ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ

Date: 20-11-2022

Location: ಬೆಂಗಳೂರು


“ನಾನಿನ್ನೂ ಓದುತ್ತಿದ್ದೇನೆ. ಒಂದು ವಸ್ತು ಕೊಳ್ಳಬೇಕೆಂದರೂ ಅಪ್ಪನನ್ನು ಹಣ ಕೇಳಬೇಕು. ಹಾಗಾಗಿ ಹಾಸನ ಟಿ. ವಿ.ಯಲ್ಲಿ ಸುದ್ದಿ ಮಾಧ್ಯಮದಲ್ಲಿ ನಿರೂಪಣೆ, ಬೈಟ್, ವಾಯ್ಸ್ ಓವರ್ ಕೊಡುವ ಪಾರ್ಟ್ ಟೈಮ್ ವೃತ್ತಿಯನ್ನು ಮಾಡುತ್ತಿದ್ದೇನೆ. ಇದು ನನ್ನ ಕಲಿಕೆಯ ಜೊತೆಗೆ ಬದುಕಿಗೊಂದಿಷ್ಟು ಆಧಾರವಾಗುತ್ತಿದೆ” ಎನ್ನುತ್ತಾರೆ ಮೊಹಮ್ಮದ್ ಅಜರುದ್ದೀನ್. ಲೇಖಕಿ ಜ್ಯೋತಿ ಎಸ್ ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ಲೇಖಕ ಮೊಹಮ್ಮದ್ ಅಜರುದ್ದೀನ್ ಅವರ ‘ಸಾಹಿತ್ಯ ಪಯಣ’ದ ಕುರಿತು ಬರೆದಿದ್ದಾರೆ...

ಸಾಹಿತ್ಯವೇ ಹಾಗೆ ಕೆಲವೊಮ್ಮೆ ಎಂಥವರನ್ನೂ ಸೆಳೆದುಬಿಡುತ್ತದೆ. ಕೆಲವರಿಗೆ ಮಾತ್ರ ಒಲಿಯುತ್ತದೆ. ಓದುವ ಹಿನ್ನೆಲೆಯಿಂದ ಬಂದವರಿಗೆ ಬರವಣಿಗೆ ಸುಲಭವಾಗಬಹುದು. ಉಳಿದವರಿಗೆ ಮೊದಲಿನಿಂದ ಓದು ಬರಹದ ಬಗ್ಗೆ ಆಸಕ್ತಿ ಇರಬೇಕು. ಆಸಕ್ತಿಯೊಂದಿಗೆ ಪ್ರಾಮಾಣಿಕ ಪ್ರಯತ್ನವಿದ್ದರೆ ವಯಸ್ಸು, ಹಿನ್ನೆಲೆ, ಜಾತಿ, ಮತ, ಪಂಥ, ಧರ್ಮಗಳ ಹಂಗಿಲ್ಲದೆ ಸಾಹಿತ್ಯ ಬರೆಸಿಕೊಳ್ಳುತ್ತದೆ. ಬಡತನವೂ ಬಾಧಿಸದು. ಬಡತನದ ಬೇಗೆಯಲ್ಲಿ ಬರವಣಿಗೆ ರೂಢಿಸಿಕೊಂಡು ಪುಸ್ತಕ ಬರೆಯುವಷ್ಟು ಬೆಳೆಯುವುದು ಸುಲಭದ ಮಾತಲ್ಲ. ಹಾಗೆ ಕಷ್ಟ ಮೆಟ್ಟಿ ಬೆಳೆದುಬಂದ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳದ ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆಯ ಪರಿಚಯ ನಿಮ್ಮ ಓದಿಗೆ.

ತಂದೆ ಅಬ್ದುಲ್ ಸತ್ತಾರ್ ತಾಯಿ ಸಮೀನಾ ಖಾನಂ. ಹಾಸನದ ಮಲ್ನಾಡ್ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ಓದುತ್ತಿರುವ ಇವರು ಅಕ್ಕಿ ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು, ಹೇಮಾವತಿ ತೀರ, ಸಂಜೆ ವಿಹಾರ ಎಂಬ ಐದು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಕನ್ನಡದ ಸಾಹಿತ್ಯ ಸೇವೆಗೆ ಕಾವ್ಯಶ್ರೀ ಪ್ರಶಸ್ತಿ ಲಭಿಸಿದೆ. ವಿಶ್ವವಿಖ್ಯಾತಿ ಮೈಸೂರು ದಸರಾ ಚಿಗುರು ಕವಿಗೋಷ್ಟಿ, ಮಂಡ್ಯ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನ ಕೆ. ಆರ್. ಪೇಟೆ, ಶ್ರೀರಂಗಪಟ್ಟಣ ಸೇರಿದಂತೆ ಹಲವಾರು ಯುವ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದಾರೆ. ಇವರ ಸಾಹಿತ್ಯ ಕೃಷಿ ಪ್ರಾರಂಭವಾಗಿದ್ದು ಹತ್ತನೇ ತರಗತಿ ಓದುತ್ತಿರುವಾಗ ಎ. ಎನ್. ಮೂರ್ತಿರಾವ್ ಅವರ ವ್ಯಾಘ್ರಗೀತೆ ಎಂಬ ಪಾಠದಿಂದ ಆದ ಸ್ಫೂರ್ತಿ ಎನ್ನುತ್ತಾರೆ. ಅದರಿಂದಲೇ ನನ್ನ ಕುತೂಹಲ ಹೆಚ್ಚುತ್ತಾ ಹೋಯ್ತು.

ಚಿಕ್ಕ ವಯಸ್ಸಿನಿಂದಲೂ ಪಠ್ಯದ ಜೊತೆಗೆ ಅನೇಕ ಪುಸ್ತಕಗಳನ್ನು ಓದುವ ಹವ್ಯಾಸ ಇರುವ ಇವರು, ಅವರು ಹೇಳುವಂತೆ ತಮ್ಮ ಹತ್ತನೇ ತರಗತಿಯಲ್ಲಿದ್ದ ಅಕ್ಕಿ ಹೆಬ್ಬಾಳದ ಎ. ಎನ್. ಮೂರ್ತಿ ಎಂಬ ಹೆಸರೇ ನನ್ನ ಸಾಹಿತ್ಯ ಕ್ಷೇತ್ರಕ್ಕೆ ತೆರೆದುಕೊಳ್ಳಲು ಸಹಾಯವಾಯಿತು ಎನ್ನುತ್ತಾರೆ. ನಂತರ ಕುವೆಂಪು, ದ. ರಾ. ಬೇಂದ್ರೆ, ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಓದುತ್ತಾ ಬಂದೆ. ಆಗ ಕಾವ್ಯ, ಚುಟುಕುಗಳನ್ನು ಒಂದು ಡೈರಿಯಲ್ಲಿ ಬರೆಯಲು ಪ್ರಾರಂಭಿಸಿದೆ. ನಂತರ ನಮ್ಮ ಗುರುಗಳಾದ ರಂಗನಾಥರವರಿಗೆ ತೋರಿಸಿದಾಗ ಅವರು ಅದನ್ನು ಓದಿ ತಿದ್ದಿ ಇದನ್ನು ಯಾಕೆ ಒಂದು ಪುಸ್ತಕವಾಗಾ ಹೊರ ತರಬಾರದು ಎಂದು ಹೇಳಿದರು. ಆಗ ಖ್ಯಾತ ಸಾಹಿತಿಗಳಾದ ಅ. ರಾ. ಮಿತ್ರ ಅವರ ಕಡೆಯಿಂದ ನನ್ನ ಮೊದಲ ಕೃತಿ ಅಕ್ಕಿ - ಚುಕ್ಕಿ ಬಿಡುಗಡೆಯಯಿತು. ಲೋಕಾಯನ ಕಲ್ಚರಲ್ ಫೌಂಡೇಶನ್ ತಂಡದ ಮುಖ್ಯಸ್ಥರಾದ ಶಶಿಧರ್ ಭಾರೀಗಟ್ ಸರ್ ಜೊತೆಗೆ ನಾಟಕಗಳಲ್ಲಿ ಅಭಿನಯಿಸುವುದನ್ನು ಕಲಿತೆ. ಇದುವರಗೆ ಐದು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ನಿರ್ದೇಶನ, ಅಭಿನಯ, ಸಂಗೀತ ನಿರ್ವಹಣೆ ಎಲ್ಲದರತ್ತ ಗಮನ ಹರಿಸಿ ಎರಡು ನಾಟಕಗಳನ್ನು ಬರೆದಿದ್ದೇನೆ.

ನಾನಿನ್ನೂ ಓದುತ್ತಿದ್ದೇನೆ. ಒಂದು ವಸ್ತು ಕೊಳ್ಳಬೇಕೆಂದರೂ ಅಪ್ಪನನ್ನು ಹಣ ಕೇಳಬೇಕು. ಹಾಗಾಗಿ ಹಾಸನ ಟಿ. ವಿ.ಯಲ್ಲಿ ಸುದ್ದಿ ಮಾಧ್ಯಮದಲ್ಲಿ ನಿರೂಪಣೆ, ಬೈಟ್, ವಾಯ್ಸ್ ಓವರ್ ಕೊಡುವ ಪಾರ್ಟ್ ಟೈಮ್ ವೃತ್ತಿಯನ್ನು ಮಾಡುತ್ತಿದ್ದೇನೆ. ಇದು ನನ್ನ ಕಲಿಕೆಯ ಜೊತೆಗೆ ಬದುಕಿಗೊಂದಿಷ್ಟು ಆಧಾರವಾಗುತ್ತಿದೆ.

ಕವನ ಎಂದರೇನು? ಲೇಖನ ಎಂದರೇನು ಅಂತ ಬಲ್ಲವರಿಂದ ತಿಳಿದುಕೊಳ್ಳುತ್ತಿದ್ದೆ. ಓದುತ್ತಾ ನನ್ನ ಬರಹವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದೆ. ಪತ್ರಿಕೆಯ ಇಮೇಲ್ ವಿಳಾಸವನ್ನು ತೆಗೆದುಕೊಂಡು ಕವನಗಳನ್ನು, ಅಂಕಣಗಳನ್ನು ಬರೆಯುತ್ತಿದ್ದೆ. ಇಲ್ಲಿಯವರೆಗೆ ಮುನ್ನೂರಕ್ಕೂ ಹೆಚ್ಚು ಅಂಕಣಗಳನ್ನು ಬರೆದಿದ್ದೇನೆ. ಕೋವಿಡ್ ಸಮಯದಲ್ಲಿ ಹೆಚ್ಚು ಪುಸ್ತಕಗಳನ್ನು ಓದಿ ಅವುಗಳಿಗೆ ವಿಮರ್ಶೆ ಬರೆಯುತ್ತಿದ್ದೆ. ಮಂಡ್ಯ ಜಿಲ್ಲಾ ಪ್ರಾದೇಶಿಕ ಪತ್ರಿಕೆಗೆ, ಪುಷ್ಪಕ ಮಿತ್ರ ಇನ್ನು ಮುಂತಾದ ಪತ್ರಿಕೆಗಳಿಗೆ ಕಳುಹಿಸುತ್ತಿದ್ದೆ. ಅಪ್ಪ ನನ್ನ ಓದಿನ ಅರ್ಧ ಫೀಸ್ ಕಟ್ಟಿದರೆ ಇನ್ನುಳಿದ ಹಣವನ್ನು ಸ್ಕಾಲರ್ಷಿಪ್ ಹಣದಿಂದ ಕಟ್ಟಿ ಓದುತ್ತಿದ್ದೇನೆ. ಅದೇ ಹಣದಲ್ಲಿ ಅಲ್ಪ ಸ್ವಲ್ಪ ಉಳಿಸಿಕೊಂಡು ನನ್ನ ಪುಸ್ತಕ ಪ್ರಕಟಣೆ ಮಾಡಿದ್ದೇನೆ. ತಂದೆ ಸಣ್ಣ ಟೈಲರ್ ಆಗಿ ಕೆಲಸ ಮಾಡಿಕೊಂಡು ಅಮ್ಮ ಮನೆಯಲ್ಲಿ ಕೆಲಸ ಮಾಡುತ್ತ ಅಪ್ಪನ ಕೆಲಸದಲ್ಲಿ ಜೊತೆಯಾಗಿ ನಮ್ಮನ್ನೆಲ್ಲ ಸಾಕಿದ್ರು. ಈ ವರ್ಷ ಓದು ಮುಗಿದ ನಂತರ ಕೆಲಸಕ್ಕೆ ಸೇರಿ ಚೆನ್ನಾಗಿ ದುಡಿದು ಎಂತಹ ಕಷ್ಟಕಾಲದಲ್ಲೂ ಪ್ರೀತಿಯಿಂದ ನಮ್ಮನ್ನು ಸಾಕಿ ಸಲಹಿದ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು.

ತುಂಬ ಕಷ್ಟದಲ್ಲೂ ಬಡತನದ ನೆಪವೊಡ್ಡದೆ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಮೊಹಮ್ಮದ್ ಅಜರುದ್ದೀನ್ ಅವರ ಸಾಹಿತ್ಯ ಕೃಷಿ ಸಮೃದ್ಧವಾಗಲಿ ಬರವಣಿಗೆ ಅವರಿಗೆ ಹೆಚ್ಚೆಚ್ಚು ಯಶಸ್ಸು, ಕೀರ್ತಿ ತಂದುಕೊಡಲಿ ಎಂದು ಹಾರೈಸೋಣ.

ಧನ್ಯವಾದಗಳು
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...