ಮೌರ್ಯ ಸಾಮ್ರಾಜ್ಯ ಮರುನಿರ್ಮಾಣದ ಕತೆ


ಇತಿಹಾಸಕ್ಕೆ ಕಾದಂಬರಿಯ ಕವಚ ತೊಡಿಸಿರುವ ಹೀಲ್ಡಾ ಸೆಲಿಗ್ಮೆನ್ ಅವರ ಈ ಕೃತಿಯ ವೈಶಿಷ್ಟ್ಯ ನಿಸರ್ಗ ವರ್ಣನೆಯ ಕುರಿತಾಗಿ ಅವರಿಗಿರುವ ಅತ್ಯುತ್ಸಾಹ. ವಿಶೇಷವಾಗಿ ಹಿಮಾಲಯ ಪ್ರದೇಶದ/ ಕಾಡಿನ ಪರಿಸರದ ಸಂಗತಿಗಳನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿರುವುದು ಓದುಗರ ಗಮನ ಸೆಳೆಯುತ್ತದೆ ಎನ್ನುತ್ತಾರೆ ಎಲ್. ಎಸ್. ಶಾಸ್ತ್ರಿ ಅವರು ಉದಯಕುಮಾರ ಹಬ್ಬು ಅವರ ಚಂದ್ರಗುಪ್ತ ಮೌರ್ಯ ಕಾದಂಬರಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಪಾಶ್ಚಾತ್ಯ ಲೇಖಕಿ ಕಂಡಂತೆ ಭಾರತದ ಇತಿಹಾಸ

ಹೀಲ್ಡಾ ಮ್ಯಾಕ್ಡೊವೆಲ್ ಸೆಲಿಗ್ಮನ್ ಎಂಬ ಆಂಗ್ಲ ಮಹಿಳೆ 1940 ರಲ್ಲಿ ಬರೆದ "Peacocks Calling" ಎಂಬ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ತಂದವರು ನಮ್ಮ ನಡುವಿನ ಹಿರಿಯ ಸಾಹಿತಿ ವಿಮರ್ಶಕರಾದ ಉದಯಕುಮಾರ ಹಬ್ಬು (ಕಿನ್ನಿಗೋಳಿ) ಅವರು. ಬೆಂಗಳೂರಿನ ಪ್ರಸಿದ್ಧ " ಅಂಕಿತ ಪುಸ್ತಕ" ದವರು ಇದನ್ನು ಈಚೆಗೆ ಪ್ರಕಟಿಸಿದ್ದಾರೆ. ಹಬ್ಬು ಅವರು ಮೂರೂವರೆ ದಶಕ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದವರು ಮತ್ತು ಕನ್ನಡದಲ್ಲಿ ಸಾಕಷ್ಟು ಕೃತಿಗಳನ್ನು ಬರೆದ ಸಿದ್ಧಹಸ್ತರು. ಎರಡೂ ಭಾಷೆಗಳಲ್ಲಿ ಪ್ರಭುತ್ವ ಇರುವವರು.

ಇದು ಕಾದಂಬರಿ ಸ್ವರೂಪದಲ್ಲಿರುವ ಭಾರತೀಯ ಇತಿಹಾಸದ ಒಂದು ಭಾಗ. ಬರೆದವರು ವಿದೇಶಿ ಮಹಿಳೆ ಹೀಲ್ಡಾ. ಚಂದ್ರಗುಪ್ತ- ಚಾಣಕ್ಯರ ಕತೆ ಭಾರತೀಯರಿಗೆ ಚಿರಪರಿಚಿತ. ಆದರೆ ಈ ಆಂಗ್ಲ ಲೇಖಕಿ ಅದರ ಕುರಿತು ಆಸಕ್ತಿ ತಳೆದು, ಅಧ್ಯಯನ ಮಾಡಿ ಬರೆದಿರುವುದು ಒಂದು ಕುತೂಹಲದ ಸಂಗತಿ ಹೌದು. ಭಾರತಕ್ಕೆ ಎರಡು ಸಲ ಭೆಟ್ಟಿಯಿತ್ತ ಹೀಲ್ಡಾ ಮೌರ್ಯ ಸಾಮ್ರಾಜ್ಯ ವ್ಯಾಪಿಸಿಕೊಂಡ ಹಿಮಾಲಯ ಸಹಿತ ಹಲವು ಪ್ರದೇಶಗಳಲ್ಲಿ ಸ್ವತಃ ಸಂಚರಿಸಿ, ಶಾಸನ ಮತ್ತಿತರ ವಿಷಯಗಳನ್ನು ಓದಿ ಮಾಹಿತಿ ಸಂಗ್ರಹಿಸಿಕೊಂಡು ಬರೆದದ್ದು ಈ ಕೃತಿಗೆ ಒಂದು ಒಥೆಂಟಿಸಿಟಿ ತಂದುಕೊಟ್ಟಿದೆ ಎನ್ನಬಹುದೇನೊ.

ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವಾಗ ಅನುವಾದಕ ಬಹಳಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಪರಿಣತಿಯೊಂದಿಗೆ ಭಾಷೆಗಳ ಮೂಲ ಸ್ವರೂಪವನ್ನೂ ತಿಳಿದುಕೊಂಡಿರಬೇಕು. ಏಕೆಂದರೆ ಪ್ರತಿಯೊಂದು ಭಾಷೆಯೂ ತನ್ನದೇ ಆದ ಪ್ರಾದೇಶಿಕ ಹಿನ್ನೆಲೆಯಲ್ಲಿ ವಿಶಿಷ್ಟ ಶೈಲಿ ಮತ್ತು ನುಡಿಗಟ್ಟುಗಳನ್ನು ರೂಪಿಸಿಕೊಂಡು ಬೆಳೆದಿರುತ್ತದೆ. ನಮ್ಮ ಅನುವಾದದಲ್ಲಿ ಅದರ ಮೂಲ ಸತ್ವವನ್ನು, ರುಚಿಯನ್ನು original taste ತರುವುದು ಕಷ್ಟ. ಹೀಲ್ಡಾ ಅವರ ಮೂಲ ಕಾದಂಬರಿ ವಿಕ್ಟೋರಿಯಾ ಕಾಲದ ಇಂಗ್ಲಿಷ್ ಭಾಷೆಯನ್ನು ಹೊಂದಿದ್ದು. ಯಾವುದೇ ಭಾಷೆಯ ನೇರ ಅನುವಾದ ಕೃತಕವೆನಿಸಿಬಿಡುತ್ತದೆ. ಇಂಗ್ಲಿಷಿನಿಂದ ಕನ್ನಡಕ್ಕೆ ತರುವಾಗ ಅನುವಾದಕ ಅದಕ್ಕೆ ಕನ್ನಡತನದ ಸ್ಪರ್ಶವನ್ನೂ ನೀಡಬೇಕಾಗುತ್ತದೆ. ಅನುವಾದಕನ ಜಾಣ್ಮೆಯನ್ನು, ಸಾಮರ್ಥ್ಯವನ್ನು ಅದು ಅವಲಂಬಿಸಿದೆ. ಅವನಿಗೆ ಆ ಸ್ವಾತಂತ್ರ್ಯವಿದ್ದೇ ಇದೆ.

ನಂದ ದೊರೆಯಿಂದ ಮೌರ್ಯ ಸಾಮ್ರಾಜ್ಯದ ಪತನವಾದಾಗ ಅಲ್ಲಿಂದ ತಪ್ಪಿಸಿಕೊಂಡು ತನ್ನ ಮಗುವನ್ನು ಕಾಡಿನಲ್ಲಿ ಒಂದೆಡೆ ಕಲ್ಲಿನ ಮರಗಿಯಲ್ಲಿ ಮಲಗಿಸಿ, ಅದರ ಬಳಿ ಮೌರ್ಯರ ಲಾಂಛನವಾದ ಕಠಾರಿಯೊಂದನ್ನು ಇಟ್ಟು ವನದೇವತೆಗೆ ರಕ್ಷಣೆಯ ಭಾರ ಒಪ್ಪಿಸಿ ಹೋಗುತ್ತಾಳೆ ತಾಯಿ ಮುರಾ. ಕುರಿಗಾಹಿಗಳ ಒಂದು ಕುಟುಂಬ ಆ ಮಗುವಿಗೆ ಚಂದ್ರ ಎಂಬ ಹೆಸರನ್ನು ಇಟ್ಟು ಸಾಕುತ್ತದೆ. ಆತ ಪ್ರಾಯಕ್ಕೆ ಬಂದಾಗ ಅವನಿಗೆ ಗೂನು ಬೆನ್ನಿನ ಮಂತ್ರವಾದಿ ಕೌಟಿಲ್ಯ (ಚಾಣಕ್ಯ) ನ ಭೆಟ್ಟಿಯಾಗುತ್ತದೆ. ಚಂದ್ರನ ಸಾಮರ್ಥ್ಯವನ್ನು ಗುರುತಿಸಿದ ಆತ ಅವನಿಗೆ ರಾಜತಂತ್ರಗಳನ್ನು ಕಲಿಸಿ ನಂದರ ವಿರುದ್ಧ ಹೋರಾಡಿ ಮರಳಿ ಮೌರ್ಯ ಸಾಮ್ರಾಜ್ಯ ಸ್ಥಾಪಿಸಲು ಪ್ರೇರಣೆ ನೀಡುತ್ತಾನೆ. ತನ್ನದೇ ಆದ ಸೈನ್ಯವನ್ನು ರಚಿಸಿಕೊಂಡು ನಂದನ ರಾಜ್ಯವನ್ನು ನಾಶ ಪಡಿಸಿ ಚಂದ್ರಗುಪ್ತ ಮೌರ್ಯ ಸಿಂಹಾಸನವನ್ನೇರಿ 24 ವರ್ಷ ರಾಜ್ಯವಾಳಿ ತನ್ನ ಸಾಮ್ರಾಜ್ಯವನ್ನು ಬಲೂಚಿಸ್ಥಾನ, ಅಫಘಾನಿಸ್ಥಾನ, ಗ್ರೀಕ್ ತನಕ ವಿಸ್ತರಿಸಿ ನಂತರ ಶ್ರವಣಬೆಳಗೊಳಕ್ಕೆ ಬಂದು ಜೈನ ಸನ್ಯಾಸಿಯಾಗುತ್ತಾನೆ. ಅವನ ಮಗ ಬಿಂದುಸಾರ ರಾಜನಾಗುತ್ತಾನೆ. ಅವನ ಮಗ ಅಶೋಕನೇ ಮುಂದೆ ಸಾಮ್ರಾಟ್ ಅಶೋಕನಾಗಿ ಪ್ರಸಿದ್ಧಿ ಪಡೆಯುತ್ತಾನೆ.

ಇದು ಇಲ್ಲಿಯ ಸಂಕ್ಷಿಪ್ತ ಕಥೆ. ಒಟ್ಟು 168 ಪುಟಗಳಲ್ಲಿ ಚಂದ್ರಗುಪ್ತನ ಬಾಲ್ಯ ಮತ್ತು ಸೈನ್ಯ ರಚನೆಯತನಕದ ವಿಷಯವೇ 140 ಪುಟಗಳಲ್ಲಿ ವ್ಯಾಪಿಸಿಕೊಂಡಿದೆ. ಅಂದರೆ ಕುರಿಗಾಹಿಗಳ ನಡುವೆ ಬೆಳೆದ ಚಂದ್ರ ಚಂದ್ರಗುಪ್ತ ಮೌರ್ಯನಾಗಿ ರೂಪುಗೊಳ್ಳುವತನಕದ ಅಂಶಕ್ಕೇ ಇಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ.

ಇತಿಹಾಸಕ್ಕೆ ಕಾದಂಬರಿಯ ಕವಚ ತೊಡಿಸಿರುವ ಹೀಲ್ಡಾ ಸೆಲಿಗ್ಮೆನ್ ಅವರ ಈ ಕೃತಿಯ ವೈಶಿಷ್ಟ್ಯ ನಿಸರ್ಗ ವರ್ಣನೆಯ ಕುರಿತಾಗಿ ಅವರಿಗಿರುವ ಅತ್ಯುತ್ಸಾಹ. ವಿಶೇಷವಾಗಿ ಹಿಮಾಲಯ ಪ್ರದೇಶದ/ ಕಾಡಿನ ಪರಿಸರದ ಸಂಗತಿಗಳನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿರುವುದು ಓದುಗರ ಗಮನ ಸೆಳೆಯುತ್ತದೆ. ಅವರೇ ಸ್ವತಃ ಈ ಪ್ರದೇಶಗಳಲ್ಲಿ ಸಂಚರಿಸಿ ಪಡೆದ ಸ್ವಾನುಭವದ ಪರಿಣಾಮವಾಗಿ ಭಾರತೀಯರಿಗೂ ಅಪರಿಚಿತವೆನಿಸಬಹುದಾದ ಪಶುಪಕ್ಷಿ, ಗಿಡಮರ, ಬಗೆಬಗೆಯ ಹೂಗಳು, ಅಲ್ಲಿಯ ಮೂಲ ಸಂಸ್ಕೃತಿ ಜನಜೀವನದ ವಿಶಿಷ್ಟ ಸಂಗತಿಗಳೆಲ್ಲ ಇಲ್ಲಿ ಜೀವ ತಳೆಯುತ್ತವೆ. ಇಂತಹ ಕೃತಿಯನ್ನು ಓದುವವರಿಗೂ ಇತಿಹಾಸ ಪ್ರಜ್ಞೆ, ಐತಿಹಾಸಿಕ ಕಲ್ಪನೆ, ಓದು ಹಿನ್ನೆಲೆಯಾಗಿ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಕೆಲವೆಡೆ ಗೊಂದಲವುಂಟಾಗುವ ಸಾಧ್ಯತೆಗಳೂ ಇವೆ.

ಭಾರತದ ಇತಿಹಾಸ ಅಧ್ಯಯನದ ದೃಷ್ಟಿಯಿಂದಲೂ ಇದು ಒಂದು ಮಹತ್ವದ ಕೃತಿಯೇ. ವಿದೇಶಿ ಮಹಿಳೆಯೊಬ್ಬಳು ನಮ್ಮ ದೇಶದ ಬಹಳ ಪ್ರಸಿದ್ಧ ರಾಜವಂಶದ ಚರಿತ್ರೆಯನ್ನು ಯಾವ ಬಗೆಯಲ್ಲಿ ನೋಡಿದ್ದಾಳೆಂಬುದನ್ನು ಈ ಕೃತಿಯ ಮೂಲಕ ಅರಿಯಬಹುದಾಗಿದೆ. ಇದನ್ನು ಕನ್ನಡಿಗರೂ ಓದುವಂತೆ ಮಾಡಿದ ಉದಯಕುಮಾರ ಹಬ್ಬು ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಲೇಬೇಕು. ಇದರ ಮುಂದಿನ ಭಾಗವಾದ "ಅಶೋಕ" ನಿಗಾಗಿ ಕಾಯೋಣ.

- ಎಲ್. ಎಸ್. ಶಾಸ್ತ್ರಿ
Mo. 9482251696

 

MORE FEATURES

'ಮಾಂದಳಿರ ತೊಟ್ಟಿಲು' ಎಲ್ಲರ ಓದಿನ ಸಂಗಾತಿಯಾಗಲೆಂದು ಆಶಿಸುತ್ತೇನೆ

03-07-2024 ಬೆಂಗಳೂರು

'ಸಮಕಾಲೀನ ಕವಿಗಳ ಕವಿತೆಯ ಸಾಲುಗಳನ್ನು ಓದುವಾಗ ಅಂಕಣದಲ್ಲಿ ಕಾಣಿಸುವುದು ನಾಲ್ಕು ಸಾಲುಗಳನ್ನಾದರೂ ಅವರ ಹತ್ತು ಕವಿತ...

ಮನುಷ್ಯನ ಬದುಕಿನಲ್ಲಿ ಅರ್ಥಪೂರ್ಣವಾದದ್ದು ಏನಾದರೂ ಘಟಿಸುತ್ತದೆ ಅಂದರೆ ಅದು 'ಪ್ರೀತಿ' ಮಾತ್ರ...

31-12-1899 ಬೆಂಗಳೂರು

"ಇಲ್ಲಿನ ಭಗ್ನ ಪ್ರೇಮದ ಕಥೆ ಬರಿಯ ಕಥೆಯಲ್ಲ ಅದೊಂದು ಜನ್ಮ ಜನ್ಮಾಂತರದ ಪ್ರೀತಿಯ ಕಥೆ, ಇಲ್ಲಿ ಕೋಲಾರದ ಕೆಜಿಎಫ್ ಇದ...

ಈ ಟೂರು ಮುಗಿಯದ ಪಯಣ; ಸಂಜೋತಾ ಪುರೋಹಿತ

02-07-2024 ಬೆಂಗಳೂರು

‘ಪ್ರಯಾಣವೇ ಆಗಲಿ, ಜೀವನದಲ್ಲಿ ಕೈಗೊಳ್ಳಬೇಕಾದ ಯಾವುದೋ ಒಂದು ನಿರ್ಧಾರವೇ ಆಗಲಿ, ಒಂದು ಹೆಜ್ಜೆ ಎತ್ತಿ ಮುಂದಿಡದ ಹ...