ನಮ್ಮ ಜಗತ್ತು ಸಹಿಸಿಕೊಳ್ಳಬಹುದಾದ ವಿಕಾಸಕ್ಕೆ ಒಂದು ಮಿತಿಯಿದೆ


"ಭಾರತದಲ್ಲಿನ ಒಗ್ಗೂಡುವಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಸ್ಟ್ರೋಏಷ್ಯಾಟಿಕ್ ಪುರುಷರ ಆರಂಭಿಕ ವಲಸೆಯನ್ನು ಹೊರತುಪಡಿಸಿದರೆ ಮೇಲ್ವರ್ಗದ ಜನರನ್ನು ಮೀರಿ ಇನ್ನುಳಿದ ಒಟ್ಟಾರೆ ಜನಸಮುದಾಯಕ್ಕೆ ತಾಗುವಷ್ಟು ಪ್ರಬಲ ಭಾಷಿಕ ಪ್ರಭಾವ ಬೀರಿದ ವಲಸೆಗಳು ಕೇವಲ ಎರಡು: ಸಂಸ್ಕೃತವನ್ನು ತಂದ ವೇದಕಾಲದ ಜನರದು ಮತ್ತು ಇಂಗ್ಲಿಷ್ ಅನ್ನು ತಂದ ಬ್ರಿಟಿಷರದು," ಎನ್ನುತ್ತಾರೆ," ಪೆಗ್ಗಿ ಮೋಹನ್. ಲೇಖಕ ಸಂಕೇತ ಪಾಟೀಲರು ಕನ್ನಡಕ್ಕೆ ಅನುವಾದಿಸಿರುವ ಪೆಗ್ಗಿ ಮೋಹನ್ ಅವರ ಮೂಲ ‘ಅಲೆಮಾರಿಗಳು ಅರಸರು ವರ್ತಕರು’ ಕೃತಿಯ ಆಯ್ದ ಭಾಗ ನಿಮ್ಮ ಓದಿಗಾಗಿ..

ಈ ಪುಸ್ತಕದಲ್ಲಿ ನಾವು ಅರ್ಥಮಾಡಿಕೊಳ್ಳಲೆತ್ನಿಸುತ್ತಿರುವ ಕತೆಯು ಬೇವುಬೆಲ್ಲಗಳ ಒಂದಾಗುವಿಕೆಯ ಕತೆ. ಸಾಮ್ರ್ಯಾಜ್ಯ, ಸಾಕ್ಷರತೆ ಮತ್ತು ಮಾರುಕಟ್ಟೆಗಳಿಗೆ ತಳುಕುಹಾಕಿಕೊಂಡಿರುವ ಮಹಾ ಸಮುದಾಯಗಳು ಮುನ್ನೆಲೆಗೆ ಬಂದು ಹಿಂದೆಂದೂ ಸಂಪರ್ಕಕ್ಕೆ ಬಂದಿರದ ವಿಭಿನ್ನ ರೀತಿನೀತಿಗಳನ್ನು ಅನುಸರಿಸುವ ಜನರಿಂದ ಕೂಡಿದ ಬೇರೆ ಬೇರೆ ಸಣ್ಣ ಸಣ್ಣ ಸಮುದಾಯಗಳನ್ನು ತಮ್ಮ ಅಗಲವಾದ ಮತ್ತು ಬಿರುಸಾದ ಹರಿವಿನೊಳಗೆ ಬರಸೆಳೆದು ಒಟ್ಟಿಗೆ ಪೇರಿಸಿಬಿಡುತ್ತವೆ. ಹಾಗಾದಾಗ ಭಾಷೆಯು ಈ ಪಲ್ಲಟದ ಕತೆಯನ್ನು ಮಾರ್ಪೊಳೆಯಿಸುತ್ತ ಹರಿವಿನೊಂದಿಗೆ ಸಾಗುವ ನಂಬಿಕಸ್ತ ಕನ್ನಡಿಯ ಪಾತ್ರವನ್ನು ವಹಿಸಬೇಕಾಗುತ್ತದೆ. ಭಾಷೆಗಳು ತಮ್ಮ ಬಲವನ್ನಷ್ಟೇ ಆಧರಿಸಿ ಸ್ವಾವಲಂಬಿಯಾಗಿ ಒಗ್ಗೂಡುವಿಕೆಯ ಈ ಆಟಕ್ಕೆ ಇಳಿದು ಪ್ರಯೋಜನವಿಲ್ಲ. ಎದುರಾಗುವ ಭಾಷೆಗಳು ಸಮಗಡಿಗಳೂ ಆಗಿರುವುದಿಲ್ಲ. ದೊಡ್ಡವು ಸಣ್ಣವನ್ನು ಮಣ್ಣುಮುಕ್ಕಿಸಿಯೇ ಬಿಡುತ್ತವೆ.

ನಮ್ಮನ್ನೆಲ್ಲ ಒಂದೇ ಬೃಹತ್ ಸಮುದಾಯಕ್ಕೆ ಜೋಡಿಸುತ್ತಿರುವ ಪ್ರಬಲ ರಾಜಕೀಯ ಮತ್ತು ಆರ್ಥಿಕ ಪ್ರಭಾವಗಳ ಬಗ್ಗೆ ಪ್ರಶ್ನೆಯೆತ್ತದ ಹೊರತು, ನಮ್ಮ ನುಡಿಗಳು ಮತ್ತು ಹಳಮೆಯಿಂದ ಬಂದ ಬದುಕಿನ ರೀತಿಗಳ ಸಾಮೂಹಿಕ ಅಳಿವಿಗೆ ಕಾರಣವಾಗುತ್ತಿರುವ ಇಂಥ ವ್ಯವಸ್ಥೆ ನಿಜಕ್ಕೂ ನಮಗೆ ಬೇಕಾದದ್ದೇ ಎಂದು ಕೇಳದ ಹೊರತು ನಮ್ಮ ಸಣ್ಣ ಸಣ್ಣ ನುಡಿಗಳನ್ನು ಸಂರಕ್ಷಿಸುವುದರ ಕನಸು ಕಾಣುವುದರಲ್ಲಿ ಅರ್ಥವಿಲ್ಲ. ಇಷ್ಟಕ್ಕೂ ಸಂರಕ್ಷಣೆ ಅಥವಾ ಕೆಡದಂತೆ ಉಳಿಸಿಕೊಳ್ಳುವುದು ಎನ್ನುವುದೇ ಒಂದು ದುರದೃಷ್ಟಕರ ಹೇಳಿಕೆ: ಈಗಾಗಲೇ ಸತ್ತು ಹೋದುವನ್ನು ಅವು ಕೊಳೆಯದಂತೆ, ನಶಿಸಿ ಹೋಗದಂತೆ ಇರಿಸಿಕೊಳ್ಳಬಹುದು; ಆದರೆ ನಮ್ಮ ಸಹಾಯವಿಲ್ಲದೆಯೂ ಬೆಳೆಯುವ, ಹೊಸ ದಿಕ್ಕುಗಳಲ್ಲಿ ವಿಕಸಿಸುವ ಭಾಷೆಗಳಂಥ ಸಜೀವ ವಸ್ತುಗಳನ್ನಲ್ಲ. ಒಂದು ಡಬ್ಬಿಯಲ್ಲಿ ಮುಚ್ಚಿಟ್ಟ ನುಡಿಯು, ಅದನ್ನು ಯಾರೂ ಬಳಸದೇ ಹೋದರೆ, ಉಸಿರುಗಟ್ಟಿ ಸತ್ತುಹೋಗುತ್ತದೆ. ಅದನ್ನು ಕಲಿತು ಆಡುವ ಪುಟ್ಟ ಮಕ್ಕಳು, ಅದನ್ನು ನಿತ್ಯದ ಸರಳ ಸಂಗತಿಗಳಿಗಷ್ಟೇ ಅಲ್ಲದೇ ಜಟಿಲ ಆಧುನಿಕ ವ್ಯವಹಾರಗಳ ಸಲುವಾಗಿಯೂ ಬಳಸುವ ಸಹಜಭಾಷಿಕರ ಸಮುದಾಯ: ಇವು ನುಡಿಗೆ ಅಗತ್ಯವಾದ ಉಸಿರ್ಗಾಳಿ.

ಭಾರತದಲ್ಲಿನ ಒಗ್ಗೂಡುವಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಸ್ಟ್ರೋಏಷ್ಯಾಟಿಕ್ ಪುರುಷರ ಆರಂಭಿಕ ವಲಸೆಯನ್ನು ಹೊರತುಪಡಿಸಿದರೆ ಮೇಲ್ವರ್ಗದ ಜನರನ್ನು ಮೀರಿ ಇನ್ನುಳಿದ ಒಟ್ಟಾರೆ ಜನಸಮುದಾಯಕ್ಕೆ ತಾಗುವಷ್ಟು ಪ್ರಬಲ ಭಾಷಿಕ ಪ್ರಭಾವ ಬೀರಿದ ವಲಸೆಗಳು ಕೇವಲ ಎರಡು: ಸಂಸ್ಕೃತವನ್ನು ತಂದ ವೇದಕಾಲದ ಜನರದು ಮತ್ತು ಇಂಗ್ಲಿಷ್ ಅನ್ನು ತಂದ ಬ್ರಿಟಿಷರದು. ಮಧ್ಯ ಏಷ್ಯಾದ ವಸಾಹತುಗಾರರು 12ನೆಯ ಶತಮಾನದ ಹೊತ್ತಿಗೆ ಬಂದಾಗ ಅವರಿಗೆ ಆಗಲೇ ಹೆಚ್ಚೂಕಡಿಮೆ ಅಂತಿಮ ರೂಪದಲ್ಲಿದ್ದ ಹಿಂದಿ ಆಕಸ್ಮಿಕವಾಗಿ ದಕ್ಕಿತ್ತು. ಅವರು ಅದನ್ನು ಅದೃಷ್ಟವೆಂದೇ ಭಾವಿಸಿ ಸ್ವೀಕರಿಸಿದ್ದರು. ಅದೇ ರೀತಿ ಹಿಂದಿಯೂ ಅವರಿಂದ ಹೊಸ ನಾಮಪದಗಳ ಒಡವೆಗಳನ್ನು ಪಡೆದು ಹಿಗ್ಗಿನಿಂದಲೇ ತೊಟ್ಟುಕೊಂಡಿತ್ತು.

ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಈ ಜನಗಳ ಮೊಟ್ಟಮೊದಲಿನ ಬರುವಿಕೆಯಿಂದ ಭಾರತದ ಸಮಾಜದಲ್ಲಿ ಸ್ಥಿತ್ಯಂತರಗಳು ಆಗಿರಲಿಲ್ಲ. ಎರಡೂ ವಲಸೆಗಳ ಮೊದಲಿನ ಘಟ್ಟದ ಒಳಹರಿವುಗಳು ಆಡಂಬರವಿಲ್ಲದೇ ಆಗಿದ್ದುವು. ಸಣ್ಣದಾಗಿ ಜಿನುಗುತ್ತ ಒಳಬಂದ ವಲಸಿಗ ಗಂಡಸರು ಭಾರತದ ಅಂಚಿನಲ್ಲೇ ನೆಲಸಿದ್ದರು: ವೈದಿಕ ಜನರು ವಾಯವ್ಯಭಾಗದಲ್ಲಿ ಮತ್ತು ಕಡಲಮಾರ್ಗದಲ್ಲಿ ಬಂದ ಬ್ರಿಟಿಷರು ಕರಾವಳಿಯ ಬಂದರು ಪಟ್ಟಣಗಳಲ್ಲಿ. ಇವರಿಬ್ಬರ ಭಾಷೆಗಳಿಗೂ ಎರಡನೆಯ ಅವಕಾಶ — ಹೊಸ ಉಸಿರು ಎಂದು ಹೇಳಬಹುದಾದ್ದಂಥದ್ದು — ಸಿಕ್ಕಿದ್ದು ಆಮೇಲೆ ನಡೆದ ಉತ್ಕ್ರಾಂತಿಗಳು ಹೊಸ ಮಹಾಬಣಗಳನ್ನು ಸೃಷ್ಟಿಸಿ ಅವು ಈ ಭಾಷೆಗಳ ‘ಸ್ವಾಮ್ಯ’ವನ್ನು ಸಾಧಿಸಿದಾಗ. ಎರಡನೆಯ ಸಂಸ್ಕೃತ ಯುಗವು ಶುರುವಾದದ್ದು ತಮ್ಮತಮ್ಮಲ್ಲೇ ಕಾದಾಡುತ್ತಿದ್ದ ಋಗ್ವೇದ ಕಾಲದ ಬಣಗಳನ್ನು ಒಂದುಗೂಡಿಸಿದ ಕುರು ರಾಜವಂಶವು ಉಪಖಂಡದ ಉತ್ತರಭಾಗದುದ್ದಕ್ಕೂ ಹಾಗೂ ದಕ್ಷಿಣದಲ್ಲಿ ಮಹಾರಾಷ್ಟ್ರ ಮತ್ತು ಆಂಧ್ರದಷ್ಟು ಕೆಳಗಿನವರೆಗೂ ತನ್ನ ಹಿಡಿತವನ್ನು ವಿಸ್ತರಿಸುತ್ತ ಹೋದಂತೆ; ಮುಂದೆ ಸಾವಿರಾರು ವರ್ಷಗಳ ನಂತರ ನಂಬೂದಿರಿ ಬ್ರಾಹ್ಮಣರು ಕೇರಳದ ಭಾಷೆಗೆ ತಮ್ಮ ಭಾಷೆಯ ಬಣ್ಣದ ಗುರುತನ್ನು ಹಚ್ಚುವವರೆಗೂ ಇದು ಮುಂದುವರೆದಿತ್ತು. ಮತ್ತಿನ್ನು ಎರಡನೆಯ ಇಂಗ್ಲಿಷ್ ಯುಗ ಸ್ವಾತಂತ್ರ್ಯಾನಂತರದ್ದು; ಭಾರತಕ್ಕೆ ಇಂಗ್ಲಿಷ್ ಅನ್ನು ತಂದಿದ್ದ ಬ್ರಿಟಿಷರು ಇಲ್ಲಿಂದ ಹೊರಟುಹೋದ ಮೇಲೆ ಶುರುವಾದದ್ದು.

ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳು ತಮ್ಮ ಎರಡನೆಯ ಅವತಾರಗಳಲ್ಲಿ ಒಂದುಗೂಡುವಿಕೆಯನ್ನು ಅನಿವಾರ್ಯಗೊಳಿಸಿದ ಹೊಸ ರಾಜಕೀಯ ವ್ಯವಸ್ಥೆಗಳ ಮುಖವಾಡಗಳಾಗಿದ್ದುವಷ್ಟೇ. ಸಂಸ್ಕೃತ ಮತ್ತು ಇಂಗ್ಲಿಷ್‌ಗಳ ಹರಹು ಹೊಸದಾಗಿ ನಿರ್ಮಿತವಾದ ಈ ರಾಜಕೀಯ ಸ್ವರೂಪಗಳು ಆವರಿಸಿಕೊಂಡ ವ್ಯಾಪ್ತಿಯನ್ನು ತೋರಿಸುವ ಒಂದು ಬಗೆಯಾಗಿತ್ತು.

ಇಂದು ಈ ಮೇರೆಗೆ ಬಂದು ನಿಂತಿರುವ ನಾವು ಹಿಂದೆ ಬಿಟ್ಟು ಬಂದದ್ದನ್ನೆಲ್ಲ ಮರಳಿ ಪಡೆದುಕೊಳ್ಳಲು ಸಾಧ್ಯವೇ? ಇದೀಗ ಈ ಪುಟಗಳನ್ನು ಓದುತ್ತಿರುವ ನಾವುಗಳು ವಿಭಿನ್ನ ಹಿನ್ನೆಲೆಗಳಿಂದ ಬಂದವರು. ಹಲಬಗೆಯ ಸಂಪರ್ಕಗಳ ಅನಿವಾರ್ಯತೆ, ಅನುಕೂಲತೆಗಳ ಜೊತೆಜೊತೆಗೇ ನಮ್ಮ ಅದ್ಭುತ ಆದಿಮ ವೈವಿಧ್ಯವನ್ನು ಉಳಿಸಿಕೊಂಡು ಮುಂದೆ ಸಾಗುವುದು ಸಾಧ್ಯವೇ?

ನಮ್ಮ ಚರಿತ್ರೆಯುದ್ದಕ್ಕೂ ಭಾರತದಲ್ಲಿ ನಡೆಯುತ್ತ ಬಂದದ್ದು ಇದು: ಸಾಮ್ರಾಜ್ಯದ ಚಾಚನ್ನು ಗುರುತಿಸುವ ಪ್ರಧಾನ ಸ್ಥಾನದಲ್ಲಿ ಎಲ್ಲಕ್ಕಿಂತ ಮೇಲಿರುವ ಒಂದು ದೊಡ್ಡ ಭಾಷೆ, ಅದರ ಬೆನ್ನಿಗೆ ಸಾಕ್ಷರತೆ ಮತ್ತು ಮಾರುಕಟ್ಟೆಯಲ್ಲಿ ಮೌಲ್ಯವಿರುವ ಸಾಮಂತ ಪ್ರಾದೇಶಿಕ ಭಾಷೆಗಳು ಹಾಗೂ ಅವುಗಳ ಜೊತೆಗೂಡಿ ಒಂದಾಗುತ್ತಿರುವ ಇತರ ಭಾಷೆಗಳು ಮತ್ತು ಚಿಕ್ಕ ಉಪಭಾಷೆಗಳು. ಭಾಷೆಗಳ ಇಂಥ ಶ್ರೇಣೀಕೃತ ವ್ಯವಸ್ಥೆಯನ್ನು ಒಪ್ಪಿಕೊಂಡರೆ ಸಮಾಜದಲ್ಲಿನ ಅಸಮಾನತೆಯನ್ನು ಒಪ್ಪಿಕೊಂಡಂತೆ ಆಗುತ್ತದೆ, ಇದು ಆಳುವ ಮೇಲ್ವರ್ಗದವರಿಗೆ ಎರಡು ಅಥವಾ ಇನ್ನೂ ಹೆಚ್ಚು ಭಾಷೆಗಳನ್ನು ಕಲಿಯುವ ಅನಿವಾರ್ಯತೆಯನ್ನು ತರುತ್ತದೆ ಎಂಬುದೆಲ್ಲ ನಿಜವಾದರೂ ಈ ಏರ್ಪಾಟು ಮೊದಲಿನಿಂದಲೂ ಇದೆ; ಅದು ತನ್ನ ಕಾರ್ಯ ನಿರ್ವಹಿಸುತ್ತ ಬಂದಿದೆ. ಹರಪ್ಪ ನಾಗರಿಕತೆಯ ಕಾಲದಲ್ಲೂ ಇದು ಹೀಗೇ ಇದ್ದಿತೇನೋ. ಆದರೆ ಆ ನಾಗರಿಕತೆ ತನ್ನ ಮೂಲ ಸೀಮೆಗಳಾಚೆ ಹೆಚ್ಚು ವಿಸ್ತರಿಸಿಕೊಂಡಿರಲಿಲ್ಲ. ಅದು ಆ ಕಾಲದ ಮಟ್ಟಿಗೆ, ಇತರ ಸಂಸ್ಕೃತಿಗಳ ಹೋಲಿಕೆಯಲ್ಲಿ, ಸಮಾನತೆಯುಳ್ಳ ಸಮಾಜವನ್ನು ಹೊಂದಿತ್ತು. ಅವರು ನೆರೆಯವರೊಂದಿಗೆ ವ್ಯಾಪಾರ ಮಾಡುತ್ತಿದ್ದರು, ಅವರಲ್ಲಿ ಕಾಳಗಗಳಾದ ಕುರುಹುಗಳಿಲ್ಲ, ಹಾಗೂ ಕೊನೆಯಲ್ಲಿ, ಆ ನಾಗರಿಕತೆಯ ಕೊನೆಗಾಲ ಬಂದಾಗ ಅದು ತನ್ನಷ್ಟಕ್ಕೆ ತಾನೇ ಕ್ಷೀಣಿಸುತ್ತ ನಶಿಸಿ ಹೋಗಿತ್ತು.

ಸ್ವಾತಂತ್ರ್ಯ ಸಿಕ್ಕ ಕಾಲದಲ್ಲಿಯೂ ಭಾರತದ ಬಹಳಷ್ಟು ಜನ ಏಕಕಾಲದಲ್ಲಿ ಎರಡು ಅಥವಾ ಇನ್ನೂ ಹೆಚ್ಚು ಜಗತ್ತುಗಳಲ್ಲಿ ವಾಸಿಸುತ್ತಿದ್ದರು ಎಂದು ನಂಬಲರ್ಹವಾಗಿ ಹೇಳಬಹುದು. ಅವರು ಅಷ್ಟು ಭಾಷೆಗಳನ್ನೂ ಆಡುತ್ತಿದ್ದರು: ಅವರ ಪೂರ್ವಜರ ಹಳ್ಳಿಯ ಉಪಭಾಷೆಯಲ್ಲದೇ ಪಕ್ಕದ ಪ್ರಾಂತ್ಯದ ಉಪಭಾಷೆ; ಮುಂದೆ ಶಾಲೆಯಲ್ಲಿ ಸಾಕ್ಷರತೆಯ ಪ್ರಾದೇಶಿಕ ಭಾಷೆ; ಅಲ್ಲದೇ ಕೆಲವರಿಗೆ ಆಗಲೇ ಇಂಗ್ಲಿಷ್ ಕೂಡ ಬರುತ್ತಿತ್ತು. ಇಪ್ಪತ್ತನೆಯ ಶತಮಾನದ ಮಧ್ಯಭಾಗದವರೆಗೂ ತಮ್ಮ ಹಳ್ಳಿಗಳನ್ನು ಬಿಟ್ಟು ಅವುಗಳಾಚೆ ಹೋಗಬೇಕಾದ ಅಗತ್ಯ ಕೆಲವರಿಗೆ ಮಾತ್ರ ಇದ್ದರೂ ನಾಗಾಲ್ಯಾಂಡ್‌ನಲ್ಲಿ ಕೂಡ ಈ ಏರ್ಪಾಟು ಕೆಲಸ ಮಾಡುತ್ತಿತ್ತು.

ಆದರೆ ಆ ಸಮತೋಲದ ಸ್ಥಿರತೆ ಈಗ ಉಳಿದಿಲ್ಲ. ಮೊದಲಿಗೆ ವೈದಿಕ ಜನರು ಗಾಲಿಗಳುಳ್ಳ ವೇಗವಾದ ಸಾರಿಗೆಯನ್ನು ತಂದರು. ಆಮೇಲೆ ಮಧ್ಯ ಏಷ್ಯಾದ ಪುರುಷರು ಇನ್ನೂ ಹೆಚ್ಚಿನ ನಮ್ಯತೆ ಮತ್ತು ವೇಗವನ್ನು ಹೊಂದಿದ್ದ ಕುದುರೆಗಳ ಮೇಲೆ ಬಂದರು. ಮುಂದೆ ಬ್ರಿಟಿಷರು ಅತಿವೇಗದ ಹಡಗುಗಳು, ರೈಲುಗಳು ಮತ್ತು ದೂರಸಂಪರ್ಕವನ್ನು ತಂದು ಅಂತರವನ್ನು ಇನ್ನೂ ಕುಗ್ಗಿಸಿದರು. ಈಗಂತೂ ನಾವು ಇಂಟರ್‍‌ನೆಟ್‌ನ ಯುಗದಲ್ಲಿದ್ದೇವೆ: ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಪ್ರತಿದಿನದ ಪ್ರತಿನಿಮಿಷವೂ ಸಂಪರ್ಕದಲ್ಲಿರುತ್ತಾರೆ. ಒಂದು ಸಂಕೀರ್ಣ ಸಮಾಜದಲ್ಲಿ ಕಂಡುಬರುವ ಭಾಷೆಗಳಿಗೆ ಸಾರಿಗೆ ಸಂಪರ್ಕವು ನಿಜವಾಗಿ ಅತ್ಯಂತ ಸೂಕ್ತವಾದ ರೂಪಕವಾಗಿದೆ: ಚಿಕ್ಕ ಕಾಲ್ದಾರಿಗಳಿಂದ ಹಿಡಿದು, ಹಳ್ಳಿಯ ಓಣಿಗಳು, ನಗರದ ಬೀದಿಗಳು, ನಗರಗಳ ನಡುವಿನ ರಸ್ತೆಗಳು, ರೈಲುಮಾರ್ಗ, ಹೆದ್ದಾರಿಗಳು, ಅತಿವೇಗದ ಹೆದ್ದಾರಿಗಳು ಮತ್ತು ಕೊನೆಗೆ ವಿಮಾನ ಯಾನದವರೆಗೂ ಇದು ಚಾಚಿಕೊಂಡಿದೆ. ಇದು ನಮ್ಮ ನುಡಿಗೊಂಚಲಿನ ಹಲವು ಬಣ್ಣಗಳನ್ನು ಮಾರ್ಪೊಳಿಯಿಸುತ್ತದೆ. ಬುಡಕಟ್ಟುಗಳ ಭಾಷೆಗಳಿಂದ ಹಿಡಿದು, ಹಳ್ಳಿಗಳ ಆಡುನುಡಿಗಳು, ಸಾಕ್ಷರತೆಯ ಪ್ರಾದೇಶಿಕ ಭಾಷೆಗಳ ಮೂಲಕ ಸಾಮ್ರಾಜ್ಯದವರೆಗೆ ಮತ್ತು ಕೊನೆಯಲ್ಲಿ ಜಾಗತೀಕರಣದ ಭಾಷೆಯವರೆಗೂ ಈ ಹಾದಿ ಸಾಗುತ್ತದೆ. ಪ್ರತಿಯೊಂದೂ ಅದಕ್ಕೆ ಅತ್ಯಂತ ಸೂಕ್ತವಾದ ತಾಣದಲ್ಲಿ ಮನೆಮಾಡಿದೆ.

ಒಂದೆಡೆ ತಾಂತ್ರಿಕ ಪ್ರಗತಿಯು ನಮ್ಮ ಬದುಕಿನಲ್ಲಿ ಹಾಸುಹೊಕ್ಕು ನಮ್ಮ ನಡುವಿನ ಅಂತರವನ್ನು ಹೆಚ್ಚಿಸುತ್ತಿದೆ — ನಮ್ಮ ಕಣ್ಣಿಗೆ ಕಾಣುವವರೆಗೂ ನೆಲದ ಹೊರಮೈ ಮೇಲೆ ಹೆಚ್ಚು ಹೆಚ್ಚು ಅಗಲದ ಡಾಂಬರಿನ ಕಾಂಕ್ರೀಟಿನ ರಿಬ್ಬನ್ನುಗಳನ್ನು ನಿರ್ಮಿಸುತ್ತ, ಉಪನಗರಗಳಲ್ಲಿನ ನಮ್ಮ ಮನೆಗಳಿಂದ ದೂರದ ಕಚೇರಿಗಳಿಗೆ ಹೋಗುತ್ತ ಬರುತ್ತ ಯಾವಾಗಲೂ ರಸ್ತೆಯ ಮೇಲೆಯೇ ಇರುವ ನಾವು ಅನುಗಾಲದ ಪಯಣಿಗರಾಗಿಬಿಟ್ಟಿದ್ದೇವೆ. ಅದೇ ತಾಂತ್ರಿಕ ಪ್ರಗತಿಯು ಇನ್ನೊಂದೆಡೆ ನಮ್ಮೆಲ್ಲರನ್ನೂ ಒತ್ತಟ್ಟಿಗೆ ಗಂಟುಕಟ್ಟಿ ಜಾಗತಿಕ ಮಹಾಸಮುದಾಯವೊಂದರಲ್ಲಿ ಎಸೆದಿದೆ. ತನ್ಮೂಲಕ ಇದು ನಮ್ಮನ್ನು ಸಮರೂಪತೆಯತ್ತಲೂ ನೆಲ, ಸಂಪನ್ಮೂಲ ಮತ್ತು ಜನರನ್ನು ಸಂಪೂರ್ಣವಾಗಿ ನಿಯಂತ್ರಿಸಬಯಸುವ ರಾಜಕೀಯದತ್ತಲೂ ತಳ್ಳುತ್ತಿದೆ. ನಾವಿಂದು ಸಣ್ಣ ಭಾಷೆಗಳ ಬಗ್ಗೆ ಮಾತಾಡುವಾಗ ಬೇವಸದಿಂದ ಮಾತಾಡುತ್ತೇವೆ, ಕಾಳಜಿ ತೋರುತ್ತೇವೆ. ಅವುಗಳ ಹಳಮೆಯ ಬಗ್ಗೆ ಹೇಳುತ್ತ ಅವು ಈಗ ಬರಿಯ ಉಳಿಕೆಗಳೇನೋ ಎನ್ನುವಂತೆ ನಿಟ್ಟುಸಿರುಗರೆಯುತ್ತೇವೆ. ಏಕೆಂದರೆ ಅವನ್ನು ಚೈತನ್ಯ ತುಂಬಿದ ಸಜೀವ ವ್ಯವಸ್ಥೆಗಳು ಎಂದು ಗಣಿಸಿದರೆ ಅವು ನಮ್ಮ ಈ ಸುಗಮ-ಚಾಲಿತ ಜಗತ್ತಿಗೆ ಸವಾಲೊಡ್ಡಬಹುದಲ್ಲ! ಬಹುತ್ವವನ್ನು ಪೋಷಿಸುವುದೆಂದರೆ ಹುಲಿಸವಾರಿ ಮಾಡಿದಂತೆ. ಹತೋಟಿಗೆ ತೆಗೆದುಕೊಳ್ಳಲಾದೀತೇ? ಇದು ಹೇಗೆಂದರೆ, ಹುಲಿಗಳು ಬದುಕಿರಲಿ, ಆದರೆ ಪಳಗಿ ಸಾಧುವಾಗಿ ನಮ್ಮಿಂದ ದೂರ ಅವುಗಳಿಗೆ ಮೀಸಲಾದ ಅರಣ್ಯಗಳಲ್ಲಿರಲಿ, ನಮ್ಮ ನಗರಗಳ ಬೀದಿಗಳಲ್ಲಿ ಸುಳಿದಾಡದಿರಲಿ, ಎಂದು ಬಯಸಿದಂತೆ. ಈ ಆಟಕ್ಕೆ ‘ಒಳಗೊಳ್ಳುವಿಕೆ’ ಎಂಬ ಹೆಸರು. ಹೆಚ್ಚಿನ ಸಂಖ್ಯೆಯ ಜನರು ವ್ಯವಸ್ಥೆಯ ಹೊರಗಿದ್ದರೆ ಅವರು ನಿಶ್ಚಿತ ಕ್ರಮಕ್ಕೆ ಬೆದರಿಕೆ ಒಡ್ಡುತ್ತಾರೆ. ಆದ್ದರಿಂದ ನಮಗೆ ಸಮರೂಪತೆ ಬೇಕು. ಅದರತ್ತ ಕೊಂಡೊಯ್ಯುವ ಒಳಗೊಳ್ಳುವಿಕೆಯ ಆಟ ಬೇಕು. ಬಡಜನರು ನಮ್ಮ ಉಪಭಾಷೆಗಳನ್ನು, ಆಡುನುಡಿಗಳನ್ನು ತಮ್ಮ ‘ಅಭಯಾರಣ್ಯ’ಗಳಲ್ಲಿ ಹುಲಿಗಳನ್ನು ರಕ್ಷಿಸಿದಂತೆ ಬೆಚ್ಚಗೆ ಕಾಪಿಡುತ್ತಾರೆಂದು ನಾವು ಕಲ್ಪಿಸಿಕೊಳ್ಳುತ್ತೇವೆ. ಈ ಮಹಾ-ವ್ಯವಸ್ಥೆಯು ಎಲ್ಲರನ್ನೂ, ಬಡವರನ್ನೂ ಸೇರಿಸಿದಂತೆ, ಇಂಗ್ಲಿಷ್‌ನತ್ತ ತಳ್ಳುತ್ತಿದ್ದರೂ ನಾವು ಮಾತ್ರ ಎಲ್ಲವೂ ಇರಬೇಕಾದಂತೇ ಇದೆ, ಯಾವುದೂ ಬದಲಾಗಿಲ್ಲ ಎಂಬ ಭ್ರಮೆಯನ್ನು ಪೋಷಿಸುತ್ತೇವೆ.

ಈ ಆಟದಲ್ಲಿ ಮುಂದೆ ಏನಾಗಬಹುದು? ಒಂದು ಕಡೆ ಸಮರೂಪತೆಯನ್ನು ಒತ್ತಾಯದಿಂದ ಜಾರಿಮಾಡಬಹುದಾದ ಆಳ್ವಿಕೆ ಮತ್ತು ಮಾರುಕಟ್ಟೆಗಳ ಪ್ರಾಬಲ್ಯ, ಇನ್ನೊಂದು ಕಡೆ ತಾವು ಮೊದಲಿದ್ದಂತೆ ತಮ್ಮನ್ನು ಇರಲು ಬಿಡಬೇಕೆಂಬ ಕೆಳವರ್ಗದ ಸಣ್ಣ ಮಂದಿಯ ಬಯಕೆ. ಎರಡರಲ್ಲಿ ಯಾವ ಒತ್ತಡ ಹೆಚ್ಚು ಎಂಬುದರ ಮೇಲೆ ಆಟದ ಫಲಿತಾಂಶ ಅವಲಂಬಿತವಾಗಿದೆ. ಆದರೆ ಒಂದು ಕಾಲದಲ್ಲಿ ತಮ್ಮವೇ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತ ಸುಸ್ಥಿರವಾಗಿದ್ದ ಸಣ್ಣ ಜಗತ್ತುಗಳಲ್ಲಿ ಇಂದು ಬಡತನದ ಹಿನ್ನೀರು ಹೆಚ್ಚುತ್ತಿದೆ. ಆಧುನಿಕ ಜಗತ್ತಿನ ನೆಲಹರಹಿನುದ್ದಕ್ಕೂ ಹರಡಿಕೊಂಡ ಸಂಪತ್ತಿನ ದೊಡ್ಡ ಬೆಟ್ಟಗಳನ್ನು ಕಟ್ಟಲು ಬೇಕಾದ ಜೀವಚೈತನ್ಯ ಅಲ್ಲಿ ಬರಿದಾಗುತ್ತಿದೆ. ಎಷ್ಟರಮಟ್ಟಿಗೆಂದರೆ ಆ ಪರಂಪರೆಗಳ ಕೊನೆಯ ರಕ್ಷಕರು ಕೂಡ ಎಚ್ಚತ್ತುಕೊಂಡು ಇದು ಅವರ ಒಳಿತಿಗಾಗಿಯೇ ಎಂದು ಹೇಳುತ್ತ ತಮ್ಮ ಮಕ್ಕಳನ್ನು ಕೂಡ ರಾಷ್ಟ್ರೀಯ ಮುಖ್ಯವಾಹಿನಿಗೆ ತಳ್ಳುತ್ತಿದ್ದಾರೆ. ಮಾಡುತ್ತಿರುವ ಪಾಠವನ್ನು ಅನುಸರಿಸಲಾಗದೇ ತಮ್ಮ ಸುತ್ತಮುತ್ತ ನಡೆದಿರುವುದರ ಬಗ್ಗೆ ಹೆಚ್ಚು ಹೊತ್ತು ಲಕ್ಷ್ಯ ಕೊಡಲು ಸಾಧ್ಯವಾಗದೇ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಆಕಳಿಸುತ್ತ ಕುಳಿತಿರುವ ಪುಟ್ಟ ಮಕ್ಕಳು ಇವರೇ. ಕಡಹನ್ನು ದಾಟಿಸಿ ತಮ್ಮ ಕುಟುಂಬವನ್ನು ಮಧ್ಯಮವರ್ಗಕ್ಕೆ ಸಾಗಿಸಬೇಕಾದ ಕೆಲಸವನ್ನು ಹೊತ್ತ ಹರಕೆಯ ಕುರಿಗಳು. ಅವರಿಗೆ ಇದರಲ್ಲಿ ಏನೂ ಸ್ವಾರಸ್ಯವಿಲ್ಲ.

ಆದರೆ ಏಳುಬೀಳಿನ ಈ ಸವಾರಿ ಕೊನೆಗೊಳ್ಳಲೇಬೇಕು. ನಾವು ಧಾವಿಸುತ್ತ ನಿಲುಗಡೆಯ ಕೆಂಪುದೀಪದ ಹತ್ತಿರ ಹತ್ತಿರ ಬರುತ್ತಿದ್ದೇವೆ. ಏಕೆಂದರೆ ನಮ್ಮ ಜಗತ್ತು ಸಹಿಸಿಕೊಳ್ಳಬಹುದಾದ ವಿಕಾಸಕ್ಕೆ ಒಂದು ಮಿತಿಯಿದೆ. ಕಾಲಕ್ರಮೇಣ ಎಲ್ಲರೂ ಹೆಚ್ಚು ಹೆಚ್ಚು ಸೌಲಭ್ಯಗಳನ್ನು ಪಡೆದುಕೊಂಡು ಸಾಮಾಜಿಕ ಸ್ತರದಲ್ಲಿ ಏರುತ್ತ ಹೋಗುತ್ತಾರೆ ಎನ್ನುವುದು ಜಾಗತೀಕರಣದ ವಾಗ್ದಾನವಾದರೂ ಆ ನೆಮ್ಮದಿಯ, ಸಮರೂಪತೆಯ ಸ್ಥಿತಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ತಲುಪುವುದು ಸಾಧ್ಯವೇ ಇಲ್ಲ. ಸರಳವಾಗಿ ಹೇಳಬೇಕೆಂದರೆ ಈ ಜಗತ್ತಿನಲ್ಲಿ ಎಲ್ಲರಿಗೂ ಸಾಲುವಷ್ಟು ಸಂಪನ್ಮೂಲಗಳು ಇಲ್ಲ. ಒಂದಲ್ಲ ಒಂದು ದಿನ ಈ ಯುಗದ ಸಿದ್ಧಾಂತವು ಅಧೋಗತಿಗೆ ಇಳಿಯಲೇಬೇಕು, ವಾಸ್ತವಕ್ಕೆ ಹೆಚ್ಚು ಹತ್ತಿರವಾದ ಬೇರಾವುದೋ ಅದರ ಸ್ಥಾನಕ್ಕೇರಲೇಬೇಕು. ಸಮರೂಪತೆಯತ್ತ ನಾವು ಇಡುತ್ತಿರುವ ಪ್ರತಿ ಹೆಜ್ಜೆಗೂ ಬೆಲೆ ತೆರಬೇಕಾಗುವುದೆಂದು ನಾವೀಗಾಗಲೇ ತಿಳಿದುಕೊಳ್ಳತೊಡಗಿದ್ದೇವೆ: ಸಂಪರ್ಕ ಸಾಧನವೂ ಕಣ್ಗಾವಲೂ ಕೈಮಿಲಾಯಿಸಿಕೊಂಡೇ ಇರುತ್ತವೆ, ಸಾಗರಗಳಾಚೆ ಇರುವವರು ಪರಸ್ಪರ ಮಾತನ್ನಾಡಲು ಸಾಧ್ಯವಾಗಿಸುವ ಸಂಪರ್ಕ ಭಾಷೆಯೇ ವಿವಿಧತೆಯ ನಾಶದೊಂದಿಗೂ ತಳುಕುಹಾಕಿಕೊಂಡಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಾವು ನಡೆಯುತ್ತಿರುವ ಹಗಲು ತಂಪಿನ ಹಸುರು ಕೆಂಪಿನ ಬೇಲಿಗಳ ಸಾಲಿನ ಈ ದಾರಿಯಲ್ಲಿ ಮುಂದೆ ಅಚ್ಚರಿಯ ತಿರುವುಗಳು ನಮಗಾಗಿ ಕಾದು ಕೂತಿವೆ. ಇದು ಮುಂದಿನ ದಿನಗಳಲ್ಲಿ ನಾವಾಡುವ ಭಾಷೆಯ ಮೇಲೆ ಬಲವಾದ ಪ್ರಭಾವ ಬೀರಲಿದೆ.

ಭಾಷೆಗಳ ಹಾದಿಗುಂಟ ಒಟ್ಟಿಗೆ ಪಯಣಿಸುತ್ತ ವಲಸೆಗಳ ಚರಿತ್ರೆಯನ್ನು ಗಮನಿಸುತ್ತ ಒಂದು ಪರಿಸರದಲ್ಲಿನ ದೊಡ್ಡ ಬದಲಾವಣೆಗಳು ವಲಸೆಯ ರೂಪದಲ್ಲಿ ಬರಬಹುದು ಎಂದು ನಾವು ಕಲಿತೆವು. ವಲಸೆ ಬರುವ ಸಮುದಾಯಗಳು ದೀರ್ಘಾವಧಿಯ ಸ್ಥಿರತೆಗೆ ತಡೆಯೊಡ್ಡುವುದನ್ನು ನೋಡಿದೆವು. ನುಡಿಯರಿಗರ ಕಣ್ಣುಗಳಿಂದ ಈ ಹಾದಿಯಲ್ಲಿ ದೂರದ ನೋಟ ಬೀರಿ ಮುಂದಿನ ವರ್ಷಗಳಲ್ಲಿ ಏನಾಗಬಹುದು ಎಂದು ಕಂಡೆವು. ಆ ಕಣ್ಣುಗಳಿಗೆ ಕಾಣುವ ನೋಟಗಳು ಒಂದೇ ಬಗೆಯವಾಗಿವೆ. ಕಾಡುಗಳನ್ನು ತೆರವುಗೊಳಿಸಿ ಬೆಳೆಸಿದ ಸಾಲುಸಾಲು ತದ್ರೂಪು ಗಿಡಗಳು, ತಮ್ಮ ಪಾಡಿಗೆ ತಾವಿದ್ದ ಕಾಡುಪ್ರಾಣಿಗಳನ್ನು ಸ್ಥಾನಾಂತರಿಸಿದ ಅವವೇ ಜಾನುವಾರುಗಳು ಮತ್ತು ಸಾಕುಪ್ರಾಣಿಗಳು, ಮತ್ತು ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಹೋಗುತ್ತ ಅಲ್ಲಿನ ಮೂಲನಿವಾಸಿಗಳನ್ನು ಅಳಿಸಿ ಅವರ ಜಾಗ ತೆಗೆದುಕೊಂಡಿರುವ ಏಕರೂಪದ ಜನರು.

ಓಲ್ಯಾಫ಼್ ಸ್ಟೇಪಲ್‌ಡನ್‌ನ ‘ಸ್ಟಾರ್ ಮೇಕರ್’ ಕಾದಂಬರಿಯ ಅಂತ್ಯದಂತೆ ಈ ಬ್ರಹ್ಮಾಂಡದ ಬೆಳಕು ಮಂದವಾಗುತ್ತ ಹೋಗುತ್ತಿದ್ದಂತೆ ನಾವೊಂದು ಬೇರೆ ಬಗೆಯ ವಲಸೆಯತ್ತ ಸಾಗಬಹುದು [1]; ಇತ್ತೀಚಿನವರೆಗೂ ಉತ್ಕಟ ಬಯಕೆಯ, ಯಾವುದಕ್ಕೂ ಹೇಸದ ಉದ್ರಿಕ್ತ ಜನರಾಗಿದ್ದ ನಾವು ಒಮ್ಮತದ ಮತ್ತು ಸಹಯೋಗದ ಯುಗವೊಂದಕ್ಕೆ ಮುನ್ನಡೆಯಬಹುದು ಎಂದು ನಾನು ಭಾವಿಸಬಯಸುತ್ತೇನೆ. ನಾವು ಮೇಲುಗೈ ಸಾಧಿಸಿ, ‘ಇತರ’ರ ನಿರ್ಮೂಲನೆ ಮಾಡಿ ನಮ್ಮದೇ ಸಮರೂಪತೆಯ ಬಗೆಯನ್ನು ಹೇರುವ ಅನಿವಾರ್ಯತೆಯಿದ್ದ ದಿನಗಳನ್ನು ನಾವು ಪ್ರಾಯಶಃ ಹಿಂದೆ ಬಿಟ್ಟಿದ್ದೇವೆ; ವಿವಿಧತೆಯು ನಮ್ಮ ಉಳಿವಿಗಾಗಿ ಮತ್ತು ಎಲ್ಲರ ಒಳಿತಿಗಾಗಿ ಅಗತ್ಯವಾದುದು ಎಂದರಿತುಕೊಂಡು ಅದನ್ನು ಸ್ವೀಕರಿಸುವ ಮತ್ತು ಕಾಪಾಡುವ ಅಗ್ಗಳಿಕೆಯ ಅವಸ್ಥೆಯತ್ತ ಸಂಕ್ರಮಿಸಲು ನಾವು ಸಿದ್ಧರಾಗಿದ್ದೇವೆ ಎಂದು ಆಶಿಸುತ್ತೇನೆ.

ಗಣಿಗಳ ಅಪಾಯದಿಂದ ತುಂಬಿರುವ ಕತ್ತಲೆಯ ಹಾದಿಗಳಲ್ಲಿ ಗಣಿಗಾರರೊಂದಿಗೆ ಹೋಗುವ ಕ್ಯಾನರಿ (Canary) ಹಕ್ಕಿಗಳಂತೆ ಭಾಷೆಗಳು [2]. ಆ ಕ್ಯಾನರಿಗಳಂತೆ ಮೊದಲಿಗೆ ಅವು ಸಾಯುತ್ತವೆ — ಗಾಳಿಯಲ್ಲಿ ವಿಷಯುಕ್ತವಾದುದು ಏನೋ ಇದೆ ಎಂದು ನಾವು ಮನುಷ್ಯರು ಗ್ರಹಿಸುವುದಕ್ಕೆ ಬಲು ಮುಂಚೆ. ಭಾಷೆಯ ಸಾವು ಒಂದು ಶಕುನ: ಅದು ನಮ್ಮ ದೃಷ್ಟಿಯ ವ್ಯಾಪ್ತಿಯನ್ನು ಮೀರಿದ ಮುಂದೆ ಆಗಬಹುದಾದ ಕೆಡುಕನ್ನು ಸೂಚಿಸುತ್ತದೆ. ನಿಧಿಯ ಕೊನೆಯ ಚೂರುಗಳನ್ನು ಉತ್ಕಟತೆಯಿಂದ ಹತಾಶೆಯಿಂದ ಬೆನ್ನಟ್ಟಿರುವ ನಾವು ದೀಪಾವಳಿಯಂದು ಮೂಗಿನ ಮೇಲೆ ಮುಸುಕು ಹಾಕಿಕೊಂಡು ಕಲುಷಿತ ಗಾಳಿಯಲ್ಲೇ ತಮ್ಮ ಕೊನೆಯ ಪಟಾಕಿಗಳನ್ನು ಸಿಡಿಸುತ್ತಿರುವ ಮಕ್ಕಳಂತಾಗಿದ್ದೇವೆ.

ಈ ಗ್ರಹದ ಮೇಲೆ ನಮ್ಮ ಜೊತೆ ಜಾಗ ಹಂಚಿಕೊಂಡು ಬಾಳುತ್ತಿರುವ ಇತರ ಜೀವಿಗಳಿಗೂ ನಮಗೆ ನಮ್ಮ ಬಗ್ಗೆ ಅರಿವು ಮೂಡಿದಾಗಿನಿಂದಲೂ ನಮ್ಮ ಜೊತೆಯಲ್ಲಿರುವ ನುಡಿಗಳಿಗೂ ವ್ಯತ್ಯಾಸವಿಲ್ಲ. ಆ ಇತರ ಜೀವಿಗಳು ಬಲುವೇಗದಿಂದ ಕಣ್ಮರೆಯಾಗುತ್ತಿವೆ. ಭಾಷೆಗಳ ಅಳಿವೂ ಆ ಜೀವಿಗಳ ಅಳಿವಿನಂತೆಯೇ. ಅದಾಗುವುದು ಆ ಸಸ್ಯಗಳು, ಪ್ರಾಣಿಗಳು, ಅಥವಾ ಭಾಷೆಗಳಲ್ಲಿ ಏನೋ ಕೊರತೆಯಿದ್ದುದರಿಂದಲ್ಲ. ಅದಾಗುವುದು ಅವುಗಳಿರುವ ಪರಿಸರವು ಕೆಡತೊಡಗಿ ಕಟುವಾಗುವುದರಿಂದ. ನಮ್ಮ ಪರಿಸರದ ಭಾಗವಾಗಿರುವ ಎಲ್ಲ ಜೀವಿಗಳ ಸಂಗಡ ನಾವು ಈ ಯುಗದಲ್ಲಿ ಬದುಕುಳಿಯಬೇಕೆಂದರೆ ಒಂದೇ ಹಾದಿಯಿದೆ: ವಿರಮಿಸುವುದು, ಹಿಂದಿರುಗಿ ನೋಡಿ ನಾವು ಎಲ್ಲಿಂದ ಬಂದೆವು ಎಂದು ಕಂಡುಕೊಳ್ಳುವುದು ಮತ್ತು ಮುಂದೆ ಎಲ್ಲಿಗೆ ಹೊರಟಿದ್ದೇವೆ ಎಂಬುದರ ಕುರಿತು ಆಳವಾಗಿ ಯೋಚಿಸುವುದು.

MORE FEATURES

ಯಮನೂರ್ ಸಾಹೇಬ ಎಂಬ ಭವರೋಗದ ಬರಹಗಳ ಹಕೀಮ್

23-04-2025 ಬೆಂಗಳೂರು

"ಏನಿಲ್ಲವೆಂದರೂ ಇಲ್ಲಿಯವರೆಗೆ ಬೆಣ್ಣೆಹಳ್ಳಿ ಯಮನೂರ ಸಾಹೇಬ ಅವರು ಮೂರು ಸಾವಿರಕ್ಕೂ ಹೆಚ್ಚು ನಾಟಕಗಳ ರಂಗಸಂಗೀತಕ್ಕ...

ವಿಡಂಬನ ಸಾಹಿತ್ಯಕ್ಕೆ ಒಂದು ಕೊಡುಗೆ

23-04-2025 ಬೆಂಗಳೂರು

"ಎಚ್. ಬಿ. ಎಲ್. ರಾಯರು ಛಂದೋಬದ್ಧವಾಗಿ ಪದ್ಯಗಳನ್ನು ಹೊಸೆಯಬಲ್ಲ ಅಪೂರ್ವ ವ್ಯಕ್ತಿ. ಅಪೂರ್ವ ಯಾಕೆಂದರೆ ಈ ಕಾಲದ ಸ...

ಈ ಕತೆಯಲ್ಲಿ ಎರಡು ಅಪರೂಪದ ತೈಲ ಚಿತ್ರಗಳ ವಿವರಣೆ ಇವೆ

22-04-2025 ಬೆಂಗಳೂರು

“ಈ ಕೃತಿಯನ್ನು ಪ್ರಕಟಿಸುವ ವಿಚಾರ ಬಂದಾಗ ಅದು ನನಗೆ ಅಷ್ಟು ಸೂಕ್ತವಾಗಿ ತೋರಲಿಲ್ಲ. ಹೀಗಾಗಿ ಇದರ ಮೂಲ ಕಥಾ ಸ್ವರೂ...