"ಹಿತ ಎನ್ನುವ ಪದದಲ್ಲಿ ಒಂದು ನೆಮ್ಮದಿಯ ಅನುಭವವಿದೆ. ಚಳಿಗಾಲದಲ್ಲಿ ಕಂಬಳಿ ಸಿಕ್ಕರೆ ಬೆಚ್ಚನೆಯ ಹಿತದ ಅನುಭವವಾಗುತ್ತದೆ. ಬಿರುಬೇಸಿಗೆಯಲ್ಲಿ ತಂಪಾದ ಪುಷ್ಕರಣಿ ಸಿಕ್ಕಿ ಅಲ್ಲಿ ಜಲವಿಹಾರ ಮಾಡುವಂತಾದರೆ ತಂಪಿನ ಹಿತಾನುಭವವಾಗುತ್ತದೆ. ಬದುಕು ಬೆಚ್ಚಿ, ಬೆದರಿ, ಕದಡಿ, ಕಠೋರವೆನಿಸಿದಾಗ ಆತ್ಮೀಯರ ಆಶ್ರಯ ಹಿತದ ಅನುಭೂತಿ ನೀಡುತ್ತದೆ. ಹಾಗಾಗಿ ಹಿತ ಶಬ್ದವೇ ಆಪ್ಯಾಯನ, ರಸ್ಯ, ಹೃದ್ಯ," ಎನ್ನುತ್ತಾರೆ ಜಗದೀಶಶರ್ಮಾ ಸಂಪ. ಅವರ ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ‘ಹಿತೋಪದೇಶ’ ಕೃತಿಗೆ ಬರೆದ ಮುನ್ನುಡಿ.
‘ಹಿತೋಪದೇಶ’ ಎನ್ನುವ ಈ ಪದಗುಚ್ಛವೇ ಸೊಗಸು. ಸಾಧಾರಣವಾಗಿ ಉಪದೇಶ ಎಂದೊಡನೆ ಜನ ಮೂಗು ಮುರಿಯುತ್ತಾರೆ. ಅವರಿಗೆ ಒಪ್ಪಿಗೆಯಾಗದ್ದನ್ನು ಹಿರಿಯರು ಎಂದುಕೊಂಡವರು ಹೇಳುತ್ತಲೇ ಇರುತ್ತಾರೆ, ಅದು ಅವರಿಗೆ ಅಸಹನೀಯ ಎನಿಸುತ್ತದೆ. ಆದರೆ ಇಲ್ಲಿ ಅದು ಹಾಗಾಗಿಲ್ಲ. ಇಲ್ಲಿ ಉಪದೇಶ ಹಿತದೊಡನೆ ಕೂಡಿದೆ. ಇದೇ ಸೊಗಸಿಗೆ ಕಾರಣ.
ಹಿತ ಎನ್ನುವ ಪದದಲ್ಲಿ ಒಂದು ನೆಮ್ಮದಿಯ ಅನುಭವವಿದೆ. ಚಳಿಗಾಲದಲ್ಲಿ ಕಂಬಳಿ ಸಿಕ್ಕರೆ ಬೆಚ್ಚನೆಯ ಹಿತದ ಅನುಭವವಾಗುತ್ತದೆ. ಬಿರುಬೇಸಿಗೆಯಲ್ಲಿ ತಂಪಾದ ಪುಷ್ಕರಣಿ ಸಿಕ್ಕಿ ಅಲ್ಲಿ ಜಲವಿಹಾರ ಮಾಡುವಂತಾದರೆ ತಂಪಿನ ಹಿತಾನುಭವವಾಗುತ್ತದೆ. ಬದುಕು ಬೆಚ್ಚಿ, ಬೆದರಿ, ಕದಡಿ, ಕಠೋರವೆನಿಸಿದಾಗ ಆತ್ಮೀಯರ ಆಶ್ರಯ ಹಿತದ ಅನುಭೂತಿ ನೀಡುತ್ತದೆ. ಹಾಗಾಗಿ ಹಿತ ಶಬ್ದವೇ ಆಪ್ಯಾಯನ, ರಸ್ಯ, ಹೃದ್ಯ.
ಅದರೊಡನೆ ಉಪದೇಶ ಸಿಕ್ಕರೆ ಅದು ಸುಗ್ರಾಹ್ಯ. ಅಲ್ಲಿ ಅಸಹನೀಯತೆ ಇಲ್ಲ. ಎಂಥವರಿಗೂ ಒಪ್ಪಿಕೊಳ್ಳುವಂತಾಗುತ್ತದೆ. ಅದು ಅವರ ಸ್ವಭಾವಕ್ಕೋ ಪ್ರವೃತ್ತಿಗೋ ವಿರುದ್ಧವಿದ್ದರೂ ನಿರಾಕರಣೆಯ ಮನಸ್ಸಾಗುವುದಿಲ್ಲ.
***
‘ಹಿತೋಪದೇಶ’ ಎನ್ನುವ ಕೃತಿ ಮಾಡಿದ್ದು ಇದನ್ನೇ. ಆ ಅರಸು ಮಕ್ಕಳು ಅರಿವುಗೇಡಿಗಳಾಗಿದ್ದರು. ವಿವೇಕಕ್ಕೂ ಅವಕ್ಕೂ ಆಗಿಬರುತ್ತಿರಲಿಲ್ಲ. ಜ್ಞಾನ, ವಿದ್ಯೆ, ಶಾಸ್ತ್ರ ಎಂದರೆ ಯೋಜನ ದೂರಕ್ಕೆ ಹಾರುತ್ತಿದ್ದರು. ಅಂಥ ಅವರಿಗೂ ಅರಿವೇ ಆಗದಂತೆ, ಅವರು ಖುಷಿಖುಷಿಯಾಗಿ ಕಿವಿಗೊಟ್ಟು ಆಲಿಸುವಂತೆ, ಮೈಮರೆತು ತಲ್ಲೀನರಾಗುವಂತೆ ಕಲಿಸಿದ ಹಿರಿಮೆ ಈ ಕೃತಿಯದ್ದು. ಹಾಗಾಗಿ ಜಗತ್ತಿನ ಮೊಟ್ಟ ಮೊದಲ ನಲಿ-ಕಲಿ ಶಿಕ್ಷಣ ಕ್ರಮ ಹಿತೋಪದೇಶದ್ದು ಮತ್ತು ಇದರ ಅಣ್ಣ ಪಂಚತಂತ್ರದ್ದು.
ಅದು ಕಥೆಯ ಶಕ್ತಿ ಎನ್ನಬೇಕು. ಬೇರೆ ಯಾವುದರಿಂದಲೂ ಆಗದ ಕೆಲಸವನ್ನು ಕಥೆ ಮಾಡುತ್ತದೆ. ಪುರಾಣ, ಇತಿಹಾಸ, ಕಾವ್ಯ ಇವೆಲ್ಲದರ ಹುಟ್ಟಿಗೆ ಕಾರಣವೇ ಕಥೆಗಿರುವ ಈ ಕೌಶಲ. ಇದನ್ನು ಶಿಕ್ಷಣಕ್ಕೆ ವ್ಯವಸ್ಥಿತವಾಗಿ ಬಳಸಿದವರು ಪಂಚತಂತ್ರ ಮತ್ತು ಹಿತೋಪದೇಶದ ಕವಿಗಳು. ಇದನ್ನೊಂದು ಶಿಕ್ಷಣ ವಿಧಾನ ಎಂದು ಜಗತ್ತು ಗಂಭೀರವಾಗಿ ಗುರುತಿಸಿಲಿಲ್ಲ. ಗುರುತಿಸಿದ್ದರೆ ಇಂದಿನ ಅನೇಕ ಸಮಸ್ಯೆಗಳು ಉಳಿದುಕೊಳ್ಳುತ್ತಿರಲಿಲ್ಲ. ಅಂಥ ಅನನ್ಯ ಕಾರ್ಯ ಈ ಎರಡು ಕೃತಿಗಳಿದ್ದು.
***
ಇದೀಗ ‘ಹಿತೋಪದೇಶ’ ಕನ್ನಡಕ್ಕೆ ಬಂದಿದೆ. ಹಾಗೆಂದು ಇದು ಇದಂಪ್ರಥಮವೇನೂ ಅಲ್ಲ. ಈ ಮೊದಲೂ ಅನುವಾದಿಸಿದವರಿದ್ದಾರೆ. ಪೂರ್ಣವಾಗಿ, ಆಂಶಿಕವಾಗಿ, ಸಂಕ್ಷಿಪ್ತವಾಗಿ ಹೀಗೆ ಹಲವು ವಿಧಾನದಲ್ಲಿ ಆ ಕಾರ್ಯ ಮಾಡಿದ್ದಾರೆ. ಆದರೆ ಈ ಕೃತಿ ಅಪರೂಪದ್ದು. ಅದಕ್ಕೆ ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ವಿಶಿಷ್ಟ ಶೈಲಿ ಕಾರಣ.
ಅವರದ್ದು ಸೊಗಸಾದ ಕನ್ನಡ. ಅದರಲ್ಲಿ ಸಂಸ್ಕೃತದ ಪದಪುಂಜಗಳಿರುತ್ತವೆ; ಹಳಗನ್ನಡದ ಚಂದದ ಉಕ್ತಿಪಾರಮ್ಯವಿರುತ್ತದೆ; ನಿತ್ಯವೂ ಆಡುವ ಭಾಷೆಯ ಝಲಕ್ ಕೂಡಾ ಇರುತ್ತದೆ. ಅವರು ವ್ಯಾಕರಣವನ್ನು ಮೀರುವವರಲ್ಲ, ಹಾಗೆಂದು ಶಾಸ್ತ್ರಜಡರೂ ಅಲ್ಲ. ಪದ್ಯದ ಕಮನೀಯತೆಯನ್ನು ಗದ್ಯದಲ್ಲೂ ಕಾಣಿಸಬಲ್ಲವರು; ರಸ-ಭಾವ ತುಷ್ಟಿಗೆ ಮಣೆ ಹಾಕುವವರು. ಹಳೆಯದನ್ನು ಬಿಡದವರು; ಹೊಸದನ್ನು ಹೊದ್ದವರು.
ನನ್ನ ಇದಿಷ್ಟೂ ಮಾತು ಅತ್ಯುಕ್ತಿ ಅಲ್ಲ ಎನ್ನುವುದಕ್ಕೆ ಅವರ ಈ ಕೃತಿಯೇ ನಿದರ್ಶನ. ಅಷ್ಟು ಸೊಗಸಾಗಿ ಈ ಕೃತಿ ಮೈದೋರಿದೆ. ನಡನಡುವೆ ಶ್ಲೋಕಗಳ ಪ್ರಸಕ್ತಿ ಬಾರದೇ ಇದ್ದಿದ್ದರೆ, ಹಿತೋಪದೇಶದ ಸಂಸ್ಕೃತಮೂಲದ ಅರಿವಿಲ್ಲದ ಓದುಗ ಇದನ್ನೊಂದು ಸ್ವೋಪಜ್ಞವಾದ ಕನ್ನಡದ ಕೃತಿ ಎಂದೇ ಭಾವಿಸುತ್ತಿದ್ದ. ಹಾಗೆ ಅವರಿಲ್ಲಿ ಕನ್ನಡಿಸಿದ್ದಾರೆ.
ಈ ಕೃತಿಯ ಇನ್ನೊಂದು ವೈಶಿಷ್ಟ್ಯವೇ ಇಲ್ಲಿಯ ಶ್ಲೋಕಗಳು. ಸಂಸ್ಕೃತದ ಸುಪ್ರಸಿದ್ಧವಾದ ಸು-ಭಾಷಿತಗಳು ಇಲ್ಲಿವೆ. ಇವೆಲ್ಲ ಹಿತೋಪದೇಶಲ್ಲಿ ಇರುವಂಥವೇ. ಆದರೆ ಉಪಾಧ್ಯಾಯರು ಅವನ್ನು ಬಿಟ್ಟು ಅನುವಾದಿಸಿಲ್ಲ. ಇದೇ ಆಗಬೇಕಾದದ್ದು. ಈ ಶ್ಲೋಕಗಳು ಸೂತ್ರಗಳಂತವು. ಕಥೆಯ ಮೂಲಕ ಹೇಳಹೊರಟ ತತ್ತ್ವಗಳನ್ನು ಇವು ಕೆಲವೇ ಶಬ್ದಗಳಲ್ಲಿ ಕಟ್ಟಿಕೊಡುತ್ತವೆ. ಈ ಶ್ಲೋಕಗಳು ಕಂಠಸ್ಥವಾದರೆ, ಬುದ್ಧಿಸ್ಥವಾದರೆ ಇಡಿಯ ಹಿತೋಪದೇಶ ಸದಾ ಬದುಕಿನಲ್ಲಿ ಪ್ರವಹಿಸುತ್ತಲೇ ಇರುತ್ತದೆ. ಹಾಗಾಗಿ ಶ್ಲೋಕಗಳನ್ನು ಸರಳವಾದ ಆದರೆ ಸ್ಪಷ್ಟವಾದ ಭಾಷೆಯಲ್ಲಿ ನಿರೂಪಿಸಿರುವುದು ಈ ಪುಸ್ತಕವನ್ನು ಅಮೂಲ್ಯವಾಗಿಸಿದೆ.
"ನಂಬಿಕೆಯ ನೆಲೆಯಲ್ಲಿ ಕೌಟುಂಬಿಕವಾಗಿ ಯೋಚಿಸುವಂತೆ ಮಾಡುವ "ಅಪ್ಪ ಬರ್ತಾನ" ಕತೆಯು ಮಕ್ಕಳ ಮನೊಬಲವನ್ನು...
"ಅದೊಂದು ಕಾಲ್ಪನಿಕ ಪಾತ್ರವೇ ಆಗಿದ್ದರೂ ಜನ ಅವನಿಗಾಗಿ ಹುಡುಕಾಡಿಬಿಟ್ಟಿದ್ದರಂತೆ. ಅವನ ಅಡ್ರೆಸ್ ಹುಡುಕ ಹೋಗಿ ನಿರ...
"ಮಿತ್ರ ಆನಂದ ಭೋವಿಯವರ ಗಜಲ್ ಗಳಲ್ಲಿ ನಾನು ಹೆಚ್ಚಾಗಿ ಕಂಡಿದ್ದು ವಿಷಾದದ ಭಾವ ಇಲ್ಲಿ ನನ್ನದೆನ್ನುವುದು ಯಾವುದೂ ಇ...
©2025 Book Brahma Private Limited.