ನಾಕು ತಂತಿಗಳು ಕವಿಯ ವ್ಯಕ್ತಿತ್ವದ ನಾಲ್ಕು ಮಗ್ಗುಲುಗಳನ್ನು ನಿರೂಪಿಸುತ್ತವೆ


"'ಅಂಬಿಕಾತನಯದತ್ತರು ಮಿಡಿಯುವ ವೀಣೆಗೆ ನಾನು, ನೀನು, ಆನು, ತಾನು ಎಂಬ ನಾಕೇ ನಾಕು ತಂತಿ ಎಂದು ಅವರೇ ಹೇಳಿದ್ದಾರೆ. ನಾನು- ತಂದೆ, ನೀನು- ತಾಯಿ, ಆನು - ಇವರಿಬ್ಬರ ಆಧಾರವಾಗಿ ಬರುವ ಮಗು - ಮತ್ತು ಈ ಕುಟುಂಬ ಸಂಸ್ಥೆಗೆ ಸ್ವಸ್ತಿ ಶುಭಂ ಎನ್ನುವ ಪರಮಾತ್ಮ ಶಕ್ತಿ," ಎನ್ನುತ್ತಾರೆ ಕೃಷ್ಣ ಕಟ್ಟಿ ಯಲಗೂರ. ಅವರು ಬೇಂದ್ರೆಯವರ ‘ನಾಕು ತಂತಿ’ ಕವನ ಸಂಕಲನದ ಕುರಿತು ಬರೆದ ಲೇಖನ.

'ಭೋಗ ಸಾಧನೆಯ ಕವನ ಭಾಂಡಾರವು ಇದೆ.ಯೋಗ ಸಾಧನೆಯ ಕವನ ಮಾರ್ಗವೂ ಇದೆ'.ಸಾಮಾನ್ಯತೆಯ ಅಜ್ಞಾನ ಅಹಂಕಾರಗಳಿಗೆ ನಾವು ಪಟ್ಟಗಟ್ಟಿ ಅದನ್ನು ಶಿಲಾಶಾಪಕ್ಕೆ ಗುರಿಪಡಿಸಬಾರದು. ರಾಮ ಪಾದ ಸ್ಪರ್ಶ ಅದಕ್ಕೂ ಬೇಕು. ಆ ದಿವ್ಯ ದರ್ಶನದಲ್ಲಿ ವ್ಯಾಧನು ವಾಲ್ಮೀಕಿಯಾಗುತ್ತಾನೆ. ಇಂಥ ಹುತ್ತದ ಸುತ್ತ 'ಆನು, ತಾನು, ನಾನು ನೀನಿ ನ' 'ನಾಕುತಂತಿ' ಯ ಈ ಚೌದಂತ ವೀಣೆ ಮಿಡಿಯುತ್ತದೆ. "ಬೇಕಾದರಾಲಿಸುವದು ಬೇಡವಾದರೆ ಪರಾಕು ಮಾಡುವದು" ಎನ್ನುವುದು ಔದ್ಧತ್ಯ ಎನಿಸಿಕೊಳ್ಳಬಾರದು. ಭವ್ಯರು ಲಾಲಿಸಬಹುದು. ಭವಿ ಭಕ್ತರನ್ನು ಜೋಡಿಸುವ ಭವ್ಯ ಪಥ ಇದು.'

ಈ ಸಾಲುಗಳು ಬೇಂದ್ರೆಯವರು 'ನಾಕು ತಂತಿ' ಕವನ ಸಂಗ್ರಹದ ಮೊದಲು ಮುದ್ರಣಕ್ಕೆ ಬರೆದ ಮುನ್ನುಡಿಯಲ್ಲಿವೆ. ಇದು 1964ರಲ್ಲಿ ಪ್ರಕಟವಾಯಿತು. 1974 ನವೆಂಬರ್ ಎಂಟರಂದು 'ನಾಕುತಂತಿ'ಗೆ ' ಜ್ಞಾನಪೀಠ' ಪ್ರಶಸ್ತಿ ದೊರೆಯಿತು. ಅದು ಈಗ 'ಚಿನ್ನದ ನೆನಪು' ಹದಿನಾರನೆ ಮುದ್ರಣದಲ್ಲಿ ಡಾ. ವಾಮನ ಬೇಂದ್ರೆಯವರು ಬರೆದ ಭೂಮಿಕೆಯಲ್ಲಿ ಹೀಗೆ ಹೇಳುತ್ತಾರೆ. 'ಅಂಬಿಕಾತನಯದತ್ತರು ಮಿಡಿಯುವ ವೀಣೆಗೆ ನಾನು, ನೀನು, ಆನು, ತಾನು ಎಂಬ ನಾಕೇ ನಾಕು ತಂತಿ ಎಂದು ಅವರೇ ಹೇಳಿದ್ದಾರೆ. ನಾನು- ತಂದೆ, ನೀನು- ತಾಯಿ, ಆನು - ಇವರಿಬ್ಬರ ಆಧಾರವಾಗಿ ಬರುವ ಮಗು - ಮತ್ತು ಈ ಕುಟುಂಬ ಸಂಸ್ಥೆಗೆ ಸ್ವಸ್ತಿ ಶುಭಂ ಎನ್ನುವ ಪರಮಾತ್ಮ ಶಕ್ತಿ. ತಾನು ಎಂಬುದು ಕವಿಯ ಭಾವ. ತಂದೆ, ತಾಯಿ, ಮಗು ಬಿಟ್ಟರೆ ಜಗತ್ತಿನಲ್ಲಿ ಬೇರೆ ಏನೂ ಇಲ್ಲ. ಇವರ ಕಲಹವೇ ಇತಿಹಾಸ. ಇವರಲ್ಲಿ ಶಾಂತಿ ಪ್ರತಿಷ್ಠಾನಗೊಳ್ಳುವದೇ ದೇವಜನ್ಮ,ನವಯುಗ. ಈ ಸೂತ್ರವನ್ನು ಅನುಸರಿಸಿ 'ನಾಕು ತಂತಿ' ಯೊಳಗಿನ ಅನೇಕ ಕವನಗಳು ರೂಪಗೊಂಡಿವೆ.

ಈ ಕವನ ಸಂಕಲನದಲ್ಲಿ 'ನಾಕುತಂತಿ' ಕವಿತೆ ನಾಲ್ಕು ಭಾಗಗಳಲ್ಲಿವೆ. ಈ ನಾಕು ತಂತಿಗಳು ಕವಿಯ ವ್ಯಕ್ತಿತ್ವದ ನಾಲ್ಕು ಮಗ್ಗುಲುಗಳನ್ನು ನಿರೂಪಿಸುತ್ತವೆ. ಕವಿ ಮನುಷ್ಯನ ಅಂತರಂಗವನ್ನು ರೂಪಕಗಳ ಮೂಲಕ ವರ್ಣಿಸುತ್ತ ತಿಳಿ ಹೇಳಿದ್ದಾರೆ. ಬೇಂದ್ರೆಯವರು ಆ ನಾಲ್ಕು ಮಗ್ಗುಲುಗಳಿಗೆ ನಾನು, ನೀನು, ಆನು,ತಾನು ಎಂದು ಹೆಸರು ಕೊಟ್ಟಿದ್ದಾರೆ. ಆ ಹೆಸರಿನಲ್ಲಿ ಉಸಿರು ತುಂಬಿ ಕಾವ್ಯ ಗಂಗೆಯನ್ನು ಹರಿ ಬಿಟ್ಟಿದ್ದಾರೆ. ಅದು ತೊರೆ,ತೊರೆಯಾಗಿ ಹರಿಯುತ್ತಾ ಓದುಗನನ್ನು ಮುಳುಗೇಳಿಸುತ್ತದೆ.
-ಒಂದು-
ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾS.
ಆವು ಎಂದರೆ ಆಕಳು. ಗೋ, ಕಾಮಧೇನು. ನಮ್ಮಲ್ಲಿ ಆಕಳಿಗೆ 'ಗಾವೋ ವಿಶ್ವಸ್ಯ ಮಾತರ:' ಎಂದು ಹೇಳುತ್ತಾರೆ. ಆವಿನ ಗುಣ ಧರ್ಮ ಈಯುವದು.ಹಾಲುಣಿಸುವದು. ಈಯುವದು ಎಂದರೆ ಪ್ರಸವಿಸುವದು.ಕರು ಹಾಕುವುದು ಎಂದರ್ಥ. ಈ ಆವನ್ನು ಕವಿ, ಕಾವ್ಯ ಸೃಜನ ಹಾಗೂ ಮಾನವ ಸೃಜನದ ರೂಪಕದೊಂದಿಗೆ ಮುನ್ನಡೆಯುತ್ತಾನೆ.

ನಾನು ಹಾಗೂ ನೀನು ಎಂದರೆ ಗಂಡ, ಹೆಂಡತಿ ಆನು ಎಂದರೆ ಅವರಿಬ್ಬರೂ ಕೂಡಿರುವ ದೇವ ಚೈತನ್ಯ. ನಾನು ಎಂದರೆ ಅವನು ಪುರುಷ. ನೀನು ಎಂದರೆ ಪ್ರಕೃತಿ. ಈ ಪ್ರಕೃತಿ ಪುರುಷರಲ್ಲಿ ದೈವಿ ಚೈತನ್ಯದ ಮಿಥುನವಾಗಿ ಅವರಿಂದ ಬರುವ ಸೃಷ್ಟಿಯೇ ಕೂಸು, ಕಂದ. ಭಾರತೀಯ ಪರಂಪರೆಯಲ್ಲಿ ದಾಂಪತ್ಯ ಎನ್ನುವುದು ಶಿವಪಾರ್ವತಿಯರ ಉಪಾಸನೆ ಇದ್ದ ಹಾಗೆ. ನಾನು ಎಂದರೆ ಕವಿ. ನೀನು ಎಂದರೆ ಕಾವ್ಯ ಪ್ರಜ್ಞೆ. ಕವನ ಇವರೀರ್ವರ ಸೃಷ್ಟಿ. ಅದು ಆನು. ತಾನು ಎಂದರೆ ಸಂಗೀತದ ನಾದ. ಅದು ತನನನಾS. ಅದುವೇ ಜೀವನದ ಆನಂದ ಲಹರಿ.

'ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾ?
ಮೊದಲನೆ ನುಡಿಯಲ್ಲಿ ಗೋ ಪ್ರಸವದ ಅರ್ಥವಿದ್ದರೆ, ಎರಡನೇ ನುಡಿಯಲ್ಲಿ ಕವಿಯ ಕಾವ್ಯದ ಪ್ರಸವದ ಅರ್ಥಾಂತರಗಳು ಇವೆ. ನಾನು ಹಾಗೂ ನೀನುಗಳಿಂದ ಸೃಷ್ಟಿಯಾಗುವ ನಿ+ನಾ+ ಆನಿಗೆ, ಯಾವ ಬೇನೆ ಬೇಕು ಎನ್ನುವುದು ನಾನು, ಜಾಣಿ - ಜ್ಞಾನಿ ತಿಳಿದಿದ್ದೇನೆ. ತಿಳಿದು ಕಾವ್ಯವನ್ನು ಸೂರ್ಯನ ಜಾತಿಯಂತೆ ಜ್ಞಾನದ ಕಿರಣವಾಗಿ ನೀಡುತ್ತೇನೆ. ಕಾವ್ಯ ತೇಜಸ್ಸಿನ ಬೆಳಕು. ಇದೇ ಸಂಕಲದ 'ಹೆರಿಗೆ' ಎಂಬ ಪದ್ಯದ ಮೊದಲನೆಯ ಸಾಲು 'ಮೂರ್ಧನ್ಯದ ತೇಜಸ್ಸಿನ ಯಾವದೋ ಕಿರಣ' ಎನ್ನುತ್ತದೆ. ಕಾವ್ಯ ತೇಜೋಮಯವಾಗಿರಬೇಕು.
ಅದಕ್ಕೆ ವೇದ ಹೇಳುತ್ತದೆ ವಾಕ್ ಅಂದರೆ ಮಾತು ಅಗ್ನಿಗೆ ಸಮಾನವಾದದ್ದು. ಬೆಳಕಿನ ಉಪಾಸನೆ ಬೇಂದ್ರೆ ಕಾವ್ಯದ ಪ್ರಧಾನ ಗುಷ ಲಕ್ಷಣ. ಹೆರಿಗೆಯ ಅನುಭವವನ್ನು ನುಡಿ ನುಡಿಸುತ್ತದೆ.
‘ಚಾರು ತಂತ್ರಿಯ
ಚರಣ ಚರಣದ
ಘನ ಘನೀತ ಚತು-
ರ ಸ್ವನಾ'.

ಚಾರು ಎಂದರೆ ನಾಲ್ಕು. ಚಾರು ಎಂದರೆ ಸುಂದರವಾದ.ಈ ಸುಂದರವಾದ ನಾಲ್ಕು ತಂತ್ರಗಳನ್ನು ಹೊಂದಿದ ಕಾವ್ಯ ಸೃಷ್ಟಿ ಪ್ರತಿ ಚರಣದಲ್ಲೂ ಹೊಮ್ಮಿಸುವ ನಾದ ಓಂಕಾರದಿಂದ ಕೂಡಿದೆ.ಈ ಓಂಕಾರ ಬೇಂದ್ರೆಯವರಿಗೆ ಶ್ರಾವಣದ ಮೋಡಗಳ ಆಲಿಂಗನದಿಂದ ಉಂಟಾಗುವ ಶಬ್ದದ ಮೂಲಕ ಕೇಳಿ ಬರುವ ದಿವ್ಯ ಧ್ವನಿ. ಶ್ರವಣೋಪಾಸಕರು ಬೇಂದ್ರೆ. ಶ್ರವಣದಿಂದ ಮುಂದೆ ಮನನ ನಿಧಿ ಧ್ಯಾಸನ. ಅವರ ಎಲ್ಲ ಆಗು ಹೋಗುಗಳು ಶ್ರಾವವಣದಲ್ಲಿಯೇ. ಆದ್ದರಿಂದ ಬೇಂದ್ರೆ 'ಶ್ರಾವಣ'ದ ಕವಿ.ಮೋಡಗಳನ್ನು ಘನ ಎಂದು ಕರೆಯುತ್ತಾರೆ. ಈ ಘನ ಘನೀತ ನೀಡುವ ಚತುರಸ್ವನಾ ಎಂದರೆ, ನಾನು, ನೀನು, ಆನು, ತಾನು, ಎನ್ನುವ ಶಬ್ದಗಳು. ಈ ಶಬ್ದಗಳಿಗೆ ಪರಾ, ಪಶ್ಯಂತಿ, ಮಧ್ಯಮ ಮತ್ತು ವೈಖರಿ. ಎನ್ನುವ ನಾಲ್ಕು ಹಂತಗಳು.

ಮೂಲಾಧಾರ ಚಕ್ರದಲ್ಲಿರುವ ನಿಷ್ಪಂದ ಶಬ್ದ ಬ್ರಹ್ಮಕ್ಕೆ 'ಪರಾ ವಾಕ್'ಎನ್ನುತ್ತಾರೆ. ಅದು ವಾಯುವಿನ ಜೊತೆ ಕೂಡಿ ನಾಭಿಯವರೆಗೆ ಹೋಗಿ ಸ್ವಾಧಿಷ್ಠಾನ ಚಕ್ರದಲ್ಲಿ ಮನಸ್ಸಿನ ಜೊತೆ ಕೂಡಿ 'ಪಶ್ಯಂತಿ ವಾಕ್' ಎನಿಸುತ್ತದೆ. ಆ ಶಬ್ದ ಬ್ರಹ್ಮವು ಹೃದಯದ ವರೆಗೆ ಹೋಗಿ, ಅನಾಹತ ಚಕ್ರದಲ್ಲಿ ನಾದಮಯವಾಗಿ 'ಮಧ್ಯಮಾ ವಾಕ್' ಎಂದಾಗುತ್ತದೆ. ಕಂಠ ಪ್ರದೇಶದಲ್ಲಿ, ವಿಶುದ್ಧಿ ಚಕ್ರದಲ್ಲಿ ಅದು ಕೇಳಲು ಯೋಗ್ಯವಾದ 'ವೈಖರಿ ವಾಕ್' ಆಗುತ್ತದೆ.ನಾಭಿಯಲ್ಲಿ ಮೊಳಕೆಯೊಡೆದು ಕಂಠದ್ವಾರದಿಂದ ಪಂಚ ಭೂತಗಳಿಂದ ಕೂಡಿದ ವಾತಾವರಣಕ್ಕೆ ಬರುವಾಗ, ಬಂದಾಗ ಅದು ಅಂದರೆ ಆ ವಾಕ್ ' ಮಾತು' ಎಂದು ಕರೆಸಿಕೊಳ್ಳುತ್ತದೆ. ಅದನ್ನು 'ಧ್ವನಿ'ಎನ್ನುತ್ತಾರೆ. ಈ ಧ್ವನಿ ಕಂಠದಿಂದ ವದನಕ್ಕೆ ಬಂದು ಕಂಠ್ಯ, ತಾಲವ್ಯ, ಮೂರ್ಧನ್ಯ, ದಂತ್ಯ ಮತ್ತು ಓಷ್ಠ್ಯ ಎಂಬ ರೂಪಾಕ್ಷರಗಳ ಮೂಲಕ ಶಬ್ದಗಳ ಸ್ಫುರಣವಾಗತ್ತದೆ.

ಇಲ್ಲಿ ನಾನು, ನೀನು, ಆನು, ತಾನು ಎನ್ನುವ ಭಾವನೆಗಳನ್ನು ಹೊರಡಿಸುವ ನಾಲ್ಕು ತಂತಿಗಳಾಗಿವೆ. ಬೇಂದ್ರೆಯವರು ಅರವಿಂದರಿಂದ ಪ್ರಭಾವಿತರಾದವರು. ಅವರ ಹಿನ್ನೆಲೆಯಲ್ಲಿ ಗ್ರಹಿಸಿದಾಗ ಕಾವ್ಯ ನಾಲ್ಕು ಸೌಂದರ್ಯಗಳಿಂದ ಕೂಡಿರುತ್ತದೆ. ಐಂದ್ರಿಯಕ ಸೌಂದರ್ಯ, ಬೌದ್ಧಿಕ ಸೌಂದರ್ಯ, ಭಾವನಾತ್ಮಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಸೌಂದರ್ಯ. ಈ ನಾಲ್ಕು ತಂತ್ರಗಳು ಇಲ್ಲಿ ನಾಲ್ಕು ತಂತಿಗಳಾಗಿವೆ. ಭಾರತೀಯ ತತ್ವಜ್ಞಾನದ ಆಳಕ್ಕೆ ಇಳಿದಂತೆ ಇನ್ನೂ ಅನೇಕ ಹೊಸ ಹೊಳೆಯುತ್ತ ಹೋಗುತ್ತವೆ.

'ಹತವೋ ಹಿತವೋ
ಆ ಅನಾಹತ
ಮಿತಿ ಮಿತಿಗೆ ಇತಿ
ನನನನಾ'.

ಅನಾಹತ ಎನ್ನುವುದು ಒಂದು ಚಕ್ರ. ಇದು ಎದೆಯ ಮಧ್ಯದಲ್ಲಿ ಹೃದಯಕ್ಕೆ ಅತ್ಯಂತ ಆಪ್ತವಾಗಿದೆ. ಇದರ ಮಂತ್ರ 'ಯಮ್' ಇದು ಹೊರಡಿಸುವ ನಾದ 'ಸೋಹಂ' ಆದ್ದರಿಂದಲೇ ಬೇಂದ್ರೆಯವರ ಕಾವ್ಯ 'ನಾದಲೀಲೆ. ಅನಾಹತ ಚಕ್ರದಲ್ಲಿ ಹೊಮ್ಮುವ ನಾದಕ್ಕೆ 'ಆಹತ' ತಾಡನ ಬೇಕಾಗಿಲ್ಲ. ಆ ಕಾರಣದಿಂದಲೇ ಅದಕ್ಕೆ ಅನಾಹತ ಚಕ್ರ ಎನ್ನುವರು. ಅನಾಹತ ಚಕ್ರದಿಂದ ಅಂದರೆ ಹೃದಯ ಭಾಗದಿಂದ ಹೊರಡುವ ನಾದ ಶರೀರಿಯಾದ ಈ ಕಾವ್ಯವು ಹತವೋ, ಹಿತವೋ. ಒಳ್ಳೆಯದೋ ಕೆಟ್ಟದ್ದೋ ಎಂದು ಅರಿತವರಾರು?. ಏನೇ ಆಗಲಿ ಅದು ಸ್ವಾತ್ಮಾ ಸಂತೋಷವನ್ನು ಸೂಚಿಸುತ್ತದೆ. ಮನೋನಂದವನ್ನು ನೀಡುವ ಸಂಗೀತಕ್ಕಿದೆ. ನಾದ ಸಂಗೀತದ ಒಂದು ರೂಪ.

'ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ
ತಸ್ವನಾ'

ಈ ನು ಸಹಜ ಪ್ರಸವವನ್ನು ಧ್ವನಿಸುತ್ತದೆ. ಪ್ರಸವಿಸುವ ಸ್ತ್ರೀ ಬೆನ್ನಿಗೆ ಆನಿಕೆಯನ್ನು ಪಡೆದುಕೊಂಡು ಸಹಜ ಪ್ರಸವವನ್ನು ಮಾಡುತ್ತಾಳೆ. ಜನನದ ಜಾನಿಕೆಯಾಗಿ ಮನನದಿಂದ ತನ್ನ ಶಿಶುವಿಗೆ ಮೊಲೆಯುಣಿಸುತ್ತಾಳೆ. ಜನನದ ಧ್ಯಾನವೇ ಜಾನಿಕೆ.ಬೆನ್ನಿಗೆ ಆನಿಕೆ ಅದುವೆ ಆಧಾರ. ಇದು ಕವಿಯ ಕಾವ್ಯ ಸೃಷ್ಟಿಯ ಅವಸ್ಥೆ. ಕವಿಯ ಮನಸ್ಸಿನಲ್ಲಿ ಕಾವ್ಯ ಸೃಷ್ಟಿ,ಅದು ಪ್ರಕಟವಾಗುವ ವಿಚಾರ ಇಲ್ಲಿದೆ. ಕಾವ್ಯದ ಮನನ ಇಲ್ಲಿ ಸ-ಹಿತ-ಸ್ವನಾ ಆಗಿದೆ. ಕಾವ್ಯ ಶಿಶುವಿಗೆ ಸಾಹಿತ್ಯ ಮತ್ತು ಸಂಗೀತ ಜೋಡು ಮೊಲೆಗಳಿದ್ದ ಹಾಗೆ.ಕಾವ್ಯ ದೇವತೆಗಳಿಂದ ವರ ಪ್ರಸಾದ ರೂಪದಲ್ಲಿ ಸ್ತನ್ಯ ಪಾನದ ಅಲೌಕಿಕ ಅನುಭವ ಪಡೆದು, ಸಂಸ್ಕಾರ ಸಂಪನ್ನರಾದವರು ಬೇಂದ್ರೆ. ಬೇಂದ್ರೆಯವರ ದೃಷ್ಟಿಯಲ್ಲಿ ಇದು ಪಡೆದುಕೊಂಡು ಬಂದದ್ದು.

- ಎರಡು-
ಎರಡನೇ ಭಾಗದಲ್ಲಿ ಕವಿಗೆ ಪ್ರತಿಭೆಯ ದರ್ಶನ, ರಸ ಸೃಷ್ಟಿ ಮತ್ತು ಕಾವ್ಯದ ಅಸ್ತಿತ್ವದ ಅರಿವಿನ, ಇರುವಿನ ವಿವರಗಳಿವೆ. ಈ ಕವನದ ಮೊದಲನೇ ಭಾಗವನ್ನು ಋಗ್ವೇದದ ರೂಪದಲ್ಲಿ ನೋಡಬೇಕು. ಆ ಭಾಗದ ಕವನದ ವಾಚನವನ್ನು ಋಗ್ವೇದದ ಮಂತ್ರದಂತೆ ವಾಚಿಸಬಹುದು.ಎರಡನೇ ಭಾಗವನ್ನು ಯಜುರ್ವೇದ ಮಂತ್ರದ ರೂಪದ ಹಿನ್ನೆಲೆಯಲ್ಲಿ ನೋಡಬಹುದು. ಇಲ್ಲಿಯ ಕಾವ್ಯದ ಸಾಲುಗಳನ್ನು ಯಜುರ್ವೇದದ ಮಂತ್ರದ ಪಠಣೆಯ ಸ್ವರೂಪದಲ್ಲಿ ವಾಚಿಸಬಹುದು.
-೧-
'ಗೋವಿನ ಕೊಡುಗೆಯು
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡು ನಡುಗಿ'

ಕಾವ್ಯ ಕನ್ಯೆ ತನ್ನನ್ನು ಅತೀಯಾಗಿ ಪ್ರೀತಿಸುವ ಕವಿಯನ್ನು ಕಾಣಲು ಬರುತ್ತಿದ್ದಾಳೆ. ಅವಳು ಗೋವಿನ ಕೊಡುಗೆ. ಕವಿಯ ಹೃದಯ ಸಮುದ್ರದಲ್ಲಿ ನೌಕಾರೂಢಳಾಗಿ ಬರುತ್ತಿದ್ದಾಳೆ. ನಡು, ನಡುಗಿಸುತ್ತಾ, ನರ್ತಿಸುತ್ತಾ ಬರುತ್ತಿದ್ದಾಳೆ. ಇನ್ನೊಂದು ಅಂಶ, ಕುಂಭಾರು ಬಂದರಿನಿಂದ ಬಂದವರು ಬೇಂದ್ರೆ. ಸಮುದ್ರ ದಂಡೆಯ ಹತ್ತಿರ ಇರುವ ಗುಡ್ಡದ ಮೇಲೆ ಇವರ ಕುಲ ದೇವತೆ ಕುಸುಮೇಶ್ವರಿಯ ಗುಡಿ ಇದೆ. ಕುಸುಮೇಶ್ವರಿ ಎಂದರೆ 'ಹೂ' ಪಾರ್ವತಿ ಎಂದರ್ಥ. ಇವಳು ಬೇಂದ್ರೆಯವರಿಗೆ ಹಡಗದ ಹುಡುಗಿ ಆಗಿರಬಹುದು. ಕವಿಯನ್ನು ಹುಡುಕಿಕೊಂಡು ಬಂದು ಕಾವ್ಯ ದೇವತೆ, 'ಕವಿತೆ' ಎನ್ನುವ ವರ ಪ್ರಸಾವನ್ನು ಕನ್ನಡದಲ್ಲಿ ನೀಡಿದ್ದು ಬೇಂದ್ರೆಯವರಿಗೆ ಮಾತ್ರ. ಎನ್ನುವ ಅಭಿಪ್ರಾಯ ನನ್ನದು. ಹೀಗಾಗಿಯೇ ಬೇಂದ್ರೆ 'ವರಕವಿ' ಜಾತ್ಯಾ ಪ್ರತಿಭಾವಂತ, ಅಧ್ಯಯನದ ಪ್ರಯತ್ನ ನಿರಂತರ. ಅದಕ್ಕೆ ದೈವ, ಅಂದರೆ ದೇವಿಯ, ಕಾವ್ಯ ದೇವತೆಯ ಸಾಥ.
-೨-
'ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೇಯ್ಗೆಯ
ಸಿರಿಯುಡಗಿ'.
ಕವಿ ಸಲಿಗೆಯನ್ನು ಸುಲಿಗೆ ಮಾಡಿ,ಬಯಕೆಯಲ್ಲಿ ಒಲುಮೆಯನ್ನು ವ್ಯಕ್ತಪಡಿಸಿ ಅವಳ ಜೊತೆ ಕಾವ್ಯದಾಟಕ್ಕೆ ಸಂಬಂಧ ಬೆಳೆಸುತ್ತಾನೆ. ಬಂದವಳು ಅಂಬರವನ್ನೇ ಸಿರಿಯುಡಗೆಯನ್ನಾಗಿ ಮಾಡಿಕೊಂಡು ಕವಿ ಎಂಬ ಪ್ರಿಯಕರನನ್ನು ಸಂಧಿಸುತ್ತಾಳೆ. ಇಲ್ಲಿ ಅಪರಿಚಿತಳೂ, ಪರಿಚಿತಳಾಗಿ ಸ್ನೇಹದಲ್ಲಿ ಸಂಚರಿಸುವ ಚಿತ್ರವಿದೆ. ಬಯಲಿನ ನೇಯ್ಗೆ ಎಂದರೆ ದಿಕ್ಕುಗಳೇ ಅವಳಿಗೆ ಅಂಬರವಾದ ದಿಗಂಬರ ಉಡುಗೆ. ಇದೊಂದು ತತ್ವ. ಇದು ಬೃಹತ್ ಭಾವವನ್ನು ಅರ್ಥೈಸುತ್ತದೆ. 'ಭಾವ'ಎಂದರೆ ಬೇಂದ್ರೆಯವರಿಗೆ ಸತ್ಯದ ಪ್ರತಿಮೆ. ಕವಿ ಹಾಗೂ ಕಾವ್ಯ ಕನ್ನಿಕೆಯ ನಡುವೆ ಇರುವ ಪರಸ್ಪರತೆಯಲ್ಲಿ ಯಾವ ಮುಚ್ಚು ಮರೆ ಇಲ್ಲ. ಇಂತಹ ಕಾವ್ಯ ಕನ್ನಿಕೆಯಲ್ಲಿ ಕವಿಗಿರುವದು ಬಯಕೆಯ ಒಲುಮೆ. ಕವಿಗೆ ಕಾವ್ಯ ಕನ್ನೆಯನ್ನು ನೀಡಿದ್ದು ಮೊದಲ ನುಡಿಯಲ್ಲಿ ಬಂದ ತಾಯಿ.
-೩-
'ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರಿ ಸೋಲುವ
ಸೊಲ್ಲಿನಲಿ'.
ಕಾವ್ಯ ಕನ್ನಿಕೆಯ ನಡಿಗೆ ಕವಿಯ ನಾಡಿಯನ್ನು ಸ್ಪಂದಿಸುತ್ತದೆ. ಇಲ್ಲಿ ನಾಡಿ ಎಂದರೆ ಯೋಗದ ನಾಡಿಗಳು. ಲೌಕಿಕ ಪ್ರತಿಮೆ ಅಲೌಕಿಕತೆಗೆ ಕವಿಯನ್ನು ಕರೆದುಕೊಂಡು ಹೋಗುತ್ತದೆ. ಇಲ್ಲಿ ನಡೆಯುವ ವ್ಯಾಪಾರ ಯೋಗ ಶರೀರದ ನಾಡಿಯದು. ಮೂರು ಮುಖ್ಯ ನಾಡಿಗಳಾದ ಇಳಾ, ಪಿಂಗಳ ಮತ್ತು ಸುಷುಮ್ನಾ.ಈ ನಾಡಿ ಪ್ರಕ್ರಿಯೆಯಿಂದ ದೇಹದಲ್ಲಿ ಒಂದು ಅತೀಂದ್ರಿಯ ಶಕ್ತಿಯ ಪ್ರವಾಹವಾಗುತ್ತದೆ. ಆ ಶಕ್ತಿ ಕವಿಯ ನಲುವಿನ ನಾಲಿಗೆಗೆ ಒಂದು ಆಹ್ಲಾದಕರವಾದ ಆನಂದದ ಅನುಭವವನ್ನು ಕೊಡುತ್ತದೆ. ಕವಿ ಅದಕ್ಕೆ ಸೋಲುತ್ತಾನೆ. ಅಂದರೆ ಮರಳಾಗುತ್ತಾನೆ. ಮರಳಾಗುವದು 'ವಾಕ್' ಗೆ. ಮಾತಿಗೆ ಮರಳಾಗುವದು ಸರ್ವೇ ಸಾಮಾನ್ಯ.
-೪-
'ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿ ಮಳಿ
ಸನಿಹ ಹನಿ'.

ಇದುವರೆಗೆ ಯಾರೂ ಮುಟ್ಟದಂತಹ ಜೇನು ಹುಟ್ಟನ್ನು, ಕವಿ ಕಾವ್ಯ ಕನ್ಯೆಯಲ್ಲಿ ಕಾಣುತ್ತಾನೆ. ಜೇನು ಹುಟ್ಟಿನಲ್ಲಿ ರಾಣಿ ಜೇನುಹುಳು ಬಹಳ ಮುಖ್ಯವಾದಂತಹ ವಸ್ತು. ಈ ಕಾವ್ಯ ಕನ್ಯೆ ಕವಿಯ ಹತ್ತಿರ ಬಂದು ಮಾತಿನ ಜೇನಿನ ಮಳೆಯನ್ನು ಹನಿಸುತ್ತಾಳೆ. ಅದು ಕವಿಯ ಮನವೆಂಬ ಕಾವ್ಯಾಂಗಳದಲ್ಲಿ ಥಳಿ ಹೊಡೆದ ಹಾಗಿರುತ್ತದೆ. ಅದು ಕವಿಗೆ ಕಾವ್ಯ ಕಟ್ಟುವಿಕೆಗೆ ಲಭ್ಯವಾಗುವ ದಿವ್ಯಾನುಭವ. ಅಂಗಳದ ಥಳಿ ಸೃಜನ ಶಕ್ತಿಯ ರೂಪ.ಅದರಿಂದ ಸೃಷ್ಟಿ, ಪುನಸೃಷ್ಟಿ. ಇಲ್ಲಿ ಕವಿ ತನ್ನ ನಾಲಿಗೆಗೆ ಎರಡು ಅನುಭವವನ್ನು ಪಡೆಯುತ್ತಾನೆ ಒಂದು ಜೇನಿನದು, ಇನ್ನೊಂದು ಮಾತಿನದು. ಅಂದರೆ 'ವಾಕ್' ಧೀರ್ಘವಾಗಿ ವಿಚಾರ ಮಾಡಿದರೆ ಎರಡು ಅನುಭವದ ಫಲ ಒಂದೇ.
-೫-
'ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವದೊ
ನಾ ತಿಳಿಯೆ'.

ಈ ಎಲ್ಲ ವ್ಯಾಪಾರದಿಂದ ಕವಿ ಬೆಚ್ಚಿದ್ದಾನೆ. ಎಂದರೆ ಒಂದು ರೀತಿಯ ಆನಂದದ ಉದ್ವೇಗಕ್ಕೆ ಒಳಗಾಗಿದ್ದಾನೆ. ಆ ಸ್ಥಿತಿಯ ವೆಚ್ಚ ಏನೆಂದರೆ ಕಾವ್ಯದ ಬಸರಿನ ಮೊಳಕೆ. ಒಡಮೂಡಿದ ಕಾವ್ಯ ತನ್ನೊಡಲಿನಲ್ಲಿ ಏನೇನೋ ಹಚ್ಚಿಕೊಂಡಿದೆ ಎಂಬುದು ಕವಿಗೆ ನಿಗೂಢವಾಗಿದೆ. ಅದಕ್ಕೆ ಅತ್ಯಂತ ವಿನಯದಿಂದ 'ನಾ' ತಿಳಿಯೇ ಎಂದು ಹೇಳುತ್ತಾನೆ. 'ನ'ಶಬ್ದ ವಾಚಕದಿಂದ ಕಾವ್ಯದ ಆರಂಭ. ನ+ಆ= ನಾ.ಕಾವ್ಯಕ್ಕೆ ಆಧಾರವಾದ ನಾದ ದೇವತೆಯನ್ನು ನೋಡಿ ವರ ಪಡೆಯಲು ನಾ ಎಂಬ ಅಹಂಕಾರ ಹೋಗಬೇಕು ಎಂಬ ನಿಲುವು ಬೇಂದ್ರೆಯವರದಾಗಿತ್ತು.
-೬-
ಭೂತದ ಭಾವ
ಉಧ್ಭವ ಜಾವ
ಮೊಲೆ ಉಡಿಸುವವಳು
ಪ್ರತಿಭೆಯ ನವ'.

ಈ ಭಾಗದ ಕೊನೆ ನುಡಿಯಲ್ಲಿ ಕವಿ ಹೇಳುವದು 'ಭೂತದ ಭಾವ'. ಇಲ್ಲಿ ಭೂತ ಎಂದರೆ ಅಸ್ತಿತ್ವ. ಯಾವುದು ಇದೆಯೋ ಅದೆಲ್ಲ ಭೂತ. ಆ ಭೂತದ ಭಾವ ಉದ್ಭವವಾಗದೆ ಅನುಭವವಿಲ್ಲ. ಈ ಭೂತ ಮತ್ತು ಭಾವ ಎರಡೂ ಶಬ್ದವನ್ನು ಬೇಂದ್ರೆಯವರು ಪಡೆದದ್ದು ವಿಷ್ಣು ಸಹಸ್ರನಾಮದಿಂದ. 'ಭೂತಕೃತ್ ಭೂತಭೃತ್ ಭಾವೋ, ಭೂತಾತ್ಮಾ ಭೂತ ಭಾವನಾ' ಇ ಸಾಲಿನಲ್ಲಿ ಬರುವ ಆರು ಭೂತ ಶಬ್ದಗಳನ್ನು ಭಿನ್ನ, ಭಿನ್ನ ಸ್ಥರಗಳಲ್ಲಿ ಬೇಂದ್ರೆಯವರು ತಮ್ಮ ಕಾವ್ಯದಲ್ಲಿ ತಂದಿದ್ದಾರೆ. 'ಭೂತ'ಎಂದರೆ ಸತ್ಯ. ಯತಾರ್ಥವಾದ ನಿಜ ಎಂದು ಒಂದರ್ಥ. 'ಭಾವ' ಎನ್ನುವ ಶಬ್ದಕ್ಕೆ ನೂರಾರು ಅರ್ಥಗಳು. ಸಮಗ್ರ ಬೇಂದ್ರೆ ಕಾವ್ಯದಲ್ಲಿ ಈ ಶಬ್ದದ ಎಲ್ಲ ಸ್ವರೂಪಾರ್ಥಗಳು ಬಂದಿವೆ. ಇಲ್ಲಿ ಭಾವ ಎಂದರೆ ಆನಂದ. ದೋಷ ಮತ್ತು ಸೋಮ ಇಂದು ಸೂರ್ಯ ಚಂದ್ರಾದಿಗಳನ್ನು ಬೆಳಕಿಸಿ ಜಗತ್ತನ್ನು ಸಲಹುವನು. ಅದರಂತೆ ಬೇಂದ್ರೆ ಕಾವ್ಯ ದೋಷ ಮತ್ತು ಸೋಂಕು ಇರದ ಸೂರ್ಯ ಚಂದ್ರರಂತೆ ಬೆಳಕು ನೀಡುವ ಅನುಭವಾನಂದ ಕಾವ್ಯ. ಈ ಕಾವ್ಯವನ್ನು ನನಗೆ ನೀಡುವವಳು ಕಾವ್ಯ ದೇವತೆ.ಅದನ್ನು ನನಗೆ ಉದ್ಭವ ಜಾವದ ಮೊಲೆ ಉಡಿಸುವವಳು. ಅದು ನವ ಪ್ರತಿಭೆ.'ಪ್ರತಿಭಾಯಾ ನವ ನವೋಶ್ಮೇನ ಶಾಲಿನಿ'.

- ಮೂರು-
'ಚಿತ್ತಿ ಮಳಿ ತತ್ತಿ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿsಯೋ ಮಗನs
ಅಂತ ಕೂಗಿದರೂ
ಸಾವೀ ಮಗಳೂ ಭಾವೀ
ಮಗಳೂ
ಕೂಡಿ'.

ಚಿತ್ತಿ ಮಳಿ ಮತ್ತ ಸ್ವಾತಿ ಮಳಿ ಎರಡೂ ಗೆಳೆತನದ ಮಳೆಗಳು. ಈ ಎರಡೂ ಮಳೆಗಳನ್ನು ಕುರಿತು ನಮ್ಮ ದೇಶದ ರೈತನ ಉಡಿಯಲ್ಲಿ ಅನೇಕ ಒಡಪುಗಳು, ಲೋಕೋಕ್ತಿಗಳು ಇವೆ. 'ಚಿತ್ತಿ ಮಳೆ ರೈತನಿಗೆ ಭಾಷೆ ಕೊಟ್ಟ ಮಳೆ'. 'ಸ್ವಾತಿ ಮಳೆ ಬಂದರೆ ಮುತ್ತಿನಂಥ ಬೆಳೆ'. ಇನ್ನೂ ಅನೇಕ ಈ ರೀತಿಯ ಮಾತುಗಳಿವೆ. ಇವು ಮಳೆ, ಇಳೆ ಜೀವನ ಇವುಗಳ ನಡುವೆ ಅವಿನಾ ಭಾವ ಸಂಬಂಧವನ್ನು ತಿಳಿ ಹೇಳುತ್ತವೆ.

ಚಿತ್ರಾ ನಕ್ಷತ್ರದಲ್ಲಿ ಬೀಳುವ ಮಳೆ ಎಲ್ಲಿ ಬೀಳುತ್ತದೆ ಎನ್ನುವುದನ್ನು ಖಾತ್ರಿ ಹೇಳಲು ಬರುವುದಿಲ್ಲ. ಅದಕ್ಕೆ ಅದನ್ನು 'ಕುಡ ಚಿತ್ತಿ' ಎಂದು ಕರೆಯುತ್ತಾರೆ. ಬೇಂದ್ರೆಯವರು ಈ ಮಳೆಯನ್ನೇ ಕುರಿತು ಒಂದು ಪದ್ಯವನ್ನೇ ಬರೆದಿದ್ದಾರೆ. ಈ ಮಳೆಯ ಒಂದು ವಿಶಿಷ್ಟ ಎಂದರೆ ಅದು ಎಲ್ಲಿ ಸುರಿಯುತ್ತದೆಯೋ ಅಲ್ಲಿ ಭರಪೂರ ಬೆಳೆ. ಮಳೆ ಮತ್ತು ಬೆಳೆ ಇವರ ಸಂಬಂಧವೇ ಬದುಕು. ಕವಿಯ ಅಂತರಂಗದಲ್ಲಿ ಈ ಚಿತ್ತಿ ಮಳೆ ತತ್ತಿಯನ್ನು ಇಡುತ್ತದೆ. ಅದು ಕಾವ್ಯ ಭಾವದ ತತ್ತಿ. ಆ ಕಾವ್ಯ ಭಾವ ಸಫಲವಾಗಿ ಫಲ ದೊರೆಯಬೇಕಾದರೆ, ಚಿತ್ತಿ ನಂತರದ ಸ್ವಾತಿ ಮಳೆ ಬರಲೇಬೇಕು. ಆ ಮಳಿ ಸಿಂಪಿನಲ್ಲಿ ಸೇರಿ ಅಲ್ಲಿರುವ ಹುಳದ ಜೊತೆಗೆ ಸ್ನೇಹ ಮಾಡಿ, ಪ್ರೀತಿಯ ಸಂಬಂಧ ಬೆಳಸಿದಾಗ ಮುತ್ತು ಹುಟ್ಟುತ್ತದೆ. ಮುತ್ತಿನ ಹುಟ್ಟಿಗೆ ಚಿತ್ತಿ+ ಸ್ವಾತಿ ಬಹಳ ಮುಖ್ಯ. ಚಿತ್ತ ಎಂದರೆ ಮನಸ್ಸು. ಮನಸಿಜನ ಜೊತೆ ಸ್ವಾತಿ ಸೇರಿ ಸಿಂಪಿನಲ್ಲಿ ಸೇರಿಕೊಂಡು ಮುತ್ತು ನೀಡತ್ತದೆ. ಅದಕ್ಕೆ ಯಾವುದೇ ಕ್ರಿಯಾಪದ ಹಾಕು ಅದು ಕಾವ್ಯದ ಬೀಜವಾಗುತ್ತದೆ. ಸ್ವಾತಿ ಮಳೆಯ ಬರುವಿಕೆಗಾಗಿ ಶಿಂಪು ನೀರಿನಲ್ಲಿ ಮೇಲಮುಖವಾಗಿದ್ದುಕೊಂಡು ತುಸು ಬಾಯಗಲಿಸಿ ಸೂರ್ಯನಾರಾಯಣನು ನೀಡುವ ಸ್ವಾತಿ ಮಳೆಗೆ ಹಾದಿ ನೋಡುತ್ತಿರುತ್ತದೆ. ಇದು ಭಕ್ತ ಭಗವಂತನ ಹಾದಿ ನೋಡುವದು, ಭಗವಂತ ಭಕ್ತನ ಹಾದಿ ನೋಡುವದು ನಮ್ಮ ಭಾರತೀಯ ಭಕ್ತಿ ಪಂಥದ ಪರಂಪರೆಯಲ್ಲಿ ಕಾಣುತ್ತೇವೆ. ಹಾಗೆ ಬೇಂದ್ರೆಯವರು ಈ ಸಾಲಿನೊಳಗೆ ಅದನ್ನು ಕಾಣಬಯಸುತ್ತಾರೆ. ಚಿತ್ತಿಯ ತತ್ತಿ. ಶಿಂಪಿನಲ್ಲಿ ಬೆಚ್ಚಗೆ ಕುಳಿತು, ಸ್ವಾತಿ ಮಳೆಯ ಒಂದು ನೀರಿಗಾಗಿ ಕಾದು. ಅದು ಒಳ ಸೇರಿದ ಕೂಡಲೇ ಶಿಂಪಿನ ಎರಡೂ ಮಗ್ಗಲುಗಳು ಗಟ್ಟಿಯಾಗಿ ಕೂಡಿಕೊಂಡು ಒಳಗೆ ರಸ ಸಂಯೋಗಗೊಂಡು ಮುತ್ತಗೆ ಜನ್ಮ ಕೊಡುತ್ತವೆ. ಇದು ಎಲ್ಲ ಶಿಂಪುಗಳಲ್ಲಿ, ಎಲ್ಲ ಕಾಲದಲ್ಲಿ ನಡೆಯುವದಿಲ್ಲ.ಅದಕ್ಕೆ 'ತತಿ'ಬೇಕು. ರೈತ ಬಿತ್ತನೆಗೆ ತತಿ ನೋಡುತ್ತಾನೆ. ಹಾಗೆ ಇದು ಬೇಂದ್ರೆಯವರಗೆ ಕಾವ್ಯದ ತತಿ. ಇದು ದೈವ ಲೀಲೆ. ಈ ಎರಡೂ ಮಳೆಯ ರೂಪಕದೊಂದಿಗೆ ತಮ್ಮ ಕಾವ್ಯೋದ್ಯೋಗವನ್ನು ಹೇಳುತ್ತಾರೆ.

'ಸತ್ತಿಯೋ ಮಗನ ಅಂತ ಕೂಗಿದರು' ಆ ಕೂಗು ನನಗ ಕೇಳಸ್ತು ಕೂಗಿದವರು ಬೇರೆ ಯಾರು ಅಲ್ಲ. ಸಾವಿ ಮಗಳು, ಭಾವಿ ಮಗಳು. ಇಬ್ಬರು ಕೂಡಿ ಕೂಗಿ ಹೇಳಿದರು. ಇದು ಒಂದು ರೀತಿಯ ಎಚ್ಚರ. ಬೇಂದ್ರೆಯವರಿಗೆ ಮೊದಲಿನಿಂದಲೂ ಕಾಲದ ಅರಿವು ಇದ್ದೇ ಇದೆ. ಅವರ ಹಕ್ಕಿ ಹಾರುತಿದೆ ನೋದಿರಾ ಕಾಲನನ್ನು ಕುರಿತೇ ಹೇಳುವ ಕವಿತೆ. ಮಗನ ಬಗ್ಗೆ ತಾಯಿಗೆ ಇರುವ ಕಾಳಜಿ ದೊಡ್ಡದು. ಅದನ್ನು ತಮ್ಮ ಕಾವ್ಯ ಜೀವನದುದ್ದಕ್ಕೂ ಅನುಭವಿಸಿದವರು ಬೇಂದ್ರೆ. ಸಾವಿ ಎಂದರೆ ಭೂತ, ಭಾವಿ ಎಂದರೆ ಭವಿಷ್ಯ ಆ ಎಚ್ಚರವನ್ನು ಸಾವೀ ಮಗಳು ಭಾವಿ ಮಗಳು ಕೂಡಿ ಬೇಂದ್ರೆಗೆ ನೀಡುತ್ತಾರೆ. ಇಲ್ಲಿ ಇನ್ನೊಂದು ಅರ್ಥವನ್ನು ಪರಿಗೃಹಿಸಬಹುದು ಸಾವಿ ಎಂದರೆ ಅರವಿಂದರ ಸಾವಿತ್ರಿ, ಭಾವಿ ಎಂದರೆ ತಮ್ಮ ಉಪಾಸ್ಯ ದೇವತೆ ಗಾಯತ್ರಿ. ಇವರಿಬ್ಬರೂ ಸಂಧ್ಯೋಪಾಸನೆಯಲ್ಲಿ ಜೊತೆಯಾಗಿ ಬರುತ್ತಾರೆ. 'ಸಂಧ್ಯಾಯನಮ:,
ಸಾವಿತ್ರಿಯನಮ:, ಗಾಯತ್ರಿಯನಮ:, ಸರಸ್ವತ್ಯೈನಮ:' ಇದು ಅವರ ಕಾವ್ಯಾನುಸಂಧಾನ. ಈ ಉಪಸನಾ ಜೊತೆಗೆ ಆ ಛಂದಸ್ಸನ್ನು ಕುರಿತು ಹೇಳುತ್ತಾರೆ. 'ಗಾಯಂತಂ ತ್ರಾಯತೆ ಇತಿ ಗಾಯತ್ರಿ'. ಹಾಡಿದವನನ್ನು ಕಾಪಾಡುವಳು ಎಂದರ್ಥ. ಮೂರನೇ ವೇದ ಸಾಮವೇದ. ಗಾಯನ ಛಂದಸ್ಸು ಇದರ ಪ್ರಧಾನ ಲಕ್ಷಣ. ಸಾಮವೇದ ಸಂಹಿತೆ ಇಂದು ಬಹು ಭಾಗ ಉಳಿದುಕೊಂಡದ್ದು ಕಾಶ್ಮೀರದಲ್ಲಿ. ನಮ್ಮ ನಾಡಿನಲ್ಲಿಯೂ ಸಹಿತ ಅನೇಕ ವೇದ ವಿದ್ಯಾಪೀಠಗಳಲ್ಲಿ ಸಾಮವೇದವ ಸಂಹಿತಾ ಗಾನರೂಪದಲ್ಲಿ ಹೇಳುವವರಿದ್ದಾರೆ. ನಭದ ಗಾನವನ್ನು ಕೇಳಿ ತಮ್ಮ ಪಾಡನ್ನು ಹಾಡಾಹಿಸಿದವರು ಬೇಂದ್ರೆ. ಅವರ ಕಾವ್ಯ ಸತ್+ ಚಿತ್+ ಆನಂದ.
-೨-
'ಈ ಜಗ,ಅಪ್ಪ ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ'

ಈ ಜಗಕ್ಕೆ ಮಗ ಅಪ್ಪ ಅಮ್ಮನ ದೈವಿ ಮಿಲನದಿಂದ ಬಂದಿದ್ದಾನೆ, ಬರುತ್ತಾನೆ ಹಾಗೆ ಬರಬೇಕು. ಇದು ಬೇಂದ್ರೆಯವರ ಭಾರತೀಯ ಕುಟುಂಬ ದರ್ಶನ. ಆದ್ದರಿಂದಲೇ ಅವರು ಹೇಳಿದ್ದು 'ಸಮರಸವೇ ಜೀವನ' ಭರತನ ರಸ ಸಿದ್ಧಾಂತ ಕೇವಲ ಸಾಹಿತ್ಯಕ್ಕಲ್ಲ. ಜೀವನಕ್ಕ ಅಂತ ಹೇಳಿದ ಜಗತ್ತಿನ ಏಕಮೇವ ಕವಿ ಬೇಂದ್ರೆ. ಆದ್ದರಿಂದಲೇ ಅವರು ಒಂದಡೆ ಹೇಳಿದ್ದು. 'ಯುಗದ ಕವಿಗೆ ಜಗದ ಕವಿಯ ವಂದನೆ'. ಬಂದ ಮಗು ಅಪ್ಪ + ಅಮ್ಮನ ಹೋಲಿಕೆ. ಪ್ರಸವದ ನಂತರ ಒಬ್ಬರನ್ನೊಬ್ಬರು ನೋಡಿ ಬಂದ ಕಂದನನ್ನು ನೋಡುವದು ಸಂಪ್ರದಾಯ, ರೂಢಿ ಮತ್ತು ಪರಂಪರೆ. ಅಂತ:ಪಟ ಸರಿದಾಗ ಅಲ್ಲಿ ಒಬ್ಬರನ್ನೊಬ್ಬರು ನೋಡಿ ನಾಚಿ, ನೀರಾಗಿ ನೋಡಿದ ಅನುಭವದ ಸುಖ, ಇಲ್ಲಿ ಒಬ್ಬರನ್ನೊಬ್ಬರು ನೋಡಿ ಕಂದನನ್ನು ನೋಡುವದರಲ್ಲಿ ಇರುವ ಆನಂದ ಅಲೌಕಿಕ. ಅದರ ಜೊತೆಗೆ ಅದು ಮುಂದೆ ಅವರಿಬ್ಬರ ಕಂದ ಅಷ್ಟೇ ಅಲ್ಲ ಎಲ್ಲರ ಕಂದ. ಹಾಗೆ ಬೇಂದ್ರೆ ಕಾವ್ಯ. ಅವರು ಹೇಳುತ್ತಾರೆ ಈ ಕವನಗಳಿಗೆ ನಾನೇ ಜನ್ಮ ಕೊಟ್ಟಿನಿ, ಆದರ ಅವು ನನ್ನುವಷ್ಟೇ ಅಲ್ಲ 'ಕನ್ನಡದ ಕವನಗಳು' ಜಗತ್ತಿನಲ್ಲಿ ಎಲ್ಲಿ ಭಾವ ಇದೆ ಅಲ್ಲಿ ಬೇಂದ್ರೆ.

ತಾಯಿ, ತಂದೆಗೆ ಕೊಟ್ಟು,ಭಾರ ಹೊತ್ತು, 'ಭಾರ್ಯಾ' ಎನಿಸಿಕೊಳ್ಳುತ್ತಾಳೆ. ಭೂದೇವಿ ಭಗವಂತನ ಭಾರ್ಯೆ. ತಂದೆ ಭರ್ತಾ ಎನಿಸಿಕೊಳ್ಳುತ್ತಾನೆ. 'ಭರ್ತಾ ಸೃಷ್ಟಿಕರ್ತ' ಈ ಮಾತು ಕಾಳಿದಾಸನ ರಘುವಂಶದ ಶ್ಲೋಕವನ್ನು ನೆನಪಿಸುತ್ತದೆ.
'ವಾಗರ್ಥಾವಿವ ಸಂಪೃಕ್ತೌ
ವಾಗರ್ಥ ಪ್ರತಿಪತ್ತಯೇl
ಜಗತ: ಪಿತರೌ ವಂದೇ
ಪಾರ್ವತಿ ಪತಮೇಶ್ವರೌll
'ವಾಕ್' ನಲ್ಲಿ ಪ್ರತಿಫಲನವಾಗುವದು ಅರ್ಥ. ಅಂದರೆ ಅಮ್ಮನ ಮುಖದಲ್ಲಿ ಕಾಣುವದು, ಅಪ್ಪನ ಮುಖವೇ. ಅಂಬಿಕಾತನಯದತ್ತನು ನಾನು ದೈವೀ ಮಿಥುನದ ಕಂದ.ಪಾರ್ವತಿಯ ಮಗ ನಾನು.'ಅಂಬಿಕಾ' ಶಬ್ದದಲ್ಲಿ ಶಿವಪಾರ್ವತಿಯರ ಕೂಡುವಿಕೆ ಇದೆ. 'ಅ' ಎಂದರೆ ಪಾರ್ವತಿ. ಇದು ಹೃಸ್ವಾಕ್ಷರದ ಮೊದಲನೆಯ ಅಕ್ಷರ. ಇದು 'ಅಂ' ಆದಾಗ 'ಓಂ' ಕಾರದ ಎರಡಕ್ಷರಗಳೂ ಸೇರಿವೆ. ಅ ಮತ್ತು ಮ.'ಕ' ಎಂದರೆ ಮಹೇಶ್ವರ. ಇದು ವ್ಯಂಜನಾಕ್ಷರಗಳಲ್ಲಿ ಮೊದಲನೆಯದು.'ಅಂಬಿಕೆ' ತಾಯಿ ಇದರಿಂದ 'ಅಂಬಾ'. ನಮ್ಮಲ್ಲಿ ಆಕಳವನ್ನು ಕರೆಯುವ ಒಂದು ಶಬ್ದ 'ಅಂಬಾ' ಎಂದು. ನಾಕುತಂತಿಯ 'ಆವು' ಈ 'ಅಂಬಾ' ನನ್ನು ಕೂಡಿಕೊಳ್ಳುತ್ತದೆ. 'ನಾನು' ವಾತರ್ಥದ ಕಂದ, ಶ್ರೀಗುರುದತ್ತ ಎನ್ನುತ್ತಾರೆ ಬೇಂದ್ರೆ. 'ಅಂದ' ಎಂದರೆ ಚೆಂದ. 'ಅಂದ'ಎಂದರೆ ನುಡಿದನು. ಎನ್ನುವ ಅರ್ಥಸ್ವರೂಪವು ಬರುತ್ತದೆ. ಅದರ ಜೊತೆಗೆ ಈ ದತ್ತನು ಎಲ್ಲ ದೃಷ್ಟಿಯಿಂದ ಅಂದವಾಗಿದ್ದಾನೆ, ಚೆಂದವಾಗಿದ್ದಾನೆ. ಅಂದ ಚೆಂದವಾದದ್ದು.

- ನಾಲ್ಕು-
'ನಾನು' 'ನೀನು'
'ಆನು' 'ತಾನು'
ನಾಕೆ ನಾಕು ತಂತಿ

ಈ ನುಡಿ ಬಹಳ ವೈಶಿಷ್ಟ್ಯದಿಂದ ಕೂಡಿದೆ. ಅದರ ಚರಣಗಳನ್ನು ನೋಡಿರಿ. ಮೊದಲೆರಡ ಸಾಲಿನ ನಾಕು ಶಬ್ದಗಳು ಪ್ರತ್ಯೇಕ ಅವತರಣಿಕೆಯಲ್ಲಿ ಇವೆ. ಎಲ್ಲವಕ್ಕೂ ವೈಯಕ್ತಿಕ ಗುರುತಿಸುವಿಕೆಯೊಂದಿಗೆ, ಅರ್ಥವ ಇದೆ.ಬಿಡಿಯನ್ನು ಇಡಿಯಾಗಿ ನೋಡುವದು ಬೇಂದ್ರೆ ಕಾವ್ಯ. ಬೇಂದ್ರೆಯವರೇ ಹೇಳುವಂತೆ ಕವಿತೆಯ ನಾಕನೇ ಭಾಗ 'ವಾಗರ್ಥ'ದ ದಾಂಪತ್ಯವನ್ನು ಇಲ್ಲಿ ಒಡೆದು ಎಂದರೆ ಬಿಡಿಸಿ ಎಂದರ್ಥ. 'ಒಡಪ ಬಿಡಿಸಿ ಹೇಳು' ಅಂತ. ಬದುಕಿನ ದಾಂಪತ್ಯ ದರ್ಶನವನ್ನು ಸಮಾಜಕ್ಕೆ ಅರಿಸುತ್ತದೆ. 'ನಾನು' ಎಂದರೆ ಪುರುಷ. ಶಿವ ಸಾನಿಧ್ಯ. 'ನೀನು' ಎಂದರೆ ಪ್ರಕೃತಿ. ಪಾರ್ವತಿ. ಈ ಎರಡರ ಸಾನಿಧ್ಯದ ಮಿಲನ'ಆನು'. 'ಆ' ಎಂದರೆ ಸಂತೋಷ. ದಾಂಪತ್ಯದ ಫಲ ಸಂತೋಷವನ್ನುಂಟು ಮಾಡುತ್ತದೆ.ಸಂತೋಷವನ್ನುಂಟು ಮಾಡುವುದು ದಾಂಪತ್ಯದ ಪ್ರಧಾನ ಗುಣ ಲಕ್ಷಣ. ಆ ದಿಂದ ನು. ಆನು ಎಂದರೆ ಅದು ಕಂದ. ಮಗು. ಕವಿಗೆ ಅದು ಕಾವ್ಯ. ವಾಗರ್ಥದ ಫಲ. 'ತಾನು' ಎಂದರೆ 'ಸಂಪೃಕ್ತ'. ಎಂದರೆ ಎಲ್ಲದರ ಒಟ್ಟುಗೂಡುವಿಕೆ. ಕೂಡು ಕುಟುಂಬ. ಏಕ ಛತ್ರಾದಿವಾಸ. ಇದು ಕವಿಯ ಕಾವ್ಯ ಸಂಸಾರ. ಇದು ಚೈತನ್ಯದ ರೂಪ. ಈ ನುಡಿಯ ಕೊನೆಯ ಸಾಲು ಸ್ಪಷ್ಟವಾಗಿ ಹೇಳುತ್ತದೆ 'ನಾಕೇ ನಾಕು ತಂತಿ' ಸಾಮರಸ್ಯವೇ ಅಸ್ತಿತೆಯ ಸೂತ್ರ.
-೨-
'ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.'

ಬೇಂದ್ರೆಯವರ ಮೊದಲ ಕವನ ಸಂಕಲನದ ಹೆಸರು ಗರಿ. 1936 ರಲ್ಲಿ ಪ್ರಕಟವಾಯಿತು. ತಮ್ಮ ಕಾವ್ಯದ ಹೇಗೆ ಗರಿಯನ್ನು ಕಟ್ಟಿಕೊಂಡು ಬಾನಿನಲ್ಲಿ ಬರುತ್ತದೆ ಎಂಬುದನ್ನು ಮಂಡೂಕ ಉಪನಿಷತ್ತಿನ ವಾಕ್ಯದ ಸಿದ್ಧಾಂತದ ಅಡಿಯಲ್ಲಿ ಹೇಳಿದ್ದಾರೆ. 'ಪ್ರಣವೋ ಧನು ಶರೋ ಹ್ಯಾತ್ಮಾ ಬ್ರಹ್ಮ ತಲ್ಲಕ್ಷ ಮುಚ್ಚತೆl ಅಪ್ರಮತ್ತೇನ ವೇದ್ಧವ್ಯಂ ಶರವತ್ತನ್ಮಯೋ ಭವೇತ್'ll ಓಂಕಾರವೇ ಬಿಲ್ಲು, ಮನಸ್ಸೇ ಬಾಣವು, ಅನಂತ ಗುಣವಾದ ಪರಬ್ರಹ್ಮವೇ ಗುರಿಯಾಗಿರುತ್ತದೆ. ಗುರಿ ತಪ್ಪದೆ ಮನಸ್ಸನ್ನು ಪರಮಾತ್ಮನಲ್ಲಿ ನೆಡಬೇಕು. ಆಗ ಬಾಣವು ಲಕ್ಷದೊಳಗೆ ಹೋಗಿ ಸೇರುವಂತೆ ಉಪಾಸಕನೂ ಪರಮಾತ್ಮನಲ್ಲಿಯೇ ಮಗ್ನನಾಗುತ್ತಾನೆ.

ಈ ವಿವರಣೆ ಬೇಂದ್ರೆಯವರ ಕಾವ್ಯದಲ್ಲಿ ಮತ್ತೆ, ಮತ್ತೆ ನಮ್ಮ ಮುಂದೆ ಬರುತ್ತದೆ. ತಮ್ಮ ಉಪಾಸನ ದೈವವಾದ ಗಣಪತಿಯನ್ನು ಕರೆದುಕೊಂಡು ಬಂದು ಈ ನುಡಿಯಲ್ಲಿ ಅಧಿಷ್ಟಿಸುತ್ತಾರೆ. 'ಓಂ ಓಂ ದಂತಿ' ಎಂದು.' ಓಂ. ಅ+ಉ+ ಮ=ಓಂ. ಸೊಲ್ಲಿಸಿದರು, ನಿಲ್ಲಿಸಿದರು. ಮಾತನ್ನು
ಸಲ್ಲಿಸಿದರು, ಸಮರ್ಪಿಸಿದರು. ಕಾವ್ಯ ದೇವತೆಯನ್ನು ಕೈ ಹಿಡಿದು ನಿಲ್ಲಿಸಿ ಮಾತನಾಡಿಸಿದರು. ಇದಕ್ಕೆ ತಮ್ಮ ಮನೆತನದ ದಂತಿಯನ್ನು ಕರೆದುಕೊಂಡು ಬಂದು ಗಣನಾಯಕನನ್ನು ಮಾಡಿದರು. ಈ ಗಣನಾಯಕನನ್ನು ಮಾಡಿದ ವಿವರವನ್ನು ಕೊಡುತ್ತಾರೆ.
'ಮೈ ಮಾಯಕ' ಮೈ ಎನ್ನುವ ಶಬ್ದವನ್ನು ಸಾಮಾನ್ಯವಾಗಿ ಸ್ತ್ರೀ ವಾಚಕವಾಗಿ ಬಳಕೆಯಾಗುತ್ತದೆ. ಬ್ರಾಹ್ಮಣರ ಮನೆಗಳಲ್ಲಿ ಹೆಣ್ಣು ಮಕ್ಕಳ ಸ್ನಾನಕ್ಕೆ ಬಳಸುವ ಶಬ್ದ 'ಮೈ' ಆತೇನು. ಈ ಮೈ ಸ್ನಾನಕ್ಕೂ ಪಾರ್ವತಿಗೂ, ಗಣಪತಿಗೂ ಒಂದು ಅವಿನಾಭಾವ ಸಂಬಂಧ. 'ಮೈ ಮಾಯಕ'. ಶರೀರ ಮಾಯಾ ಶರೀರ. ' ಸೈ ಸಾಯಕ' ಮಾಡಿ. ಸಾಯಕ ಎಂದರೆ ಬಾಣ. ಆ ಬಾಣದ ವಿವರವನ್ನು ಈ ನುಡಿಯಲ್ಲಿ ಹೇಳಿದ್ದಾರೆ. ಒಂದು ನಿರ್ದಿಷ್ಟ ಗುರಿಯೊಂದಿಗೆ ಜೀವನ ಜನಾರ್ಧನನ್ನು ನೋಡಬೇಕು. ಅದು ಕಾವ್ಯೋಪಾಸನೆಯಿಂದ ಮಾತ್ರ ಸಾಧ್ಯ ಎಂದು ಬೇಂದ್ರೆ ಸ್ಪಷ್ಟವಾಗಿ ಹೇಳುತ್ತಾರೆ. ಅದು ಸಾಧ್ಯವಾಗುವದು ಧಾತು- ಮಾತು ಕೂಡಿದಾಗ. ಧಾತು ಎಂದರೆ ಅರ್ಥ. ಮಾತು ಎಂದರೆ ವಾಕ್, ಅದವೇ ವಾಗರ್ಥ. ಶಿವ+ ಪಾರ್ವತಿಯರ ಕೂಡುವಿಕೆ. ಪ್ರಕೃತಿ+ ಪುರುಷರ ದೈವಿ ಮಿಲನದಿಂದ 'ಆನು' ಪಡೆದು 'ತಾನಾ'ಗಿ ನಾಕೆ ನಾಕು ತಂತಿಯನ್ನು ನುಡಿಸುತ್ತ ಪ್ರಣವೋಪಾಸನೆಯೊಂದಿಗೆ ನಮ್ಮೆಲ್ಲರ ಬದುಕು ಬ್ರಹ್ಮಾನಂದದಿಂದ ಕೂಡಿರಬೇಕು ಎನ್ನುತ್ತದೆ ಬೇಂದ್ರೆಯವರ' ನಾಕು ತಂತಿ'

MORE FEATURES

ಇಡೀ ಪುಸ್ತಕದ ತುಂಬ ನಮ್ಮೂರಿನ ಪಾತ್ರಗಳಿವೆ

24-04-2025 ಬೆಂಗಳೂರು

"ಮಾನವೀಯ ಮೌಲ್ಯಗಳಿಗೆ ದನಿಯಾದ ಈ ಕಥೆಗಳಿಗೆ ಒಮ್ಮೆ ಜೀವ ಸವರಿ, ಝಲ್ಲೆನಿಸಿಬರುವ ಶಕ್ತಿಯಿದೆಯೆಂದರೆ ಅತಿಶಯೋಕ್ತಿಯಲ...

ರಂಗಾಸಕ್ತರಿಗೆ ಒಳ್ಳೆಯ ಮಾರ್ಗದರ್ಶನ

24-04-2025 ಬೆಂಗಳೂರು

"ಗಿರೀಶ್ ಕಾರ್ನಾಡ್ ಅವರ "ಹೂವು" ನಾಟಕ ಅರ್ಚಕನೊಬ್ಬ ವೇಶ್ಯೆಗೆ ಒಲಿದು , ಹೂಗಳಿಂದ ಅವಳನ್ನು ಸಿಂಗರಿಸು...

‘ಥೇರವಾದ’ ಎಂದರೆ ಹಿರಿಯರ ಹಾದಿ ಬೌದ್ಧಧಮ್ಮದ ಅತ್ಯಂತ ಹಳೆಯ ಶಾಖೆ

24-04-2025 ಬೆಂಗಳೂರು

"ಒಂದು ಜೀವಂತವಾದ, ಚಲನಶೀಲವೂ ಸಂವೇದನಾಶೀಲವೂ ಆದ ಸಂಸ್ಕೃತಿ, ಸಮುದಾಯ ಅಥವಾ ಸಿದ್ಧಾಂತವು ತನ್ನನ್ನು ತಾನೇ ತಿದ್ದಿಕ...