Date: 20-03-2025
Location: ಬೆಂಗಳೂರು
"ಈ ಕಥೆಯನ್ನು ಪರಾಮರ್ಶಿಸುವುದಾದಲ್ಲಿ ವೀಣಾ ಶಾಂತೇಶ್ವರ ಅವರ ಕಥಾನಾಯಕಿಯರಾರು ದುರ್ಬಲರಲ್ಲ. ಬದಲಾಗಿ ವಿದ್ಯಾವಂತರು ಸದೃಢಶೀಲರು. ನಾನು ಈ ಕಥೆಯನ್ನು ಓದಿದಾಗ ಇದುವರೆಗೂ ಓದಿದ ಹಲವಾರು ಕಥೆಗಳಿಗಿಂತ ವಿಭಿನ್ನ ನೆಲೆಯಲ್ಲಿ ರೂಪಗೊಂಡಿದೆ ಎನಿಸಿದಂತೂ ಸತ್ಯ," ಎನ್ನುತ್ತಾರೆ ಅಂಕಣಗಾರ್ತಿ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ವೀಣಾ ಶಾಂತೇಶ್ವರ ಅವರ "ಕೊನೆಯ ದಾರ" ಕಥೆಯ ಬಗ್ಗೆ ವಿಮರ್ಶಿಸಿದ್ದಾರೆ.
ನವ್ಯ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ವೀಣಾ ಶಾಂತೇಶ್ವರ ಅವರ ಹೆಸರು ಚಿರಪರಿಚಿತ. ಇವರ ಮೊದಲ ಹೆಸರು ವೀಣಾ ಯಲಬುರ್ಗಿ. ಫೆಬ್ರವರಿ 22 1945ರಲ್ಲಿ ಧಾರವಾಡದಲ್ಲಿ ಹುಟ್ಟಿದ ಇವರು ಪಿ.ಹೆಚ್. ಡಿ ಪದವಿ ಮುಗಿದ ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಭಾಷಾ ಉಪನ್ಯಾಸಕಿಯಾದರು. ಇವರು ಇವರು ಬಹುಭಾಷಾ ಪ್ರವೀಣೆ ಕೂಡ ಹೌದು. ಮುಳ್ಳುಗಳು, ಕವಲು, ಕೊನೆಯ ದಾರಿ, ಹಸಿವು, ಎಂಬ ಕಥಾಸಂಕಲನಗಳು, ಹಾಗೂ ಗಂಡಸರು, ಶೋಷಣೆ ಬಂಡಾಯ,ಇವು ಇವರ ಕಾದಂಬರಿಗಳು. “ಮುಳ್ಳುಗಳು” ಇವರ ಪ್ರಥಮ ಕಥಾಸಂಕಲನ 1968ರಲ್ಲಿ ಸಂಕ್ರಮಣ ಪ್ರಕಾಶನದ ಮೂಲಕ ಪ್ರಕಟಗೊಂಡಿತು. ಅದೃಷ್ಟ, ಕುರಿಗಾಯಿ, ಬಿಲ್ಲೆಪುರ, ನದಿ ದ್ವೀಪಗಳ, ಇವು ಇವರ ಅನುವಾದಿತ ಕೃತಿಗಳು. ಇವರ “ಕವಲು ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ” ಲಭಿಸಿದೆ. ಉಳಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.
ಕೊನೆಯ ದಾರಿ ಕಥೆಯಲ್ಲಿ ಲೀಲಾ ಎಂಬ ವಿವಾಹಿತ ಪರಿತ್ಯಕ್ತೆಯಾಗಿದ್ದವಳು. ಮದುವೆಯೆಂದರೆ ಜಿಗುಪ್ಸೆ ಪಟ್ಟುಕೊಳ್ಳುವಷ್ಟು ಗಂಡನಿಂದ ನೋವು ಉಂಡವಳು ಎಂಬುದು ಸೂಚಿತವಾಗಿದೆ ಈ ಕಥೆಯಲ್ಲಿ. ಕಥಾನಾಯಕಿ ಅವಳ ಸ್ನೇಹಿತರು ಹಾಗೂ ಆಫೀಸ್ ನಲ್ಲಿ ತನಗಾಗಿ ಒಂದು ಮಗು ಬೇಕು ಎಂದು ಬಯಸಿದಾಗ, ಅವಳ ಹತ್ರ ಇದುವರೆಗೂ ಪ್ರೀತಿ ಬಯಕೆ ಆಸೆ ಕನಸು ಎಂದು ಅವಲತ್ತುಕೊಳ್ಳುತ್ತಿದ್ದ ವಿನಯ ಸಾಳಕರ, ಡಾ:ಗೋವಿಂದಮೂರ್ತಿ ವಿಲಿಯಮ್ಸ್, ಮತ್ತು ಆಕೆಯ ಬಾಸ್, ಇವರೆಲ್ಲಾ ಆಕೆಯಿಂದ ಕೇವಲ ಸುಖವನ್ನು ಬಯಸಿದ್ದವರೆ ಹೊರತು ಆಕೆಯ ಈ ತರದ ಬಯಕೆಗೆ, ಕನಸಿಗೆ, ಯಾರು ಕೂಡ ನೈತಿಕವಾಗಿ ಬೆಂಬಲ ಸೂಚಿಸದೆ ತಾವು ಆ ವಿಚಾರಧಾರೆಗೆ ಉಪದೇಶ ನೀಡಿ ದೂರವೇ ಸರಿದು ನಿಂತಾಗ ಆಕೆಯ ಅಪ್ಪನ ಸ್ನೇಹಿತ ಶಂಕರಗೌಡ ಈಕೆ ಬರೆದ ಕಾಗದಕ್ಕೆ ಅನುಗುಣವಾಗಿ ಆಕೆಯನ್ನು ಕರೆದೊಯಲು ಬರುತ್ತಾನೆ. ಶಂಕರಗೌಡ ಮದುವೆಯಾಗಿ 25 ವರ್ಷವಾದರೂ ಮಕ್ಕಳಾಗದೆ ಇದ್ದಾಗ ಹೆಂಡತಿ ಅರ್ಥಾಂಗವಾಯುವಿನಿಂದ ಹಾಸಿಗೆ ಹಿಡಿದ ಹೆಂಡತಿ ಇದ್ದರೂ ಬೇಸರಿಸದಂತಹ ವ್ಯಕ್ತಿತ್ವ ಹೊಂದಿದ ಶಂಕರಗೌಡ ಲೀಲಾಳನ್ನು ಕರೆದುಕೊಂಡು ಹೊರಡುವ ಸನ್ನಿವೇಶಕ್ಕೆ ಕಥೆ ಮುಕ್ತಾಯ ಕೊಳ್ಳುವುದು.
ಈ ಕಥೆಯನ್ನು ಪರಾಮರ್ಶಿಸುವುದಾದಲ್ಲಿ ವೀಣಾ ಶಾಂತೇಶ್ವರ ಅವರ ಕಥಾನಾಯಕಿಯರಾರು ದುರ್ಬಲರಲ್ಲ. ಬದಲಾಗಿ ವಿದ್ಯಾವಂತರು ಸದೃಢಶೀಲರು. ನಾನು ಈ ಕಥೆಯನ್ನು ಓದಿದಾಗ ಇದುವರೆಗೂ ಓದಿದ ಹಲವಾರು ಕಥೆಗಳಿಗಿಂತ ವಿಭಿನ್ನ ನೆಲೆಯಲ್ಲಿ ರೂಪಗೊಂಡಿದೆ ಎನಿಸಿದಂತೂ ಸತ್ಯ. ಇಷ್ಟು ನಿರ್ಭಿಡೆಯಿಂದ ಸುಮಾರು 50 ವರ್ಷಗಳ ಹಿಂದೆ ವೀಣಾರವರು ಇಷ್ಟು ಗಟ್ಟಿತನದಿಂದ ಧೈರ್ಯದಿಂದ ಬರೆಯುತ್ತಾರೆಂದರೆ ಅವರ ಒಳಗಿನ ತಲ್ಲಣಕ್ಕೆ ಸವಾಲುಗಳನ್ನು ಎದುರಿಸಲು ಸನ್ನದ್ಧವಾದ ಬರವಣಿಗೆ ಎಣಿಸುವುದು ಸಹಜ.
ಪಾರಂಪರಿಕವಾಗಿ ಸಾಗಿ ಬಂದ ಈ ಸಮಾಜದಲ್ಲಿ ವಿಧವೆಯರೆಂದರೆ ಬೋಳಮ್ಮರನ್ನಾಗಿಸಿ ಬಿಡುವ ಅಥವಾ ಮರು ಮದುವೆ ಮಾಡದೆ ತವರು ಮನೆಯಲ್ಲಿ ಪುಕ್ಕಟ್ಟೆ ಚಾಕರಿಗೆ ಒಂದು ಆಳಾಯಿತು ಎನ್ನುವಂತಹ,ಹಾಗೂ ಪರಿತ್ಯಕ್ತೆಯಾದರೆ ಬಾಳು ಅಸಹ್ಯ ಎಂದು ಹೀಯಾಳಿಸುವಂತಹ ಸನ್ನಿವೇಶ ಇರುವಾಗ ಈ ಕಥೆಯ ಕಥಾನಾಯಕಿ ವಿದ್ಯಾವಂತೆ ಮೇಲಾಗಿ ಸಮಾಜದ ಎಲ್ಲ ಸಂಪ್ರದಾಯ ಮೌಲ್ಯಗಳನ್ನು ಪ್ರಶ್ನೆ ಮಾಡಿ ತನಗೆ ಬೇಕಾದ ರೀತಿಯಲ್ಲಿ ತನಗೆ ಸರಿ ಅನಿಸಿದ ಬದುಕನ್ನು ಸ್ವತಂತ್ರವಾಗಿ ಆಯ್ದುಕೊಳ್ಳುವಂತಹ ಮನೋಭಾವವನ್ನು ಚಿತ್ರಿಸಿರುವುದು ಈ ಕಾಲಕ್ಕೂ ಆ ಕಾಲಕ್ಕೂ ಅಷ್ಟು ಸುಲಭದ ಮಾತಲ್ಲ. ಆದರೆ ವೀಣಾರವರು ಅತ್ಯಂತ ಶ್ರದ್ಧೆಯಿಂದ ದೃಢತೆಯಿಂದ ಈ ಕಥಾಹಂದರವನ್ನು ಹೆಣೆದಿದ್ದಾರೆ.
ಕಥಾನಾಯಕಿ ಲೀಲಾ ಮದುವೆಯಾಗಿ ಗಂಡನಿಂದ ಪರಿತ್ಯಕ್ತೆಗೊಂಡಾಕೆ. ಆತನ ಹಿಂಸೆಯಿಂದ ಬದುಕು ನರಕ ಸದೃಶವೆನಿಸುವುದನ್ನು ಒಂದೆರಡು ವಾಕ್ಯದಲ್ಲಿ ವಿವರಿಸಿರುವುದರಿಂದ ನಾವು ಅರ್ಥೈಸಬಹುದಾದ ಕಟು ಸತ್ಯ. ಈ ಕಥೆಯಲ್ಲಿ ಕಥಾನಾಯಕಿಯಂತೆ ಪುರುಷರು ಸಹ ವಿದ್ಯಾವಂತರೆ ಆದರೆ ಲೀಲಾಳಂತೆ ಸ್ವಾವಲಂಬಿಯಾಗಿ ಪ್ರಗತಿಪರತೆಯಿಂದ ಯೋಚಿಸಲಾರರು. ವಿದ್ಯೆ ಒಂದಿದ್ದರೆ ಸಾಕೆ? ಬುದ್ಧಿ ಬೇಡವೇ? “ಅಭ್ಯಾಸಾನುಗತಃ ವಿದ್ಯೆ, ಬುದ್ಧಿ
ಕರ್ಮಾನುಸಾರಣ”. ಎನ್ನುವಂತೆ ಅವರ ಆಚಾರ ವಿಚಾರ ಕರ್ಮಕ್ಕನುಗುಣವಾಗಿ ಅವರನ್ನು ಅವರೇ ನಿರ್ವಹಿಸಿಕೊಳ್ಳುತ್ತಾರೆ. ಹಾಗಂತ ಈ ಕಥೆಯಲ್ಲಿ ನಾಯಕಿಯ ಪ್ರೀತಿಗೆ ಹಾಗೂ ಆಕೆಯ ಸಾಂಗತ್ಯಕ್ಕೆ ವಿಲಿಯಮ್ಸ್, ವಿನಯ ಸಾಳಕರ,
ಡಾ: ಗೋವಿಂದಮೂರ್ತಿ ಮತ್ತು ಆಕೆಯ ಆಫೀಸಿನ ಬಾಸು, ಇತ್ಯಾದಿ ಇವರೆಲ್ಲರಿಗೂ ಆಕೆ ಇಷ್ಟ, ಆಕೆಯ ಪ್ರೀತಿ ದೇಹ ಸಾಂಗತ್ಯ ಎಲ್ಲವೂ ಬೇಕು. ಆದರೆ ಲೀಲಾ ತಾನು ಬಯಸಿದ ಬದುಕಿಗೆ ತನ್ನದೇ ಆದ ಆಯ್ಕೆಗೆ, ಮರು ಮದುವೆ ಆಗದೆ ಮಗು ಪಡೆಯಬೇಕೆಂಬ ಹಂಬಲಕ್ಕೆ ಇವರಾರು ಬೆಂಬಲ ಸೂಚಿಸಲಾರರು. ನಿಮ್ಮಿಂದ ಮಗು ಪಡೆದ ನಾನು ಎಂದಿಗೂ ಯಾವುದೇ ರೀತಿಯ ತೊಂದರೆ ನೀಡಲಾರೆ ನನ್ನ ಬದುಕು ನನ್ನದು ಎನ್ನುವಂತಹ ಸ್ವತಂತ್ರ ದೃಡ ನಿರ್ಧಾರ ಬಯಸುವ ಆಕೆಯ ಆ ಮಾತಿನಲ್ಲೂ ಯಾರಿಗೂ ಒಲವಿಲ್ಲ ನಂಬಿಕೆ ಇಲ್ಲ. ಒಲವೆಲ್ಲ ಆಕೆಯ ದೇಹದ ಮೇಲಷ್ಟೇ "You are a perfect women " ಎನ್ನುವ ಗೋವಿಂದಮೂರ್ತಿ ಕೇವಲ ದೇಹರಚನೆಯಷ್ಟರ ಬಗ್ಗೆ ಒಡಂಬಡಿಸುತ್ತಾನೆ. ಲೇಖಕಿ ಅವರು ಕಥಾನಾಯಕಿಯ ಮೂಲಕ ಪರ್ಫೆಕ್ಟ್ ವುಮೆನ್ ಎನ್ನುವ ಮಾತಿನ ಅನ್ವಯ “ನಿನ್ನ ದೇಹ ರಚನೆ ಚೆನ್ನಾಗಿದೆ, ಪೂರ್ಣವಾಗಿದೆ,ಅಂತ ಹೇಳುವಾಗ ಯಾವ ಹೆಂಗಸಿಗೆ ಅಭಿಮಾನ ಅನಿಸುವುದಿಲ್ಲ”. ಎಂಬ ಪ್ರಶ್ನೆಯನ್ನು ಲೀಲಾಳಿಂದ ಹೇಳಿಸುತ್ತಾರೆ. ಅಂದರೆ ಒಬ್ಬ ಮಹಿಳೆಯ ಪರ್ಫೆಕ್ಟ್ ನೆಸ್ ಎನ್ನುವಂತಹದ್ದು ಕೇವಲ ದೇಹ ರಚನೆಯ ಮೂಲಕವೇ ಎನ್ನುವುದಾದರೆ ಉಳಿದೆಲ್ಲ ಗುಣಗಳು ಗೌಣವೇ? ಪುರುಷ ಲೋಕಕ್ಕೆ ಕಾಣುವುದಿಲ್ಲವೇ? ಎಂಬ ಪ್ರಶ್ನೆ ಸಹಜವಾಗಿ ಮೂಡುವುದು. ಡಾಕ್ಟರ್ ಗೋವಿಂದ ಮೂರ್ತಿ ಅಂತವರು ದೇಹವನ್ನು ಕೇವಲ ಬಯಾಲಜಿಕಲ್ ಆಗಿಯೇ ನೋಡುವುದೇ ವಾಸ್ತವಿಕತೆಯಾದರೆ, ಭಾವನೆಗಳಿಗೆ ಬೆಲೆಯಾದರೂ ಎಲ್ಲಿದೆ?
ವಿನಿಯಾ ಸಾಳಕರ ಫಿಲಾಸಫಿ ಉಪನ್ಯಾಸಕನಾಗಿ ಆಕೆಯನ್ನು ಆತ್ಮಸಾಂಗತ್ಯಕ್ಕಾಗಿ ಬಯಸುತ್ತಾನೆ. ಹೀಗೆ ಎಲ್ಲರ ಬಯಕೆ ಭಾವನೆಗಳು ಬೇರೆಯಾದರು ಹೆಣ್ಣು ಅನ್ನುವ ಜೀವ ಒಂದೇ. ವಿನಯ ಸಾಳಕರನಂತವರು “ನಮ್ಮ ಪ್ಲೇಟೋನಿಕ್ ಪ್ರೀತಿ ಹಿಂಗ ಉಳಿಲಿ, ಬೆಳಿಲಿ, ಮುಂದಿನ ಜನ್ಮದಾಗ ಮಾತಾ,,,” ಎನ್ನುವ ಈತ, ಪ್ರಾಕೃತಿಕವಾಗಿ ತಾಯ್ತನದ ಹಂಬಲಿಕೆಯನ್ನು ತಿರಸ್ಕರಿಸುವ ಪಿತೃ ಪ್ರಧಾನ ವ್ಯವಸ್ಥೆ ಅವಳ ಆಲೋಚನ ಕ್ರಮವನ್ನು, ಆಕೆಯನ್ನು ಹಾಗೂ ಆದರಿಂದ ತಾವು ಪಾರಾಗಲು ಎಲ್ಲರೂ ಬಯಸುತ್ತಾರೆ. ಈ ಪಾರಾಗುವಿಕೆಗೆ ಈಕೆಯ ಬಾಸು, ವಿಲಿಯಮ್ಸ್, ಗೋವಿಂದಮೂರ್ತಿ, ವಿನಯ ಸಾಳಕರ, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಈಕೆಯನ್ನು ಬಯಸಿ ಸುಖ ಉಂಡು ತಾಯ್ತನದ ನಿಲುವಿಗೆ ಮಾತ್ರ ಬದ್ಧರಾಗದೆ ನಾಯಕಿಯ ತಾಯ್ತನದ ಆಸೆಯನ್ನು ಯಾರು ಪೂರೈಸಲಾದ ಪುರುಷ ಪಾತ್ರಗಳ ನೈತಿಕತೆಯನ್ನು ಹಕ್ಕು ಬಾಧ್ಯತೆಗಳ ಕುರಿತು ಚರ್ಚಿಸಬೇಕಿದೆ. ಬಯಸಿದ್ದನ್ನೇ ಕೊಡಲಾರದವರು ಇವಳಿಂದ ಮಾತ್ರ ಅವರ ಆಸೆ ಬಯಕೆಗೆ ನೀರೆರೆಯಬೇಕೆಂದು ಹಂಬಲಿಸುವ ಪುರುಷತ್ವದ ಮೇಲುಗೈ ಸಾಧಿತವಾಗುವುದರ ಹಿನ್ನೆಲೆ ನಿಚ್ಚಳವಾಗಿ ಕಾಣುವುದು.ಅವಳ ಈ ಆಲೋಚನಾ ಕ್ರಮವನ್ನೇ ಬುಡಮೇಲು ಮಾಡುವ ಪುರುಷ ವ್ಯವಸ್ಥೆ “ಇನ್ನೂ ಮದುವೆಯಾಗದ ಹುಡುಗಿ ನಮ್ಮಿಂದ ಇಂತಹ ಪಾಪದ ಕೆಲಸ ಆಗೋದಿಲ್ಲ ಅಲ್ಲಾಕೆ ಕಸಮ್” ಎಂದು ತಡವರಿಸುವ ಲೀಲಾಳ ಬಾಸು, “ಮದುವೆಯಾಗದ ಹುಡುಗಿಯ ಕೂಡ ಮಲಗಲಿಕ್ಕೆ ಬೇಕು ಈ ಸಾಬನಿಗೆ, ಆದರೆ ಅವಳಿಗೆ ಇಷ್ಟೊಂದು ಅವಶ್ಯವಾಗಿರುವ ಒಂದು ಸಣ್ಣ Favour ಮಾಡಲಿಕ್ಕೆ ಬೇಡ ಪಾಪವಂತೆ”. ಎಂದುಕೊಳ್ಳುವ ಕಥಾನಾಯಕಿಯ ಚಿಂತನೆ ವೀಕ್ಷಿಸಿದಾಗ ಬೇರೊಂದು ಹೆಣ್ಣಿನ ಜೊತೆ ಮಲಗಲಿಕ್ಕೆ ಪಾಪ ಪುಣ್ಯದ ಪ್ರಜ್ಞೆ ಬರಲಾರದು. ಮಗು ನೀಡುವಾಗ ಬರುವುದಾದರೆ ಇಂಥವರ ಮನಸ್ಥಿತಿಯಲ್ಲಿ ಅಡಗಿರುವ ಸಂಕುಚಿತ ಮನೋಭಾವನೆ ಕೂಡ ವ್ಯಕ್ತಗೊಳ್ಳುವುದು.
ಹೀಗೆ ಮಗುವನ್ನು ಪಡೆಯುವ ಹಂಬಲವನ್ನು ಬಯಸಿದಾಕೆಯ ಮನದಲ್ಲಿ ಜರುಗುವ ಸಂಘರ್ಷ ಇಡೀ ಕಥೆಯುದ್ಧಕ್ಕೂ ಗೋಚರಿಸುತ್ತದೆ. ಆದರೆ ಗಂಡಸರ ಮನಸ್ಸಿನಲ್ಲಿ ಇಂತಹ ಭಾವಪೂರ ತಲ್ಲಣಗಳು ಜರುಗುತ್ತವೆಯಾ ಅಥವಾ ಇಲ್ಲವೇ? ಜೊತೆಗೆ ಈ ಪುರುಷರು ಎಷ್ಟೊಂದು ಅನಧಿಕೃತವಾದ ಅಪ್ಪಂದಿರು ಆಗಿರಬಹುದಾದ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಬಯಸಿದ್ದನ್ನೇ ಕೊಡಲಾರದವರು ಇವಳ ನಿಲುವನ್ನೇ ಅಪರಾಧಿಯನ್ನಾಗಿಸುವುದಾದಲ್ಲಿ ಇವರ ಅನಧಿಕೃತ ಅನೈತಿಕ ವಿಚಾರಗಳು ಪಾಪ ಪುಣ್ಯ ಧರ್ಮ ಕರ್ಮ ಇವೆಲ್ಲ ಅಪರಾಧವಾಗುವುದಿಲ್ಲವೇ? ಎಂಬುದು ಈ ಮೂಲಕ ವಿಮರ್ಶಿಸುವಂತಹ ಗಂಭೀರ ವಿಚಾರ.
ತನ್ನ ತಂದೆಯ ಗೆಳೆಯನೊಂದಿಗೆ ಹೊರಟ ಕಥಾನಾಯಕಿ ಕುರಿತು “ವೀಣಾರವರ ಕಥೆಗಳು ಇಂಥ ಸಾಕಷ್ಟು ಸಾಧ್ಯತೆಗಳನ್ನು ಹುಡುಕಿಕೊಳ್ಳುತ್ತಲೇ ಹೋದವು. ಈ ಹುಡುಕಾಟದ ಹೊಸತನಕ್ಕೆ ಮಾರು ಹೋದವರಂತೆ ನಟಿಸಲಾಯಿತೇ ಹೊರತು ನಿಜವಾಗಿಯೂ ಅವರ ಸಾಹಿತ್ಯಕ್ಕೆ ಕಟ್ಟಬೇಕಾದ ಬೆಲೆ ಕಟ್ಟಲಾಯಿತು ಎಂದು ನನಗಂತೂ ಅನಿಸುವುದಿಲ್ಲ” ಎಂ.ಎಸ್. ಆಶಾದೇವಿಯವರು ಉಲ್ಲೇಖಿಸುತ್ತಾರೆ. ಎರಡನೇ ಗಂಡನಾಗಲಿರುವ ಶಂಕರಗೌಡ ಒಳ್ಳೆಯವನೆಂದು ಸೂಚಿಸಲಾಗಿದೆ. ಆದರೆ ಆತ ಅಪ್ಪನ ಸ್ನೇಹಿತ ಹೆಚ್ಚು ಕಮ್ಮಿ ಅಪ್ಪನ ಆಸುಪಾಸಿನ ವಯಸ್ಸಿನವನಿರಬಹುದು. ಹೀಗಿರುವಾಗ ಕಥಾನಾಯಕಿಯ ಆಯ್ಕೆಯ ಬದುಕು ಮುಂದೇನು ಎನ್ನುವ ಪ್ರಶ್ನೆಯ ಸಹ ಏಳುತ್ತದೆ. ಆದರೆ “ವೀಣಾ ಅವರ ಈ ಕಥೆ ನಿಜಕ್ಕೂ ಸಮಾಜಕ್ಕೆ ಪರಂಪರೆಗೆ, ಸಂಪ್ರದಾಯಕ್ಕೆ, ಸವಾಲೊಡ್ಡುವಂತದ್ದು ಎಂಬುದು ನನ್ನ ಅನಿಸಿಕೆ”. "ಸಂಪ್ರದಾಯಸ್ಥರಿಗೆ ಕೊನೆಯ ದಾರಿ ಅಂತ ಕಥೆಗಳಲ್ಲಿ ಒಂದಾಗಿದೆ”. (ಜಿ.ಹೆಚ್. ನಾಯಕ್ ಪ್ರಸ್ತಾವನೆಯಿಂದ)
ಈ ನಿಟ್ಟಿನಲ್ಲಿ ವಿಭಿನ್ನ ನೆಲೆಯ ಈ ಕಥೆಯ ಹರವು ಬಿಚ್ಚಿಕೊಳ್ಳುತ್ತ ದಿನಾಂಕ ತಿಂಗಳುಗಳಾದಿಯಾಗಿ ತೆರೆದುಕೊಳ್ಳುತ್ತದೆ. ಇಲ್ಲಿ ಬರುವ ಮಾತುಕತೆಗಳು ಅವು ನಡೆವ ಸಂದರ್ಭ ದಾಖಲಿಸುವುದರಿಂದ ಈ ಕಥೆಯನ್ನು ಓದುವಾಗ ಪತ್ರ ಓದಿದಂತಹ ಒಂದು ಅನುಭವವನ್ನು ನಮಗೆ ಕಟ್ಟಿಕೊಡುತ್ತದೆ.
- ವಾಣಿ ಭಂಡಾರಿ
ಈ ಅಂಕಣದ ಹಿಂದಿನ ಬರಹಗಳು:
ಹಂಗಿನರಮನೆಯ ಹೊರಗೆ ಕಥೆಯಲ್ಲಿ ಪ್ರೇಮ ವೈಫಲ್ಯದ ವೈರುಧ್ಯದ ಮುಖಗಳು
ಜಿ.ಎಸ್ ಸದಾಶಿವರ ಕಥೆ 'ಹ್ಯಾಂಗೊವರ್ ನಲ್ಲಿ ಮನದ ದ್ವಂದ್ವತೆ'
ಅಬಚೂರಿನ ಪೋಸ್ಟಾಫೀಸು ಕತೆಯಲ್ಲಿ ಕಾಣುವ ಹಳ್ಳಿ ಜಗತ್ತು
ಲಂಕೇಶ್ ಅವರ ನಿವೃತ್ತರು ಎಂಬ ಕಥೆಯಲ್ಲಿ ಕಾಣುವ ಸಣ್ಣತನ
ಶ್ರಾದ್ಧ ಕಥೆಯಲ್ಲಿ ಕಾಣುವ ಆಚಾರದ ದ್ವಂದ್ವ ನಿಲುವು
ರಾಮನ ಸವಾರಿ ಸಂತೆಗೆ ಹೋದದ್ದು ಕಥೆಯಲ್ಲಿ ಕಾಣುವ ವಿಷಮ ದಾಂಪತ್ಯ
ರಾಘವೇಂದ್ರ ಖಾಸನೀಸ ಅವರ ತಬ್ಬಲಿಗಳು ಕಥೆಯಲ್ಲಿ ಸಂಬಂಧಗಳ ಅಸಂಬದ್ಧತೆ
ಅನಂತಮೂರ್ತಿ ಅವರ `ಕ್ಲಿಪ್ ಜಾಯಿಂಟ್' ಕಥೆಯಲ್ಲಿ ಕಾಣುವ ಮೌಲ್ಯಶೋಧನೆ
ಶಾಂತಿನಾಥ ದೇಸಾಯಿ ಅವರ ಕ್ಷಿತಿಜ ಕಥೆಯಲ್ಲಿ ಕಾಣುವ ಸಾಂಸ್ಕೃತಿಕ ಮುಖಾಮುಖಿ
ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ
ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ
ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ
ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ
‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ
ಯಾರು ಹಿತವರು ನಿನಗೆ ಕಥೆಯೊಳಗಿನ ಕಾಮ
ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ
ಯಾರು ಅರಿಯದ ವೀರನ ತ್ಯಾಗ
ಮಾಸ್ತಿಯವರ ಮೊಸರಿನ ಮಂಗಮ್ಮ
ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು
ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ
ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ
"ಬಾರತದ ಜನಗಣತಿ ಮಾಹಿತಿ ಪ್ರಕಾರ ಅನುಸೂಚಿತ ಬಾಶೆಗಳನ್ನು ಆಡುವವರ ಸಂಕೆ ಸುಮಾರು 1,17,11,03,853 ಮಂದಿ ಅಂದರೆ ಬಾ...
"ಪ್ರಶಸ್ತಿ ಪುರಸ್ಕಾರಗಳಿಂದ ದೂರವಿದ್ದ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಇವರ ಹಂಗಿನರಮನೆಯ ಹೊರಗೆ ಕಥೆಯು &ldqu...
"ರಂಗಭೂಮಿ ಎಂದರೆ ಕೇವಲ ನಾಟಕಗಳ ಪ್ರದರ್ಶನ ಮಾತ್ರವಲ್ಲ. ಅದೊಂದು ಬಹುತ್ವ ಆಯಾಮಗಳ ಜೀವನ ಪ್ರೀತಿ ಹುಟ್ಟಿಸುವ ಜನಸಂಸ...
©2025 Book Brahma Private Limited.