Date: 15-09-2022
Location: ಬೆಂಗಳೂರು
ಕುಸಿದ ಬದುಕಿನ ಸುತ್ತ ಕಥೆಯಲ್ಲಿ ಕಾಣುವ ನವಿರು ಪ್ರೇಮದ ಎಳೆ ಹಾಗೂ ಬಹುತೇಕ ಕಥೆಗಳಲ್ಲಿ ಕಂಡೂ ಕಾಣದಂತೆ ನಾಜೂಕಾಗಿ ಸಾಗುವ ಗಂಡು ಹೆಣ್ಣಿನ ಸಂಬಂಧದ ತಂತು- ಅದು ಸಮಾಜದ ಕಣ್ಣಿಗೆ ನೈತಿಕವಿರಲಿ ಅಥವಾ ಅನೈತಿಕವೆನಿಸಲಿ-ನಮ್ಮನ್ನು ಹಿಡಿದಿಡುತ್ತದೆ. ಕಥೆಗಳು ನಮ್ಮ ಸುತ್ತಮುತ್ತ ನಡೆದಿವೆಯೇನೋ ಎಂಬಷ್ಟು ಸಹಜವಾಗಿವೆ ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ಸಿರಿ ಕಡಲು ಅಂಕಣದಲ್ಲಿ ನಾಗರೇಖಾ ಗಾಂವಕರ ಅವರ ’ಮೌನದೊಳಗೊಂದು ಅಂತರ್ಧಾನ’ ಕಥಾ ಸಂಕಲನದ ಬಗ್ಗೆ ಬರೆದಿದ್ದಾರೆ.
ಮೌನದೊಳಗೊಂದು ಅಂತರ್ಧಾನ
ಲೇ: ನಾಗರೇಖಾ ಗಾಂವಕರ
ಪ್ರಕಾಶನ: ಎಸ್. ಎಲ್. ಎನ್ ಪಬ್ಲಿಕೇಶನ್
ಬೆಲೆ: 100/-
ನಾನು ಚಿಕ್ಕವಳಿರುವಾಗ ಅಮ್ಮ ನನಗೆ ಯಾವಾಗಲೂ ಪುರಾಣದ ಕಥೆಗಳನ್ನು ಹೇಳುತ್ತಿದ್ದರು. ಆದರೆ ಒಮ್ಮೊಮ್ಮೆ ನಾನು ನನ್ನ ಕೆಲಸವನ್ನು ಮಾಡದೆ ಹಾಗೇ ಬಿಟ್ಟು ಆಟಕ್ಕೆ ಓಡಿದರೆ, ಸರಿಯಾಗಿ ಜವಾಬ್ಧಾರಿ ನಿಭಾಯಿಸದೆ ಹೋದರೆ ಹಾಲಕ್ಕಿ ಗೌಡ ಕಳ್ಳತನಕ್ಕೆ ಹೋದ ಹಾಗೆ ಎಂದು ಒಂದು ಕಥೆ ಹೇಳುತ್ತಿದ್ದರು. ಒಬ್ಬ ಹಾಲಕ್ಕಿ ಜನಾಂಗದವನು ಒಂದು ಹಳ್ಳಿಯಲ್ಲಿ ವಾಸಿಸುತ್ತಿದ್ದ. ಕಡು ಬಡತನ. ಮನೆಯಲ್ಲಿ ತಿನ್ನಲೂ ಗತಿಯಿಲ್ಲ. ಮಕ್ಕಳೆಲ್ಲ ಎರಡು ದಿನಗಳಿಂದ ಉಪವಾಸ ಮಲಗಿದ್ದಾರೆ. ಏನಾದರೂ ತರಲೇ ಬೇಕಿದೆ. ಆದರೆ ಎಲ್ಲೂ ದುಡಿಮೆ ಸಿಗುತ್ತಿಲ್ಲ. ಹೀಗಾಗಿ ಊರಿನ ಸಿರಿವಂತರೊಬ್ಬರ ಮನೆಯಲ್ಲಿ ಕಳ್ಳತನ ಮಾಡುವುದೆಂದು ನಿರ್ಧರಿಸಿದ. ನಿಯತ್ತಿನ ಮನುಷ್ಯ ಆತ. ಕಳ್ಳತನ ಒಗ್ಗದ ಮಾತು. ಆದರೂ ಹೊಟ್ಟೆಯ ಅನಿವಾರ್ಯತೆಗೆ ಬಿದ್ದು ಕಳ್ಳತನಕ್ಕಿಳಿದವನಿಗೆ ಚಿನ್ನ ಬೆಳ್ಳಿ ಹಣಗಳನ್ನು ಕಳ್ಳತನ ಮಾಡುವುದು ತನ್ನಿಂದ ಸಾಧ್ಯವಾಗದ ಮಾತು ಎಂಬುದು ಆತನಿಗೆ ತಿಳಿದಿತ್ತು. ನಾಲ್ಕಾರು ಪಾತ್ರೆ ಕದ್ದು ಮಾರಿದರೆ ಎರಡು ದಿನಗಳಿಗಾಗುವಷ್ಟು ಆಹಾರ ದೊರಕಬಹುದು, ನಂತರ ದುಡಿದು ತಂದರಾಯಿತು ಎಂದು ಹೊರಟ. ಮಧ್ಯರಾತ್ರಿಯ ಸಮಯ. ಹೇಗೋ ಸಾಹಸಪಟ್ಟು ಊರಿನ ಜಮಿನ್ದಾರನ ಅಡುಗೆ ಮನೆಯೊಳಗೆ ಪ್ರವೇಶಿಸಿದ್ದಾನೆ. ಕದಿಯಬೇಕಾದದ್ದು ಪಾತ್ರೆಗಳನ್ನಾದ್ದರಿಂದ ಒಂದಿಷ್ಟು ಉಸುಕನ್ನು ಕೈಯ್ಯಲ್ಲಿ ಹಿಡಿದುಕೊಂಡಿದ್ದಾನೆ. ಉಸುಕು ಎಸೆದರೆ ಪಾತ್ರೆಗಳ ಮೇಲೆ ಬಿದ್ದು ಶಬ್ಧ ಮಾಡುವುದರಿಂದ ಕತ್ತಲಲ್ಲಿ ಪಾತ್ರೆಗಳು ಎಲ್ಲಿವೆ ಎಂಬುದು ಸುಲಭವಾಗಿ ಗೊತ್ತಾಗುತ್ತದೆ ಎಂಬುದು ಅವನ ಅಂದಾಜು. ಆದರೆ ಇನ್ನೇನು ಉಸುಕು ತೂರಬೇಕು, ಅವನಿಗೊಂದು ಧರ್ಮ ಸಂಕಟ ಕಾಡತೊಡಗಿತು. ಆ ಅಪರರಾತ್ರಿಯಲ್ಲಿ ಯಾರಾದರೂ ನಿದ್ದೆ ಬರದೆ ಕಣ್ಣು ಬಿಟ್ಟುಕೊಂಡು ಮಲಗಿದ್ದರೆ ತಾನು ತೂರುವ ಉಸುಕು ಅವರ ಕಣ್ಣಲ್ಲಿ ಬಿದ್ದುಬಿಟ್ಟರೆ ಕಣ್ಣನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾದೀತು ಎಂಬ ಅಂಜಿಕೆ. ಹೀಗಾಗಿ ‘ಹೊಯ್ಗಿ ಸೋಕ್ತೀನ್ರೋ ಕಣ್ ಮುಚ್ಕಣ್ರೋ’ ಎಂದು ದೊಡ್ಡದಾಗಿ ಹೇಳಿಯೇ ಬಿಟ್ಟ. ಕಣ್ಣು ಬಿಟ್ಟುಕೊಂಡವರು ಮುಚ್ಚಿಕೊಳ್ಳಲಿ ಎಂದು. ಮುಂದಿನ ಕಥೆ ಹೇಳು ಎಂದು ಅಮ್ಮನ ಬಳಿ ಒತ್ತಾಯಿಸುತ್ತಿದ್ದೆ. ಇಲ್ಲಿ ಅಮ್ಮನಿಗೆ ಕಥೆಯ ತುದಿ ಮುಖ್ಯವಾಗಿರಲಿಲ್ಲ. ಮಾಡುವ ಕೆಲಸವನ್ನು ಸರಿಯಾಗಿ ಮಾಡಬೇಕು ಎಂದು ತಿಳಿಸುವುದಷ್ಟೇ ಉದ್ದೇಶವಾಗಿರುತ್ತಿತ್ತು. ಆದರೆ ನನಗೆ ಆತನ ಮುಂದಿನ ಸ್ಥಿತಿ ಏನಾಯಿತು ಎಂದು ತಿಳಿದುಕೊಳ್ಳುವ ಕುತೂಹಲ. ‘ಮುಂದೇನಾಗ್ತದೆ? ಅವನನ್ನು ಹಿಡಿದು ನಾಲ್ಕು ಹೊಡೆದಿರಬಹುದು.’ ಅಮ್ಮ ಹೇಳಿದರೆ ನನಗೆ ಹೊಟ್ಟೆಯೊಳಗೆಲ್ಲ ತಳಮಳ ಕಾಡುತ್ತಿತ್ತು. ‘ತಪ್ಪಲ್ವಾ? ಅವನಿಗೆ ಒಂದಿಷ್ಟು ಅಕ್ಕಿನೋ ನುಚ್ಚೋ ಕೊಟ್ಟು ಕಳಿಸಬೇಕಿತ್ತು. ಎಷ್ಟು ಗನಾ ಮನುಷ್ಯ ಅಂವಾ’ ಎಂದು ವಾದಿಸುತ್ತಿದ್ದೆ.
ನಾಗರೇಖಾ ಗಾಂವಕರರವರ ಕಥೆಗಳನ್ನು ಓದುವಾಗ ನನಗೆ ಪದೆಪದೆ ಈ ಕಥೆ ಜ್ಞಾಪಕಕ್ಕೆ ಬರುತ್ತಿತ್ತು. ಇಲ್ಲಿನ ಮೊದಲ ಕಥೆ ಜರಿಲಂಗ ಮತ್ತು ಸಣ್ಣು. ಸಣ್ಣು ಒಬ್ಬಳು ಪುಟ್ಟ ಹುಡುಗಿ. ಅವ್ವಿ ಹೇಳಿದ ಹಾಗೆ ಕೆಲಸ ಮಾಡುತ್ತ ಹಾಯಾಗಿರುವ ಬಾಲ್ಯ ಕಳೆದು ಕಿಶೋರಾವಸ್ಥೆಗೆ ಇಣುಕಿಣುಕಿ ಹೆಜ್ಜೆಯಿಡುತ್ತಿರುವ ಬಾಲಕಿ. ಅಂಗಳಕ್ಕೆ ಸಗಣಿ ಹಾಕಿ ಸಾರಿಸುವುದೆಂದರೆ ಅವಳಿಗೆ ಎಲ್ಲಿಲ್ಲದ ಇಷ್ಟ. ಆದರೆ ಇಷ್ಟಿಷ್ಟೇ ಇಣುಕುವ ಯೌವನದ ಸಹಜ ಆಕಾಂಕ್ಷೆಗಳು ಅವಳಲ್ಲಿವೆ. ಅಕ್ಕನ ಮದುವೆಯ ಲಗ್ನಪತ್ರಿಕೆ ಕೊಡಲು ಬಂದ ಗೆಳತಿಯ ಅಣ್ಣನನ್ನು ಕಂಡು ಹರೆಯ ನಾಚಿಕೊಳ್ಳುವುದನ್ನು ಕಲಿಸುತ್ತಿದೆ. ಅಂತಹ ಎದೆ ಚಿಗುರೊಡೆಯುವ ಈ ಹೊತ್ತಿನಲ್ಲಿಯೇ ಅವಳಿಗೆ ತನ್ನಲ್ಲಿರದ ಆದರೆ ಅನತಿ ದೂರದಲ್ಲಿರುವ ತುಸು ಶ್ರೀಮಂತರ ಮನೆಯ, ಪೇಟೆಯಲ್ಲಿ ಇದ್ದುಕೊಂಡು ಓದುವ ಅಮೋಘಳ ನವಿಲು ಕುಣಿಯುತ್ತಿರುವ ಝರಿಲಂಗ ಬೇಕೇಬೇಕೆಂಬ ಆಕಾಂಕ್ಷೆ ಹೊತ್ತಿ ಉರಿಯತೊಡಗಿತು. ಸಗಣಿ ಸಾರಿಸುತ್ತಿದ್ದವಳೇ ಮಧ್ಯಾಹ್ನ ಎಲ್ಲರೂ ಮಲಗಿದ ಸಮಯ ನೋಡಿ ಅವರ ಮನೆಯ ಕಂಪೌಂಡಿನಲ್ಲಿ ಒಣ ಹಾಕಿದ್ದ ಝರಿಲಂಗವನ್ನು ಕೊಕ್ಕೆ ಹಾಕಿ ತಂದು ಬಚ್ಚಲು ಮನೆಯಲ್ಲಿ ಧರಿಸಿ ಸಂಭ್ರಮಿಸಿದಳು. ಆ ಹೊತ್ತಿನಲ್ಲಿಯೂ ಅವಳಿಗೆ ತಾನು ಮಾಡಿದ್ದು ಕಳ್ಳತನ, ಅದು ತಪ್ಪು ಎನ್ನುವ ಪಾಪಪ್ರಜ್ಞೆಯಿಲ್ಲ. ತನ್ನಲ್ಲಿ ಇಲ್ಲದ್ದನ್ನು ಇದ್ದವರಿಂದ ಪಡೆದುಕೊಳ್ಳುವುದು ಸಹಜಕ್ರಿಯೆ ಎಂದಷ್ಟೇ ಸಣ್ಣು ಅಂದುಕೊಂಡಿರಬಹುದಾದರೂ ತಾನು ಹಾಗೆ ತೆಗೆದುಕೊಂಡು ಬಂದಿದ್ದನ್ನು, ಅದು ಅವಳನ್ನು ಕೇಳಿಯೇ ತಂದಿದ್ದರೂ ಅವ್ವಿ ಹೊಡೆಯುತ್ತಾಳೆಂಬುದು ಅನುಭವದಿಂದ ಅರಿತುಕೊಂಡಿರುವುದರಿಂದ ಆಸೆಪಟ್ಟು ತಂದ ಝರಿಲಂಗವನ್ನು ತಾನು ತೀರಾ ಹೇಸಿಗೆ ಪಟ್ಟುಕೊಳ್ಳುವ ಹುಳುಗಳು ಗಿಜಿಗುಡುವ ಗೊಬ್ಬರದ ಗುಂಡಿಯಲ್ಲಿ ಹುಗಿದು ಹಾಕುತ್ತಾಳೆ. ಕಥೆಯ ಭಾಷೆ ಹಾಗೂ ಇಲ್ಲಿನ ಸನ್ನಿವೇಶಗಳು ಅತ್ಯಂತ ಸಹಜವಾಗಿ ತಾನೇ ತಾನಾಗಿ ಮೂಡಿಬಂದದಂತಿದ್ದು ಮೊದಲ ಕಥೆಯಲ್ಲಿಯೇ ನಾಗರೇಖಾ ಗಾಂವಕರ್ ಗೆದ್ದುಬಿಡುತ್ತಾರೆ. ಕಥೆಯ ಕೊನೆಯಲ್ಲಿ ಸಣ್ಣು ನಾಣಿಗೆಯ ಎರಡು ಕಲ್ಲಿನ ನಡುವೆ ಕಾಲು ಸಿಕ್ಕಿಸಿಕೊಂಡು ಒದ್ದಾಡುವ ಚಿತ್ರಣ ಕಥೆಯ ಓಘದಲ್ಲಿ ತುಸು ಎಳೆದಂತಾದರೂ ಕಥೆಯ ಹಿಡಿತಕ್ಕೆ ಭಂಗ ತಂದಿಲ್ಲವೆಂಬುದನ್ನು ಗಮನಿಸಬೇಕು.
ಮೌನದೊಳಗೊಂದು ಅಂತರ್ನಾದ ಕಥೆ ಹೆಣ್ಣಿನ ಮೇಲಾಗುವ ಕೌಟುಂಬಿಕ ದೌರ್ಜನ್ಯವನ್ನು ಸೂಕ್ಷ್ಮವಾಗಿ ವಿವರಿಸುತ್ತದೆ. ಓದಿ ಕೆಲಸದಲ್ಲಿರುವ ಗಂಡನಿಗೆ ಹೆಂಡತಿ ತನಗಿಂತ ಮೊದಲು ಊಟ ಮಾಡಬಾರದೆನ್ನುವ ಹಠ, ಸ್ಟಾಕ್ ಹೋಂ ಸಿಂಡ್ರೋಮ್‍ನಲ್ಲಿ ಹೆಂಡತಿಯನ್ನು ತನ್ನ ತಾಳಕ್ಕೆ ಕುಣಿವ ಗೊಂಬೆ ಎಂದುಕೊಂಡ ಗಂಡಗುಗಳ ಸಾಲುಸಾಲು. ಒಂದೇ ಗುಂಡಿನ ಎರಡು ಸದ್ದು ಕಥೆಯಲ್ಲಿ ಮಗಳು ಪರಿಮಳ ಎಷ್ಟು ಕೆಲಸ ಮಾಡಿದರೂ ಸಾಕಾಗದೆ ಹೀಯಾಳಿಸುವ ಅಮ್ಮ ಮಗನಿಗೆ ಮಾಡುವ ರಾಜೋಪಚಾರ ಹೀಗೆ ಸಂಕಲನದ ಸಾಲು ಸಾಲು ಕಥೆಗಳು ಹೆಣ್ಣಿನ ಒಳತೋಟಿಗಳನ್ನು ತೆರೆದಿಡುತ್ತ ಹೋಗುತ್ತದೆ. ಹೆಣ್ಣು ಶೋಷಣೆಗೊಳಗಾಗಲು ಗಂಡನೇ ಆಗಬೇಕಾಗಿಲ್ಲ, ಸುತ್ತಮುತ್ತಲಿನ ಯಾವ ಗಂಡಸಾದರೂ ಸಾಕು ಅಷ್ಟೇಕೆ ಪುರುಷರ ಅಚ್ಚಿನಲ್ಲಿ ಎರಕವಾಗಿ ಬಂದ ಮಹಿಳೆಯರೂ ಸಾಕು ಎನ್ನುವುದನ್ನು ಕತೆಗಾರ್ತಿ ಇಲ್ಲಿ ಸೂಚ್ಯವಾಗಿ ವಿವರಿಸಿದ್ದಾರೆ.
ಪ್ರೀತಿಯ ಹೊಸ ಭಾಷ್ಯ ಕೂಡ ಪುರುಷ ಮನಃಸ್ಥಿತಿಯನ್ನು ತೆರೆದಿಡುವ ಕಥೆಯಾಗಿದೆ. ಅಪಘಾತದಲ್ಲಿ ತೀರಿಕೊಂಡ ಅಪ್ಪನ ನೆನಪಿಗೆಂದು ಹೂಕೊಟ್ಟು ಕೆನ್ನೆಗೆ ಮುತ್ತಿಡುವ ಹುಡುಗಿಯ ಕುರಿತು ಏನೆಲ್ಲ ಕನಸು ಕಾಣುವ ನಿವೃತ್ತಿಯಂಚಿನ ವಯೋವೃದ್ಧನ ಮನದಾಳದ ಮಾತುಗಳು ಮ್ಯಾನ್ ಈಸ್ ಆಲ್ವೇಸ್ ಅ ಮ್ಯಾನ್ ಎಂಬ ನುಡಿಯನ್ನು ನೆನಪಿಸಿ ಖಿನ್ನವಾಗುವಂತೆ ಮಾಡುತ್ತದೆ. ಕಥೆಯೊಳಗಿನ ಹೆಣಿಗೆ ತುಸು ಬಿಗಿಯಾಗಿ ಕಥಾತಂತ್ರದ ಎಳೆಯಲ್ಲಿ ಹಿಡಿತವಿದ್ದರೆ ಇದು ಮತ್ತೂಅದ್ಭುತ ಕಥೆಯಾಗಿ ಕಾಡಬಹುದಿತ್ತು.
ಸಂಕಲನದಲ್ಲಿ ನನಗೆ ತುಂಬಾ ಇಷ್ಟವಾದ ಮತ್ತೊಂದು ಕಥೆ ಕಾಳಿಯ ಬಗಲಲ್ಲಿ. ಈ ಕಥೆಯಲ್ಲಿ ಬರುವ ಎರಡು ಪಾತ್ರಗಳು ಕುಂಜಳಿ ಹಾಗೂ ಪಾಂಜ ಎಂಬ ತಮ್ಮ ಹೆಸರಿನಿಂದಲೆ ನಮ್ಮನ್ನು ಸೆಳೆಯುತ್ತವೆ. ಕುಂಜಳಿಯ ಮಾತುಗಳು ಕೇಳುತ್ತಿದ್ದಂತೆ ಮತ್ತೆ ಮತ್ತೆ ಪಿಜಾಲು ನೆನಪಾಗುತ್ತಾಳೆ. ಮನುಷ್ಯ ಹೊಕ್ಕ ಕಾಡಿನ ಸ್ಥಿತಿಯನ್ನು ಇಲ್ಲಿ ಹೇಳಲಾಗಿದೆ. ಹಾಗೆ ನೋಡಿದರೆ ನೊಣವೊಂದರ ಮೊರೆತದಲ್ಲೂ ಹಿಂದೆ ಅಭಯಾರಣ್ಯವಾಗಿದ್ದ ಕಾಡು ಬೋಳುಗುಡ್ಡವಾಗಿ ಒಂದೇ ಒಂದು ಮರ ಉಳಿದಿದೆ ಎನ್ನುವಾಗಲೂ ಮನುಷ್ಯನ ಕ್ರೂರತನ ಹಾಗೂ ಸ್ವಾರ್ಥ ಕಣ್ಣಿಗೆ ಕಟ್ಟುತ್ತದೆ. ಮನುಷ್ಯ ಹೊಕ್ಕಲೆಲ್ಲ ಹಾಳುಗೆಡವುವ ಮನಸ್ಥಿತಿಯಿಂದಾಗಿ ಮುಗ್ಧ ಹಕ್ಕಿಗಳು ಉಸಿರುಗಟ್ಟಿ ಸತ್ತುಹೋಗುವ ಚಿತ್ರಣವಿದೆ. ನಮಗೋ ನೆಟ್‍ವರ್ಕ್ ಹಾಗೂ ಮೊಬೈಲ್ ಎನ್ನುವುದು ಒಂದು ಸಂಪರ್ಕ ಸಾಧನವಾದರೆ ಗುಬ್ಬಿಗಳಂತಹ ಪುಟ್ಟ ಪಕ್ಷಿಗಳಿಗೆ ಅದು ಉಸಿರು ನಿಲ್ಲಿಸುವ ತರಂಗ. ರೋಬೋಟ್ 2.0 ಸಿನೆಮಾದಲ್ಲಿ ಮೊಬೈಲ್ ಟವರ್‌ಗಳನ್ನು ಗುರಿಯಾಗಿಟ್ಟುಕೊಂಡು ನಾಶಪಡಿಸುವ ಪಕ್ಷಿರಾಜ್ ಪಾತ್ರ ಮತ್ತೆ ಮತ್ತೆ ನೆನಪಾಗುತ್ತದೆ. ಮೊಬೈಲ್ ಟವರ್‌ಗಳೆಲ್ಲ ಹಾಳಾಗಿಹೋಗಲಿ ಎಂಬ ಭಾವ ಮೂಡುತ್ತದೆ.
ಕುಸಿದ ಬದುಕಿನ ಸುತ್ತ ಕಥೆಯಲ್ಲಿ ಕಾಣುವ ನವಿರು ಪ್ರೇಮದ ಎಳೆ ಹಾಗೂ ಬಹುತೇಕ ಕಥೆಗಳಲ್ಲಿ ಕಂಡೂ ಕಾಣದಂತೆ ನಾಜೂಕಾಗಿ ಸಾಗುವ ಗಂಡು ಹೆಣ್ಣಿನ ಸಂಬಂಧದ ತಂತು- ಅದು ಸಮಾಜದ ಕಣ್ಣಿಗೆ ನೈತಿಕವಿರಲಿ ಅಥವಾ ಅನೈತಿಕವೆನಿಸಲಿ-ನಮ್ಮನ್ನು ಹಿಡಿದಿಡುತ್ತದೆ. ಕಥೆಗಳು ನಮ್ಮ ಸುತ್ತಮುತ್ತ ನಡೆದಿವೆಯೇನೋ ಎಂಬಷ್ಟು ಸಹಜವಾಗಿವೆ. ಹೆದ್ದಾರಿಯ ಅಡ್ಡಹಾದಿಗುಂಟ ಕಥೆಯಂತೂ ಅಂಕೋಲಾ ಹುಬ್ಬಳ್ಳಿ ರಸ್ತೆಯ ಘಟ್ಟದಲ್ಲಿ ನಡೆದಿರಬಹುದಾದ ಕಥೆ ಎನ್ನಿಸಿ ಮೈ ಜುಂ ಎನ್ನಿಸಿಬಿಡುತ್ತದೆ. ಒಂದು ಕಥೆಯ ಸಾರ್ಥಕತೆ ಇರುವುದೇ ಇಲ್ಲಿ. ಓದುಗರಿಗೆ ಈ ಘಟನೆಗಳು ಎಲ್ಲೋ ನಮ್ಮಸುತ್ತಮುತ್ತ ನಡೆದಿವೆ ಎನ್ನಿಸಿ ತನ್ನೊಳಗೆ ಸೆಳೆದುಕೊಂಡು ತನ್ಮಯತೆ ಸಾಧಿಸಿದರೆ ಆ ಕಥೆ ಗೆದ್ದಂತೆ.
ಮೌನದೊಳಗೊಂದು ಅಂತರ್ಧಾನ ಸಂಕಲನದ ಬಹುತೇಕ ಕಥೆಗಳು ನಡೆಯುವುದು ಅಂಕೋಲಾದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎಂಬುದು ಕಥೆಯ ಪಾತ್ರಗಳು ಆಡುವ ಭಾಷೆಯನ್ನು ಗಮನಿಸಿದರೆ ತಕ್ಷಣ ಅರ್ಥವಾಗುತ್ತದೆ. ಹೆಚ್ಚಿನ ಪಾತ್ರಗಳು ಇಲ್ಲಿನ ಹಾಲಕ್ಕಿಗಳ, ಹರಿಕಂತ್ರರ, ನಾಡವರ, ಕೋಮಾರಪಂಥರ ಹಾಗೂ ಹಳೆಪೈಕರ ಭಾಷೆಗಳನ್ನು ಆಡುತ್ತವೆ. ಉತ್ತರಕನ್ನಡದ ವೈಶಿಷ್ಟ್ಯವಿರುವುದೇ ಇಲ್ಲಿ. ಇಲ್ಲಿ ಸಾರಾಸಗಟಾಗಿ ಎಲ್ಲರೂ ಒಂದೇ ಭಾಷೆಯನ್ನಾಡುವುದಿಲ್ಲ. ಪ್ರತಿ ಜನಾಂಗಕ್ಕೂ ಅದರದ್ದೇ ಆದ ಪ್ರತ್ಯೇಕ ಭಾಷೆಯಿದೆ. ಧ್ವನಿಯ ಏರಿಳಿತವಿದೆ. ಬರವಣಿಗೆಯಲ್ಲಿದ್ದರೆ ಎಲ್ಲ ಭಾವಗಳು ಒಂದೇ ರೀತಿ ಎನ್ನಿಸಿದರೂ ಮಾತನಾಡುವಾಗ ಅದರೊಳಗಿನ ಉಚ್ಛಾರ ಹಾಗೂ ಎಳೆದು ಮಾತನಾಡುವ ರೀತಿಯಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಅಂತಹ ವ್ಯತ್ಯಾಸಗಳನ್ನು ಇಲ್ಲಿನ ಪಾತ್ರಗಳು ಸಹಜವಾಗಿ ತೋರ್ಪಡಿಸುವುದನ್ನು ಗಮನಿಸಬಹುದು.
ಭಾಷಾಹಿಡಿತ ಕಥೆಗೆ ವಸ್ತುವನ್ನು ಆಯ್ದುಕೊಳ್ಳುವಲ್ಲಿ ಗೆದ್ದಿರುವ ನಾಗರೇಖಾ ಗಾಂವಕರ ಲೇಖನಿಯಿಂದ ಇನ್ನಷ್ಟು ಕಥೆಗಳು ಬರಲಿ. ‘ಆ ಊರಲ್ಲಿ ಹಿಂಗೇ ಆಗಿತ್ತು’ ಎಂದು ಸಹೃದಯ ಓದುಗ ತನಗೆ ಸಂಬಂಧಪಟ್ಟ ಘಟನೆಗಳನ್ನು ನೆನಪಿಸಿಕೊಳ್ಳುವಂತಾಗಲಿ
ಈ ಅಂಕಣದ ಹಿಂದಿನ ಬರಹಗಳು:
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
©2024 Book Brahma Private Limited.