ಓ ಹೆನ್ರಿಯ “After Twenty Years” - ಪ್ರಯತ್ನಿಸಿದ್ದಲ್ಲಿ ಭೌತಿಕ ಚಹರೆ ಗುರುತಿಸಬಹುದು, ಆದರೆ ಸ್ವಭಾವ ಸ್ಥಿತಿ?

Date: 24-09-2022

Location: ಬೆಂಗಳೂರು


ವ್ಯಕ್ತಿಗಳು ಸಂದರ್ಭಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವ ಪರಿ ಅನೂಹ್ಯ. ಆದರೂ ಮನುಷ್ಯ ಸಂಬಂಧಗಳಲ್ಲಿ ಇರುವ ಭಾವ ರೂಕ್ಷತೆಯಂತೆ ಭಾವ ಸೂಕ್ಷ್ಮತೆಯನ್ನು ನಿರಾಕರಿಸಲಾಗುವುದಿಲ್ಲ ಎನ್ನುತ್ತಾರೆ ಲೇಖಕಿ ನಾಗರೇಖಾ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ಓ ಹೆನ್ರಿಯ ಕಥೆಯೊಂದನ್ನು ವಿಶ್ಲೇಷಿಸಿದ್ದಾರೆ.

ಬದುಕು ಅನ್ನೋದು ಅದೆಷ್ಟು ವಿಸ್ಮಯಕಾರಿ. ಇಂದು ಅತೀ ಪ್ರಜ್ಞಾವಂತನಂತಿದ್ದವನು ದುರುಳನಾಗಬಹುದು. ಸಂದರ್ಭಗಳು ವ್ಯಕ್ತಿಯ ಬದುಕನ್ನೆ ಬುಡಮೇಲಾಗಿಸಬಹುದು. ನಂಬಿದ್ದೆಲ್ಲಾ ಸುಳ್ಳಾಗಬಹುದು. ಬದುಕಿನ ದಾರಿ ಸವೆಯುತ್ತಾ ಜನರು ಬದಲಾಗುತ್ತಾ ಹೋಗಬಹುದು. ಮನಸ್ಸು ಕೂಡಾ ಅದೆಷ್ಟು ಚಂಚಲ. ಈಗ ಯೋಚಿಸಿದಂತೆ ಇನ್ನೆರಡು ಕ್ಷಣ ಬಿಟ್ಟರೆ ಆಗ ಯೋಚನೆಯ ಧಾಟಿಯೇ ಬದಲಾಗಬಹುದು. ವ್ಯಕ್ತಿಗಳು ಸಂದರ್ಭಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವ ಪರಿ ಅನೂಹ್ಯ. ಆದರೂ ಮನುಷ್ಯ ಸಂಬಂಧಗಳಲ್ಲಿ ಇರುವ ಭಾವ ರೂಕ್ಷತೆಯಂತೆ ಭಾವ ಸೂಕ್ಷ್ಮತೆಯನ್ನು ನಿರಾಕರಿಸಲಾಗುವುದಿಲ್ಲ. ಮನುಷ್ಯನ ವ್ಯಕ್ತಿತ್ವದಲ್ಲಿನ ಇಂತಹ ವೈದೃಶ್ಯಗಳನ್ನೆ ಕಥಾ ಹಂದರವಾಗಿಸಿಕೊಂಡು ಬರೆಯುತ್ತಾನೆ ಓ ಹೆನ್ರಿ.

ಓ ಹೆನ್ರಿ. ಯಾರಿಗೆ ತಾನೇ ಗೊತ್ತಿಲ್ಲ. ಜಗತ್ತಿನ ಬಹು ಭಾಷೆಗಳಿಗೆ ಅನುವಾದಗೊಂಡ ಕೆಲವೇ ಕಥೆಗಾರರಲ್ಲಿ ಓ ಹೆನ್ರಿ ಕೂಡಾ ಒಬ್ಬ. ಈತ ಅಮೇರಿಕನ್ ಸಾಹಿತಿ. ಸಣ್ಣ ಕಥೆಗಳಲ್ಲಿ ನಮ್ಮ ಮಾಸ್ತಿಯವರಂತೆ ಅಪರೂಪ ಕೃಷಿ ಮಾಡಿದವನು. ತನ್ನ ಎಳೆಯ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು ವಾಸ್ತ್ಯವ್ಯಕ್ಕಾಗಿ ಪಡಬಾರದ ಪಾಡು ಪಟ್ಟ ಹೆನ್ರಿ ತನ್ನ ಬದುಕಿನ ಪ್ರತಿ ಅನುಭವವನ್ನೂ ಕಥೆಯಾಗಿಸಿದ್ದಾನೆಯೇ? ಎಂಬ ಸಂಶಯ ಬರುವಂತೆ 381 ಸಣ್ಣ ಕಥೆಗಳನ್ನು ಜಗತ್ತಿಗೆ ನೀಡಿದವ. ಆತನ “ದಿ ಫೋರ್ ಮಿಲಿಯನ್” ಎಂಬ ಕಥಾ ಸಂಕಲನದ ಒಂದು ಕಥೆ “After Twenty Years”.

ಅದು ರಾತ್ರಿ ಹತ್ತು ಗಂಟೆಯ ಸಮಯ. ಬೀಟ್ ಪೊಲೀಸ್ ರಾತ್ರಿಯ ಪಾಳಿಯಲ್ಲಿ ಗಸ್ತು ತಿರುಗುತ್ತಿದ್ದಾನೆ. ಕೊರೆವ ಚಳಿಯಲ್ಲಿ ತಿರುಗುತ್ತಿದ್ದವನ ಕಣ್ಣಿಗೆ ಅದೊಂದು ಹಾರ್ಡ್‌ವೇರ್ ಅಂಗಡಿಯ ಬಾಗಿಲಲ್ಲಿ ಬಾಯಲ್ಲಿ ಹೊತ್ತಿಸದ ಸಿಗರೇಟನ್ನು ಇಟ್ಟುಕೊಂಡ ಆ ಮನುಷ್ಯ ಕಣ್ಣಿಗೆ ಬಿದ್ದಿದ್ದಾನೆ. ಪೊಲೀಸ್ ಆ ಮನುಷ್ಯನಲ್ಲಿ ವಿಚಾರಿಸಲಾಗಿ, ಆತ ತಾನು ಬಾಬ್ ಎಂತಲೂ ಇಪ್ಪತ್ತು ವರ್ಷಗಳ ಹಿಂದೆ ನಿರ್ಧಾರ ಮಾಡಿದಂತೆ ಗೆಳೆಯನೊಬ್ಬನ ಭೇಟಿಯಾಗಲು ಅಲ್ಲಿ ಕಾಯುತ್ತಿರುವುದಾಗಿಯೂ ಸಿಲ್ಕಿ ಬಾಬ್ ಹೇಳುತ್ತಾನೆ. ಅದೇ ಅವನು ನಿಂತ ಹಾರ್ಡ್‌ವೇರ್ ಅಂಗಡಿ ಎದ್ದ ಆ ಸ್ಥಳದಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಒಂದು ರೆಸ್ಟೋರೆಂಟ್ ಇತ್ತೆಂದು, ಬೇರ್ಪಡುವ ಆ ರಾತ್ರಿ ಕೂಡಾ ತಾವಿಬ್ಬರೂ ಅಲ್ಲಿಯೇ ಕುಳಿತು ಊಟ ಮಾಡಿದ್ದಾಗಿಯೂ ಹೇಳುತ್ತಾನೆ.

ಆ ಮಾತು ಕೇಳಿದ ಪೊಲೀಸ್ ಕಳೆದ ಐದು ವರ್ಷಗಳ ಹಿಂದೆ ಆ ರೆಸ್ಟೋರೆಂಟನ್ನು ನೆಲಸಮಗೊಳಿಸಿ ಈ ಹಾರ್ಡ್‌ವೇರ್ ಅಂಗಡಿ ಎದ್ದಿರುವುದಾಗಿ ಬಾಬ್‍ನಿಗೆ ತಿಳಿಸುತ್ತಾನೆ. ಅದೇ ಕ್ಷಣ ಬಾಬ್ ಹೊತ್ತಿಸಿದ ಸಿಗರೇಟ್‍ನ ಬೆಳಕಿನಲ್ಲಿ ಪೊಲೀಸ್‌ಮನ್‌ಗೆ ಬಾಬ್‍ನ ಮುಖ ಸ್ಪಷ್ಟವಾಗಿ ಕಾಣುತ್ತದೆ. ಚೌಕಾಕಾರದ ಮುಖದಲ್ಲಿ ಕಾಣುವ ಚೂಪುಕಣ್ಣುಗಳು, ಬಲಹುಬ್ಬಿನ ಭಾಗದಲ್ಲಿಯ ಬಿಳಿಯ ಮಚ್ಚೆ, ತಲೆಗೆ ಧರಿಸಿದ ರುಮಾಲನ್ನು ಚುಚ್ಚಿದ ಬೆಲೆಬಾಳುವ ವಜ್ರದ ಪಿನ್ನು ‘ಟೈಪಿನ್’ ಪೊಲೀಸನಿಗೆ ಗೋಚರಿಸುತ್ತದೆ.

ಸಿಲ್ಕಿ ಬಾಬ್‍ನಂತೂ ಹಳೆಯ ಗೆಳೆಯನನ್ನು ಭೇಟಿ ಮಾಡುವ ಉತ್ಕಟ ಆಸೆಯಲ್ಲಿದ್ದಾನೆ. ತನ್ನ ಗೆಳೆಯ ಜೀವಂತವಿದ್ದರೆ ತಪ್ಪದೇ ಬಂದೇ ಬರುವ ವಿಶ್ವಾಸವನ್ನು ಬಾಬ್ ಪೊಲೀಸನಲ್ಲಿ ವ್ಯಕ್ತಗೊಳಿಸುತ್ತಾನೆ. ಅದಕ್ಕೆ ಪೊಲೀಸ್‌ಮನ್ ತನ್ನ ಆಶ್ಚರ್ಯ ವ್ಯಕ್ತಪಡಿಸಿ ಇಷ್ಟೊಂದು ದೀರ್ಘ ಅವಧಿಯ ನಡುವೆಯೂ ಬೆಸೆದ ಅವರಿಬ್ಬರ ಬಾಂಧವ್ಯಕ್ಕೆ ತಲೆದೂಗುತ್ತಾನೆ. ಅದಕ್ಕೆ ಬಾಬ್ ತನ್ನ ಗೆಳೆಯ ಸ್ವಭಾವತಃ ನಿಧಾನಿಯೆಂದು, ಆದರೆ ಹಿಡಿದ ಕೆಲಸ ಬಿಡಲಾರದವನೆಂದು ಹೇಳಿ ಆತನಿಗೆ ನ್ಯೂಯಾರ್ಕ್‌ ಬಗೆಗಿರುವ ಅಭಿಮಾನ ಅವನನ್ನು ನ್ಯೂಯಾರ್ಕ್‌ನಲ್ಲಿಯೇ ಉಳಿಯುವಂತೆ ಮಾಡಿತೆಂದು ಹೇಳುತ್ತಾನೆ ಆದರೆ ತನ್ನ ಜಾಣ್ಮೆ, ವೇಗದ ಪ್ರವೃತ್ತಿ ತನ್ನನ್ನು ಪಶ್ಚಿಮದ ಕಡೆಗೆ ಸೆಳೆದಿದ್ದನ್ನು ನೆನಪು ಮಾಡಿಕೊಳ್ಳುತ್ತಾನೆ.

ಬಾಬ್ ಮತ್ತು ಜಿಮ್ಮಿ ವೆಲ್ಸ್ ಬಹು ನಲ್ಮೆಯ ಗೆಳೆಯರು. ಒಡಹುಟ್ಟಿದವರಿಗಿಂತ ಹೆಚ್ಚು ಬೆರೆತು ಬದುಕುತ್ತಿದ್ದ ಇವರಿಬ್ಬರು ನ್ಯೂಯಾರ್ಕ್‌ನಲ್ಲಿ ತಮ್ಮ ಸುಂದರ ಬಾಲ್ಯವನ್ನು ಖುಷಿಖುಷಿಯಾಗಿ ಕಳೆದವರು. ಆದರೆ ದಿಕ್ಕು ಬದಲಿಸಿದ ಜೀವನದ ಮಾರ್ಗಗಳು ಹೇಗೆ ವ್ಯಕ್ತಿಗಳನ್ನು ರೂಪಗೊಳಿಸಬಲ್ಲದು ಎಂಬುದೇ ಈ ಕಥೆಯ ಸಾರ. ಕಥೆಯ ತಿರುವುಗಳು ಓದುಗನನ್ನು ದಿಕ್ಕು ತಪ್ಪಿಸುತ್ತಲೇ ಓದುಗ ಗ್ರಹಿಸದೇ ಇರುವ ಹೊಸತೊಂದು ಅಂತ್ಯವನ್ನು ನೀಡುತ್ತವೆ.

ಈಗ ಪೊಲೀಸ್‌ಮನ್ ಬಾಬ್ ನಿಗೆ ಅವರ ಸ್ನೇಹಕ್ಕೆ ಶುಭಕೋರಿ ಪೋಲಿಸ ತನ್ನ ಕಾರ್ಯದ ಮೇಲೆ ಹೊರಟು ಹೋಗುತ್ತಾನೆ. ಸ್ವಲ್ಪ ಹೊತ್ತಿಗೆ ಅಲ್ಲಿಗೆ ತನ್ನನ್ನು ಜಿಮ್ಮಿ ಎಂದು ಹೇಳಿಕೊಂಡು ಎತ್ತರದ ವ್ಯಕ್ತಿಯೊಬ್ಬ ಬಾಬ್‍ನಲ್ಲಿಗೆ ಬರುತ್ತಾನೆ. ಆದರೆ ಬಾಬ್‍ನಿಗೆ ಆ ವ್ಯಕ್ತಿಯ ಎತ್ತರ ಸಂಶಯ ಮೂಡಿಸುತ್ತದೆ. ಅದಕ್ಕೆ ಆ ವ್ಯಕ್ತಿ ವರ್ಷಗಳು ಎತ್ತರವನ್ನು ಬದಲಾಯಿಸಬಹುದೆನ್ನುತ್ತಾನೆ. ಅವರಿಬ್ಬರೂ ನಡೆಯುತ್ತಾ ಬರುತ್ತಿರುವಾಗ ನ್ಯೂಯಾರ್ಕ್‌ನ ಬೀದಿಯೊಂದರಲ್ಲಿ ಇರುವ ಔಷಧಂಗಡಿಯ ಮುಂದಿನ ಬೀದಿದೀಪದ ಬೆಳಕಿನಲ್ಲಿ ಬಾಬ್ ಆ ವ್ಯಕ್ತಿಯ ಮುಖ ನೋಡುತ್ತಾನೆ. ತಟ್ಟನೇ ಬಾಬ್‍ನಿಗೆ ಆತನ ಮೂಗು ಕಾಣುತ್ತದೆ. ವರ್ಷಗಳು ಮೂಗಿನ ರೂಪವನ್ನು ಬದಲಾಯಿಸಲಾರವು ಎಂಬ ಆತನ ಶಂಕೆ ನಿಜವಾಗುತ್ತದೆ. ಆತ ಜಿಮ್ಮಿ ವೆಲ್ಸ್ ಆಗಿರುವುದಿಲ್ಲ.

ಓ.ಹೆನ್ರಿ ಮನುಷ್ಯನ ಸ್ವಭಾವ ಮತ್ತು ಮನಸ್ಥಿತಿಗಳನ್ನು ಅಭಿವ್ಯಕ್ತಗೊಳಿಸುವ ರೀತಿ ಅದ್ವಿತೀಯ. ಬದುಕಲ್ಲಿ ಪ್ರತಿಯೊಬ್ಬನೂ ತನ್ನನ್ನೂ ಒಳಗೊಂಡಂತೆ ಕಲಿಯಲೇಬೇಕಾದ ವಿಚಾರವೇನೆಂದರೆ ವರ್ಷಗಳು ಉರುಳಿದಂತೆ ಮನುಷ್ಯನ ಬದಲಾದ ದೈಹಿಕ ಚಹರೆಗಳನ್ನಾದರೂ ಗುರುತಿಸಬಹುದು ಆದರೆ ನಮಗೆ ಗೊತ್ತಿರುವ ಅವರ ಸ್ವಭಾವ, ಗುಣಗಳು ನಮ್ಮ ಊಹೆಗೂ ಮೀರಿ ಬದಲಾಗಿಬಿಡುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಹಾಗಾಗೇ ತನ್ನನ್ನು ಜಿಮ್ಮಿ ಎಂದು ಹೇಳಿಕೊಂಡು ಬಂದ ವ್ಯಕ್ತಿಯನ್ನು ಆತನ ಮೂಗಿನ ಮೂಲಕ ಗುರುತಿಸಿ ನೀನು ಜಿಮ್ಮಿಯಲ್ಲವೆಂದು ಪ್ರಶ್ನಿಸುತ್ತಾನೆ. ಅದಕ್ಕಾತ “It sometimes changes a good man into a bad one”ಎಂದು ಹೇಳಿ, ಬಾಬ್‍ನನ್ನು ಅರೆಸ್ಟ್ ಮಾಡುತ್ತಾನೆ.

ಮುಂದೆ ಬಾಬ್‍ನನ್ನು ಸ್ಟೇಷನ್‍ಗೆ ಹಾಜರುಪಡಿಸುವ ಮುನ್ನ ಎತ್ತರದ ಆ ವ್ಯಕ್ತಿ ಬಾಬ್‍ಗೆ ಅಂಗಡಿಯ ಸಮೀಪ ಈ ಮೊದಲೇ ಭೇಟಿಯಾದ ಪೊಲೀಸ್‌ಮನ್ ನೀಡಿದ ಕಾಗದ ಪತ್ರ ನೀಡುತ್ತಾನೆ. ಬಾಬ್ ಅದನ್ನು ನಡಗುವ ಕೈಗಳಿಂದ ತೆಗೆದು ಓದುತ್ತಾನೆ. ಅದು ಜಿಮ್ಮಿ ವೆಲ್ಸ್ ಬರೆದ ಕಾಗದವಾಗಿರುತ್ತದೆ. ಅದರಲ್ಲಿ ಜಿಮ್ಮಿ ‘ತಾನು ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದಿದ್ದಾಗಿಯೂ, ಬಾಬ್ ಹೊತ್ತಿಸಿದ ಸಿಗರೇಟಿನ ಬೆಳಕಿನಲ್ಲಿ ತನಗೆ ಬಾಬ್‍ನ ಮುಖ ಕಂಡಿದ್ದಾಗಿಯೂ, ಸಿಲ್ಕಿ ಬಾಬ್ ಚಿಕಾಗೋ ಪೊಲೀಸರಿಗೆ ಬೇಕಾಗಿದ್ದ ಅಪರಾಧಿಯಾಗಿದ್ದು, ಆತನನ್ನು ತಾನೇ ಬಂಧಿಸಲು ಸಾಧ್ಯವಾಗದ ಕಾರಣ ಮಫ್ತಿಯಲ್ಲಿಯ ಪೋಲಿಸನನ್ನು ಆ ಕಾರ್ಯಕ್ಕೆ ಕಳುಹಿಸಬೇಕಾಯಿತೆಂದು ಬರೆದಿರುತ್ತಾನೆ.” ಹೀಗೆ ಇಪ್ಪತ್ತು ವರ್ಷಗಳ ನಂತರವೂ ಸಾಯದ ಗೆಳೆಯರಿಬ್ಬರ ಗೆಳೆತನ ಅವರು ಆಯ್ದುಕೊಂಡ ಜೀವನದ ಮಾರ್ಗಗಳಿಂದ ವಿರೂಪಗೊಳ್ಳುತ್ತದೆ. ಪರಸ್ಪರ ಮುಖಾಮುಖಿಯಾಗುವ ಸಂದರ್ಭವನ್ನು ಕೊನೆಗಾಣಿಸುತ್ತದೆ. ಸ್ನೇಹದ ಭಾವಗಳ ವಿನಿಮಯಕ್ಕೆ ಕತ್ತರಿ ಇಡುತ್ತದೆ. ಕಥೆ ಬಹಳ ವಿಶಿಷ್ಟ ಬಗೆಯಲ್ಲಿ ತೋರುವ ಎರಡು ಸಂಗತಿಗಳು ಗಮನಾರ್ಹ. ಬಾಬ್ ಕಾನೂನುಬಾಹಿರ ಕೆಲಸಗಳಿಂದ ಪ್ರಸಿದ್ಧನಾಗಿ ಪೋಲಿಸರಿಗೆ ಬೇಕಾದವನಾಗಿಯೂ, ತನ್ನ ಸ್ನೇಹದ ವಿಷಯದಲ್ಲಿ ಆತ ತೋರುವ ನಿಷ್ಠೆ ಅನುಪಮ. ಜಿಮ್ಮಿಗೋಸ್ಕರ ಆತ ಕೊರೆವ ಚಳಿಯನ್ನೂ ಲೆಕ್ಕಿಸದೇ ಇಪ್ಪತ್ತು ವರ್ಷಗಳ ಹಿಂದಿನ ಭಾಷೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕಾಯುತ್ತಾನೆ. ಅದಕ್ಕೆ ತದ್ವಿರುದ್ಧವಾಗಿ ಪೊಲೀಸ್‌ಮನ್ ಆಗಿರುವ ಜಿಮ್ಮಿ ವೆಲ್ಸ್ ತನ್ನ ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗುತ್ತಾನೆ. ಆದರೆ ಗೆಳೆಯನನ್ನು ಸ್ವತಃ ಬಂಧಿಸಲಾಗದ ಸಂದಿಗ್ಧತೆಯಲ್ಲಿ ಬೇರೊಬ್ಬ ಪೋಲಿಸನನ್ನು ಕಳುಹಿಸಿಕೊಡುತ್ತಾನೆ. ಇಲ್ಲಿ ವ್ಯಕ್ತವಾಗುವ ಸಂಬಂಧಗಳಲ್ಲಿನ ಸೂಕ್ಷ್ಮತೆಯನ್ನು ಅರ್ಥೈಸಿಕೊಳ್ಳುವುದು ಗಮನಾರ್ಹವಾಗುತ್ತದೆ. ಅಸ್ಪಷ್ಟವಾಗಿ ಕೊನೆಯಾಗುವ ಕಥೆಗಳನ್ನು ಬಹು ಆಯಾಮದಲ್ಲಿ ಓದುಗನಿಗೆ ತೆರೆದುಕೊಳ್ಳುವಂತೆ ಓ ಹೆನ್ರಿ ಕಥೆಯ ಕ್ಲೈಮಾಕ್ಸ್‌ನ್ನು ಓದುಗನಿಗೆ ಬಿಡುತ್ತಾನೆ. ಓದುಗನನ್ನು ಇದು ಚಿಂತನೆಗೆ ಹಚ್ಚುತ್ತದೆ. ಒಳ್ಳೆಯವರಾರು? ಕೆಟ್ಟವರಾರು? ಎಂಬ ಪ್ರಶ್ನೆಗೆ ಕೊನೆಗೂ ಉತ್ತರವಿಲ್ಲ...

-ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

 

MORE NEWS

ಐವತ್ತು ವರ್ಷಗಳ ಕಥನ ಚರಿತ್ರೆಯನ್ನು ಕಟ್ಟಿಕೊಡುವ ‘ಸ್ವಾತಂತ್ರ್ಯೋತ್ತರ ಸಣ್ಣ ಕಥೆಗಳು’

15-04-2025 ಬೆಂಗಳೂರು

"ಕಥೆಗಳ ಆಯ್ಕೆಯ ಕ್ರಮವನ್ನು ಹೀಗೆ ಹೇಳುತ್ತಾರೆ `ಕಥೆಗಳ ಆಯ್ಕೆ ಕೂಡ ವ್ಯಕ್ತಿಯ ಆಸಕ್ತಿ, ಅಭಿರುಚಿ ಮತ್ತು ಮನೋಧರ್ಮ...

ಮತ್ತೆ ಮತ್ತೆ ಕಾಡುವ ಹಳೇ ಬಜಾರಿನ ಯಡ್ರಾಮಿ ಸಂತೆ

10-04-2025 ಬೆಂಗಳೂರು

"ಸುತ್ತಮುತ್ತ ನಾಕಿಪ್ಪತ್ತು ಹಳ್ಳಿಗಳಿಗೆ ಎಲ್ಲ ರೀತಿಯಿಂದಲೂ ಹಿರಿಯಣ್ಣನಂತಹ ಯಡ್ರಾಮಿ ನನ್ನ ಪ್ರೀತಿಯ ಊರು. ನಮ್ಮೂ...

ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು-ಮುಂದುವರೆದುದು

06-04-2025 ಬೆಂಗಳೂರು

"ಬಿನ್ನ ರಾಜ್ಯಗಳ ಪ್ರದಾನ ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಕೊಡುವಾಗ ವಿವಿದ ರಾಜ್ಯಗಳು ಪರಸ್ಪರ ಒಂದು ಒಪ್ಪಂ...