ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’

Date: 16-04-2023

Location: ಬೆಂಗಳೂರು


''ಮನೆಯ ಹಿರಿಯರಿಗೆ ವಯೋಸಹಜ ಕಾಯಿಲೆಗಳು ಬಂದಾಗ ಅವರ ಎಷ್ಟೋ ಮಕ್ಕಳು ಅವರನ್ನು ಮುಟ್ಟಲು, ಅವರ ಸೇವೆ ಮಾಡಲು ಹಿಂಜರಿಯುವ ಈ ಕಾಲದಲ್ಲಿ ಈ ಕರುಣಾಶ್ರಯದ ಸಿಬ್ಬಂದಿ ಯಾವುದೇ ಹಿಂಜರಿಕೆಯಿಲ್ಲದೇ, ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುತ್ತಾರೆ,” ಎನ್ನುತ್ತಾರೆ ಅಂಕಣಗಾರ್ತಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ಕುಂದಲಹಳ್ಳಿ ಗೇಟ್ ಬಳಿಯ ಮಾರತಹಳ್ಳಿಯ ಕರುಣಾಶ್ರಯದ’ ಕುರಿತ ಬರವಣಿಗೆಯನ್ನು ಕಟ್ಟಿಕೊಟ್ಟಿದ್ದಾರೆ.

ಸಮಾಜ ಸೇವೆ ಮಾಡುವ ಎಷ್ಟೋ ಸ್ವಯಂ ಸೇವಕ ಸಂಘಗಳನ್ನು ನೋಡಿರುತ್ತೀರಿ. ಅನಾಥಾಶ್ರಮ ವೃದ್ಧಾಶ್ರಮಗಳು ಕೂಡ ಸಾಕಷ್ಟಿವೆ. ಆದರೆ ಇವತ್ತು ನಾನು ತಂದಿರುವ ಕಥನ ಇವುಗಳಿಗೆ ಒಂದು ಕೈ ಮೀರಿದ್ದು ಎನ್ನಬಹುದಾದ ಕರುಣಾಶ್ರಯದ್ದು. ಕರುಣಾಶ್ರಯ ಹೆಸರಿಗೆ ತಕ್ಕ ಹಾಗೆ ಕರುಣೆ + ಆಶ್ರಯ, ಕರುಣೆಯಿಂದ ಆಶ್ರಯ ಕೊಡುವ ಜಾಗವಾಗಿದೆ. ಕೊನೆಯ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳಿಗೆ ಅವರ ಜೀವನದ ಕೊನೆ ಚೆನ್ನಾಗಿರಲಿ ಘನತೆಯಿಂದ ಅವರು ಕೊನೆಯುಸಿರೆಳೆಯಲಿ ಎನ್ನುವ ಸದುದ್ದೇಶದಿಂದ ಸೇವೆ ಸಲ್ಲಿಸುವ ಆಶ್ರಯ ತಾಣವಾಗಿದೆ. ನಿಜಕ್ಕೂ ಇದನ್ನು ಹೊಗಳಲು ನನ್ನಲ್ಲಿ ಪದಗಳಿಲ್ಲ. ಯಾಕೆಂದರೆ ಇದು ಕೊನೆಯ ಹಂತದ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಸೇವೆ ಸಲ್ಲಿಸುವ ಆಶ್ರಯ ತಾಣ. ಮನೆಯ ಹಿರಿಯರಿಗೆ ವಯೋಸಹಜ ಕಾಯಿಲೆಗಳು ಬಂದಾಗ ಅವರ ಎಷ್ಟೋ ಮಕ್ಕಳು ಅವರನ್ನು ಮುಟ್ಟಲು, ಅವರ ಸೇವೆ ಮಾಡಲು ಹಿಂಜರಿಯುವ ಈ ಕಾಲದಲ್ಲಿ ಈ ಕರುಣಾಶ್ರಯದ ಸಿಬ್ಬಂದಿ ಯಾವುದೇ ಹಿಂಜರಿಕೆಯಿಲ್ಲದೇ, ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುತ್ತಾರೆ. ಬೆಂಗಳೂರಿನ ಕುಂದಲಹಳ್ಳಿ ಗೇಟ್ ಬಳಿ ಮಾರತಹಳ್ಳಿಯ ಕರುಣಾಶ್ರಯದ ಹೆಮ್ಮೆಯ ಈ ಜರ್ನಿ ಇಂದಿನ ನಿಮ್ಮ ಓದಿಗಾಗಿ.

'ಕೊನೆಯ ಹಂತದ ಕ್ಯಾನ್ಸರ್ ರೋಗಿಯನ್ನು ಹಾಸ್ಪಿಟಲ್ ನಲ್ಲಿ ಸೇರಿಸಿದರೆ ICU ನಲ್ಲಿಟ್ಟಿರುತ್ತಾರೆ. ಪದೇ ಪದೇ ನೂರೆಂಟು ಟೆಸ್ಟುಗಳನ್ನು ಮಾಡುತ್ತಿರುತ್ತಾರೆ. ಡಾಕ್ಟರ್ ಗಳು ಕೋಟುಗಳನ್ನು ಹಾಕಿ ವೈದ್ಯಕೀಯ ಸಲಕರಣೆಗಳನ್ನು ಹಿಡಿದುಕೊಂಡು ಒಳಗೆ ಬಂದಾಗ ರೋಗಿಗೆ ನನ್ನ ದೇಹದಲ್ಲಿ ಏನೋ ಆಗುತ್ತಿದೆ ಎನ್ನುವ ಭಯದ ವಾತಾವರಣ ನಿರ್ಮಾಣವಾಗುತ್ತದೆ. ಅವರ ಮನೆಯವರನ್ನು ಭೇಟಿ ಮಾಡಲು ಬಿಡುವುದಿಲ್ಲ ಅರ್ಧ ಜೀವ ಅಲ್ಲೇ ಕುಗ್ಗಿ ಹೋಗಿರುತ್ತದೆ. ಡಾಕ್ಟರ್ ಗಳಿಗೆ ಗೊತ್ತಿರತ್ತೆ ಈ ಜೀವ ಇನ್ನು ಎಷ್ಟು ದಿನ ಬದುಕಬಹುದು ಅಂತ. ಆ ತರಹದ ಅನುಭವ ಇಲ್ಲಿ ಆಗಬಾರದು ಎಂದು ಸಿಟಿ ಲಿಮಿಟ್ಸ್ ನಲ್ಲಿ ಸತತ ಇಪ್ಪತ್ತೇಳು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸಂಸ್ಥೆ ಕರುಣಾಶ್ರಯ. ಮನೆಯಲ್ಲಿ ನೋಡಿಕೊಳ್ಳುವ ಅನುಕೂಲವಿರುವುದಿಲ್ಲ . ರೋಗಿಗಳು ದಿನದಿಂದ ದಿನಕ್ಕೆ ಕುಗ್ಗುತ್ತಿರುತ್ತಾರೆ. ಅಂತಹವರನ್ನು ನಮ್ಮಲ್ಲಿ ಕರೆದುಕೊಂಡು ಬಂದರೆ ಆಪ್ತ ಸಮಾಲೋಚನೆ ಮಾಡಿ ರೋಗಿಗಳಲ್ಲಾಗುವ ತಳಮಳ, ನೋವು ಎಲ್ಲದಕ್ಕೂ ಔಷಧಿ ಕೊಟ್ಟು ಸಾಂತ್ವನ ಹೇಳುತ್ತೇವೆ. ಅವರ ಸಣ್ಣ ಪುಟ್ಟ ಆಸೆಗಳನ್ನು ಹೇಳಿಕೊಳ್ಳುತ್ತಾರೆ. ನಮ್ಮಿಂದಾಗುವ ಆಸೆಗಳನ್ನು ನೆರವೇರಿಸುತ್ತೇವೆ. ಅವರ ಜೊತೆಗೆ ಆಟ ಆಡುವುದು, ಸಂಗೀತ ಕೇಳಿಸುವುದು, ನೋವು ನಲಿವುಗಳನ್ನು ಹಂಚಿಕೊಂಡು ಪರಸ್ಪರ ಸಂತೋಷದಿಂದಿರಲು ಸಹಾಯ ಮಾಡುವ ಜಾಗ ನಮ್ಮ ಕರುಣಾಶ್ರಯ'.

'ಇಲ್ಲಿನ ನರ್ಸಿಂಗ್ ಸ್ಟಾಫ್ ಗಳನ್ನು ನಾವು ಸಿಸ್ಟರ್ ಅಂತ ಕರೆಯುತ್ತೇವೆ. ಆದರೆ ಅವರು ತಾಯಿಯಂತೆ ಇಲ್ಲಿ ಸೇವೆ ಮಾಡುತ್ತಾರೆ. ಅವರ ಸೇವೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಅದರಲ್ಲಂತೂ ನಮ್ಮ ಕರುಣಾಶ್ರಯದಲ್ಲಿ ಲಾಸ್ಟ್ ಸ್ಟೇಜ್ ಕ್ಯಾನ್ಸರ್ ರೋಗಿಗಳಲ್ಲಿ ಗಾಯಗಳಾಗಿ ಹುಳುಗಳು ಬಂದಿರುತ್ತವೆ. ಸ್ವಲ್ಪವೂ ಬೇಸರಿಸಿಕೊಳ್ಳದಂತೆ ಅದನ್ನು ಸ್ವಚ್ಛ ಮಾಡಿ ಗಾಯಗಳಿಗೆ ಡ್ರೆಸ್ಸಿಂಗ್ ಮಾಡಿ, ಡೈಪರ್ ಚೇಂಜ್ ಮಾಡೋದು, ಸಮಯಕ್ಕೆ ಸರಿಯಾಗಿ ಔಷಧಿ ಕೊಡುವುದು, ಡೆಡ್ ಬಾಡಿ ಪ್ಯಾಕಿಂಗ್ ಮಾಡೋದಾಗಲಿ ಇದನ್ನೆಲ್ಲಾ ತನ್ನ ಸ್ವಂತ ಮನೆಯವರು ಇಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೋ ಇಲ್ವೋ ಅಷ್ಟು ಅಚ್ಚುಕಟ್ಟಾಗಿ ಮಾಡುತ್ತಾರೆ. ಅವರ ಈ ಕಾರ್ಯಕ್ಕೆ ಹ್ಯಾಟ್ಸ್ ಆಫ್. ಇಲ್ಲಿಯವರೆಗೆ ನಾವು ಇಪ್ಪತ್ತೇಳು ಸಾವಿರಕ್ಕೂ ಹೆಚ್ಚು ಇಂತಹ ರೋಗಿಗಳನ್ನು ನೋಡಿಕೊಂಡಿದ್ದೇವೆ. ನಮ್ಮಲ್ಲಿ ಮೂರು ವಿಭಾಗಗಳಿವೆ. ಮೊದಲನೆಯದಾಗಿ ಹೋಮ್ ಕೇರ್- ಇದು ನಮ್ಮಲ್ಲಿನ ಡಾಕ್ಟರ್, ನರ್ಸ್ ಗಳು ರೋಗಿಯ ಮನೆಗೆ ಹೋಗಿ ಉಚಿತವಾಗಿ ಆರೈಕೆ ಮಾಡಿಬರುತ್ತಾರೆ. ಎರಡನೇಯದು- ನಮ್ಮಲ್ಲಿ ಎಪ್ಪತ್ತೆರಡು ಹಾಸಿಗೆಗಳ ಹಾಸ್ಪೈಸ್ ಸೆಂಟರ್ ಇದೆ. ಇನ್ನು ವಾಸಿಯೇ ಆಗುವುದಿಲ್ಲ ಎನ್ನುವಂತಹ ಕೊನೆಯ ಹಂತದ ಕ್ಯಾನ್ಸರ್ ರೋಗಿಗಳನ್ನು ನಮ್ಮ ಆಶ್ರಯದಲ್ಲಿ ಇಟ್ಟುಕೊಂಡು ಅವರಿಗೆ ಸೇವೆ ಸೌಲಭ್ಯಗಳನ್ನು ಕೊಡುತ್ತೇವೆ. ಮೂರನೇಯದಾಗಿ- ಓಪಿಡಿಗೆ ಬೆಳಗ್ಗೆ ಬಂದು ಡೇ ಕೇರ್ ನಲ್ಲಿದ್ದು ಔಷಧಿ ತೆಗೆದುಕೊಂಡು ಆರೈಕೆ ಮಾಡಿಸಿಕೊಂಡು ಸಂಜೆ ಮನೆಗೆ ಹೋಗುವುದು. ಈ ರೀತಿಯಾಗಿ ನಮ್ಮಲ್ಲಿ ಸೇವೆಗಳು ನಡೆಯುತ್ತದೆ. ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಪ್ರಶ್ನೆ ಎಂದರೆ ಇಲ್ಲಿಗೆ ಬಂದವರು ಯಾರೂ ವಾಸಿಯಾಗಿ ಹೋಗಿಲ್ವಾ? ಖಂಡಿತ ಇಲ್ಲ. ಏಕೆಂದರೆ ಇಲ್ಲಿಗೆ ಬರೋದೇ ಕೊನೆಯ ಹಂತದ ಕ್ಯಾನ್ಸರ್ ನಲ್ಲಿ. ಇಲ್ಲಿ ಯಾವುದೇ ತರಹದ ಕಿಮೋ ಥೆರಪಿ, ರೇಡಿಯೇಷನ್ ಆಗಲಿ, ICU ಆಗಲಿ ಆ ತರ ಸೌಲಭ್ಯಗಳಿಲ್ಲ. It's not a cure, It's a care. ಮೇ, 1,1999ರಲ್ಲಿ ನಮ್ಮ ಹಾಸ್ಪೈಸ್ ಗೆ ಮೊದಲ ಕ್ಯಾನ್ಸರ್ ರೋಗಿ ಅಡ್ಮಿಟ್ ಆದ ದಿನ. ಆ ದಿನವನ್ನು ನಾವು ಸ್ಮರಣಾರ್ಥ ದಿನವನ್ನಾಗಿ ಆಚರಣೆ ಮಾಡುತ್ತೇವೆ. ಕರುಣಾಶ್ರಯ ಅಂದರೆ ಯಾವುದೋ ಆಶ್ರಮ, ಯಾರೂ ಇಲ್ಲದ ಅನಾಥರು ಉಳಿದುಕೊಳ್ಳುವುದು ಎಂಬ ಭಾವನೆಯಿಂದ ಬಂದಿರುತ್ತಾರೆ. ಬಂದ ನಂತರ ಅವರಿಗೆ ಅನ್ನಿಸೋದು ಒಂದು ಒಳ್ಳೆಯ ಕುಟುಂಬಕ್ಕೆ ಬಂದು ಸೇರಿದ್ದೇನೆ ಎಂದು. ಇಲ್ಲಿ ಎಲ್ಲಾ ವಾರ್ಡಿಗು ಸಂಪಿಗೆ, ಕದಂಬ, ಮಲ್ಲಿಗೆ ಅಂತ ಹೂವಿನ ಹೆಸರುಗಳನ್ನು ಇಟ್ಟಿದ್ದೇವೆ. ಇಲ್ಲಿ ಒಳಗೆ ಹೋದರೆ ಯಾವುದೋ ಒಂದು ರೆಸಾರ್ಟಿಗೆ ಬಂದಿದ್ದೇವೆ ಅನ್ನುವ ಖುಷಿಯ ವಾತಾವರಣವನ್ನು ಕಲ್ಪಿಸುವ ತಾಣವಾಗಿದೆ' ಎಂದು ಹೇಳುತ್ತಾರೆ ಗಿರೀಶ್ ಬಿ. ಕೃಷ್ಣಮೂರ್ತಿ (H R and administration).

'ಕರುಣಾಶ್ರಯ ಅಂದರೆ ಉಪಶಮಕ ಆರೈಕೆ. ಕ್ಯಾನ್ಸರ್ ಕೆಲವರಿಗೆ ಗುಣವಾಗುತ್ತದೆ ಕೆಲವರಿಗೆ ಆಗುವುದಿಲ್ಲ. ತೊಂದರೆಗಳನ್ನು ಕಡಿಮೆ ಮಾಡುವ ಚಿಕಿತ್ಸೆ. ಉಸಿರಾಟದ ತೊಂದರೆ, ವಾಂತಿ, ನೋವು, ಶಾರೀರಿಕ ನೋವು. ಉದಾ : ಮೂತ್ರ ಸೋಂಕು, ಕೆಲವರಿಗೆ ವಿಕೃತ ಸ್ವರೂಪದ ಗಾಯಗಳಿರುತ್ತವೆ. ಅಂತಹದನ್ನೆಲ್ಲ ನರ್ಸಿಂಗ್ ಕೇರ್ ಮುಖಾಂತರ ಔಷಧಿ ಕೊಡುವ ಮೂಲಕ ಕಡಿಮೆ ಮಾಡುವುದು. ಇಂತಹವರಿಗೆ ಮಾನಸಿಕವಾಗಿ ತುಂಬ ತೊಂದರೆ ಇರುತ್ತದೆ. ಮೊದಲಿನ ಹಾಗೆ ನಾನಿಲ್ಲ. ಚಟುವಟಿಕೆಯಿಂದ ಇರೋಕೆ ಆಗ್ತಿಲ್ಲ. ನಾನು ಇನ್ನೊಬ್ಬರ ಮೇಲೆ ಭಾರವಾಗಿದ್ದೇನೆ ಎಂಬ ಭಾವನೆ ಇರುತ್ತದೆ. ಕೆಲವರಿಗೆ ಸಿಟ್ಟು ಬರತ್ತೆ. ಇಂತಹದ್ದನ್ನೆಲ್ಲ ನಮ್ಮ ಆಪ್ತ ಸಮಾಲೋಚಕರು ಅವರ ಚಹರೆ, ಮಾನಸಿಕ ಭಾವನೆಗಳನ್ನು ಗೊಂದಲಗಳನ್ನು ಅಧ್ಯಯನ ಮಾಡಿ ಅವರನ್ನು ಸಂತೋಷದಿಂದಿರುವಂತೆ ಮಾಡುತ್ತಾರೆ. ಊಟ, ಬಟ್ಟೆ, ವಸತಿ, ಔಷಧಿ ಎಲ್ಲವನ್ನು ಸಂಪೂರ್ಣವಾಗಿ ಉಚಿತವಾಗಿ ಕೊಟ್ಟು ನೋಡಿಕೊಳ್ಳುತ್ತೇವೆ. ಕಿಮೋ ಥೆರಪಿಗೂ ಸ್ಪಂದಿಸುತ್ತಿಲ್ಲ ಎನ್ನುವ ಹೆಚ್ಚು ಮಂದಿ ಇಲ್ಲಿಗೆ ಬರೋದು. ಅವತ್ತು ದುಡಿದು ಅವತ್ತಿನ ಊಟ ಮಾಡುವ ಮನೆಗಳಲ್ಲಿ ರೋಗಿಗಳನ್ನು ನೋಡಿಕೊಳ್ಳಲು ಯಾರಿರುತ್ತಾರೆ? ಅಂತವರನ್ನು ನೋಡಿಕೊಳ್ಳಲು ಯಾರಾದರೂ ಬೇಕಲ್ಲ. ಅಂತವರು ಇಲ್ಲಿ ಬರುತ್ತಾರೆ. ಮಧ್ಯಮವರ್ಗದವರು, ಬಡವರು, ಶ್ರೀಮಂತರು ಎನ್ನುವ ಯಾವ ಭೇದವಿಲ್ಲದೆ ನಾವು ಎಲ್ಲರಿಗೂ ಸಮಾನವಾದ ಚಿಕಿತ್ಸೆ, ಪ್ರೀತಿ, ವಾತ್ಸಲ್ಯವನ್ನು ತೋರಿಸುತ್ತೇವೆ. ಅಂದರೆ ವ್ಯತ್ಯಾಸ ಬರಬಾರದು. ರೋಗಿಗಳು ತೀರಿ ಹೋದ ನಂತರ ಅವರ ನೆನಪಲ್ಲಿ ಏನಾದರೂ ಕೊಡಬೇಕು ಅನ್ನಿಸಿದ್ರೆ ಇಲ್ಲಿ ತಂದುಕೊಡುತ್ತಾರೆ. ಅವರು ಇರುವ ತನಕ ಅವರು ಡೊನೇಷನ್ ಕೊಟ್ಟರೂ ನಾವು ತೆಗೆದುಕೊಳ್ಳುವುದಿಲ್ಲ. ದುಡ್ಡು ಇರುವವರನ್ನು ಇಲ್ಲದವರನ್ನು ಒಂದೇ ಸಮಾನ ರೀತಿಯಲ್ಲಿ ನೋಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ನಾವು ದುಡ್ಡು ಕೊಟ್ಟರೂ ತೆಗೆದುಕೊಳ್ಳುವುದಿಲ್ಲ. ಅವರು ತೀರಿ ಹೋದ ನಂತರ ಅವರಿಗೆ ಇಚ್ಛೆ ಇದ್ದು ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತೇವೆ'.

'1994ರಲ್ಲಿ ಮೊದಲು ಹೋಂ ಕೇರ್ ಆಗಿ ಪ್ರಾರಂಭವಾದ ಸಂಸ್ಥೆ ಇದು. 1997ರಲ್ಲಿ ಬಿಲ್ಡಿಂಗ್ ಕಟ್ಟಿ ಸಣ್ಣ ಪುಟ್ಟ ಮೂವತ್ತು ಬೆಡ್ ನಂತರ ಜಾಸ್ತಿ ಮಾಡ್ತಾ ಮಾಡ್ತಾ ಈಗ ಎಪ್ಪತ್ತೆರಡು ಹಾಸಿಗೆ ಆಗಿವೆ. ರೋಗಿಗಳಿಗೆ ಸುಳ್ಳು ಹೇಳಬಾರದು ಅಂತ ನಾವು ಹೇಳಿಕೊಡುತ್ತೇವೆ. ಜೀವನ ಇನ್ನು ಎಷ್ಟು ಕಾಲದವರೆಗೆ ಇರಬಹುದು ಅಂತ ನೇರವಾಗಿ ಮಾತನಾಡುತ್ತಾರೆ. ಚರ್ಚೆ ಮಾಡುತ್ತೇವೆ. ಪರಿಸ್ಥಿತಿ ಗೊತ್ತಿದ್ದರೆ ಮುಂದಾಲೋಚನೆ ಮಾಡಿ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಉದಾಹರಣೆ : ಒಬ್ಬ ರೋಗಿಗೆ ಸಣ್ಣ ಮಕ್ಕಳಿದ್ದರೆ ಅವರ ಭವಿಷ್ಯಕ್ಕೋಸ್ಕರ ಏನು ಮಾಡಬಹುದು? ಏನಾದರೂ ಸೆಟಲ್ ಮಾಡುವುದಿದ್ರೆ ಗೊತ್ತಿಲ್ಲದೆ ಹೋದರೆ ಮಾಡಲು ಸಾಧ್ಯವಾಗುವುದಿಲ್ಲ. ಆದಷ್ಟು ನಾವು ಪ್ರಾಮಾಣಿಕವಾಗಿ ಸತ್ಯವನ್ನು ಹೇಳುವಂತಹ ಪ್ರಯತ್ನವನ್ನು ಮಾಡುತ್ತೇವೆ. ಹೇಳಿದ ನಂತರ ಅವರಿಗೆ ಬೇಕಿರುವ ಮಾನಸಿಕ ಬೆಂಬಲವನ್ನು ಆಪ್ತ ಸಮಾಲೋಚಕರ ಮುಖಾಂತರ ಕೊಡುತ್ತೇವೆ. ಕುಟುಂಬದ ಜೊತೆಗೆ ಒಟ್ಟಿಗೆ ಕೂತು ಮಾತಾಡಿ ಏನಾದರೂ ಆಸೆ ಇದ್ದರೆ ಅದನ್ನು ಈಡೇರಿಸಲು ಪ್ರಯತ್ನಿಸುತ್ತೇವೆ. ಎಲ್ಲಾ ಇಚ್ಛೆಗಳನ್ನು ಪೂರೈಸಲು ಆಗುವುದಿಲ್ಲ. ಸಾಧ್ಯವಾಗುವಷ್ಟು ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸಲು ಪ್ರಯತ್ನ ಮಾಡುತ್ತೇವೆ. ಕೆಲವರಿಗೆ ನಾವು ಊರಲ್ಲಿ ಹೋಗಿ ಸಾಯಬೇಕು. ನಮ್ಮ ದೇಹವನ್ನು ಹೀಗಿಡಬೇಕು. ನಾನು ಸತ್ತ ನಂತರ ಈ ಸೀರೆ ಉಡಿಸಬೇಕು. ಒಬ್ಬರಿಗೆ ನೇಲ್ ಪಾಲಿಶ್, ಒಬ್ಬರಿಗೆ ಮೆಹಂದಿ ಹಾಕಿಸಿಕೊಳ್ಳಬೇಕು. ಚಂದದ ಸೀರೆ ಉಟ್ಟುಕೊಂಡು ಫೋಟೋ ತೆಗೆಸಿಕೊಳ್ಳಬೇಕು ಇಂತಹ ಅವರ ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸುತ್ತೇವೆ. ಒಮ್ಮೆ ಒಬ್ಬ ಕ್ಯಾನ್ಸರ್ ರೋಗಿ ನಮ್ಮಲ್ಲಿ ಬಂದಿದ್ದರು. ಅವರು ಚಿಕ್ಕ ವಯಸ್ಸಿನಲ್ಲಿ ಮನೆ ಬಿಟ್ಟು ಬಂದಿದ್ದರು. ತಾವಿನ್ನು ಬಹಳ ದಿನಬದುಕುವುದಿಲ್ಲ ಎಂದು ತಿಳಿದಾಗ ಅವರು ಅವರ ಮನೆಯವರನ್ನು ನೋಡಬೇಕೆಂಬ ಅಪೇಕ್ಷೆಯನ್ನು ನಮ್ಮೊಂದಿಗೆ ಹಂಚಿಕೊಂಡರು. ಅವರಿಗೆ ಊರಿನ ಹೆಸರು ಮಾತ್ರ ಗೊತ್ತಿತ್ತು ಆದರೆ ತಮ್ಮ ವಿಳಾಸ ಗೊತ್ತಿರಲಿಲ್ಲ. ನಾವು ಅವರ ಗ್ರಾಮ ಪಂಚಾಯಿತಿಗೆ ಪತ್ರ ಬರೆದು ವಿಷಯ ತಿಳಿಸಿದೆವು. ಕೆಲವು ದಿನಗಳಲ್ಲಿ ಅವರ ಸಂಬಂಧಿಕರಿಗೆ ವಿಷಯ ತಲುಪಿ ಅವರು ಬಂದು ಭೇಟಿಯಾದರು. ಇದೊಂದು ವಿಶೇಷ ಸಂಗತಿಯಾಗಿ ನಮ್ಮ ಮನಸಲ್ಲಿದೆ. ಸಾವು ಎಂದರೆ ಎಲ್ಲರಿಗೂ ಖುಷಿಯ ಸಂಗತಿ ಅಲ್ಲ. ಇಲ್ಲಿ ಅವರ ಶಾರೀರಿಕ ತೊಂದರೆಗಳು ಕಡಿಮೆಯಾಗುತ್ತವೆ. ಅವರು ಇಲ್ಲಿಗೆ ಬಂದ ನಂತರ ಮಾನಸಿಕ ನೆಮ್ಮದಿ ಸಿಗುತ್ತದೆ. ಒಂದು ದಿನಕ್ಕೆ ಒಬ್ಬ ರೋಗಿಯನ್ನು ನೋಡಿಕೊಳ್ಳಲು 3636/- ರೂಪಾಯಿ ಬೇಕಾಗುತ್ತದೆ. ಇಲ್ಲಿ ಹಾಸ್ಪಿಟಲ್ ವಾತಾವರಣ ಇಲ್ಲ. ಇಲ್ಲಿ ಯಾವ ರೋಗಿಗಳು ನರಳುತ್ತಿಲ್ಲ. ಕೆಲವರು ಸಾಯುವ ಸ್ವಲ್ಪ ಸಮಯ ಮುಂಚೆ ಬರುತ್ತಾರೆ. ಅವರನ್ನು ನೋಡಿದರೆ ಎರಡು ಮೂರು ದಿನ ಅಷ್ಟೇ ಇರುತ್ತಾರೆ ಅಂತ ನಮಗೆ ಗೊತ್ತಾಗುತ್ತದೆ. ಆಗ ನಾವು ಅವರಿಗೆ ಸತ್ಯ ಹೇಳಿ ಪ್ರಯೋಜನ ಇಲ್ಲ. ಮೊದಲೇ ನೋವಿನಿಂದ ನರಳುತ್ತಿರುತ್ತಾರೆ. ಅಂತಹವರಿಗೆ ನಾವು ಏನನ್ನೂ ಹೇಳುವುದಿಲ್ಲ. ಒಂದು ತಿಂಗಳ ಮಗುವಿನಿಂದ ಹಿಡಿದು ಮುಪ್ಪಿನ ವಯಸ್ಸಿನವರು ಈ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೆ ಮನೆಯವರು ಯಾರು ಬೇಕಾದರೂ ರೋಗಿಯ ಜೊತೆ ಇರಬಹುದು. ಹೆಂಗಸರಾದರೆ ರೋಗಿಯೊಟ್ಟಿಗೆ ಮಲಗಬಹುದು. ಗಂಡಸರಾದರೆ ರಾತ್ರಿ 9 ಗಂಟೆಯ ನಂತರ ಅವರಿಗೆ ಬೇರೆ ರೂಮ್ ಇದೆ ಅಲ್ಲಿ ಮಲಗಲು ಅವಕಾಶವಿದೆ. ಆಂಧ್ರಪ್ರದೇಶ, ಮಂಗಳೂರು, ಶಿವಮೊಗ್ಗ, ತಮಿಳುನಾಡು ಕಡೆಯಿಂದಲೂ ಜನ ನಮ್ಮಲ್ಲಿಗೆ ಬರುತ್ತಾರೆ. ಇಲ್ಲಿ ಪ್ರತಿಯೊಂದು ಹಬ್ಬಗಳನ್ನು ಆಚರಿಸುತ್ತೇವೆ. ಅವರ ಜನ್ಮ ದಿನಾಚರಣೆಯನ್ನು ಮಾಡುತ್ತೇವೆ. ಇಲ್ಲಿರುವ ಎಲ್ಲರನ್ನು ನಮ್ಮ ಕುಟುಂಬದವರಂತೆ ಕಾಣುತ್ತೇವೆ. ಅವರಿಗೆ ಸಂತೋಷದ ವಾತಾವರಣವನ್ನು ಕಲ್ಪಿಸಿಕೊಡುತ್ತೇವೆ. ಇಲ್ಲಿ ತರಬೇತಿ ಕೂಡ ನಡೆಯುತ್ತದೆ. ಈ ಆರೈಕೆಯ ಬಗ್ಗೆ ಚಿಕಿತ್ಸೆ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದವರು ಡಾಕ್ಟರ್ಸ್, ನರ್ಸ್, ಸೈಕಾಲಜಿಸ್ಟ್ ಈ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಸಂಶೋಧನೆ ಕೂಡ ಮಾಡುತ್ತೇವೆ. ಆಕ್ಸ್ಫರ್ಡ್, ಕ್ರೈಸ್ಟ್, ಡಾಕ್ಟರ್ಸ್, ಕಿಮ್ಸ್ ಕಿದ್ವಯ್ ಹೀಗೆ ಹಲವಾರು ಸಂಸ್ಥೆಗಳಿಂದ ಬಂದು ತರಬೇತಿಯನ್ನು ಪಡೆದುಕೊಂಡು ಹೋಗುತ್ತಾರೆ. ಇದರ ಒಟ್ಟಾರೆ ಉದ್ದೇಶ ರೋಗಿಗಳು ಸಾಯುವ ಕಾಲದಲ್ಲಿ ಘನತೆಯಿಂದ ನಿಧನರಾಗಬೇಕೆಂಬುದು' ಎನ್ನುತ್ತಾರೆ ಡಾ. ಸೀಮಾ ರಾವ್ (Associate director research and education).

ಎಲ್ಲರ ಸಾವಿಗೂ ಮೌಲ್ಯವಿರುತ್ತದೆ. ಯಾರೇ ಆಗಲಿ ಗೌರವಯುತವಾಗಿ ನಿಧನವಾದರೆ ಅವರ ಸಂಬಂಧಿಕರಿಗೆ ನೆಮ್ಮದಿ. ಇಲ್ಲವಾದರೆ ಕೊನೆವರೆಗೂ ಆ ನೋವು ಕಾಡುತ್ತದೆ. ಎಷ್ಟೋ ಜನರಿಗೆ ತಮ್ಮವರನ್ನು ಕೊನೆಗಾಲದಲ್ಲಿ ಚೆನ್ನಾಗಿ ನೋಡಿಕೊಳ್ಳಲು ಆಗಲಿಲ್ಲ ಅಷ್ಟು ಅನುಕೂಲವಿರಲಿಲ್ಲ ಎಂಬ ನೋವು ಕಾಡುತ್ತಿರುತ್ತದೆ. ಅದರಲ್ಲೂ ಕ್ಯಾನ್ಸರ್ ನಂತಹ ಮಹಾಮಾರಿಯ ಚಿಕಿತ್ಸೆ ಇಂದಿಗೂ ಜನಸಾಮಾನ್ಯರಿಗೆ ಗಗನ ಕುಸುಮವಾಗಿದೆ. ಅದಲ್ಲದೇ ಅಂತಹ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಣಕಾಸಿನ ತೊಂದರೆ, ಆರೈಕೆ ಮಾಡುವವರು ಇಲ್ಲದಿರುವುದು ಹೀಗೆ ಕೆಲವರಿಗೆ ಅವರದೇ ಆದ ಅನಿವಾರ್ಯತೆಗಳಿರುತ್ತವೆ. ಅಂಥವರಿಗೆ ಇದು ತುಂಬಾ ಅನುಕೂಲವಾದ ಸ್ಥಳ. ಇವರ ಸೇವೆಗಂತೂ ಏನು ಕೊಟ್ಟರೂ ಸಾಲದು. ಯಾರಿಂದಲೂ ಏನನ್ನೂ ನಿರೀಕ್ಷಿಸದೇ ನಿಸ್ವಾರ್ಥವಾಗಿ ಸೇವೆ ಮಾಡುತ್ತಿರುವ ಇವರಿಗೆ ದೇವರು ಉತ್ತಮ ಆರೋಗ್ಯ ಆಯಸ್ಸು ಕೊಟ್ಟು ಕಾಯಲಿ. ಇಂಥ ಸಮಾಜಮುಖಿ ಸಂಸ್ಥೆ ಚಿರಾಯುವಾಗಿರಲಿ ಎತ್ತರೆತ್ತರಕ್ಕೆ ಬೆಳೆಯಲಿ.

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...