ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ

Date: 21-08-2022

Location: ಬೆಂಗಳೂರು


“ಕುಟುಂಬದಿಂದ ದೂರವಾದವರನ್ನು ಸೇರಿಸಿ ದೊಡ್ಡ ಕುಟುಂಬವನ್ನು ಕಟ್ಟಿ ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಬದುಕಬೇಕೆನ್ನುವ ಇವರ ಮಹದಾಸೆ ನೆರವೇರಲಿ. ಇಲ್ಲಿಗೆ ಬರುವ ಯಾರಿಗೂ ಅನಾಥ ಭಾವ ಬರದಂತೆ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂಬ ಇವರ ಕನಸು ಎಲ್ಲರ ಬದುಕಿಗೂ ದಾರಿ ದೀಪವಾಗಲಿ” ಎಂದು ಹಾರೈಸಿದ್ದಾರೆ ಲೇಖಕಿ ಜ್ಯೋತಿ ಎಸ್. ಅವರು ತಮ್ಮ ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ಈ ಸಲ ಹೇಳಿರುವುದು ಪಣೆ ಮಂಗಳೂರಿನ 73 ವರ್ಷದ ಕುಮುದ ಜೆ. ಕುಡ್ವ ಅವರ ಕಥೆ.

ಯಾವುದೇ ಸರ್ಕಾರದ ಅನುದಾನವಿಲ್ಲದೆ, ಖಾಸಗಿ ಹಣವಿಲ್ಲದೆ, NGOಗಳ ಸಹಕಾರವಿಲ್ಲದೆ ವೃದ್ಧಾಶ್ರಮ ನಡೆಸಲು ಮುಂದಾಗಿರುವುದು ಪಣೆ ಮಂಗಳೂರಿನ 73 ವರ್ಷದ ಕುಮುದ ಜೆ. ಕುಡ್ವ.

ಈ ಕಾಲಘಟ್ಟದಲ್ಲಿ ತುಂಬ ಜನರು ತಮಗಾಗಿ ತಮ್ಮ ಮಕ್ಕಳಿಗಾಗಿ ಹಣ, ಆಸ್ತಿ ಮಾಡಬೇಕು, ಮಕ್ಕಳಿರದಿದ್ದರೆ ಇರುವವರೆಗೆ ಚೆನ್ನಾಗಿ ಖರ್ಚು ಮಾಡಿ ಆರಾಮಾಗಿ ಇದ್ದು ಹೋಗಬೇಕು ಎನ್ನುವವರ ಮಧ್ಯದಲ್ಲಿ ಈ ತಾಯಿ ಇಳಿವಯಸ್ಸಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಆಸರೆಯಿಲ್ಲದವರಿಗೆ ಆಸರೆಯಾಗುವ ಸಂಕಲ್ಪ ಮಾಡಿದ್ದಾರೆ.

*

ಹುಟ್ಟಿದ ಊರು ಮಂಗಳೂರು. ನನ್ನ ತಂದೆ ಶ್ರೀನಿವಾಸ ನಾಯಕ್, ಅಮ್ಮ ದೇವಿ ಬಾಯಿ. ನನ್ನ ತಂದೆ ತಾಯಿಗೆ 13ನೇ ಮಗಳಾಗಿ ಹುಟ್ಟಿದವಳು ನಾನು. ಬಿ. ಕಾಂ ವರೆಗೂ ವಿದ್ಯಾಭ್ಯಾಸ ಮುಗಿಸಿದ್ದೇನೆ..

20 ವರ್ಷಕ್ಕೆ ನನಗೆ ಜಗದೀಶ್ ಕುಡ್ವ ಎಂಬುವವರ ತುಂಬು ಕುಟುಂಬದ ಜೊತೆಗೆ ಮದುವೆಯಾಯ್ತು. ನನ್ನ ಗಂಡ ಮಾಡದ ವ್ಯಾಪಾರಗಳಿಲ್ಲ. ಸ್ಲಾಬ್, ಕಂಬಗಳು, ಕಟ್ಟಿಗೆ ವ್ಯಾಪಾರ, ಐಸ್ ಕ್ರೀಮ್, ದಿನಸಿ ಅಂಗಡಿ ಹೀಗೆಲ್ಲಾ 14 ವರ್ಷ ಪ್ರಾಯದವರಿದ್ದಾಗಿನಿಂದಲೇ ವ್ಯಾಪಾರ ಶುರು ಮಾಡಿದ್ದಾರೆ. ನನ್ನ ಗಂಡ ಹೆಚ್ಚು ಓದಿಲ್ಲ. ನಮಗೆ ಮಕ್ಕಳಿಲ್ಲದ ಕಾರಣ ಎರಡು ಮಕ್ಕಳನ್ನು ದತ್ತು ತೆಗೆದುಕೊಂಡು ಅವರನ್ನು ಚೆನ್ನಾಗಿ ಓದಿಸಿ ಮದುವೆ ಮಾಡಿ ಕೊಟ್ಟಿದ್ದೇವೆ.

ನಮ್ಮ ಮನೆಯಲ್ಲಿ ಒಟ್ಟು ಹತ್ತು ಜಾತಿಯ 35ಕ್ಕೂ ಹೆಚ್ಚು ನಾಯಿಗಳಿದ್ದವು. ಪ್ರಾಣಿಗಳೆಂದರೆ ನನಗೆ ತುಂಬಾ ಪ್ರೀತಿ. ನಾಯಿಯಷ್ಟು ಪ್ರಾಮಾಣಿಕತೆ ಬೇರೆ ಎಲ್ಲೂ ಸಿಗೋದಿಲ್ಲ. ನಾನು ನಾಯಿಗಳಿಗೆ ಇಂಜೆಕ್ಷನ್ ಮಾಡುವುದು, ಔಷಧಿ ಕೊಡುವುದು, ಹೆರಿಗೆ ಸಮೇತ ಮಾಡಿಸುತ್ತಿದ್ದೆ. ಯಾರಾದರೂ ಕೇಳಿದರೆ ನಾನು ಡಾಕ್ಟರ್ ಅಲ್ಲ. ಹಳೇ ರೋಗಿ ಎನ್ನುತ್ತಿದ್ದೆ. 35 ವರ್ಷ ನಾಯಿಗಳನ್ನು ಸಾಕಿದ ಅನುಭವ ಇದೆ.

ನನ್ನ ಗಂಡ ಅವರ 63ನೇ ವಯಸ್ಸಿನಲ್ಲಿ ಹೃದಯದ ಖಾಯಿಲೆಯಿಂದ ತೀರಿಕೊಂಡರು. ನಾನು ಸತ್ತರೆ ನೀನು ಅಳಬಾರದು ಎಂದು ಮೊದಲೇ ನನ್ನನ್ನು ಮಾನಸಿಕವಾಗಿ ತಯಾರಿ ಮಾಡಿದ್ದರು. ನಾನು ಸತ್ತೆ ಅಂತ ನೀನು ಮನೆಯೊಳಗೆ ಕೂರುವ ಹಾಗಿಲ್ಲ. ಕೂಡಲೆ ಹೊರಗೆ ಹೋಗಬೇಕು. ಎಲ್ಲಾ ಕೆಲಸಗಳನ್ನು ನೀನೆ ಮಾಡಬೇಕು. ಅಲ್ಲದೆ ಯಾರ ಹತ್ತಿರವೂ ಸಹಾಯ ತೆಗೆದುಕೊಳ್ಳಬಾರದು. ನಿನಗೆ ಸರಿ ಅನ್ನಿಸಿದ ಮಾರ್ಗದಲ್ಲಿ ನೀನು ನಡೆ ಎಂದು ನನ್ನ ಮೊದಲೇ ಗಟ್ಟಿಗೊಳಿಸಿದ್ದರು.

ನಾನು ಯಾರ ಮೇಲೂ ಅವಲಂಬಿತಳಾಗದಂತೆ ಬದುಕನ್ನು ಕಟ್ಟಿಕೊಳ್ಳಲು ಕಲಿಸಿದ್ದು ಅವರೇ. ಯಾವತ್ತೂ ಸೋತವರೇ ಎದ್ದು, ಗೆದ್ದು ನಿಲ್ಲೋದು. ಎಂದು ತೀರ್ಮಾನಿಸಿ ರಥ ಬೀದಿ, ಮೊಗರ್ನಾಡು, ಪಣೆ ಮಂಗಳೂರಿನಲ್ಲಿ ಜೆ. ಕೆ. ಸೇವಾಶ್ರಮ ಎಂಬ ಆಶ್ರಮವನ್ನು ಪ್ರಾರಂಭಿಸಿದ್ದೇನೆ.

ನಾಳೆ ನನ್ನ ಹಾಗೆ ಅಲ್ಲವಾ ಬೇರೆಯವರಿಗೂ ಆಗೋದು. ನನಗೇನೋ ನಿಲ್ಲಲು ಜಾಗವಿದೆ. ಜಾಗವಿಲ್ಲದವರು ಏನು ಮಾಡಬೇಕು. ಅವರನ್ನು ಚುಚ್ಚಿ ಚುಚ್ಚಿ ಮಾತನಾಡುತ್ತಾರೆ. ಎಷ್ಟೋ ಜನರು ಮಾನಸಿಕ ಅಸ್ವಸ್ಥರಾಗುತ್ತಾರೆ. ಅಂತಹವರು ನಮ್ಮ ಆಶ್ರಮಕ್ಕೆ ಬರಲಿ. ಹುಟ್ಟಿದ ಒಂದು ತಿಂಗಳ ಮಕ್ಕಳಿಂದ ತೆಗೆದು ಕೊಳ್ಳುತ್ತೇನೆ. ನಾನು ಸಾಕುತ್ತೇನೆ. ಆ ಮಕ್ಕಳು ಓದುವಷ್ಟು ಓದಿಸಿ ಕೆಲಸ ಕೊಡಿಸುತ್ತೇನೆ. ಹೆಣ್ಣು ಮಗುವಾದರೂ ಸರಿ, ಗಂಡು ಮಗುವಾದರೂ ಸರಿ, ಆ ಮಕ್ಕಳಿಗೆ ಯಾವ ಕ್ಷೇತ್ರದಲ್ಲೆಲ್ಲಾ ಆಸಕ್ತಿ ಇದೆಯೋ ಅದನ್ನೆಲ್ಲ ಕಲಿಸುತ್ತೇನೆ.

ನಮ್ಮ ಆಶ್ರಮಕ್ಕೆ ಬರುವವರು, ಅವರಿಗಿಷ್ಟವಾಗುವ ಯಾವ ಕೆಲಸವನ್ನಾದರೂ ಮಾಡಬಹುದು. ಇದು ಆಶ್ರಮವಲ್ಲ. ಅವರದ್ದೇ ಸ್ವಂತ ಮನೆ ಎಂದು ತಿಳಿದು ಗಾರ್ಡನಿಂಗ್ ಮಾಡುವುದು, ತರಕಾರಿ ಗಿಡ ನೆಡುವುದು, ಕ್ಲೀನ್ ಮಾಡುವುದು, ಪೂಜೆ, ಭಜನೆ, ಪ್ರಾಣಿಗಳಲ್ಲಿ ಆಸಕ್ತಿಯುಳ್ಳವರು ನಾಯಿ, ಬೆಕ್ಕು ಇದೆ. ಹೀಗೆ ಅವರ ಆಸಕ್ತಿಯ ಕೆಲಸಗಳಲ್ಲಿ ಅವರನ್ನು ಅವರು ತೊಡಗಿಸಿಕೊಳ್ಳಬಹುದು.

ಟೈಲರಿಂಗ್ ಕಲಿತವರಿಗೆ ಟೈಲರಿಂಗ್ ಮಷೀನ್ ಇದೆ. ಹರಿದ ಬಟ್ಟೆಗಳನ್ನು ಹೊಲಿಯಬಹುದು. ಇತರರಿಗೆ ಹೇಳಿ ಕೊಡಬಹುದು. ಸಂಗೀತ, ಹಾರ್ಮೋನಿಯಂ, ಸಿತಾರ್ ಕಲಿಯುವ ಆಸಕ್ತಿ ಇದ್ದವರಿಗೆ ತರಬೇತಿ ಕೊಡಲು ವ್ಯವಸ್ಥೆ ಮಾಡುತ್ತೇನೆ. ಮಕ್ಕಳಿಗೆ ಟ್ಯೂಷನ್ ಮಾಡುವವರು ಉಚಿತವಾಗಿ ಹೇಳಿಕೊಡಬಹುದು. ಇದರಿಂದ ಇಲ್ಲಿಗೆ ಬರುವ ಎಲ್ಲರೂ ಕಾರ್ಯ ಚಟುವಟಿಕೆಯಿಂದ ಕ್ರಿಯಾಶೀಲರಾಗಿರಲು ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಇದು ಅವರದೇ ಮನೆ.

ಇಲ್ಲಿಗೆ ಬರುವ ಯಾರೂ ಅನಾಥರಲ್ಲ. ಪ್ರತಿಯೊಬ್ಬರೂ ನಮ್ಮ ಆಶ್ರಮದ ಸ್ವತ್ತು. ಆಶ್ರಮ ಅವರ ಸ್ವತ್ತು. 100 ಮಂದಿಯನ್ನು ಆಶ್ರಮದಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ.

ಆಶ್ರಮದ ಸುತ್ತ ಇರುವ ಜಾಗದಲ್ಲಿ ತರಕಾರಿಗಳನ್ನು ಬೆಳೆಯಬಹುದು. ಇಲ್ಲಿ 24 ತೆಂಗಿನ ಮರಗಳಿವೆ. ಅದರ ಕಾಯಿಗಳನ್ನು ಆಶ್ರಮದ ಅಡುಗೆಗೆ ಬಳಸಿಕೊಳ್ಳಬಹುದು. ಇದರಿಂದ ಇಲ್ಲಿಗೆ ಬರುವ ಎಲ್ಲರಿಗೂ ಅನುಕೂಲವಾಗುತ್ತದೆ. ಅವರ ಕೌಶಲಗಳನ್ನು ಇತರರಿಗೆ ಹಂಚಿ ಸುಶಿಕ್ಷಿತರನ್ನಾಗಿ ಕೌಶಲ್ಯಯುತರನ್ನಾಗಿ ಮಾಡಬಹುದು.

ಸಾಯುವ ಕಾಲಕ್ಕೆ ಅವರಿಗೆ ಯಾರಿಲ್ಲ ಅಂತ ಅವರ ಹೆಣವನ್ನು ನಾನು ಬಿಸಾಡುವುದಿಲ್ಲ. ಅವರ ಜಾತಿಯ ಪ್ರಕಾರವೇ ಸಂಸ್ಕಾರ ಮಾಡಿಸುತ್ತೇನೆ. ಅವರ ಕಾರ್ಯಗಳನ್ನು ಮಾಡಿ, ಅವರ ಹೆಸರಿನಲ್ಲಿ ನಾಲ್ಕಾರು ಮಕ್ಕಳಿಗೆ ಊಟ ಹಾಕುತ್ತೇನೆ.

ನಮ್ಮಲ್ಲಿ ಬರುವ ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತೇನೆ. ಪ್ರೀತಿ ಎಂತಹದೇ ನೋವನ್ನು ಮರೆ ಮಾಚಿಸುತ್ತದೆ. ನನಗೆ ಈ ಕೆಲಸ ಮಾಡಲು ಖುಷಿಯಿದೆ. ನಾನು ಅವರಿಗೆ ತಾಯಿಯ ಪ್ರೀತಿ ಕೊಟ್ಟಲ್ಲಿ ಅವರು ಖಂಡಿತ ಎಲ್ಲ ನೋವನ್ನು ಮರೆತು ಆನಂದದಿಂದ ಇರುತ್ತಾರೆ.

ಪ್ರತೀ ಬಾರಿ ಎಲ್ಲಿಗಾದರೂ ಹೋಗಬೇಕಾದರೆ ಯಾರನ್ನಾದರೂ ಕರೆಯಬೇಕು. ಅರ್ಜೆಂಟ್ ಆಗಿ ಯಾವ ಆಟೋ ಸಿಗೋದಿಲ್ಲ. ಆಗ ಅನ್ನಿಸಿದ್ದು ನಾನೆ ಯಾಕೆ ಕಾರ್ ಡ್ರೈವಿಂಗ್ ಕಲಿಯಬಾರದು? ಅಂತ ನನ್ನ 73ನೇ ವಯಸ್ಸಿನಲ್ಲಿ ಮಾತಾಸ್ ಡ್ರೈವಿಂಗ್ ಸ್ಕೂಲ್‌ನಲ್ಲಿ ಕಾರ್ ಓಡಿಸುವುದನ್ನು ಕಲಿತೆ.

*

ಸ್ವಾರ್ಥ ತುಂಬಿರುವ ಸಮಾಜದಲ್ಲಿ ಇಷ್ಟೊಂದು ನಿಸ್ವಾರ್ಥದಿಂದ ಪ್ರೀತಿಯಿಂದ ಮನೆಯಂಥ ಆಶ್ರಮ ಕಟ್ಟಿ ಅನಾಥರಿಗೆ ಆಶಾಕಿರಣವಾಗಿದ್ದಾರೆ. ಯಾರ ಮೇಲೂ ಅವಲಂಬಿತವಾಗಬಾರದೆಂದು ಈ ವಯಸ್ಸಿನಲ್ಲಿ ಕಾರ್ ಡ್ರೈವಿಂಗ್ ಕಲಿತ ಇವರ ಉತ್ಸಾಹ ಎಂಥವರಿಗೂ ಸ್ಫೂರ್ತಿ. ಕುಟುಂಬದಿಂದ ದೂರವಾದವರನ್ನು ಸೇರಿಸಿ ದೊಡ್ಡ ಕುಟುಂಬವನ್ನು ಕಟ್ಟಿ ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಬದುಕಬೇಕೆನ್ನುವ ಇವರ ಮಹದಾಸೆ ನೆರವೇರಲಿ. ಆಶ್ರಮವನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು. ಇಲ್ಲಿಗೆ ಬರುವ ಯಾರಿಗೂ ನಾನು ಅನಾಥ ಎಂಬ ಭಾವ ಬರದಂತೆ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂಬ ಇವರ ಕನಸು ಎಲ್ಲರ ಬದುಕಿಗೂ ದಾರಿ ದೀಪವಾಗಲಿ.

-ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...