ಮೂಲಕನ್ನಡ 

Date: 25-06-2022

Location: ಬೆಂಗಳೂರು


“ಕನ್ನಡದ ಸಂದರ‍್ಬದಲ್ಲಿ ಬಾಶೆಯ ಇತಿಹಾಸವನ್ನು ಅದ್ಯಯನ ಮಾಡುವ ಪ್ರಯತ್ನಗಳು ಇಲ್ಲವೆ ಇಲ್ಲ ಎನ್ನುವಶ್ಟು ಕಮ್ಮಿ. ಹೀಗಾಗಿ ಮೂಲಕನ್ನಡದ ಕಾಲ ಯಾವುದು, ಅದು ಎಲ್ಲಿ ಬಳಕೆಯಲ್ಲಿದ್ದಿತು ಎಂಬ ಅಂಶಗಳ ಬಗೆಗೆ ಹೆಚ್ಚು ತಿಳುವಳಿಕೆ ಇಲ್ಲ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ, ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಮೂಲಕನ್ನಡದ ಕಾಲವನ್ನು ಅಂದಾಜಿಸಬಹುದಾದ ಮಾರ್ಗಗಳ ಬಗ್ಗೆ ಸುಳಿವು ಕೊಡುತ್ತಾರೆ.

ಮೂಲಬಾಶೆ ಎನ್ನವುದು ಬಾಶಾವಿಗ್ನಾನದಲ್ಲಿ ಒಂದು ಪರಿಕಲ್ಪನೆ. ಮೂಲದಲ್ಲಿ ಒಂದು ಬಾಶೆ ಇದ್ದಿತು, ಅದು ಕಾಲಾನುಕ್ರಮೇಣ ಬದಲಾಗುತ್ತಾ ಬೆಳೆಯುತ್ತಾ ಬರುತ್ತದೆ. ಹೀಗೆ, ಒಂದು ಬಾಶೆಯ ಇತಿಹಾಸವನ್ನು ಕೆದಕುತ್ತಾ ಒಂದು ಹಂತಕ್ಕೆ ಹೋಗಿ ನಿಲ್ಲಬಹುದಾದ ನೆಲೆಗೆ ಮೂಲಬಾಶೆ ಎನ್ನಲಾಗುತ್ತದೆ. ಮೂಲದ್ರಾವಿಡ ಎಂದರೆ ದ್ರಾವಿಡದ ಒಳಗುಂಪುಗಳು ಟಿಸಿಲೊಡೆಯುವ ಮುನ್ನಿನ ಹಂತ. ಅದಕ್ಕಿಂತಲೂ ಹಿಂದೆ ಬಾಶೆ ಇದ್ದೆ ಇರುತ್ತದೆ. ಆದರೆ ಅದ್ಯಯನದ ಅನುಕೂಲಕ್ಕೆ ಒಂದು ನಿಲುಗಡೆ ಅನಿವಾರ‍್ಯ.

ಮೂಲಕನ್ನಡ ಎಂಬುದನ್ನು ಈಗ ಅರ‍್ತ ಮಾಡಿಕೊಳ್ಳುವ ಪ್ರಯತ್ನ ಮಾಡಬಹುದು. ಕನ್ನಡದ ಸಂದರ‍್ಬದಲ್ಲಿ ಬಾಶೆಯ ಇತಿಹಾಸವನ್ನು ಅದ್ಯಯನ ಮಾಡುವ ಪ್ರಯತ್ನಗಳು ಇಲ್ಲವೆ ಇಲ್ಲ ಎನ್ನುವಶ್ಟು ಕಮ್ಮಿ. ಹೀಗಾಗಿ ಮೂಲಕನ್ನಡದ ಕಾಲ ಯಾವುದು, ಅದು ಎಲ್ಲಿ ಬಳಕೆಯಲ್ಲಿದ್ದಿತು ಎಂಬ ಅಂಶಗಳ ಬಗೆಗೆ ಹೆಚ್ಚು ತಿಳುವಳಿಕೆ ಇಲ್ಲ.

ಕನ್ನಡದಲ್ಲಿ ‘-ಆಗ' ಎಂಬುದು ಒಂದು ನೆಲೆಯನ್ನು ಹೇಳುವ ಸಪ್ತಮಿವಿಬಕ್ತಿ ರೂಪ. ಅಂದರೆ ಜಾಗವನ್ನು ಹೇಳುವುದಕ್ಕೆ ಬಳಕೆಯಾಗುವ ರೂಪ. ಇದರ ಇತಿಹಾಸವನ್ನು ಕೆದಕುತ್ತಾ ಹೋದಾಗ ಇದು ಮೂಲದ ದೊಡ್ಡ ಕತೆಯನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಒಂದು ಪ್ರತ್ಯಯದ ಹಾಗೆ ಇಂದು ಕನ್ನಡದಲ್ಲಿ ಬಳಕೆಯಲ್ಲಿರುವ ಈ ರೂಪ ಮೊದಲೊಮ್ಮೆ 'ಅಕನ್' ಎಂಬ ರೂಪದ ಸ್ವತಂತ್ರ ಪದವಾಗಿ ಬಳಕೆಯಲ್ಲಿದ್ದಿತು. ಇದರ ಅರ‍್ತ, ಒಳಗೆ, ಮನೆ ಎಂಬುದು. ಹೀಗೆ ಪದಗಳು ಪ್ರತ್ಯಯಗಳಾಗಿ ಬೆಳೆಯುವುದು ಬಾಶೆಯಲ್ಲಿ ಸಹಜವಾಗಿ ಕಂಡುಬರುವ ಲಕ್ಶಣ. ಕನ್ನಡದಲ್ಲೂ ಇಂತಾ ಹಲವಾರು ಬೆಳವಣಿಗೆಗಳು ಆಗಿವೆ. ಅಕನ್ ಎಂಬ ಪದವು ಕರ‍್ಣಾಟಕಂ ಎಂಬ ರೂಪದಲ್ಲಿ ಇದೆ. ಕರ‍್ಣಾಟ+ಅಕನ್ ಸೇರಿ ಕರ‍್ಣಾಟಕಂ ಎಂದಾಗಿದೆ. ಹಾಗೆಯೆ ಇನ್ನಿತರ ಕೆಲವು ಸಮಾಸ ಪದಗಳಲ್ಲಿ ಇದು ಸಿಗುತ್ತದೆ. ಅಂದರೆ ಮೊದಲಲ್ಲಿ ಅಕನ್ ಎಂಬ ರೂಪವು ಸ್ವತಂತ್ರ ಪದವಾಗಿ ಬಳಕೆಯಲ್ಲಿದ್ದಿತು. ಆನಂತರ ಕ್ರಮೇಣ ಅದು ಪ್ರತ್ಯಯವಾಗಿ ಬೆಳೆದಿದೆ. ಹೀಗೆ ಸ್ವತಂತ್ರ ಪದಗಳು ಪ್ರತ್ಯಯಗಳಾಗಿ ಬೆಳೆಯುವ ಪ್ರಕ್ರಿಯೆ ಬಾಶೆಯಲ್ಲಿ ಸಹಜ. ಇದಕ್ಕೆ ವ್ಯಾಕರಣರೂಪವಾಗುವುದು ಎಂದು ಹೇಳಲಾಗುತ್ತದೆ. ಈ ಬೆಳವಣಿಗೆ ಸುದೀರ‍್ಗ ಕಾಲದಲ್ಲಿ ಆಗುವಂತದ್ದು. ಹೀಗೆ ಒಂದು ಸ್ವತಂತ್ರ ಪದ ಬದ್ದ ಪ್ರತ್ಯಯವಾಗಿ ಬೆಳೆಯಲು ಹಲವು ನೂರು ವರುಶಗಳ ಕಾಲಾವದಿ ಬೇಕಾಗುತ್ತದೆ. ಸದ್ಯಕ್ಕೆ ನಮಗೆ ದೊರೆಯುವ ಕನ್ನಡದ ಅತಿ ಹಳೆಯ ದಾಕಲೆಗಳಲ್ಲಿ ಅಕನ್ ಎಂಬ ರೂಪವು ಪ್ರತ್ಯಯವಾಗಿ ದೊರೆಯುತ್ತದೆ ಮತ್ತು ಎಲ್ಲಿಯೂ ಸ್ವತಂತ್ರ ಪದವಾಗಿ ಬಳಕೆಯಾಗಿದ್ದಕ್ಕೆ ಆದಾರಗಳು ದೊರೆಯುವುದಿಲ್ಲ. ಹಾಗಾದರೆ ಸದ್ಯ ಬರಹದ ದಾಕಲೆಗಳು ದೊರೆಯುವ ನಾಲ್ಕಯ್ದನೆ ಶತಮಾನಕ್ಕಿಂತ ಹಿಂದೆಯೆ ಅಕನ್ ಇದು ಪ್ರತ್ಯಯವಾಗಿ ಬೆಳೆದಿದ್ದಿತು ಎಂಬುದು ಸ್ಪಶ್ಟವಾಗುತ್ತದೆ. ಇನ್ನೂ ಹಿಂದಕ್ಕೆ ಅದು ಸ್ವತಂತ್ರ ಪದವಾಗಿ ಬಳಕೆಯಲ್ಲಿದ್ದು, ಬದ್ದ ರೂಪವಾಗಿ ಬೆಳೆಯುವುದಕ್ಕೆ ಕೆಲವಾರು ನೂರು ವರುಶಗಳಾಗಿರುತ್ತದೆ. ಇಶ್ಟು ಮಾತ್ರ ಲೆಕ್ಕ ಹಿಡಿದರೂ ನಾಲ್ಕಯ್ದನೆ ಶತಮಾನಕ್ಕಿಂತ ಸಾವಿರ ವರುಶದಶ್ಟು ಹಿಂದೆ ಅಕನ್ ಎಂಬ ರೂಪ ಸ್ವತಂತ್ರ ಪದವಾಗಿದ್ದಿತು ಎಂದೆನ್ನಬಹುದು. ತಮಿಳಿನಲ್ಲಿ ಈ ರೂಪ ಈಗಲೂ ಪದವಾಗಿ ಬಳಕೆಯಲ್ಲಿದೆ.

ಈ ರೂಪದಲ್ಲಿ ಹಲವು ಪ್ರಕ್ರಿಯೆಗಳು ನಡೆದಿರುವುದನ್ನೂ ಕಾಣಬಹುದು. ಮೂಲದಲ್ಲಿ ಇದ್ದ ಕ್ ದ್ವನಿಯು ಆನಂತರ ಗ್ ದ್ವನಿಯಾಗಿ ಬದಲಾಗಿದೆ. ಮೂಲದಲ್ಲಿ ವ್ಯಂಜನಕೊನೆ ಆಗಿದ್ದ ರೂಪವು ಸ್ವರಕೊನೆಯಾಗಿ ಬೆಳೆದಿದೆ.

ಮೂಲಕನ್ನಡದಲ್ಲಿ ಕನ್ನಡ ಬಾಶೆಯಲ್ಲಿ ಗೋಶ ದ್ವನಿಗಳಾದ ಗ್, ಜ್, ಡ್, ದ್, ಬ್ ಇವು ಇರಲಿಲ್ಲ, ಮತ್ತು ಇವು ಕೆಲವು ನಿರ‍್ದಿಶ್ಟ ಪರಿಸರಗಳಲ್ಲಿ ಮಾತ್ರ ಬರುತ್ತಿದ್ದವು. ಇದಕ್ಕೆ ಸಾಕಶ್ಟು ಆದಾರಗಳು ದೊರೆಯುತ್ತವೆ. ತಮಿಳಿನಲ್ಲಿ ಇಂದಿಗೂ ಈ ಸ್ತಿತಿಯನ್ನು ಕಾಣಬಹುದು. ಅಗೋಶ ದ್ವನಿಗಳಾದ ಕ್, ಚ್, ಟ್, ತ್, ಪ್ ದ್ವನಿಗಳು ಸಹಜವಾಗಿ ಬಳಕೆಯಲ್ಲಿದ್ದವು. ಬಹುಶಾ ಮೂಲಕನ್ನಡದ ಹಂತದಲ್ಲಿ ಅಗೋಶ ದ್ವನಿಗಳ ಬಳಕೆಯ ಪರಿಸರವು ವಿಸ್ತರಿಸಿಕೊಳ್ಳುವ ಪ್ರಕ್ರಿಯೆ ಮೊದಲಾಗಿರಬೇಕು. ನಂತರ ನಿರ‍್ದಿಶ್ಟ ಪರಿಸರವನ್ನು ಅವು ಪಡೆದುಕೊಂಡು ಇಂದಿನ ಸ್ತಿತಿಯ ಬಳಕೆಯನ್ನು ಪಡೆದುಕೊಂಡಿವೆ. ಇದಕ್ಕೆ ಕಾಟಯ್ಯ>ಕಾಡು, ಮಕನ್>ಮಗ, ನಿನ್ತನ್>ನಿಂದನು ಹೀಗೆ ಹಲವೆಡೆ ಅಗೋಶಗಳು ಗೋಶಗಳಾಗಿ ಪರಿವರ‍್ತನೆ ಆದುದನ್ನು ಕಾಣಬಹುದು. ಇದಕ್ಕೆ ಶಾಸನಗಳಲ್ಲಿ ವೆಗ್ಗಳ ಬಳಕೆಗಳು ಸಿಗುತ್ತವೆ. ಮೂಲಕನ್ನಡದಲ್ಲಿ ನಿರ‍್ದಿಶ್ಟ ಪರಿಸರದಲ್ಲಿ ಅಂದರೆ ಇಂದಿನ ತಮಿಳಿನ ಹಾಗೆ ಬಳಕೆಯಾಗುತ್ತಿದ್ದ ಗೋಶ ದ್ವನಿಗಳು ಸಂದಿ ಪ್ರಕ್ರಿಯೆಯಲ್ಲೆಲ್ಲ ಬಳಕೆಗೆ ಮೊದಲು ಬಂದು ನಂತರ ಅವು ಪದನಡುವೆ ವಿಸ್ತರಿಸಿಕೊಂಡಿವೆ. ಪದನಡುವೆ ಈ ಮೊದಲು ಬಳಕೆಯಾಗುತ್ತಿದ್ದ ನಿರ‍್ದಿಶ್ಟ ಪರಿಸರವನ್ನು ಒಡೆದುಕೊಂಡು ಸಹಜವಾಗಿ ಎಲ್ಲೆಡೆ ಪದನಡುವೆ ಬಳಕೆಯಾಗಲು ತೊಡಗಿದವು. ಮುಂದೆ ಇವು ನಿದಾನವಾಗಿ ಪದಮೊದಲಲ್ಲಿ ಬಳಕೆಗೆ ಬಂದವು. ಈ ಪ್ರಕ್ರಿಯೆಯು ಬಹು ಹಿಂದೆಯೆ ನಡೆದಿದೆ. ಸದ್ಯಕ್ಕೆ ನಮಗೆ ದೊರೆಯುವ ದಾಕಲೆಗಳಲ್ಲಿ ಅಗೋಶ ದ್ವನಿಗಳ ಸಹಜ ಬಳಕೆ ಕಂಡುಬರುತ್ತದೆ. ಅಲ್ಲದೆ ಕನ್ನಡಕ್ಕೆ ಸುಮಾರು ಎರಡು ಸಾವಿರ ವರುಶಗಳ ಹಿಂದೆ ಲಿಪಿಯನ್ನು ಅಳವಡಿಸಿಕೊಂಡಾಗ ಅಗೋಶ ದ್ವನಿಗಳಿಗೆ ಲಿಪಿಯನ್ನು ಅಳವಡಿಸಿಕೊಂಡದ್ದನ್ನೂ ಕಾಣಬಹುದು. ಅಂದರೆ ಅದಕ್ಕಿಂತ ಬಹುಹಿಂದೆ ಅಗೋಶಗಳು ಗೋಶಗಳಾಗಿ ಬೆಳೆಯುವ ಪ್ರಕ್ರಿಯೆ ಮಹತ್ವದ ಹಂತಕ್ಕೆ ಬಂದಿದ್ದಿರಲೇಬೇಕು. ಈ ದ್ವನಿ ಬದಲಾವಣೆಗೆ ಹಲವಾರು ನೂರು ವರುಶಗಳು ಬೇಕಾಗುತ್ತದೆ. ಇದು ಕೇವಲ ಒಂದೆರಡು ನೂರು ವರುಶಗಳಲ್ಲಿ ನಡೆಯುವ ಪ್ರಕ್ರಿಯೆಯಲ್ಲ. ಹಾಗಾದರೆ ನಮಗೆ ದಾಕಲೆಗಳು ದೊರೆಯುವ ಮತ್ತು ಲಿಪಿ ಅಳವಡಿಕೆಯ ಕಾಲಕ್ಕಿಂತ ಅಂದರೆ ಇಂದಿಗೆ ಸುಮಾರು ಎರಡು ಸಾವಿರ ವರುಶಗಳಿಗಿಂತ ಹಿಂದೆಯೆ ಈ ಬೆಳವಣಿಗೆ ನಡೆದಿರಬೇಕು. ಈ ಬೆಳವಣಿಗೆಯಲ್ಲಿ ಅಕನ್ ಎಂಬ ರೂಪ ಅಗನ್ ಎಂದಾಗಿದೆ. ಹಾಗಾಗಿ ಗ್ ದ್ವನಿ ಇರುವ ಹಲವು ಪ್ರತ್ಯಯ ರೂಪಗಳು ಸಿಗುತ್ತವೆ. ಅದರೊಟ್ಟಿಗೆ ಅಕನ್ ಎಂಬ ಕ್ ದ್ವನಿ ಇರುವ ರೂಪವೂ ಬಹುಹಿಂದೆಯೆ ಪ್ರತ್ಯಯವಾಗಿರುವುದರಿಂದ ಇಂದಿಗೂ ಕ್ ದ್ವನಿ ಇರುವ ಹಲವು ಪ್ರತ್ಯಯ ರೂಪಗಳು ಕೂಡ ಬಳಕೆಯಲ್ಲಿವೆ.

ಕನ್ನಡದಲ್ಲಿ 'ಮೇಲೆ' ಎಂಬ ಶಿಶ್ಟಕನ್ನಡದ ರೂಪವೊಂದು ಬಳಕೆಯಲ್ಲಿದೆ. ಇದಕ್ಕೆ 'ಮ್ಯಾಕ', ಮ್ಯಾಗ' ಎಂಬ ಮೊದಲಾದ ರೂಪಗಳು ಬಳಕೆಯಲ್ಲಿವೆ. ಈ ಮೂರೂ ರೂಪಗಳಲ್ಲಿನ ಮೊದಲ ಬಾಗ 'ಮೇ' ಎಂಬುದಾಗಿದೆ. ಇದಕ್ಕೆ 'ಅಲ್ ಎಂಬ ರೂಪ ಸೇರಿ 'ಮೇಲ್' ಎಂದಾಗಿದೆ. ಮುಂದೆ ಈ ರೂಪ ಸ್ವರಕೊನೆಯಾಗುವ ಪ್ರಕ್ರಿಯೆಯಲ್ಲಿ 'ಮೇಲೆ' ಎಂದು ಬೆಳೆದಿದೆ. ಹಾಗೆಯೆ 'ಮೇ' ರೂಪಕ್ಕೆ ಈ ಮೇಲೆ ಮಾತಾಡಿದ 'ಅಕನ್'ದಿಂದ ಬೆಳೆದ 'ಅಕ' ಮತ್ತು 'ಅಗ' ಎಂಬ ರೂಪಗಳು ಸೇರಿ ಕ್ರಮವಾಗಿ 'ಮ್ಯಾಕ' ಮತ್ತು 'ಮ್ಯಾಗ' ಎಂಬ ರೂಪಗಳು ಬೆಳೆದಿವೆ. ಈ ರೂಪಗಳು ವಿವಿದ ಕನ್ನಡಗಳಲ್ಲಿ ಇಂದು ಬಳಕೆಯಲ್ಲಿವೆ. 'ಮ್ಯಾಗ' ಎಂಬುದು ಉತ್ತರ ಕರ‍್ನಾಟಕ ಪ್ರದೇಶಗಳಲ್ಲಿ ಹೆಚ್ಚಾಗಿ ಮತ್ತು 'ಮ್ಯಾಕ, ಮ್ಯಾಕೆ' ಎಂಬ ರೂಪಗಳು ದಕ್ಶಿಣ ಕರ‍್ನಾಟಕ ಪ್ರದೇಶದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವಂತಿವೆ. ಇಲ್ಲಿ 'ಮೇ' ರೂಪದಲ್ಲಿ ಇರುವ ಏ ಸ್ವರವು ಹಲವೆಡೆ ಆ್ಯ ಸ್ವರವಾಗಿ ಸಹಜವಾಗಿ ಬಳಕೆಯಾಗುತ್ತದೆ. ಹಾಗೆ, 'ಮೇ+-ಆಕ' ಇದು 'ಮ್ಯಾಕ' ಆಗಿ, 'ಮೇ+ಆಗ' ಇದು 'ಮ್ಯಾಗ' ಆಗಿ ಬಳಕೆಯಲ್ಲಿವೆ. ಈ ಮೂರೂ ರೂಪಗಳು ಬಹುಹಿಂದೆಯೆ ಬೆಳೆದಿರುವ ಸಾದ್ಯತೆ ಇದೆ.

ಇಂತಾ ಸಮಾಸ ಪ್ರಕ್ರಿಯೆಗಳು ಬಹು ಹಳೆಯವು. ಸಹಜವಾಗಿಯೆ ಇವೆಲ್ಲ ಕ್ರಿಸ್ತಪೂರ‍್ವದಲ್ಲಿಯೆ ಆಗಿವೆ. ಯಾವ ಬೆಳವಣಿಗೆ ಯಾವ ಕಾಲದಲ್ಲಿ ಎಂದು ಹೆಚ್ಚು ನಿಕರವಾಗಿ ಹೇಳುವುದಕ್ಕೆ ಹೆಚ್ಚಿನ ಅದ್ಯಯನಗಳು ಬೇಕು.

ಇಂತಾ ಕೆಲವು ಬದಲಾವಣೆಗಳನ್ನು ಗಮನಿಸಿ ಮೂಲಕನ್ನಡದ ಕಾಲವನ್ನು ಅಂದಾಜಿಸಲು ಸಾದ್ಯ. ಸದ್ಯ, ಈ ಮತ್ತು ಇಂತಾ ಹಲವಾರು ಅನುಮಾನಗಳ ಆದಾರದ ಮೇಲೆ ಸರಳವಾಗಿ ಮೂರು ಸಾವಿರಕ್ಕೂ ಹೆಚ್ಚಿನ ವರುಶಗಳ ಹಿಂದೆಯೆ ಕನ್ನಡವು ಮೂಲದ್ರಾವಿಡದಿಂದ ಬೇರೆಯಾಗಿದ್ದಿತು ಎಂದು ಹೇಳಬಹುದು. ಆಳವಾದ ಅದ್ಯಯನಗಳು ಹೆಚ್ಚು ನಿಕರವಾಗಿ ಮಾತಾಡಬಲ್ಲವು.

ಈ ಅಂಕಣದ ಹಿಂದಿನ ಬರೆಹ:
ಕನ್ನಡ ಪಳಮೆ

ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...