ಒಡೆ-ಅಡೆ-ಅರೆ

Date: 31-08-2023

Location: ಬೆಂಗಳೂರು


''ಕೀರ‍್ತನೆಗಳಿಗೆ ಸಂಗೀತ ಕಾವಲಾಗಿತ್ತು, ಆದರೆ ಮಾತ್ರಾಚಂದಸ್ಸಿಗಿಂತ ಇನ್ನೂ ಕಡಿಮೆ ಬಿಗುತನ ಹೊಂದಿತ್ತು. ಆದರೆ, ಮಾತೆ ಆಗಿದ್ದ ವಚನಗಳಿಗೆ ಈ ಯಾವ ಕಾವಲುಗಳೂ ಇಲ್ಲ. ಹಾಗಾಗಿ, ವಚನಗಳ ಬಾಶೆ ನಿರಂತರವಾಗಿ, ವ್ಯಾಪಕವಾಗಿ ಬದಲಾಗಿದೆ. ವಚನಗಳನ್ನು ಹದಿನಯ್ದನೆ ಶತಮಾನದಾಗ ವ್ಯವಸ್ತಿತವಾಗಿ ಸಂಪಾದಿಸುವ ಕೆಲಸ ಆಗಿದೆ,'' ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು' ಅಂಕಣದಲ್ಲಿ ‘ಒಡೆ-ಅಡೆ-ಅರೆ' ವಿಚಾರದ ಕುರಿತು ಬರೆದಿದ್ದಾರೆ.

ಅರೆ! ಏನಿದು ಒಡೆ-ಅಡೆ-ಅರೆ…! ಎನಿಸಬಹುದಲ್ಲವೆ? ಇಲ್ಲಿ ಬಸವಣ್ಣನ ವಚನವೊಂದರ ಒಂದು ಸಾಲನ್ನು, ಅದರ ಬಿನ್ನ ರೂಪಗಳನ್ನು ಗಮನಿಸಿ.

ನುಡಿದೊಡೆ ಮುತ್ತಿನಹಾರದಂತಿರಬೇಕು
ನುಡಿದಡೆ ಮುತ್ತಿನಹಾರದಂತಿರಬೇಕು
ನುಡಿದರೆ ಮುತ್ತಿನಹಾರದಂತಿರಬೇಕು

ಈ ಸಾಲನ್ನು ಓದು ಬಲ್ಲ ಹೆಚ್ಚಿನ ಕನ್ನಡದವರು ಕೇಳಿರುತ್ತಾರೆ, ಓದಿರುತ್ತಾರೆ ಇಲ್ಲವೆ ಹಾಡಿರುತ್ತಾರೆ. ಸರಿ. ಈಗ ಒಮ್ಮೆ ಗಮನಿಸಿ, ಈ ಮೂರರಲ್ಲಿ ಯಾವ ಸಾಲನ್ನು ನೀವು ಓದಿದ್ದೀರಿ. ಕೆಲವರು ಇದರಲ್ಲಿ ಎರಡು ರೂಪಗಳನ್ನು ಇಲ್ಲವೆ ಮೂರೂ ರೂಪಗಳನ್ನೂ ಕಂಡಿರಬಹುದಲ್ಲವೆ? ಸರಿ, ಯಾಕೆ ಹೀಗೆ ಇಶ್ಟು ರೂಪಗಳು ಎಂದು ಯೋಚನೆ ಮಾಡಿದ್ದಿರಾ? ಈ ರೂಪಗಳು ಏನು ಕತೆಯನ್ನು ಹೇಳುತ್ತವೆ? ಅಯ್ಯೊ, ಹೋಗಲಿ ಬಿಡಿ, ನುಡಿದೊಡೆ ಆದರೇನು, ನುಡಿದಡೆ ಆದರೇನು, ನುಡಿದರೆ ಆದರೇನು? ಬಸವಣ್ಣ ಹೇಳುತ್ತಿರುವುದು ನಮಗೆಲ್ಲ ಅರ‍್ತವಾಗುತ್ತಿದೆಯಲ್ಲ, ಅಶ್ಟು ಸಾಕು. ಹಾಗನಿಸುತ್ತೆ ಅಲ್ಲವೆ? ನಿಜ, ಹಾಗನ್ನಿಸುವುದರಲ್ಲೂ ಅರ‍್ತವಿದೆ. ಆದರೆ, ಸಾಲೊಂದರ ಅರ‍್ತವನ್ನು ತಿಳಿದುಕೊಳ್ಳುವುದರ ಜೊತೆಗೆ ಇನ್ನೂ ಹಲವು ವಿಚಾರಗಳನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆ ಬಂದಾಗ ನಾವು ಒಳಪೊಕ್ಕು ನೋಡುವ ಯತುನ ಮಾಡಬೇಕು. ಹಲವು ತೆರನಾದ ಇತಿಹಾಸಿಕ ಅಂಶಗಳನ್ನು ಅರಿತುಕೊಳ್ಳುವುದಕ್ಕೆ ಈ ಬಗೆಯ ಕುತೂಹಲಗಳು ಸಾಕಶ್ಟು ಸಹಾಯ ಮಾಡುತ್ತವೆ. -ಒಡೆ, -ಅಡೆ, -ಅರೆ ರೂಪಗಳು ಮತ್ತು ಇಂತಾ ಹಲವು ವ್ಯಾಕರಣ ರೂಪಗಳು ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ. ಇಂತಾ ರೂಪಗಳನ್ನು ತಿಳಿದುಕೊಳ್ಳುವುದು ಬಾಶೆಯ ಬೆಳವಣಿಗೆಯ ಅರಿವನ್ನು ಅಗ್ಗಲಿಸಿಕೊಳ್ಳಲು ಅವಸರವೊದಗಿಸುತ್ತವೆ.

ಸರಿ, ಮೊದಲಿಗೆ ಈ ಮೂರು ರೂಪಗಳು ಏನನ್ನು ಪ್ರತಿನಿದಿಸುತ್ತವೆ ಎಂಬದುನ್ನು ಗಮನಿಸೋಣ. ಸುಮ್ಮನೆ ಒಂದು ಮಾತಿನಲ್ಲಿ ಹೇಳಿಬಿಡುವುದಾದರೆ -ಒಡೆ ರೂಪವು ಹಳೆಯದೆಂದು, -ಅಡೆ ಎಂಬುದು ಅದರಿಂದ ಆನಂತರ ಬೆಳೆದಿರುವುದೆಂದು, ಅದರಿಂದ ಮುಂದೆ -ಅರೆ ರೂಪವು ಬೆಳೆದಿದೆ ಎಂದೂ ಹೇಳಬಹುದು. ಹಾಗಾದರೆ, ಇದರ ಮೂಲ ರೂಪ ಯಾವುದಾಗಿದ್ದಿರಬಹುದು ಎಂಬ ಪ್ರಶ್ನೆಯೂ ಬರಬಹುದು. -ಒಡೆ ಎಂಬ ರೂಪ ಹಳಗನ್ನಡವನ್ನು, -ಅಡೆ ಎಂಬ ರೂಪ ನಡುಗನ್ನಡವನ್ನು ಮತ್ತು -ಅರೆ ಎಂಬುದು ಹೊಸಗನ್ನಡವನ್ನು (ಅಂದಾಜಾಗಿ) ಪ್ರತಿನಿದಿಸಬಹುದು. ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಮೂರು ಬಿನ್ನ ಕಾಲಗಟ್ಟಗಳು ಇವೆ ಎಂದು ನಂಬಿಕೊಂಡಾಗ ಈ ಚಿತ್ರಣ ಸಾದ್ಯ. ಈ ಮೂರು ರೂಪಗಳು ಬಾಶೆಯ ಕಾಲಾಂತರದಲ್ಲಿ ಆಗಿರುವ ಬೆಳೆದ ರೂಪಗಳು ಎಂಬುದು ಸ್ಪಶ್ಟ.

ಈಗ ಮತ್ತೆ ಚೂರು ಬಸವಣ್ಣನ ಈ ಮೇಲೆ ಉಲ್ಲೇಕಿಸಿದ ವಚನದ ಸಾಲನ್ನು ಗಮನಿಸೋಣ. ಈಗ, ಬಸವಣ್ಣ ಹಳಗನ್ನಡದಲ್ಲಿ ಬರೆದಿರುವನೊ, ನಡುಗನ್ನಡದಲ್ಲಿಯೊ, ಸಂಕ್ರಮಣ ಕಾಲದಲ್ಲಿಯೊ ಇಲ್ಲವೆ ಹೊಸಗನ್ನಡದಲ್ಲಿಯೊ? ಇಂದು ಪ್ರಕಟವಾಗಿರುವ ಬಹುತೇಕ ವಚನದ ಪುಸ್ತಕಗಳನ್ನು ಓದಿದಾಗ ಬಸವಣ್ಣ ಮೊದಲ್ಗೊಂಡು ಬಹುತೇಕ ವಚನಕಾರರು ಹೊಸಗನ್ನಡದಲ್ಲಿಯೆ ಬರೆದಿರುವಂತೆ ತೋರುತ್ತದೆ. ಬೇಂದ್ರೆಯ ಕವನದ

ಸಾಲುಗಳಿಗೂ, ಬಸವಣ್ಣನ ವಚನಗಳ ಸಾಲುಗಳಿಗೂ ಬಾಶಿಕವಾಗಿ ಹೇಳಿಕೊಳ್ಳುವಂತ ಬದಲಾವಣೆಗಳು ಇಲ್ಲ. ಇದ್ಯಾಕೆ ಹೀಗೆ?

ವಚನಗಳನ್ನು ಬಹು ವ್ಯಾಪಕವಾಗಿ ತಿದ್ದುತ್ತ ಬಂದಿದೆ. ಹಳೆ ಸಾಹಿತ್ಯ ಹಸ್ತಪ್ರತಿಯಿಂದ ಹಸ್ತಪ್ರತಿಗೆ ಬರುವಾಗ ಬದಲಾಗುವ ಸಹಜ ಗುಣವನ್ನು ಪಡೆದುಕೊಂಡೆ ಇದ್ದವು. ಇನ್ನು ವಚನಗಳ ಮುಕ್ತಗುಣ, ಜನಪರವಾಗಿದ್ದ ಗುಣ ಮೊದಲಾದವು ಇದಕ್ಕೆ ಇನ್ನೂ ಜೊತೆಯಾಗಿದ್ದವು. ಚಂಪೂವಿಗೆ ಅದರ ಅಕ್ಶರಚಂದಸ್ಸು ಒಂದು ದೊಡ್ಡ ಕಾವಲು, ಮುಂದೆ ಬರುವ ರಗಳೆ, ಶಟ್ಪದಿಗಳಿಗೆ ಅವುಗಳ ಮಾತ್ರಾಚಂದಸ್ಸು ಒಂದು ಕಾವಲು ಆಗಿತ್ತು. ಆದರೆ, ಅಕ್ಶರಚಂದಸ್ಸಿನಶ್ಟು ಬಿಗುವಾಗಿ ಅಲ್ಲ. ಕೀರ‍್ತನೆಗಳಿಗೆ ಸಂಗೀತ ಕಾವಲಾಗಿತ್ತು, ಆದರೆ ಮಾತ್ರಾಚಂದಸ್ಸಿಗಿಂತ ಇನ್ನೂ ಕಡಿಮೆ ಬಿಗುತನ ಹೊಂದಿತ್ತು. ಆದರೆ, ಮಾತೆ ಆಗಿದ್ದ ವಚನಗಳಿಗೆ ಈ ಯಾವ ಕಾವಲುಗಳೂ ಇಲ್ಲ. ಹಾಗಾಗಿ, ವಚನಗಳ ಬಾಶೆ ನಿರಂತರವಾಗಿ, ವ್ಯಾಪಕವಾಗಿ ಬದಲಾಗಿದೆ. ವಚನಗಳನ್ನು ಹದಿನಯ್ದನೆ ಶತಮಾನದಾಗ ವ್ಯವಸ್ತಿತವಾಗಿ ಸಂಪಾದಿಸುವ ಕೆಲಸ ಆಗಿದೆ. ಕನ್ನಡದಲ್ಲಿ ಸಂಪಾದನಾ ಸಾಹಿತ್ಯ ಎಂಬ ಸಾಹಿತ್ಯ ಪ್ರಕಾರವೆ ವಚನಗಳ ಸಂಪಾದನೆಗಾಗಿ ಬೆಳೆಯಿತು ಎಂಬುದನ್ನೂ ಇಲ್ಲಿ ಮುಕ್ಯವಾಗಿ ಗಮನಿಸಬೇಕು. ಕನ್ನಡದ ಬೇರೆ ಯಾವುದೆ ಸಾಹಿತ್ಯಕ್ಕೂ ಇಂತದೊಂದು ಬಾಗ್ಯ ಲಬಿಸಿರಲಿಕ್ಕಿಲ್ಲ. ಇನ್ನು ಇಪ್ಪತ್ತನೆಯ ಶತಮಾನದಲ್ಲಿ ಗ್ರಂತಸಂಪಾದನೆಯೂ ವಚನ ಬಾಶೆಯನ್ನು ಸಾಕಶ್ಟು ಬದಲಿಸಿದೆ. ಇದರೊಳಗೆ ಏನೂ ಅನುಮಾನವಿಲ್ಲ. ಅಚ್ಚರಿಯೆಂದರೆ ಬಸವಣ್ಣನ ವಚನಗಳನ್ನು ಸಂಪಾದಿಸಿ ಪ್ರಕಟಿಸಿರುವ ವಿವಿದ ವಿದ್ವಾಂಸರ ಪುಸ್ತಕಗಳನ್ನು ಇಟ್ಟುಕೊಂಡು ನೋಡಿದಾಗ ಸಾವಿರಾರು ವ್ಯತ್ಯಾಸಗಳು ಕಂಡುಬರುತ್ತವೆ. ಇದೊಂದೆ ಸಾಕು, ವಚನಗಳ ಬಾಶೆ ಎಶ್ಟೆಲ್ಲ ಬದಲಾಗಿರಬಹುದು ಎಂಬುದನ್ನು ತಿಳಿದುಕೊಳ್ಳುವುದಕ್ಕೆ. ಇನ್ನು, ಹಸ್ತಪ್ರತಿಗಳಲ್ಲಿ ಇರುವ ವಯಿವಿದ್ಯಮಯವಾದ ವಚನಗಳ ಬಾಶೆಯನ್ನು ಪರಿಗಣಿಸಿದರೆ ವಚನಗಳ ಬಾಶೆ ವಿಚಿತ್ರವಾಗಿ ಕಂಡೀತು.

ಇನ್ನೂ ಮುಂದುವರೆದು ಕನ್ನಡದ ಹಲವು ವಿದ್ವಾಂಸರೂ ಸೇರಿ ಸಾಮಾನ್ಯರೆಲ್ಲರು ವಚನಗಳನ್ನು ಆಡುನುಡಿಯಲ್ಲಿ ಬರೆದಿದೆ ಎಂದು ಹೇಳುತ್ತಾರೆ. ಆಡುನುಡಿ ಎಂದರೆ ಯಾರ ಆಡುನುಡಿ? ಯಾವ ಆಡುನುಡಿ? ವಚನ ಬರೆದವರೆಲ್ಲರೂ ಒಂದೆ ಊರಿನವರಾಗಿದ್ದರೆ? ಒಂದೆ ಕಾಲದವರಾಗಿದ್ದರೆ? ಒಂದೆ ಜಾತಿಯವರಾಗಿದ್ದರೆ? ಪ್ರಾದೇಶಿಕ ಒಳನುಡಿಗಳು ಇರುವುದುಕ್ಕೆ ಸಾವಿರಕ್ಕೂ ಮಿಕ್ಕಿದ ವರುಶಗಳ ಇತಿಹಾಸ ಕನ್ನಡಕ್ಕೆ ಇದೆ, ಕಾಲಕಾಲಕ್ಕೆ ಕನ್ನಡ ಬದಲಾಗುತ್ತಿರುವುದು ಎಲ್ಲರಿಗೂ ಗೊತ್ತಿದೆ, ಜಾತಿವಾರು ಬಾಶೆಗಳು ಇರುವುದೂ ಎಲ್ಲರಿಗೂ ಗೊತ್ತಿದೆ. ಹಾಗಾದರೆ, ವಚನಗಳನ್ನು ಬರೆಯುವುದಕ್ಕೆ ಇವರೆಲ್ಲ ಸೇರಿಕೊಂಡು ಮೀಟಿಂಗ್ ಮಾಡಿಕೊಂಡು ಒಂದು ಬಗೆಯ ಆಡುನುಡಿಯನ್ನು ಬಳಸುವುದಕ್ಕೆ ನಿರ‍್ದರಿಸಿದ್ದರೆ? ಹಾಗೆ ಆಡುನುಡಿಯಲ್ಲೆ ಬರೆಯುವುದಕ್ಕೆ ನಿರ‍್ದರಿಸಿದ್ದರೂ ಅದೂ ಕೂಡ ಒಂದುಮಟ್ಟಿಗೆ ಶಿಶ್ಟಕನ್ನಡ ಆಗಿಹೋಯಿತು ತಾನೆ? ಹೊಸಗಾಲದ ಶಿಶ್ಟಕನ್ನಡ ಹೀಗಿರಬೇಕು ಎಂದು ಆಲೂರರ ನೇತ್ರುತ್ವದಲ್ಲಿ ಆದುನಿಕ ವಿದ್ವಾಂಸರು ಚರ‍್ಚಿಸಿದ ಹಾಗೆ ವಚನಕಾರರು ಮಾಡಿದ್ದಿರಬಹುದೆ? ಸುಮಾರು ನೂರಾರು ವಚನಕಾರರು, ಹಲವಾರು ಪ್ರದೇಶಗಳಿಂದ ಬಂದವರು, ಬಿನ್ನ ಶತಮಾನಗಳಲ್ಲಿ ಹುಟ್ಟಿ ಬರೆದವರು ಎಲ್ಲರೂ ಒಟ್ಟಿಗೆ ಒಂದೆ ತಾನದಲ್ಲಿ ಹೊಸಗನ್ನಡದಲ್ಲಿಯೆ ಬರೆಯುತ್ತಾರೆ ಎಂಬುದು ನಂಬುವುದಕ್ಕೆ ತುಸು ಕಶ್ಟವೆ ಅನಿಸುತ್ತದೆ. ಹಾಗಾಗಿ, ಅಂದಂದಿಗೆ ವಚನಗಳನ್ನು ಬರೆದಾಗ ಯಾವ ಬಗೆಯ ಕನ್ನಡದಲ್ಲಿ ಬರೆಯಲಾಗಿತ್ತು ಎಂಬುದು ಒಂದು ಗೊತ್ತಿಲ್ಲದ ವಿಶಯವೆಂದೆನ್ನಬೇಕು.

ಇದೆಲ್ಲವನ್ನು ಮೀರಿ ಹಸ್ತಪ್ರತಿಕಾರರು ಹಲವೆಡೆ ತಿದ್ದಿಬರೆದೆ ಎಂದು ಹೇಳಿಕೊಂಡಿದ್ದಾರೆ. ಬಾಶೆಯನ್ನು ತಿದ್ದುವುದು ಅಪರಾದ ಎಂದು ಹಸ್ತಪ್ರತಿಕಾರರು ಎಂದೂ ಬಗೆದಂತಿಲ್ಲ. ಹಾಗಾಗಿ, ಈ ತಿದ್ದಿ ಬರೆಯುವುದು ಅಂದಿಗೆ ಸಹಜವಾಗಿತ್ತು. ಸಹಜವಾಗಿ ಬಾಶೆ ಬದಲಾಗುತ್ತಾ ಬಂದಿದೆ.

ಆದ್ದರಿಂದ, ಸದ್ಯಕ್ಕೆ ವಚನಗಳನ್ನು ಬರೆದ ಬಾಶೆ ಇಂದು ಕಳೆದುಹೋಗಿದೆ, ಇಲ್ಲವೆ ಬದಲಾಗಿದೆ ಎಂಬುದನ್ನು ಒಪ್ಪಿಕೊಳ್ಳೋಣ.

ಹಾಗಾದರೆ, ಬಸವಣ್ಣ ಯಾವ ಕಾಲದ ಕನ್ನಡದಲ್ಲಿ ಬರೆದ ಎಂಬುದು ಒಂದು ಗೊಂದಲದ ವಿಚಾರ, ಇಲ್ಲವೆ ಸ್ಪಶ್ಟನೆ ಇಲ್ಲದ ವಿಚಾರ. ಈಗ ವಿವಿದ ಪುಸ್ತಕಗಳಲ್ಲಿ ಕನ್ನಡದ ವಿದ್ವಾಂಸರು ಪ್ರಕಟಿಸಿರುವಂತೆ ನುಡಿದೊಡೆ, ನುಡಿದಡೆ, ನುಡಿದರೆ ಈ ಮೂರು ರೂಪಗಳಲ್ಲಿ ಯಾವುದು ಬಸವಣ್ಣ ಬರೆದದ್ದು? ಇದುವರೆಗೆ ಚರ‍್ಚಿಸಿದ ಹಲವು ವಿಚಾರಗಳು ಹೆಚ್ಚು ಗೊಂದಲಕಾರಿಯಾಗಿದ್ದರೆ ಅವುಗಳನ್ನು ನಿದಾನವಾಗಿ ಅರ‍್ತ ಮಾಡಿಕೊಳ್ಳೋಣ. ಆದರೆ, ಬಸವಣ್ಣನನ್ನು ಪ್ರೀತಿಸುವ ಕನ್ನಡಿಗರು ಇಲ್ಲಿ ಕೊಟ್ಟಿರುವ ಈ ಮೂರು ರೂಪಗಳಲ್ಲಿ ಯಾವುದು ಬಸವಣ್ಣ ಬರೆದಿರಬಹುದು ಎಂಬ ಅನುಮಾನವನ್ನಾದರೂ ಅರ‍್ತ ಮಾಡಿಕೊಳ್ಳೋಣ. ಈ ಮೂರೂ ರೂಪಗಳನ್ನು ಬಸವಣ್ಣ ಬಳಸಿದ್ದಾನೆ ಎಂದಂತೂ ಹೇಳಲಿಕ್ಕೆ ಆಗಲಿಕ್ಕಿಲ್ಲ. ಬಸವಣ್ಣ ಮೊದಲಾದ ಇತರ ಎಲ್ಲ ವಚನಕಾರರ ಬಾಶೆಯಲ್ಲಿ ಕಂಡುಬರುವ ಈ ಬಗೆಯ ನೂರಾರು ವ್ಯತ್ಯಾಸಗಳ ನಡುವೆ ಯಾವುದು ವಚನಕಾರರು ಬರೆದಿರುವುದು? ಯಾವುದು ನಂತರದವರು ಸೇರಿಸಿದ್ದು?

ಇಲ್ಲಿ, ಒಂದು ವಿಚಾರವನ್ನು ನೋಡೋಣ. ಜನಪದ ಸಾಹಿತ್ಯದಲ್ಲಿ ರೂಪ ಮುಕ್ಯ, ಮೂಲ ಅಲ್ಲ. ಬಸವಣ್ಣನೂ ಸೇರಿ ವಚನಕಾರರು ಕೂಡ ಹೀಗೆ ಜನಪದವೆಂದು ಬಗೆವುದಾದರೆ ಜನಪದ ಸಾಹಿತ್ಯದ ಬಾಶೆ ಹೇಗೆ ನಿರಂತರ ಬದಲಾಗಿದೆಯೊ ಹಾಗೆಯೆ ವಚನಗಳ ಬಾಶೆಯೂ ಕೂಡ ಬದಲಾಗಿದೆ ಎಂಬುದನ್ನು ಒಪ್ಪಿಕೊಳ್ಳೋಣ. ಮುಂದುವರೆದು, ನಡುಗಾಲದ ಕರ‍್ನಾಟಕವನ್ನು ತಿಳಿದುಕೊಳ್ಳುವುದಕ್ಕೆ ವಚನಗಳ ಕನ್ನಡ ಹೆಚ್ಚು ಸಹಾಯ ಮಾಡುವುದಿಲ್ಲ ಎಂಬುದನ್ನೂ ತಿಳಿದುಕೊಳ್ಳಬೇಕಾಗುತ್ತದೆ. ವಚನಗಳ ವಸ್ತು ಮೊದಲಾದವು ಸಹಾಯ ಮಾಡುತ್ತವೆ.

ವಚನಗಳ ಬಾಶೆ ಬದಲಾಗಿದೆ ಎಂದ ಮಾತ್ರಕ್ಕೆ ವಚನಗಳ ಮಹತ್ವ ಕಡಿಮೆ ಆಗುವುದಿಲ್ಲ. ಬದಲಿಗೆ ಅವು ಅಶ್ಟು ಮಟ್ಟಿಗೆ ಜನಪರವಾಗಿದ್ದವು ಎಂಬುದನ್ನು ಎತ್ತಿ ಹೇಳುತ್ತವೆ. ಹುಯಿಲಗೋಳರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಶ್ಟೊ ಪಟ್ಯಗಳನ್ನು ಪಡೆದುಕೊಂಡು ಬೆಳೆಯುವುದಕ್ಕೆ ಅದರ ಜನಪ್ರಿಯತೆಯೆ ಮುಕ್ಯ ಕಾರಣ. ಇಲ್ಲಿ, -ಒಡೆ, -ಅಡೆ, -ಅರೆ ರೂಪಗಳು ಇಶ್ಟೆಲ್ಲ ವಿಚಾರಗಳಿಗೆ ದಾರಿ ತೆರೆಯುತ್ತವೆ ಎಂಬುದು ಮುಕ್ಯ. ಇಲ್ಲಿ ಮುಕ್ಯವಾಗಿ ಇರುವುದು, ಬಾಶೆಯ ಬೆಳವಣಿಗೆಯನ್ನು ಅದ್ಯಯನ ಮಾಡುವುದಕ್ಕೆ ಈ ರೂಪಗಳು ಸಹಾಯ ಮಾಡುತ್ತವೆ ಎಂಬುದು.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...