ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...

Date: 23-05-2024

Location: ಬೆಂಗಳೂರು


"ಕರಿಜಾಲಿಯ ಮುಳ್ಳುಕಂಟಿ ಕೀಟಗಳು ಸಹಿತ ಸೇರಿಕೊಂಡು ಝೀ.. ಝೀ.. ಅಂತ ತಾರಕದ ಸ್ವರದಲ್ಲಿ ಝೀಗುಡುತ್ತಿತ್ತು. ಅಲ್ಲೇ ಮೂರು ಹಳ್ಳಗಳು ಕೂಡುವ ಸಂಗಮ. ಕೆಂಪುಹಳ್ಳ, ಸವುಳುಹಳ್ಳ, ಲಂಡೇನಹಳ್ಳ ಈ ಮೂರೂ ಹಳ್ಳಗಳು ಸೇರಿ ಒಂದಾಗಿರುವ ಸುಂದರ ಸ್ಥಳವೇ ಸಂಗಮ. ಅದು ಹೀಗೆ ಒಂದಾಗಿ ಮುಂದುವರೆದು ಹರಿಯುವುದೇ ಹಿರೇಹಳ್ಳ," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿ ಬುತ್ತಿ’ ಅಂಕಣಕ್ಕೆ ಬರೆದ ಲೇಖನವಿದು.

ದಶಕಗಳ ಹಿಂದೆಯೇ ಕಣ್ಮರೆಯಾಗಿರುವ ಲಕ್ಕಿ ತಪ್ಪಲಿನ ದಟ್ಟಪೊದೆ ಮೂರುಹಳ್ಳದ ಬಳಿ ಇತ್ತು. ಅದು 'ದಟ್ಟಪೊದೆ' ಯಾಕೆಂದರೆ ಅಲ್ಲಿ ಲಕ್ಕಿ ತಪ್ಪಲು ಗಿಡಗಳು ಮಾತ್ರ ಇರಲಿಲ್ಲ. ಕೆಂಪುಲಕ್ಕಿ, ಆಪು, ಜೇಕು, ರಬ್ಬರ್ ಬಳ್ಳಿ ಮತ್ತಿತರೆ ಕಡು ಹಸಿರುಕ್ಕುವ ಜಲಸಸ್ಯ ರಾಶಿಗಳ ಕೂಟವೇ ಅದಾಗಿರುತ್ತಿತ್ತು. ಕರಿಜಾಲಿಯ ಮುಳ್ಳುಕಂಟಿ ಕೀಟಗಳು ಸಹಿತ ಸೇರಿಕೊಂಡು ಝೀ.. ಝೀ.. ಅಂತ ತಾರಕದ ಸ್ವರದಲ್ಲಿ ಝೀಗುಡುತ್ತಿತ್ತು. ಅಲ್ಲೇ ಮೂರು ಹಳ್ಳಗಳು ಕೂಡುವ ಸಂಗಮ. ಕೆಂಪುಹಳ್ಳ, ಸವುಳುಹಳ್ಳ, ಲಂಡೇನಹಳ್ಳ ಈ ಮೂರೂ ಹಳ್ಳಗಳು ಸೇರಿ ಒಂದಾಗಿರುವ ಸುಂದರ ಸ್ಥಳವೇ ಸಂಗಮ. ಅದು ಹೀಗೆ ಒಂದಾಗಿ ಮುಂದುವರೆದು ಹರಿಯುವುದೇ ಹಿರೇಹಳ್ಳ.

ಹಾಗೆ ನೋಡಿದರೆ ಹಿರೇಹಳ್ಳ ಎಂಬುದು ಒಂದು ಪುಟ್ಟ ನದಿಯೇ ಆಗಿದೆ. ಉತ್ತರಾಭಿಮುಖವಾಗಿ ಹರಿಯುವ ಹಿರೇಹಳ್ಳದ ಊರ ಕಡೆಯ ಎಡಬದಿಗೆ ಸಂಗಯ್ಯನ ವಾರಿ. ಮಡಿವಾಳಪ್ಪನವರು ಕಡಕೋಳಕ್ಕೆ ಆಗಮಿಸುವ ಪೂರ್ವದಲ್ಲೇ ಹಿರೇಹಳ್ಳ ಮತ್ತು ಸಂಗಯ್ಯನ ವಾರಿ ಜನಜನಿತ. ವಾರಿಯ ಮಹತ್ವದ ಜಾಗೆಯಲ್ಲಿ ಈಗಲೂ ಸಣ್ಣ ಸಣ್ಣ ಶಿಲಾರೂಪಗಳ ದೈವಸಂಗಯ್ಯನ ಗುರುತುಗಳಿವೆ. ಈಗ್ಗೆ ಬರೋಬ್ಬರಿ ಅರವತ್ತು ವರುಷಗಳ ಹಿಂದೆ ಎತ್ತುಗಳನ್ನು ಈಜಾಡಿಸಲು ಹೋಗಿ ಸಂಗಮದ ಸುಳಿ ಮಡುವಲ್ಲಿ ಸಿಲುಕಿ ಪ್ರಾಣತೆತ್ತ ನಿಂಗಯ್ಯನವರ ಗದ್ದುಗೆ ಅಲ್ಲಿದೆ. ಸಂಗಯ್ಯ ಎಂಬ ಹೆಸರು ಪ್ರಾಯಶಃ ಕಡಕೋಳ ನೆಲಮೂಲ ಪರಂಪರೆಯ ಪೂರ್ವಜರದು.

ಅಂದಹಾಗೆ ನಾವು ಸಣ್ಣವರಿದ್ದಾಗ ಸವಿದ ಸಂಗಯ್ಯನ ವಾರಿಯ ಸಂಭ್ರಮ ನಿಮಗೆ ಹೇಳಲೇ ಬೇಕಿದೆ. ವಾರಿಯೆಂದರೆ ದಪ್ಪ ದಪ್ಪ ಕಪ್ಪು ಕಲ್ಲು ಗುಂಡುಗಳು ಆವರಿಸಿದ ಹಸಿರು ಚೆಲ್ಲುವ ಗುಡ್ಡ. ಜವಾರಿ ಫಲಪುಷ್ಪ, ಗಿಡಗಂಟಿಗಳಿಂದ ಝೇಂಕರಿಸುವ ಹಸಿರಿನ ಸಡಗರ. ಕಾರೆಹಣ್ಣು, ಬೋರೆಹಣ್ಣು, ಕಳಮುಳ್ಳ ಹಣ್ಣು, ಸಿಂಬಳದ ಹಣ್ಣು, ಸಣ್ಣಸುಂಕದ ಮಜ್ಜಿಗೆರಾಣಿ, ಜೋಳದ ಹಣ್ಣು, ಚಳ್ಳಹಣ್ಣು, ಹೀಗೆ ಹತ್ತಾರು ಬಗೆಯ ಸೃಷ್ಟಿ ಸಹಜ ಬೆಳೆದುನಿಂತ ಹಣ್ಣಿನ ಗಿಡಗಳು. ತರಹೇವಾರಿ ಬಣ್ಣದ ಬೋರು ಹುಳಗಳು, ಪಾತರಗಿತ್ತಿಗಳು, ಕಾಗೆ, ಗಿಣಿ, ಕವುಜುಗ, ಗುಬ್ಬಚ್ಚಿಗಳು. ಕಚಗುಳಿ ಓಟದ ಮೊಲಗಳು. ಯಾವತ್ತೋ ಒಮ್ಮೆ ಪ್ರತ್ಯಕ್ಷಗೊಂಡು ತನ್ನ ಸಿರಿಕಂಠದ ಸಡಗರ ತೋರುವ ಕೋಗಿಲೆಯ ಕಲರವೂ ಇಲ್ಲದಿಲ್ಲ.

ಊರಿಗೆ ಅಪರೂಪಕ್ಕೆ ಬರುವ ಕರಿಮೂಸೆಯ ಬಾಲ ಹಣುಮ, ಮೊದಲು ಬರುತ್ತಿದ್ದುದೇ ಸಂಗಯ್ಯನ ವಾರಿಯ ಬೆಂಚಿಗೆ. ಅದರ ಬೆನ್ನು ಬೀಳುವ ಉಡಾಳ ಹುಡುಗರ ಪಡೆ. ಮಳೆ ಬಾರದಿದ್ದಾಗ ವರುಣನ ಕರುಣೆಗಾಗಿ ಸಂಗಯ್ಯನ ವಾರಿಯಲ್ಲಿ ಏರ್ಪಡುವ ಉಮೇದಿನ ಪರ್ವಕ್ಕೆ ಸಾಂಸ್ಕೃತಿಕ ಸಂಪ್ರೀತಿ ಇರುತ್ತಿತ್ತು. ಅದೇ ವಾರಿಯನ್ನು ಏರಿ ತುಸು ದೂರದ ಬೆಂಚಿಯ ಹತ್ತಿರ ಹೋಗುತ್ತಿದ್ದರೆ ದೊಡ್ಡ ದೊಡ್ಡ ಡೊಣ್ಣೆ ಮುಳ್ಳಿನ ಗಿಡಗಳು. ಬೇವು, ಕರಿಜಾಲಿ, ಮುಳ್ಳುಕೇದಗೆ, ಮಳಿಗೆ, ಇಂಗಳ, ಚನ್ನಕೇಸರಿ ಸೇರಿದಂತೆ ಹತ್ತು ಹಲವು ಜಾತಿ ಗಿಡಗಳೆಲ್ಲ ಬಳುಕಿ ಸೂಸುವ ಹೂಮೊಗ್ಗು, ಹಾಲ್ದೆನೆಗಳು.

ಔಷಧಿಯಾಗಿ ಇಂಗಳದ ಗಿಡ ಮರಗಳು. ಕಾಮಣಿ ಆದವರಿಗೆ ಮೇಣದಂತಹ ಇಂಗಳದ ಹಣ್ಣನ್ನು ಬೆಲ್ಲದೊಂದಿಗೆ ಬೆರೆಸಿ ಕೊಡುತ್ತಿದ್ದರು. ತಲೆ ಎತ್ತಿ ನೋಡಬೇಕಾದ ಎತ್ತರದ ಪತ್ರೆ ಮರಗಳು. ಪತ್ರೆಹಣ್ಣಿನ ಅಂಟನ್ನು ಮನುಷ್ಯರ ಉಸಿರುಕಟ್ಟಿದ ಎದೆಗೆ ಲೇಪಿಸಿದರೆ ಅದಕ್ಕಿಂತ ಸೂಕ್ತ ಚಿಕಿತ್ಸೆ ಮತ್ತೊಂದು ಇರುತ್ತಿರಲಿಲ್ಲ. ಬರಹದ ಆರಂಭಕ್ಕೆ ಪ್ರಸ್ತಾಪಿಸಿದ ಲಕ್ಕಿ ತಪ್ಪಲು ಜ್ವರ ನಿವಾರಣೆಗೆ ದಿವ್ಯೌಷಧಿಯೇ ಆಗಿತ್ತು.

ದಟ್ಟ ಹಸಿರು ಮತ್ತು ನೆರಳಿನ ಹತ್ತಾರು ಹುಣಚಿ ಮರಗಳ ಮೆಳೆಯೇ ಅಲ್ಲಿತ್ತು. ಹೀಗೆ ಕಡಕೋಳ ಎಂಬ ನಮ್ಮ ಬಿಸಿಲೂರಲ್ಲಿ ಪುಟ್ಟ ಮಲೆಯ ತಿಳಿಹಸಿರು ಸಣ್ಣಗೆ ಸೂಸುತ್ತಿತ್ತು. ನಾನು ಬಾಲ್ಯದಲ್ಲಿ ಸಂಗಯ್ಯನ ವಾರಿಯ ಈ ಎಲ್ಲ ವನಸಂಪತ್ತುಗಳ ಫಲಾನುಭವಿಯೂ ಹೌದು. ಆದರೆ ಮೂರುಹಳ್ಳ ಕೂಡಿದ ಸುಳಿ ಮಡುವಲ್ಲಿ ಮಾತ್ರ ಮಧ್ಯಾಹ್ನದ ವೇಳೆ ಈಜಾಡಲು ಹೋಗುತ್ತಿರಲಿಲ್ಲ. ಏಕೆಂದರೆ ಮಟಮಟ ಮಧ್ಯಾಹ್ನದ ಹೊತ್ತು ಹದಿಹರೆಯದ ಹುಡುಗರನ್ನು ಜಕಣಿಯರು ಬೇಟೆಯಾಡುತ್ತಾರೆಂದು ಹಿರೀಕರು ಮತ್ತೆ ಕೆಲ ಸರೀಕರು ಹೆದರಿಸುತ್ತಿದ್ದರು.

ಬೆಂಚಿಯ ಮತ್ತೊಂದು ಬದಿಯಲ್ಲಿ ಇದ್ದುದೇ, ತೋಟಪಟ್ಟಿಯ ತರಕಾರಿ ಮಡಿಗಳಿಗೆ ನೀರುಣಿಸುವ ಕಪಿಲೆ ಮಟ್ಟೆಯ ಬಳಪಗಲ್ಲಿನ ಬಾವಿ. ಅದು ಖುದ್ದು ಮಡಿವಾಳಪ್ಪನವರೇ ತೋಡಿ ಕಟ್ಟಿದ ಬಾವಿ. ಅದಕ್ಕೊಂದು ಚಾರಿತ್ರಿಕ ಕಥನವೇ ಇದೆ. ಮಡಿವಾಳಪ್ಪನವರು ಭಕ್ತರೊಬ್ಬರ ಮನೆಗೆ ಪ್ರಸಾದಕ್ಕೆ ಹೋಗಿರುತ್ತಾರೆ. ಅಂದು ಭಕ್ತರ ಮನೆಯಲ್ಲಿ ಬದನೆಕಾಯಿಯ ಎಣಗಾಯಿ ಪಲ್ಯ ರೊಟ್ಟಿ ತುಂಬಾ ಸೊಗಸಾಗಿರುತ್ತದೆ. ಎಷ್ಟು ಉಂಡರೂ ಹಸಿವಿನ ಹಂಬಲ ಹಿಂಗುವುದಿಲ್ಲ. ಮತ್ತೆ ಮತ್ತೆ ಕೇಳಿ ನೀಡಿಸಿಕೊಂಡು ಉಂಡರೂ ಮುಳಗಾಯಿ ಪಲ್ಯದ ರುಚಿ ಹೆಚ್ಚುತ್ತಲೇ ಹೋಗುತ್ತದೆ. ಭಕ್ತರ ಮನೆಯ ಬದನೆಕಾಯಿ ಪಲ್ಯವೇ ಮುಗಿಯುತ್ತದೆ ಹೊರತು‌ ಮಡಿವಾಳಪ್ಪನವರ ಹೊಟ್ಟೆಯ ಹಸಿವಿನ ರುಚಿ ಮುಗಿಯುವುದಿಲ್ಲ.

ಅಲ್ಲಿಂದ ಕಡಕೋಳಕ್ಕೆ ಬಂದವರೇ ತಾವೇ ಖುದ್ದು ವಾರಗಟ್ಟಲೇ ಬಾವಿ ತೋಡಿ ಮಡಿ ಮಾಡಿ ಬದನೆ ಹಚ್ಚುತ್ತಾರೆ. ಬದನೆಕಾಯಿ ಬೆಳೆದು ತಾವೇ ಹಂಡೆದಷ್ಟು ಬದನೆಕಾಯಿಯ ಎಣಗಾಯಿ ವ್ಯಂಜನ ತಯಾರಿಸುತ್ತಾರೆ. ತಾವೇ ತಟ್ಟಿ ಮಾಡಿದ ರೊಟ್ಟಿಗಳೊಂದಿಗೆ ಸಾಕು ಸಾಕಾಗುವಂತೆ ಉಂಡು ಸಂಭ್ರಮಿಸುತ್ತಾರೆ. ಅಂತಹ ಸದಾನಂದ ಸಂತೃಪ್ತಿ ಸಂದರ್ಭದಲ್ಲಿ ಅವರಿಂದ ತತ್ವಪದವೊಂದು ಹೀಗೆ ಸ್ಫೋಟಗೊಳ್ಳುತ್ತದೆ.

ಮಾಡಿ ಉಣ್ಣೋ ಬೇಕಾದಷ್ಟು/
ಬೇಡಿ ಉಣ್ಣೋ ನೀಡಿದಷ್ಟು //
ಮಾಡಿದವನಿಗಾದ ಮಡಿಗಡಬ/
ಮಾಡದವನಿಗಾದ ಬರಿಲಡಬ//

ಹೀಗೆ ಮಡಿವಾಳಪ್ಪ ತುಂಬಾ ಪ್ರಾಕ್ಟಿಕಲ್ ಬದುಕನ್ನೇ ಅಕ್ಷರಶಃ ಬಾಳಿ ತೋರಿದವರು. ಅಂತೆಯೇ ಎರಡು ಶತಮಾನಗಳಷ್ಟು ಹಿಂದೆ ಅವರು ಮಾಡಿಹೋದ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪಶುಪಾಲನೆ, ಕಜ್ಜಭಜ್ಜಿಯಂತಹ ಮಹಾಪ್ರಸಾದ ತಯಾರಿಕೆ, ಗಿಡಮೂಲಿಕೆ ಚಿಕಿತ್ಸೆ ಇತ್ಯಾದಿಗಳು ಶ್ರೀಮಠದ ಜೀವ ಪರಂಪರೆಯಾಗಿ ಬೆಳೆದು ಬಂದಿವೆ. ವರ್ತಮಾನದ ಮಠಾಧೀಶರಾದ ಡಾ. ರುದ್ರಮುನಿ ಶಿವಾಚಾರ್ಯರು, ಹಿರಿಯ ಗುರುಗಳಾದ ಶ್ರೀವೀರೇಶ್ವರ ಮಹಾದೇವರು ಅವರ ತರುವಾಯ ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ.

ಇದೀಗ ಡಾ. ರುದ್ರಮುನಿ ಶಿವಾಚಾರ್ಯರು ಮಹತ್ವದ ಮಹಾ ಕಾರ್ಯವೊಂದಕ್ಕೆ ಶ್ರೀಕಾರ ಹಾಕಿದ್ದಾರೆ. ಮಡಿವಾಳಪ್ಪನವರು ತೋಡಿ ಕಟ್ಟಿದ ಬಾವಿ ಮುಚ್ಚಿ ಹೋಗಿತ್ತು. ಅಂತಹದ್ದೊಂದು ಚರಿತ್ರಾರ್ಹ ಬಾವಿಗೆ ಕಾಯಕಲ್ಪ ರೂಪಿಸುವ ಸತ್ಸಂಕಲ್ಪ ಅವರದಾಗಿದೆ. ಕಳೆದವಾರ ಬಾವಿಯ ಹೂಳು ತೆಗೆಸುವ ಕಾರ್ಯ ಭರ್ಜರಿಯಾಗಿ ಜರುಗಿದೆ. ಬಾವಿಯ ಆಳ ಇನ್ನಷ್ಟು ಹೆಚ್ಚಿಸುವ ಮತ್ತು ಆಧುನಿಕರಿಸಿ ಅಂದಗೊಳಿಸುವ ಕಾರ್ಯಯೋಜನೆ. ಮಡಿವಾಳಪ್ಪನವರ ಮಹತ್ವಾಕಾಂಕ್ಷೆಯ ಬಾವಿಯನ್ನು ಸುಂದರ ಸ್ಮಾರಕವಾಗಿಸುವ ಯೋಚನೆ ಶ್ರೀಗಳವರದಾಗಿದೆ. ಅದು ತೋಟ ಕೃಷಿಕರಿಗೆ ಮಾದರಿ ಆಗಬೇಕಿದೆ. ಅದನ್ನವರು ಸ್ಥಳೀಯ ಎ.ಸಿ.ಎಸ್. ಛಾನಲ್ ಮೂಲಕ ಪ್ರಕಟ ಪಡಿಸಿದ್ದಾರೆ. ಶ್ರೀಗಳ ಈ ಮಹದಭೀಪ್ಸೆಯನ್ನು ನಾಲ್ಕು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಮೆಚ್ಚಿ ಕೊಂಡಾಡಿದ್ದಾರೆ.

ಇಂತಹದೇ ಮಾಡಬೇಕಾದ ಒಂದೆರಡು ಸಂಗತಿಗಳು ಕಾಯಕಲ್ಪ ಬಾವಿಯ ಸನಿಹದಲ್ಲಿವೆ. ಅಲ್ಲೇ ಕಣ್ಣಳತೆ, ಕೂಗಳತೆ ಸಮೀಪವೇ ಬಾವಿಗೆ ಅಂಟಿಕೊಂಡಂತೆ ಹಿರೇಹಳ್ಳ. ಮಡಿವಾಳಪ್ಪನವರಿಗೂ ಹಿರೇಹಳ್ಳದ ಪ್ರತಿಯೊಂದು ಹನಿ ನೀರಿಗೂ ಅವಿನಾಭಾವ ಸಂಬಂಧ. ಅದು ಅನುಭಾವದ ಅನುಬಂಧ. ಅಂತಹ ಭಾವ ಸಂಸ್ಕೃತಿಯ ಹಿರೇಹಳ್ಳ ಇಂದು ಹದಗೆಟ್ಟು ಅವಸಾನದ ಹಾದಿಯಲ್ಲಿದೆ. ಅಂದರೆ ಹಳ್ಳದ ತುಂಬಾ ಜಾಲಿ ಗಿಡಗಂಟಿಗಳ ಮುಳ್ಳು ಅರಣ್ಯವೇ ನಿರ್ಮಾಣಗೊಂಡಿದೆ. ಬೇಸಿಗೆಯಲ್ಲಂತೂ ಅದು ಪೂರ್ಣ ಕಲುಶಿತ. ಅದರ ಸಂಪೂರ್ಣ ಶುದ್ಧೀಕರಣ ಮತ್ತು ಅಭಿವೃದ್ಧಿ ಕಾರ್ಯ ಸರಕಾರದ ನೆರವಿನಿಂದ ಹಾಳತವಾಗಿ ಜರುಗಬೇಕಿದೆ. ಹಾಗೇನೇ ಹಳ್ಳದ "ಸಂಗಮ" ಸ್ಥಳಕ್ಕೆ ಸಾಂಸ್ಕೃತಿಕ ಮಹತ್ವ ದೊರಕಿಸಬೇಕಿದೆ.

ಮತ್ತೊಂದು ವಿಷಯ. ಸಾಧು ಮುತ್ಯಾನ ಕಲ್ಲು ಅಂತಲೇ ಪ್ರಸಿದ್ದವಾಗಿದ್ದ ಹಿರೇಹಳ್ಳದ ಮಹತ್ತರ ಸ್ಥಳ ಹೂತು ಹೋಗಿದೆ. ಅದರ ಪತ್ತೆ ಕಾರ್ಯವು ಆಗಬೇಕಿದೆ. ಮಡಿವಾಳಪ್ಪನವರ ಪರಿಶ್ರಮದ ಬಾವಿಯ ಪಕ್ಕದಲ್ಲೇ ಶ್ರೀಮಠದ ಪ್ರಥಮ ಮಠಾಧೀಶರಾಗಿದ್ದ ಪೂಜ್ಯಶ್ರೀ ಸಿದ್ದಲಿಂಗಯ್ಯ ಅವರ ಗದ್ದುಗೆ ಇದೆ. ಅದರ ಪಕ್ಕಕ್ಕೆ ಭೀಮರಾಯ ಸಾಧು ಗದ್ದುಗೆ ಇವೆ. ಹಳೆಯ ಗದ್ದುಗೆಗಳು ಶಿಥಿಲಗೊಂಡಿದ್ದು ಅವುಗಳ ಜೀರ್ಣಕಾರ್ಯವು ಜರುಗಲಿ. ಮಡಿವಾಳಪ್ಪನವರ ಬಾವಿಯ ಕಾಯಕಲ್ಪದ ಸಂಕಲ್ಪವು ಸಂಗಯ್ಯನ ಗುಡ್ಡ ಮತ್ತು ಬೆಂಚಿಯ ಸಮಗ್ರ ಅಭಿವೃದ್ಧಿಯ ಹಸಿರುಪಥವಾಗಲಿ. ಹಳೆಯ ಹಸಿರು ಸಿರಿಯ ನೆನಪುಗಳ ಉಸಿರು ಮತ್ತೆ ಮೊಳಗುವಂತಾಗಲಿ.

ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯು ತತ್ವಪದಗಳ ಅಲ್ಲಮನೇ ಆಗಿರುವ ಕಡಕೋಳ ಮಡಿವಾಳಪ್ಪನವರು ಬಾಳಿ ಬದುಕಿದ ನೆಲಧರ್ಮ ಸಂಸ್ಕೃತಿಯ ಅಭಿವೃದ್ಧಿಗೆ ಹಿಂದೇಟು ಹಾಕದೇ ಮುಂದಾಗಲಿ. ಆ ಮೂಲಕ ಅದು ಅಮರಾಕ್ಷರಗಳಲ್ಲಿ ಬರೆಯುವಂತಾಗಲಿ. ಹೌದು ಕಡಕೋಳ ಎಂಬುದು ಅಮರ ಸಂಸ್ಕೃತಿಯ ಊರು. ಮಡಿವಾಳಪ್ಪನವರ ಆಗಮನ ಪೂರ್ವದ ರೇವಣಸಿದ್ಧರು ಮತ್ತು ಮವಾರಿಸಿದ್ಧ ಮತ್ತು ಸಿರಿಸಿದ್ಧ ಹೀಗೆ ಮೂವರು ಸಿದ್ಧ ಪ್ರಸಿದ್ಧರು ಕಟ್ಟಿ ಕಾಪಾಡಿದ ಐತಿಹಾಸಿಕ ಊರು. ಶೈವಧರ್ಮದ ಪಾಶುಪತ ಪಂಥಕ್ಕೆ ಸೇರಿದವರು. ಇವರುಗಳು ಸಾಂಕ್ರಾಮಿಕ ಮತ್ತಿತರೆ ರೋಗ ರುಜಿನುಗಳಿಂದ ಊರನ್ನು ಪಾರು ಮಾಡಿದವರು.

ಊರ ಮುಂದೆ ಮತ್ತು ಹಿಂದೆ ಇವರ ಗುಡಿ ಕಟ್ಟೆಯ ಗುರುತುಗಳಿವೆ. ಕಡಕೋಳದಲ್ಲಿದ್ದ ಮೂರು ಪಾಳು ದೇಗುಲಗಳೇ ಇವರು ವಾಸವಾಗಿದ್ದ ಸ್ಥಳಗಳಾಗಿದ್ದವು ಎಂಬುದು ಸ್ಥಳೀಯ ಐತಿಹ್ಯ. ಇಂತಹ ಐತಿಹ್ಯಗಳನ್ನು ಮೀರಿಸುವಂತೆ ಪ್ರಸ್ತುತ ಮಡಿವಾಳಪ್ಪನವರ ತತ್ವಪದ ಸಾಹಿತ್ಯನಿಧಿ ಅಪೂರ್ವ ಕೊಡುಗೆಯಾಗಿ ಸೇರ್ಪಡೆ. ಜಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಸೆಡ್ಡು ಹೊಡೆದ ಶಕಪುರುಷ ಮಡಿವಾಳಪ್ಪನವರ ಬದುಕು ಮತ್ತು ಸಾಧನೆಗಳನ್ನು ತನ್ಮೂಲಕ ನಾಡಿಗೆ ಪರಿಚಯಿಸುವ ಚಾರಿತ್ರಿಕ ಅಗತ್ಯವಿದೆ. ಅದು ಕಾಲದ ಜರೂರಿಯೂ ಆಗಿದೆ.

ಮಲ್ಲಿಕಾರ್ಜುನ ಕಡಕೋಳ
9341010712

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...