನ್ನು, ಉಸಿರಿಗೆ ಉಸಿರಾಗಿದ್ದ ಪತಿಯನ್ನು ಕಳೆದುಕೊಂಡು ಅವಳ ಮೌನ ಧ್ವನಿಸಿತು. ಆದರೂ ತನ್ನ ಮಗಳಿಗಾಗಿ ಗೌರವ ರೀತಿಯಲ್ಲಿಯೇ ಮನೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿರುವ ಸೌಮ್ಯಳ ಸಹನೆ ಧೈರ್ಯ ಮನಸ್ಥಿತಿ , ಹೆಣ್ಣಿನ ಧೈರ್ಯ ಕಷ್ಟವನ್ನು ಸಹಿಸುವ ಗುಣವನ್ನು ಪ್ರತಿನಿಧಿಸುತ್ತದೆ.
ಈಕೆಯ ಕಷ್ಟವನ್ನು ನೋಡಲಾಗದ ಸುಮಾ, ಸಮೀರ್ ಹಾಗೂ ಸೌಮ್ಯರಿಗೆ ವಿವಾಹವನ್ನು ಮಾಡಿಸುತ್ತಾಳೆ. ಇಲ್ಲಿ ವಿಧವೆಯಾದ ಸೌಮ್ಯಳಿಗೆ ಮರು ಮದುವೆ ಮಾಡಿಸಿ ಲೇಖಕಿಯು ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಗುಬ್ಬಿ ಇವರಿಗೆ ಹರಸುತ್ತಾಳೆ. ಗುಬ್ಬಿಗೆ ಮೊದಲಿನಿಂದಲೂ ಕಾಲ್ಗೆಜ್ಜೆ ತೊಡಬೇಕೆಂಬ ಆಸೆ ಇರುತ್ತದೆ. ಗುಬ್ಬಿಗೆ ಕಾಲ್ಗೆಜ್ಜೆ ಕೊಡಿಸುವೆ ಎಂದು ಆಕೆಯ ಅಕ್ಕನ ಗಂಡ ಅವಳನ್ನು ಬಳಸಿಕೊಂಡು ಮೋಸ ಮಾಡಿರುತ್ತಾನೆ. ಸೌಮ್ಯ 3 ವರ್ಷದ ನಂತರ ಮರಳಿ ಸಮೀರ್ ನೊಡನೆ ಊರಿಗೆ ಬರುತ್ತಾಳೆ. ಆಗ ಗುಬ್ಬಿಯ ಆರೋಗ್ಯವು ಕ್ಷೀಣಿಸಿರುತ್ತದೆ. ಗುಬ್ಬಿಗಾಗಿ ಕಾಲ್ಗೆಜ್ಜೆಯನ್ನು ಸೌಮ್ಯಳು ತಂದಿರುತ್ತಾಳೆ.
ತಾಯಿ ಪ್ರೀತಿ ಕೊಟ್ಟ ಗುಬ್ಬಿಗೆ ಕಾಲ್ಗೆಜ್ಜೆಯನ್ನು ತೊಡಬೇಕೆನ್ನುವುದು ಜೀವನದಲ್ಲಿರುವ ಮಹದಾಸೆ ಎಂದು ಅರಿತ ಸೌಮ್ಯ, ಕಾಲ್ಗೆಜ್ಜೆಯೊಂದಿಗೆ ಗುಬ್ಬಿ ಮನೆಗೆ ಹೋಗುತ್ತಾಳೆ. ಆಗ ಗುಬ್ಬಿ, "ನಾನು ನನ್ನ ಬದುಕಿನ ಬಗ್ಗೆ ನಿನ್ನಲ್ಲಿ ಹೇಳಿ, ಸಾಯಬೇಕೆ ಎನ್ನುತ್ತಾ , ನಾನು ಶಾಲೆಯ ಜಗಲಿಯಲ್ಲಿ ಮಲಗಲು ಕಾರಣವೇ ಬೇರೆ ಇತ್ತು." ಎನ್ನುತ್ತಾ ಎಲ್ಲಾ ಸತ್ಯವನ್ನು ಹೇಳುತ್ತಾಳೆ. ಆಗ ಗುಬ್ಬಿಯ ನೋವಿಗೆ ಸೌಮ್ಯ ಮರುಗುತ್ತಾ ಸಮಾಧಾನಿಸಿ ಕಾಲ್ಗೆಜ್ಜೆಯನ್ನು ಕೊಟ್ಟು ನಾಳೆ ಜಾತ್ರೆಗೆ ಹಾಕಿಕೊಂಡು ಬಾ ಎಂದು ಹೇಳಿ ಹೊರಟು ಹೋಗುತ್ತಾಳೆ. ಮರುದಿನ ಗುಬ್ಬಿಯ ಆರೋಗ್ಯ ತೀರ ಹದಗಟ್ಟಿದೆ ಎಂದು ಸುದ್ದಿ ತಿಳಿದು ಸೌಮ್ಯಳು ಗುಬ್ಬಿಯನ್ನು ನೋಡಲು ಹೋದಾಗ, ಇವಳು ಕೊಟ್ಟ ಕಾಲ್ಗೆಜ್ಜೆಯನ್ನು ಹಾಕಿಕೊಂಡು, ಗುಬ್ಬಿ ಚಟ್ಟವೇರಿ ಮಲಗುವ ಮೂಲಕ ಈ ಕಾದಂಬರಿ ದುರಂತ ಅಂತ್ಯ ಕಾಣುತ್ತದೆ.
ತನ್ನದಲ್ಲದ ತಪ್ಪಿಗೆ ಬದುಕಲ್ಲಿ ಸೌಮ್ಯ ಅನುಭವಿಸಿದ ಅವಮಾನ ತಿರಸ್ಕಾರ ನೋವು ರೋಧನೆ ಓದುಗನ ಕಣ್ಣಂಚಲ್ಲಿ ನೀರನ್ನು ತರಿಸುತ್ತದೆ. ದಿವ್ಯ ಶ್ರೀಧರ್ ರವರ ಮೌನ ಧ್ವನಿಸಿತು ಕಾದಂಬರಿಯಲ್ಲಿ,ಅವರು ಪ್ರತಿಯೊಂದು ಪಾತ್ರವನ್ನು ಗ್ರಹಿಸಿ ಬರಹದಲ್ಲಿ ಸೆರೆಹಿಡಿದಿದ್ದಾರೆ. ಹಣಕ್ಕಾಗಿ ಅನಿವಾರ್ಯವಾಗಿ ಮೈ ಮಾಡಿಕೊಳ್ಳುವ ಪರಿಸ್ಥಿತಿ ಹೆತ್ತ ತಾಯಿಯದ್ದಾದರೆ, ವಿಚಿತ್ರ ಪರಿಸ್ಥಿತಿಗೆ ಸಿಲುಕಿ ಮೈ ಮಾರಿಕೊಳ್ಳಬೇಕಾದ ಸ್ಥಿತಿ ಪ್ರೀತಿ ಕೊಟ್ಟ ತಾಯಿ ಗುಬ್ಬಿಯದ್ದು. ಇವರಿಬ್ಬರ ಮನಸ್ಸಿನ ನೋವು ಧ್ವನಿ ಯಾಗುವ ಸಮಯಕ್ಕೆ ಕಥಾನಾಯಕಿ ಹೇಗೆ ಇದನ್ನು ಸ್ವೀಕರಿಸುತ್ತಾಳೆ ಎನ್ನುವುದೇ ಮೌನ ಧ್ವನಿಸಿತು ಕಾದಂಬರಿಯ ಕಥಾವಸ್ತು ಇದನ್ನು ಜನರಿಗೆ ಮುಟ್ಟಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ.
“ಮನುಷ್ಯ ಅಭಿನಯಿಸುವುದರ ಮೂಲಕ, ಕೃತಕವಾಗಿ ಸಂಘರ್ಷಿಸುವುದರ ಮೂಲಕ ಮಾತ್ರ ಬದುಕುವುದಿಲ್ಲ. ಅವನ ಮೌನ, ಆಳದ ನೋವು, ...
“ಈ ಪುಸ್ತಕದಲ್ಲಿ ಸಾಕಷ್ಟು ವಿಷಯಗಳನ್ನು ಕ್ರೋಢೀಕರಿಸುವ ಪ್ರಯತ್ನ ಮಾಡಲಾಗಿದೆ. ಹಾಗಂತ ಇದೇ ಅಂತಿಮ ಅಥವಾ ಪರಿಪೂರ್...
“ಕಾದಂಬರಿಯಲ್ಲಿ ಬರುವ ಕಾಡಿನ ವಿವರಣೆಗಳು, ಮೂಢನಂಬಿಕೆಗಳು, ನಾಟಿ ವೈದ್ಯಕೀಯ, ಪ್ರಾಣಿಗಳ ದಾಳಿ, ಪಿಶಾಚಿಯ ಕಲ್ಪನೆ...
©2025 Book Brahma Private Limited.