“ಈ ಕೃತಿಯನ್ನು ಪ್ರಕಟಿಸುವ ವಿಚಾರ ಬಂದಾಗ ಅದು ನನಗೆ ಅಷ್ಟು ಸೂಕ್ತವಾಗಿ ತೋರಲಿಲ್ಲ. ಹೀಗಾಗಿ ಇದರ ಮೂಲ ಕಥಾ ಸ್ವರೂಪದ ಸ್ವಾರಸ್ಯಕ್ಕೆ ಕುಂದುಂಟಾಗಬಹುದೆಂದು ಇದನ್ನು ಕಥಾ ರೂಪದಲ್ಲೇ ಪ್ರಕಟಣೆಗೆ ಉಳಿಸಿಕೊಂಡಿದ್ದೇನೆ,” ಎನ್ನುತ್ತಾರೆ ಪ್ರಕಾಶ ಗರುಡ ಅವರು ತಮ್ಮ “ವಾರೆನ್ ಹೇಸ್ಟಿಂಗ್ಸ್‌ನ ಹೋರಿ” ಕಿರು ಕಾದಂಬರಿಗೆ ಬರೆದ ಲೇಖಕರ ಮಾತು.
ವಾರೆನ್ ಹೇಸ್ಟಿಂಗ್ಸ್ (1732-1818) ಈತ ಬ್ರಿಟಿಷ್ ವಸಾಹತು ಆಡಳಿತದ ಕಾಲಾವಧಿಯಲ್ಲಿ ಬಂಗಾಲ ಪ್ರೆಸಿಡೆನ್ಸಿಯ ಮೊದಲ ಗವರ್ನರ್ ಜನರಲ್ (1772- 1785) ಆಗಿ ಆಡಳಿತ ನಡೆಸಿದ್ದ. ಭಾರತದ ಜನಜೀವನ, ಸಾಹಿತ್ಯ, ಸಂಸ್ಕೃತಿ, ರೀತಿನೀತಿ ಗಳಿಂದ ಆಕರ್ಷಿತನಾಗಿದ್ದರೂ (ತನ್ನ ಆಡಳಿತದ ಕಾಲದಲ್ಲಿ ಏಷಿಯಾಟಿಕ್ ಸೊಸೈಟಿ ಆರಂಭಿಸಿದ್ದು, ಭಗವದ್ಗೀತೆಯ ಇಂಗ್ಲೀಷ್ ಅನುವಾದ ಮಾಡಿಸಿದ್ದು, ಈ ದೇಶದ ಸರಹದ್ದನ್ನು ಅಳೆಯಿಸಿ ಗುರುತಿಸಿದ್ದು, ನ್ಯಾಯಾಂಗ ಮತ್ತು ಕಂದಾಯ ಇಲಾಖೆಗಳಲ್ಲಿ ಮಾಡಿದ ಸುಧಾರಣೆ ಇತ್ಯಾದಿ) ಅದು ಆತನನ್ನೂ ಒಳಗೊಂಡಂತೆ ಒಟ್ಟಾರೆಯಾಗಿ ಓರಿಯೆಂಟಲಿಸ್ಟರು ಭಾರತದ ಸಂಸ್ಕೃತಿಯನ್ನು ಕಾಣುವ ಸಂವೇದನಾರಹಿತ ರೀತಿಯನ್ನು ಮತ್ತು ಅದರ ಎಲ್ಲ ಆಯಾಮಗಳನ್ನು ಸ್ವಾರಸ್ಯಕರವಾಗಿ ಉದಯ ಪ್ರಕಾಶರು 'ವಾರೆನ್ ಹೇಸ್ಟಿಂಗ್ಸ್ ಕಾ ಸಾಂಡ್' ಕಥೆಯಲ್ಲಿ ದಾಖಲಿಸಿದ್ದಾರೆ. ಈ ಕತೆಯಲ್ಲಿ ವಾರೆನ್ ಹೇಸ್ಟಿಂಗ್ಲನ ಆಡಳಿತ ಕಾಲದ ಭಿತ್ತಿಯಲ್ಲಿ ಆಧುನಿಕತೆ, ದೇಶೀಯತೆ, ಭ್ರಷ್ಟಾಚಾರ, ರಾಜಕಾರಣಿಗಳ ನಯವಂಚಕತನ, ಭಟ್ಟಂಗಿತನ ಮತ್ತು ಸಮಾಜೋ-ಸಾಂಸ್ಕೃತಿಕ ರಾಜಕೀಯ, ಆರ್ಥಿಕ ವಿದ್ಯಮಾನಗಳನ್ನು ಶೋಧಿಸುತ್ತ, ಓದುಗರನ್ನು ಪ್ರಸ್ತುತ ನಮ್ಮ ದೇಶವು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಚಿಂತಿಸಲು ಉದಯ ಪ್ರಕಾಶರು ಹಚ್ಚುತ್ತಾರೆ. ಹೀಗಾಗಿ ಈ ಕಥೆ ಕೇವಲ ವಾರೆನ್ ಹೇಸ್ಟಿಂಗ್ಲನ ಕಾಲದ ಕಥೆಯಾಗಿ ಉಳಿಯುವುದಿಲ್ಲ ಅದನ್ನ ಮೀರಿ ಪ್ರಸ್ತುತ ಭಾರತದ ಕತೆಯೂ ಆಗಿಬಿಡುತ್ತದೆ. ಈ ಕಥೆಯಲ್ಲಿ ಒಂದು ಹೋರಿ ಮತ್ತು ಅದರ ಜೊತೆ ಕೆಲವು ತಳಿಯ ಆಕಳುಗಳನ್ನು ರೂಪಕವಾಗಿ ಬಳಸಿಕೊಂಡು ದೇಸೀಯತೆ ಮನುಷ್ಯ ಮತ್ತು ಪ್ರಾಣಿಗಳ ಮಧ್ಯದಲ್ಲಿರುವ ಸಂಬಂಧದ ನೆಲೆಗಳನ್ನು ಶೋಧಿಸಿದ್ದಾರೆ. ಈ ಕಥೆಯಲ್ಲಿ ವಾರೆನ್ ಹೇಸ್ಟಿಂಗ್ಲನ ಪ್ರೇಯಸಿಯಾಗಿ ಬರುವ ಜೋಕಿ ಎಂಬ ಈ ನೆಲದ ಹೆಣ್ಣು, ಇಲ್ಲಿಯ ರೀತಿ ರಿವಾಜುಗಳ ಬಗ್ಗೆ ಪರಿಚಯ ಮಾಡಿಕೊಡುವ ಆತನ ಸ್ಥಳೀಯ ಗೆಳೆಯ ಬುಂತು ಎಂಬ ಹಳ್ಳಿಯ ವ್ಯಕ್ತಿ ಇತ್ಯಾದಿ ಪಾತ್ರಗಳು ಜೀವಂತವಾಗಿದ್ದು ಆಧುನಿಕತೆಯ ಆಕರ್ಷಣೆ ಮತ್ತು ವಿಕರ್ಷಣೆಯ ರೂಪಕ ಪಾತ್ರಗಳಾಗಿವೆ.
ಈ ಕತೆಯಲ್ಲಿ ಎರಡು ಅಪರೂಪದ ತೈಲ ಚಿತ್ರಗಳ ವಿವರಣೆ ಇವೆ: ಒಂದು- ವಾರೆನ್ ಹೇಸ್ಟಿಂಗ್ಸ್ ಆತನ ಹೆಂಡತಿ ಮತ್ತು ಪ್ರೇಯಸಿ ಚೋಕಿ ಇರುವ ಚಿತ್ರ (ಇದನ್ನು ಬಿಡಿಸಿದಾತ ಜಾನ್ ಜೋಫೆನಿ 1183ರಲ್ಲಿ, ನೋಡಿ ಚಿತ್ರ-1, ಪುಟ 49) ಎರಡು- ಇಂಗ್ಲೆಂಡಿನ ಬರ್ಕ್‌ಶಯರ್ ಎಂಬಲ್ಲಿ ವಾರೆನ್ ಹೇಸ್ಟಿಂಗ್ಸ್ ತನ್ನ ಹೆಂಡತಿ ಜೊತೆಗೆ ವಾಸಿಸುತ್ತಿದ್ದ 'ಪ್ಯುಯರ್ಲಿ ಹಾಲ್' ಎಂಬ ಬಂಗಲೆಯ ಚಿತ್ರ. (ನೋಡಿ ಚಿತ್ರ-2. ಪುಟ, 82) ಈ ಎರಡೂ ಚಿತ್ರಗಳನ್ನು ಬಳಸಿಕೊಂಡು ಉದಯ ಪ್ರಕಾಶರು ಕಥೆಯನ್ನು ಕಟ್ಟುವಲ್ಲಿ ತೋರಿದ ಕಲ್ಪನಾಶಕ್ತಿ ಅನನ್ಯವಾದದ್ದು. ಕಥೆಯ ಕೊನೆಯಲ್ಲಿ ವಾರೆನ್ ಹೇಸ್ಟಿಂಗ್ಸ್ ತಾನೇ ಸಾಕಿದ ಅಪರೂಪದ ಹೋರಿಯನ್ನು ಗುಂಡಿಕ್ಕಿ ಕೊಲ್ಲುವ ಕ್ರಿಯೆ ಹೃದಯ ವಿದ್ರಾವಕವಾಗಿದ್ದು ಹಲವು ಅರ್ಥಗಳನ್ನು ಸ್ಪುರಿಸುತ್ತದೆ.
ಹೀಗೆ ವಾರೆನ್ ಹೇಸ್ಟಿಂಗ್ಟನ ಆಡಳಿತದ ನಿರ್ದಿಷ್ಟ ಚರಿತ್ರೆಯ ಘಟನೆಗಳಿಂದ ಕೂಡಿದ, ಫ್ಯಾಂಟಿಸಿಯನ್ನೂ ಒಳಗೊಂಡು ಹಲವಾರು ನಾಟಕೀಯ ಸನ್ನಿವೇಶಗಳುಳ್ಳ ಈ ನೀಳತೆಯನ್ನು ನಾನು ನಾಟಕ ರೂಪಕ್ಕೆ ಅಳವಡಿಸಿ ರಂಗಕ್ಕೆ ತರಲು ನಿರ್ಧರಿಸಿದೆ. ಉದಯ ಪ್ರಕಾಶರಿಗೆ ಫೋನು ಮಾಡಿ ಒಪ್ಪಿಗೆ ಪಡೆದು ಭಾವಾನುವಾದ ಮಾಡಿದೆ.
ಹಿಂದಿ ಕೃತಿಯ ಜೊತೆಗೆ ಇಂಗ್ಲೀಷ್ ಭಾಷೆಯ ಅನುವಾದದ (Short Shorts Long Shots, Robert A Hueckstedt & Amit Tripuraneni, KATHA Arabindo Marg New Delhi, 2023) 5 ಮೂಲಕೃತಿಯ ಸ್ವಾರಸ್ಯ ಉಳಿಸಿಕೊಳ್ಳಲು ಹಿಂದಿ ಭಾಷೆಯ ಕೃತಿಯನ್ನೇ ಆಧಾರವಾಗಿಟ್ಟು ಕೊಂಡು ಭಾವಾನುವಾದ ಮಾಡಿದೆ. ದಿನಾಂಕ 04-04-2021 ರಂದು ಈ ಕಥೆಯನ್ನು ಧಾರವಾಡದ ಬಸವರಾಜ ರಾಜಗುರು ರಂಗಮಂದಿರದಲ್ಲಿ ರಂಗಕ್ಕೆ ತಂದೆ.
ಮೊದಲು ಈ ಕಥೆಯನ್ನು ಆಧಾರವಾಗಿಟ್ಟುಕೊಂಡು ಬರೆದ ನಾಟಕವನ್ನು ಪ್ರಕಟಿಸುವ ವಿಚಾರವಿತ್ತು. ನಾಟಕ ರೂಪಕ್ಕೆ ತರುವಾಗ ವ್ಯಾಪ್ತಿಯ ದೃಷ್ಟಿಯಿಂದ ಕಥೆಯಲ್ಲಿ ಬರುವ ಕೆಲ ವಿವರಗಳನ್ನ ತಾಂತ್ರಿಕ ಕಾರಣಕ್ಕಾಗಿ ಕೈಬಿಡಬೇಕಾಗುತ್ತದೆ. ಈ ಕೃತಿಯನ್ನು ಪ್ರಕಟಿಸುವ ವಿಚಾರ ಬಂದಾಗ ಅದು ನನಗೆ ಅಷ್ಟು ಸೂಕ್ತವಾಗಿ ತೋರಲಿಲ್ಲ. ಹೀಗಾಗಿ ಇದರ ಮೂಲ ಕಥಾ ಸ್ವರೂಪದ ಸ್ವಾರಸ್ಯಕ್ಕೆ ಕುಂದುಂಟಾಗಬಹುದೆಂದು ಇದನ್ನು ಕಥಾ ರೂಪದಲ್ಲೇ ಪ್ರಕಟಣೆಗೆ ಉಳಿಸಿಕೊಂಡಿದ್ದೇನೆ. “ಈ ಅನುವಾದದಿಂದ ತಮ್ಮ ಕೃತಿ ಕನ್ನಡ ಭಾಷೆಯ ಸಾಹಿತಿಗಳಿಗೆ ತಲುಪುತ್ತದೆ ಎಂಬ ಹರ್ಷ ನನಗಿದೆ" ಎಂಬ ಅಭಿಪ್ರಾಯವನ್ನು ಲೇಖಕರು ತಿಳಿಸಿದರು. ಹಿಂದಿಯ ಇಂತಹ ಒಂದು ಅಪರೂಪದ ಕಥೆಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲು ತಮ್ಮ ಅಮೂಲ್ಯ ಸಮ್ಮತಿಯನ್ನು ನೀಡಿದ ಉದಯ ಪ್ರಕಾಶರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು.
“ನಮಸ್ಕಾರ, ನಾನು ಚೆನ್ನಗಿರಿ ಕೇಶವ ಮೂರ್ತಿ, ಕ್ರಿಕೆಟ್ ಅಂಕಿಅಂಶ ಬರೆಯುತ್ತೇನೆ,” ಎಂದರು. ವಿನಿಯವ...
"ಈ ಹೊತ್ತಗೆಯಲ್ಲಿ ಹಿಂದೂ ಧರ್ಮ, ಹಿಂದುತ್ವ, ಸನಾತನ ಧರ್ಮ ಇವೆಲ್ಲವೂ ಒಂದೇ ಆಗಿದೆ ಎಂದು ತರ್ಕಶುದ್ಧವಾಗಿ ಸಮನ್ವಯಗ...
"'ಹವೇಲಿ ದೊರೆಸಾನಿ 'ಕಥಾ ಸಂಕಲನದ ಮೊದಲ ಕಥೆ,'ಅನ್ಪಡ ಕಂಟೆವ್ವ ', ಊರಿಗೆ ಶಾಲೆ ಬರಬೇಕೆಂದು ಊರ...
©2025 Book Brahma Private Limited.