Date: 21-12-2023
Location: ಬೆಂಗಳೂರು
"ನೇಮಿಚಂದ್ರನ ಕಾವ್ಯದಲ್ಲಿ ಹರಿವಂಶ ಕುರುವಂಶಗಳ ಕತೆ, ನೇಮಿವೃತ್ತಾಂತ, ಭಾಗವತ ಕಥನ ಹೀಗೆ ಹಲವು ಕಥೆಗಳಿವೆ. ಹಲವು ಭವಾವಳಿ-ವಂಶಾವಳಿಗಳ ಕಥನಗಳು ಸೇರಿಕೊಂಡಿವೆ. ಹೀಗಾಗಿ ಇದೊಂದು ಸಂಕೀರ್ಣ ಕಥನ. ಹಾಗಾಗಿಯೆ ಇಲ್ಲಿ ಹುಟ್ಟು ಸಾವು, ಸಂಚಾರ, ಕಾಮ, ವೈರಾಗ್ಯ, ಪರೀಷಹಗಳ ನಿಗ್ರಹ ಹೀಗೆ ಅನೇಕ ಸಂಗತಿಗಳಿವೆ,” ಎನ್ನುತ್ತಾರೆ ಡಾ. ರಾಮಲಿಂಗಪ್ಪ ಟಿ.ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ‘ನೇಮಿಚಂದ್ರ ಮತ್ತು ದೇಸಿ ಅನುಸಂಧಾನ’ ಕುರಿತು ಬರೆದಿದ್ದಾರೆ.
ಮಾನವನ ಮೂಲಭೂತ ವರ್ತನೆಗಳನ್ನು ಉದಾಹರಣೆಗೆ ಭೋಗ, ಅಧಿಕಾರದಾಹ, ಸಾವು, ರ‍್ಮಾಧರ್ಮ ಜಿಜ್ಞಾಸೆ ಇತ್ಯಾದಿಗಳನ್ನು ಚರ್ಚೆಗೆ ಗುರಿಪಡಿಸುವ ಕೆಲಸವನ್ನು ಮತ್ತು ಜನನಡಾವಳಿ, ಮೌಲ್ಯ ಪ್ರಜ್ಞೆ, ರಾಜನೀತಿಗಳನ್ನು ಕಾವ್ಯಶರೀರದ ಮೂಲಕವೇ ಪ್ರಭಾವಿಸುವ ಕೆಲಸವನ್ನು ಜೈನ ಕವಿಗಳೆಲ್ಲ ಮಾಡಿದಂತೆ ನೇಮಿಯೂ ಮಾಡಿದ್ದಾನೆ. ಆಶ್ರಯದಾತ ಅರಸನನ್ನು ಕಾವ್ಯನಾಯಕನೊಂದಿಗೆ ಸಮೀಕರಿಸಿ ಹೇಳುವ ಕಾವ್ಯಕ್ರಮವನ್ನು ನೇಮಿಚಂದ್ರ ವಿರೋಧಿಸುತ್ತಾನಾದರೂ ಸಾಮಾಜಿಕ ವರ್ತಮಾನವನ್ನು ಕಥನಶರೀರದಲ್ಲಿ ಬೆಸೆಯುವ ಕೆಲಸವನ್ನು ಈತ ಚೆನ್ನಾಗಿಯೆ ಮಾಡಿದ್ದಾನೆ. ಅಂದರೆ ಸಂಸ್ಕೃತ ಮಹಾಕಥನ ಕಳೇಬರಗಳ ಒಳಕ್ಕೆ ಸ್ಥಳೀಯ ತಲ್ಲಣಗಳನ್ನು ಸ್ಥಳೀಯ ಸಂವೇದನೆಗಳನ್ನು ಒಳಸೇರಿಸುವ ಕೆಲಸವನ್ನು ಇವನ ಕಾವ್ಯಗಳು ಚೆನ್ನಾಗಿ ಮಾಡಿವೆ. ಹಾಗಾಗಿ ಮಾರ್ಗ-ದೇಸಿ, ಲೌಕಿಕ-ಆಗಮಿಕ, ಸ್ಥಳೀಯ-ಪರಕೀಯ, ವಸ್ತುಕ-ವರ್ಣಕ, ಪುರಾಣ-ಚರಿತ್ರೆ ಹೀಗೆ ಎಲ್ಲವೂ ಒಟ್ಟಿಗೆ ಮೇಳೈಸುವ ಕಥನಗಳನ್ನು ನಮ್ಮವರು ಕಟ್ಟಿದ್ದಾರೆ. ಹೀಗಾಗಿ ಪ್ರಜ್ಞೆಯ ನೆಲೆ, ಸಂವೇದನೆಯ ನೆಲೆ, ಭಾಷಿಕ ನೆಲೆ, ಛಾಂದಸಿಕ ನೆಲೆ, ವಸ್ತು ಸಾಮಗ್ರಿಯ ನೆಲೆ, ಉಪಮೆ-ರೂಪಕ-ವರ್ಣನೆ-ಅಲಂಕಾರಾದಿ ಮೀಮಾಂಸೆಯ ನೆಲೆ, ಶಕುನಗಳು, ಪವಾಡ-ಫ್ಯಾಂಟಸಿ-ಮಾಂತ್ರಿಕ ವಾಸ್ತವ ಹೀಗೆ ಯಾವ ನೆಲೆಯಿಂದ ನೋಡಿದರೂ ದೇಸೀಯತೆ ಎಂಬುದು ಕಾವ್ಯದಲ್ಲಿ ಪ್ರತ್ಯೇಕಿತವಾದ ಸಂಗತಿಯಲ್ಲ. ದೇಸಿ ಎನ್ನುವುದು ಜೈನ ಗ್ರಂಥಗಳಲ್ಲಿ ಬೆರೆತು ಹೋಗಿರುವ ಅಂತಸ್ಥಗೊಂಡಿರುವ ಹಲವು ಅಂಶಗಳಲ್ಲಿ ಒಂದು ಅಂಶ. ಹಾಗೆಯೆ ಹಲವು ಅಂಶಗಳಲ್ಲಿ, ಹಲವು ಕಾವ್ಯಾಂಗಗಳಲ್ಲಿ ಇರುವ ಶೈಲಿಯೂ ಹೌದು. ಅದರ ಬಗೆಗೆ ಮಾತ್ರ ಮಾತನಾಡುವುದೆಂದರೆ ಅಂತಹ ಅಂತಸ್ಥಗೊಂಡಿರುವ ನೆಲೆಗಳನ್ನು ಬಿಡಿ ಬಿಡಿಯಾಗಿ ಆರಿಸಿ ಕಟ್ಟಿಕೊಂಡು ಒಂದು ಚೌಕಟ್ಟಿಗೆ ತರುವುದೇ ಆಗಿದೆ.
ಹಾಗೆ ಮಾಡುವಾಗ ನಮ್ಮ ಒಂದೊಂದು ನಿಲುವಿಗು ವಿರುದ್ಧವಾದ ಸಂಗತಿಗಳು ದುತ್ತನೆ ಕಾವ್ಯದಿಂದಲೆ ಎದ್ದು ಬರುತ್ತಿರುತ್ತವೆ. ಆ ಎಲ್ಲ ಇತರ-ವಿರುದ್ಧ ಸಂಗತಿಗಳನ್ನು ಅಂಚಿಗೆ ಸರಿಸುತ್ತ ದೇಸೀಯತೆಯನ್ನು ಮಾತ್ರವೆ ಗಮನಿಸುವುದೆಂದರೆ ಒಟ್ಟಂದದಲ್ಲಿ ಕಾವ್ಯದ ಆಂಶಿಕ ಗ್ರಹಿಕೆ ಮಾತ್ರವೆ ಆಗಬಹುದು.
ಇಲ್ಲೆ ಇನ್ನೊಂದು ಅಂಶ ಸ್ಪಷ್ಟಪಡಿಸಿಕೊಳ್ಳಬೇಕು. ಜೈನ ಕಾವ್ಯಗಳ ದೇಸೀಯತೆ ಅಂದರೆ ಜೈನ ದೇಸೀಯತೆ ಅಲ್ಲ. ಸ್ಥಳೀಯ ಭಾಷೆಯ, ಸ್ಥಳೀಯ ಪ್ರದೇಶದ, ಸ್ಥಳೀಯ ಸಂಸ್ಕೃತಿಯ ದೇಸೀಯತೆ. ದೇಸಿ ಅಂದರೆ ಏನೆಂದು ಹಾಗೆ ಒಂದು ಮಾತಿನಲ್ಲಿ ಹೇಳಲು ಆಗುವುದಿಲ್ಲ. ಅದು ಬಹುರೂಪಿಯಾದುದು ಮತ್ತು ನಿತ್ಯ ಚಲನಶೀಲವಾದುದು. ಹಾಗೆಯೆ ನಿತ್ಯ ಸಾಪೇಕ್ಷವಾದುದು. ಹಾಗಾಗಿ ಒಂದು ಕ್ಷಣ ಯಾವುದೋ ವಿಚಾರದ ಎದುರು ದೇಸಿ ಆದ ಸಂಗತಿಯು ಇನ್ನೊಂದು ವಿಚಾರದ ಸಾಂಗತ್ಯದಲ್ಲಿ ಮಾರ್ಗವೆ ಆಗಬಹುದು. ದೇಸೀಯತೆಯನ್ನು ಗುರುತಿಸಿಕೊಳ್ಳುವಿಕೆ ಮತ್ತು ಆ ಮೂಲಕವೆ ದೇಸೀಯತೆಯ ವ್ಯಾಖ್ಯಾನವನ್ನು ಈ ಲೇಖನದುದ್ದಕ್ಕು ಮಾಡುತ್ತ ಹೋಗುವುದರಿಂದ ಅದನ್ನು ‘ಒಂದು’ ವ್ಯಾಖ್ಯಾನದಲ್ಲಿ ಸ್ಪಷ್ಟೀಕರಿಸಲು ಇಲ್ಲಿ ಹೋಗುವುದಿಲ್ಲ.
ಯಾವುದೇ ಮಹಾಕಾವ್ಯ ಅಥವಾ ಮಹಾಕಥನವು ವಿಶ್ವಕೋಶ ಮಾದರಿಯ ರಚನೆಯೇ ಆಗಿರುತ್ತದೆ. ಹಾಗಾಗಿ ಅದರಲ್ಲಿ ಒಂದು ತೆರನ ಸಂಗತಿ ಮಾತ್ರ ಇರುವುದಿಲ್ಲ. ನೇಮಿಚಂದ್ರನ ಕಾವ್ಯದಲ್ಲಿ ಹರಿವಂಶ ಕುರುವಂಶಗಳ ಕತೆ, ನೇಮಿವೃತ್ತಾಂತ, ಭಾಗವತ ಕಥನ ಹೀಗೆ ಹಲವು ಕಥೆಗಳಿವೆ. ಹಲವು ಭವಾವಳಿ-ವಂಶಾವಳಿಗಳ ಕಥನಗಳು ಸೇರಿಕೊಂಡಿವೆ. ಹೀಗಾಗಿ ಇದೊಂದು ಸಂಕೀರ್ಣ ಕಥನ. ಹಾಗಾಗಿಯೆ ಇಲ್ಲಿ ಹುಟ್ಟು ಸಾವು, ಸಂಚಾರ, ಕಾಮ, ವೈರಾಗ್ಯ, ಪರೀಷಹಗಳ ನಿಗ್ರಹ ಹೀಗೆ ಅನೇಕ ಸಂಗತಿಗಳಿವೆ. ಹಾಗಾಗಿ ಇಲ್ಲಿ ದೇಸಿ ಎಂಬುದು ದೇಸಿ ಮತ್ತು ಇನ್ನೆಲ್ಲ. (ಇದು ಬರೀ ನೇಮಿಚಂದ್ರನಿಗೆ ಮಾತ್ರವೆ ಅನ್ವಯಿಸುವ ಮಾತಲ್ಲ, ಇದು ಎಲ್ಲ ಮಹಾಕಥನಗಳಿಗು ಅನ್ವಯಿಸುವ ಮಾತು.)
ನಮ್ಮಲ್ಲಿ ನೇಮಿನಾಥನ ಕಥೆಯನ್ನು ಇವನಲ್ಲದೆ ಕರ್ಣಪಾರ್ಯ, ಬಂಧುವರ್ಮ, ಮಹಾಬಲ, ಮಂಗರಸ ಮೊದಲಾದವರೆಲ್ಲ ಎತ್ತಿಕೊಂಡಿದ್ದಾರೆ. ಚಾವುಂಡರಾಯ ಪುರಾಣದಲ್ಲಿಯೂ ಈ ಕಥೆ ಬರುತ್ತದೆ. ಜಿನಸೇನ - ಗುಣಭದ್ರಾಚಾರ್ಯರ ಉತ್ತರ ಪುರಾಣವು ಈತನ ಆಕರ ಪಠ್ಯ ಆಗಿದ್ದರೂ ಇವನಲ್ಲಿ ಕಥನವು ಕನ್ನಡದಲ್ಲಿ ಸಂಭವಿಸಿದೆ. ಕಥನವು ಯಾವುದೆ ಭಾಷೆಯಲ್ಲಿ ಸುಮ್ಮನೆ ಸಂಭವಿಸುವುದಿಲ್ಲ. ಅದು ಭುವನದ ಭಾಗ್ಯದಿಂದಾಗಿ ಸಂಭವಿಸುತ್ತದೆ. ನೇಮಿಚಂದ್ರ ತಾನು ಯಾಕಾಗಿ ಈ ಕಥನವನ್ನು ಬರೆದೆನೆಂದು ಹೇಳುವ ಮಾತುಗಳು ಇಲ್ಲಿ ಗಮನಾರ್ಹ, ನೋಡಿ; “ಬೆಲೆಯಿಂದ ಕೃತಿ ಸಂಭವಿಸುವುದೆ? ಗಾವಿಲ (ಹುಚ್ಚ)! ಭುವನದ ಭಾಗ್ಯದಿಂದ ಅದು ಸಂಭವಿಸುತ್ತದೆ. ಮಧುವನ್ನು, ಮಲಯಾನಿಲವನ್ನು, ಮನೋಜನನ್ನು, ಬೆಳದಿಂಗಳನ್ನು ಬೆಲೆಕೊಟ್ಟು ತೆಗೆದುಕೊಂಡು ಬಾ ನೋಡೋಣ? ... ಹುಚ್ಚನು ಅರೆಪಾವು ಮಜ್ಜಿಗೆಗಾಗಿ ಮಾಣಿಕ್ಯವನ್ನೆ ಮಾರಿಕೊಳ್ಳುವ ಹಾಗೆ ಚತುರ್ದಶ ಭುವನದಷ್ಟೆ ಬೆಲೆಯುಳ್ಳ ಕೃತಿಗಳನ್ನು ಕವಿಗಳು ಛೆ ಕಾಂಚಾಣವೆಂಬ ಗಣಿಕೆಗೆ ಯಾಕೆ ಮಾರಿಕೊಳ್ಳುತ್ತಾರೊ! ಗುಣವನ್ನು ತಿಳಿಯದೆ ಗಾಜಿನ ಮಣಿಗಳನ್ನು ಮಾರುವಂತೆ ಅಹಹಾ ನಿನಗೆ ಬೇಕೇ; ನಿನಗೂ ಬೇಕೇ ಎಂದು ಹಣಕ್ಕಾಗಿ ಕೃತಿಯೆಂಬ ಚಿಂತಾಮಣಿಯನ್ನು ಮಾರುವವರ ಬುದ್ಧಿಗೆ ನಾನು ಬೆರಗಾಗಿದ್ದೇನೆ”.
“ನಿಧಿಯೇ ದೊರಕಿರುವಾಗ ಕಲ್ಲು ಮಣ್ಣನ್ನು ತುಂಬಿಕೊಳ್ಳುತ್ತಾರೆಯೆ? ಅಮೃತದ ಸಮುದ್ರವೇ ದೊರೆತಾಗ ಒರತೆ ತೋಡಲು ಯಾರಾದರೂ ಹೋಗುತ್ತಾರೆಯೆ? ಸಕಲಾರ್ಥ ಸಾಧನವಾದ ಜಿನಕಥನವು ದೊರಕಿರುವಾಗ ಉನ್ನತ ವಿಚಾರಪರರಾದ ಕವಿಗಳು ಅಣ್ಣಾ ಹಣಕ್ಕಾಗಿ ಪರರನ್ನು ಬಣ್ಣಿಸಬಹುದೇ? ಇದನ್ನು ಅರಿತೆ ನೇಮಿನಾಥನ ನಾಮಗ್ರಹಣವೆ ಪರಮಾರ್ಥವು; ತ್ರಿಲೋಕಗುರು ಪುಣ್ಯಶ್ಲೋಕ ಸಂಕೀರ್ತನವೆ ಪರಮೈಶ್ವರ್ಯವು; ಇನ್ನೇನು ದೊಡ್ಡದಿದೆ ಹೇಳು ಎಂಬAತೆ ನೇಮಿಚಂದ್ರನು ಪಾಪಕ್ಷಯಕಾರಣವಾದ, ಸೌಭಾಗ್ಯವೆಂಬ ಬಳ್ಳಿಯಾದ ಹರಿವಂಶಕ್ಷತ್ರ ಚೂಡಾಮಣಿಯ ಚರಿತ್ರೆಯನ್ನು ಭಕ್ತಿಯಿಂದ ಹೇಳಲು ಉದ್ಯುಕ್ತನಾದನು. (1-45ರಿಂದ 52)
ನೇಮಿಚಂದ್ರ ಇಲ್ಲಿ ಹೇಳುವ ಮಾರಿಕೊಳ್ಳುವ ಕ್ರಿಯೆ ಬೇರೆ. ಅದು ನೇರವಾಗಿ ಪಂಪ ರನ್ನರ ರಾಜಸ್ತುತಿಯ ಕಾವ್ಯಕ್ರಮದ ಕುರಿತ ನಿಂದನೆ. ಆ ಮೂಲಕ ಅವರ ಕಾವ್ಯಗಳ ವಿಮರ್ಶೆ ಕೂಡ. ಹರಿಹರ ಇಂದ್ರ, ಚಂದ್ರರೆಂದು ರಾಜರನ್ನು ಹೊಗಳುವ ಕಾವ್ಯಕ್ರಮದ ಬಗ್ಗೆ ಎತ್ತಿದ ಆಕ್ಷೇಪಕ್ಕಿಂತ ಭಿನ್ನವಾದ ನೆಲೆಯಲ್ಲಿ ಈತ ಇಲ್ಲಿ ಆಕ್ಷೇಪಿಸಿದ್ದಾನೆ. ಕೃತಿಗಳು ಗಾಜಿನ ಮಣಿಗಳಲ್ಲ, ಅವು ಚತುರ್ದಶ ಭುವನದಷ್ಟೆ ಬೆಲೆಯುಳ್ಳವು. ಹಾಗಾಗಿ ಅವುಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ತಂದು ಬಳಸುವಾಗ ಹಣಕ್ಕಾಗಿ ಪರರನ್ನು ಬಣ್ಣಿಸಲು ಅವನ್ನು ಬಳಸಬಾರದು ಎಂಬುದು ನೇಮಿಚಂದ್ರನ ಅಭಿಪ್ರಾಯ. ಜೈನ ಕಥನಗಳ ಆದಿಮ ಉದ್ದೇಶವೇ ಪ್ರಭುತ್ವಕ್ಕೆ ಅಧ್ಯಾತ್ಮಿಕ ಸ್ಪರ್ಶವನ್ನು ಕೊಡುವುದು. ಪ್ರಭುತ್ವದ ಶಕ್ತಿರಾಜಕಾರಣದ ಗ್ರಹಣ ಬಿಡಿಸುವುದು. ಈ ಕರ‍್ಯವನ್ನು ನೇಮಿಚಂದ್ರನ ಕಾವ್ಯಗಳು ಚೆನ್ನಾಗಿ ಮಾಡಿವೆ.
ನೇಮಿಚಂದ್ರ ಎರಡೂ ಕಾವ್ಯಗಳಲ್ಲಿ ಕಥನಗಳ ನೆಲೆಯಲ್ಲಿ ಎರಡು ವೈರುದ್ಯಗಳನ್ನು ನಿರ್ಮಿಸಿದ್ದಾನೆ ಅನ್ನಿಸುತ್ತದೆ. ಅರ್ಧನೇಮಿ ಪುರಾಣದಲ್ಲಿ ಬರುವ ವಸುದೇವನ ಕಥೆ ಮತ್ತು ಲೀಲಾವತಿ ಪ್ರಬಂಧದಲ್ಲಿನ ರೂಪಕಂದರ್ಪನ ಕಥೆಗಳ ನಡುವೆ ಅಂತಹ ವೈರುದ್ಯ ಇದೆ. ವಸುದೇವ, ರೂಪಕಂದರ್ಪರ ಕತೆಗಳನ್ನು ಸ್ಥೂಲವಾಗಿ ಅಕ್ಕ ಪಕ್ಕ ಇಟ್ಟುಕೊಂಡರೆ ಇದು ತಿಳಿಯುತ್ತದೆ. ಈ ಎರಡೂ ಕಥೆಗಳಲ್ಲಿ ಎರಡು ಭಿನ್ನ ಜೀವನ ಕ್ರಮಗಳನ್ನು ಈತ ಪ್ರತಿಪಾದಿಸುತ್ತಿದ್ದಾನೆ. ಈ ದೃಷ್ಟಿಯಲ್ಲಿ ನೇಮಿಚಂದ್ರ ತನ್ನ ಹಿಂದಿನವರಿಗಿಂತ ಭಿನ್ನ. ಪಂಪ ರನ್ನ ಪೊನ್ನರ ಪರಂರೆಯ ಮಾರ್ಗದಿಂದ ಮಾರ್ಗಾಂತರ ಮಾಡಿದವನು. ಇವನ ನಂತರ ಬಂದ ಜನ್ನನಿಗೆ ನೇಮಿಚಂದ್ರನೇ ಮಾದರಿ. ಪಂಪ ರನ್ನರು ಮಾದರಿ ಅಲ್ಲ. ಜನ್ನನ ಅನಂತರ ಬಂದ ಮಧುರ ಕವಿ ಕೂಡ ‘ನೇಮಿ ಜನ್ನಿಗರಿರ್ವರೆ ಕರ್ನಾಟಕ ಕೃತಿಗೆ ಸೀಮಾ ಪುರುಷರ್’ ಎಂದು ಹೇಳುತ್ತಾನೆ. ಅಂದರೆ ಪಂಪನು ಹೇಗೆ ತನ್ನದೆ ಒಂದು ಪರಂಪರೆಯನ್ನು ನಿರ್ಮಿಸಿದನೋ ಹಾಗೆಯೇ ನೇಮಿ ಕೂಡ ತನ್ನದೆ ಒಂದು ಪರಂಪರೆಯನ್ನು ನಿರ್ಮಿಸಿದವನು.
ಸಂಪ್ರದಾಯವನ್ನು ಮುರಿದ ಹೊಸತನವೆ ದೇಸಿ. ಇದು ಸ್ವಂತಿಕೆಯ ಪ್ರಶ್ನೆ ಕೂಡ. ಸ್ವಂತಿಕೆ ಎನ್ನುವುದು ಮೂಲ-ಅನುವಾದ ಎಂಬ ಸ್ವ-ಅನ್ಯಗಳ ಪ್ರಶ್ನೆ ಅಲ್ಲ. ಕನ್ನಡ ಸ್ಥಳೀಯ ಪರಂಪರೆಯಲ್ಲಿ ಅದರಲ್ಲೂ ಜೈನ ಪರಂಪರೆಯಲ್ಲಿ ಕವಿಯ ಅನನ್ಯತೆ ವಿಶಿಷ್ಟತೆ ಏನು ಎಂಬುದೆ ಸ್ವಂತಿಕೆ. ಈ ಸ್ವಂತಿಕೆಯ ದೃಷ್ಟಿಯಿಂದ ನೋಡಿದರೆ ನೇಮಿಚಂದ್ರ ಅದುವರೆಗಿನ ಜೈನ ಪರಂಪರೆಯನ್ನು ಮುರಿದವನು. ಹಾಗಾಗಿ ಈತ ದೇಸಿ. ಹಾಗೆಯೆ ಆ ಕಾಲದ ಜಾನಪದ ಪರಂಪರೆ-ವಚನ ಪರಂಪರೆಗಳನ್ನು ಗಮನಿಸಿದರೆ ಇವನು ಅಪ್ಪಟ ಮಾರ್ಗಿ. ಕನ್ನಡ ಕಾವ್ಯ ಪರಂಪರೆಯಲ್ಲಿ ಯಾವುದು ಸ್ಥಾಪಿತ ಮಾರ್ಗವೋ ಅದನ್ನು ಮುರಿದು ಹೊಸತನವೊಂದನ್ನು ನಿರ್ಮಿಸುವುದು ಕೂಡ ದೇಸಿಯೆ. ಅನಂತರ ನಿರ್ಮಾಣಗೊಂಡ ಹೊಸ ಪಥ ಕೂಡ ಕಾಲಾಂತರದಲ್ಲಿ ಸ್ಥಾಪಿತ ಮಾರ್ಗವಾಗಿ ಬದಲಾಗುತ್ತದೆ ಎಂಬುದು ಬೇರೆ ಮಾತು. ಆದರೆ ಅದುವರೆಗಿನ ಮಾರ್ಗಕ್ಕೆ ಬದಲಿ ಪಥವೊಂದನ್ನು ನಿರ್ಮಿಸುವುದು-ಮಾರ್ಗಾಂತರ ಮಾಡುವುದು ಕೂಡ ದೇಸಿಯೇ ಎಂಬುದರಲ್ಲಿ ಎರಡು ಮಾತಿಲ್ಲ.
ಸ್ಥಳೀಯತೆಯನ್ನು ಒಳಗೊಳ್ಳುವಿಕೆ ದೇಸೀಯತೆಯೆ? ಹೌದು. ಸ್ಥಳೀಯ ಚಹರೆ, ವಿಶಿಷ್ಟತೆಯು ದೇಸೀಯತೆಯೆ. ಆದರೆ ಕೆಲವು ಆದಿಮವಾದ ಮೌಲ್ಯಗಳಿರುತ್ತವೆ, ಮಾನವ ವರ್ತನೆಗಳಿರುತ್ತವೆ. ಅವು ಏಕಕಾಲಕ್ಕೆ ಸ್ಥಳೀಯವೂ ಹೌದು. ವಿಶ್ವಾತ್ಮಕವೂ ಹೌದು. ದೇಸೀಯವೂ ಹೌದು, ಸಾರ್ವರ್ತ್ರಿಕವೂ ಹೌದು. ಒಂದು ಪದ್ಯವನ್ನು ಉದಾಹರಿಸಿ ಅನಂತರ ಈ ಸಂಗತಿಗೆ ಬರೋಣ;
ತೇಜಂ ಬಾಡಿಸುತ್ತಿರ್ಪ ರೇಖೆಯೋ ಚಿರಂ ಬಾಳ್ವಾಸೆಯಿಂದೀ ಮಹಾ
ರಾಜರ್ನೋಡುವ ತೀವ್ರತೇಜದ ಮಹಾಸಪ್ತರ್ಷಿಗಂಡು ಮಹಾ
ತೇಜಂ ಭಾಸ್ಕರನಸ್ತದೊಳ್ಕೆಡೆವುದುಂ ಕಂಡು ಮಹೋಲ್ಕಂ ಜ್ವಳ
ತ್ತೇಜಂ ಬೀಳ್ಪುದಂಗಂಡುಮುದ್ಧತ ಮಹಾ ಮೋಹಾಂಧಕಾರಾಧಕರ್ (ನೇ.ಪು. 4-54)
ಅಂದರೆ ಆರಿಹೋಗುವ ಜ್ವಾಲೆಯನ್ನು ಕಂಡರೂ, ಮಹಾತೇಜಸ್ವಿ ಸೂರ್ಯನೇ ಅಸ್ತವಾಗುವುದನ್ನು ಕಂಡರೂ, ಉಜ್ವಲ ತೇಜದ ಮಹಾನಕ್ಷತ್ರಗಳು ಉಲ್ಕೆಗಳಾಗಿ ಉದುರುವುದನ್ನು ಕಂಡರೂ ಈ ರಾಜರುಗಳು ಮಾತ್ರ ತಾವು ಚಿರವಾಗಿ ಬಾಳಲು ಆಶಿಸುತ್ತಾರೆ! ಎಂದರೆ ಪ್ರಭುತ್ವವನ್ನು ಭಂಗಿಸುವುದೇ, ಪ್ರತಿರೋಧಿಸುವುದೇ ಈ ಕಥನಗಳ ಪ್ರಧಾನ ಉದ್ದೇಶ. ಪ್ರಭುತ್ವದ ಅಧಿಕಾರ ವ್ಯಾಮೋಹದ ಎದುರಿಗಿನ ಪ್ರತಿರೋಧ ಮತ್ತು ರ‍್ಯಾಯ ಜೀವನಕ್ರಮದ ಪ್ರತಿಪಾದನೆ ಎನ್ನುವುದು ಈ ಕಾವ್ಯಗಳ ಪ್ರಧಾನ ಸಂವೇದನೆ. ಇದು ಏಕಕಾಲಕ್ಕೆ ಕಾವ್ಯಲೋಕದಲ್ಲಿ ಸ್ಥಳೀಯವೂ ಹೌದು. ವಿಶ್ವಾತ್ಮಕವೂ ಹೌದು. ದೇಸೀಯವೂ, ಸಾರ್ವ್ರರ್ತ್ರಿಕವೂ ಹೌದು. ಹೀಗಾಗಿ ಕೆಲವು ಸಂಗತಿಗಳು ಕನ್ನಡದಲ್ಲಿ ಅಷ್ಟೇ ಅಲ್ಲ. ಯಾವುದೇ ದೇಶಭಾಷೆಯಲ್ಲಿ ಕಥನಗೊಂಡರೂ ಅವುಗಳ ಒಳಗಿಂದ ಒಂದು ಬೊಗಸೆ ಪ್ರಸಂಗ ಮೊಗೆದುಕೊಂಡರೆ ಅಲ್ಲಿ ವಿಶ್ವಾತ್ಮಕತೆ ಮತ್ತು ದೇಸೀಯತೆಗಳೆರಡನ್ನು ನಾವು ಕಾಣಬಹುದು. ಆದಾಗ್ಯೂ ದೇಸೀಯತೆ ಎಂದರೆ ಸ್ಥಳೀಯತೆಯ ಒಳಗೊಳ್ಳುವಿಕೆ ಎಂದೇ ಜೈನ ಮಹಾಕಥನಗಳ ಸಂದರ್ಭದಲ್ಲಿ ಹೇಳಬೇಕಾಗುತ್ತದೆ. ಇಲ್ಲಿ ಕತೆ ಕನ್ನಡದ ಮೂಲಕ ಹೇಳಲ್ಪಟ್ಟಿದೆ ಎಂದರೆ ಅದು ಕನ್ನಡ ದೇಸೀಯ ಕಥನ. ಈ ಅರ್ಥದಲ್ಲಿ ನೇಮಿಯ ಕಥನ ಕನ್ನಡದ ಮೂಲಕ, ದೇಶಭಾಷೆಯ ಮೂಲಕ ಪ್ರಕಟಗೊಂಡಿರುವ ಕಥನ.
ಕಥನವೆಂದರೆ ನೇಮಿಚಂದ್ರನ ಪ್ರಕಾರ ವಿಶೇಷವಾಗಿ ಅದು ಧಾರ್ಮಿಕವಾಗಿ ಸ್ಥಳೀಯ ಸಮುದಾಯಗಳನ್ನು ಒಳಗೊಳ್ಳುವುದು. ಹೀಗೆ ಒಳಗೊಳ್ಳುವ ನೆಲೆಯಲ್ಲಿಯೆ ಇವನ ದೇಸಿ ಪ್ರಜ್ಞೆಯನ್ನು ನಾವು ಶೋಧಿಸಬಹುದಾಗಿದೆ. ಕನ್ನಡದಲ್ಲಿ ಕಥನವು ಸಂಭವಿಸುವುದೆಂದರೆ ಕನ್ನಡ ಓದುಗ-ಕೇಳುಗ ಜೈನರನ್ನು ಒಳಗೊಳ್ಳುವುದೆಂದೇ ಅರ್ಥ. ಒಂದು ರೀತಿಯಿಂದ ಇದು ನದಿಯೊಳಕ್ಕೆ ಇನ್ನಷ್ಟು ಝರಿಗಳನ್ನು ಸೇರಿಸುವ ಕೆಲಸ. ಇಂಗ್ಲಿಶಿನಲ್ಲಿ ಸ್ಟೀಮ್ಸ್ ಇನ್ ದಿ ರಿವರ್ ಎಂಬ ಮಾತೊಂದಿದೆ. ಹಾಗೆ ಜೈನ ಕಥನಗಳು ಸಂಸ್ಕೃತದ ಹಲವು ಝರಿಗಳನ್ನು ಕನ್ನಡ ನದಿಗೆ ಸೇರಿಸುವ ಕೆಲಸವನ್ನು ನಿರಂತರ ಮಾಡುತ್ತ ಬಂದಿವೆ. ಇದು ಏಕಕಾಲಕ್ಕೆ ಕನ್ನಡ ನದಿಗೆ ಸಂಸ್ಕೃತದ ಹಲವು ಝರಿಗಳನ್ನು ಸೇರಿಸುವ ಕೆಲಸ ಹೇಗೋ ಹಾಗೆಯೆ ಕನ್ನಡ ಜನಸಮುದಾಯಗಳನ್ನು ಜೈನವೆಂಬ ನದಿಗೆ ಸೇರಿಸಿಕೊಳ್ಳುವ ಕೆಲಸ ಕೂಡ. ಅದೇ ರೀತಿಯಲ್ಲಿ ಜೈನವೆಂಬ ನದಿಯು ಹೇಗೆ ಹಲವು ಝರಿಗಳನ್ನು ಸೇರಿಸಿಕೊಂಡು ರೂಪಗೊಂಡಿದೆ ಎಂಬ ಕಥನವೂ ಹೌದು. ಇದನ್ನೆ ಬೇರೊಂದು ಮಾತಿನಲ್ಲಿ ಹೇಳುವುದಾದರೆ ಇದೊಂದು ಒಳಗೊಳ್ಳುವ ಕಾಳಜಿಗಳ ಮತ್ತು ಪ್ರತ್ಯೇಕತೆಯ ರಾಜಕಾರಣಗಳ ವಿರಾಟ್ ಸಂಕಥನ. ಇಂಥ ಪ್ರಕ್ರಿಯೆಯಲ್ಲೆ ದೇಸಿ ಮತ್ತು ಸ್ಥಳೀಯತೆಗಳ ನುಡಿಗೊಳ್ಳುವಿಕೆಯನ್ನು ಕಾಣಬಹುದು. ನೇಮಿಚಂದ್ರನಲ್ಲಿ ಪ್ರಕಟಗೊಂಡಿರುವ ದೇಸಿ ಪ್ರಜ್ಞೆಯ ಒಂದು ಎಳೆಯನ್ನೂ ಕಾಣಬಹುದು.
ನೇಮಿನಾಥಚರಿತೆಯಲ್ಲಿ ಬರುವ ವಿಂದ್ಯಕ ವಾಗುರೆಯರ ಪ್ರಸಂಗ ಇಂಥ ರಾಜಕಾರಣಕ್ಕೆ ಉತ್ತಮ ಉದಾಹರಣೆ (3-40 ರಿಂದ 68). ವಿಂದ್ಯಕನೆಂಬ ಬೇಡನು ಬೇಟೆಗೆಂದು ಕಾಡಿಗೆ ಹೋದವನು ಅಲ್ಲಿ ಪ್ರಾಣಿಗಳಂತೆಯೆ ಕಾಣುತ್ತಿದ್ದ ಮುನಿಗಳಿಗೆ ಹೂಡಿದ್ದ ಬಾಣವನ್ನು ಹಿಂತೆಗೆದು ಅವರಿಗೆ ನಮಸ್ಕರಿಸಿ ಜೈನ ವ್ರತ ಸ್ವೀಕರಿಸುತ್ತಾನೆ. ಮಾಂಸ ತಿಂದು ಕಾಲ ಹಾಕುತ್ತಿದ್ದ ಬೇಡನು ಗೆಡ್ಡೆ ಗೆಣಸುಗಳನ್ನು ತಿನ್ನುತ್ತ ಅಹಿಂಸಾವ್ರತಿಯಾಗುತ್ತಾನೆ. ಒಮ್ಮೆ ಮಾವಿನ ಮರದಲ್ಲಿದ್ದ ಹಣ್ಣನ್ನು ಕೀಳಲು ಹೋಗಿ ಹಾವು ಕಚ್ಚಿ ಸಾಯುತ್ತಾನೆ. ತನ್ನ ಗಂಡನನ್ನೆ ಅನುಸರಿಸುವ ವಾಗುರೆ ಕೂಡ ಹಾಗೆಯೆ ಪೊಟರೆಗೆ ಕಯ್ಯಿಟ್ಟು ಹಾವಿನಿಂದ ಕಚ್ಚಿಸಿಕೊಂಡು ಮರಣ ಹೊಂದುತ್ತಾಳೆ. ಆಮೇಲೆ ಅವರಿಬ್ಬರೂ ‘ಉತ್ತಮ’ ಜನ್ಮಗಳನ್ನು ಪಡೆಯುತ್ತಾರೆ! ಅಂದರೆ ಈ ಪ್ರಸಂಗದಲ್ಲಿ ಮತಾಂತರದ ಪ್ರಶ್ನೆಗಳು ಮುಖ್ಯವಾಗಿ ಏಳುತ್ತವೆ. ದೇಸಿಯನ್ನು ಈ ಪ್ರಶ್ನೆಗಳಿಂದ ಉತ್ತರಿಸಿಕೊಳ್ಳಬಹುದೇ? ಆದರೆ ಇಲ್ಲಿ ಬರುವ ಕೆಲವು ವಿವರಗಳು ಮತ್ತು ವರ್ಣನೆಗಳಲ್ಲಿ ದೇಸಿಯ ನಿರ್ವಹಣೆಯನ್ನು ಕಾಣಬಹುದು. ವಿಂದ್ಯಕನ ಬಳಿಯಿದ್ದ ನಾಯಿಯ ವರ್ಣನೆ ಹೀಗಿದೆ ನೋಡಿ;
‘ಶಳಸೂಚೀ ಭಿನ್ನವಕ್ಷಂ ಕಿಟಿರದ ಲಿಖಿತಗ್ರೀವನಾಪೂತಿ ಶಂಕಾ
ವಿಳ ಜಿಘ್ರಧ್ಘಾçಣನುತ್ಪçಸ್ರವಣ ಸಮಯ ಸೂತ್ಥಾಪಿತೈಕಾಂಘ್ರಿ ವಕ್ತ್ರಾಂ
ಚಳನಾಳಸ್ಪೃಷ್ಟಸೃಷ್ಟಂ ವಿವೃತವದನ ನಿಷ್ಕಾಂತ ಜಿಹ್ವಾಪ್ರವಾಳಂ
ಪೊಳೆದೊಂದೇಂ ಬಂದುದೋ ಬೇಡನ ಬಳಿವಳಿಯಂ ಶ್ವಾನನೇಣಾವಸಾನಂ (೩-೬೩ ನೇ.ಪು.)
(ಮುಳ್ಳು ಹಂದಿಯ ಮುಳ್ಳು ಚುಚ್ಚಿದ ಗಾಯಗಳನ್ನು ಎದೆಯಲ್ಲಿಯೂ ಕಾಡುಹಂದಿಯ ಕೋರೆಯ ಗೀರುಗಾಯದ ಗುರುತನ್ನು ಕೊರಳಲ್ಲಿಯೂ ಧರಿಸಿ, ಪುನುಗಿನ ವಾಸನೆಗಾಗಿ ಮೂಗನ್ನು ಅರಳಿಸುತ್ತ, ಒಂಟಿ ಕಾಲೆತ್ತಿ ಮೂತ್ರ ಮಾಡುತ್ತ, ತೆರೆದ ಬಾಯಿಯಿಂದ ಕೆಂದಳಿರಿನಂತಹ ನಾಲಗೆ ಹೊರಚಾಚುತ್ತ ಜಿಂಕೆಗಳಿಗೆ ಮೃತ್ಯುಸ್ವರೂಪವಾದ ಆ ಬೇಟೆ ನಾಯಿಯು ಅವನ ಬಳಿಯಲ್ಲೆ ಬರುತ್ತಿತ್ತು) ಹೀಗೆ ನಾಯಿಯ ವರ್ಣನೆ ಮತ್ತು ಅದು ಮೂತ್ರ ಮಾಡುವ ಕ್ರಿಯೆಯನ್ನು ಇಷ್ಟೊಂದು ಕಠಿಣವಾಗಿ ಸಂಸ್ಕೃತದಲ್ಲಿ ಹೇಳಬೇಕೆ? ಸರಳವಾಗಿ ಕನ್ನಡದಲ್ಲಿ ಹೇಳಲು ಆಗುತ್ತಿರಲಿಲ್ಲವೆ? ಇಲ್ಲಿ ‘ಪೊಳೆದೊಂದೇಂ ಬಂದುದೋ ಬೇಡನ ಬಳಿವಳಿಯಂ’ ಎಂಬುದೊಂದೇ ಕನ್ನಡ ಮಾತು. ಮಿಕ್ಕೆಲ್ಲವೂ ಸಂಸ್ಕೃತಮಯ. ನೇಮಿಚಂದ್ರ ಬಹಳಷ್ಟು ಕಡೆ ಸಂಸ್ಕೃತ ವ್ಯಾಮೋಹಿ. ವರ್ಣಿಸುತ್ತಿರುವುದೊ ನಾಯಿಯನ್ನು ಆದರೆ ಭಾಷೆ ಮಾತ್ರ ಪಾಂಡಿತ್ಯಪೂರ್ಣವಾದ ಸಂಸ್ಕೃತ. ಕನ್ನಡವು ದೇಸಿ ಸಂಸ್ಕೃತವು ಮಾರ್ಗ ಎಂದು ತಿಳಿದರೆ ನೇಮಿಚಂದ್ರ ಬಹಳಷ್ಟು ಕಡೆ ಕನ್ನಡದ ಲಿಪಿಗಳನ್ನು ಮಾತ್ರವೆ ಬಳಸುತ್ತಾನೆ. ಭಾಷೆಯೂ ಸೇರಿದಂತೆ ವಿಚಾರ ಸಾಮಗ್ರಿ ಮತ್ತು ಆಲೋಚನಾ ವಿಧಾನವೆಲ್ಲ ದೇಸಿಯಲ್ಲದ್ದು. ಇವನ ಕಾವ್ಯದ ಬಹುಪಾಲು ಭಾಷೆ ಮಾರ್ಗರೂಪಿಯೆ. ಹಾಗೆ ನೋಡಿದರೆ ನೇಮಿಚಂದ್ರ ಅಚ್ಚಕನ್ನಡದಲ್ಲಿ ಬರೆಯಲಾರ ಎಂದೇನೂ ಅಲ್ಲ. ಬರೆಯಬಲ್ಲ. ಒಂದು ಉದಾಹರಣೆ ನೋಡಿ;
ಕೊಲಲಾಗದು ಕಳಲಾಗದು/ ಕುಲಟೆಯರೊಳ್ ನೆರೆಯಲಾಗದಾರ್ತದಿನರ್ಥ
ಕ್ಕಲವರಲಣಮಾಗದು ಪುಸಿ/ಯಲಾಗದೀ ಬ್ರತಮನೈದುಮಂ ಪಿಡಿ ಮಗನೇ (೩-೭೩ ನೇ.ಪು.)
ಕಳಬೇಡ ಕೊಲಬೇಡ ಎಂಬ ಬಸವಣ್ಣನ ವಚನವನ್ನು ಹೋಲುವ ಈ ಕವಿತೆ ಎಷ್ಟೊಂದು ಸರಳ ಸುಂದರವಾಗಿದೆ ನೋಡಿ. ಹೀಗೆ ಹಲವಾರು ಪದ್ಯಗಳನ್ನು ನೇಮಿಚಂದ್ರ ಬರೆದಿದ್ದಾನೆ. ಇದರ ಮುಂದಿನ ಪದ್ಯ ಕೂಡ ಇಷ್ಟೆ ಅಚ್ಚಕನ್ನಡದಲ್ಲಿ ಇದೆ ನೋಡಿ;
ಶರದದ ಕೆಯ್ಯೊಳ್ ಪಂಕಾ/ಸರಸಿಜ ಜನಕತ್ವ ಗುಣಮನಳವಡೆ ಕೊಳ್
ಅಂತಿರೆ ವಿಮಳಮತಿಯ ಕೆಯ್ಯೊಳ್ / ಪರಮ ಬ್ರತಮಂ ಕಿರಾತನೊಲವಿಂ ಕೊಂಡA (೩-೭೪ ನೇ.ಪು.)
ಹೀಗೆ ಭಾಷೆಯ ದೃಷ್ಟಿಯಿಂದ ಕೆಲವೆಡೆ ಅಪ್ಪಟ ದೇಸಿಯಂತೆ ಕಾಣುವ ಇವನ ಕಾವ್ಯ ವಿಚಾರದ ದೃಷ್ಟಿಯಿಂದ ಮಾತ್ರ ದೇಸಿ ಅಲ್ಲ. ಕವಿಯ ಯಾವುದೇ ವೈಚಾರಿಕ ನೆಲೆಗಟ್ಟು, ಆಲೋಚನಾ ಕ್ರಮಗಳು ಅವನು ಬಳಸುವ ಉಪಮೆ ಪ್ರತಿಮೆಗಳ ವಿಷ್ಲೇಷಣೆಯಿಂದ ಕಂಡುಬಿಡುತ್ತವೆ. ದೃಷ್ಟಿಕೋನದ ನೆಲೆಯಲ್ಲಿ ಯಾವುದೇ ಕವಿ ಎಷ್ಟೇ ಪೊಲಿಟಿಕಲಿ ಕರೆಕ್ಟಾಗಿ ಬರೆಯಲು ಹೊರಟರೂ ಅವನ ಉಪಮೆ ರೂಪಕಗಳು ಅವನ ನಿಜವಾದ ಬಣ್ಣವನ್ನು ಬಯಲಿಗೆ ಹಾಕಿಯೆ ತೀರುತ್ತವೆ.
ಶರತ್ಕಾಲದ ಸಂದರ್ಭದಲ್ಲಿ ಕೆಸರು ತಾವರೆಗೆ ಜನ್ಮ ನೀಡುವಂತೆ ವಿಮಳಮತಿಯ ಕೈಯಲ್ಲಿ ಕಿರಾತನು ಪರಮವ್ರತವನ್ನು ಪಡೆದನು’ ಅಂದರೇನು? ಬೇಡರವನು ಜೈನ ವ್ರತವನ್ನು ಸ್ವೀಕರಿಸಿದ ಎಂದು ಇಲ್ಲಿ ಹೇಳಬೇಕು. ‘ಸಿದ್ಧರಸಸ್ಪರ್ಶದಿಂದ ಕಬ್ಬಿಣವು ಚಿನ್ನವಾಗುವಂತೆ ಬೇಡನು ಜಿನವ್ರತವನ್ನು ಪಡೆದನು’ ‘ಹಾವಿನಲ್ಲಿ ಮಾಣಿಕವು ಹುಟ್ಟುವಂತೆ ಕಿರಾತನಲ್ಲಿ ತಾನು ಕೈಕೊಂಡ ವ್ರತವನ್ನು ರಕ್ಷಿಸಿಕೊಳ್ಳುವ ಬುದ್ಧಿ ಹುಟ್ಟಿತು’ (೩-೭೫ವ) ಕೆಸರು-ತಾವರೆ, ಕಬ್ಬಿಣ-ಚಿನ್ನ, ಮೇರುಪರ್ವತ-ಕಾಗೆ, ಹಾವು-ಮಾಣಿಕ ಇಂತಹ ಉಪಮೆಗಳಿಂದ ಜೈನವ್ರತ ಮತ್ತು ಬೇಡನ ಸಂಬಂಧನ್ನು ನೇಮಿಚಂದ್ರ ಇಲ್ಲಿ ಹೇಳುತ್ತಿದ್ದಾನೆ. ಕೆಳವರ್ಗದವರ ಕುರಿತಾಗಿ ಅವರನ್ನು ಮೇಲೆತ್ತಬೇಕೆಂಬ ಕಾಳಜಿಯೇನೋ ಇಲ್ಲಿ ವ್ಯಕ್ತವಾಗಿದೆ. ಆದರೆ ಆ ಜನರ ಬಗ್ಗೆ ಕಥನವು ಹೊಂದಿರುವ ಧೋರಣೆ-ಅಭಿಪ್ರಾಯಗಳು ಮಾತ್ರ ನೀಚ ನೆಲೆಯವೇ!
ಉಪಮೆಗಳು ವರ್ಣನೆಗಳಲ್ಲಿ ದೇಸಿ ಸಂವೇದನೆಯ ಸ್ವರೂಪ ಇವನಲ್ಲಿ ಹೇಗೆ ವ್ಯಕ್ತವಾಗುತ್ತದೆ ಎಂಬುದಕ್ಕೆ ಇನ್ನೊಂದು ಉದಾಹರಣೆ ನೋಡಬಹುದು. ಎಲಚಿಮರ ಮತ್ತು ಹೊಂಗೆ ಮರಗಳು ಎಂದರೆ ಈತನಿಗೆ ಬಹುವಾದ ಪ್ರೀತಿ. ಎಲಚಿಮರವನ್ನು5-78, 5-83 ಹೀಗೆ ಎರಡು ಮೂರು ಕಡೆ ಬಳಸುತ್ತಾನೆ. ಹಾಗೇ ಹೊಂಗೆ ಮರವನ್ನೂ ಭೂದೇವಿ ತಮಾಳಮಂ ಪಡೆದವೋಲ್ (೭-೪೩), ಯಶೋದೆಯ ಮೊಲೆಯುಂಡಂ ನವತಮಾಳಕೃಷ್ಣಂ ಕೃಷ್ಣಂ (೭-೫೫) ಹೀಗೆ ಎರಡು ಮೂಡು ಕಡೆ ಉಪಮೆಗೆ ಬಳಸುತ್ತಾನೆ. ಇದೇ ರೀತಿಯಲ್ಲಿ ಹತ್ತು ಹಲವು ಮರಗಿಡಬಳ್ಳಿ ಹೂವುಗಳನ್ನೂ ಉಪಮೆಗಳಿಗೆ ಬಳಸಿದ್ದಾನೆ. ಆದರೆ ಹೊಂಗೆಯನ್ನಾಗಲೀ ಎಲಚಿಯನ್ನಾಗಲೀ ಹೊಂಗೆ, ಎಲಚಿ ಎಂದು ಎಲ್ಲೂ ಕರೆಯುವುದಿಲ್ಲ. ಬದಿರ, ತಮಾಲ ಎಂದೇ ಕರೆದಿದ್ದಾನೆ. ಛಂದಸ್ಸು ಯಾವುದೆ ಇರಲಿ ನೇಮಿಚಂದ್ರನಿಗೆ ಕನ್ನಡಕ್ಕಿಂತ ಸಂಸ್ಕೃತ ಪದಪ್ರಯೋಗದ ಬಗೆಗೇ ವ್ಯಾಮೋಹ. ಭೂದೇವಿಯು ಹೊಂಗೆ ಮರವನ್ನು ಪಡೆದಂತೆ ದೇವಕಿಯು ಕೃಷ್ಣನನ್ನು ಹಡೆದಳು ಎಂಬುದು ಉಪಮಾಪ್ರಯೋಗದ ದೃಷ್ಟಿಯಿಂದ ಅಪ್ಪಟ ದೇಸಿ, ಆದರೆ ಭಾಷಾಪ್ರಯೋಗದ ದೃಷ್ಟಿಯಿಂದ ಸಂಸ್ಕೃತಮಯ. ಛಂದಸ್ಸು, ಭಾಷೆ, ಸಾಮಗ್ರಿ ಇವುಗಳ ಸಂಬಂಧವು ದೇಸೀ ಸಂವೇದನೆಯನ್ನು ನಿಯಂತ್ರಿಸುತ್ತದೆ ಎನ್ನುವುದಾದರೆ; ಛಂದಸ್ಸಿನ ಆಯ್ಕೆ, ಭಾಷೆ, ವಸ್ತು ಸಾಮಗ್ರಿಗಳ ಆಯ್ಕೆಯಲ್ಲಿಯೆ ಕವಿ ಚೂಸಿಯಾಗಿರಬೇಕಾಗುತ್ತದೆ. ಕೃಷ್ಣನನ್ನು ಪಡೆದ ನಂದಗೋಪನು ಹೇಗೆ ಆನಂದಿಸುತ್ತಾನೆ ಎಂದು ಕವಿ ಹೀಗೆ ವರ್ಣಿಸುತ್ತಾನೆ. ನೋಡಿ;
ಕಣ್ಪಡೆದ ಕುರುಡನಂತಿರೆ/ ಪಣ್ಪಡೆದೆಳವಕ್ಕಿಯಂತೆ ಪುಣ್ಯದ ಫಲದಿಂ
ಪೆಣ್ಪಡೆದ ಸೂಳೆಯಂತೆ/ ಜಾಣ್ಪಡೆದೊಕ್ಕಲಿಗನಂತೆ ನಲಿದಂ ನಂದಂ (೭-೫೧)
ಈ ವರ್ಣನೆಯಲ್ಲಿ ಕಣ್ಣು ಪಡೆದ ಕುರುಡನಂತೆ, ಹಣ್ಣು ಪಡೆದ ಎಳೆಯ ಹಕ್ಕಿಯಂತೆ ಎಂಬ ಉಪಮೆಗಳ ಜೊತೆ ಜಾಣತನವನ್ನು ಪಡೆದ ಒಕ್ಕಲಿಗನಂತೆ ಎಂಬ ಉಪಮೆಯೂ ಇದೆ. ಅಂದರೇನು? ಉಪಮೆಯೇನೋ ಅಚ್ಚ ದೇಸಿಯಾದುದು; ಆದರೆ ಅದರ ಹಿಂದಿರುವ ಧೋರಣೆ ಫ್ಯೂಡಲ್ ಆದದ್ದು. ವಿದ್ಯಾವಂತ ವಿದ್ವಾಂಸರಿಗೆ ದೇಸಿ ಜನರ ಬಗ್ಗೆ ಮತ್ತು ಅವರ ಜ್ಞಾನದ ಬಗ್ಗೆ ಇದ್ದ ಅನಾದರ, ದುಷ್ಟ ನಂಬಿಕೆಗಳನ್ನು ಇಂತಹ ಉಪಮೆಗಳು ತೋರುತ್ತವೆ.
ದೇಸೀಯತೆಯು ಪ್ರಕಟವಾಗುವ ಇನ್ನೊಂದು ಮುಖ್ಯ ವಲಯವೆಂದರೆ ಅದು ಕಾವ್ಯದಲ್ಲಿ ಕಾಣುವ ನಾದ. ಸಂಸ್ಕೃತ ಪದಗಳನ್ನು ಕನ್ನಡ ಪ್ರತ್ಯಯಗಳೊಂದಿಗೆ ಸೇರಿಸಿ ಕನ್ನಡ ಲಿಪಿಯಲ್ಲಿ ಬರೆದಾಕ್ಷಣ ಅವುಗಳಿಗೆ ಕನ್ನಡದ ನಾದ ಒದಗುವುದಿಲ್ಲ. ಅವು ನಮಗೆ ಶಬ್ದ ಮಾತ್ರವಾಗಿ ಉಳಿಯುತ್ತವೆ. ಈ ಹಿಂದೆ ವಿಂದ್ಯಕನ ನಾಯಿಯ ವರ್ಣನೆಯನ್ನು ನೋಡಿದ್ದೇವೆ. ಈಗ ಇನ್ನೊಂದು ಅದಕ್ಕಿಂತ ಭಿನ್ನ ಪದ್ಯ ನೋಡೋಣ; ಕಂಸನ ಸಾವಿನ ಕುರಿತು ಹೇಳುವ ಮಾತು ಹೀಗಿದೆ ನೋಡಿ;
ಆವೊಂಗಮಾದೊಡಂ ಮ/ತ್ತಾವುದುಮಂ ಕವಿವುಪಾಯಮುಂಟೀ ಜಗದೊಳ್
ದೇವಂಗಂ ದೈತ್ಯಂಗಂ/ ಸಾವಂ ತಪ್ಪಿಸುವುಪಾಯಮಾವುದುಮುಂಟೇ? (೭-೬೮)
ಅಯನಯನಿಧಾನ ತೇಜೋ/ಮಯ ಕೆಂಡಮನೊರಲೆ ಪತ್ತಲಾರ್ಕುಮೆ ಜಗತೀ
ಜಯಿಯೆನಿಪ ಕಂಸನೆಸಗುವ/ ಕುಯಕಂ ಕೊಳ್ಗುಮೆ ಪರಾಕ್ರಮೋನ್ನತ ನಿನ್ನಂ (೮-೫೧)
ಜಗಮೆಲ್ಲಮರಿಯೆ ತಂಗೆಯ/ ಮಗನನದೆಂತಿರಿವೆಮೆಂಬೊಡನುಜರ್ತನುಜಾ
ದಿಗಳಲ್ಲದೆ ಬೂಪಾಳರ/ ಪಗೆವರ್ಮತ್ತೊಂದು ದ್ವೀಪದಿಂ ಬಂದಪರೇ (೮-೫೪)
ಇಂತಹ ಕೆಲವು ಕಡೆ ನೇಮಿಚಂದ್ರ ಅಚ್ಚಕನ್ನಡದ ಪದಗಳನ್ನು ಹೆಚ್ಚಾಗಿ ಬಳಸುತ್ತಾನೆ. ಈ ರೀತಿಯ ಹಲವಾರು ಪದ್ಯಗಳನ್ನು ಈತನ ಕಾವ್ಯದಲ್ಲಿ ನೋಡಬಹುದು. ಆದರೆ ಒಟ್ಟಾರೆ ಕಾವ್ಯದಲ್ಲಿ ಇವುಗಳ ಪ್ರಮಾಣ ಕಡಿಮೆ. ಈ ಕಾರಣಕ್ಕೆ ಈತ ಕನ್ನಡಕ್ಕಿಂತ ಸಂಸ್ಕೃತದ ಬಗ್ಗೆ ಹೆಚ್ಚು ವ್ಯಾಮೊಹವುಳ್ಳವನು ಎಂದು ಸಾಧಾರಪೂರ್ವಕ ಹೇಳಿಬಿಡಬಹುದು. ಆದರೆ ಕನ್ನಡ ನಾದದಲ್ಲೆ ಬರೆಯುವ ಅಪಾರ ಶಕ್ತಿಯಿದ್ದ ನೇಮಿಚಂದ್ರ ಆ ಶಕ್ತಿಯನ್ನು ಚೆಂದಾಗಿ ಬಳಸಲಿಲ್ಲವಲ್ಲ ಯಾಕೆ?
ಇದನ್ನು ಅಂದಿನ ಕಾವ್ಯಕಲ್ಪನೆ, ಕಾವ್ಯಭಾಷೆಯ ಕಲ್ಪನೆ, ಕಾವ್ಯಕಟ್ಟಾಣಿಕೆಯ ಕಲ್ಪನೆ, ನಂಬಿಕೆಗಳ ಹಿನ್ನೆಲೆಯಿಂದ ನೋಡಬೇಕಾಗುತ್ತದೆ. ಪಾಂಡಿತ್ಯ ಮತ್ತು ಕವಿತ್ವಗಳ ಸಂಘರ್ಷದ, ದೇಸೀಯ ಮತ್ತು ಪ್ರಮಾಣೀಯ ಕಾವ್ಯಕನ್ನಡಗಳ ಘರ್ಷಣೆಯ ನೆಲೆಯಿಂದ ನೋಡಬೇಕಾಗುತ್ತದೆ. ಮುಷ್ಠಿಕ, ಚಾಣೂರರನ್ನು ಕೃಷ್ಣ ಮಲ್ಲಯುದ್ಧದಲ್ಲಿ ಹೊಡೆದ ರೀತಿಯನ್ನು ನೇಮಿಚಂದ್ರ ಹೇಗೆ ವಿವರಿಸುತ್ತಾನೆ ನೋಡಿ;
ಎರಡುಂ ಕೆಯ್ಯಿಂ ಕೊಂಡಿರ್ವರುಮಂ ಬೊಂಬೆಗಳನಾಡಿಪನವೊಲವನಿ
ರ್ವರ ತಲೆಯಂ ತಾಟಿಸಿದಂ ಬಿರಿವಿನೆಗಂ ತಾಳಕಾಯಗಳಂ ತಾಟಿಪವೋಲ್ (೮-೧೧೩)
ಹೀಗೆ ಉಪಮೆಗಳಲ್ಲಿ ವರ್ಣನೆಗಳಲ್ಲಿ ನೇಮಿಚಂದ್ರ ಹಲವು ಕಡೆ ದೇಸಿ ಬಳಕೆ ಮಾಡಿದ್ದಾನೆ. ಅದು ಭಾಷೆ ಮತ್ತು ಉಪಮಾ ಸಾಮಗ್ರಿ ಎರಡೂ ನೆಲೆಯಲ್ಲಿ. ನಮ್ಮಲ್ಲಿ ಈಗಾಗಲೇ ಪ್ರಾಚೀನ ಕಾವ್ಯಗಳಲ್ಲಿ ಜಾನಪದ ಪ್ರಜ್ಞೆ, ಪ್ರಾಚೀನ ಕಾವ್ಯಗಳ ಸಂಸ್ಕೃತಿಚಿಂತನೆ (ಸಂಸ್ಕೃತಿ ಸಂದರ್ಭಕೋಶ) ಇಂತಹ ಹಲವು ಅಧ್ಯಯನಗಳು ನಡೆದಿವೆ. ಜಾನಪದ ಪ್ರಜ್ಞೆ, ಸ್ಥಳೀಯ ಸಂಸ್ಕೃತಿಯ ಕುರುಹುಗಳ ಬಳಕೆಯನ್ನೆ ದೇಸೀಯತೆ ಎನ್ನುವುದಾದರೆ ನೇಮಿಚಂದ್ರನಲ್ಲಿ ಇವುಗಳ ಬಳಕೆ ಸಾಕಷ್ಟಿದೆ. ಇವನು ತನ್ನ ಕಾವ್ಯದಲ್ಲಿ ಯಥೇಚ್ಛವಾಗಿ ಪಡೆನುಡಿ, ಗಾದೆಮಾತುಗಳನ್ನು ಬಳಸಿದ್ದಾನೆ. ಇವುಗಳಲ್ಲಿ ಕೆಲವು ಎರವಲು, ಕೆಲವು ಕಲ್ಪಿತಗಳು, ಕೆಲವು ಉಪಮೆಗಳು. ಇಂತಹ ಕೆಲವನ್ನು ಉದಾಹರಣೆಗೆ ನೋಡಬಹುದು.
1. ವಿನೀತಿ ಧೂರ್ತಲಕ್ಷಣಂ (೭-೧೮) (ಇಂದಿನ ಅತಿವಿನಯಂ ಧೂರ್ತಲಕ್ಷಣಂ ಎಂಬಂತೆ)
2. ಎಸಡಿಯ ಬಸಿರನೊಡೆದು ಪುಟ್ಟವೆ ಮರಿಗಳ್ (೬-೭೫) (ಏಡಿಕಾಯಿಯ ಹೊಟ್ಟೆಯನ್ನು ಸೀಳಿಕೊಂಡೆ ಮರಿಗಳು ಹೊರಬರುತ್ತವೆ ಅಲ್ಲವೆ? ಹಾಗೆ ಕೆಲ ಮಕ್ಕಳು ಪಿತೃಕಂಟಕರು ಎಂಬಂತೆ)
3. ನೀರ ನಿಧಿಯೊಳೊಗೆದಗ್ನಿ ವಾರ್ಧಿಯಂ ತವೆ ಸುಡದು (೬-೭೬) (ಸಮುದ್ರದಲ್ಲಿ ಹುಟ್ಟಿದ ಅಗ್ನಿ ಸಮುದ್ರವನ್ನೆ ಎಂದಿಗೂ ಸುಡುವುದಿಲ್ಲ)
4. ಎರ್ದೆ ಕರ್ತರಿ ನಾಲಗೆ ಬೆಲ್ಲಂ (೭-೫೦)
5. ಶರ್ಕರೆ ನಾಲಗೆ ನೃಪರೆರ್ದೆ ಕರ್ತರಿ (೫-೯) (ರಾಜರುಗಳ ನಾಲಗೆ ಸಕ್ಕರೆ ಎದೆ ಕತ್ತರಿ)
6. ಕರ‍್ಯವಶಕ್ಕೆ ಕಳ್ತೆಯ ಕಾಳ್ವಿಡಿದನ್ (೭-೫೦)
7. ಲೋಯಿಸರದ ಮೇಲೆ ಬಂಡಿ ಪರಿದಂತು (೭-೬೬) (ಲೋಳೆಸರದ ಮೇಲೆ ಬಂಡಿ ಹರಿದಂತೆ)
8. ವಿರೋಧೀಯುಮಂ ವ್ಯಾಧಿಯುಮಂ ಬಳೆಯದ ಮುನ್ನಮೆ ಕಿರಿದೆಂದು ಕಡೆಗಣಿಸದೆ ಕಿಡಿಸುವುದು ಕಜ್ಜಂ (೮-೧೭) (ವಿರೋಧಿಯನ್ನೂ ಕಾಯಿಲೆಯನ್ನೂ ಬೆಳೆಯಲು ಬಿಡದೆ ಕಿರಿದೆಂದು ಕಡೆಗಣಿಸದೆ ಮೊದಲೆ ಚಿವುಟುವುದು ಒಳ್ಳೆಯದು)
9. ನೋಂತರ ಪಗೆಯನೆಳ್ತಿರಿದಂತೆ ಮಾಳ್ಪೆನ್(೮-೩೨) (ಪುಣ್ಯಶಾಲಿಗಳ ವೈರಿಯನ್ನು ಎತ್ತು ಬಂದು ಇರಿದಂತೆ ಮಾಡುವೆನು)
10. ಊರ ಸೀರೆಗಸಗಂ ತಡೆವಡೆದನ್ (ಊರ ಸೀರೆಯ-ಊರಿನವರ ಬಟ್ಟೆಯ ಮಾತಿಗೆ ಅಗಸ ಒದೆ ತಿಂದ ಎಂಬAತೆ)
ಇವು ಕೆಲವು ಉದಾಹರಣೆಗಳು ಮಾತ್ರ. ಇಂತಹ ನೂರಾರು ಉದಾಹರಣೆಗಳನ್ನು ನೇಮಿಚಂದ್ರನಿಂದ ಎತ್ತಿ ಕೊಡಬಹುದು. ಸಮಾಜದಲ್ಲಿ ಚಾಲ್ತಿಯಲ್ಲಿ ಇರುವ ಗಾದೆಮಾತುಗಳನ್ನು ಬಳಸಿಕೊಳ್ಳುವ ರೀತಿಯಲ್ಲಿಯೆ ಹೊಸ ಗಾದೆಮಾತುಗಳ ರೀತಿಯ ಸೂಕ್ತಿಗಳನ್ನು ಸೃಷ್ಟಿಸುವ ಕೆಲಸವನ್ನೂ ನೇಮಿ ಹಲವೆಡೆ ಮಾಡಿದ್ದಾನೆ.
ದೇಸಿಯ ಸ್ವರೂಪವು ಕಾವ್ಯದಲ್ಲಿ ಪ್ರಕಟವಾಗಬಹುದಾದ ವಿನ್ಯಾಸಗಳ ಪರಿಚಯಕ್ಕೆ ಇನ್ನೊಂದೆರಡು ವರ್ಣನೆಗಳನ್ನು ನೋಡೋಣ; ಸೂರದತ್ತ ಸುದತ್ತರೆಂಬ ವ್ಯಾಪಾರಿಯ ಕತೆಯು ನಾಲ್ಕನೆ ಆಶ್ವಾಸದಲ್ಲಿ ಬರುತ್ತದೆ. ಈ ವ್ಯಾಪಾರಿಗಳು ವ್ಯಾಪಾರದಿಂದ ಬಂದ ಹೊನ್ನನ್ನು ಒಂದು ಮರದ ಬುಡದಲ್ಲಿ ಹೂಳುತ್ತಾರೆ. ಊರಿಗೆ ಹೋಗಿ ಬಂದು ನೋಡಿದರೆ ಬುಡದಲ್ಲಿ ಹೊನ್ನಿಲ್ಲ! ಇಬ್ಬರೂ ನೀನು ಕಳ್ಳ ನೀನು ಕಳ್ಳನೆಂದು ಬಡಿದಾಡಿ ಸಾಯುತ್ತಾರೆ. ಮುಂದಿನ ಜನ್ಮದಲ್ಲಿ ಟಗರುಗಳಾಗಿ ಹುಟ್ಟುತ್ತಾರೆ. ಆಗ ಸಂಧಿಸಿ ಪೂರ್ವ ಜನ್ಮದ ನೆನಪಾಗಿ ಬಡಿದಾಡಿ ಗೂಳಿಗಳಾಗಿ ಹುಟ್ಟುತ್ತಾರೆ. ಮತ್ತೆ ಬಡಿದಾಡಿ ಕಪಿಗಳಾಗಿ ಹುಟ್ಟುತ್ತಾರೆ. ಮತ್ತೆ ಬಡಿದಾಡುತ್ತಾರೆ... ಹಾಗಾದರೆ ಈ ಸುದತ್ತ ಸೂರದತ್ತರು ಹೂಳಿದ ಹೊನ್ನನ್ನು ಯಾರು ಎತ್ತಿದರು? ಇವರು ಊರ ಕಡೆ ಹೋಗುತ್ತಿದ್ದಂತೆ ಹೆಂಡ ಮಾರುವವನೊಬ್ಬ ಹೆಂಡಕ್ಕೆ ಸೊಕ್ಕು ತರುವ ಬೇರು ಹುಡುಕಲು ಬಂದು ನೆಲ ಅಗೆಯುತ್ತಾನೆ. (೪-೧೧೪) ಆಗ ಅವನಿಗೆ ಆ ನಿಧಿ ಸಿಕ್ಕುತ್ತದೆ. ಅಂದರೆ ಹೆಂಡಕ್ಕೆ ಮತ್ತು ಹೆಚ್ಚಿಸಲು ಬೆರು ಅಗೆದು ಅರೆಯುತ್ತಿದ್ದ ವಿಚಾರ ಇಲ್ಲಿ ಬರುತ್ತದೆ. ಇದೊಂದು ದೇಸಿ ಆಚಾರ. ಹೀಗೆ ನೇಮಿಯಲ್ಲಿ ದೇಸಿಯು ಹಲವು ವಿವರಗಳಲ್ಲಿ ಅಂತರ್ಗತವಾಗಿದೆ.
5ನೆ ಆಶ್ವಾಸದಲ್ಲಿ ಒಂದು ಕಡೆ ನೇಮಿಚಂದ್ರ ಕತ್ತಲೆಯನ್ನು ವರ್ಣಿಸುತ್ತಾನೆ. ‘ಕಾಲವೆಂಬ ಕಮ್ಮಾರ ಸೂರ್ಯಬಿಂಬವೆಂಬ ಕಾದ ಕಬ್ಬಿಣವನ್ನು ಸಮುದ್ರದಲ್ಲಿ ಅದ್ದಿದಾಗ ಹಬ್ಬಿದ ಹೊಗೆಯೆ ಕತ್ತಲೆ’ (೫-೧೭) ಅಂದರೆ ಈ ವರ್ಣನೆಯಲ್ಲಿ ನೇಮಿಚಂದ್ರ ಕ್ರಿಯಾಕೂಟವೊಂದನ್ನು ಏರ್ಪಡಿಸುತ್ತಿದ್ದಾನೆ. ಹಾಗೆ ಏರ್ಪಡಿಸುವ ಮೂಲಕ ಇದನ್ನೊಂದು ಉಪಮೆಯನ್ನಾಗಿ ಮಾಡುತ್ತಾನೆ. ಇಲ್ಲಿ ಕಮ್ಮಾರನು ಕಾದ ಕಬ್ಬಿಣವನ್ನು ನೀರಲ್ಲಿ ಅದ್ದುವ ಕ್ರಿಯೆಯನ್ನು ಕಾವ್ಯದಲ್ಲಿ ಬಳಸಿಕೊಂಡಿರುವುದೇ ವರ್ಣನೆಗಳಿಗೆ ದೇಸಿ ಕ್ರಿಯಾರೂಪಕಗಳನ್ನು ಬಳಸಿಕೊಳ್ಳುವ ಕ್ರಿಯೆಯಾಗಿದೆ. ವರ್ಣನೆಗಳಲ್ಲಿ ದೇಸೀಯತೆಯು ಮಿಳಿತಗೊಳ್ಳಬಹುದಾದ ವಿನ್ಯಾಸಕ್ಕೆ ಇದೂ ಒಂದು ಉದಾಹರಣೆ. ಇಂತಹ ಹಲವಾರು ಉದಾಹರಣೆಗಳನ್ನು ನೇಮಿಚಂದ್ರನಿಂದ ಎತ್ತಿ ಕೊಡಬಹುದು.
ನೇಮಿನಾಥಪುರಾಣದ 8ನೇ ಆಶ್ವಾಸದಲ್ಲಿ ಕೃಷ್ಣಶಿಶು ಹುಟ್ಟಿದಾಗ ವಸುದೇವ ಮತ್ತು ಬಲರಾಮರು ಶಿಶುವನ್ನು ಗೋಕುಲಕ್ಕೆ ಎತ್ತಿಕೊಂಡು ಹೋಗುವ ಪ್ರಸಂಗ ಬರುತ್ತದೆ. ಇಲ್ಲಿ ಊರನ್ನು ಬಿಟ್ಟು ಹೊರಟಾಗ ದ್ವಾರಬಾಗಿಲು ಒಂದು ಚಿಕ್ಕ ಚಿಗಟ (ಚಿಕ್ಕಾಡು) ಕೂಡ ನುಸುಳದಂತೆ ಭದ್ರವಾಗಿ ಬೀಗ ಜಡಿಯಲ್ಪಟ್ಟಿರುತ್ತದೆ. ಕೃಷ್ಣಬಾಲನ ಉಂಗುಟ ತಾಕಿದ ಕೂಡಲೆ ತಂತಾನೆ ಆ ಬಾಗಿಲು ತೆರೆದುಕೊಳ್ಳುತ್ತದೆ. (೭-೪೪ ವ) ಹಾಗೆಯೆ ಗೋಕುಲಕ್ಕೆ ಇವರಿಗೆ ದಾರಿ ತೋರುವುದು ಒಂದು ಬಿಳಿಯ ಎತ್ತು. ಅದರ ಕೋಡುಗಳ ಮೇಲೆ ಎರಡು ದೀಪಗಳಿರುತ್ತವೆ. ಆ ದೀಪಗಳು ಉರಿಯುತ್ತ ಇವರಿಗೆ ದಾರಿ ಸಾಗುತ್ತದೆ. ಹಾಗೇ ಸಾಗುತ್ತ ಯಮುನಾ ನದಿ ಅಡ್ಡ ಸಿಗುತ್ತದೆ. ಇವರು ದಡಕ್ಕೆ ಬರುತ್ತಿದ್ದಂತೆ ನದಿ ತಂತಾನೆ ಸೀಳಿಕೊಂಡು ದಾರಿ ಬಿಡುತ್ತದೆ. (೭-೪೯) ಹೀಗೆ ಕೃಷ್ಣ ಯಾನದಲ್ಲಿ ನಿಸರ್ಗ ಕೂಡ ಸಹಕರಿಸುತ್ತದೆ. ಫ್ಯಾಂಟಸಿ, ಪವಾಡ, ಮಾಂತ್ರಿಕ ವಾಸ್ತವ ಇವುಗಳೆಲ್ಲ ಬೆರೆತಂತಹ ಪ್ರಸಂಗ ಇದು. ಇವೆಲ್ಲವೂ ದೇಸಿ ಕಥನಗಳ ಅವಿಭಾಜ್ಯ ತಂತ್ರಗಳು. ಇಡೀ ಕಾವ್ಯದ ಹಿನ್ನೆಲೆಯಲ್ಲಿ ನೋಡಿದರೆ ಇಲ್ಲಿ ಕಥನದ ಓಟವೇ, ಧಾಟಿಯೇ ಬದಲಾಗಿಬಿಡುತ್ತದೆ. ಕಥನ ತಂತ್ರವಷ್ಟೆ ಅಲ್ಲ ಅದರ ನಿರೂಪಣಾ ಕ್ರಮ ಕೂಡ ಜಾನಪದೀಯ ಆಗಿಬಿಡುತ್ತದೆ. ದೇಸಿಯು ಮಹಾಕಾವ್ಯಕ್ಕದ ಒಳಕ್ಕೆ ನುಗ್ಗುವ ಒಂದು ಬಗೆ ಇದು. ಕೃಷ್ಣಕಥನವೆ ಜನಪದ ಮೂಲದ್ದು ಎಂಬುದೂ ಇದರಿಂದ ತಿಳಿಯುತ್ತದೆ.
ನಮ್ಮ ಜನಪದ ಕಥನಕಾವ್ಯಗಳನ್ನು ನೋಡಿದರೆ ಅಲ್ಲಿ ಫಲಶೃತಿ ಮತ್ತು ಶಕುನಗಳದ್ದೆ ಮತ್ತೊಂದು ಲೋಕವಿರುತ್ತದೆ;
ಉಡಿದತ್ತುಗ್ರಾಸಿ ಬೆಂದತ್ತರಮನೆಯುರಿದತ್ತಾತಪತ್ರಂತದಶ್ವಂ
ಮುಡಿದತ್ತೋವೋವೋ ಬಿಳ್ದತ್ತವನ ಕರಿಯುರುಳ್ದತ್ತು ಸಿಂಹಾಸನಂಗೋ
ಗೋಳ್ಗೆಡೆದತ್ತಾಳಾನಮುರ್ಕಿತ್ತೆಸೆವ ಕಸವರಂ ಕಂಸನಿಟ್ಟುಂಬ ತಟ್ಟೊ
ರ‍್ಗೊಡಿಸಿತ್ತಳ್ಗಿತ್ತು ಮಂಚ ನಡನಡ ನಡುಗಿತ್ತಾತನೇರಿರ್ದ ಮಾಡಂ (೭-೬೪)
ಶುಭಶಕುನ ಅಪಶಕುನದ ಸೂಚನೆಗಳು ಆಗುವುದು ದೇಸಿ ಕಥನಗಳಲ್ಲಿ ಸಾಮಾನ್ಯ. ಶಕುನ ಕೂಡ ಜಾನಪದರ ಒಂದು ಕಥನತಂತ್ರ ಮತ್ತು ಸಾಧನ. ಕಂಸನ ವಧಾಪ್ರಸಂಗದಲ್ಲು ಕೂಡ ಬೇರೆ ಬೇರೆ ಅಪಶಕುನಗಳ ಮೂಲಕ ಕಂಸನ ಸಾವು ಮುಂಚೆಯೇ ತಿಳಿಯುತ್ತದೆ. ದೇಸಿಯು ಮಾರ್ಗ ಕಾವ್ಯಗಳಲ್ಲಿ ಬಳಕೆಯಾಗಬಹುದಾದ ಹಲವು ವಿನ್ಯಾಸಗಳಲ್ಲಿ ಇದೂ ಒಂದು. ಹಾಗೆ ನೋಡಿದರೆ ದೇಸಿ ಮಾರ್ಗಗಳು ಪ್ರತ್ಯೇಕ ದ್ವೀಪಗಳೇನೂ ಅಲ್ಲ. ಇವು ಎರಡು ಶೈಲಿಗಳು. ಎರಡು ಕಾವ್ಯಕ್ರಮಗಳು. ಎರಡು ಸಂವೇದನೆಗಳು. ಇವೆರಡೂ ಒಂದೇ ಕಾವ್ಯದಲ್ಲಿ ಒಟ್ಟಿಗೆ ಇರಬಹುದಾದ ಸಂಗತಿಗಳೂ ಹೌದು. ನೇಮಿಚಂದ್ರನಲ್ಲಿ ಇವೆರಡೂ ಇವೆ. ಅಷ್ಟೇ ಯಾಕೆ ಕನ್ನಡದ ಎಲ್ಲ ಕವಿಗಳಲ್ಲು ಇವು ಒಟ್ಟಿಗೆ ಇರುವ ಸಂಗತಿಗಳು. ಪಂಪ ಯಾವುದನ್ನು ‘ದೇಸಿಯಲ್ಲಿ ಹೊಕ್ಕು ಮಾರ್ಗದಲ್ಲಿ ಬರುವುದು’ ಎಂದು ಹೇಳಿದನೋ ಅದು ಕನ್ನಡದ ಬಹುಪಾಲು ಕವಿಗಳ ವಿಚಾರದಲ್ಲಿ ನಿಜ. ರೂಢಿಗತ ಛಂದಸ್ಸಿನ ಅಚ್ಚಿಗೆ ದೇಸಿಯನ್ನು ಎರಕ ಹೊಯ್ದು ಮಾರ್ಗವನ್ನಾಗಿ ಪರಿವರ್ತಿಸುವ ಕೆಲಸವನ್ನು ಕನ್ನಡದ ಬಹುಪಾಲು ಕವಿಗಳು ಮಾಡಿರುವಂತೆ ನೇಮಿಚಂದ್ರನೂ ಮಾಡಿದ್ದಾನೆ.
ಶ್ರೀಕೃಷ್ಣನನ್ನು ನೋಡಬೇಕೆಂಬ ಆಸೆಯಿಂದ ದೇವಕಿ ಬಲರಾಮ ವಸುದೇವರು ಗೋಮುಖಿ ಎಂಬ ವ್ರತದ ನೆಪಮಾಡಿ ಗೋಕುಲಕ್ಕೆ ಬರುತ್ತಾರೆ. ಯಶೋದೆ ನಂದಗೋಪರು ಅವರಿಗೆ ಕೃಷ್ಣನ ಬಾಲಲೀಲೆಗಳನ್ನೆಲ್ಲ ವರ್ಣಿಸುತ್ತಾರೆ. ಆಗ ಬಹಳ ಆನಂದಿಸಿದ ದೇವಕಿಯು ಕಂಸ ಮುನಿಯದಿರಲೆಂದು ಕೃಷ್ಣನಿಗೆ ಉಪ್ಪನ್ನು ನೀವಾಳಿಸಿ ಥೂ ಥೂ ಎಂದು ತೂಪಿರಿಯುತ್ತಾಳೆ. ಇಂತಹ ಸ್ಥಳೀಯ ಆಚಾರಗಳನ್ನು ಅವು ಸಾಂಪ್ರದಾಯಿಕವಾಗಿರಲಿ ಇಲ್ಲದಿರಲಿ ಅವನ್ನು ಒಳಗೊಳ್ಳುವುದೇ ದೇಸಿಯೊಳ್ ಪೊಕ್ಕು ಮಾರ್ಗದೊಳೆ ತಳ್ವುದು. ಚೈತ್ಯಾಲಯದ ಮುಂದಿನ ದೇವಾಲಯದ ಬಲದ್ವಾರದಲ್ಲಿ ಸರ್ಪಶಯ್ಯೆ, ಶಂಖ ಇತ್ಯಾದಿಗಳು ಹುಟ್ಟಿದ ಸಂಗತಿಗಳ ವಿವರವನ್ನು ಕೂಡ ಅವರು ಹೇಳುತ್ತಾರೆ. ಆಗ ದೇವದುಂದುಭಿ ಮೊಳಗುತ್ತದೆ.
ಸುರದುಂದುಭಿ ರವಮೆಸೆದುದು/ಸುರತರುವಿಂ ಸುರಿದುದಲರ ಸರಿ ಸೂಸಿದುದಾ
ಸುರಮುಖ ಸರಸಿಜದಿನಹೋ ಪುರುಷೋತ್ತಮ ಪುಣ್ಯಮೆಂಬ ನಾದಾಮೋದಂ (೮-೨೭)
ಹೀಗೆ ಆಹೋ ಓಹೋ ಎಂಬ ಉದ್ಗಾರಗಳು ನೇಮಿಚಂದ್ರನಲ್ಲಿ ಸಾಕಷ್ಟು ಬಂದಿವೆ. ಇವು ಕೂಡ ದೇಸೀಯತೆಯ ಚಹರೆಗಳೇ. ಶ್ರೀಕೃಷ್ಣನ ಬಾಲಲೀಲೆಗಳನ್ನು ವರ್ಣಿಸುವಾಗ ಅವನಿಗೆ ಯಶೋಧೆ ಲಾಲಿ ಹಾಡುವ ಪ್ರಸಂಗ ಬರುತ್ತದೆ. ಈ ಪದ್ಯ ನೋಡಿ;
ಜೋ ನಳಿನಾಕ್ಷ ಜೋ ಭುವನವಲ್ಲಭ ಜೋ ನಯನಾಭಿರಾಮ ಜೋ
ಜಾನಕಿಯಾಣ್ಮ ಜೋ ಜನಮನೋಹರ ಜೋ ಜಗದೀಶ ಕೃಷ್ಣ ಜೋ
ಜೋ ನರಸಿಂಹ ಬೇಡಳದಿರಾ ಮೊಲೆಯಂ ಪಿಡಿ ಹೋಯಿಯೆಂದು ಚಂ
ದ್ರಾನನೆ ತೊಟ್ಟಿಲಂ ತೊನೆದು ತೂಗುತುಮಾಡಿ ಯಶೋದೆ ಪಾಡಿದಳ್ (೭-೫೯)
ಇಲ್ಲಿ ಬಂದಿರುವ ಹೋಯಿ ಎಂಬ ಕಾಕು ಕನ್ನಡದ ಕಾಕು. ದೇಸಿಗರು ತಮ್ಮ ಆಡುನುಡಿಯಲ್ಲಿ ಬಳಸುವ ಕಾಕು. (ಉಳ್ಳಳ್ಳಾಯಿ ಳುಳ್ಳಳ್ಳಾಯಿ ಮುಂತಾಗಿ ಕೂಡ ಬಳಸಬಹುದಾದ ಕಡೆ ನೇಮಿಚಂದ್ರ ಹೋಯಿ ಎಂಬಷ್ಟನ್ನಾದರೂ ಬಳಸಿದ್ದಾನಲ್ಲ. ಜೋಗುಳ ಬರೆಯುವುದೂ ಛಂದಸ್ಸಿನಲ್ಲೆ!) ಇಂತಹ ಕಾಕುಗಳೇ ಭಾಷೆಯ ದೃಷ್ಟಿಯಿಂದ ದೇಸಿ ಬಳಕೆಗಳು. ದೇಸೀಯತೆಯು ಕಾವ್ಯದಲ್ಲಿ ಬಳಕೆಗೊಳ್ಳಬಹುದಾದ ವಿನ್ಯಾಸಗಳಲ್ಲಿ ಇದೂ ಒಂದು. ಇಂತಹ ಬಳಕೆಗಳು ನೇಮಿಚಂದ್ರನಲ್ಲಿ ಸಾಕಷ್ಟಿವೆ. ಇವುಗಳ ಬಳಕೆಯಲ್ಲಿ ನಮ್ಮಲ್ಲಿ ಎಲ್ಲರಿಗಿಂತ ಎತ್ತಿದ ಕೈ ಎಂದರೆ ಕುಮಾರವ್ಯಾಸ. ಕನ್ನಡದ ಆಡುನುಡಿಯ ಪದಕೋಶವನ್ನು ನೇರವಾಗಿ ಬಳಸುವ ಮತ್ತು ಅದನ್ನು ಬೇರೆ ಬೇರೆ ರೀತಿಯ ಪದಕೂಟಗಳಾಗಿ ಸಂಯೋಜಿಸಿ ಬಳಸುವ ವಿಚಾರದಲ್ಲಿ ಕುಮಾರವ್ಯಾಸ ನಿಸ್ಸೀಮ. ನೇಮಿಚಂದ್ರ ಕೂಡ ತನ್ನ ಕಾವ್ಯದಲ್ಲಿ ಈ ರೀತಿ ಮಾಡುತ್ತಾನೆ. ಇವನ ಪದಬಳಕೆಗಳು ಸರಿಸುಮಾರು ಛಂದಸ್ಸಿಗೆ ಒಗ್ಗಿಸಿದ ಪ್ರಯೋಗಗಳು. ಇಲ್ಲಿ ಸಹಜತೆಗಿಂತ ಪಾಂಡಿತ್ಯದ ಕುಸುರಿಯೆ ಎದ್ದು ಕಾಣುತ್ತದೆ. ಕೆಲವೊಂದು ಕಡೆಯಂತೂ ಜಾನಪದೀಯತೆ-ಆಡುನುಡಿ-ಪಡೆನುಡಿ ಬಳಕೆಗಳು ಕಟ್ ಅಂಡ್ ಪೇಸ್ಟ್ ಮಾದರಿಯಲ್ಲಿ ಕಾಣಿಸುತ್ತವೆ. ನೇಮಿಚಂದ್ರ ಎಷ್ಟೇ ಕಾವ್ಯಕನ್ನಡಕ್ಕೆ, ಛಂದೋಕನ್ನಡಕ್ಕೆ ದೇಸಿಯನ್ನು ತಿರುಗಿಸಲು ಯತ್ನಿಸಿದರೂ ಅವು ಕೆಲವೊಮ್ಮೆ ಮರ‍್ಗವೆ ಆಗಿ ಉಳಿಯುತ್ತವೆ. ಇದು ಪದಪ್ರಯೋಗಕ್ಕೆ ಮಾತ್ರ ಸಂಬಂದಿಸಿದ ಸಂಗತಿಯಲ್ಲ. ಕೆಲವೊಮ್ಮೆ ಮಧ್ಯೆ ಮಧ್ಯೆ ಒಂದೊಂದು ಪದ್ಯಗಳೇ ಮಾರ್ಗದ ನಡುವೆ ದೇಸಿಯಾಗಿ ಒಳಬಂದು ಸೇರಿಕೊಂಡಂತೆ (ಆಡ್ ಮ್ಯಾನ್ ಔಟ್ ಎಂಬಂತೆ) ಕಾಣುತ್ತವೆ. ಹೊಂದಾಣಿಕೆ ಮತ್ತು ಓಜೆ (ನಿರಂತರತೆ)ಗಳು ಇವನ ಕಾವ್ಯದಲ್ಲಿ ‘ದೇಸಿಯೊಳ್ ಪುಗುವುದು ಪೊಕ್ಕು; ಮಾರ್ಗದೊಳೆ ತಳ್ವುದು ತಳ್ತು’ ಬಂದಂತೆ ಆಗಿಲ್ಲ. ಕಟ್ಟಿ ಅಣಿಗೊಳಿಸಿ ರಚಿಸಿದಂತೆ ಆಗಿದೆ. ಇರಲಿ; ಕೊನೆಯಲ್ಲಿ ಒಂದು ಸ್ಪಷ್ಟೀಕರಣ: ಇಲ್ಲಿ ನೇಮಿಚಂದ್ರನ ಎರಡೂ ಕಾವ್ಯಗಳನ್ನು ಈ ಪ್ರಬಂಧ ಸಿದ್ಧಪಡಿಸುವಾಗ ಗಮನಿಸಿಲ್ಲ. ಇವನ ಅರ್ಧನೇಮಿ ಪುರಾಣ ಒಂದನ್ನು ಮಾತ್ರ ಪ್ರಧಾನವಾಗಿ ಗಮನಿಸಲಾಗಿದೆ. ಹಾಗಾಗಿ ಇಲ್ಲಿನ ಮಾತುಗಳು ಅರ್ಧಸತ್ಯದ ಹಾಗೆ ಕಂಡರೂ ಕಂಡಾವು.
ಡಾ. ರಾಮಲಿಂಗಪ್ಪ ಟಿ.ಬೇಗೂರು.
ಈ ಅಂಕಣದ ಹಿಂದಿನ ಬರೆಹಗಳು:
ಕಾವ್ಯಪ್ರಮಾಣ - ಕವಿಪ್ರಮಾಣಗಳ ನಿರಾಕರಣೆ
ಕಾಕಾಸುರ, ವಿರಾಧ ಪ್ರಸಂಗಗಳ ರಾಜಕಾರಣ
ರಾಮಾಯಣ ಸಂಕಥನ -03
ರಾಮಾಯಣ ಸಂಕಥನ 2
ರಾಮಾಯಣ ಸಂಕಥನ-1
ಕೆರೆಯ ನೀರನು ಕೆರೆಗೆ ಚೆಲ್ಲಿ
ಕೊಂಡಿ ಎಲ್ಲಿ ಕಳಚಿದೆ?
ಯಾರದೊ ಅಜೆಂಡಾ ಮಾರಮ್ಮನ ಜಾತ್ರೆ
ಹೊಸಕಾವ್ಯದ ಭಾಷೆ, ಗಾತ್ರ, ಹೂರಣ
ಗೌರಿಯರು: ಕುಟುಂಬ - ದಾಂಪತ್ಯ ಸಂಕಥನ
ರಾಷ್ಟ್ರೀಯತೆಯ ಆಚರಣೆಯ ಸುತ್ತ
ನೆನ್ನೆ ಮನ್ನೆ-1
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ
ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.