ನಾಟಕರಂಗದ ಚಿತ್ರಣವನ್ನು ನೀಡುವ ಕಾದಂಬರಿ ‘ಗೆದ್ದವರು ಯಾರು’


"ನಾಟಕದ ಬಗ್ಗೆ ಆಸಕ್ತಿ ಇರದ ಶ್ರೀಕಂಠಯ್ಯನು ಈ ಯೋಜನೆಗೆ ಒಪ್ಪಿಕೊಂಡಿರುವುದು ಸಂಗೀತ, ವೀಣಾವಾದನ ಮತ್ತು ನೃತ್ಯದಲ್ಲಿ ಪರಿಣತಿಯನ್ನು ಹೊಂದಿದ ವೇಶ್ಯೆ ಸರಸ್ವತಿಗಾಗಿ. ಆಕೆಯನ್ನು ತನ್ನ ಬುಟ್ಟಿಗೆ ಬೀಳಿಸಬೇಕೆಂಬುದೇ ಅವನ ಉದ್ದೇಶ," ಎನ್ನುತ್ತಾರೆ ಚೇತನಾ ಕುಕ್ಕಿಲ. ಅವರು ದೇವುಡು ನರಸಿಂಹಶಾಸ್ತ್ರಿ ಅವರ ‘ಗೆದ್ದವರು ಯಾರು’ ಕೃತಿ ಕುರಿತು ಬರೆದ ಅನಿಸಿಕೆ.

‘ಗೆದ್ದವರು ಯಾರು’ ಎಂಬ ಕಾದಂಬರಿಯು ನಾಟಕರಂಗದ ಚಿತ್ರಣವನ್ನು ನೀಡುತ್ತದೆ. ಒಂದು ನಾಟಕ ರಚನೆಯಾಗಿ ಅದನ್ನು ಪ್ರದರ್ಶಿಸುವ ಹಂತದಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಲೇಖಕರು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಈ ಕಥೆಯಲ್ಲಿ ಬರುವ ಪಾತ್ರಗಳು ಕೇವಲ ಬೆರಳೆಣಿಕೆಯಷ್ಟಾದರೂ ಅವುಗಳನ್ನು ಸಹಜವಾಗಿ ಬೆಳೆಸಿದ ಬಗೆ ಬಹಳ ಇಷ್ಟವಾಯಿತು. ಬಾಲ್ಯದಿಂದಲೂ ನಾಟಕರಂಗದೊಂದಿಗೆ ಒಡನಾಟವಿದ್ದ ಲೇಖಕರು ನಾಟಕದ ಒಳ-ಹೊರಗಿನ ಸತ್ಯ ಮತ್ತು ತಂತ್ರಗಳನ್ನು ಈ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ.

ಮೂರ್ತಿ ಮತ್ತು ಪತಿ ಇಬ್ಬರೂ ಒಳ್ಳೆಯ ಸ್ನೇಹಿತರು. ಇಬ್ಬರಿಗೂ ಸಾಹಿತ್ಯ ಮತ್ತು ನಾಟಕದಲ್ಲಿ ಎಲ್ಲಿಲ್ಲದ ಆಸಕ್ತಿ. ಮೂರ್ತಿ ಒಂದು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ. ಎಲ್ಲೇ ನಾಟಕವಿರಲಿ ಆತ ಹಾಜರಿರುತ್ತಿದ್ದ. ನಾಟಕವೆಂದರೆ ಸಮಾಜವನ್ನು ಅರಿಯಲು ಇರುವ ಒಂದು ವೇದಿಕೆ ಎಂಬುದೇ ಮೂರ್ತಿಯ ಅಭಿಪ್ರಾಯ. ಆತ ನಾಟಕಗಳನ್ನು ರಚಿಸುತ್ತಿದ್ದ ಮತ್ತು ಪತ್ರಿಕೆಗಳಲ್ಲಿ ತಾನು ವೀಕ್ಷಿಸಿದ ನಾಟಕಗಳ ವಿಮರ್ಶೆಯನ್ನೂ ಬರೆಯುತ್ತಿದ್ದ. ಈತನ ಪತ್ನಿ ಕಮಲಾಳಿಗೆ ಗಂಡನೇ ಸರ್ವಸ್ವ. ತನ್ನ ಗಂಡ ಒಳ್ಳೆಯದು ಅಥವಾ ಕೆಟ್ಟದು ಯಾವುದೇ ಕೆಲಸ ಮಾಡಿದರೂ ಶಾಂತವಾಗಿಯೇ ಇರುತ್ತಿದ್ದಳು. ಕೆಲವು ಸಂದರ್ಭಗಳಲ್ಲಿ ಈ ಗುಣ ಆಕೆಯ ಅಸಹಾಯಕತೆಯನ್ನು ತೋರಿಸಿದರೆ, ಇನ್ನು ಕೆಲವು ಈಕೆಯ ತಂತ್ರವೇನೋ ಅನ್ನಿಸದೆ ಇರದು.

ಪತಿ ತೋಟ, ಗದ್ದೆ ಮತ್ತು ಲೇವಾದೇವಿ ಮಾಡುತ್ತಿರುವ ಶ್ರೀಮಂತ ವ್ಯಕ್ತಿ. ಆದರೆ ಸರಳ ಮತ್ತು ಊರವರ ನೆಚ್ಚಿನ ಮನುಷ್ಯ. ಸಂಗೀತ, ಸಾಹಿತ್ಯ ಎಂದರೆ ಈತನಿಗೂ ಬಹಳ ಆಸಕ್ತಿ. ಇವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ. ಮೂರ್ತಿ ಬರೆಯುತ್ತಿದ್ದ ನಾಟಕವನ್ನು ಓದಿ ಅದನ್ನು ಒಳ್ಳೆಯ ರೀತಿಯಲ್ಲಿ ತಿದ್ದಿ ತೀಡುತ್ತಿದ್ದ. ಆದರೆ ಈತ ಪ್ರಚಾರಪ್ರಿಯನಾಗದಿದ್ದುದರಿಂದ ಈ ಕೆಲಸದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ.

ಆ ಊರಿನ ಸಾಹುಕಾರನಾದ ಶ್ರೀಕಂಠಯ್ಯನ ಹಣದ ಸಹಾಯದಿಂದ ನಾಟಕ ಕಂಪನಿಯೊಂದು ಹುಟ್ಟುತ್ತದೆ. ಮೂರ್ತಿ ಬರೆದ ‘ದಶರಥ’ ನಾಟಕವನ್ನು ರಂಗಕ್ಕೆ ತರುವ ಸಕಲ ಯೋಜನೆಗಳು ನಡೆಯುತ್ತಿರುತ್ತವೆ. ಈ ಸಂದರ್ಭದಲ್ಲಿ ಪಾತ್ರಗಳಿಗೆ ಸರಿಹೊಂದುವ ನಟರ ಆಯ್ಕೆ, ಹೆಣ್ಣಿನ ಪಾತ್ರಕ್ಕೆ ಕೆಲವರು ಗಂಡಸರನ್ನು ಆಯ್ಕೆ ಮಾಡಿದರೆ ಇನ್ನು ಕೆಲವರು ಹೆಂಗಸರಾದರೆ ಚಂದ ಎನ್ನುವ ಚರ್ಚೆ ಎಲ್ಲವೂ ಸಹಜವಾಗಿ ಮೂಡಿಬಂದಿದೆ.

ನಾಟಕದ ಬಗ್ಗೆ ಆಸಕ್ತಿ ಇರದ ಶ್ರೀಕಂಠಯ್ಯನು ಈ ಯೋಜನೆಗೆ ಒಪ್ಪಿಕೊಂಡಿರುವುದು ಸಂಗೀತ, ವೀಣಾವಾದನ ಮತ್ತು ನೃತ್ಯದಲ್ಲಿ ಪರಿಣತಿಯನ್ನು ಹೊಂದಿದ ವೇಶ್ಯೆ ಸರಸ್ವತಿಗಾಗಿ. ಆಕೆಯನ್ನು ತನ್ನ ಬುಟ್ಟಿಗೆ ಬೀಳಿಸಬೇಕೆಂಬುದೇ ಅವನ ಉದ್ದೇಶ.

ದಶರಥನ ಪಾತ್ರವನ್ನು ನಿರ್ವಹಿಸಲು ಪ್ರಸಿದ್ಧ ನಟ ಶಿವರಾಯನನ್ನು ಎಲ್ಲರೂ ಸೇರಿ ಒಪ್ಪಿಸುತ್ತಾರೆ. ಇವರೆಲ್ಲರ ನಡುವೆ ಸೇತುವೆಯಾದ ಸಣ್ಣೂ ಸಂದರ್ಭದ ಲಾಭ ಗಳಿಸುತ್ತಾನೆ. ನಾಟಕದ ತಯಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಸರಸ್ವತಿ ಸಣ್ಣೂವಿನ ಸಹಾಯದಿಂದ ಮೂರ್ತಿಯನ್ನು ತನ್ನ ಬಲೆಗೆ ಬೀಳಿಸುತ್ತಾಳೆ. ಪತಿಯು ಮೂರ್ತಿಗೆ ನಯವಾಗಿ ಸಾಕಷ್ಟು ಬುದ್ಧಿ ಮಾತುಗಳನ್ನು ಹೇಳಿದರೂ ಈತ ಆಕೆಯ ಬಲೆಯೊಳಗೆ ಬಿದ್ದು ಬಿಡುತ್ತಾನೆ. ಈ ವಿಷಯ ತಿಳಿದ ಮೂರ್ತಿಯ ಪತ್ನಿ ಸುಮ್ಮನಿರುತ್ತಾಳೆ. ಹಾಗೆಯೇ ಸರಸ್ವತಿಯೂ ಮೂರ್ತಿಯನ್ನು ಕಮಲಾಳಿಂದ ಬೇರ್ಪಡಿಸುವ ಯೋಚನೆ ಮಾಡುವುದಿಲ್ಲ.

ನಾಟಕದಲ್ಲಿ ಕೈಕೇಯಿಯ ಪಾತ್ರ ಮಾಡುತ್ತಿದ್ದ ಸರಸ್ವತಿಯು ಮೂರ್ತಿಯನ್ನು ದಶರಥನ ಪಾತ್ರ ಮಾಡುವಂತೆ ಒತ್ತಾಯಿಸುತ್ತಾಳೆ. ‘ರೋಗಿ ಬಯಸಿದ್ದು ಹಾಲು ವೈದ್ಯ ಹೇಳಿದ್ದೂ ಹಾಲು’ ಎಂಬ ಮಾತಿನಂತೆ ಶಿವರಾಯ ಅಸ್ವಸ್ಥನಾಗಿ ಮೂರ್ತಿಯೇ ದಶರಥನ ಪಾತ್ರ ನಿಭಾಯಿಸಲು ಬರುತ್ತಾನೆ. ಈ ಸಂದರ್ಭದಲ್ಲಿ ಶಿವರಾಯನ ವ್ಯಕ್ತಿತ್ವ ಇಷ್ಟವಾಗುತ್ತದೆ.

ಈ ನಡುವೆ ಕಮಲೆ ಹೆರಿಗೆಗೆಂದು ಅಣ್ಣನ ಮನೆಗೆ ಹೋಗಿ, ಹೆರಿಗೆಯ ಮೊದಲೇ ತನ್ನ ಮನೆ ಸೇರುತ್ತಾಳೆ. ಈಗಲೂ ಕಾವೇರಿಗೆ ತನ್ನ ಗಂಡನ ಅಕ್ರಮ ಸಂಬಂಧದ ಬಗ್ಗೆ ಗೊತ್ತಿದ್ದರೂ ಗಂಡನೊಡನೆ ಜಗಳ ಮಾಡುವುದಾಗಲಿ, ತನ್ನ ಅಸಮಾಧಾನವನ್ನು ತೋರ್ಪಡಿಸುವುದಾಗಲಿ ಮಾಡುವುದಿಲ್ಲ. ಆದರೆ ಹೇಳಬೇಕಾದದ್ದನ್ನು ಆಕೆಯ ರೀತಿಯಲ್ಲಿ ಹೇಳುತ್ತಾಳೆ. ಆಕೆಯ ಈ ನಡತೆ ಓದುಗರಿಗೆ ಅಚ್ಚರಿ ತರಿಸುತ್ತದೆ. ಪರಸ್ತ್ರೀಯ ಮೋಹಕ್ಕೆ ಬಿದ್ದವನ ಮೇಲೆ ಕೂಗಾಡಿದರೆ ಗಂಡನನ್ನು ಶಾಶ್ವತವಾಗಿ ಎಲ್ಲಿ ಕಳೆದುಕೊಳ್ಳುತ್ತೇನೋ ಎಂಬ ಭಯ ಆಕೆಯ ನಡತೆಯಲ್ಲಿ ಕಾಣುತ್ತದೆ.

ಮುಂದೆ ಕಮಲೆಯ ಬದುಕು ಏನಾಯಿತು? ಒಂದು ನಾಟಕ ರಚನೆಯಾಗುವ ಮೊದಲು ನಡೆಯುವ ಒಳ ತಂತ್ರಗಳೇನು? ಸಾಮಾನ್ಯ ಜನರು ಒಪ್ಪದಂತಹ ಮನೋಭಾವವಿರುವ ಸರಸ್ವತಿಯನ್ನು ಕಮಲಾ ಯಾಕೆ ಸ್ವೀಕರಿಸಿದಳು? ಇವೆಲ್ಲವುಗಳ ನಡುವೆ ಕೊನೆಗೆ ವೈಯಕ್ತಿಕ ಮತ್ತು ವೃತ್ತಿ ಜೀವನವನ್ನು ನೋಡಿದರೆ ಗೆದ್ದವರು ಯಾರು? ಎಂಬುದನ್ನು ಓದಿ ತಿಳಿಯಬೇಕು.

ಈ ಕಾದಂಬರಿಯಲ್ಲಿ ಎಲ್ಲೋ ಒಂದು ಕಡೆ ಅಂದು ನಾಟಕಕಾರನಿಗೆ ದೊರಕುತ್ತಿದ್ದ ಪ್ರಾಶಸ್ತ್ಯ ಈಗ ದೊರಕುತ್ತಿಲ್ಲ ಎಂಬುದನ್ನು ತಿಳಿಸುತ್ತದೆ. ಹಾಗೆಯೇ ಇಬ್ಬರು ಬೇರೆ ಬೇರೆ ಮನೋಭಾವದ ಹೆಣ್ಣುಮಕ್ಕಳ ರೀತಿ-ನೀತಿ ಮತ್ತು ಅವರ ಯೋಚನೆಗಳು ಸೊಗಸಾಗಿ ಮೂಡಿಬಂದಿದೆ. ಇಲ್ಲಿ ಗಟ್ಟಿಯಾದ ಸಂಭಾಷಣೆಗಳೇ ಕಾದಂಬರಿಯ ಪ್ರಮುಖ ಆಕರ್ಷಣೆ.

 

MORE FEATURES

ಕೊನೆಗೆ ಎಲ್ಲರೂ ಸೇರುವುದು ಮಣ್ಣನ್ನೇ

16-04-2025 ಬೆಂಗಳೂರು

"ದ್ವೀಪವ ಬಯಸಿ ಕನ್ನಡದಲ್ಲಿ ಇದೊಂದು ವಿಶೇಷವಾದ ಕಾದಂಬರಿ. ಕನ್ನಡ ಸಾಹಿತ್ಯ ಲೋಕದಲ್ಲಿ ಕಾರ್ಪೊರೇಟ್ ಜಗತ್ತು ಕುರಿತ...

ಇವು ಕಥೆಗಳೋ ಆತ್ಮ ಚರಿತ್ರೆಯ ಪುಟಗಳೋ

16-04-2025 ಬೆಂಗಳೂರು

"ಇಲ್ಲಿ ಬಳಸುವ ಭಾಷೆಯಲ್ಲಿ ಕೂಡಾ ಈ ಪ್ರಾಂತ್ಯದ ಸೊಗಡು ದಟ್ಟವಾಗಿ ಓದುಗರಿಗೆ ತಗಲುತ್ತದೆ. ಹೆಂಗಸರ ಬೀದಿ ಜಗಳಗಳ ಭಾ...

ಹಳೆಯದನ್ನು ಬಿಡದವರು; ಹೊಸದನ್ನು ಹೊದ್ದವರು

16-04-2025 ಬೆಂಗಳೂರು

"ಹಿತ ಎನ್ನುವ ಪದದಲ್ಲಿ ಒಂದು ನೆಮ್ಮದಿಯ ಅನುಭವವಿದೆ. ಚಳಿಗಾಲದಲ್ಲಿ ಕಂಬಳಿ ಸಿಕ್ಕರೆ ಬೆಚ್ಚನೆಯ ಹಿತದ ಅನುಭವವಾಗುತ...