ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು

Date: 10-09-2022

Location: ಬೆಂಗಳೂರು


“ತಮಿಳು ಮತ್ತು ಮಲಯಾಳಂ ಬಾಶೆಗಳಿಗೆ ಹೋಲಿಸಿದಾಗ ಮಡಿಚಿದ ದ್ವನಿಗಳು ಇರುವ ಹಲವು ಪದಗಳ ಸಂದರ‍್ಬದಲ್ಲಿ ತುಸು ಬಿನ್ನತೆಯನ್ನು ಕನ್ನಡ ತೋರಿಸುತ್ತದೆ. ಕನ್ನಡದಾಗ ಮಡಿಚಿದ ದ್ವನಿಗಳು ಇರುವ ಕೆಲವು ಪದಗಳಲ್ಲಿ ತಮಿಳು, ಮಲಯಾಳಂ ಬಾಶೆಗಳಲ್ಲಿ ತಾಲವ್ಯ ದ್ವನಿಗಳು ಇರುವುದು ಗಮನ ಸೆಳೆಯುತ್ತದೆ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಕನ್ನಡದ ವಿಶಿಷ್ಟ ಧ್ವನಿಗಳ ಬಗ್ಗೆ ಚರ್ಚಿಸಿದ್ದಾರೆ.

ಪಂಪ ಒಂದೆಡೆ ‘ಎನ್ನ ನುಡಿ ಟಾಡಡಾಡಣ’ ಎಂದು ಹೇಳಿದ್ದಾನೆ. ಇದನ್ನು ಅಲ್ಲಲ್ಲಿ ಆದುನಿಕ ವಿದ್ವಾಂಸರು ಬೇರೆ ಬೇರೆ ಕಾರಣಗಳಿಗೆ ಬಳಸಿಕೊಂಡಿದ್ದಾರೆ. ಇದು ಪಂಪ ತನ್ನ ಕನ್ನಡದ ಮೇಲಿನ ಪ್ರೀತಿಯನ್ನು ಹೇಳುವುದಕ್ಕೆ, ಕನ್ನಡದ ವಿಶಿಶ್ಟತೆಯನ್ನು ಹೇಳುವುದಕ್ಕೆ ಹೀಗೆ ಹೇಳಿದ್ದಾನೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಗಟ್ಟಿತನವನ್ನು ಹೇಳುವುದಕ್ಕೆ ಹೀಗೆ ಹೇಳಿದ್ದಾನೆ ಎಂದೂ ಹೇಳಿದ್ದಾರೆ. ಈ ದ್ವನಿಗಳು ಕನ್ನಡದಲ್ಲಿ ತುಂಬ ಸಹಜವಾಗಿ ಇವೆ, ಆದರೆ ಇಂಡೊ-ಯುರೋಪಿಯನ್ ಬಾಶೆಗಳಲ್ಲಿ ಇಲ್ಲ. ಅಂದರೆ ಮೊದಲಿಗೆ ಸಂಸ್ಕ್ರುತದಲ್ಲಿಯೂ ಈ ದ್ವನಿಗಳು ಇರಲಿಲ್ಲ, ಇವು ಆನಂತರ ಸಂಸ್ಕ್ರುತದಲ್ಲಿ ಬೆಳೆದಿವೆ. ಆ ಕಾರಣಕ್ಕೆ ಈ ದ್ವನಿಗಳು ಸಂಸ್ಕ್ರುತದ ಎದುರಿಗೆ ಕನ್ನಡದ ವಿಶಿಶ್ಟತೆ ಎಂದಾಗುತ್ತದೆ.ಹೀಗೆ, ಇಶ್ಟೆಲ್ಲ ವಿಚಾರಗಳು.

ಕನ್ನಡದೊಳಗೆನೆ ಈ ದ್ವನಿಗಳು ಅತ್ಯಂತ ಕುತೂಹಲಕರವಾದ ಬೆರಗೆನಿಸುವಶ್ಟು ವಿವದತೆಯಲ್ಲಿ ಬಳಕೆಯಲ್ಲಿ ಇವೆ. ಸರಿ, ಈ ಟ್, ಡ್, ಣ್ ದ್ವನಿಗಳ ಬಗೆಗೆ ತುಸು ಇಲ್ಲಿ ಮಾತಾಡೋಣ. ಅದರೊಟ್ಟಿಗೆ ಇವುಗಳ ಜಾತಿಗೆ ಸೇರುವ ಳ್ ದ್ವನಿಯನ್ನೂ ಸೇರಿಸಬಹುದು. ಉಳಿದ ವ್ಯಂಜನಗಳನ್ನು ಅಂದರೆ ‘ಕ್’ ‘ಚ್’ ‘ತ್’ ಮತ್ತು ‘ಪ್’;ದ್ವನಿಗಳನ್ನು ಹೆಸರಿಸುವಾಗ ಅವುಗಳು ಹುಟ್ಟುವ ಜಾಗವನ್ನು ಗಮನದಲ್ಲಿ ಇಟ್ಟುಕೊಂಡು ಹೆಸರಿಸಲಾಗಿದೆ. ಅಂದರೆ ‘ಕ್’ ದ್ವನಿಯು ಕಂಟದಲ್ಲಿ ಹುಟ್ಟುವುದರಿಂದ ಆ ದ್ವನಿಯ ಹೆಸರು ಕಂಟ್ಯ. ಆದರೆ, ‘ಟ್’ ದ್ವನಿಯನ್ನು ಹೆಸರಿಸುವಾಗ ಆ ದ್ವನಿ ಹುಟ್ಟುವ ಜಾಗವನ್ನು

ಆದಾರವಾಗಿ ಇಟ್ಟುಕೊಂಡಿಲ್ಲ. ಈ ದ್ವನಿಗಳನ್ನು ಹೆಸರಿಸುವ ಕೆಲಸ ಬಾರತದಾಗ ಕನಿಶ್ಟ ಮೂರು ಸಾವಿರ ವರುಶಗಳಿಗೂ ಹಿಂದೆ ಆಗಿದೆ ಎಂಬುದನ್ನು ಇಲ್ಲಿ ಎತ್ತಿ ಹೇಳಬೇಕು. ‘ಟ್’ ದ್ವನಿಯನ್ನು ಮೂರ‍್ದನ್ಯ ಇಲ್ಲವೆ ಪರಿವೇಶ್ಟಿತ ಎಂದು ಹೇಳಲಾಗಿದೆ. ಇದನ್ನು ಮಡಿಚಿದ ದ್ವನಿ ಎಂದೂ ಕರೆದಿದೆ. ಅಂದರೆ ಈ ದ್ವನಿಯನ್ನು ಅದು ಹುಟ್ಟುವ ಕ್ರಮವನ್ನು ಗಮನದಲ್ಲಿ ಇಟ್ಟುಕೊಂಡು ಹೆಸರಿಸಲಾಗಿದೆ. ಕುತೂಹಲವೆಂದರೆ ಇಂಗ್ಲೀಶಿನಲ್ಲಿಯೂ ಇದನ್ನು ಹೀಗೆ ಬಾಗಿದ ಎಂಬರ‍್ತದ ರೆಟ್ರೊಪ್ಲೆಕ್ಸ್ ಎಂಬ ಪದದಿಂದ ಹೆಸರಿಸಲಾಗಿದೆ. ಈ ದ್ವನಿಯು ಹುಟ್ಟುವ ಕ್ರಮ ಹೀಗಿದೆ, ನಾಲಗೆಯನ್ನು ಮಡಿಚಿ ನಾಲಗೆಯ ಕೆಳತುದಿಯನ್ನು ಮೇಲಿನ ಅಂಗುಳಿಗೆ ತಾಕಿಸಿ ಹೊರಹೋಗುವ ಗಾಳಿಯನ್ನು ಅಲ್ಲಿ ತುಸು ಕಾಲ ನಿಲ್ಲಿಸಿ ಒಮ್ಮೆಲೆ ಆಸ್ಪೋಟಿಸಿ ಬಿಟ್ಟು ಈ ದ್ವನಿಯನ್ನು ಉಚ್ಚರಿಸಲಾಗುತ್ತದೆ. ಈ ಮೇಲೆ ಪಟ್ಟಿಸಿದ ‘ಟ್’ ‘ಡ್’ ‘ಣ್’ ಮತ್ತು ‘ಳ್’ ಈ ನಾಲ್ಕೂ ದ್ವನಿಗಳನ್ನು ಹೀಗೆ ಉಚ್ಚರಿಸಲಾಗುತ್ತದೆ.

ಈ ದ್ವನಿಗಳಿಗೆ ಸಂಬಂದಿಸಿದ ಬಾರತೀಯ ಸಂದರ‍್ದಲ್ಲಿ ಅತ್ಯಂತ ಮಹತ್ವದ್ದಾಗಿರುವ ವಿಚಾರವೊಂದನ್ನು ಇಲ್ಲಿ ಪ್ರಸ್ತಾಪಿಸಬಹುದು. ಅದೆಂದರೆ, ಸಂಸ್ಕ್ರುತದಲ್ಲಿ ಈ ಮಡಿಚಿದ ದ್ವನಿಗಳು ಬೆಳೆಯುವುದಕ್ಕೆ ದ್ರಾವಿಡದ ಪ್ರಬಾವ ಮುಕ್ಯ ಕಾರಣ ಎಂಬುದು. ದ್ರಾವಿಡದ ಎಲ್ಲ ಬಾಶೆಗಳಲ್ಲಿಯೂ ಈ ದ್ವನಿಗಳು ಬಳಕೆಯಲ್ಲಿವೆ. ಇವು ‘ಸಹಜವಾಗಿ’ ಬಳಕೆಯಲ್ಲಿವೆ ಎಂಬುದು ವಿದ್ವಾಂಸರ ಅಬಿಮತವೂ ಆಗಿದೆ.

ಇಲ್ಲಿ ಕನ್ನಡದಲ್ಲಿ ಈ ದ್ವನಿಗಳ ಪ್ರಸರಣ, ಬಳಕೆ, ಇತಿಹಾಸ ಕುರಿತು ಒಂದೆರಡು ವಿಚಾರಗಳನ್ನು ಮಾತಾಡೋಣ. ಅತ್ಯಂತ ಕುತೂಹಲವೂ ವಿಚಿತ್ರವೂ ಎನಿಸಬೇಕಾದ ಈ ದ್ವನಿಗಳಿಗೆ ಸಂಬಂದಿಸಿದ ಒಂದು ವಿಚಾರವೆಂದರೆ ಈ ದ್ವನಿಗಳು ಒಟ್ಟು ಕನ್ನಡದ ಪದಗಳನ್ನು ಗಮನಿಸಿದಾಗ ಕಡಿಮೆ ಪ್ರಮಾಣದ ಪದಗಳಲ್ಲಿ ಮಾತ್ರ ಬಳಕೆಯಲ್ಲಿವೆ. ಇದು ಯಾಕೆ ಎಂಬ ಪ್ರಶ್ನೆ ಅತಿ ಮುಕ್ಯವಾಗುತ್ತದೆ. ಇನ್ನುಳಿದ ವರ‍್ಗೀಯ ದ್ವನಿಗಳಿಗೆ ಹೋಲಿಸಿದಾಗ ಅತಿ ಕಡಿಮೆ ಎನಿಸುವಶ್ಟು ಈ ದ್ವನಿ ಕಾಣಿಸುತ್ತದೆ. ಇನ್ನೊಂದು ವಿಚಾರವೆಂದರೆ ಕನ್ನಡದ ಉಳಿದ ಎಲ್ಲ ವ್ಯಂಜನಗಳೂ ಪದಮೊದಲಿಗೆ ಬಳಕೆಯಾಗುತ್ತವೆ. ’ಙ್’ ಮತ್ತು ’ಞ್’ ದ್ವನಿಗಳು ಇಂದಿನ ಕನ್ನಡದಲ್ಲಿ ಪದಮೊದಲಿಗೆ ಬರುವುದಿಲ್ಲ ಮತ್ತು ಅವು ಕೇವಲ ದ್ವನಿಗಳಾಗಿ ಇವೆ, ಅವು ಕನ್ನಡದಲ್ಲಿ ದ್ವನಿಮಾಗಳಲ್ಲ. ಆದರೆ ಞ್ ದ್ವನಿಯಿಂದ ಆರಂಬವಾಗುವ ಪದಗಳು ಹಳೆಗನ್ನಡದಲ್ಲಿ ಇದ್ದವು. ಙ್ ದ್ವನಿಯಿಂದ ಆರಂಬವಾಗುವ ಪದಗಳು ನನಗೆ ಕಾಣಿಸಿಲ್ಲವಾದರೂ ಇದು ದ್ವನಿಮಾ ಆಗಿ ಬಳಕೆಯಲ್ಲಿ ಇದ್ದಿತು ಎನಿಸುತ್ತದೆ. ಸರಿ, ಹಾಗಾದರೆ, ಈ ಮಡಿಚಿದ ಅಂದರೆ ’ಟ್’ ’ಡ್’ ’ಣ್’ ಮತ್ತು ’ಳ್’ ದ್ವನಿಗಳು ಪದಮೊದಲಲ್ಲಿ ಯಾಕೆ ಬಳಕೆ ಆಗುವುದಿಲ್ಲ ಎಂಬ ಪ್ರಶ್ನೆ ಬರುತ್ತದೆ. ಕೆಲವೆ ಕೆಲವು ಪ್ರಾಕ್ರುತದಿಂದ ಇನ್ನೂ ಕೆಲವು ಪರ‍್ಶಿಯನ್ನಿನಿಂದ ಬಂದ ಪದಗಳಲ್ಲಿ ಮಾತ್ರ ಮಡಿಚಿದ ದ್ವನಿಗಳು ಪದಮೊದಲಲ್ಲಿ ಕಂಡುಬರುತ್ತವೆ. ಹಾಗೆ ಇದಕ್ಕೆ ಇಂಗ್ಲೀಶಿನಿಂದ ಬಂದ ಪದಗಳು ಇತ್ತೀಚೆಗೆ ಸೇರಿಕೊಂಡಿವೆ. ಈ ಮೂರೂ ಬಾಶೆಗಳ ಹಿನ್ನೆಲೆಯ ಪದಗಳಿಗೆ ಒಂದೆರಡು ಉದಾಹರಣೆಗಳನ್ನು ಕೆಳಗೆ ಕೊಟ್ಟಿದೆ.

ಪ್ರಾಕ್ರುತ-ಸಂಸ್ಕ್ರುತ: ಟಾವು, ಡಕ್ಕೆ
ಪರ‍್ಶಿಯನ್-ಅರಾಬಿಕ್: ಟುಮುರಿ, ಡೋಲು
ಇಂಗ್ಲೀಶು: ಟೇಬಲ್ಲು, ಡಾಂಬರು

ಉಳಿದಂತೆ, ಕನ್ನಡದ ಒಳಗೆ ಮಡಿಚಿದ ದ್ವನಿಗಳು ಕೆಲವಡೆ ತಾಲವ್ಯ ದ್ವನಿಗಳನ್ನು ಬದಲಿಸಿ ಬರುತ್ತಿವೆ. ಅತ್ಯಂತ ಕುತೂಹಲದ ಬೆಳವಣಿಗೆಗಳು ಕೆಲವು ವಿವಿದ ಕನ್ನಡದ ಒಳನುಡಿಗಳಲ್ಲಿ ಕಾಣಿಸುತ್ತವೆ. ಯಾದಗಿರಿ ಪರಿಸರದಲ್ಲಿ ’ಲಾಳಿಕಿ’ ಇಂತ ಒಂದೆರಡು ಶಬ್ದಗಳನ್ನು ’ಳಾಳಿಕಿ’ ಎಂಬ ಬದಲಿಸಿಕೊಳ್ಳುತ್ತಿರುವುದನ್ನೂ ಗಮನಿಸಬಹುದು. ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ದಾವಣಗೆರೆ ಕಡೆ ಹೋಗುವ ಬಸ್ಸುಗಳು ನಿಲ್ಲುವ ಅಂಕಣಕ್ಕೆ ಹೋದರೆ, ಅಲ್ಲೆಲ್ಲ ಬೋರ‍್ಡುಗಳಲ್ಲಿ ’ದಾವಣಗೆರೆ” ಕಾಣಿಸುತ್ತದೆ, ಆದರೆ ಬಸ್ಸಿನ ಸಿಬ್ಬಂದಿಗಳು ಕೂಗಿ ಕರೆಯುವಾಗ ಅದು ಕೇಳಿಸುವುದೆ ಇಲ್ಲ, ಬದಲಿಗೆ ಅವರು ಉಚ್ಚರಿಸುವುದು ’ಡಾವ್ಣಗೆರಿ-ಡಾವಣಗೆರೆ”;ಎಂದು. ಹಯ್ದರಾಬಾದ ಎಂದು ಬರೆದರೂ ಹಯ್ಡ್ರಾಬಾದ್/ದು ಕೇಳಿಸುತ್ತದೆ. ಕಲಬುರ‍್ಗಿ ಕನ್ನಡದಲ್ಲಿ ತೆಂಗಿನ ಕಾಯಿಯನ್ನು ’ಟೆಂಗು’ ಎನ್ನುತ್ತಾರೆ, ತೇರನ್ನು ”ಟೇರು’ ಎನ್ನುತ್ತಾರೆ. ಇನ್ನೂ ಒಂದು ವಿಚಾರವೆಂದರೆ ಪ್ರಾಕ್ರುತದಿಂದ ಮಡಿಚಿದ ದ್ವನಿಗಳು ಇರುವ ಪದಗಳು ಬಂದಾಗ ಹಲವೆಡೆ ಅವು ತಾಲವ್ಯ ದ್ವನಿಯಾಗಿ ಬದಲಾಗುತ್ತವೆ. ’ಟಾವು’>’ತಾವು’ ನೆಲೆ, ಜಾಗ ಎಂಬ ಅರ‍್ತದ ಪದ.

ಈ ದ್ವನಿಗಳಿಗೆ ಸಂಬಂದಿಸಿದ ಇನ್ನೊಂದು ಮಹತ್ವದ ವಿಚಾರವೆಂದರೆ ತಮಿಳು ಮತ್ತು ಮಲಯಾಳಂ ಬಾಶೆಗಳಿಗೆ ಹೋಲಿಸಿದಾಗ ಮಡಿಚಿದ ದ್ವನಿಗಳು ಇರುವ ಹಲವು ಪದಗಳ ಸಂದರ‍್ಬದಲ್ಲಿ ತುಸು ಬಿನ್ನತೆಯನ್ನು ಕನ್ನಡ ತೋರಿಸುತ್ತದೆ. ಕನ್ನಡದಾಗ ಮಡಿಚಿದ ದ್ವನಿಗಳು ಇರುವ ಕೆಲವು ಪದಗಳಲ್ಲಿ ತಮಿಳು, ಮಲಯಾಳಂ ಬಾಶೆಗಳಲ್ಲಿ ತಾಲವ್ಯ ದ್ವನಿಗಳು ಇರುವುದು ಗಮನ ಸೆಳೆಯುತ್ತದೆ. ಕೆಳಗಿನ ಉದಾಹರಣೆಗಳನ್ನು ಗಮನಿಸಿ,

ಕನ್ನಡ ತಮಿಳು ಮಲಯಾಳಂ
ಡಪ್ಪು ತಪ್ಪು

ತಪ್ಪು

ತೆಲುಗು ಇಂತ ಪದಗಳಲ್ಲಿ ಕನ್ನಡದ ಹಾಗೆ ಮಡಿಚಿದ ದ್ವನಿಗಳನ್ನು ಹೊಂದಿದೆ.

ಕನ್ನಡದಲ್ಲಿ ಇಶ್ಟುಮಟ್ಟಿಗೆ ಯಾಕೆ ಈ ಮಡಿಚಿದ ದ್ವನಿಗಳು ಬಹುರೂಪಿಗಳಾಗಿ ವರ‍್ತಿಸುತ್ತಿವೆ ಎಂಬುದು ಅತ್ಯಂತ ಕುತೂಹಲಕರವಾದ ವಿಚಾರ.

ಈಗ ಪಂಪ ಎನ್ನ ನುಡಿ ಟಾಟಡಾಡಣ ಎಂದು ಹೇಳಿದ್ದನ್ನು ನೆನಪಿಸಿಕೊಂಡರೆ ಇನ್ನಶ್ಟು ಗೊಂದಲಕ್ಕೆ ಬೀಳುತ್ತೇವೆ. ನಮ್ಮ ಬಸ್ಸಿನ ನಿರ‍್ವಾಹಕರೂ (ಅಂದರೆ ಕನ್ನಡಸಾಮಾನ್ಯರು) ಕೂಡ ಹೀಗೆಯೆ ’ಡ್’ಕಾರ ಪ್ರಿಯರಾಗಿರುವುದು ಯಾಕೆ ಎಂಬುದೂ ಅಶ್ಟೆ ಕುತೂಹಲಕರವಾದ ವಿಚಾರ.

ಇದರೊಟ್ಟಿಗೆ ಇನ್ನೊಂದು ಮಹತ್ವದ ವಿಚಾರವೆಂದರೆ ಕೆಲಕಾಲದ ಹಿಂದೆ ಸಂಸ್ಕ್ರುತದಲ್ಲಿ ಮಡಿಚಿದ ದ್ವನಿಗಳು ಬೆಳೆಯುವುದಕ್ಕೆ ದ್ರಾವಿಡ ಬಾಶೆಗಳ ಪ್ರಬಾವವೆ ಕಾರಣ ಎಂದು ನಂಬಲಾಗಿದ್ದಿತ್ತು. ಆದರೆ, ಈಗ ಇತಿಹಾಸಿಕ ಬಾಶಾವಿಗ್ನಾನ ಈ ನಂಬಿಕೆಯಿಂದ ತುಸು ಬೇರೆ ಕಡೆ ವಾಲುತ್ತಿದೆ. ಅಂದರೆ ಸಂಸ್ಕ್ರುತದಲ್ಲಿ ಮಡಿಚಿದ ದ್ವನಿಗಳು ಬೆಳೆಯುವುದಕ್ಕೆ ದ್ರಾವಿಡದ ಪ್ರಬಾವ ಕಾರಣವಲ್ಲ ಎಂಬ ನಿಲುವನ್ನು ಒಪ್ಪುತ್ತಿದೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...