ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ

Date: 22-01-2023

Location: ಬೆಂಗಳೂರು


“ನಿಸ್ವಾರ್ಥವಾಗಿ ಪ್ರಾಮಾಣಿಕವಾಗಿ ಕನ್ನಡದ ಸೇವೆಯನ್ನು ಮಾಡುವ ಮನಸುಗಳು ಕಡಿಮೆ. ಕೇವಲ ಪ್ರಚಾರಕ್ಕಾಗಿಯೋ, ಹಣಕ್ಕಾಗಿಯೋ, ಖ್ಯಾತಿಗಾಗಿಯೋ ಶಾಲು ಹೊದ್ದು ಸರ್ಕಲ್ಲುಗಳಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಏನೇನೋ ಘೋಷಣೆ ಕೂಗಿ ಗದ್ದಲ ಮಾಡುವ ಅನೇಕರಲ್ಲಿ ಇವರೊಬ್ಬರು ವಿಭಿನ್ನವಾದ ಕನ್ನಡ ಸೇವಕ. ಗದಗ ಜಿಲ್ಲೆಯ ಕಳಸಾಪುರ ಗ್ರಾಮದ ಮಲ್ಲಿಕಾರ್ಜುನ ಖಂಡಮ್ಮನವರ ಅವರು ಅರವತ್ತೆಂಟರ ವಯಸ್ಸಲ್ಲೂ ತುಂಬು ಉತ್ಸಾಹದಿಂದ ಕನ್ನಡ ಹಾಗೂ ವಚನ ಸಾಹಿತ್ಯದ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ” ಎನ್ನುತ್ತಾರೆ ಲೇಖಕಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ಮಲ್ಲಿಕಾರ್ಜುನ ಖಂಡಮ್ಮನವರ ಅವರ ಕನ್ನಡ ಪ್ರೇಮದ ಕುರಿತು ಬರೆದಿದ್ದಾರೆ...

ನಮ್ಮ ಕನ್ನಡ ನಮ್ಮ ಕನ್ನಡಿಗರಿಗೆ ಮಹೋನ್ನತವಾದದ್ದು. ಕನ್ನಡದ ಸೇವೆ ಅತ್ಯುನ್ನತವಾದದ್ದು. ಆದರೆ ನಿಸ್ವಾರ್ಥವಾಗಿ ಪ್ರಾಮಾಣಿಕವಾಗಿ ಕನ್ನಡದ ಸೇವೆಯನ್ನು ಮಾಡುವ ಮನಸುಗಳು ಕಡಿಮೆ. ಕೇವಲ ಪ್ರಚಾರಕ್ಕಾಗಿಯೋ, ಹಣಕ್ಕಾಗಿಯೋ, ಖ್ಯಾತಿಗಾಗಿಯೋ ಶಾಲು ಹೊದ್ದು ಸರ್ಕಲ್ಲುಗಳಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಏನೇನೋ ಘೋಷಣೆ ಕೂಗಿ ಗದ್ದಲ ಮಾಡುವ ಅನೇಕರಲ್ಲಿ ಇವರೊಬ್ಬರು ವಿಭಿನ್ನವಾದ ಕನ್ನಡ ಸೇವಕ. ಹಾಗೇನೇ ಬಸವತತ್ವದ ಪ್ರಚಾರಕ. ಗದಗ ಜಿಲ್ಲೆಯ ಕಳಸಾಪುರ ಗ್ರಾಮದ ಮಲ್ಲಿಕಾರ್ಜುನ ಖಂಡಮ್ಮನವರ ಅವರು ಅರವತ್ತೆಂಟರ ವಯಸ್ಸಲ್ಲೂ ತುಂಬು ಉತ್ಸಾಹದಿಂದ ಕನ್ನಡ ಹಾಗೂ ವಚನ ಸಾಹಿತ್ಯದ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಮಲ್ಲಿಕಾರ್ಜುನ ಅವರ ಮನೆ ಸಣ್ಣದಿದ್ದರೂ ಕನ್ನಡತನ ತುಂಬಿಕೊಂಡಿರುವ ಅವರ ಮನಸ್ಸು ಬಲುದೊಡ್ಡದು. ಮನೆಯ ತುಂಬೆಲ್ಲ ಕನ್ನಡದ ಕಂಪು, ಬಸವಣ್ಣವರ ವಚನ ಸಾಹಿತ್ಯವನ್ನು ಮನೆ ಗೋಡೆಯ ಅಡಿಗಡಿಗೂ ಕಾಣಬಹುದಾಗಿದೆ. ಮನೆಯ ಮುಂದೆ, ಮನೆಯ ಮೇಲೆ ಕನ್ನಡದ ಬಾವುಟ ರಾರಾಜಿಸುತ್ತಿದೆ. ಅಷ್ಟೇ ಅಲ್ಲದೆ ಅವರು ಹಾಕಿಕೊಳ್ಳುವ ಬಟ್ಟೆ, ಟೋಪಿ, ಜೇಬಿನಲ್ಲಿರುವ ಪೆನ್ನುಗಳೂ ಸಹ ಅವರ ದೇಶಭಕ್ತಿ, ಕನ್ನಡದ ಅಭಿಮಾನವನ್ನು ತೇಯ್ದ ಗಂಧದ ಪರಿಮಳದಂತೆ ಎಲ್ಲೆಲ್ಲಿಯೂ ಸೂಸುತ್ತವೆ. ಗಂಗಪ್ಪ ಸಾವಕ್ಕ ದಂಪತಿಗಳ ಮಗನಾದ ಮಲ್ಲಿಕಾರ್ಜುನ ಅವರ ಜೀವನಯಾನದ ಬಗ್ಗೆ ಅವರಾಡಿದ ಮಾತುಗಳನ್ನು ಓದಿಕೊಳ್ಳಿ.

'ವಚನ ಸಾಹಿತ್ಯದ ಬಗ್ಗೆ ಆಗೆಲ್ಲ ನನಗೆ ಏನೂ ಗೊತ್ತಿರಲಿಲ್ಲ. ಆದರೆ ಬಸವಣ್ಣನವರ ಫೋಟೋ ಕಂಡರೆ ಎಲ್ಲಿಲ್ಲದ ಪ್ರೀತಿ ಅದು ಎಲ್ಲೇ ಸಿಕ್ಕರೂ ಎತ್ತಿಟ್ಟುಕೊಳ್ಳುತ್ತಿದ್ದೆ. ಅವತ್ತು ದುಡಿದರೇನೇ ಅವತ್ತು ಊಟ ಎನ್ನುವ ಪರಿಸ್ಥಿತಿ ಇತ್ತು. ತೀರ ಬಡತನವಿದ್ದದ್ದರಿಂದ ನಾಲ್ಕನೆಯ ತರಗತಿಗೆ ಶಾಲೆ ಬಿಡುವಹಾಗಾಯ್ತು. ನಮ್ಮ ತಂದೆ ಬೇರೆಯವರ ಬಳಿ ಹಣ ತೆಗೆದುಕೊಂಡು ನನ್ನನ್ನು ಜೀತಕ್ಕೆ ಇರಿಸಿದ್ರು. ಸಾಲ ತೀರಿದ ನಂತರ ಮತ್ತೆ ಹಣ ತೆಗೆದುಕೊಂಡರೆ ಮತ್ತದೇ ಜೀತ. ಈ ಪದ್ಧತಿಯಿಂದ ಮುಕ್ತಿ ಹೊಂದುವುದು ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಅಪ್ಪನಿಗೆ ನಾನು ಹೊರಗೆಲ್ಲಾದರೂ ಕೆಲಸ ಮಾಡಿ ನಿಮ್ಮನ್ನೆಲ್ಲ ನೋಡಿಕೊಳ್ಳುತ್ತೇನೆ ಎಂದು ಹೇಳಿ ಅವರಿಗೆ ಧೈರ್ಯ ತುಂಬಿ ನರಗುಂದದ ಸಮೀಪ ಡ್ಯಾಮ್ ಕಟ್ಟುವಲ್ಲಿ ಕೆಲಸಕ್ಕೆ ಸೇರಿಕೊಂಡೆ. ಕೆಲಸ ಮಾಡಿದರೇನೇ ಊಟ ಎನ್ನುವ ಹಾಗಿತ್ತು ಬದುಕು. ಅಲ್ಲಿ ನನ್ನ ಕೆಲಸ ನೋಡಿದ ಆಫೀಸರ್ ಒಬ್ಬರು ತುಂಬ ಒಳ್ಳೆಯವನಂತೆ ಕಾಣುತ್ತೀಯ ಕಷ್ಟಪಟ್ಟು ಕೆಲಸ ಮಾಡ್ತೀಯ ನಮ್ಮ ಮನೆಗೆ ಬಂದುಬಿಡು. ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡು ಇರು ದಿನಕ್ಕೆ 75 ಪೈಸೆ ಸಂಬಳ ಕೊಡುತ್ತೇನೆಂದು ಕರೆದುಕೊಂಡು ಹೋದರು. ಬಾಲ್ಯದಲ್ಲಿ ಅವರ ಮನೆಗೆ ಹೋದವನು ಅವರ ಮನೆಯಲ್ಲಿ ಮಕ್ಕಳನ್ನು ಶಾಲೆಗೆ ಬಿಡೋದು, ಊಟ ಕೊಟ್ಟು ಬರೋದು, ಅಡಿಗೆ ಮಾಡುವುದು, ರೊಟ್ಟಿ ಮಾಡುವುದು, ಮನೆ ಸ್ವಚ್ಚ ಮಾಡುವುದು, ಡ್ರೈವಿಂಗ್ ಹೀಗೆ ಎಲ್ಲ ಕೆಲಸ ಮಾಡುತ್ತ ಹನ್ನೊಂದು ವರ್ಷಗಳು ಕಳೆದದ್ದು ಗೊತ್ತಾಗಲೇ ಇಲ್ಲ. ಅಷ್ಟು ಹೊತ್ತಿಗೆ ಮನೆಯ ಯಜಮಾನರಿಗೆ ರಿಟೈರ್ಡ್ಡ್ ಆಯ್ತು. ಆಗ ಅವರು ನನ್ನ ಬಗ್ಗೆ ಚಿಂತೆ ಮಾಡ್ತಿದ್ರು. ಚಿಕ್ಕ ಹುಡುಗನನ್ನು ಕರೆದುಕೊಂಡು ಬಂದು ಇಷ್ಟು ವರ್ಷ ಕೆಲಸ ಮಾಡಿಸಿಕೊಂಡಿದ್ದೇವೆ. ಅವನ ಜೀವನಕ್ಕೆ ಏನಾದರೂ ಆಧಾರ ಮಾಡಬೇಕು. ಹಾಗಾಗಿ ಒಂದು ಎಕರೆ ಹೊಲ ಅವನ ಹೆಸರಿಗೆ ಬರೆದುಬಿಡೋಣ ಅಂತ ಮಾತಾಡುತ್ತಿದ್ದದ್ದನ್ನ ಕೇಳಿ ಆ ದಿನ ರಾತ್ರಿಯೆ ಹಾಸಿಗೆಯ ಮೇಲೆ ನನ್ನನ್ನು ಎಲ್ಲೂ ಹುಡುಕಬೇಡಿ ಇಲ್ಲಿಯವರೆಗೆ ನಾನು ಹೊಟ್ಟೆ ಪಾಡಿಗಾಗಿ ಕೆಲಸ ಮಾಡಿದ್ದೇನೆ. ನಿಮ್ಮ ಆಸ್ತಿಗೆ ನಾನು ವಾರಸುದಾರನಾಗುವುದು ನಿಮ್ಮ ಮಕ್ಕಳಿಗೆ ನಾನು ಮೋಸ ಮಾಡಿದಂತಾಗುತ್ತದೆ ಎಂದು ಪತ್ರದಲ್ಲಿ ಬರೆದಿಟ್ಟು ಹೊರಗೆ ಬಂದುಬಿಟ್ಟೆ'

'ನಂತರ ತೋಂಟದ ಸಿದ್ದಲಿಂಗ ಶ್ರೀಗಳ ಕಾರ್ಯಕ್ರಮವೊಂದರಲ್ಲಿ ಸ್ವಾಮಿಜಿಯವರನ್ನು ಭೇಟಿಯಾಗಿದ್ದೆ. ಹಾಗೆ ಅವರ ಸಂಪರ್ಕ ಬೆಳೆಯುತ್ತ ಹೋಯಿತು. ಸ್ವಾಮಿಯವರ ಆದೇಶದ ಮೇರೆಗೆ ಊರಿಂದ ಊರಿಗೆ, ಮನೆ ಮನೆಗೆ ಭೀಕ್ಷಾಟನೆಗೆ ಹೋಗುತ್ತಿದ್ದೆ. ಪ್ರತಿದಿನ ಒಂದೊಂದು ಗ್ರಾಮದಲ್ಲಿ ಶ್ರಮದಾನ, ಇಷ್ಟಲಿಂಗ ಪೂಜೆ, ಪ್ರವಚನ ನಡೆಯುತ್ತಿತ್ತು. ಅಲ್ಲಿ ನನ್ನ ಕೆಲಸವನ್ನು ಗುರುತಿಸಿದ ಶ್ರೀಗಳು ನನ್ನನ್ನು ತುಂಬ ಪ್ರೀತಿ ಆದರಗಳಿಂದ ಕಾಣುತ್ತಿದ್ದರು. ಅಲ್ಲಿಂದ ಹೋದವನೆ ಲೆಕ್ಕ ಪರಿಶೋಧನೆ ಇಲಾಖೆಯಲ್ಲಿ ಡಿ ಗ್ರೂಪ್ ನೌಕರರ ಹುದ್ದೆಗೆ ಅರ್ಜಿ ಹಾಕಿದ್ದೆ. ದೇವರ ಅನುಗ್ರಹದಿಂದ ಅಲ್ಲಿ ಕೆಲಸ ಸಿಕ್ಕಿತು. 1995 ರ ಜೂನ್ ತಿಂಗಳಲ್ಲಿ ಕೂಡಲ ಸಂಗಮದಲ್ಲಿ ಶರಣ ಮೇಳ ನಡೆಯುತ್ತಿತ್ತು. ಅಲ್ಲಿ ಲಿಂಗನಾದ ಸ್ವಾಮಿಗಳ ಪ್ರವಚನದಿಂದ ಪ್ರಭಾವಿತನಾಗಿ ನಮ್ಮೂರಿಗೆ ಬಂದು ರಾಷ್ಟ್ರೀಯ ಬಸವದಳ ಉದ್ಘಾಟನೆ ಮಾಡಿಕೊಡಿ ಅಂದಾಗ ಅವರು ಖುಷಿಯಿಂದ ಒಪ್ಪಿಕೊಂಡರು. ತಿಂಗಳಾಂತ್ಯಕ್ಕೆ ಪ್ರವಚನ ಮಾಡುತ್ತಲೇ ಲಿಂಗೈಕ್ಯರಾದರು. ಅವರ ನೆನಪಿನಲ್ಲಿ ನಮ್ಮ ಊರಾದ ಕಳಸಾಪುರ ಗ್ರಾಮದಲ್ಲಿ ಬಸವಕೇಂದ್ರವನ್ನು ಸ್ಥಾಪನೆ ಮಾಡಿದೆ. ಪ್ರತಿ ಭಾನುವಾರ ಸಂಜೆ 7 ರಿಂದ 9 ರವರೆಗೆ ಪ್ರಾರ್ಥನೆ, ವಚನ ವಿಶ್ಲೇಷಣೆಯನ್ನು ನಿರಂತರವಾಗಿ ನಡೆಸುತ್ತ ಬಂದಿದ್ದೇನೆ. 1982ರಲ್ಲಿ ನಾನು ಅನಿರೀಕ್ಷಿತವಾಗಿ ಮೈಸೂರಿಗೆ ಹೋಗಿದ್ದೆ. ಅಲ್ಲಿ ವಿ. ಕೃ. ಗೋಕಾಕ್ ವರದಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದರು. ನಾನು ಕೂಡ ಅದರಲ್ಲಿ ಭಾಗಿಯಾದೆ. ಆಗ ಪೋಲಿಸಿನವರು ಬಂದು ಒಮ್ಮಿಂದೊಮ್ಮೆಲೆ ನಮ್ಮನ್ನೆಲ್ಲ ಠಾಣೆಗೆ ಕರೆದುಕೊಂಡು ಹೋದರು. ಆಗ ಕನ್ನಡ ಚಿತ್ರರಂಗದ ಹಿರಿಯ ನಟ ಡಾ. ರಾಜ್ ಕುಮಾರ್ ಅವರು ಬಂದು ನಮ್ಮನ್ನೆಲ್ಲ ಆ ಬಂಧನದಿಂದ ಬಿಡಿಸಿದರು. ಡಾ. ರಾಜ್ ಅವರ ಮಾತಿನಿಂದ ಪ್ರಭಾವಿತನಾಗಿ ನನ್ನಲ್ಲಿ ಕನ್ನಡಾಭಿಮಾನ ಬೆಳೆಯುತ್ತ ಹೊಯ್ತು. ಅಂದಿನಿಂದ ನನ್ನಿಂದ ಸಾಧ್ಯವಾದಷ್ಟು ಕನ್ನಡ ಸೇವೆ ಮಾಡುತ್ತಿದ್ದೇನೆ' ಎಂದು ಖುಷಿಯಿಂದ ಹೇಳಿದರು.

ಅಂದಿನಿಂದ ಕನ್ನಡ ಸೇವೆಗಾಗಿ, ಬಸವತತ್ವ ಪ್ರಚಾರಕ್ಕಾಗಿ ದೇಶಾಭಿಮಾನ ಮೂಡಿಸುವ ಸಲುವಾಗಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಸಂಪೂರ್ಣವಾಗಿ ತಮ್ಮನ್ನು ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಹೆಸರು ಗದಗ ಜಿಲ್ಲೆಯಾದ್ಯಾಂತ ಎಲ್ಲರಿಗೂ ಚಿರಪರಿಚಿತ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ಬಸವ ಜಯಂತಿಯಂತಹ ವಿಶೇಷ ದಿನಗಳಲ್ಲಿ ತಮ್ಮ ದ್ವಿಚಕ್ರ ವಾಹನವನ್ನು ಸಿಂಗರಿಸಿಕೊಂಡು ನಗರದ ತುಂಬೆಲ್ಲ ಭಿತ್ತಿ ಪತ್ರಗಳನ್ನು ಹಂಚುತ್ತ ಕನ್ನಡದ ಕಂಪನ್ನು ಹಬ್ಬಿಸುತ್ತಿದ್ದಾರೆ. ಇವರು ನಾಡಿನ ಜನರ ಅಭಿವೃದ್ಧಿಗಾಗಿ, ಅವರ ಹಕ್ಕುಗಳ ಉಳಿವಿಗಾಗಿ ಅವಿರತವಾದ ಹೋರಾಟಗಳ ಮೂಲಕ, ಜನರಿಗೆ ತಿಳುವಳಿಕೆ ಮೂಡಿಸುವ ಮೂಲಕ ಕಳಸಾಪುರ ಗ್ರಾಮದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ರೀತಿಯ ಸಮಾಜ ಸೇವೆಯಿಂದಾಗಿ ಇವರಿಗೆ ಕದಂಬ ಸೇವಾರತ್ನ ಪ್ರಶಸ್ತಿ, ಭಾವೈಕ್ಯ ಸಿರಿ ಪ್ರಶಸ್ತಿ ಸೇರಿದಂತೆ ಹಲವಾರು ಸನ್ಮಾನ, ಪುರಸ್ಕಾರಗಳು ಲಭಿಸಿವೆ. ಅಲ್ಲದೇ ಇವರ ಹೆಂಡತಿ ಅನುಸೂಯ, ಮಕ್ಕಳು, ಮೊಮ್ಮಕ್ಕಳು ಮನೆಯ ಎಲ್ಲರೂ ಇವರಿಗೆ ಬೆಂಬಲವಾಗಿ ನಿಂತಿದ್ದಾರೆ ಪ್ರೋತ್ಸಾಹವೆಂಬಂತೆ ಬಸವತತ್ವವನ್ನು ಪಾಲನೆ ಮಾಡುತ್ತಿದ್ದಾರೆ.

ಈ ಇಳಿ ವಯಸ್ಸಿನಲ್ಲೂ ಕನ್ನಡತನವನ್ನು ವಚನ ಸಾಹಿತ್ಯವನ್ನು ಊರೂರಿಗೂ ಮನೆಮನೆಗೂ ತಲುಪಿಸುತ್ತ ಕನ್ನಡವನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ಮಲ್ಲಿಕಾರ್ಜುನ ಅವರು ನಮಗೆಲ್ಲ ಮಾದರಿಯಾಗಿದ್ದಾರೆ. ಇವರಂತಹ ಪ್ರಾಮಾಣಿಕ ಸೇವಕರು ಹೆಚ್ಚಾಗಲಿ ಎಂದು ಹಾರೈಸೋಣ. ಕನ್ನಡ ಮಾತಾಡೋಣ, ಕನ್ನಡ ಬಳಸೋಣ, ಕನ್ನಡ ಬೆಳಸೋಣ.

ಧನ್ಯವಾದಗಳೊಂದಿಗೆ
ನಿರೂಪಣೆ : ಜ್ಯೋತಿ. ಎಸ್

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...