ಯಮನೂರ್ ಸಾಹೇಬ ಎಂಬ ಭವರೋಗದ ಬರಹಗಳ ಹಕೀಮ್


"ಏನಿಲ್ಲವೆಂದರೂ ಇಲ್ಲಿಯವರೆಗೆ ಬೆಣ್ಣೆಹಳ್ಳಿ ಯಮನೂರ ಸಾಹೇಬ ಅವರು ಮೂರು ಸಾವಿರಕ್ಕೂ ಹೆಚ್ಚು ನಾಟಕಗಳ ರಂಗಸಂಗೀತಕ್ಕೆ ದಿಲ್ರುಬಾ ವಾದ್ಯ ನುಡಿಸಿ ಲೋಕಮೆಚ್ಚುಗೆ ಪಡೆದಿದ್ದಾರೆ. ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ಡಾವಣಗೇರಿ, ಚಿತ್ರದುರ್ಗ, ಸೇರಿದಂತೆ ಕರ್ನಾಟಕದ ತುಂಬೆಲ್ಲಾ ವೃತ್ತಿ ರಂಗಭೂಮಿಯ ಅನೇಕ ಕಲಾವಿದರ ನಾಟಕಗಳಿಗೆ ದಿಲ್ರುಬಾ ನುಡಿಸಿದ ಅಭಿಮಾನ ಮಾತ್ರವಲ್ಲ ಸುಪ್ರಸಿದ್ಧಿ ಅವರದು," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ಅವರ ‘ಯಮನೂರ್ ಸಾಹೇಬ ಎಂಬ ಭವರೋಗದ ಬರಹಗಳ ಹಕೀಮ್' ಕುರಿತು ಬರೆದ ಲೇಖನ.

ಬಿ.ಪಿ. ಯಮನೂರ್ ಸಾಹೇಬ್ ಉರುಫ್ ಬೆಣ್ಣೆಹಳ್ಳಿ ಪಿಂಜಾರ ಯಮನೂರಸಾಬ; ರಂಗಭೂಮಿ ನಂಟಿನಿಂದಾಗಿ ನನಗೆ ಪರಿಚಿತರು. ನಾಯ್ಕನಹಟ್ಟಿ ತಿಪ್ಪೇರುದ್ರಸ್ವಾಮಿ ನಾಟಕವು ಸೇರಿದಂತೆ ತಮ್ಮ ಮುರ್ನಾಲ್ಕು ನಾಟಕಗಳ ರಚನೆ ಮೂಲಕ ವೃತ್ತಿ ರಂಗಭೂಮಿಯಲ್ಲಿ ಹಾಳತವಾಗಿ ಗುರುತಿಸಿಕೊಂಡವರು. ವಿಶೇಷವಾಗಿ ರಂಗಸಂಗೀತ ಅವರ ಮೊದಲ ಆದ್ಯತೆ ಮತ್ತು ಅದು ಅವರ ಪ್ರಥಮ ಆಯ್ಕೆ. ಅದರಲ್ಲೂ ರಂಗನಾಟಕಗಳಿಗೆ ಅಪರೂಪದ "ದಿಲ್ ರುಬಾ" ವಾದ್ಯ ನುಡಿಸುವುದರಲ್ಲಿ ಅವರದು ದಿವಿನಾದ ಆಸಕ್ತಿ. ಅದನ್ನವರು ದಶಕಗಳಿಂದ ತಪಸ್ಸಿನಂತೆ ರೂಢಿಸಿಕೊಂಡು ಬಂದಿದ್ದಾರೆ. ವರ್ತಮಾನದ ವೃತ್ತಿ ರಂಗಭೂಮಿಯಲ್ಲಿ ದಿಲ್ರುಬಾ ನುಡಿಸುವ ಅವರು ಏಕೈಕ ಕಲಾವಿದ. ಹಾಗಂತ ಅವರೆದುರು ಅದನ್ನು ಹೇಳಿದರೆ ಸಾಕು; ಇಲ್ಲ ಸರ್ 'ಅರಣ್ಯಕುಮಾರ ಅನ್ನುವ ಇನ್ನೊಬ್ಬರು ಇದ್ದಾರೆಂದು' ಯಮನೂರಸಾಬ ಖಚಿತ ಪಡಿಸುತ್ತಾರೆ. ಅದು ಅವರ ಸೌಜನ್ಯಭರಿತ ಪ್ರೀತಿ ಮತ್ತು ಯತಾರ್ಥತೆಯೇ ಹೌದು.

ಏನಿಲ್ಲವೆಂದರೂ ಇಲ್ಲಿಯವರೆಗೆ ಬೆಣ್ಣೆಹಳ್ಳಿ ಯಮನೂರ ಸಾಹೇಬ ಅವರು ಮೂರು ಸಾವಿರಕ್ಕೂ ಹೆಚ್ಚು ನಾಟಕಗಳ ರಂಗಸಂಗೀತಕ್ಕೆ ದಿಲ್ರುಬಾ ವಾದ್ಯ ನುಡಿಸಿ ಲೋಕಮೆಚ್ಚುಗೆ ಪಡೆದಿದ್ದಾರೆ. ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ಡಾವಣಗೇರಿ, ಚಿತ್ರದುರ್ಗ, ಸೇರಿದಂತೆ ಕರ್ನಾಟಕದ ತುಂಬೆಲ್ಲಾ ವೃತ್ತಿ ರಂಗಭೂಮಿಯ ಅನೇಕ ಕಲಾವಿದರ ನಾಟಕಗಳಿಗೆ ದಿಲ್ರುಬಾ ನುಡಿಸಿದ ಅಭಿಮಾನ ಮಾತ್ರವಲ್ಲ ಸುಪ್ರಸಿದ್ಧಿ ಅವರದು. ಅವತ್ತಿನ ಮನ್ಸೂರ ಸುಭದ್ರಮ್ಮ ಅವರಿಂದ ಹಿಡಿದು ಇವತ್ತಿನ ಮರಿಯಮ್ಮನಹಳ್ಳಿ ಕೆ. ನಾಗರತ್ನಮ್ಮ ಅವರ ಬಹುಪಾಲು ಪೌರಾಣಿಕ ನಾಟಕಗಳಿಗೆ ತಾನು ದಿಲ್ರುಬಾ ನುಡಿಸಿದ ಹೆಮ್ಮೆ ಮತ್ತು ಹೆಗ್ಗಳಿಕೆ. ಅದೆಲ್ಲಕ್ಕೂ ಮಿಗಿಲಾಗಿ ಅದೊಂದು ವೃತ್ತಿ ರಂಗಭೂಮಿ ಮೇಲಿನ ಮಹಾನ್ ಸಂಪ್ರೀತಿಯ ಅವಕಾಶ ಎಂಬುದು ಅವರ ಸಜ್ಜನಿಕೆಯ ಅಂಬೋಣ.

ಅಜಮಾಸು ಎರಡು ದಶಕಗಳಿಗೂ ಹೆಚ್ಚು ಕಾಲ ದಾವಣಗೆರೆ ಜಿಲ್ಲೆಗೆ ಸೇರಿದ್ದ ನೆರೆಯ ಹರಪನಹಳ್ಳಿ ತಾಲೂಕಿನ ಅವರ ಊರು 'ಬೆಣ್ಣೆಹಳ್ಳಿ' ಗ್ರಾಮವು ಇದೀಗ ಕಲ್ಯಾಣ ಕರ್ನಾಟಕದ ಕಡೆಯ ಹಳ್ಳಿ. ಬೆಣ್ಣೆಹಳ್ಳಿಗೆ ಹರದಾರಿ ದೂರದ ಚಿಗಟೇರಿಯ ಶತಾಯುಷಿ ಕೊಟ್ರಪ್ಪಯ್ಯ ಗವಾಯಿಗಳ ಗಾಯನ ಗರಡಿಯಲ್ಲಿ ಸಾಮು ತೆಗೆದವರು ಯಮನೂರಸಾಬ್. ಚಿಗಟೇರಿಯ ಕೊಟ್ರಪಯ್ಯ ಗವಾಯಿಗಳೆಂದರೆ ರಂಗಸಂಸ್ಕೃತಿಯ ಕಣಜ. ಒಂದರ್ಥದಲ್ಲಿ ಸಮಗ್ರ ಸಂಸ್ಕೃತಿಯ ಸಂವೇದನಾಶೀಲ ಲಯಶಾಸ್ತ್ರ ಸಂಪನ್ನರು. ಅಂತೆಯೇ ಸಾಹಿತ್ಯ, ಶಾಸ್ತ್ರೀಯ ಸಂಗೀತ ಅರ್ಥಾತ್ ಎಲ್ಲಾ ಬಗೆಯ ಸಂಗೀತ ವಾದ್ಯಗಳನ್ನು ನುಡಿಸುವ ನಿಪುಣತೆಯ ಕಲಿಕೆ. ಅಷ್ಟಲ್ಲದೇ ರಂಗಾಭಿನಯ, ರಂಗಸಂಗೀತದ ಬಳಕೆಯಲ್ಲಿ ಅವರ ಪರಂಪರೆಗೆ ದೊಡ್ಡ ಹೆಸರು. ಈ ಭಾಗದ ಅನೇಕ ಸಾಂಸ್ಕೃತಿಕ ಪ್ರತಿಭೆಗಳು ಕೊಟ್ರಪಯ್ಯ ಗವಾಯಿಗಳ ಗರಡಿಯಲ್ಲಿ ಪಳಗಿ ಬಂದಿರುವುದು ಜನಸಂಸ್ಕೃತಿಯ ಸಂಪ್ರದಾಯವಾಗಿ ಬೆಳೆದು ಬಂದಿದೆ.

ಇಂತಿಪ್ಪ ಕೊಟ್ರಪಯ್ಯ ಗವಾಯಿಗಳ ಶಿಷ್ಯರಲ್ಲಿ ನಮ್ಮ ಯಮನೂರ್ ಸಾಹೇಬರಿಗೆ ವಿಶೇಷ ಸ್ಥಾನಮಾನ ಮತ್ತು ಹದುಳಮಯ ಗೌರವ. ಸಾಹೇಬರ ಶೈಕ್ಷಣಿಕ ಓದು ಏಳನೇ ಈಯತ್ತೆ ಮಾತ್ರ. ಆದರೆ ಅವರ ಭಾವಕೋಶದಲ್ಲಿ ಅಂತಃಶ್ರೋತಗೊಂಡ ಸಾಂಸ್ಕತಿಕ ಲೋಕದ ಜೀವನಾನುಭವ ಅಪಾರವಾದುದು. ಅಂತೆಯೇ ಎಂಬತ್ತರ ಏರುಪ್ರಾಯದ ಯಮನೂರ್ ಸಾಹೇಬರು; ಸಾಹಿತ್ಯ, ಸಂಗೀತ, ರಂಗಾಭಿನಯ ಸೇರಿದಂತೆ ಹೋಮಿಯೋಪತಿ ಪ್ರಾಕ್ಟಿಷನರ್ ಎಂಬುದು ಸೋಜಿಗದ ಸಂಗತಿ. ಕಳೆದ ಎರಡೂವರೆ ದಶಕಗಳಿಂದ ಹೋಮಿಯೋಪತಿಯ ಪರಿಣಿತ ವೈದ್ಯರ ಒಡನಾಟ, ಅಧ್ಯಯನ ಇತ್ಯಾದಿಗಳಿಂದ ಅವರು ಅದನ್ನು ‌ಕರಗತ ಮಾಡಿಕೊಂಡ ಸಮುದಾಯದ ಸ್ವಾಸ್ಥ್ಯ ಸಜ್ಜನ. ಅದೊಂದು ಮುಕ್ತ ಗಾಂವಟಿ ಪದ್ಧತಿಯ ಭವರೋಗ ನಿವಾರಕ ಮನೆಮದ್ದಿನಂತೆ ಕೆಲಸ ಮಾಡಿದೆಯೆಂದು ಅವರಿಂದಲೇ ಕೇಳಿ ತಿಳಿದುಕೊಂಡಿದ್ದೇನೆ. ವಿಷಯ ಏನೆಂದರೆ ನಮ್ಮ ಬಹುತೇಕ ಸ್ವಾಸ್ಥ್ಯ ಸಮಸ್ಯೆಗಳು ಮನೋಚಿಕಿತ್ಸಕ ಪ್ರಮೇಯಗಳು.

ಕಳೆದ ಎರಡು ದಶಕಗಳಿಂದ ಯಮನೂರಸಾಹೇಬರು ಸಕುಟುಂಬ ಪರಿವಾರದೊಂದಿಗೆ ಡಾವಣಗೇರಿ ಶಹರದ ಕೆ.ಟಿ.ಜೆ. ನಗರದಲ್ಲಿ ವಾಸವಾಗಿದ್ದಾರೆ. ಅವರ ಹಿರಿಯ ಮಗಳು ದಾವಣಗೆರೆ ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಷಕಿ. ದಾವಣಗೆರೆ ಶಹರದ ನಿವಾಸಿ ಆದಮೇಲೆ ಅವರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಿನ್ನಡೆ ಎಂಬುದೇ ಇಲ್ಲ. ನಿತ್ಯವೂ ತಾಸೊಪ್ಪತ್ತು ದಿಲ್ರುಬಾ ಅಭ್ಯಾಸ. ತತ್ವ ಪದಗಳ ಓದು ಮತ್ತು ಅವುಗಳಿಗೆ ರಾಗ ಸಂಯೋಜಿಸುವ ಜಿಜ್ಞಾಸೆ. ಶಿಶುನಾಳ ಶರೀಫ, ಪಂಡಿತ ಪುಟ್ಟರಾಜ ಗವಾಯಿ, ಜಿ.ಎಸ್. ಶಿವರುದ್ರಪ್ಪ ಇನ್ನೂ ಮೊದಲಾದವರ ಕೃತಿಗಳಿಗೆ ರಾಗ ಸಂಯೋಜಿಸಿ ದಿಲ್ರುಬಾ ನುಡಿಸುತ್ತಲೇ ಹಾಡುವುದು ಅವರಿಗೆ ಪ್ರಿಯವಾದ ಕೆಲಸ. ಹಾಗೆ ನೋಡಿದರೆ ಅದೇನು ಮಾಧುರ್ಯ ಮೈವೆತ್ತ ಹಾಡುಗಾರಿಕೆ ಅಲ್ಲ.

ಹೇಳಬೇಕೆಂದರೆ 'ದಿಲ್ರುಬಾ' ಅವರ ಪ್ರಫುಲ್ಲ ಆಸ್ಥೆ ಮತ್ತು ಆಸ್ತಿ. ಮತ್ತೊಂದು ನಿಷ್ಠೆಯ ಕೆಲಸವೆಂದರೆ ದಿನನಿತ್ಯದ ಹೋಮಿಯೋಪತಿ ಚಿಕಿತ್ಸಾ ಕ್ರಮಗಳು. ಅದರಿಂದ ಹೆಚ್ಚು ಫಾಯದೆ ಏನಿಲ್ಲ. ಆದರೆ ಅದು ಅವರ ತಂದೆ ಹಕೀಂ ಯಮನ್ ಸಾಹೇಬರಿಂದ ಬಳುವಳಿಯಂತೆ ಬಂದ ಕಾಯಕವೇ ಆಗಿದೆ. ಅಷ್ಟಲ್ಲದೇ ಅವರ ತಂದೆಗೆ ಶರಣ ಸಂಸ್ಕೃತಿಯ ಸೊಗಸಾದ ಒಡನಾಟವಿತ್ತು. ಅದನ್ನು ಮಗನಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಯಮನೂರ ಸಾಹೇಬರು ಕೆಲವು ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಅವುಗಳಲ್ಲಿ ಜವಾರಿ ಧ್ವನಿಯ ಲಾವಣಿಗಳಿವೆ. ಅದಲ್ಲದೇ ಯುಟ್ಯುಬ್ ಮೂಲಕ ಚಮನ್ ಷಾವಲಿ ಉರುಸ್ ಕುರಿತು, ಹೋಮಿಯೋಪತಿ ಜನಕ ಡಾ. ಹಾನಿಮನ್ ಕುರಿತು, ಮಕ್ಕಾ ಮದೀನಾ ಕುರಿತು ಹಾಡುಗಳನ್ನು ಬರೆದು ಹಾಡಿದ್ದಾರೆ. ಅವು ತಕ್ಕಮಟ್ಟಿಗೆ ಜನಪ್ರಿಯತೆ ಗಳಿಸಿದ್ದುಂಟು.

ಅಪ್ಪಟವಾದ ಮನುಷ್ಯ ಪ್ರೀತಿಯ ಅವರ ಕುಟುಂಬ; ಎಲ್ಲಾ ಧರ್ಮಗಳನ್ನು ಗೌರವಿಸುವ ಮತ್ತು ಅದನ್ನು ಗ್ರಾಮಭಾರತದ ಸಾಂಪ್ರದಾಯಿಕ ಎಚ್ ಅದರ ಆಚರಣೆಯಂತೆ ರೂಢಿಸಿಕೊಂಡಿದೆ. ಅವರಿಗೆ ನಾಯ್ಕನಹಟ್ಟಿ 'ತಿಪ್ಪೇರುದ್ರ'ಸ್ವಾಮಿ ಮನೆ ದೇವರಿದ್ದಂತೆ. ಅಂತೆಯೇ ನಾಯ್ಕನಹಟ್ಟಿ ಸ್ವಾಮಿಯ ರಥೋತ್ಸವದ ಪ್ರಯುಕ್ತ ಆ ದಿನದಂದು ಅವರ ಮನೆಯಲ್ಲಿ ಅವತ್ತು ಹೋಳಿಗೆ ನೈವೇದ್ಯ. ಮನೆಗೆ ಬಂದವರಿಗೆಲ್ಲ ನೈವೇದ್ಯ ಪ್ರಸಾದ. ಹಿಂದೂ ಮಹಿಳೆಯರು ಅವರ ಮನೆಗೆ ಬಂದರೆ ಅರಿಷಿಣ ಕುಂಕುಮದ ಗೌರವ ಸಲ್ಲಿಕೆ. ಹೀಗೆ ಇಂತಹ ಹತ್ತು ಹಲವು ಪದ್ಧತಿ, ನಡೆನುಡಿಗಳ ಆಚರಣೆ ಮೂಲಕ ಅವರ ಕುಟುಂಬ ವಾತ್ಸಲ್ಯದ ವಾರಿಧಿಯೇ ಆಗಿದೆ. ಅದು ಬಹುತ್ವ ಭಾರತದ ಸೌಹಾರ್ದ ಬದುಕಾಗಿದೆ.

ಪ್ರಸ್ತುತ "ಬದುಕಿನ ಬಾಳಬುತ್ತಿ ಸವಿದು ತಣಿಸಿರಿ ನೆತ್ತಿ" ಎಂಬುದು ಅವರೇ ರಚಿಸಿದ ಮುವತ್ತಾರು ಲೇಖನಗಳ ಅಕ್ಷರ ಬುತ್ತಿ. ಪುಟ್ಟ ಪುಟ್ಟ ಸರಳ ಲೇಖನಗಳ ಗುಚ್ಛವಿದು. ತಾನು ಅಲ್ಪಸಂಖ್ಯಾತ ಮುಸ್ಲಿಂ ಇತ್ಯಾದಿ ಯಾವುದೇ ಒಳಹೇತುಗಳಿಲ್ಲದ ಮನುಷ್ಯ ಪ್ರಜ್ಞೆಯ ನೆಲೆಯಿಂದ ತನ್ನನ್ನು ಗುರುತಿಸಿಕೊಳ್ಳುವ ನಮ್ಮ ಯಮನೂರ ಸಾಹೇಬರನ್ನು ಸನಾತನಿ ಮುಸ್ಲಿಂ ಸಮುದಾಯದ ಕೆಲವ ಗುರುಮ ಘಾತುಕರು ವಿರೋಧಿಸುವುದುಂಟು. ಆದರೆ ಯಮನೂರಪ್ಪನಿಗೆ ಅದ್ಯಾವುದರಲ್ಲು ಎಳ್ಳಷ್ಟು ನಂಬುಗೆ ಇಲ್ಲ. ನಿಜದ ಫಕೀರನಾದವನು ಮನಃ ಧಿಕ್ಕಾರ ಮಾಡಿಕೊಂಡವನು. ಅವರ ಬದುಕು ಇಂತಹ ವಾಸ್ತವಗಳೊಂದಿಗೆ ತಳಕು ಹಾಕಿಕೊಂಡಿದೆ.

ಅಂತೆಯೇ ನಿತ್ಯದ ಸಾಮಾಜಿಕ ಬದುಕಿನ ಹತ್ತು ಹಲವು ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಇದಾಗಿದೆ. ರೋಗವಾಗಿ ಬಂದು ಮಾಯಬಹುದಾದ ಸಟಪಟ ಹುಣ್ಣುಗಳಿಗಿಂತ ಕಾಡುವ ಭವರೋಗ ಬಾಧೆಗಳಿಗೆ ರೋಗನಿವಾರಕ ಮದ್ದು ಹುಡುಕುವ ದಿಕ್ಕಿನ ಯತ್ನಗಳು ಇಲ್ಲಿ ಆನುಷಂಗಿಕವಾಗಿ ಎಂಬಂತೆ ಕಾಣಿಸಿಕೊಂಡಿವೆ. ಅಂದಹಾಗೆ 'ಹುಟ್ಟು' ಎಂಬುದರಿಂದ ಆರಂಭಗೊಂಡು 'ಸಾವು' ಎನ್ನುವ ಲೇಖನದೊಂದಿಗೆ ಪ್ರಸ್ತುತ ಈ ಪುಸ್ತಕದ ಲೇಖನಗಳು ಅರ್ಥಧಾರಣೆ ಪಡೆದುಕೊಂಡಿವೆ. ಹೀಗೆ ಹುಟ್ಟು ಸಾವುಗಳ ನಟ್ಟ ನಡುವೆ ಸಾಗುವ ಬದುಕಿನ ಅನಂತ ಕವಲುಗಳು ಈ ಪುಸ್ತಕದ ಒಳಹೂರಣ. ಇದರ ನಡುವೆ ಶಾಂತಿ ಮತ್ತು ಯುದ್ಧವಿರೋಧಿ ನೀತಿ ಬೋಧಿಸುವ ಕೆಲವು ಲೇಖನಗಳು ಇಲ್ಲಿವೆ. ಸಂಕಲನದ ಕೆಲವು ಲೇಖನಗಳು ಅಪೂರ್ಣ ಫಲ ಎನಿಸಿದರೆ ಮತ್ತೆ ಕೆಲವು ಅಪೂರ್ವವು ಎನಿಸಿವೆ. ತನ್ಮೂಲಕ ಆನುಷಂಗಿಕ ಫಲಶೃತಿ ಪ್ರಾಪ್ತಿ.

ಗ್ರಾಮ ಬದುಕಿನ ಕೃಷಿ, ಗುಡಿ ಕೈಗಾರಿಕೆ, ಪಶುಪಾಲನೆ, ಪಶುಪಕ್ಷಿಗಳ ಜೀವ ಸಂಬಂಧಗಳನ್ನು ಲೇಖಕ ದಾಖಲಿಸಿದ್ದಾರೆ. ಧರ್ಮ, ಅಧ್ಯಾತ್ಮ, ರಾಜಕಾರಣ, ಕಲೆ ಇತ್ಯಾದಿಗಳ ಕುರಿತು ಪರಿಚಯಾತ್ಮಕ ವಾಚ್ಯದ ಅಭಿವ್ಯಕ್ತಿ ದಾಖಲೆ. ಹಾಗೆಯೇ ಅವುಗಳ ಅಪಸವ್ಯ ಕುರಿತು ಅಲ್ಲಲ್ಲಿ ಸೂಚ್ಯದ ಅಭಿವ್ಯಕ್ತಿ. ಅನುಭವಗಳನ್ನು ಸಾದರ ಪಡಿಸುವಾಗ ಬರಹದ ಕಲಾತ್ಮಕತೆ ಅವರ ನೆರವಿಗೆ ಬಾರದಿರಲು ಓದು, ಅಧ್ಯಯನದ ಕೊರತೆ ಕಾರಣವಾಗಿದ್ದೀತು. ಎಂಬತ್ತರ ಹಿರಿಯ ಚೇತನ ಯಮನೂರ ಸಾಹೇಬರಿಗೆ ನೂರು ತುಂಬಲಿ. ಅವರ ಪರಿಶುಭ್ರ ಶ್ವೇತ ಉಡುಪಿನಂತೆ ಅವರ ಸಾಹಿತ್ಯ ಕೃಷಿ, ರಂಗ ಕೃಷಿ ಮತ್ತು ವೈದ್ಯಕೀಯ ಕೃಷಿ ಸ್ವಾಸ್ಥ್ಯದ ಫಸಲು ನೀಡಲಿ. ಶಿಶುನಾಳ ಶರೀಫ ಮತ್ತು ನಾಯ್ಕನಹಟ್ಟಿ ತಿಪ್ಪೇರುದ್ರಸ್ವಾಮಿಗಳ ಅನುಗ್ರಹ ಅವರಿಗಿರಲಿ.

ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು:
ಮತ್ತೆ ಮತ್ತೆ ಕಾಡುವ ಹಳೇ ಬಜಾರಿನ ಯಡ್ರಾಮಿ ಸಂತೆ
ಕಿರುತೆರೆಯ ಶೀಘ್ರಸ್ಖಲನದ ಕಾಮೆಡಿ ಸ್ಕಿಟ್ ಗಳು
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯಿತ್ತಿರುವ ರಂಗಮೌಲ್ಯಗಳು
ನಲವತ್ತೆಂಟು ವರುಷಗಳ ಹಿಂದೆ ಡಾವಣಗೇರಿ ಸೀಮೆಗೆ ಕಾಲಿಟ್ಟ ಹೊಸತರಲ್ಲಿ...

ಬನಶಂಕರಿಯ ನಾಟಕಗಳ ಜಾತ್ರೆ : ವೃತ್ತಿ ರಂಗಭೂಮಿಯ ಕುಂಭಮೇಳ
ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...
ಬರಹಗಾರ ವಸ್ತುನಿಷ್ಠವಾಗಿ ಹೇಳದೇ ಹೋದರೆ...
ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?
ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ
ಬೆಂಗಳೂರಿನ ಬಿಬಿಎಲ್ಎಫ್ 2024 ಸಾಹಿತ್ಯ ಉತ್ಸವ
ಇತರೆ ರಂಗಾಯಣಗಳಿಗೆ 'ಕಾರಂತ' ಮಾದರಿ ಇದೆ, ದಾವಣಗೆರೆ ರಂಗಾಯಣಕೆ ಮಾದರಿ ಬೇಕಿದೆ..
ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು
ಯಡ್ರಾಮಿ ಸಂತೆಯಲಿ ಕಂಡ ರೇಣುಕೆಯ ಮುಖ
ಬರಗೂರು: ಸಂಭ್ರಮದ ಸ್ನೇಹ ಗೌರವದ ಸಾಂಸ್ಕೃತಿಕ ಹಬ್ಬ
ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ
ಮುವತ್ತು ವರ್ಷ ಕಳೆದರೂ ಮುಗಿಯದ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ
ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು
ತೊಂಬತ್ನಾಲ್ಕರ ಮುಕ್ಕಾಗದ ಮತ್ತು ಮುಪ್ಪಾಗದ ಚೇತನ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು
ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?
ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ

ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ

ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE FEATURES

ಬೆಂಗಳೂರಿನಲ್ಲಿ ಕೊಂಡಿಯೊಂದು ಕಳಚಿತು....

06-05-2025 ಬೆಂಗಳೂರು

“ನಮಸ್ಕಾರ, ನಾನು ಚೆನ್ನಗಿರಿ ಕೇಶವ ಮೂರ್ತಿ, ಕ್ರಿಕೆಟ್‌ ಅಂಕಿಅಂಶ ಬರೆಯುತ್ತೇನೆ,” ಎಂದರು. ವಿನಿಯವ...

ಭಾರತದ ಆತ್ಮ ‘ರಿಲಿಜನ್’ ಅಲ್ಲ ಬದಲಿಗೆ, ಧರ್ಮ

06-05-2025 ಬೆಂಗಳೂರು

"ಈ ಹೊತ್ತಗೆಯಲ್ಲಿ ಹಿಂದೂ ಧರ್ಮ, ಹಿಂದುತ್ವ, ಸನಾತನ ಧರ್ಮ ಇವೆಲ್ಲವೂ ಒಂದೇ ಆಗಿದೆ ಎಂದು ತರ್ಕಶುದ್ಧವಾಗಿ ಸಮನ್ವಯಗ...

ರಾಜಕೀಯದಾಟಗಳ ಮಧ್ಯೆ ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳುವ ಕಥೆಗಳು

05-05-2025 ಬೆಂಗಳೂರು

"'ಹವೇಲಿ ದೊರೆಸಾನಿ 'ಕಥಾ ಸಂಕಲನದ ಮೊದಲ ಕಥೆ,'ಅನ್ಪಡ ಕಂಟೆವ್ವ ', ಊರಿಗೆ ಶಾಲೆ ಬರಬೇಕೆಂದು ಊರ...