ಮೈಸೂರ ಮಲ್ಲಿಗೆ ಎಂಬ ಅಮರ ಕಾವ್ಯ

Date: 21-12-2020

Location: .


ಕನ್ನಡದ ಪ್ರೇಮಕವಿ ಎಂದೇ ಖ್ಯಾತಿಯ ಕೆ. ಎಸ್. ನರಸಿಂಹಸ್ವಾಮಿ ಅವರ ಅಚ್ಚಳಿಯದ ಕವನ ಸಂಕಲನ ‘ಮೈಸೂರು ಮಲ್ಲಿಗೆ’. ಇನ್ನೊಂದು ವರ್ಷದಲ್ಲಿ ಎಂಬತ್ತು ತುಂಬಿಯೂ ಹರೆಯದಂತಿರುವ ಈ ದಾಂಪತ್ಯ ಕಾವ್ಯ ಗುಚ್ಛ ಕುರಿತು ವಿಮರ್ಶಕ-ಲೇಖಕ ಶ್ರೀಧರ ಹೆಗಡೆ ಭದ್ರನ್‌ ಅವರು ಬರೆದ ವಿಶೇಷ ಬರಹ ಇಲ್ಲಿದೆ.

“ಮೈಸೂರ ಮಲ್ಲಿಗೆಯನ್ನು ತಂಗಾಳಿಗೊಡ್ಡಿದ ನರಸಿಂಹಸ್ವಾಮಿಯವರ ಪ್ರತಿಭೆ ಅಪ್ಸರೆಯಂತೆ, ಈ ಲಾವಣ್ಯವು ಮಣ್ಣು ನೆಲದಿಂದ ಬಂದುದಲ್ಲ ಎನಿಸಿಬಿಟ್ಟಿದೆ” (ವರಕವಿ ಬೇಂದ್ರೆ); “ಮೈಸೂರ ಮಲ್ಲಿಗೆ ಕಸ್ತೂರಿಯ ನೆಲದಲ್ಲಿ ಬಿತ್ತಿ ಬೆಳೆಯಿಸಿದ ಹೂದೋಟ” (ಡಿ.ಎಲ್.ಎನ್.) ಎಂಬ ಪ್ರಶಂಸೆಗೆ ಹೊಸಗನ್ನಡದ ಮೊದಲ ತಲೆಮಾರಿನ ರಸಿಕರಿಂದ ಹಾಗೂ “ಮಧ್ಯಮ ವರ್ಗದ ಜೀವನದ ಮಹಾಕಾವ್ಯ” (ನರಹಳ್ಳಿ ಬಾಲಸುಬ್ರಹ್ಮಣ್ಯ); “ಅಮರ ಯೌವನಶೀಲ ಕಾವ್ಯ” (ಎಚ್.ಎಸ್.ವಿ) ಎಂಬ ಮೆಚ್ಚುಗೆಯನ್ನು ಎರಡನೆಯ ತಲೆಮಾರಿನ ಓದುಗರಿಂದ ಹಾಗೂ ಕಿವಿಯಿಂದ ಎದೆಗೆ ಇಳಿವ ರಸಧಾರೆಯಾಗಿ ಇಂದಿನ ಹೊಸ ತಲೆಮಾರೂ ಅಪ್ಪಿಕೊಂಡಿರುವ ಹೊಸಗನ್ನಡ ಕಾವ್ಯ ಪರಂಪರೆಯ ಚಿರಕೃತಿಗಳಲ್ಲಿ ಒಂದು ಎಂದೇ ಖ್ಯಾತವಾದುದು ಕೆ. ಎಸ್. ನರಸಿಂಹಸ್ವಾಮಿಯವರ ‘ಮೈಸೂರ ಮಲ್ಲಿಗೆ.
ಇನ್ನೊಂದೇ ವರ್ಷದಲ್ಲಿ (2022) ಎಂಬತ್ತು ತುಂಬಿಯೂ ಹರೆಯದ ಕಳೆಯಿಂದ ನಳ ನಳಿಸುವ ಕಾವ್ಯ ಗುಚ್ಛ ಮೈಸೂರ ಮಲ್ಲಿಗೆ. ಆರಂಭದಲ್ಲಿ ಪ್ರೇಮ ಕವನಗಳ ಸಂಕಲನ ಎಂದೇ ಹೆಸರಾಗಿತ್ತು. ನಂತರ ಕವಿಯೇ ಇದನ್ನು ‘ದಾಂಪತ್ಯ ಗೀತೆ’ಗಳು ಎಂದು ಕರೆದಿದ್ದಾರೆ. ಈ ಬಗ್ಗೆ ಕವಿ ನರಸಿಂಹಸ್ವಾಮಿಯವರ ಮಾತು ಇಂತಿದೆ; “ನನ್ನ ಮದುವೆ ನಡೆದದ್ದು 1936ರಲ್ಲಿ, ಅದರ ಪೂರ್ವಾರ್ಧದಲ್ಲಿ. ‘ಮೈಸೂರ ಮಲ್ಲಿಗೆ’ ಬಿಡುಗಡೆಯಾದದ್ದು 1942ರ ಜನವರಿ ತಿಂಗಳಲ್ಲಿ. ನಡುವಣ ಆರು ವರ್ಷಗಳಲ್ಲಿ ನಾನು ಸುಮಾರು ಅರವತ್ತು ಕವನಗಳನ್ನು ಬರೆದಿದ್ದೆ. ಈ ಪದ್ಯಗಳನ್ನು ಬರೆದದ್ದು ನಾನು ಮಾವನ ಮನೆಯಲ್ಲಿದ್ದಾಗ ಮತ್ತು ಮೈಸೂರು ಪುರಸಭಾ ಕಚೇರಿಯಲ್ಲಿ 25 ರೂ. ಸಂಬಳದ ಗುಮಾಸ್ತನಾಗಿದ್ದಾಗ. ಇವುಗಳನ್ನು ಪ್ರೇಮಗೀತೆ ಅನ್ನುವುದಕ್ಕಿಂತ ದಾಂಪತ್ಯ ಗೀತೆ ಎನ್ನುವುದು ಹೆಚ್ಚು ಸೂಕ್ತ.”
ಹೊಸಗನ್ನಡದ ಮುಂಗೋಳಿ ಮುದ್ದಣನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಸರಸ ದಾಂಪತ್ಯದ ಚಿತ್ರಣ; ಬಿ. ಎಂ. ಶ್ರೀ.ಯವರ ಇಂಗ್ಲಿಷ್ ಗೀತೆಗಳು ಹಾಗೂ ತೀ. ನಂ. ಶ್ರೀ.ಯವರ ‘ಒಲುಮೆ’ ಕವನ ಸಂಕಲನಗಳಲ್ಲಿ ಕ್ವಚಿತ್ತಾಗಿ ಮುಂದುವರಿದಿತ್ತು. ಅದು ಮೈದುಂಬಿ ಹರಿದಿದ್ದು ಕೆ. ಎಸ್.ನ. ಅವರಲ್ಲಿ. ಶ್ರೀಯವರ ಸಂವೇದನೆ ಇಂಗ್ಲಿಷ್ ಕಾವ್ಯದಿಂದ ರೂಪುಗೊಂಡಿದ್ದಾದರೆ ತೀನಂಶ್ರೀಯವರ ಕಾವ್ಯ ಶಕ್ತಿ ಸಂಸ್ಕೃತ-ಪ್ರಾಕೃತ ಕಾವ್ಯ ಪ್ರಪಂಚದಿಂದ ಉತ್ಸ್ಪೂರ್ತಗೊಂಡದ್ದು. ಕೆ. ಎಸ್. ನ. ಕಾವ್ಯದ ಮೂಲಶಕ್ತಿ ಈ ನೆಲದಿಂದ ಎದ್ದು ಬಂದದ್ದು ಎನ್ನುವುದು ಕವಿ ಸಾಧಿಸಿದ ಹೆಗ್ಗಳಿಕೆಯಾಗಿದೆ. ಇದನ್ನೇ ನರಸಿಂಹಸ್ವಾಮಿಯವರು ಹೇಳಿದ್ದು; “ನಾನು ಯಾವ ವಿದ್ವಜ್ಜನರ ಕವಿ ಹೇಳಿ? ನನ್ನನ್ನು ಜನಪದ ಕವಿ ಅನ್ನೋ ಜನಾನೂ ಇದಾರೆ. ನಾನು ಸಾಮಾನ್ಯ ಜನರ ಕವಿ.”
1936 ರಿಂದ 1942ರ ಅವಧಿಯಲ್ಲಿ ಕೆ.ಎಸ್.ನ. ಬರೆದ ಕವನಗಳ ಸಂಕಲನ ಮೈಸೂರ ಮಲ್ಲಿಗೆ. ಪದ್ಯಗಳನ್ನು ಬರೆದ ಹಾಗೆಯೇ ನರಸಿಂಹಸ್ವಾಮಿಯವರು ಅವುಗಳನ್ನು ತಮ್ಮ ಕಾವ್ಯಗುರು ತೀನಂಶ್ರೀಯವರಿಗೆ ಕಳುಹಿಸುತ್ತಿದ್ದರು. ಅವರು ತಾವು ಒಪ್ಪಿದ ಪದ್ಯಗಳನ್ನು ‘ಪ್ರಬುದ್ಧ ಕರ್ನಾಟಕ’ಕ್ಕೆ ಕಳುಹಿಸುತ್ತಿದ್ದರು. ಅಲ್ಲಿದ್ದ ಇನ್ನೊಬ್ಬ ಗುಣಗ್ರಾಹಿ ವೆಂಕಣ್ಣಯ್ಯನವರು ಅವುಗಳನ್ನು ಆ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಆ ಕಾಲದಲ್ಲಿ ಇದೊಂದು ಬಹಳ ದೊಡ್ಡ ಗೌರವವೇ ಆಗಿತ್ತು ಎಂದು ಕೆ.ಎಸ್.ನ. ಹಲವೆಡೆ ಸ್ಮರಿಸಿದ್ದಾರೆ. ಇವುಗಳಲ್ಲಿ 21 ಪದ್ಯಗಳು `ಪ್ರಬುದ್ಧ ಕರ್ನಾಟಕ'ದ 23ನೆಯ ಸಂಪುಟದ ಮೂರನೆಯ ಸಂಚಿಕೆಯಲ್ಲಿ (1942) ಅನುಬಂಧದ ರೂಪದಲ್ಲಿ ಒಂದು ಗುಚ್ಛವಾಗಿ ಪ್ರಕಟವಾದವು. ಹಾಗೆ ನೋಡಿದರೆ ಇದೇ ಮೈಸೂರ ಮಲ್ಲಿಗೆಯ ಮೊದಲ ಆವೃತ್ತಿ ಎನ್ನಬಹುದು. ನಂತರ ಮಹಾರಾಜ ಕಾಲೇಜಿನ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಎ. ಆರ್. ಕೃಷ್ಣಶಾಸ್ತ್ರಿಗಳು ಅದನ್ನು ಸ್ವತಂತ್ರ ಸಂಕಲನ ರೂಪದಲ್ಲಿ ಪ್ರಕಟಿಸಿದರು. ಕವಿ ನರಸಿಂಹಸ್ವಾಮಿಯವರು ನೀಡಿದ್ದ 60 ಕವನಗಳಲ್ಲಿ ತೀನಂಶ್ರೀಯವರು ಮೊದಲ ಆವೃತ್ತಿಯಲ್ಲಿ ನಲವತ್ತೈದು ಪದ್ಯಗಳನ್ನು ಆಯ್ಕೆ ಮಾಡಿದ್ದರು. ಮುಂದೆ ಮತ್ತೆ ನಾಲ್ಕು ಸೇರ್ಪಡೆಗೊಂಡವು. ಕುತೂಹಲದ ಸಂಗತಿಯೆಂದರೆ ಸಂಕಲನಕ್ಕೆ ಹೆಸರು ಸೂಚಿಸಿದವರು; ಮೈಸೂರಿನ ಕ್ಲಾಕ್ ಟವರ್ ಬಳಿಯಿದ್ದ ಮುಸ್ಲಿಂ ಹೂವಿನ ವ್ಯಾಪಾರಿ. ಕನ್ನಡದಲ್ಲಿ ಇದುವರೆಗೆ ಅತಿಹೆಚ್ಚು ಬಾರಿ, ಅಂದರೆ ಸಮೀಪ ನಲವತ್ತು ಮರುಮುದ್ರಣಗಳನ್ನು ಕಂಡಿರುವ ಜನಪ್ರಿಯ ಕವನ ಸಂಕಲನವಿದು. 1943ರಲ್ಲೇ ಮೈಸೂರ ಮಲ್ಲಿಗೆಗೆ ದೇವರಾಜ ಬಹದ್ದೂರ ಬಹುಮಾನ ಸಂದಿದೆ.
ಮೈಸೂರ ಮಲ್ಲಿಗೆಯ ಕವನಗಳಲ್ಲಿ ಕಾಣಿಸುವ ಕೌಟುಂಬಿಕ ಜಗತ್ತು ಪರಿವರ್ತನೆಯ ಹಂತದಲ್ಲಿರುವುದು. ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ಕೂಡುಕುಟುಂಬ ಪರಿಕಲ್ಪನೆ ಶಿಥಿಲವಾಗುತ್ತಾ ಕಿರು ಕುಟುಂಬಗಳ ಸ್ವರೂಪ ಧಾರಣ ಮಾಡುತ್ತಿದ್ದ ಕಾಲಘಟ್ಟ. ಅದರಲ್ಲೂ ಆಧುನಿಕ ಶಿಕ್ಷಣ ಪಡೆದು ನೌಕರಿಯಲ್ಲಿರುವವರು ಕುಟುಂಬವನ್ನು ಊರಿಂದ ಊರಿಗೆ ಸಾಗಿಸಬೇಕಾದ ಹಂತದಲ್ಲಿ ಸಾಮಾನ್ಯವಾಗಿ ಗಂಡ-ಹೆಂಡತಿ-ಮಕ್ಕಳು ಇವಿಷ್ಟೇ ಕುಟುಂಬದ ಜೀವದ್ರವ್ಯವಾಗುವ ಸಂದರ್ಭವದು. ಮೂಲ ಕುಟುಂಬದೊಂದಿಗೆ ಸಂಬಂಧವನ್ನು ಕಳೆದುಕೊಳ್ಳದ ಭಾವನಾತ್ಮಕತೆ ಉಳಿದಿದ್ದ ಪರಿಸರವದು. ಕವಿ ನರಸಿಂಹಸ್ವಾಮಿಯವರ ಬದುಕು ಹಾಗೂ ಕವನಗಳ ನಾಯಕನ ಬದುಕು ಸಾಮ್ಯ ಪಡೆದುಕೊಳ್ಳುವುದು ಇದೇ ಹಂತದಲ್ಲಿ. ಬದುಕನ್ನು ಸಂಭ್ರಮಿಸುವ ಮುಖ್ಯವಾದ ಎಳೆ ಕೆ.ಎಸ್.ನ. ಕಾವ್ಯದ ಜೀವಾಳ. ಮೈಸೂರ ಮಲ್ಲಿಗೆಯ ಕವನಗಳಲ್ಲಿ ಸಾಂಪ್ರದಾಯಿಕ ಭಾವನೆಗಳು ಮತ್ತು ಆಚರಣೆಗಳು; ದಂಪತಿಗಳಾಗಿ ತಾವು ಹಾಗೂ ಸಮಾಜದೊಂದಿಗೆ ನಾವು ಎಂಬ ಭಾವವನ್ನು ದಟ್ಟವಾಗಿ ಅಭಿವ್ಯಕ್ತಿಸಿವೆ. ವ್ಯಕ್ತಿಗಿಂತ ಸಮುದಾಯ ಮುಖ್ಯ ಎಂಬ ಗ್ರಹಿಕೆ ಇಲ್ಲಿಯ ಕವನಗಳಲ್ಲಿ ಜೀವ ತಳೆದಿದೆ. ಜನ ಸಾಮಾನ್ಯರು ಹೀಗೆ ಕಾವ್ಯದೊಳಗೆ ಪ್ರವೇಶ ಪಡೆದಿದ್ದಾರೆ.
ಜಿ. ಎಸ್. ಎಸ್. ಗುರುತಿಸಿರುವಂತೆ; “ದೈನಂದಿನ ಪರಿಚಿತ ಪ್ರಪಂಚದಲ್ಲಿ ನಾವು ಕಾಣಬೇಕಾದದ್ದು ಗುರುತಿಸಬೇಕಾದದ್ದು , ಮೆಚ್ಚಬೇಕಾದದ್ದು ಹೇಗೆ ಮರೆಯಾಗಿದೆ (ಮರೆಯಾಗುತ್ತಿದೆ!) ಅನ್ನುವುದನ್ನು ಕವಿತೆಯ ಚೌಕಟ್ಟು ಹಾಕಿ ಕೆ.ಎಸ್.ನ. ಜನಕ್ಕೆ ತೋರಿಸುವ ಮೋಡಿ ಮಾಡಿದರು.” ಹೀಗೆ ಮಾಡುವಾಗ ಸಾಮಾನ್ಯವಾದದ್ದನ್ನು ಅಸಾಮಾನ್ಯ ಎಂಬಂತೆಯೋ ಅಥವಾ ಅಲೌಕಿಕವೆಂಬಂತೆಯೋ ಉತ್ಪ್ರೇಕ್ಷಿಸುವ ಧ್ವನಿ ಇಲ್ಲಿಲ್ಲ. ಎಲ್ಲರಿಗೂ ಪರಿಚಿತವಾದ ಪ್ರಪಂಚವನ್ನೇ ಹೃದಯಕ್ಕೆ ಹತ್ತಿರವಾಗುವಂತೆ ಕೆ.ಎಸ್.ನ. ಭಾವನಾತ್ಮಕವಾಗಿ ತೆರೆದಿಟ್ಟಿದ್ದಾರೆ. ನರಹಳ್ಳಿಯವರು ತಮ್ಮ ಪ್ರಬಂಧದಲ್ಲಿ ಉಲ್ಲೇಖಿಸಿರುವ ಶರತ್ ಕಲ್ಕೋಡರ ಮಾತು ಈ ಸಂದರ್ಭದಲ್ಲಿ ಸ್ಮರಣ ಯೋಗ್ಯವಾದುದು; “ತೆಂಗುಗಳು ತಲೆದೂಗಿ ಬಾಳೆಗಳು ತೋಳು ಬೀಸುವ ಚಿತ್ರ ಹೇಗೋ ನಮ್ಮೂರಿನ ಅಡಿಕೆ ಬಾಳೆ ತೋಟಗಳೊಂದಿಗೆ ತಳುಕು ಹಾಕಿಕೊಳ್ಳುತ್ತಿದ್ದ ಬೆಸುಗೆ ಆ ಹಾಡುಗಳು ಆತ್ಮೀಯವಾಗಲು ಕಾರಣ. ‘ಬಳೆಗಾರ ಚೆನ್ನಯ್ಯ’ ನಮ್ಮೂರಿನ ಮನೆ ಮನೆ ಸುತ್ತುತ್ತಿದ್ದ ಬಳೆಗಾರ ರಾಮನ ವ್ಯಕ್ತಿತ್ವದಲ್ಲಿ ಪರಕಾಯ ಪವೇಶ ಮಾಡುತ್ತಿದ್ದುದು ವಿಚಿತ್ರವಾದರೂ ಸತ್ಯ.” ಅಂದರೆ ದೈನಂದಿನ ಬದುಕಿನ ಪಾತ್ರಗಳೊಂದಿಗೆ ಮೈಸೂರ ಮಲ್ಲಿಗೆಯ ಪಾತ್ರಗಳು ಪಡೆಯುವ ತಾದಾತ್ಮ್ಯ ಅವುಗಳ ಜೀವಂತಿಕೆಗೆ ಕಾರಣವಾಗಿದೆ. ಸ್ವತಃ ಕವಿ ಈ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ.
***
ದಾಂಪತ್ಯದ ಅಮೃತ ಫಲವಾದ ಕೌಟುಂಬಿಕ ಜೀವಸೆಲೆ ಮೈಸೂರ ಮಲ್ಲಿಗೆಯ ಸ್ಥಾಯೀ ಜಗತ್ತು. ಗಂಡು-ಹೆಣ್ಣು ಮದುವೆಯ ಮೂಲಕ ಒಂದಾಗುವ ಪ್ರಕ್ರಿಯೆಯಿಂದ ಆರಭವಾಗುವ ದಾಂಪತ್ಯ ಕುಟುಂಬವಾಗಿ ಬೆಳಗುವ ಪರಿಯನ್ನು ಅನ್ಯಾದೃಶವಾಗಿ ಇಲ್ಲಿಯ ಕವನಗಳಲ್ಲಿ ಕೆ.ಎಸ್.ನ. ಚಿತ್ರಿಸಿದ್ದಾರೆ.
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ

ಎಂದು ಆರಂಭವಾಗುವ ಗಂಡು-ಹೆಣ್ಣಿನ ಆಲಂಬನೆಯ ಹಲವು ಮಗ್ಗುಲುಗಳು ಮೈಸೂರ ಮಲ್ಲಿಗೆಯ ಕವನಗಳಲ್ಲಿ ಅನಾವರಣಗೊಂಡಿವೆ. ‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ’ ಎಂದು ಸೋಜಿಗಪಡುತ್ತಲೇ ಅವಳ ಪ್ರೀತಿ, ಮೋಹದ ರಭಸ, ತೀವ್ರತೆಗಳನ್ನೂ ಆತ ಕಂಡುಕೊಳ್ಳುತ್ತಾನೆ. ಇದು ನವಿರಾದ ಪ್ರತಿಮಾ ಜಗತ್ತಿನ ಮೂಲಕ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಹೀಗೆ ಮದುವೆಯಾಗಿ ಬಂದವಳು ಕೆ. ಎಸ್. ನ. ಕಾವ್ಯನಾಯಕನಿಗೆ ‘ಗೃಹಲಕ್ಷ್ಮಿ’;

ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ
ಎಂದು ಅವಳನ್ನು ಬಣ್ಣಿಸುವ ಆತ; ಕವಿತೆಯ ಕೊನೆಯಲ್ಲಿ ತಮ್ಮ ದಾಂಪತ್ಯದ ಸಾರ್ಥಕತೆಯನ್ನು ಹೀಗೆ ವಿವರಿಸುತ್ತಾನೆ;

ತಾರೆಗಳ ಮೀಟುವೆವು ಚಂದಿರನ ದಾಟುವೆವು
ಒಲುಮೆಯೊಳಗೊಂದು ನಾವು
ನಮಗಿಲ್ಲ ನೋವು, ಸಾವು.

ಮದುವೆಯ ಸಂದರ್ಭದಲ್ಲಿ ನೊಂದಿರುವ ಮಾವನವರನ್ನು ಆತ ಹೀಗೆ ಸಮಾಧಾನಪಡಿಸಿದ್ದ;

ಒಬ್ಬಳೇ ಮಗಳೆಂದು ನೀವೇಕೆ ಕೊರಗುವಿರಿ
ಒಬ್ಬಳೇ ಮಡದಿಯೆನಗೆ
ಹಬ್ಬದೂಟದ ನಡುವೆ ಕಣ್ಣೀರ ಸುರಿಸದಿರಿ
ಸುಮ್ಮನಿರಿ ಮಾವನವರೇ

ಅಂತಹ ಮಡದಿಯ ವಿಶ್ವಾಸವನ್ನು ಗಳಿಸಿಕೊಂಡಿರುವ ನಾಯಕ ಹೆಮ್ಮೆಯಿಂದ ‘ಬಾರೆ ನನ್ನ ಶಾರದೆ’ಯಲ್ಲಿ;
ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ?
ನಾನು ಕೂಗಿದಾಗಲೆಲ್ಲ
ಬರುವಳೆನ್ನ ಶಾರದೆ!
ಹಿಂದೆ ಮುಂದೆ ನೋಡದೆ
ಎದುರು ಮಾತನಾಡದೆ.
ಎಂದು ಹೆಮ್ಮೆಯಿಂದ ತಾನು ಮಡದಿಯನ್ನು ಒಲಿಸಿಕೊಂಡಿರುವ ಸಂಗತಿಯನ್ನು ಬಯಲು ಮಾಡುತ್ತಾನೆ. ¸ರಸ ದಾಂಪತ್ಯದ ಮಧ್ಯೆ ಅವಳ ಅನುಪಸ್ಥಿತಿ ನಾಯಕನನ್ನು ನೋಯಿಸುತ್ತದೆ;

ಹೊಸಿಲ ಬಳಿ ಬಂದೊಡನೆ ಬಾಗಿಲನು ತೆರೆವಾಕೆ
ಹೆಸರೇನು ಎನುವಾಕೆ ಮನೆಯೊಳಿಲ್ಲ
ಬಿಸಿಲೊಳಗೆ, ನೆಳಲೊಳಗೆ ಪಕ್ಕದಲಿ ನಗುವಾಕೆ
ಹಸಿರು ಕುಪ್ಪುಸದಾಕೆ ಮನೆಯೊಳಿಲ್ಲ.

‘ಅಕ್ಕರೆಯ ದನಿಯಾಕೆ’ ಕವಿತೆಯಲ್ಲಿ ಹೀಗೆ ದೈನಂದಿನ ಕಷ್ಟ ಸುಖಗಳಲ್ಲಿ ಪಾಲುದಾರಳಾದ ಹೆಂಡತಿಯು ಮನೆಯಲ್ಲಿಲ್ಲ ಎಂದು ಆರಂಭವಾದ ನೋವು ‘ಹೂವಾಡಗಿತ್ತಿ’ ಕವಿತೆಯಲ್ಲಿ ಮುಂದುವರಿದಿದೆ;

ಹೂವೆಲ್ಲ ನೋಡಿದವು ಹಂಬಲಿನ ಕಣ್ದೆರೆದು
ಮನದೊಳಗೆ ಕೂಡಿದವು ಬೇವು - ಬೆಲ್ಲ
ಮಾಲೆಯಲಿ ನಾನೊಂದು ಹೂವಾಗಿ ನೋಡಿದೆನು
ಮನೆಯೊಳಗೆ ಹೂಮುಡಿವ ಮಡದಿಯಿಲ್ಲ.

ನಾಯಕನ ವಿರಹ ಮತ್ತು ಖೇದ ಈ ಬಗೆಯದಾದರೆ, ತೌರ ಹಂಬಲ ಹಿಡಿದು ಮಂಕಾಗಿ ಇರುಳೆಲ್ಲ ಕನವರಿಸಿ, ಹಗಲೆಲ್ಲ ತೂಕಡಿಸಿ (ತೌರ ಹಂಬಲು) ತವರಿಗೆ ಹೋಗಿರುವ ಕಾವ್ಯನಾಯಕಿ ಅಲ್ಲಿ ಗಂಡನನ್ನು ಮರೆತು ಸುಖವಾಗಿದ್ದಾಳೇನು? ಖಂಡಿತಾ ಇಲ್ಲ. ‘ಹೆಂಡತಿಯ ಕಾಗದ’ ಪದ್ಯ ಆ ಸಂಕಟಕ್ಕೆ ಧ್ವನಿಯಾಗಿದೆ;

ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೆ ಒರೆಯನಿಟ್ಟು
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು.

ನಾಯಕನಿಗೆ ಹೆಂಡತಿ ಅವರು ಮನೆಗೆ ಹೋಗುವ ಶೂನ್ಯವನ್ನು ತುಂಬಿಕೊಳ್ಳುವುದು ಅಸಾಧ್ಯವಾಗಿದೆ. ದಿನವೊಂದು ಯುಗವಾಗಿ ಆತನನ್ನು ಹಿಂಡುತ್ತಿದೆ. ಗಡಿ ಮೀರಿದೆ. ಈ ಒತ್ತಡ ‘ನಾಳೆ ಬರುವಳು ಗೌರಿ’ ಕವನದಲ್ಲಿ ಉಕ್ಕಿ ಹರಿದಿದೆ;

ಮೂರು ತಿಂಗಳು ಕಳೆದ ಮಾರನೆಯ ದಿವಸವೇ
ಬರುವೆನೆಂದಾಣೆಯಿಟ್ಟೊಲವ ಮಿಡಿದು,
ತೌರಿಗೋಡಿದ ಗೌರಿ ಮೂರು ತಿಂಗಳ ಮೇಲೆ
ವಾರವೊಂದಾದರೂ ಬಂದಿಲ್ಲವು.

ಈ ನೋವು ನಾಯಕನದು ಮಾತ್ರವಲ್ಲ. ದಾಂಪತ್ಯದ ಈ ಚಡಪಡಿಕೆಗೆ ಸಕಲ ಸೃಷ್ಟಿಯ ಸೌಂದರ್ಯಗಳೂ ಮಂಕಾಗಿವೆ;

ಇರುಳು ಚಂದಿರಲಡಿಯಲೊಂದು ತಾರೆಗೆ ಬಂದು
ನನ್ನ ಕೇಳುವುದೆಂದು ಬರುವಳೆಂದು;
ದಾರಿಯಂಚಿನ ದೀಪ ಮಂಕಾಗಿ ತೋರುವುದು,
ಸೋಗೆ ಬಣ್ಣದ ನವಿಲು ಸುಮ್ಮನಿಹುದು.

ಸಂಪಿಗೆ ಕೆಂಪಾಗಿ ಮೌನದಲಿ ಕೆರಳಿದರೆ, ಬನದ ಬೇಲಿಯ ಪುಟ್ಟ ಮಲ್ಲಿಗೆಯು ಬಿಳುಪಾಗಿ ವಿರಹದ ಉರಿಗೆ ಬಾಡುತ್ತಿದೆ. ಈತನೂ ನಿನ್ನನ್ನು ಬಿಟ್ಟಿರಲಾರೆ ಬೇಗ ಬಾ ಎಂದು ಪತ್ರ ಬರೆದಿದ್ದಾನೆ. ಪಾಪ ಅವಳಿಗೂ ಅದು ತೌರಲ್ಲವೇ?;

ಓಲೆ ತಲುಪಿರಬಹುದು; ನಿಲ್ಲಲಾರಳು ಇನ್ನು
ನಾಳೆ ಬರುವಳು ನನ್ನ ಪ್ರೇಮಲಹರಿ!
ತೌರಬಳಗದ ಕೋಟೆ ಕೊತ್ತಲವ ದಾಟಿಬಹು-
ದೇನು ಸುಲಭವೆ? ಇನ್ನು ಹುಡುಗಿ ಗೌರಿ.

ಅವಳ ಅಸಹಾಯಕತೆಯನ್ನು ಅರ್ಥಮಾಡಿಕೊಂಡೂ ನಾಯಕ ಅವಳ ಆಗಮನಕ್ಕಾಗಿ ಪರಿತಪಿಸುತ್ತಾನೆ. ಇಲ್ಲಿ ಚಿತ್ರಿತವಾಗಿರುವ ಗಂಡ ತನ್ನ ಹೆಂಡತಿಯನ್ನು ಅಪಾರವಾಗಿ ಪ್ರೀತಿಸುವವನು, ಗೌರವಿಸುವವನು.

ಹೀಗೆ ತವರಿಗೆ ಹೋದ ಹೆಂಡತಿಯನ್ನು ಕಾಣಲೆಂದು ನಾಯಕ ಒಮ್ಮೆ ಮಾವನ ಮನೆಗೆ ಹೋಗುತ್ತಾನೆ. ಕೆ. ಎಸ್. ನ. ಕವಿತೆಗಳ ದೀಪಸಾಲಿನಲ್ಲಿ ಅತ್ಯಂತ ನವಿರಾದ ಆ ಕವಿತೆ; ‘ಮಾವನ ಮನೆಯಲ್ಲಿ.’ ‘ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು’ ಈ ಪದ್ಯವನ್ನು ಕೇಳಿರದ ಕನ್ನಡಿಗನಿದ್ದಾನೆಯೇ? ಅಷ್ಟೆಲ್ಲ ಕಷ್ಟಪಟ್ಟು ಹುಡುಕಿಹೋದರೆ; ‘ಅವಳು ಒಳಗಿಲ್ಲ, ಅವಳ ಬಳೆಗಳ ದನಿಯಿಲ್ಲ.’ ರಾತ್ರಿಹೊತ್ತಿನಲ್ಲಿ ಬಂದ ರಾಯರನ್ನು ಎದುರುಗೊಳ್ಳಲು, ಉಪಚರಿಸಲು ಮನೆಯವರೆಲ್ಲ ಮುಂದಾಗುತ್ತಾರೆ. ಆದರೆ ಅವಾವುದೂ ರಾಯರನ್ನು ಮುದಗೊಳಿಸುತ್ತಲ್ಲ. ಅವಳ ಅನುಪಸ್ಥಿತಿ ರಾಯರಿಗೆ ಸಿಟ್ಟು, ಮುಜುಗರ, ಬೇಸರವನ್ನುಂಟು ಮಾಡುತ್ತಿದೆ. ‘ವಿಷಯ’ ತಿಳಿದಾಗ ರಾಯರಲ್ಲಿ ವಿರಹ, ಮುನಿಸು ಕೆರಳುತ್ತದೆ. ಕೊನೆಯಲ್ಲಿ ಮರುದಿನ ಬೆಳಿಗ್ಗೆ; ‘ಹೂವನು ಮುಡಿಯುತ ಅವಳು ರಾಯರ ಕೋಣೆಗೆ ಬರುತ್ತಾಳೆ’ ರಾಯರ ಮನಸ್ಸು ಅರಳುತ್ತದೆ. ಇಂದಿನ ಕ್ಷಣ ಕ್ಷಣದ ಸಂಪರ್ಕ ಸಾಧ್ಯವಾದ ಆಧುನಿಕ ಮನಸ್ಸುಗಳಿಗೆ ‘ರಾಯರ ಸ್ಥಿತಿ’ ಅಸಹಜ ಎನ್ನಿಸಬಹುದು. ಆದರೆ ಅಂಥದ್ದೊಂದು ಸಾಮಾಜಿಕ ಸಂದರ್ಭವನ್ನು ಕಾವ್ಯದಲ್ಲಿ ಹಿಡಿದಿಟ್ಟುಕೊಡುವುದಿದೆಯಲ್ಲ ಅದು ಕಾವ್ಯದ ಜವಾಬ್ದಾರಿಯೂ ಹೌದು.

‘ಬಳೆಗಾರನ ಹಾಡು’ ಪದ್ಯವಂತೂ ಕೌಟುಂಬಿಕ ಕಲಹದಲ್ಲಿ ನೋಯುವ ಹೆಣ್ಣಿನ ಬವಣೆಯನ್ನು ದಯನೀಯವಾಗಿ ನಿರೂಪಿಸಿದೆ. ಬಳೆಗಾರ ಚೆನ್ನಯ್ಯ ಬಂದಿರುವುದೇ ಸುದ್ದಿ ವಾಹಕನಾಗಿ. ಬಂದಕೂಡಲೇ ಅವನು ರಾಯರಿಗೆ ಹೇಳುತ್ತಾನೆ; ‘ಬಳೆಯ ತೊಡಿಸುವುದಿಲ್ಲ ನಿಮಗೆ.’ ತವರಿಗೆ ಹೋಗಿರುವ ಹೆಣ್ಣು ಗಂಡನ ವಿರಹದಲ್ಲಿ ನವೆಯುತ್ತಿದ್ದಾಳೆ. ಅಲ್ಲಿ ಅವಳಿಗೆ ಬೇಕಾದ ಹಣ್ಣಿಹುದು, ಹೂವಿಹುದು, ಹೊಸ ಸೀರೆ, ರತ್ನದಾಭರಣ. ಆದರೂ ಅವಳು ಗಂಡನಿಗಾಗಿ ಕೊರಗುತ್ತಾಳೆ; ಅವನಿಗೋ ಮಾವನ ಮೇಲೆ ಮುನಿಸು. ಅದನ್ನೇ ಬಳೆಗಾರ ಹೇಳುತ್ತಾನೆ;

ಮುಳಿಸು ಮಾವನ ಮೇಲೆ ಮಗಳೇನು ಮಾಡಿದಳು
ನಿಮಗೇತಕೀ ಕಲ್ಲು ಮನಸು
ಹೋಗಿಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು.

ಮಧ್ಯಮ ವರ್ಗದ ಕೌಟುಂಬಿಕ ಜೀವಸೆಲೆಯ ಪರಿಪೂರ್ಣ ಅಭಿವ್ಯಕ್ತಿ ಕೆ. ಎಸ್. ನ. ಕವಿತೆಗಳಲ್ಲಿದೆ. ಹಾಡು-ಹಸೆ, ತವರುಮನೆ-ಅತ್ತೆಮನೆ, ಕೌಟುಂಬಿಕ ರಸಪೂರ್ಣ ಪರಿಸರ, ಗಂಡ-ಹೆಂಡತಿಯರ ನಡುವೆ ಕ್ಲಿಷ್ಟ ಪ್ರಶ್ನೆಗಳಿರದ ಪರಸ್ಪರ ಭಾವಪೂರ್ಣ ತಿಳಿವಳಿಕೆ, ಅದರ ಮೂಲಕ ಲಭಿಸುವ ಸಹನೆ, ತ್ಯಾಗ, ತಾಳ್ಮೆಯ ಮನಸ್ಥಿತಿಗಳು ಇವೆಲ್ಲ ಆ ಭಾವ ಲೋಕದ ಸ್ರೋತಗಳು.

ಗಂಡ-ಹೆಂಡಿರ ಪ್ರೇಮ ಸಂವಾದಕ್ಕೆ ಮಾದರಿಯಾಗಿ ‘ಪ್ರಶ್ನೆ-ಉತ್ತರ’ ಕವಿತೆಯಿದೆ.
ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು...
ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ?

ಪ್ರಶ್ನೆ ಕೇಳಿದವನು ಗಂಡನೇ ಇರಬಹುದು, ಆದರೆ ಉತ್ತರ ನೀಡುವುದು ಅಷ್ಟು ಸುಲಭವಲ್ಲ. ಅವನು ಬಯಸುವ ಉತ್ತರದ ಸುಳಿವು ಹಿಡಿದ ಆಕೆ ಜಾಣತನದಿಂದ ಉತ್ತರಿಸುತ್ತಾಳೆ;

ನಮ್ಮೂರ ಮಂಚದಲಿ ನಿಮ್ಮೂರ ಕನಸಿದನು
ವಿಸ್ತರಿಸಿ ಹೇಳಬೇಕೆ?

ಇಷ್ಟಾಗಿಯೂ ಪ್ರಶ್ನೆ ಮರುಕಳಿಸಿದಾಗ ‘ಎಂದೆನ್ನ ಕೇಳಲೇಕೆ? ಎನ್ನರಸ ಸುಮ್ಮನಿರಿ ಎಂದಳಾಕೆ’ ಈ ಪ್ರಶ್ನೆಗೆ ಅಷ್ಟು ಸುಲಭವಾಗಿ ಉತ್ತರಿಸಲು ಸಾಧ್ಯವಿಲ್ಲವೆಂದು ಗಂಡನನ್ನು ನಯವಾಗಿ ಗದರಿ ಸುಮ್ಮನಾಗಿಸುತ್ತಾಳೆ.

ಮದುವೆಯಾದ ಹೊಸತರಲ್ಲಿ ಎಲ್ಲವೂ ಸೊಗಸೆ. ಗಂಡ ಒಲ್ಲದ ಮನಸ್ಸಿನಿಂದ ಊರಿಗೆ ಹೊರಟಿದ್ದಾನೆ. ಅದರ ನಿರೂಪಣೆ ಇಂತಿದೆ;

ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂದಳು ನನ್ನ ಕೈಹಿಡಿದ ಹುಡುಗಿ
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು.

ಅವಳಿಗೂ ಕಳಿಸಿಕೊಡುವ ಮನಸಿಲ್ಲ. ಇವನಿಗೂ ಬಿಟ್ಟುಹೋಗುವುದು ಸುಲಭವಲ್ಲ. ಅಂತೂ ‘ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ’ ರೈಲು ನಿಲ್ದಾಣಕ್ಕೆ ಹೋದರೆ ದಾರಿಯಲೆ ಹಣ್ಣು ಮಾರುವವ; ‘ಹೊರಟು ಹೋದುದು ಬಂಡಿ ಎಂದು ಹೇಳಿದನು.’ ಉತ್ಸಾಹದಿಂದ ತಿರುಗಿ ಬಂದ ಗಂಡನನ್ನು ‘ತಿಂಗಳಾಯಿತೆ?’ ಎಂದು ಪ್ರಶ್ನಿಸಿ ಅವಳು ಛೇಡಿಸುತ್ತಾಳೆ. ಇನ್ನೊಮ್ಮೆ ಹೀಗಲ್ಲ. ಆತನಿಗೆ ಹೋಗಲೇಬೇಕು;

ಸಂಜೆಗೆನ್ನ ಪಯಣವೆಂದು
ತಿಳಿದಳೆನ್ನ ಸುಂದರಿ
ನನ್ನ ಮುಂದೆ ಬಂದು ನಿಂದು
ತಡೆದಳಿಂತು ವಿನಯದಿ.

ಆದರೆ ಹೆಂಡತಿ ತಡೆಯುತ್ತಿದ್ದಾಳೆ. ಅದು ಅಡೆತಡೆಯಲ್ಲ. ಹೆಂಡತಿಯ ಪ್ರೀತಿಯ, ಒಲುಮೆಯ, ಅಕ್ಕರೆಯ ತಡೆ. ಅದನ್ನು ಮೀರಿ ಹಠಕ್ಕೆ ಬಿದ್ದು ಹೊರಟವನಿಗೆ ‘ಪಶ್ಚಾತ್ತಾಪ’ವಾಗುತ್ತದೆ. ಅದು ವ್ಯಕ್ತವಾಗುವುದು ಹೀಗೆ;

ಇರುಳನೆಲ್ಲ ಕಳೆಯಲಿಲ್ಲ
ಅಪ್ಪಿಮುತ್ತನೊತ್ತಲಿಲ್ಲ
ಕಣ್ಣೀರನೊರಸಲಿಲ್ಲ
ಒರಟನಾದೆನೇತಕೆ?
ಸರಸ ವಿರಸವಾಯಿತಲ್ಲ
ಹೊರಟುಬಂದೆನೇತಕೆ?

ದಾಂಪತ್ಯದ ಲೋಕದಲ್ಲಿ ಇಂತಹ ನವಿರಾದ ಕೋಪ, ಜಗಳ, ಅಸಮಾಧಾನ ಸಹಜವಾದುದಾದರೂ ಕೊನೆಯಲ್ಲಿ ಮೂಡುವ ‘ಪಶ್ಚಾತ್ತಾಪ’ ಕೌಟುಂಬಿಕ ಬಂಧವನ್ನು ಗಟ್ಟಿಗೊಳಿಸುವ ಸಂಗತಿ ಎಂಬುದು ಕೆ.ಎಸ್.ನ. ಕಾವ್ಯದ ದೃಢವಾದ ನಂಬಿಕೆಯಾಗಿದೆ. ದಾಂಪತ್ಯದ ಚೌಕಟ್ಟು ಇನ್ನಿಲ್ಲದಂತೆ ಪಲ್ಲಟಗೊಳ್ಳುತ್ತಿರುವ, ಶಿಥಿಲವಾಗುತ್ತಿರುವ ಸಮಕಾಲೀನ ವಾಸ್ತವಕ್ಕೆ ಮೈಸೂರ ಮಲ್ಲಿಗೆಯ ಪದ್ಯಗಳು ಔಷಧವಾಗಬಹುದೆ ಎಂಬ ಭರವಸೆ ಮೂಡುತ್ತದೆ.
***
ಮೈಸೂರ ಮಲ್ಲಿಗೆಯ ಹಾಡುಗಳು ಕಳೆದ ಎಂಟು ದಶಕಗಳಿಂದ ಜನರ ಮನಸ್ಸಿನಲ್ಲಿ ನೆಲೆ ನಿಂತಿವೆ. ಈ ಬಗ್ಗೆ ಕೆ.ಎಸ್.ನ. ಮಾಡಿರುವ ಒಂದು ಉಲ್ಲೇಖ ಗಮನಾರ್ಹವಾದುದು; “ನನ್ನ ಪರಿಚಯವಿಲ್ಲದ ಅನೇಕರಿಗೆ ನನ್ನ ಕೆಲವು ಕವನಗಳು ಪರಿಚಿತ. ಅವರಲ್ಲಿ ಕೆಲವರು ನನ್ನ ಕವನಗಳನ್ನು ಓದಿದವರಿದ್ದಾರೆ; ಬಾನುಲಿಯಲ್ಲೋ ಸಂಗೀತ ಸಭೆಗಳಲ್ಲೋ ಸಿನಿಮಾದಲ್ಲೋ ಕೇಳಿದ ಹಲವರಿದ್ದಾರೆ; ಬಳೇಪೇಟೆಯಲ್ಲಿ ನನ್ನು ಕಂಡು ಕಿರುನಗೆ ಬೀರುವ ನವದಂಪತಿಗಳಿದ್ದಾರೆ; ಸಿಟಿ ಬಸ್ಸಿನಲ್ಲಿ ನನ್ನ ಗುರುತಿಸಿ ಸ್ಥಳ ಮಾಡಿಕೊಡುವ ತರುಣ ತರುಣಿಯರಿದ್ದಾರೆ; ನನ್ನ ಕೆಲವು ಕವನಗಳನ್ನು ಜನಪದ ಗೀತೆಯೆಂದು ಭಾವಿಸಿ ಹಾಡುವವರಿದ್ದಾರೆ; ನನ್ನ ಯಾವುದೋ ಕವನದಲ್ಲಿ ವರ್ಣಿತವಾಗಿರುವ ಅನುಭವ ತಮ್ಮದೆಂದು ತಿಳಿದು ನನ್ನನ್ನು ಸತ್ಕರಿಸಿದವರಿದ್ದಾರೆ; ಶರಾವತಿಯಲ್ಲಿ ಹಬೆದೋಣಿಯಲ್ಲಿ ನನ್ನನ್ನು ಕೂರಿಸಿ ಮೆರವಣಿಗೆ ಮಾಡಿದ ಗೆಳೆಯರಿದ್ದಾರೆ; ‘ನೀವು ನಮ್ಮ ಶಾನುಭೋಗರ ತಂಗಿಯ ಮಗನಂತೆ’ ಎಂದು ಬೆನ್ನು ತಟ್ಟಿದ ಗ್ರಾಮಸ್ಥರಿದ್ದಾರೆ. ನನ್ನ ಕವನಗಳಲ್ಲಿನ ಗುಣಗಳನ್ನು ಮೆಚ್ಚಿದ ಪಟ್ಟಣಗಳ ಧೀಮಂತರಿದ್ದಾರೆ; ನನ್ನ ಅಭಿಮಾನಿ ವೃಂದದಲ್ಲಿ ಧಾರವಾಡದ ಬಸ್ ಸ್ಟ್ಯಾಂಡಿನಲ್ಲಿ ನನ್ನ ಹಾಡನ್ನು ಸ್ವಲ್ಪ ಅದಲು ಬದಲು ಮಾಡಿ ನನಗೇ ಹಾಡಿ ನನ್ನಿಂದ ಪೈಸೆ ಪಡೆದ ಬಡ ಹುಡುಗನೂ ಸೇರಿದ್ದಾನೆ.” ಈ ಮಾತುಗಳು ಕವಿಯ ಅನುಭವಕ್ಕೆ ಬಂದಿರುವಂತೆ ಕವನಗಳು ಸಾಮಾಜಿಕವಾಗಿ ಪಡೆದ ಸಾಧಾರಣೀಕರಣವನ್ನು ಎತ್ತಿ ಹೇಳಿವೆ. ರಾಮಚಂದ್ರ ಶರ್ಮರ ‘ಪ್ರತಿಭಾ ಸಂದರ್ಶನ’ ಪುಸ್ತಕದಲ್ಲಿ ಒಂದು ಪ್ರಸಂಗ ದಾಖಲಾಗಿದೆ. ಇದೂ ಕೆ.ಎಸ್.ನ. ಅವರದೇ ಅನುಭವ. ಒಮ್ಮೆ ಒಂದು ಹಳ್ಳಿಗೆ ಇವರು ಕಾರ್ಯಕ್ರಮವೊಂದರ ಮುಖ ಅತಿಥಿಯಾಗಿ ಹೋಗಿದ್ದಾರೆ. ಆ ಊರಿನವರ ಕೋರಿಕೆಯ ಮೇರೆಗೆ ಕೆ.ಎಸ್.ನ. ತಮ್ಮ ಮೈಸೂರ ಮಲ್ಲಿಗೆಯ ಕವಿತೆಗಳನ್ನು ಓದಬೇಕಾಗಿ ಬರುತ್ತದೆ. ಇವರು ನಾನು ಸಂಕಲನ ತಂದಿಲ್ಲ ಎನ್ನುತ್ತಾರೆ. ಆಗ ಸಭೆಯಲ್ಲಿದ್ದ ಹೆಣ್ಣುಮಗಳೊಬ್ಬಳು ಮನೆಗೆ ಓಡುತ್ತಾ ಹೋಗಿ, ತಾನು ಕೇಳುವ ಮೂಲಕ ನೋಟ್ ಪುಸ್ತಕದಲ್ಲಿ ಪೆನ್ಸಿಲ್‍ನಿಂದ ಬರೆದುಕೊಂಡಿದ್ದ ಪದ್ಯಗಳನ್ನು ತಂದುಕೊಡುತ್ತಾರೆ. ಕೆ.ಎಸ್.ನ. ಅದನ್ನು ಓದುತ್ತಾರೆ. ನಲವತ್ತಕ್ಕೂ ಹೆಚ್ಚು ಮುದ್ರಣಗಳನ್ನು ಅಧಿಕೃತವಾಗಿ ಮೈಸೂರ ಮಲ್ಲಿಗೆ ಕಂಡಿದ್ದರೂ ಹೀಗೆ ಅಜ್ಞಾತ ಓದುಗರು, ಹಾಡುಗಾರರ ಡೈರಿ, ನೋಟ್ ಬುಕ್‍ಗಳಲ್ಲಿ ಬರೆದುಕೊಂಡಿರುವ ಪ್ರತಿಗಳನ್ನೂ ಸಂಗ್ರಹಿಸಿದರೆ ನೂರಾರು ಮುದ್ರಣಗಳ ಲೆಕ್ಕವಾದೀತು.

ಮೈಸೂರ ಮಲ್ಲಿಗೆಯ ಜನಪ್ರಿಯತೆಯ ಇನ್ನೊಂದು ಮುಖವೆಂದರೆ; ಹಾಡುವಿಕೆಯ ಮೂಲಕ ಜನ ಮನದ ಕೋಶಕ್ಕೆ ತಲುಪಿಸಿದ ಗಾಯಕರ ಕೊಡುಗೆ. ಮೈಸೂರ ಮಲ್ಲಿಗೆಯ ಕವನಗಳನ್ನು ಹಾಡುಗಳನ್ನಾಗಿಸಿ ಜನಪ್ರಿಯಗೊಳಿಸಿದ ಮೂರು ತಲೆಮಾರುಗಳಿವೆ. ದೇವಂಗಿ ಚಂದ್ರಶೇಖರ, ಪಿ. ಕಾಳಿಂಗರಾವ್, ಗುಡಿಬಂಡೆ ಬಿ. ಎಸ್. ರಾಮಾಚಾರ್, ಬಿ. ಜಿ. ರಾಮನಾಥ ಮುಂತಾದವರದು ಮೊದಲ ತಲೆಮಾರು. ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ್, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ ಮೊದಲಾದವರ ಎರಡನೆಯ ತಲೆಮಾರು ಹಾಗೂ ಅತ್ರಿ, ಎಂ. ಡಿ. ಪಲ್ಲವಿ, ಅರ್ಚನಾ ಉಡುಪ, ಮುಂತಾದವರದು ಮೂರನೆಯ ತಲೆಮಾರು. ಇದೀಗ ನಾಲ್ಕನೆಯ ತಲೆಮಾರಿನ ಕೋಗಿಲೆಗಳು ಈ ಹಾಡುಗಳಿಗೆ ದನಿಯಾಗತೊಡಗಿವೆ. 1982ರಲ್ಲಿ ಸಿ. ಅಶ್ವತ್ಥ ಸಂಗೀತದ ಧ್ವನಿ ಸುರುಳಿ ಹೊರಬಂದುದು, 1991ರಲ್ಲಿ ಹಾಡುಗಳನ್ನಾಧರಿಸಿದ ಚಲನಚಿತ್ರ ಬಿಡುಗಡೆ, ಇತ್ತೀಚೆಗೆ ಪ್ರದರ್ಶನಗೊಳ್ಳುತ್ತಿರುವ ನಾಟಕ ರೂಪ ಇವೆಲ್ಲವೂ ಮೈಸೂರ ಮಲ್ಲಿಗೆ ಕವನ ಸಂಕಲನಕ್ಕೊದಗಿದ ಮೌಲ್ಯವರ್ಧಿತ ರೂಪಗಳೆನ್ನಬಹುದು.

ಕವನ ಸಂಕಲನಕ್ಕೆ 50 ವರ್ಷಗಳಾದಾಗ ಬೆಂಗಳೂರಿನಲ್ಲಿ ನಡೆದ ಉತ್ಸವ, ಸಂಕಲನದ ಕುರಿತೇ ‘ಪರಿಮಳದ ಪರಿಧಿಯಲ್ಲಿ’ ಪುಸ್ತಕದ ಪ್ರಕಟಣೆ, ಕವಿತೆಗಳ ಕುರಿತು ಪ್ರಕಟವಾಗಿರುವ ನೂರಾರು ಲೇಖನಗಳು ಇವೆಲ್ಲವೂ ಒಂದು ಕವನ ಸಂಕಲನ ಪಡೆಯಬಹುದಾದ ಗೌರವದ ಶಿಖರಗಳು. ಇಂದಿಗೂ ಎಂದಿಗೂ ಕನ್ನಡಿಗರ ಮನೆ ಮನದಲ್ಲಿ ಹಸಿರಾಗಿರುವ ಮೈಸೂರ ಮಲ್ಲಿಗೆ ಒಂದು ಅಮರ ಕಾವ್ಯ.

****

ಈ ಅಂಕಣದ ಹಿಂದಿನ ಬರೆಹ

ಪುಸ್ತಕ ಲೋಕವೆಂಬ ಬದುಕಿನ ಬುತ್ತಿ

ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'

ಅಂಬಿಕಾತನಯದತ್ತರ ಸಖೀಗೀತ

ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...