ನಾನೊಂದು ಕನಸ ಕಂಡೆ

Date: 19-06-2024

Location: ಬೆಂಗಳೂರು


"ನನಗೆ ನೆನ್ನೆ ಬಿದ್ದ ಕನಸೊಂದನ್ನು ನಿಮಗೆ ಹೇಳಲೇಬೇಕು. ಅದು ಕನಸೋ ಎಚ್ಚರವೋ ಅಂತ ಇನ್ನೂ ಬಗೆಹರಿದೆ ಇಲ್ಲ! ನೆನ್ನೆ ಕರ್ಣನನ್ನೆ ಮನಸ್ಸಿನಲ್ಲಿ ನೆನೆಯುತ್ತ ಕೂತಿದ್ದೆ. ಸ್ವಲ್ಪ ಹೊತ್ತಿಗೆ ಅವನೇ ಕನಸಿನಲ್ಲಿ ಬಂದುಬಿಟ್ಟ," ಎನ್ನುತ್ತಾರೆ ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣಕ್ಕೆ ಕನಸ್ಸಿನ ಕುರಿತು ಬರೆದ ಲೇಖನ.

ನನಗೆ ನೆನ್ನೆ ಬಿದ್ದ ಕನಸೊಂದನ್ನು ನಿಮಗೆ ಹೇಳಲೇಬೇಕು. ಅದು ಕನಸೋ ಎಚ್ಚರವೋ ಅಂತ ಇನ್ನೂ ಬಗೆಹರಿದೆ ಇಲ್ಲ! ನೆನ್ನೆ ಕರ್ಣನನ್ನೆ ಮನಸ್ಸಿನಲ್ಲಿ ನೆನೆಯುತ್ತ ಕೂತಿದ್ದೆ. ಸ್ವಲ್ಪ ಹೊತ್ತಿಗೆ ಅವನೇ ಕನಸಿನಲ್ಲಿ ಬಂದುಬಿಟ್ಟ. ಜೊತೆಗೆ ನಾರಣಪ್ಪನೂ ಇದ್ದಾನೆ. ಕರ್ಣ ಜೋರು ಮಾಡುತ್ತಿದ್ದಾನೆ. ನಾರಣಪ್ಪ ಬಡಪಾಯಿ ಥರ ಬೆಬ್ಬೆಬ್ಬೆ ಅನ್ಕೊಂಡು ನಿಂತಿದ್ದಾನೆ. ಆಮೇಲೆ ಕರ್ಣ ಅವನಿಗೆ ಛಟಾರ್ ಅಂತ ಕೆನ್ನೆಗೆ ಒಂದು ಬಾರಿಸಿದ. ಇವನೂ ಏರಿಹೋದ. ಆದರೆ ಕರ್ಣನ ಎದುರು ಅವನು ಪೀಚಲು ವ್ಯಕ್ತಿ ಹಾಗೆ ಕಾಣುತ್ತಿದ್ದ. ಸ್ವಲ್ಪ ಹೊತ್ತಾದ ಮೇಲೆ ಇಬ್ಬರೂ ಏರು ದನಿಯಲ್ಲಿ ಮಾತನಾಡುತ್ತಾ ಇದ್ದಾರೆ. ಕರ್ಣ ನಾರಣಪ್ಪನನ್ನು ಕೊರಳಪಟ್ಟಿ ಹಿಡಿದು ಕೇಳುತ್ತಿದ್ದಾನೆ;

ಕರ್ಣ: ನನ್ನ ಬಗ್ಗೆ ಯಾಕಯ್ಯಾ ಹೀಗೆ ಬರೆದೆ. ಆ ವ್ಯಾಸನಿಗಂತೂ ಬುದ್ಧಿಯಿಲ್ಲ, ಅವನ ನಂತರ ಬಂದ ಸಾವಿರಾರು ಪ್ರತಿವ್ಯಾಸ-ಪಂಪರಿಗೂ ಬುದ್ಧಿಯಿಲ್ಲ, ನಿನಗಾದರೂ ಬುದ್ಧಿ ಬೇಡವೇನಯ್ಯ?

ನಾರಣಪ್ಪ: ನಾನು ಏನಯ್ಯಾ ಮಾಡಿದೆ ಅಂಥಾ ಬುದ್ಧಿಯಿಲ್ಲದ ಕೆಲಸ!

ಕರ್ಣ: ನಾನು ಪಾಂಡವ ಅಲ್ಲ, ನಾನು ಕುಂತಿಯ ಮಗ ಅಲ್ಲ. ನಾನು ಅನಾಥಶಿಶುವೂ ಅಲ್ಲ. ನಾನು ರಾಧೇಯನೇ, ನಾನು ಬೆಸ್ತರ ಕುಲದವನೇ. ನಾನು ಮೀನುಗಾರನ ಮಗನೇ. ಆದರೆ ನೀನೇನಯ್ಯಾ ಬರೆದಿದ್ದಿ? ಬರೆ ಸುಳ್ಳು ಸುಳ್ಳು.

ನಾರಣಪ್ಪ: ಅಂದರೆ! ನೀನು ಹೇಳ್ತಾ ಇರೋದಾದರು ಏನು? ನಾನೇನು ಸುಳ್ಳು ಬರೆದಿದೀನಿ?

ಕರ್ಣ: ಶ್ರೀಕೃಷ್ಣ ಯುದ್ಧ ಕಾಲದಲ್ಲಿ ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸೋಕೆ ನೀನು ಕುಂತಿ ಮಗ ಅನ್ನೊ ಸುಳ್ಳನ್ನ ನನ್ನ ಕಿವಿಲಿ ಹಾಕಿದನಂತೆ. ನನ್ನ, ದುರ‍್ಯೋಧನನ ಸ್ನೇಹಾನ ಒಡೆಯೋಕೆ ಇಂಥ ಸುಳ್ಳನ್ನ ಸೃಷ್ಟಿ ಮಾಡಿದನಂತೆ! ಈ ಸುಳ್ಳನ್ನ ನಿಜ ಮಾಡೋಕೆ ಕುಂತಿನೂ ನನ್ನ ಹತ್ತಿರ ಕಳಿಸಿದನಂತೆ! ಎಮೋಶನಲ್ ಬ್ಲಾಕ್‌ಮೇಲ್ ಮಾಡುವುದು ಕೂಡ ಅವನ ಉದ್ದೇಶ ಆಗಿತ್ತಂತೆ. ಹೆಂಗಾದರೂ ಮಾಡಿ ಯುದ್ಧ ಗೆಲ್ಲೋದು ಅವನ ತಂತ್ರ ಆಗಿತ್ತಂತೆ. ಎಲ್ಲ ಎಲ್ಲ ಸುಳ್ಳಿನ ಕಂತೆ. ನೀವೆಲ್ಲ ಕವಿಗಳು ಬೋಳಿ ಮಕ್ಕಳು ಸುಳ್ಳು ಹೇಳೋದರಲ್ಲಿ ನಿಸ್ಸೀಮರು. ಕತೆ ಕಟ್ಟೋದರಲ್ಲಿ ನಿಸ್ಸೀಮರು...

ನಾರಣಪ್ಪ: ಹಾಗಾದರೆ ಆ ಸತ್ಯಂತಪ ಮಹರ್ಷಿಗಳ ಆಶ್ರಮದಲ್ಲಿ ನಡೆದ ಘಟನೆನೂ ಸುಳ್ಳಾ?

ಕರ್ಣ: ಅದೂ ಕೂಡ ಸುಳ್ಳು. ಕಾಡಿನಲ್ಲಿ ತಪಸ್ಸು ಮಾಡುವ ಋಷಿಗಳೆಲ್ಲ ಕಾಲಜ್ಞಾನಿಗಳು-ಬ್ರಹ್ಮಜ್ಞಾನಿಗಳು ಅಂತ ಸಾಬೀತು ಮಾಡೋ ಕಾರಣಕ್ಕೆ ವ್ಯಾಸಮಹಾಶಯ ಈ ಸುಳ್ಳನ್ನ ಸೇರಿಸಿದ. ದುರ‍್ಯೋಧನನಂತಹ ದೊರೆಗಳೆಲ್ಲ ಸ್ನೇಹಕ್ಕೆ ಬೆಲೆ ನೀಡಲ್ಲ. ಸ್ನೇಹಿತರನ್ನಷ್ಟೆ ಯಾಕೆ ಬಂಧು-ಬಳಗನೆಲ್ಲ ಕೊಂದು ಹಾಕ್ತಾರೆ ಅಂತ ಬರೆದ. ಅವನು ಬರೆದದ್ದನ್ನೆ ನೀನೂ ಬರೆದೆ. ಹಿಂದಿನೋರು ಬರೆದದ್ದನ್ನೆ ಗಿಳಿಪಾಠ ಒಪ್ಪಿಸೋ ಕೆಲಸ ನಿನ್ಯಾಕಯ್ಯ ಮಾಡಿದೆ ನಾರಣಾ. ಯಾಕೆ ನವಿಲು ಗರಿ ತಲೇಲಿ ಸಿಕ್ಕಿಸಿಕೊಂಡವನ ಎದುರು ನಾಗರಹಾವು ಸಿಕ್ಕಿಸಿಕೊಂಡವನು ಕಮ್ಮಿನಾ? ನೀವೆಲ್ಲ ಕುರುಡು ಭಕ್ತರು ಕಣೋ ಬೇರ‍್ಸಿಗಳಾ. ಭಕ್ತರೆ ಅವ್ರ್ ದೇವರನ್ನ ತೆಗಳೋಕೆ ಸಾಧ್ಯನಾ! ನಮ್ಮಂಥರ‍್ನ ಹಂಗಿಸಿ ನಿಮ್ಮವರನ್ನ ಹೀರೋ ಮಾಡಬೇಕಲ್ಲವಾ ನಿಮಗೆ?

ನಾರಣಪ್ಪ: ಅಯ್ಯೋ ಉಸಿರು ಕಟ್ಟುತಾ ಇದೆ, ನನ್ನ ಕೊರಳ ಪಟ್ಟಿ ಬಿಡಯ್ಯಾ

ಕರ್ಣ: ಯಾಕೆ? ಸೂತಪುತ್ರನಿಗೆ ಒಳ್ಳೆ ಬಿಲ್ಲುಗಾರ ಆಗೋಕೆ ಸಾಧ್ಯ ಇಲ್ಲವೋ? ಕೆಳಜಾತಿಲಿ ಹುಟ್ಟಿದೋನಿಗೆ ಪರಾಕ್ರಮಿ ಆಗೋಕೆ ಸಾಧ್ಯ ಇಲ್ಲವೋ? ನಾನು ಜನ್ಮತಃ ಕ್ಷತ್ರಿಯ ಆಗಿದ್ದೆನಂತೆ! ಆದ್ದರಿಂದಲೆ ಅಷ್ಟೊಂದು ಪರಾಕ್ರಮಿ ಆಗೋಕೆ ಸಾಧ್ಯ ಆಯ್ತಂತೆ! ಶೂದ್ರರಿಗೆ ಎಲ್ಲಾದರೂ ಶೂರರಾಗೋಕೆ ಸಾಧ್ಯಯಿಲ್ಲ ಅಂತ ಯಾವನೋ ತಲೆಮಾಸಿದ ಕವಿಗೆ ಅನ್ನಿಸಿತು. ಅವನು ಬರೆದ. ನೀನೂ ಅದನ್ನೆ ನಂಬಿದೆ. ಬರೆದೆ! ಬೇಡ ಆದವನು ಮಹಾಕವಿ ಆಗಬಹುದಾದರೆ ಬೆಸ್ತ ಆದೋನು ಮಹಾಶೂರ ಆಗೋಕೆ ಯಾಕೆ ಸಾಧ್ಯ ಆಗಲ್ಲ? ಭಾರತವನ್ನೆ ಕರ್ಣರಸಾಯನ ಅಂದೋನು ಬರೆದಿರೋದ ಓದಿದ್ದರೂ ನೀನು ಹಿಂಗ್ ಬರೀಬಹುದಾ?

ನಾರಣಪ್ಪ: ಹಾ ನನ್ನ ಕಣ್ಣಿಗೂ ಒಂದು ಕ್ಷಣ ಮಂಕು ಕವಿದುಬಿಡ್‌ತಾ! ನಾನೇಕೆ ಹಿಂಗೆ ಬರೆದೆ? ಯಾವ ಕುಲವೂ ವೈರಿಗಳನ್ನು ಅಟ್ಟಿಕೊಂಡು ಹೋಗಿ ಕಾದಾಡೋದಿಲ್ಲ, ಗೆಲ್ಲೋದಿಲ್ಲ, ಪರಾಕ್ರಮನೆ ಕ್ಷತ್ರಿಯಕುಲ ಅಂತ ಬರೆದಿರೋದುನ್ನೆಲ್ಲ ಓದ್ಕಂಡಿದ್‌ರೂ ನಾನು ಹಿಂಗ್ ನಂಬಿದ್ನಾ! ಆ ವ್ಯಾಸ ನನ್ನ ಕಣ್ ಪರ‍್ತಿ ಕವುಕೊಂಬಿಟ್ಟಿದ್ನಾ? ಹಾ ನಾನ್ಯಾಕ್ ಹಿಂಗ್ ರ‍್ದೆ!

ಕರ್ಣ: ಮತ್ಯಾಕೆ ಹಿಂಗ್ ಬರೆದೆ?

ನಾರಣಪ್ಪ: ಅಲ್ಲಾ ಅವತ್ತು ಪರಶುರಾಮ ಕೂಡ ನೀನು ಕಲಿತ ವಿದ್ಯೆಯೆಲ್ಲ ಪ್ರಯೋಗ ಮಾಡೋ ಕಾಲಕ್ಕೆ ಮರೆತು ಹೋಗಲಿ ಅಂತ ಶಾಪ ಕೊಟ್ಟದ್ದು ನೀನು ಶೂದ್ರ ಅಂತಾನೆ ತಾನೆ! ದ್ರೋಣನಿಗೂ ಗುರುವಲ್ಲವಾ ಅವನು! ಶೂದ್ರರನ್ನ ತಪಸ್ಸು ಮಾಡದ ಹಾಗೆ ತಡೆದ ಈ ಲೋಕ ಅವರನ್ನ ರಾಜ್ಯ ಆಳದಂಗೆ ತಡೆಯೋಕೆ ಪ್ರಯತ್ನನೂ ಮಾಡಿತು ಅಂತ ನಾನೂ ನಂಬುತೀನಿ. ಆದರೆ ಅಯ್ಯೋ ಕರ್ಣನೇ ನಿನ್ನ ಹುಟ್ಟಿನ ಬಗ್ಗೆ ನನಗು ಒಂದು ಕ್ಷಣ ಮಂಕು ಕವಿತಾ!

ಕರ್ಣ: ಹಂಗಾದರೆ ಅತ್ತ ಕ್ಷತ್ರಿಯನಾಗಿನೂ ಇತ್ತ ಸೂತನಾಗಿನೂ ಎರಡೂ ಕಡೆ ಅವಮಾನ ಅನುಭವಿಸೋನಂಗೆ ನನ್ನನ್ನ ಯಾಕೆ ಸೃಷ್ಟಿ ಮಾಡಿದೆ? ಪೆನ್ನಿನಿಂದ ಮಕ್ಕಳನ್ನು ಹುಟ್ಟಿಸೋ ನಿಮ್ಮಂಥ ಕವಿಗಳಿಗೆ ಕಿವಿಯಿಂದ ಹುಟ್ಟಿಸೋದು ಯಾವ ಕಷ್ಟ. ಥತ್. (ಕೊರಳ ಪಟ್ಟಿ ಬಿಡುತ್ತಾನೆ)

ನಾರಣಪ್ಪ: ಸಾರಿ ಕಣಯ್ಯ. ಸೋ ಸಾರಿ.

ಕರ್ಣ: ಸಾರಿ ಅಂತೆ ಸಾರಿ. ನಿನ್ ಸಾರಿ ತಗೊಂಡು ಹೋಗಿ ಉಪ್ಪು ಹುಳಿ ಹಾಕ್ಕೊಂಡು ನೆಕ್ಕೊ.

(ಆಗ ಇದ್ದಕ್ಕಿದ್ದ ಹಾಗೆ ಒಮ್ಮೆಗೆ ಕತ್ತಲು ಆವರಿಸಿ ತಕ್ಷಣ ಮಿಂಚಿನಂತೆ ಬೆಳಕು ಬರುತ್ತದೆ. ದೃಶ್ಯ ಬದಲಾದಾಗ ನಾರಣಪ್ಪನ ಜಾಗದಲ್ಲಿ ಪಂಪ ಇರ‍್ತಾನೆ)

ಪಂಪ: ನಿನ್ನ ಕತೆಯೇನೋ ಹಿಂಗೆ ಸ್ವಲ್ಪ ನನ್ನ ಕತೆನೂ ಕೇಳಯ್ಯ. ಇಲ್ಲಿ ಕೆತ್ತಿದ್ದಾರಲ್ಲ ಈ ಗಂಗಾಧರ ಶಾಸನ, ಇದು ಅರಿಕೇಸರಿ ಕೆತ್ತಿಸಿದ್ದಲ್ಲ. ಎಷ್ಟೊ ವರ್ಷಗಳ ನಂತರ ಅಗ್ರಹಾರದ ಜನ ಕೆತ್ತಿಸಿದ್ದು. ನೀನೇ ಬೇಕಾದರೆ ಇದರ ಅಕ್ಷರ ವಿನ್ಯಾಸ-ಭಾಷಾ ಪ್ರಯೋಗ ನೋಡು. ಇದು ನನ್ನ ಕಾಲದ್ದಲ್ಲವೇ ಅಲ್ಲ. ನನ್ನ ಅಪ್ಪನೂ ಬ್ರಾಹ್ಮಣ ಅಲ್ಲ, ನನ್ನ ಅಜ್ಜನೂ ಬ್ರಾಹ್ಮಣ ಅಲ್ಲ. ಹಾಗಂತ ಆಮೇಲೆ ಅಗ್ರಹಾರದವರು ಸುಳ್ಳು ಬರೆದಿದ್ದಾರೆ.

ಕರ್ಣ: ಮಾನವ ಜಾತಿ ತಾನೊಂದೆ ವಲಂ ಅಂತನೂ ಹೇಳಿದ್ದಿ, ಬ್ರಾಹ್ಮಣ ರ‍್ಮಮೆ ರ‍್ಮಂ ಅಂತನೂ ಹೇಳಿದ್ದಿ, ಈಗ ನೋಡಿದರೆ ನನ್ನ ವಂಶವೃಕ್ಷಾನ ನಾನು ಬರೆದೇ ಇಲ್ಲ ಅಂತ ಬೇರೆ ಹೇಳ್ತಾ ಇದ್ದಿ. ಏನ್ ಸುಳ್ಳುಬುರುಕರಯ್ಯ ನೀವೆಲ್ಲ!

ಪಂಪ: ಅಯ್ಯಾ ಕರ್ಣ ಅದೆ ವಿಚಿತ್ರ! ನನ್ನ ಕಾವ್ಯದ ಪೀಠಿಕೆ ಭಾಗದಲ್ಲಿ ಹೇಳಿರೊ ನನ್ನ ವಂಶವೃಕ್ಷದ ವಿಚಾರ ಕೂಡ ನಾನು ಹೇಳಿದ್ದೇ ಅಲ್ಲ. ಇಷ್ಟಕ್ಕು ನಾನು ಬರೆದ ಓಲೆ ಕಟ್ಟು ಯಾರಿಗೂ ಸಿಕ್ಕೇ ಇಲ್ಲ ಕಣಯ್ಯಾ. ನಾನು ಸತ್ತು 400 ವರ್ಷ ಆದ ಮೇಲೆ ಯಾರೋ ಅಗ್ರಹಾರದ ಓಲೆಗರ‍್ರು ಮಾಡಿದ ಪ್ರತಿ ಸಿಕ್ಕಿರೋದು. ಆಮೇಲೆ ಯಾರೋ ಇದನ್ನೆಲ್ಲ ಬರೆದಿದ್ದಾರೆ! ಪಾಠದ ಒಳಕ್ಕೆ ಪ್ರಕ್ಷಿಪ್ತಗಳನ್ನ ಪಾಠದ್ ಥರಾನೆ ಸೇರಿಸೊ ಪಾಠಾಂತಕರು ಬಹಳ ಜನ ಇರುತ್ತಾರಯ್ಯಾ ಇದು ಯಾವತ್ತಿಂದಲೂ ನಡೀತಾನೆ ಬಂದಿದೆ.

ಕರ್ಣ: ನಾನು ಕೇಳಿದ್ದಕ್ಕು ನೀನು ಹೇಳ್ತಾ ಇರೋದಕ್ಕೂ ಏನಯ್ಯಾ ಸಂಬಂಧ?

ಪಂಪ: ಸಂಬಂಧ ಇದೆ. ನೋಡು ನನ್ನ ಜಾತಿ ಯಾವುದೊ ನನಗೇ ಗೊತ್ತಿಲ್ಲ. ನಾನು ಜೈನ ಅಷ್ಟೆ. ಬ್ರಾಹ್ಮಣ ಜೈನನೋ, ಶೂದ್ರ ಜೈನನೋ, ವೈಶ್ಯ ಜೈನನೋ, ಕುರುಬ ಜೈನನೋ, ಒಕ್ಕಲ ಜೈನನೋ ನನಗೇ ಗೊತ್ತಿಲ್ಲ. ನೂರಾರು ವರ್ಷಗಳ ಹಿಂದೆನೆ ನಮ್ಮ ಪೂರ್ವಿಕರು ಜೈನರಾಗಿದ್ದರು. ಯಾರು ಯಾವಾಗ ಎಲ್ಲಿ ಜೈನರಾದರೋ ತಿಳೀದು. ನನ್ನ ತಾತ ಬ್ರಾಹ್ಮಣ ಆಗಿದ್ದ, ನನ್ನ ತಂದೆನೂ ಬ್ರಾಹ್ಮಣ ಆಗಿದ್ದ; ಆಮೇಲ್ ಜೈನ ರ‍್ಮಕ್ಕೆ ಮತಾಂತರ ಆದ ಅಂತೆಲ್ಲ ನಾನ್ಯಾಕ್ ಬರೀಲಿ? ನನ್ನ ಕಾವ್ಯಕ್ಕು ಅದಕ್ಕು ಏನು ಸಂಬಂಧ?! ಬ್ರಾಹ್ಮಣರಲ್ಲದ ಶೂದ್ರರು ಇಂತಹ ಕಾವ್ಯಗಳನ್ನು ಬರೆಯೋಕೆ ಸಾಧ್ಯನೆ ಇಲ್ಲ ಅಂತ ಅಗ್ರಹಾರದವರು ಯೋಚನೆ ಮಾಡಿ ಈ ಬದಲಾವಣೆ ಮಾಡಿರಬಹುದು.

ಕರ್ಣ: ನಾನು ನನ್ನ ಯಾಕಯ್ಯಾ ಹಿಂಗೆ ಸೃಷ್ಟಿ ಮಾಡಿದೆ ಅಂತ ಕೇಳಿದರೆ ನನ್ನನ್ನೇ ಯರ‍್ಯಾರೋ ಹೆಂಗೆಂಗೋ ಸೃಷ್ಟಿ ಮಾಡಿ ಬಿಟ್ಟಿದ್ದಾರೆ ಅಂತ ಹೇಳ್ತಾ ಇದ್ದೀಯ. ಕುರುಕ್ಷೇತ್ರ ಯುದ್ಧಕ್ಕೆ ಸೇನಾಪತಿ ಪಟ್ಟ ಯಾರಿಗೆ ಕಟ್ಟಬೇಕು ಅನ್ನೊ ಚರ್ಚೆ ನಡೆಯೊವಾಗ ಭೀಷ್ಮ-ದ್ರೋಣ ಎಲ್ಲರೂ ನನ್ನ ಸೂತ ಜಾತಿನೇ ಎತ್ತಿ ಆಡಿದರಲ್ಲ! ಭೀಷ್ಮನಿಗೆ ಏನು ಅವನ ಚರಿತ್ರೆನೆ ಮರೆತು ಹೋಗಿತ್ತಾ? ಅವನೇ ಗಂಗೆ ಮಗನಲ್ಲವಾ? ಅವನ ಅಪ್ಪನಿಗೆ ಅವನೇ ಬೆಸ್ತರ ಹುಡುಗಿ ಮತ್ಸಗಂಧಿನ ತಂದು ಕಟ್ಟಲಿಲ್ಲವಾ? ಈ ಪಾಂಡವ-ಕೌರವರೆಲ್ಲ ಬೆಸ್ತರ ಹುಡುಗಿಯ ಮೊಮ್ಮಕ್ಕಳು ಮರಿ ಮಕ್ಕಳಲ್ಲವಾ? ಅವರಿಗೇ ಇಲ್ಲದ ಸೂತಕುಲ ನನಗೇಕಯ್ಯಾ ಅಂಟಿಕೋತು?

ಪಂಪ: ಹೌದಲ್ಲವಾ! ಯಾಕೆ ಮತ್ತೆ ನಿನ್ನ ಎಲ್ರು ಸೂತ ಸೂತ ಅಂತನೆ ಬರ‍್ದಿದಾರೆ!

ಕರ್ಣ: ಥೂ ಪಾಂಡವರಿಗಿಂತ ಕೌರವರಿಗಿಂತ ನಿಮ್ಮಂಥ ಕವಿಗಳಿಗೆ; ನಿಮ್ಮನ್ನು ಸಾಕೋ ರಾಜರಿಗೆ ಜಾತಿ ಬೇಕಾಗಿದೆ. ನನ್ನನ್ನು ಯಾಕಯ್ಯಾ ಹೀಗೆ ಬರೆದೆ ಅಂದರೆ ನನ್ನನ್ನೆ ಯಾರೋ ಹೆಂಗೆಗೊ ಬರೆದಿದಾರೆ ಅಂತಿಯಲ್ಲಯ್ಯ. (ಪಂಪನನ್ನು ಬಿಡಿಸಿಕೊಳ್ಳಲು ಹೋದೆ. ಆಗ ಕರ್ಣ ನನ್ನ ಕಡೆಗೇ ತಿರುಗಿದ)

ಕರ್ಣ: ಯಾವಾಗಲೋ ಸತ್ತು ಹೋದ ನನ್ನನ್ನು ಮತ್ತೆ ಮತ್ತೆ ಬದುಕಿಸೀ ಬದುಕಿಸೀ ಅವಮಾನಿಸಿ ಸಾಯಿಸುವ ನಿಮ್ಮಂಥಾ ಸಾಹಿತಿಗಳನ್ನ ಮೊದಲು ಒದೀಬೇಕು.

(ಹುಲ್ಲು ಕಡಿಯುತ್ತ ಕರ್ಣ ಗರ್ಜಿಸುತ್ತ ಬಂದ. ನನಗೆ ದಿಗಿಲಾಯಿತು. ಮತ್ತೆ ಒಂದರೆಚಣ ಕತ್ತಲಾಗಿ ಮತ್ತೆ ಮಿಂಚಿ ಬಳಕಾಯ್ತು. ರ‍್ಧ ನಾರಣಪ್ಪ ಇನ್ರ‍್ಧ ಪಂಪನ ಥರ ಕಾಣೋ ಹೈಬ್ರಿಡ್ ಕವಿ ಹಣೆಲಿ ಬೆವರ ಹನಿಗಳು ಸಾಲುಗಟ್ಟಿದ್ವು. ಪಂನಾರಣಪ್ಪನ ಥರ ಆ ಕವಿ ಇದ್ದ. ಥರ ಥರ ನಡುಗುತ್ತಿದ್ದಾನೆ. ಕರ್ಣನ ಕಣ್ಣುಗಳು ಕೆಂಡವಾಗಿವೆ. ನಾನು ಬೆಚ್ಚಿಬಿದ್ದೆ. ನನ್ನ ಹಣೆಲೂ ಬೆವರು. ಮೈ ಪೂರ ಬೆವೆತಿದೆ. ಥರ ಥರ ನಡುಗ್ತಾ ಇದೀನಿ)

ಯಾವ ಕವಿನೂ ತಾನು ಸೃಷ್ಟಿಸಿದ ಪಾತ್ರಗಳಿಗೆ ನ್ಯಾಯ ಒದಗಿಸಲಾರ. ಇಷ್ಟಕ್ಕೂ ನ್ಯಾಯ ಅನ್ನೋದು ಏನು? ಅದು ಯಾರದ್ದು? ಯಾವ ಕೃತಿನೂ ಪೂರ್ಣ ಅಲ್ಲ. ಅಪೂರ್ಣಗಳ ಕಂತೆ. ಪುರಾಣ ಆಗಲಿ, ಚರಿತ್ರೆ ಆಗಲಿ ಏನು ಬರೆದರೂ ವರ್ತಮಾನದಿಂದ ತಪ್ಪಿಸಿಕೊಳ್ಳೋಕೆ ಆಗಲ್ಲ. ಕಾಲ, ದೇಶಗಳನ್ನ ಅಕ್ಷರಗಳಲ್ಲಿ ಮುರಿದರೂ ಓದುವ ಕಾಲ ದೇಶಗಳನ್ನ ಕೃತಿ ಧರಿಸಲೇ ಬೇಕಲ್ಲವಾ? ನಾವು ಪರಂಪರೆಯ ಜೊತೆ ಜಗಳ ಹೂಡಬಹುದು. ನಮ್ಮ ರಾಜಕೀಯ ನಮಗಿಂದು ತಿಳೀದೆ ಇರಬಹುದು. ಆದರೆ ನಾಳಿನವರಿಗೆ ತಿಳಿದೆ ತಿಳಿಯುತ್ತೆ. ನಾನು ಸತ್ತ ಮೇಲೂ ನನ್ನನ್ನ ಕನಸಿಗೆ ಕರೆಸಿಕೊಂಡು ವಿಚಾರಣೆ ನಡೆಸುತ್ತೀಯಲ್ಲ! ನಾನು ಬರೆದ ಪಾತ್ರನೂ ನನ್ನೆದುರು ಛೂ ಬಿಡ್ತೀಯಲ್ಲ! ಅಯೋಗ್ಯನೇ ಅಂತ ರೇಗುತ್ತ ಆ ಪಂನಾರಣಪ್ಪ ನನ್ನ ಮೇಲೇರಿ ಬಂದ.

ಅವನ ಸಾಲಿಲೊಕ್ವಿ ಮುಗಿದೋಗಿತ್ತು. ನಾ ನಡುಗಿಹೋದೆ. ಅದು ಎಚ್ಚರನೊ ಕನಸೊ ತಿಳೀಲೇ ಇಲ್ಲ! ಇತ್ ಕಡೆ ತಿರುಗಿದರೆ ಅಲ್ಲಿ ದುರ್ಯೋಧನನೂ ಇದಾನೆ! ಲೇ ಲೋಫರ್ ನನ್ನ ಮಗನೇ ಬಾ ಇಲ್ಲಿ ಅಂತ ದುರ್ಯೋಧನ ಬಂದ. ಬಂದೋನೆ ಪಂನಾರಣಪ್ಪನ ಜುಟ್ಟು ಹಿಡಕೊಂಡ. ದರದರಾಂತ ನಡುಬೀದೀಗೆ ಎಳಕೊಂಡು ಬಂದ. ಮನೆ ಸೀನೇ ಛೇಂಜಾಗೋಗಿ ನಡುಬೀದೀಲೆ ನಾನೂ ಇದ್ದೆ. ಅದ್ಯಾವಾಗ ಮನೆ ನಡುಬೀದಿ ಆಯ್ತೋ ಎಲ್ಲ ಅಯೋಮಯ.

ದುರ್ಯೋಧನ: ಅವ್ನು ಕುಂತಿ ಮಗ ಅಂತ ನನಗೆ ಯಾವ ಬೋಳೀಮಗನೂ ಹೇಳಲಿಲ್ಲ. ಅದು ನನಗೆ ಗೊತ್ತೂ ಇರಲಿಲ್ಲ. ಸತ್ಯ ಅಂತ ಹೆಸರು ಇಟ್ಟು, ಸತ್ಯಂತಪ ಅಂತ ಒಬ್ಬ ಋಷಿನ ಸೃಷ್ಟಿ ಮಾಡಿ; ಅವನು ಕರ್ಣನ ಹುಟ್ಟಿನ ಗುಟ್ಟು ನನಗೆ ಹೇಳಿದ ಅಂತ ಯಾರೊ ಕಟ್ಟಿದ ಕಥೆನ ನೀನೂ ನಂಬಿ ಅದುನ್ನೆ ಗಿಳಿಪಾಠ ಒಪ್ಸಿದೀಯಲ್ಲ! ನೀನ್ ಯಾವ್ ಸೀಮೆ ಗ್ರಾಸ್ತಾನೊ.

ನಾರಣಪ್ಪ: ಯೋ ಬಿಡಯ್ಯಾ. ಇರಬರೊ ಕತೇನೆಲ್ಲ ಬದಲಾಯಿಸಿ ಬರೆಯೋಕೆ ನಾನೇನ್ ಹೊಸ ಕತೆ ಬರೀತಾ ಇದ್ನಾ. ಹಳೆ ಕತೆ ಬರೆದೆ. ಅವರು ಯರ‍್ಯಾರೊ ಬರೆದೊರೋದ್ನ ನಾನೂ ಬರೆದೆ. ಅದ್ರಾಗೆ ನನ್ನ ತಪ್ಪೇನದೆ!

ದುರ್ಯೋಧನ: ಬರೆದಿದ್ದನ್ನೆ ಬರೆದು, ಬರೆದಿದ್ದನ್ನೆ ಬರೆದು, ಸುಳ್ಳನ್ನೆ ಸತ್ಯ ಮಾಡೋ ನಿಮ್ಮನ್ನೆಲ್ಲ ಕೊಂದುಬಿಡಬೇಕು ಮಕ್ಕಳ್ರಾ...

ಅವರಿಬ್ಬರೂ ಜಗಳ ಮುಂದುವರಿಸ್ತಾರೆ ಅಂದ್ರೆ ದುರ್ಯೋಧನ ಪಂನಾರಣಪ್ಪನನ್ನ ಕೆಡವಿಕೊಂಡು ಅವನಿಗೆ ಮಾತಾಡೋಕು ಅವಕಾಶ ಕೊಡದೆ ಗುದ್ದುತಾ ಇದ್ದ. ಅವನು ನಿಜವಾಗಿಯೂ ನಾರಣಪ್ಪನನ್ನ ಸಾಯಿಸಿಬಿಡ್ತಾನೆ ಅಂತ ನಾನು ಮತ್ತೆ ಬೆವರಿಹೋದೆ. ಇದು ಕನಸೋ ಎಚ್ಚರಾನೋ ಅಂತ ತಿಳಕಳಣ ಅಂದರೆ ನನ್ನೆದೆ ಮೇಲೆ ಯಾರೋ ಕೂತು ಗುದ್ದುತಾ ಇದ್ದಂಗಿತ್ತು!

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...