ಇವು ಕಥೆಗಳೋ ಆತ್ಮ ಚರಿತ್ರೆಯ ಪುಟಗಳೋ


"ಇಲ್ಲಿ ಬಳಸುವ ಭಾಷೆಯಲ್ಲಿ ಕೂಡಾ ಈ ಪ್ರಾಂತ್ಯದ ಸೊಗಡು ದಟ್ಟವಾಗಿ ಓದುಗರಿಗೆ ತಗಲುತ್ತದೆ. ಹೆಂಗಸರ ಬೀದಿ ಜಗಳಗಳ ಭಾಷೆಯಂತೂ ಭಾರೀ ಮಜಾ ನೀಡುತ್ತದೆ. ಮಕ್ಕಳಿಗಿರುವ ಅನಂತ ಕುತೂಹಲ, ಮುಗ್ಧತೆ, ಭಯ, ಆತಂಕ, ಸಾಹಸಪ್ರಿಯತೆ ಇವೆಲ್ಲವುಗಳನ್ನು ಚಿತ್ರಿಸುತ್ತಲೇ ಅದೆಷ್ಟು ಶ್ರೀಮಂತ ಅನುಭವಗಳ ಬಾಲ್ಯವನ್ನು ಕಥೆಗಾರರು ಜೀವಿಸಿದ್ದಾರೆ ಎಂಬುದು ಓದುಗರಿಗೆ ಪರಿಚಯವಾಗುತ್ತದೆ," ಎನ್ನುತ್ತಾರೆ ನವೀನ್ ಹಳೇಮನೆ. ಅವರು ಮಂಜುನಾಥ್ ಕುಣಿಗಲ್ ಅವರ ‘ಶಿವಾಜಿ ಟೆಂಟ್’ ಕೃತಿ ಕುರಿತು ಬರೆದ ಅನಿಸಿಕೆ.

ಕುಣಿಗಲ್ ಮಂಜುನಾಥ್ ಅವರ ಈ ಕಥಾ ಸಂಕಲನದಲ್ಲಿ ಒಂದು ಪಟ್ಟಣದಲ್ಲಿ ಗಣಪ ಎಂಬ ಬಾಲಕನ ಬಾಲ್ಯದಲ್ಲಿ ನಡೆಯುವ ಘಟನೆಗಳನ್ನು ಆಧರಿಸಿದ 10 ಕಥೆಗಳಿವೆ. ಇವು ಕಥೆಗಳೋ ಆತ್ಮ ಚರಿತ್ರೆಯ ಪುಟಗಳೋ ಎಂದು ಕಂಡುಹಿಡಿಯಲಾರದಷ್ಟು ಹಿತವಾಗಿ ಘಟನೆ ಮತ್ತು ಕಲ್ಪನೆಗಳು ಹಾಸು ಹೊಕ್ಕಾಗಿ ಬೆರೆತು ಹೋಗಿವೆ.

ಆರ್ ಕೆ ನಾರಾಯಣ್ ಅವರ ಸ್ವಾಮಿಗೆ ಇದ್ದ ಸಾಹಸ ಪ್ರವೃತ್ತಿಯೇ ಇಲ್ಲಿ ಗಣಪನಿಗೂ ಇದೆ. ಇವನಿಗೂ ಎಲ್ಲ ರೀತಿಯ ಗೆಳೆಯರಿದ್ದಾರೆ. ಆರ್ ಕೆ ನಾರಾಯಣ್ ಅವರ ಕಥೆಗಳು ಕಾಲ್ಪನಿಕ ಪಟ್ಟಣ ಮಾಲ್ಗುಡಿಯಲ್ಲಿ ನಡೆದರೆ, ಇಲ್ಲಿಯ ಕಥೆಗಳು ನೈಜವಾಗಿ ಇರುವ ಕುಣಿಗಲ್ ಪಟ್ಟಣದಲ್ಲಿ ನಡೆಯುತ್ತವೆ. ಪ್ರತಿಯೊಂದು ಘಟನೆಯೂ, ಪ್ರತಿಯೊಬ್ಬ ವ್ಯಕ್ತಿಯೂ, ಅದೆಷ್ಟು ಕರಾರುವಕ್ಕಾಗಿ ಚಿತ್ರಿತವಾಗಿವೆಯೆಂದರೆ, ಈ ಕಥೆಗಳೆಲ್ಲಾ ನಮ್ಮ ಕಣ್ಣ ಮುಂದೆಯೇ ಘಟಿಸುತ್ತಿರುವಂತೆ ಭಾಸವಾಗುತ್ತದೆ.

ಇಲ್ಲಿ ಬಳಸುವ ಭಾಷೆಯಲ್ಲಿ ಕೂಡಾ ಈ ಪ್ರಾಂತ್ಯದ ಸೊಗಡು ದಟ್ಟವಾಗಿ ಓದುಗರಿಗೆ ತಗಲುತ್ತದೆ. ಹೆಂಗಸರ ಬೀದಿ ಜಗಳಗಳ ಭಾಷೆಯಂತೂ ಭಾರೀ ಮಜಾ ನೀಡುತ್ತದೆ. ಮಕ್ಕಳಿಗಿರುವ ಅನಂತ ಕುತೂಹಲ, ಮುಗ್ಧತೆ, ಭಯ, ಆತಂಕ, ಸಾಹಸಪ್ರಿಯತೆ ಇವೆಲ್ಲವುಗಳನ್ನು ಚಿತ್ರಿಸುತ್ತಲೇ ಅದೆಷ್ಟು ಶ್ರೀಮಂತ ಅನುಭವಗಳ ಬಾಲ್ಯವನ್ನು ಕಥೆಗಾರರು ಜೀವಿಸಿದ್ದಾರೆ ಎಂಬುದು ಓದುಗರಿಗೆ ಪರಿಚಯವಾಗುತ್ತದೆ.

ಜಬಿವುಲ್ಲಾ ಅಸಾದ್ ಅವರ ರೇಖಾ ಚಿತ್ರಗಳು ಕಥೆಗಳಿಗೆ ಪೂರಕವಾಗಿ ಸುಂದರವಾಗಿ ಮೂಡಿ ಬಂದಿವೆ. 10 ಕಥೆಗಳಲ್ಲಿ ಗಣಪನ ಬಾಲ್ಯದಲ್ಲಿ ಬರುವ ಸಿನಿಮಾ ಹುಚ್ಚು, ಶಿಸ್ತಿನ ಮಾಸ್ತರು, ಶೋಷಣೆಗೆ ಒಳಗಾಗುವ ಹೆಂಗಸು, ಹುಡುಗರ ನಡುವಿನ ದೀರ್ಘಕಾಲದ ದ್ವೇಷ, ಮಕ್ಕಳ ಗುಟ್ಟಿನ ಆಟಗಳು, ಕುದುರೆ ಸವಾರಿಯ ರೋಮಾಂಚನ, ಮತೀಯ ಕಲಹದ ಪರಿಣಾಮಗಳು, ಗಣಪತಿ ಕೂರಿಸುವ ಅನುಭವ, ಅನಾಮಿಕ ಕಲಾವಿದರನ್ನು ಅಂತ:ಕರಣದಿಂದ ಕಾಣುವ ರೀತಿ ಮತ್ತು ಶಾಲಾ ಶಿಕ್ಷಕರ ನಿಸ್ವಾರ್ಥ ಬದುಕು... ಇಂತಹ ವೈವಿಧ್ಯತೆಯ ವಿಷಯಗಳಿಂದ ಕಥೆಗಳು ಸರಾಗವಾಗಿ ಓದಿಸಿಕೊಳ್ಳುತ್ತವೆ.

ಸಂಕಲನದ ಕೊನೆಯ ಕಥೆಯಾದ 'ಹೆಡ್ ಮಾಸ್ಟರ್ ಮರಿಭಟ್ರು' ಎಲ್ಲವಕ್ಕಿಂತ ದೀರ್ಘ ಕಥೆಯಾಗಿದ್ದು, ತನ್ನ ಕಥಾ ಕುಸುರಿ, ಪಾತ್ರ ಪೋಷಣೆ, ಮತ್ತು ನಿರಂತರವಾಗಿ ಘಟಿಸುತ್ತ ಹೋಗುವ ವೈವಿಧ್ಯಮಯ ಘಟನೆಗಳ ಕುತೂಹಲಕಾರಿ ನಿರೂಪಣೆಯ ಮೂಲಕ ನನಗೆ ಮೆಚ್ಚುಗೆ ಆದ ಕಥೆ. ಇಲ್ಲಿ ಬಳಸಿರುವ ರೂಪಕಗಳು, ಉಪಮೆಗಳು, ಸಾಲು ಮಿಂಚುಗಳು,ಲೀಲಾಜಾಲ ನಿರೂಪಣೆಯ ಭಾಷೆ ಓದುಗರ ಕಣ್ಣಿಗೆ ಅಲ್ಲಲ್ಲಿ ಅನಾಯಾಸವಾಗಿ ಮೆಚ್ಚುಗೆಯ ಮಿಂಚು ಹತ್ತಿಸುತ್ತವೆ.

ಕೆಲವು ಕಥೆಗಳು ಇನ್ನೂ ಕ್ರಿಸ್ಪಿಯಾಗಿ ಇರಬಹುದಿತ್ತು ಅನಿಸುತ್ತದೆ. ಆದರೆ ಮುಂದಿನ ಕಥಾ ಸಂಕಲನಕ್ಕೆ ಎದುರುನೋಡುವಂತೆ ಮಂಜುನಾಥ್ ಕುಣಿಗಲ್ ಕಥೆಗಳನ್ನು ಹೇಳಿದ್ದಾರೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ.

MORE FEATURES

ರಾಜಕೀಯದಾಟಗಳ ಮಧ್ಯೆ ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳುವ ಕಥೆಗಳು

05-05-2025 ಬೆಂಗಳೂರು

"'ಹವೇಲಿ ದೊರೆಸಾನಿ 'ಕಥಾ ಸಂಕಲನದ ಮೊದಲ ಕಥೆ,'ಅನ್ಪಡ ಕಂಟೆವ್ವ ', ಊರಿಗೆ ಶಾಲೆ ಬರಬೇಕೆಂದು ಊರ...

ಕಣಿವೆ ನಾಡಿನೊಳಗೆ ಕಂಪಿಸುತ್ತ ಮಾಡಿದ ಪ್ರವಾಸ 

05-05-2025 ಬೆಂಗಳೂರು

"ಜಮ್ಮು-ಕಾಶ್ಮೀರದ ಬೇಸಿಗೆ ತಂಗು ಧಾಮವಾದ ದಲ್ ಲೇಕ್ ಶ್ರೀನಗರದ ಒಳಗಿರುವ ಒಂದು ಸಿಹಿನೀರಿನ ಸರೋವರ. ಪ್ರವಾಸಿಗರು ಮ...

ಇಲ್ಲಿನ ಕೆಲವು ಪ್ರಸಂಗಗಳೇ ರೋಚಕ

05-05-2025 ಬೆಂಗಳೂರು

"ಭುಜಂಗಾಚಾರ್ಯ ಎನ್ನುವುದು ಒಂದು ಶಕ್ತಿಯಾಗಿ ಆ ಕುಟುಂಬವನ್ನು ಕಾಪಾಡುತ್ತದೆ. ಒಂದು ಆದರ್ಶವಾಗಿ ಮನೆಯ ಹಿರಿ ಮಗನ ಕ...