ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು

Date: 20-05-2022

Location: ಬೆಂಗಳೂರು


'ಜಾತಿ, ಮತ, ಮತ್ತು ಧಾರ್ಮಿಕ ಮೂಲಭೂತವಾದದ ಎಲ್ಲ ಮಿತಿಗಳನ್ನು ಕಿತ್ತೆಸೆದು ಅಪ್ಪಟ ಮನುಷ್ಯ ಪ್ರೀತಿಯ ಕಾಠಿಣ್ಯ ಪ್ರತಿಪಾದಿಸುವ ಅಂತಹ ಕೆಲವರ ದೈಹಿಕ ನಡೆಗಳು ಉಡುಪಿಯ ಕಡೆಗಿರಲಿಲ್ಲ. ಆದರೆ ಮಾನಸಿಕವಾಗಿ ಮಾತ್ರ ಅವರದು ಸಹಬಾಳ್ವೆ, ಸಂಪ್ರೀತಿಯ ನಡಿಗೆಯೆಡೆಗೆ ಇದೆಯೆಂಬುದು ಸುಳ್ಳಲ್ಲ' ಎನ್ನುತ್ತಾರೆ ಹಿರಿಯ ಲೇಖಕ, ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ಉಡುಪಿಯಲ್ಲಿ ನಡೆದ ಸಹಬಾಳ್ವೆ ಸಮಾವೇಶ ಹಾಗೂ ಕಡಕೋಳ ನೆಲದ ನೆನಪುಗಳು ಕೃತಿ ಬಿಡುಗಡೆಯ ಕುರಿತು ಬರೆದಿದ್ದಾರೆ.

ಬರೋಬ್ಬರಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅನುಭವದ ನನ್ನ ನೆನಪಿನಲ್ಲಿ ಅದೆಷ್ಟೇ ದ್ಯಾಸ ಮಾಡಿಕೊಂಡರೂ ಅದು ನೆನಪಿಗೆ ಬರುತ್ತಿಲ್ಲ. ಅದೇನೆಂದರೆ ಮೇ ತಿಂಗಳ ನಡುವಿನ ವೇಳೆಯಲ್ಲಿ ಪಿತಿ ಪಿತಿ ಅಂತ ಎಡಬಿಡದೇ ಮಾರಿಗೆ ಉಗುಳುವ ಅವಕಾಳಿ ಮಳೆಯನ್ನು ನಾನು ಯಾವತ್ತೂ ಕಂಡಿರಲಿಲ್ಲ. ದಕ್ಷಿಣ ನಾಡಿನ ಸನಿಹದ ಹಳ್ಳಿಯೊಂದರಲ್ಲಿ ನಿನ್ನೆಯಿಂದ ಠಿಕಾಣಿ ಹೂಡಿರುವ‌ ನನಗದು ಒಂದೇ ಸವನೇ ಅಗಾಧವಾಗಿ ಅನಿಸ ತೊಡಗಿದೆ. ಖರೇವಂದ್ರೇ ಈಗ ಕೆಂಡದಂತಿರಬೇಕಾದ ಸಹಜ ಬೇಸಿಗೆ ಕಿಡಿಗೇಡಿ ಥಂಡಿಯಾಗುತ್ತಿರುವ ಕೆಡುಕಿನ ಅನುಭವ ನನ್ನನ್ನು ಕಂಡಾಪಟಿ ಕಾಡುತ್ತಲಿದೆ. ಭೌಗೋಳಿಕ ಸ್ಥಿತ್ಯಂತರದ ಸ್ಥಿತಿ ಗತಿಗಳ ನಡುವೆ ಮನುಷ್ಯರ ಬದುಕು ಹತ್ತು ಹಲವು ತಲ್ಲಣಗಳಿಗೆ ಈಡಾಗತೊಡಗಿದೆ.

ಕೊಡಗಿನ ಪೊನ್ನಂಪೇಟೆ ಶಾಲೆಯ ಆವರಣವೊಂದರಲ‌್ಲಿ ತ್ರಿಶೂಲ ದೀಕ್ಷೆ ಮತ್ತು ಬಂದೂಕಿನಂತಹ ಶಸ್ತ್ರಾಸ್ತ್ರಗಳ ತರಬೇತಿ ನೀಡುತ್ತಿರುವ ಫೋಟೋಗಳ ಸಮೇತದ ಸುದ್ದಿ ಸಹಜವಾಗಿ ಭಯಂಕರ ಭಯ ಹುಟ್ಟಿಸುತ್ತಿದೆ. ಅದೇ ವೇಳೆಗೆ ಪಕ್ಷವೊಂದರ ಮೂಗಿನ ನೇರಕ್ಕೆ ಪಠ್ಯ ಪುಸ್ತಕಗಳನ್ನು ನೇರ್ಪುಗೊಳಿಸಲಾದ ಮತ್ತೊಂದು ಅಂಥದೇ ಸುದ್ದಿ.

ಇಂತಹ ಬೇಗುದಿಗಳ ನಡುವೆ ಕಳಸದ ಕಡೆಗಿನ ಹೊರನಾಡು ಸೀಮೆಯ ಸ್ನೇಹಶೀಲ ತಿತೀಕ್ಷೆಯ ಸಂಗಾತಿಯೊಬ್ಬಳು ಸಿಕ್ಕಳು. ತನ್ನ ಒಡಲಾಳದ ಕಾಳಜಿಯನ್ನು ಒಬ್ಬುಳಿಗೊಳಿಸಿ ತಾಸೊಪ್ಪತ್ತು ಫೋನಲ್ಲಿ ಮಾತಾಡಿದಳು. ಅವಳಿಗಿರುವ ಮನುಷ್ಯ ಪ್ರೀತಿಯ ಸಾಪೇಕ್ಷ ಕಕ್ಕುಲತೆ ಕುರಿತು ಮುಂಚಿನಿಂದಲೂ ಮಮ್ಮಲ ಆಸ್ಥೆ ಹೊಂದಿದವನು ನಾನು. ಅವಳ ಹೋರಾಟದ ಬದುಕು ಮತ್ತು ಬಹುಳ ಪ್ರಜ್ಞೆಯ ಕಳಕಳಿ ಕುರಿತಾಗಿ ನನ್ನಬಳಿ ಯಾವತ್ತೂ ದೂಸರಾ ಮಾತುಗಳಿರಲಾರವು.

ಅಂದಹಾಗೆ ಮೊನ್ನೆಯ ಉಡುಪಿಯ ಸಹಬಾಳ್ವೆ ಸಮಾವೇಶ ಕುರಿತು ಬಹಳಷ್ಟು ಮಂದಿ ಸಂಗಾತಿಗಳು ಫೋನ್ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಿದ್ದಾರೆ. ಆ ಬಗ್ಗೆ ಅವಳು ಸಹಿತ ಕೆಲ ಹೊತ್ತು ಸಂವಾದಿಸಿದಳು. ಎಡ, ಬಲ, ನಡುಪಂಥಗಳನ್ನು (ನಡುವೆಂಬುದು ಇಲ್ಲದಿದ್ದರೂ) ಮೀರಿದ ಉಗ್ರ ತಾರಕದ ಪಂಥದವಳು ಅವಳು. ಎಂದೂ ಸಾವಿಗಂಜದ ಸಾವನ್ನು ಸದಾ ಎಡಗೈಯಲ್ಲಿಟ್ಟುಕೊಂಡವಳು. ವಾಸ್ತವ ಏನೇ ಇರಲಿ ಉಡುಪಿಯ ಸಹಬಾಳ್ವೆ ಸಮಾವೇಶ ಕುರಿತು ಸಹಮತ ತೋರುತ್ತಲೇ ಭಿನ್ನಮತದ ಅಭಿಮತ ಅವಳದು.

ಜಾತಿ, ಮತ, ಮತ್ತು ಧಾರ್ಮಿಕ ಮೂಲಭೂತವಾದದ ಎಲ್ಲ ಮಿತಿಗಳನ್ನು ಕಿತ್ತೆಸೆದು ಅಪ್ಪಟ ಮನುಷ್ಯ ಪ್ರೀತಿಯ ಕಾಠಿಣ್ಯ ಪ್ರತಿಪಾದಿಸುವ ಅಂತಹ ಕೆಲವರ ದೈಹಿಕ ನಡೆಗಳು ಉಡುಪಿಯ ಕಡೆಗಿರಲಿಲ್ಲ. ಆದರೆ ಮಾನಸಿಕವಾಗಿ ಮಾತ್ರ ಅವರದು ಸಹಬಾಳ್ವೆ, ಸಂಪ್ರೀತಿಯ ನಡಿಗೆಯೆಡೆಗೆ ಇದೆಯೆಂಬುದು ಸುಳ್ಳಲ್ಲ. ಮನುಷ್ಯರ ಬಗೆಗಿನ ಅತ್ಯುಗ್ರ ಪ್ರೀತಿ, ಪ್ರಾಮಾಣಿಕತೆಗಳ ಪರಾಕಾಷ್ಠೆಯ ನಿರೀಕ್ಷೆಗಳಿಂದ ಅಂಥವರು ಹೊರ ಬರಲಾರರು. ಅವರ ಅಪ್ಪಟ ಧರ್ಮ ನಿರಪೇಕ್ಷತೆ, ಜಾತಿ ನಿರಸನ ಚಿಂತನೆಗಳನ್ನು ಅಲ್ಲಗಳೆಯಲಾಗದು.

ಸಣ್ಣಪುಟ್ಟ ಬದಲಾವಣೆಗಳೊಂದಿಗೆಯೂ ಬದುಕಲೊಪ್ಪದ ಅಂಥವರ ಆತ್ಮಹತ್ಯಾತ್ಮಕ ಪ್ರಾಮಾಣಿಕ ಚಿಂತನೆಗಳು ಚಾಲನೆಗೆ ಬಂದು ಪ್ರಚಲಿತಗೊಳ್ಳುವ ವಾತಾವರಣ ಈ ನೆಲದ ಮೇಲೆ ನಿರ್ಮಾಣವಾಗುವುದೇ.? ಅದು ಯಾವಾಗ ಎಂದು ಹೇಳಲಾಗದು. ಬಹಳ ವರ್ಷಗಳ ಕಾಲ ಹತ್ತಿರದಿಂದ ಕಂಡವನಾದ್ದರಿಂದ ಹೇಳಬೇಕೆನಿಸಿತು. ಹಾಗಿರುವಾಗ ಇರುವ ವ್ಯವಸ್ಥೆಯನ್ನು ಸಣ್ಣಪುಟ್ಟ ಸರಿಪಡಿಕೆಗಳೊಂದಿಗೆ ಉತ್ತಮಿಸಿಕೊಳ್ಳುವ ಮನಸ್ಥಿತಿಗೆ ಒಪ್ಪಿಸಿಕೊಳ್ಳಬೇಕೆಂಬುದನ್ನು ಅವರು ಅರಿಯದೇ ಹೋದರೆ ಹೇಗೆ.?

ಕರಾವಳಿ ತೀರದ ಜನಪದಕ್ಕು ಕೋಮುವಾದದ ಸೋಂಕು ತಗಲಿಸುವ ಇಲ್ಲವೇ ಸಂಶೋಧಿಸುವ ಯತ್ನಗಳು. ಅದು ಇರಬಹುದು ಇಲ್ಲದಿರಬಹುದು. ಅಷ್ಟಾಗಿ ಅಲ್ಲಿನ ಯಕ್ಷಗಾನ ಕಲೆಯಲ್ಲಿ ಮುಸ್ಲಿಮರ ಪಾತ್ರವೇ ಇಲ್ಲ ಎನ್ನುವಷ್ಟು ಪ್ರಮಾಣದಲ್ಲಿ ಕಡಿಮೆ ಇದ್ದೀತು. ಈ ಕುರಿತು ಕೆಲವು ಜಿಜ್ಞಾಸುಗಳಿಗೆ ಹೊಸ ಜಿಜ್ಞಾಸೆಗಳು ಶುರುವಿಟ್ಟುಕೊಂಡಿವೆ. ಅದು ಕೇವಲ ವಿದ್ವಾಂಸರಿಗೆ ಸೇರಿದ್ದೆಂದು ಸುಮ್ಮನಾಗುವಂತಹದ್ದಲ್ಲ. ನಾನು ಅದರ ಹೆಚ್ಚಿನ ಆಳಕ್ಕೆ ಹೋಗಲಾರೆ. ಅಷ್ಟಕ್ಕೂ ನನಗದು ಹೆಚ್ಚು ಗೊತ್ತಿರದ ವಿಷಯ. ಆದರೊಂದು ಅಪಾಯದ ಸಂಗತಿ ಏನೆಂದರೆ ಕಲೆ, ಸಂಸ್ಕೃತಿಗಳಿಗೂ ಧರ್ಮದ ಸೋಂಕು ತಗಲುತ್ತಿರುವುದು ಮಾತ್ರ ಅಕ್ಷರಶಃ ದುರಂತ.

ಉಡುಪಿ ಸಮಾವೇಶಕ್ಕೆ ಒಂದೇ ಒಂದುವಾರ ಮುನ್ನ ಬೆಂಗಳೂರಿನಲ್ಲಿ "ಸೌಹಾರ್ದ ಸಂಸ್ಕೃತಿ ಸಮಾವೇಶ" ಜರುಗಿತು. ನ್ಯಾಯಮೂರ್ತಿಗಳು, ಸಂವಿಧಾನ ತಜ್ಞರು ಸೇರಿದಂತೆ ವಿವಿಧ ಧರ್ಮದ ಗುರುಗಳು ಭಾಗವಹಿಸಿದ್ದರು. ಧರ್ಮದ ಹೆಸರಲ್ಲಿ ಕಂದಕ ನಿರ್ಮಿಸುತ್ತಿರುವ ಮೂಲಭೂತ ವಾದವನ್ನು ರಾಜಧಾನಿಯ ಬೆಂಗಳೂರು ಸಮಾವೇಶ ಖಂಡ ತುಂಡವಾಗಿ ಖಂಡಿಸಿತ್ತು. ಬೌದ್ಧಿಕ ದೌರ್ಜನ್ಯ ಮೆಟ್ಟಿ ನಿಲ್ಲುವ ಸಂಕಲ್ಪಕ್ಕೆ ಅದು ಕರೆ ನೀಡಿತ್ತು. ಅದರ ಬೆನ್ನಲ್ಲೇ ಉಡುಪಿ ಸಮಾವೇಶ. ಅದೇನೇ ಇರಲಿ ಕರಾವಳಿಯ ಉಡುಪಿ ಎಂದರೆ ಕೋಮುವಾದದ ಉಗಮ ಸ್ಥಾನವಾಗಿದೆ ಎಂದು ನೋಡುವಂತಾಗಿದೆ. ಅದು ಹಿಂದೂ ಮತ್ತು ಮುಸ್ಲಿಂ ಎರಡಕ್ಕೂ ಸೇರಿಸಿಯೇ ಹೇಳಬೇಕಾದ ಧಾರ್ಮಿಕ ಮೂಲಭೂತವಾದ. ಎರಡರ ಅಪಾಯಕಾರಿ ಪ್ರಮಾಣ ಮತ್ತು ಪ್ರಮಾದ ಅಕ್ಷಮ್ಯವೇ. ಸರಕಾರದ ಸೌಹಾರ್ದತೆ ಸಭೆಗಳು ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮದ ಗುರುಗಳನ್ನು ಸೇರಿಸುವಂತೆ ಸಮಾನ ವೇದಿಕೆಗಳಲ್ಲಿ ಕೂಡಿಸಿ ಆಶೀರ್ವಚನದ ಸಂದೇಶ, ಉಪದೇಶಗಳನ್ನು ಕೊಡಿಸಿದಷ್ಟು ಕೋಮು ಸೌಹಾರ್ದತೆ ಸರಳವಾಗುಳಿದಿಲ್ಲ. ಇಲ್ಲವೇ ಟೀವಿಗಳ ಅಬ್ಬರದ ಕಿರುಚಾಟದ ಚರ್ಚೆಗಳಷ್ಟು ಸಾಧಾರಣವಾಗಿಯೂ ಉಳಿದಿಲ್ಲ. ಇದರ ಮಧ್ಯ ಕೆಲವು ಮಾಧ್ಯಮಗಳ ಪಕ್ಷಪಾತ ಅರಿಯದ್ದೇನಲ್ಲ. ಹಾಗೆ ನೋಡಿದರೆ ಮನುಷ್ಯರ ಒಳಿತು ವಿರೋಧಿ ಧರ್ಮ ಯಾವುದೂ ಇರಲಾರದು. ಆದರೆ ಅದರ ಅನುಯಾಯಿಗಳು ಅನುಸರಿಸುವ ಆಚರಣೆಗಳ ಅಫೀಮಿನ ನಡೆಗಳು ಮಾತ್ರ ಅಪಾಯ ಮಟ್ಟದ ಪಾರಮ್ಯ ಮೀರಿ ಮೆರೆಯುತ್ತಿವೆ. *ಹಿಂದುತ್ವದ ಹೆಸರಿನ ಮೂಲಭೂತವಾದಿಗಳ ವಿರುದ್ಧ ಸಂಘಟಿಸುವ ಹೋರಾಟಗಳ ಸಂದರ್ಭಗಳಲ್ಲಿ ಅವರಷ್ಟೇ ಅಪಾಯಕಾರಿಗಳಾಗಿರುವ ಇಸ್ಲಾಂ ಹೆಸರಿನ ಮುಸ್ಲಿಂ ಮೂಲಭೂತವಾದಿ ವ್ಯಕ್ತಿ ಮತ್ತು ಸಂಘಟನೆಗಳಿಂದ ದೂರವಿದ್ದು ಅಂಥವರನ್ನು ಕೂಡಾ ವಿರೋಧಿಸಬೇಕು.* ಆಗ ಅದು ನಿಜವಾದ ಸೌಹಾರ್ದತೆ ಮತ್ತು ಸಹಬಾಳ್ವೆ ಕಟ್ಟುವ ಕೆಲಸ ಆಗಬಲ್ಲದು.

ದೂರದ ಪರ ಊರುಗಳಿಂದ ಬಂದು ಉಡುಪಿಯ ಮಂದಿಗೆ ಕೋಮು ಸೌಹಾರ್ದತೆ, ಸಾಮರಸ್ಯ, ಸಹಬಾಳ್ವೆಯ ಪಾಠ ಹೇಳುವಷ್ಟರ ಮಟ್ಟಿಗೆ ಉಡುಪಿಗರು ಜ್ಞಾನ ದಾರಿದ್ರ್ಯ ಪೀಡಿತರಂತೂ ಖಂಡಿತಾ ಅಲ್ಲ. ಅವರಿಗೆಂದೇ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹೊಸ ಪಾಠಗಳೇನು ಹೊಸದಾಗಿ ಹುಟ್ಟಿಕೊಂಡಿಲ್ಲ. ಅಷ್ಟಾಗಿ ಸಮಾವೇಶದಲ್ಲಿ ಸ್ಥಳೀಯ ಎಲ್ಲಾ ಜನಾಂಗದವರ ಪಾಲ್ಗೊಳ್ಳುವಿಕೆಯ ತೀವ್ರಕೊರತೆ. ಒಂದು ಕೋಮಿನವರ ಪ್ರಬಲ ಪಾಲ್ಗೊಳ್ಳುವಿಕೆ ಢಾಳಾಗಿತ್ತು. ವಾಸ್ತವವಾಗಿ ಅಲ್ಲಿನ ಎಲ್ಲ ಧರ್ಮ, ಜಾತಿ, ಮತಗಳ ಜನರು ಒಂದಾಗಿ ಭಾವೈಕ್ಯತೆಯಿಂದ ಬಾಳಬೇಕಿದೆ. ಅಲ್ಲಿನವರ ನಿತ್ಯಕಾಯಕ ಬದುಕುಗಳ ನಡುವೆ ಮಧುರ ಭಾವದ ಬೆಸುಗೆಯ ಬಂಧುತ್ವ ಬೆಸಗೊಳ್ಳಬೇಕಿದೆ.

ವರ್ತಮಾನದ ದುರಿತ ವಿದ್ಯಮಾನಗಳಿಗೆ ಮುಖಾಮುಖಿಯಾಗುವ ಬದಲಿಗೆ ಧರ್ಮಗುರುಗಳ ಚರ್ವಿತ ಚರ್ವಣ ಉಪದೇಶಾಮೃತಗಳು ಅದೆಷ್ಟು ಬಗೆಯಲ್ಲಿ ಫಲಕಾರಿ.? ಅಷ್ಟಕ್ಕೂ ಅದು ಉಡುಪಿಗೆ ಹೊಸದೇನು ಅಲ್ಲ. ಇನ್ನೂ ಕೆಲವರು ಸಮಾವೇಶದ ಖರ್ಚುವೆಚ್ಚ, ಕರಾರುತನ, ಮೌನ ಮೆರವಣಿಗೆ, ಸಂಘಟನೆಯೊಂದರ ಮಾಜಿ ಮಿಲಿಟಂಟ್ ಎಡಗೈಗೆ ಕೇಸರಿ ಕಲರಿನ ಬಟ್ಟೆ ಕಟ್ಟಿದ್ದು, ಕೇಸರಿ ರುಮಾಲಿನ ಸ್ವಾಮೀಜಿ ಬಗ್ಗೆ ಮುಂಚಿತವಾಗಿ ಬಗೆ ಬಗೆಯಲ್ಲಿ ಹಂಚಿಕೆ ಮಾಡಿ ಮುಂತಾಗಿ, ಮುಂತಾಗಿ ಮಾತಾಡಿದ್ದಾರೆ. ವರ್ತಮಾನ ಕರ್ನಾಟಕ ಮತ್ತು ಭಾರತದ ತವಕ, ಬೆಲೆ ಏರಿಕೆ ಮತ್ತಿತರೆ ಬಿಕ್ಕಟ್ಟುಗಳು ಇತ್ಯಾದಿ ಸುಡು ಸುಡುವ ಸತ್ಯಗಳನ್ನು ಸಮಾವೇಶದಲ್ಲಿ ಪ್ರಸ್ತಾಪಿಸಲು ಅವಕಾಶ ಮತ್ತು ಸಮಯ ಎರಡಕ್ಕೂ ಸ್ವಾತಂತ್ರ್ಯ ಇರಲಿಲ್ಲ ಎಂಬ ಅಸಮಾಧಾನ ತೋಡಿಕೊಂಡಿದ್ದಾರೆ.

ಮತ್ತೆ ಕೆಲವರು ಅದಕ್ಕಾಗಿ ಉಡುಪಿಯೇ ಆಗಬೇಕೆಂದೇನಿಲ್ಲ. ಅದಕ್ಕೆಂದು ಬೇರೆ ಕಡೆ ಬೇಕಾದಷ್ಟು ಅವಕಾಶಗಳಿವೆ ಎಂದು ಅಂದುಕೊಂಡವರೂ ಇದ್ದಾರೆ. ದೂರದ ಬರದ ಬಯಲು ಸೀಮೆಯಿಂದ ಬಂದವರಿಗೆ, ವಿಮಾನದಲ್ಲಿ ಬಂದವರಿಗೆ ಕಡಲತೀರದ ಉಡುಪಿಯನ್ನು ನೋಡಿದ ಉಮೇದು. ಒಟ್ಟಿನಲ್ಲಿ ಉಡುಪಿಯ ಸಹಬಾಳ್ವೆ ಸಮಾವೇಶ ದೊಡ್ಡಧ್ವನಿಯ ಸುದ್ದಿ ಮಾಡಿತು. ಮರುಕಪ್ರೀತಿ ಮುಖದ ಗಾಯಕಿ ಎಂ.ಡಿ. ಪಲ್ಲವಿ ಕರುಳಿನ ಕಂಠದಲಿ ಹಾಡಿದ ಗೀತೆಗಳು ಸಾಮರಸ್ಯ ಸ್ವರದ ಕಡಲಾಗಿ ಹರಿದಾಡಿದವು. ಮಹಾ ಸಮಾವೇಶ ಉಡುಪಿ ಲೋಕದ ಲೋಕಿಗರ ದಿನನಿತ್ಯದ ಬದುಕಿನ ಸಹಬಾಳ್ವೆಗೆ ಅದೆಷ್ಟು ಪ್ರಮಾಣದಲ್ಲಿ ಲೋಕೋಪಯೋಗಿ ಆಯಿತೆಂಬುದನ್ನು ಉಡುಪಿಗರೇ ಹೇಳಬೇಕು. ಇಲ್ಲವೆ ಅದು ರಾಜ್ಯದ ಜನತೆಗೆ ಯಾವ ರೀತಿಯ ಹೊಸ ಸಂದೇಶ ನೀಡಿತೆಂಬುದು ಕೂಡಾ ಅಷ್ಟೇ ಮುಖ್ಯವಾಗಿದೆ. ‌

*ಮರೆತ ಮಾತು* :

ಕಡಕೋಳ ನೆಲದ ನೆನಪುಗಳು ಕಡೆಗೂ ಬಿಡುಗಡೆಯಾಯಿತು. ಮೇ, 14 ರಂದು ಕಲಬುರ್ಗಿಯ ಕನ್ನಡ ಸಾಹಿತ್ಯ ಪರಿಷತ್ತು ಸುವರ್ಣ ಸಭಾ ಭವನದ ತುಂಬಾ ತುಂಬಿ ತುಳುಕುವ ಸಾಹಿತಿಗಳು, ಸಂಗೀತ ಸಹೃದಯರು, ವಿದ್ವಜ್ಜನರು, ಮಡಿವಾಳಪ್ಪನ ತತ್ವಪದಗಳ ಅಭಿಮಾನಿಗಳು ಕಡಕೋಳ ಶ್ರೀಮಠದ ಶ್ರೀಗಳ ಸಂಪ್ರೀತಿಯ ಸಮಕ್ಷಮದಲಿ ಪುಸ್ತಕಕ್ಕೆ ಬಿಡುಗಡೆಯ ಭಾಗ್ಯ ದೊರಕಿಸಿದ್ದು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು. ಗಡಿ ಲಿಂಗದಹಳ್ಳಿ ಸೂರ್ಯಕಾಂತನ ತತ್ವಪದಗಳ ಗಝಲ್ ಗಾಯನದ ಜೇನುಮಳೆಯಲಿ ಕಡಕೋಳ ನೆಲದ ನೆನಪುಗಳು ಸಡಗರದಿಂದ ಕುಣಿದಾಡಿದವು.

*ಮಲ್ಲಿಕಾರ್ಜುನ ಕಡಕೋಳ*
‌ 9341010712

ಈ ಅಂಕಣದ ಹಿಂದಿನ ಬರಹಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...