Date: 09-04-2023
Location: ಬೆಂಗಳೂರು
ಮಕ್ಕಳನ್ನು ಅವರ ಭವಿಷ್ಯವನ್ನು ಬರಿಯ ಓದಿಗೆ ಸೀಮಿತಗೊಳಿಸದೆ ಅವರ ಇಷ್ಟದ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿ ಪ್ರೋತ್ಸಾಹಿಸಿದರೆ ದೊಡ್ಡ ಪ್ರತಿಭೆಗಳಾಗುತ್ತಾರೆ. ಮಕ್ಕಳ ಬದುಕನ್ನು ನಾಲ್ಕು ಗೋಡೆಗಿಂತ ನಾಲ್ಕು ದಿಕ್ಕುಗಳಿಗೆ ವಿಸ್ತರಿಸಬೇಕು. ದೊಡ್ಡ ದೊಡ್ಡ ಸಿನಿತಾರೆಯರು, ಆಟಗಾರರು, ಹಾಡುಗಾರರು ಬರೀ ಓದನ್ನೇ ನಂಬಿಕೊಂಡಿದ್ದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾಧ್ಯವಾಗುತ್ತಿರಲಿಲ್ಲ ಎನ್ನುತ್ತಾರೆ ಅಂಕಣಗಾರ್ತಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ಚಿತ್ರ ಕಲಾವಿದರು ಹಾಗೂ ಗುರುಗಳಾದ ಅನಿಲ್ ಕುಮಾರ್ ಎಸ್. ಉಂಬುರ್ಗೆ ಕುರಿತು ಬರೆದಿದ್ದಾರೆ.
ಹುಟ್ಟಿದ ಪ್ರತಿ ಮನುಷ್ಯನಲ್ಲೂ ಏನೋ ವಿಶೇಷ ಗುಣವಿರುತ್ತದೆ. ಆದರೆ ಎಲ್ಲರಿಂದಲೂ ಅದನ್ನು ಗುರುತಿಸಲು ಕಷ್ಟ. ಬಹುತೇಕರು ನಾಲ್ಕು ಗೋಡೆಗಳ ಮಧ್ಯದ ಕಲಿಕೆಗೆ ಸೀಮಿತರಾಗಿದ್ದಾರೆ. ಅದರಾಚೆ ಯೋಚಿಸುವುದಕ್ಕೂ ಕಷ್ಟಸಾಧ್ಯ, ಚೆನ್ನಾಗಿ ಓದಿಕೊಂಡರಷ್ಟೇ ಒಳ್ಳೆಯ ಜೀವನ ಅನ್ನುವಷ್ಟರ ಮಟ್ಟಿಗೆ ನಮ್ಮಲ್ಲಿನ ಮನಸ್ಥಿತಿ ಇದೆ. ಆದರೆ ಇಲ್ಲೊಬ್ಬರು ಓದಿನ ಹಿನ್ನಡೆಯನ್ನೇ ಹಿಮ್ಮೆಟ್ಟಿಸಿ ನೂರಾರು ಮಕ್ಕಳಲ್ಲಿ ಕಲಾಪ್ರತಿಭೆಯನ್ನು ಅರಳಿಸಿದ್ದಾರೆ. ಕುಂಚದಿಂದಲೇ ತಮ್ಮ ಬದುಕನ್ನು ಸುಂದರವಾಗಿ ಬಣ್ಣಮಯವಾಗಿಸಿಕೊಂಡಿದ್ದಾರೆ. 'ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು' ಎನ್ನುವ ಗಾದೆಗೆ ಅನ್ವರ್ಥವಾಗಿರುವ ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ಖಟಕ್ ಚಿಂಚೋಳಿ ಗ್ರಾಮದ ಚಿತ್ರ ಕಲಾವಿದರು ಹಾಗೂ ಗುರುಗಳಾದ ಅನಿಲ್ ಕುಮಾರ್ ಎಸ್. ಉಂಬುರ್ಗೆ ಅವರ ಬದುಕಿನ ಪಯಣ ಇಂದಿನ ನಿಮ್ಮ ಓದಿಗಾಗಿ...
'ಅಪ್ಪ ಶಾಮಣ್ಣ ಅಮ್ಮ ಲಲಿತಾ ಬಾಯಿ. ನಮ್ಮ ತಂದೆ ತಾಯಿಗೆ ನಾವು ಮೂರು ಜನರು ಗಂಡುಮಕ್ಕಳು. ಅಶ್ವಿನ್, ಅನಿಲ್, ಅರುಣ. ನಾವು ಚಿಕ್ಕವರಿದ್ದಾಗ ತಂದೆ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ. ಅಂದಿನಿಂದ ಅಮ್ಮನೇ ನಮ್ಮ ಪಾಲಿಗೆ ಅಪ್ಪ ಅಮ್ಮ ಎರಡೂ ಆಗಿ ಸಲಹುತ್ತಾಳೆ. ಅವರಿವರ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿ ನಮಗೆ ಚೂರೂ ಕೊರತೆ ಬಾರದಂತೆ ನಮ್ಮೆಲ್ಲರನ್ನು ಸಲಹುತ್ತಾಳೆ. ಜೊತೆಗೆ ಅಣ್ಣ ಬೆನ್ನೆಲುಬಾಗಿ ನಿಂತು ತಂದೆಯ ನೆನಪು ಬಾರದಂತೆ ನಮ್ಮನ್ನೆಲ್ಲ ನೋಡಿಕೊಳ್ಳುತ್ತಾನೆ. ಹಂಗೋ ಹಿಂಗೋ ಎಸ್. ಎಸ್. ಎಲ್. ಸಿ ಪಾಸ್ ಮಾಡಿದ್ದೆ ಆ ಹೊತ್ತಿಗೆ ನನ್ನ ಜೀವನದ ಅತೀ ದೊಡ್ಡ ಸಾಧನೆಯಾಗಿತ್ತು. ಯಾಕೆಂದರೆ ಓದಲು ಬರೆಯಲು ನನಗೆ ಸ್ವಲ್ಪವೂ ಆಸಕ್ತಿ ಇರಲಿಲ್ಲ. ನನ್ನ ಹ್ಯಾಂಡ್ ರೈಟಿಂಗ್ ಚೆನ್ನಾಗಿರಲಿಲ್ಲ. ಓದು ತಲೆಗೆ ಹತ್ತುತ್ತಿರಲಿಲ್ಲ. ಅಣ್ಣ ತಮ್ಮ ಇಬ್ಬರೂ ಸೈನ್ಸ್ ತಗೊಂಡ್ರು. ನನಗೆ ಆರ್ಟ್ಸ್, ಕಾಮರ್ಸ್, ಸೈನ್ಸ್ ಯಾವ ವಿಭಾಗವೂ ಅಸಾಧ್ಯ ಅನ್ನಿಸಿತ್ತು. ಚಿಕ್ಕ ವಯಸ್ಸಿನಿಂದ ಚಿತ್ರಕಲೆ, ರಂಗೋಲಿ ಆರ್ಟ್ ಅಂದ್ರೆ ನನಗೆ ಎಲ್ಲಿಲ್ಲದ ಆಸಕ್ತಿ. ಅಣ್ಣ ಅಶ್ವಿನ್ ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ್ದ. ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದ್ದುದರಿಂದ ಹುಮ್ಮನಾಬಾದಿನ ಶ್ರೀ ವೀರಭದ್ರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ನನ್ನ ಅಡ್ಮಿಶನ್ ಮಾಡಿಸಿದ. ಪಿ. ಯು. ಸಿ ಅಲ್ಲೇ ಮುಗಿಸಿ ಡಿಗ್ರಿ BVA( Bachelor of Visual Art ) ಮುಗಿಸಿದೆ. ನಂತರ ಗುಲ್ಬರ್ಗ ಯೂನಿವರ್ಸಿಟಿಯಲ್ಲಿ MVA ( Master of Visual Art ) ಉನ್ನತ ಶಿಕ್ಷಣವನ್ನು ಮುಗಿಸಿದೆ. ಎಸ್. ಎಸ್. ಎಲ್. ಸಿ ಮುಗಿದ ನಂತರ ಅಣ್ಣ ನನಗೆ ಸೈನ್ಸ್, ಆರ್ಟ್ಸ್ ಕೊಡಿಸಿದ್ರೆ ನನ್ನ ಭವಿಷ್ಯ ಇಂದಿಗೆ ಏನಾಗಿರುತ್ತಿತ್ತೋ ಊಹಿಸಲು ಅಸಾಧ್ಯ. ಪೋರ್ಟ್ರೇಟ್, ಅಬ್ಸ್ಟ್ರ್ಯಾಕ್ಟ್, ಕೇರಳ ಪೇಂಟಿಂಗ್, ತಂಜಾವೂರ್ ಪೇಂಟಿಂಗ್, ಪೆನ್ಸಿಲ್ ಶೇಡಿಂಗ್, ಮೈಸೂರು ಟ್ರೆಡಿಷನಲ್ ಪೇಂಟಿಂಗ್, ವಾಲ್ ಪೇಂಟಿಂಗ್, ಇತ್ಯಾದಿ ಎಲ್ಲವನ್ನು ಮಾಡುತ್ತೇನೆ. ಇವತ್ತು ನನ್ನ ಹತ್ತಿರ ಐದುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರಕಲೆಯನ್ನು ಕಲಿಯಲು ಬರುತ್ತಿದ್ದಾರೆ. ಹಲವಾರು ಮಕ್ಕಳು ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ತೆಗೆದುಕೊಂಡಿದ್ದಾರೆ. ಇದು ನನಗೆ ಹೆಮ್ಮೆಯ ಸಂಗತಿ. ಮುಂದೆ PhD ಮಾಡುವ ಕನಸಿದೆ. A3 ಆರ್ಟ್(ಅಶ್ವಿನ್, ಅನಿಲ್, ಅರುಣ್) ಕ್ಲಾಸ್ ಒಂದನ್ನು ಪ್ರಾರಂಭಿಸಬೇಕು. ಕಲಿಯುವ ಆಸಕ್ತಿ ಇರುವ ಮಕ್ಕಳನ್ನು ಹುಡುಕಿ ಅವರಿಗೆ ಚೆನ್ನಾಗಿ ತರಬೇತಿ ಕೊಟ್ಟು ಮುಂದೆ ತರಬೇಕು ಎಂಬ ಆಸೆಯಿದೆ. ಉಳಿದಂತೆ ಕೈಲಾದಷ್ಟು ಸಮಾಜ ಸೇವೆ ಮಾಡ್ತಾ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಹೋಗಿ ಅಲ್ಲಿನ ಅಗತ್ಯಗಳನ್ನು ತಿಳಿದುಕೊಂಡು ಅವುಗಳನ್ನು ಪೂರೈಸುವುದು ನನ್ನ ಹವ್ಯಾಸಗಳಲ್ಲೊಂದು. ಎಲ್ಲಾ ಮಕ್ಕಳಲ್ಲೂ ಒಂದು ಸ್ಕಿಲ್ ಇದ್ದೇ ಇರುತ್ತದೆ. ಯಾವ ಮಕ್ಕಳನ್ನೂ ನೀವು ಇದೇ ಮಾಡಬೇಕು ಅಂತ ಬಲವಂತ ಮಾಡಬಾರದು. ಅವರಿಗೆ ಓದಲು ಆಸಕ್ತಿ ಇಲ್ಲವಾದರೂ ಅವರು ಬೇರೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ಗಮನಿಸಿ ಅದರಲ್ಲಿ ಮುಂದುವರೆಸಿದರೆ ಆ ಮಕ್ಕಳು ಯಶಸ್ವಿಯಾಗುತ್ತಾರೆ ಎನ್ನುವುದಕ್ಕೆ ನಾನೆ ಜೀವಂತ ಉದಾಹರಣೆ' ಎನ್ನುತ್ತಾರೆ ಅನಿಲ್ ಗುರುಗಳು.
ಮನೆಯಲ್ಲಿ ಕಲೆಯ ಹಿನ್ನೆಲೆಯುಳ್ಳ ಯಾರು ಇಲ್ಲದೆಯೂ ಸಾವಿರಾರು ಚಿತ್ರಗಳು, ಪೇಂಟಿಂಗ್ ಆರ್ಟ್ ಗಳ ತಾಯಿಯಾಗಿದ್ದಾರೆ. ಅನುಪಯುಕ್ತ ವಸ್ತುಗಳಿಂದ ಆಕರ್ಷಕ ಕಲಾಕೃತಿಗಳನ್ನು ರಚಿಸಿದ್ದಾರೆ. ಸಂವೇದನಾ ಶೀಲತೆಯುಳ್ಳ ಚಿತ್ರಕಲೆಯ ಮೂಲಕ ತಮ್ಮ ಕುಂಚದಿಂದ ನೂರಾರು ಮಕ್ಕಳಿಗೆ ತಾವು ಕಲಿತ ಕಲೆಯನ್ನು ಹೇಳಿಕೊಡುತ್ತಿರುವ ಅನಿಲ್ ಕುಮಾರ್ ರವರು ಓದಿನಲ್ಲಿ ಹಿಂದಿದ್ದರೂ ಈ ವಿಶೇಷವಾದ ಕಲೆಯನ್ನು ಕಲಿತು 2013 ರಲ್ಲಿ ನಾಗಪುರದಲ್ಲಿ, 2015 ಗುಲ್ಬರ್ಗ ಯೂನಿವರ್ಸಿಟಿ ಯೂಥ್ ಫೆಸ್ಟಿವಲ್, 2016ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2023ರ ಕರ್ನಾಟಕ ಬೆಸ್ಟ್ ಪೇಂಟಿಂಗ್ ಆರ್ಟಿಸ್ಟ್ ಅವಾರ್ಡ್ ಗಳು ಸೇರಿದಂತೆ ಸಾಕಷ್ಟು ಸನ್ಮಾನ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಮಕ್ಕಳನ್ನು ಅವರ ಭವಿಷ್ಯವನ್ನು ಬರಿಯ ಓದಿಗೆ ಸೀಮಿತಗೊಳಿಸದೆ ಅವರ ಇಷ್ಟದ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿ ಪ್ರೋತ್ಸಾಹಿಸಿದರೆ ದೊಡ್ಡ ಪ್ರತಿಭೆಗಳಾಗುತ್ತಾರೆ. ಮಕ್ಕಳ ಬದುಕನ್ನು ನಾಲ್ಕು ಗೋಡೆಗಿಂತ ನಾಲ್ಕು ದಿಕ್ಕುಗಳಿಗೆ ವಿಸ್ತರಿಸಬೇಕು. ದೊಡ್ಡ ದೊಡ್ಡ ಸಿನಿತಾರೆಯರು, ಆಟಗಾರರು, ಹಾಡುಗಾರರು ಬರೀ ಓದನ್ನೇ ನಂಬಿಕೊಂಡಿದ್ದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾಧ್ಯವಾಗುತ್ತಿರಲಿಲ್ಲ. ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು ಎಂಬುದಕ್ಕೆ ಅನಿಲ್ ಗುರುಗಳ ಬದುಕು ಸೂಕ್ತವಾದ ಉದಾಹರಣೆ. ಶಾಲಾ ಕಾಲೇಜುಗಳಲ್ಲಿ ಫೇಲಾದ ಮಾತ್ರಕ್ಕೆ ಓದಿನಲ್ಲಿ ಹಿಂದುಳಿದ ಮಾತ್ರಕ್ಕೆ ಮುಂದಿನ ಬದುಕೇ ಕಗ್ಗಂಟು ಎಂದುಕೊಳ್ಳುವ ಹಲವು ಮಂದಿಗೆ ಇವರ ಜೀವನ ಸ್ಫೂರ್ತಿಯಾಗಲಿ ಎಂಬ ಆಶಯ ನಮ್ಮದು.....
ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್
ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...
©2024 Book Brahma Private Limited.