ಮೋಳಿಗೆ ಮಹಾದೇವಿ

Date: 18-04-2022

Location: ಬೆಂಗಳೂರು


'ಪರದ್ರವ್ಯವನ್ನು ಮುಟ್ಟಬಾರದೆಂಬ ಶರಣ ಸಿದ್ಧಾಂತಕ್ಕೆ ಬದ್ಧರಾದ ಮೋಳಿಗೆ ಮಹಾದೇವಿ ಹಾಗೂ ಮಾರಯ್ಯ ದಂಪತಿಗಳು ಅಂದಿನಿಂದ ಕಲ್ಯಾಣದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡು ಸಾಧನೆ ಮಾಡುತ್ತಾರೆ. 'ಧೀರ ಮೋಳಿಗೆ ಮಾರಯ್ಯ' ಎಂಬ ಬಿರುದನ್ನು ಪಡೆದು, ಎಲ್ಲ ಶಿವಶರಣರ ಪ್ರೀತಿಗೆ ಪಾತ್ರರಾಗುತ್ತಾರೆ' ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ಶರಣೆ ಮೋಳಿಗೆ ಮಹಾದೇವಿಯವರ ಕುರಿತು ಬರೆದಿದ್ದಾರೆ.

ಮಹಾದೇವಿ, ಮೋಳಿಗೆ ಮಾರಯ್ಯನ ಧರ್ಮಪತ್ನಿ. ಇವರಿದ್ದ ಕಾಲ ಕ್ರಿ.ಶ. 1160. ಈ ದಂಪತಿಗಳ ಪೂರ್ವದ ಹೆಸರು ಮಹಾದೇವ ಮತ್ತು ಗಂಗಾದೇವಿ. ಮಹಾದೇವ ಕಾಶ್ಮೀರದರಸನಾಗಿದ್ದ, ಗಂಗಾದೇವಿ ಆತನ ಪಟ್ಟದರಿಸಿಯಾಗಿದ್ದಳು. ನಿತ್ಯವೂ ಆರುಸಾವಿರ ಜಂಗಮರಿಗೆ ದಾಸೋಹ ಮಾಡುತ್ತ ಕಾಶ್ಮೀರದಲ್ಲಿ ಹೆಸರುವಾಸಿಯಾಗಿದ್ದ ಮಹಾದೇವ ಭೂಪಾಲನು ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆಯುತ್ತಿದ್ದ ಕ್ರಾಂತಿಯನ್ನು ಕಂಡು ಬೆರಗಾಗುತ್ತಾನೆ. ಸಮಸಮಾಜ ಕಟ್ಟಲು ಬಸವಣ್ಣನವರು ಕೈಕೊಂಡ ಚಳವಳಿಯಲ್ಲಿ ತಾನೂ ಭಾಗವಹಿಸಬೇಕೆನಿಸುತ್ತದೆ. ಆಗ ಮಹಾದೇವ ಭೂಪಾಲ ಮತ್ತು ಗಂಗಾದೇವಿ ಕಾಶ್ಮೀರವನ್ನು ಬಿಟ್ಟು, ಅರಸೊತ್ತಿಗೆಯನ್ನು ತೊರೆದು, ಆಧ್ಯಾತ್ಮ ಸಾಧನೆಗಾಗಿ ದಂಪತಿಗಳಿಬ್ಬರು ಕಲ್ಯಾಣಕ್ಕೆ ಬರುತ್ತಾರೆ. ಕಲ್ಯಾಣದಲ್ಲಿ ಬಸವಣ್ಣನವರ ಮಹಿಮೆಯನ್ನು ಕಂಡು ಬೆರಗಾಗುತ್ತಾರೆ. ತಮ್ಮ ಪೂರ್ವದ ಹೆಸರು ಬದಲಿಸಿಕೊಂಡು, ಮಾರಯ್ಯ-ಮಹಾದೇವಿಯರಾಗಿ ಕಟ್ಟಿಗೆ (ಮೋಳಿಗೆ) ಮಾರುವ ಕಾಯಕ ಕೈಕೊಳ್ಳುತ್ತಾರೆ. ಎಲ್ಲ ಸಿರಿಸಂಪತ್ತನ್ನು ತ್ಯಜಿಸಿಬಂದು ಸಾಮಾನ್ಯ ಭಕ್ತರಂತೆ ಕಲ್ಯಾಣದಲ್ಲಿ ಮೋಳಿಗೆ ಕಾಯಕದಲ್ಲಿ ನಿರತರಾಗಿ ಜೀವನ ಸಾಗಿಸುತ್ತಾರೆ. ಅರಮನೆಯನ್ನು ತೊರೆದು, ಕುಟೀರವನ್ನು ಕಟ್ಟಿಕೊಂಡು, ಅರಸೊತ್ತಿಗೆಯನ್ನು ಬಿಟ್ಟು ಶಿವಶರಣರಿಗೆ ಕಟ್ಟಿಗೆ ಮಾರುವ ಕಾಯಕ ಕೈಕೊಂಡು ಕಲ್ಯಾಣದಲ್ಲಿ ಸರಳಜೀವನ ಸಾಗಿಸುತ್ತಾರೆ.

ಭೀಮಕವಿಯ- "ಬಸವ ಪುರಾಣ", ಗೌರವಾಂಕನ-"ಮೋಳಿಗಯ್ಯನ ಪುರಾಣ", "ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ", "ಶೂನ್ಯ ಸಂಪಾದನೆ" ಈ ಮೊದಲಾದ ಕೃತಿಗಳಲ್ಲಿ ಈ ದಂಪತಿಗಳ ಬದುಕಿಗೆ ಸಂಬಂಧಿಸಿದ ವಿವರಗಳು ಲಭ್ಯವಾಗುತ್ತವೆ. ಭೀಮ ಕವಿಯ "ಬಸವ ಪುರಾಣದ" ಮೂವತ್ತೊಂದನೇ ಸಂಧಿಯಲ್ಲಿ ಮೋಳಿಗೆ ಮಹಾದೇವಿಯ ವಿವರಗಳು ಸಿಗುತ್ತವೆ. ಸುಖದ ಸುಪ್ಪತ್ತಿಗೆಯಲ್ಲಿ ಮಲಗುತ್ತಿದ್ದ ಈ ದಂಪತಿಗಳು, ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗುತ್ತಾರೆ. ಹಿಂದೆ ಮೃಷ್ಟಾನ್ನ ಭೋಜನವನ್ನುಂಡ ಇವರು ಅಂಬಲಿಯನ್ನು ಕುಡಿದು ಬದುಕುತ್ತಾರೆ. ಆಸ್ತಿ, ಅಂತಸ್ತು, ಅರಸೊತ್ತಿಗೆಗಳಿಗಿಂತ ಜನಸಾಮಾನ್ಯರ, ದುಡಿವ ವರ್ಗದವರ ಸರಳಜೀವನ ಬಹುದೊಡ್ಡದೆಂದು ತಿಳಿದು, ಸಾಮಾನ್ಯ ಭಕ್ತರಂತೆ ಬಾಳಿದ ಈ ದಂಪತಿಗಳು ಆದರ್ಶಪ್ರಾಯರಾಗಿದ್ದಾರೆ.

ಈ ಭಕ್ತರನ್ನು ಪರೀಕ್ಷಿಸುವುದಕ್ಕಾಗಿ ಬಸವಣ್ಣನವರು ಜಂಗಮ ವೇಷದಲ್ಲಿ ಇವರ ಮನೆಗೆ ಹೋಗುತ್ತಾರೆ. ಪತಿ ಮಾರಯ್ಯ ಅಡವಿಗೆ ಕಟ್ಟಿಗೆ ತರಲು ಹೋದಾಗ, ಕುಟೀರದಲ್ಲಿ ಮಹಾದೇವಿಯೊಬ್ಬಳೇ ಇರುತ್ತಾಳೆ. ಆಗ ಬಸವಣ್ಣನವರು ಮಹಾದೇವಿ ಕೊಟ್ಟ ಅಂಬಲಿ ಪ್ರಸಾದವನ್ನು ಸೇವಿಸಿಬರುವಾಗ, ಎರಡು ಸಾವಿರ ಹೊನ್ನಿನ ಜಾಳಿಗೆಯನ್ನ ಅಲ್ಲಿಯೇ ಬಿಟ್ಟು ಬರುತ್ತಾರೆ. ಮಾರಯ್ಯ ಬಂದನಂತರ ಮಹಾದೇವಿ ಈ ಹೊನ್ನಿನ ಜಾಳಿಗೆಗಳ ಬಗ್ಗೆ ಹೇಳುತ್ತಾಳೆ. ಇದು ಬಸವಣ್ಣನವರದೇ ಪರೀಕ್ಷೆಯೆಂದು ತಿಳಿದ ಮಾರಯ್ಯನು ಆ ಎರಡೂ ಜಾಳಿಗೆಗಳಲ್ಲಿರುವ ಹೊನ್ನನ್ನು ಜಂಗಮ ದಾಸೋಹಕ್ಕೆ ಕೊಟ್ಟುಬಿಡುತ್ತಾರೆ.

ಪರದ್ರವ್ಯವನ್ನು ಮುಟ್ಟಬಾರದೆಂಬ ಶರಣ ಸಿದ್ಧಾಂತಕ್ಕೆ ಬದ್ಧರಾದ ಈ ದಂಪತಿಗಳು ಅಂದಿನಿಂದ ಕಲ್ಯಾಣದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡು ಸಾಧನೆ ಮಾಡುತ್ತಾರೆ. 'ಧೀರ ಮೋಳಿಗೆ ಮಾರಯ್ಯ' ಎಂಬ ಬಿರುದನ್ನು ಪಡೆದು, ಎಲ್ಲ ಶಿವಶರಣರ ಪ್ರೀತಿಗೆ ಪಾತ್ರರಾಗುತ್ತಾರೆ. ಹೀಗಿರುವಾಗ ಮಾರಯ್ಯನಿಗೆ ತಾನೂ ಕೈಲಾಸಕ್ಕೆ ಹೋಗಬೇಕೆಂಬ ಆಸೆಯಾಗುತ್ತದೆ. ಆಗ ಪತ್ನಿ ಮಹಾದೇವಿಯೇ ಪತಿಗೆ ಬುದ್ಧಿ ಹೇಳುತ್ತಾಳೆ. ಕೈಲಾಸಕ್ಕೆ ಹೋಗಲು ಭಕ್ತಿ ಮಾಡುವದಾದರೆ, ಅದೇನು ಕೈ ಕೂಲಿಯೇ? ಎಂದು ಪ್ರಶ್ನಿಸುತ್ತಾಳೆ. ಕಾಯಕವೇ ಕೈಲಾಸವಾದ ಬಳಿಕ ಮತ್ತೊಂದು ಕೈಲಾಸವೆಂಬುದುಂಟೆ? ಎಂದು ಕೇಳುತ್ತಾಳೆ. ಆಗ ಪತಿ ಮಾರಯ್ಯನಿಗೆ ವಿವೇಕ ಜಾಗೃತವಾಗಿ ತನ್ನ ಪತ್ನಿ ಎಂತಹ ಅನುಭಾವಿಯಾಗಿರುವಳಲ್ಲವೆಂದು ಹೆಮ್ಮೆಪಡುತ್ತಾನೆ. ಕೈಲಾಸದಾಸೆಯನ್ನು ಕೈಬಿಟ್ಟು, ಕಾಯಕದಲ್ಲಿಯೇ ಕೈಲಾಸ ಕಾಣುತ್ತಾನೆ.

ಅನೇಕ ಶಿವಶರಣೆಯರು ತಮ್ಮ ಪತಿ ದಾರಿತಪ್ಪಿದಾಗ ದಾರಿಗೆ ತಂದಿದ್ದಾರೆ; ದೊಡ್ಡವರು ತಪ್ಪು ಮಾಡಿದಾಗ ತಿದ್ದಿ ಮುನ್ನಡೆಸಿದ್ದಾರೆ. ಹಿರಿಯರಾದವರಿಗೆ ಮರೆವು ಬಂದಾಗ ಅರಿವಿನ ಮೂಲಕ ಅದನ್ನು ಹೋಗಲಾಡಿಸಿದ್ದಾರೆ. ಹೀಗಾಗಿ ಇವರೆಲ್ಲ ನಿಜವಾದ ವಿಚಾರ ಪತ್ನಿಯರಾಗಿದ್ದಾರೆ. ಮೋಳಿಗೆಯ ಮಹಾದೇವಮ್ಮನಂತೂ ಮಹತ್ವದ ಸಾಧಕಿಯಾಗಿದ್ದಾಳೆ. ಸತಿಪತಿಗಳೊಂದಾದ ಇವರು ಆಧ್ಯಾತ್ಮ ಸಾಧನೆ ಮಾಡಿ ಕಲ್ಯಾಣ ಕ್ರಾಂತಿಯ ನಂತರ ಕಲ್ಯಾಣದ ಸಮೀಪದ ಮೋಳಿಕೇರಿಗೆ ಬಂದು ಅಲ್ಲಿಯೇ ಐಕ್ಯರಾಗುತ್ತಾರೆ. ಮೋಳಿಕೇರಿಯಲ್ಲಿ ಈ ದಂಪತಿಗಳ ಗವಿಯಿದೆ. ಗವಿಯಗರ್ಭಗುಡಿಯಲ್ಲಿ ಲಿಂಗವಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಶರಣರ ಈ ಸ್ಮಾರಕಗಳನ್ನು ಸಂರಕ್ಷಿಸಿದೆ.

ಮೋಳಿಗೆ ಮಹಾದೇವಿಯ 70 ವಚನಗಳು ಪ್ರಕಟವಾಗಿವೆ. "ಎನ್ನಯ್ಯಪ್ರಿಯ ನಿಃಕಳಂಕ ಮಲ್ಲಿಕಾರ್ಜುನ" ಎಂಬುದು ಈಕೆಯ ವಚನಾಂಕಿತವಾಗಿದೆ. ಅನುಭವ ಮಂಟಪವನ್ನು ಪ್ರವೇಶಿಸಿ, ಅಲ್ಲಿಯ ಶರಣರ ವಚನಗಳನ್ನು ಕೇಳಿ ಕೃತಾರ್ಥಳಾದ ಮಹಾದೇವಿಯು "ಅಯ್ಯಾ, ನಿಮ್ಮ ಶರಣರ ಸಂಗದಿಂದ ಮಹಾಪ್ರಸಾದದ ಪರುಷವ ಕಂಡೆ" ಎಂದು ಹೇಳಿದ್ದಾಳೆ. ಈ ವಚನದಲ್ಲಿ ಮುಂದಿನ ಸಾಲುಗಳು ಹೀಗಿವೆ:

"ಆ ಪರುಷದ ಮೇಲೆ ಮೂರು ಜ್ಯೋತಿಯ ಕಂಡೆ, ಆ ಜ್ಯೋತಿಯ ಬೆಳಕಿನಲ್ಲಿ ಒಂಭತ್ತು ರತ್ನವ ಕಂಡೆ ಆ ರತ್ನಂಗಳ ಮೇಲೆ ಒಂದು ಅಮೃತದ ಕೊಡನ ಕಂಡೆ ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರದ ಕರದವನೆ ನೆರದ, ನೆರದವನೆ ಕುರುಹನರಿದ
ಅರಿದವನೆ ನಿಮ್ಮನರಿದವ ಕಾಣಾ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ" (ವ-6)

ಈ ವಚನದಲ್ಲಿ ಮಹಾದೇವಿ ಬೆಡಗಿನಭಾಷೆ ಬಳಸಿದ್ದಾಳೆ. ಈ ವಚನದಲ್ಲಿ ಬರುವ ಮೂರು ಜ್ಯೋತಿಯೆಂದರೆ ಕಾಲತ್ರಯಗಳು. ಅಂತಹ ಕಾಲತ್ರಯಗಳಲ್ಲಿ ಕಂಗೊಳಿಸುವ ನವರತ್ನಗಳೆಂದರೆ ನವಗುಣ ಸ್ಥಲಗಳಾಗಿವೆ. ಗುರುಸ್ಥಲ, ಲಿಂಗಸ್ಥಲ, ಜಂಗಮಸ್ಥಲ, ಭಕ್ತಿಸ್ಥಲ, ಮಹೇಶ್ವರ ಸ್ಥಲ, ಪ್ರಸಾದಿಸ್ಥಲ, ಪ್ರಾಣಲಿಂಗಿ ಸ್ಥಲ, ಶರಣಸ್ಥಲ, ಐಕ್ಯಸ್ಥಲ ಇವೇ ನವಗುಣ ಸ್ಥಲಗಳು. ಈ ರತ್ನಗಳ ಮೇಲೆ ಕಾಣುವ ಅಮೃತ ಕೊಡವೆಂದರೆ ಅದೇ ಆತ್ಮ. ಈ ನವಗುಣ ಸ್ಥಲಗಳಿಂದ ಆತ್ಮ-ಪರಮಾತ್ಮನಾಗುತ್ತಾನೆ. ನರ-ಹರನಾಗುತ್ತಾನೆ, ಜೀವ- ದೇವನಾಗುತ್ತಾನೆ. ಈ ಸಾಧನೆಯನ್ನು ಕಂಡವನೇ ಉಂಡ, ಉಂಡವನೇ ಉರಿದ, ಉರಿದವನೇ ಕರದ, ಕರದವನೇ ನೆರೆದ, ನೆರದವನೇ ಕುರುಹ ತಿಳಿದು ಅರಿದ. ಹೀಗೆ ಅರಿದವನೇ ನಿಜವಾದ ದೇವರಾಗಿದ್ದಾನೆಂದು ಮಹಾದೇವಿ ಈ ವಚನದಲ್ಲಿ ಆತ್ಮ-ಪರಮಾತ್ಮನಾಗುವ ಪರಿಯನ್ನು ಸೊಗಸಾಗಿ ಹೇಳಿದ್ದಾಳೆ.

ಶ್ರದ್ಧೆ, ಸನ್ಮಾರ್ಗ, ಭಕ್ತಿ ಇಲ್ಲದೆ, ಗುರುಭಕ್ತಿ, ಲಿಂಗಪೂಜೆ, ಚರಸೇವೆ ಸಾಧ್ಯವಾಗುವುದಿಲ್ಲವೆಂದು ಹೇಳಿರುವ ಮಹಾದೇವಿ, ಕಲ್ಲಬಿತ್ತಿ ನೀರನೆರೆದರೆ ಸಸಿ ಪಲ್ಲವಿಸುವುದೇ ಎಂದು ಕೇಳಿದ್ದಾಳೆ. ತಾನೇ ಪ್ರಶ್ನೆಗಳನ್ನು ಕೇಳುತ್ತ, ಅದಕ್ಕೆ ಮುಂದಿನ ಸಾಲುಗಳಲ್ಲಿ ತಾನೇ ಉತ್ತರಗಳನ್ನು ಕೊಡುತ್ತ ಸಾಗುವ ಮಹಾದೇವಿಯ ವಚನಗಳು ಸಂಭಾಷಣೆಗಳಂತಿವೆ. ಜ್ಞಾನ ಮತ್ತು ಕ್ರಿಯೆಗಳು ಹಾರುವ ಹಕ್ಕಿಗೆ ಎರಡು ರೆಕ್ಕೆಗಳಿದ್ದಂತೆ. ಅವು ಒಂದನ್ನು ಬಿಟ್ಟು ಮತ್ತೊಂದಿಲ್ಲ. ಜ್ಞಾನವಿಲ್ಲದ ಕ್ರಿಯೆ ಹೇಗೆ ವ್ಯರ್ಥವೋ, ಹಾಗೆಯೇ ಕ್ರಿಯೆಗೆ ಬಾರದ ಜ್ಞಾನವೂ ಅಷ್ಟೇ ವ್ಯರ್ಥವಾದುದಾಗಿದೆ. ನೆಲವಿಲ್ಲದೆ ನೀರು ಹೇಗೆ ಇರುವುದಿಲ್ಲವೊ, ನೆಲೆಯಿಲ್ಲದೆ ಬೀಜ ಹೇಗೆ ಹುಟ್ಟುವುದಿಲ್ಲವೊ ಹಾಗೆ ಜ್ಞಾನ-ಕ್ರಿಯೆಗಳಿಲ್ಲದೆ ಸಾಧನೆ ಸಾಧ್ಯವಿಲ್ಲವೆಂಬುದು ಮಹಾದೇವಿಯ ಅಭಿಪ್ರಾಯವಾಗಿದೆ.

"ಅನಾಚರವ ಆಳವಟ್ಟು ಗುರುವನರಿಯಬೇಕು
ಅನಾಮಿಕನಾಗಿ ಲಿಂಗವ ಗ್ರಹಿಸಬೇಕು...." (ವ-5)
"ಆರು ದೇವರ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ
ಮೂರು ದೇವರ ನಿಮ್ಮ ಮೂಗಿನಲ್ಲಿ ಮುರಿದುಕೊಳ್ಳಿ..." (ವ-7)
"ಕಾಲಿದ್ದಂತೆ ತಲೆ ನಡೆದುದಂಟೆ ಅಯ್ಯಾ?
ಕಣ್ಣಿದ್ದಂತೆ ಕರ್ಣ ನೋಡಿದುದುಂಟೆ ಅಯ್ಯಾ?..." (ವ-96)

ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ
ಪರುಷರಸ ಕೈಯಲ್ಲಿದ್ದು ಕೂಲಿಯ ಮಾಡಲೇತಕ್ಕೆ...." (ವ-29)
"ಮಣ್ಣನಿತ್ತು ನಿಮ್ಮ ಕಂಡೆಹೆನೆಂದಡೆ ಜಗಭರಿತ ನೀನು
ಹೊನ್ನನಿತ್ತು ನಿಮ್ಮ ಕಂಡೆಹೆನೆಂದಡೆ ಹಿರಣ್ಯಮೂರ್ತಿ ನೀನು..." (ವ-55)

ಇಂತಹ ಅನೇಕ ನುಡಿಗಳ ಮೂಲಕ ಮೋಳಿಗೆ ಮಹಾದೇವಿ, ಕನ್ನಡ ಸಾಹಿತ್ಯದ ಕ್ಷಿತಿಜವನ್ನು ಹೆಚ್ಚಿಸಿದ್ದಾಳೆ. ಆಕೆಯ ವಚನಗಳಲ್ಲಿ ಬರುವ ಈ ದ್ವಿಪದಿಗಳಿಗೆ ತನ್ನದೇ ಆದ ವಿಶಿಷ್ಟ ಅರ್ಥಗಳಿವೆ. ಮಹಾದೇವಿ ಹೇಳುವ ಒಂದೊಂದು ಮಾತಿನಲ್ಲಿಯೂ ಒಂದೊಂದು ಅರ್ಥವಿದೆ. ಆ ಅರ್ಥವು ಅರಿವಿನಿಂದ ಬಂದುದಾಗಿದೆ. ಮರೆವನ್ನು ತೊರೆದುದಾಗಿದೆ.

"ಕಾಯವುಳ್ಕನ್ನಕ್ಕ ಕರ್ಮಬಿಡದು" ಎಂದು ಹೇಳುತ್ತಲೇ ಕಾಯಕ್ಕೂ - ಕಾಯಕಕ್ಕೂ ಇರುವ ಮಹತ್ವದ ಸಂಬಂಧವನ್ನು ಮಹಾದೇವಿ ಹೇಳಿದ್ದಾಳೆ. ಕಾಯಕವೇ ಕೈಲಾಸವಾದ ಮೇಲೆ ಮತ್ತೆ ಬೇರೆ ಕೈಲಾಸವೆಲ್ಲಿದೆಯೆಂದು ಕೇಳಿದ್ದಾಳೆ. ಕಾಶ್ಮೀರದಲ್ಲಿ ಮಹಾದೇವ ಭೂಪಾಲನ ಅರಸಿಯಾಗಿದ್ದ ಮಹಾದೇವಿ, ಕಲ್ಯಾಣಕ್ಕೆ ಬಂದು ಮೋಳಿಗೆ ಕಾಯಕ ಮಾಡುವ ಶರಣೆಯಾಗಿ ಬೆಳೆದದ್ದನ್ನು ನೋಡಿದಾಗ ಅಧಿಕಾರ-ಅಂತಸ್ತುಗಳಿಗಿಂತ, ಭಕ್ತಿ-ಕಾಯಕ ಬಹುದೊಡ್ಡದೆನಿಸುತ್ತವೆ. ಹೀಗಾಗಿ ಮಹಾದೇವಿ ಇಂದು ಹೆಚ್ಚುಪ್ರಸ್ತುತವಾಗುತ್ತಾಳೆ.

ವಿಜಯಶ್ರೀ ಸಬರದ
9845824834

ಮುಂದುವರೆಯುವುದು....
ಈ ಅಂಕಣದ ಹಿಂದಿನ ಬರೆಹಗಳು:

ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ
ಶಿವಶರಣೆ ಅಮುಗೆ ರಾಯಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ

ಚರಿತ್ರೆ ಅಂದು-ಇಂದು

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...