'ಮಾಂದಳಿರ ತೊಟ್ಟಿಲು' ಎಲ್ಲರ ಓದಿನ ಸಂಗಾತಿಯಾಗಲೆಂದು ಆಶಿಸುತ್ತೇನೆ


'ಸಮಕಾಲೀನ ಕವಿಗಳ ಕವಿತೆಯ ಸಾಲುಗಳನ್ನು ಓದುವಾಗ ಅಂಕಣದಲ್ಲಿ ಕಾಣಿಸುವುದು ನಾಲ್ಕು ಸಾಲುಗಳನ್ನಾದರೂ ಅವರ ಹತ್ತು ಕವಿತೆಗಳನ್ನಾದರೂ ಓದಿದ್ದೇನೆ. ಇದರಿಂದ ಅನೇಕ ಸಫಲ ರಚನೆಗಳಿಗೆ ಮುಖಾಮುಖಿಯಾಗುವ ಸದಾವಕಾಶ ನನ್ನದಾಗಿದೆ' ಎನ್ನುತ್ತಾರೆ ಲೇಖಕ, ವಿಮರ್ಶಕ ಎಚ್.ಎಸ್. ಸತ್ಯನಾರಾಯಣ ಅವರು ತಮ್ಮ ಮಾಂದಳಿರ ತೊಟ್ಟಿಲು ಅಂಕಣ ಸಂಕಲನಕ್ಕೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ.

'ಮಾಂದಳಿರ ತೊಟ್ಟಿಲು' ನಿಮ್ಮ ಮುಂದಿದೆ. ಇದು ಕನ್ನಡದ ಸುಪ್ರಸಿದ್ದ ದಿನಪತ್ರಿಕೆಗಳಲ್ಲೊಂದಾದ 'ವಿಜಯ ಕರ್ನಾಟಕ'ದಲ್ಲಿ ನಾನು ಕಳೆದ ಒಂದು ವರುಷ ಬರೆದ 'ಅನುದಿನ ಕಾವ್ಯ'ವೆಂಬ ಅಂಕಣಗಳ ಕಟ್ಟಿನ ಮೊದಲ ಸಂಪುಟ. ಆ ಪತ್ರಿಕೆಯ ಹಿರಿಯ ಸಂಪಾದಕರಾದ ಶ್ರೀ ಕೀರ್ತಿ ಕೋಲ್ಗಾರ್ ಅವರು ಒಂದು ದಿನ ಕರೆ ಮಾಡಿ, 'ಪುಟ್ಟದೊಂದು ಕಾವ್ಯ ವ್ಯಾಖ್ಯಾನದ ಅಂಕಣವನ್ನು ನಮ್ಮ ಪತ್ರಿಕೆಗೆ ಬರೆದು ಕೊಡಲು ಸಾಧ್ಯವೆ?' ಎಂದಾಗ ಮೊದಲಿಗೆ ನಾನು ಹಿಂಜರಿದೆ. ಅಂಕಣ ಬರಹವೆಂದರೆ ತುಂಬ ಶಿಸ್ತು, ಶ್ರದ್ಧೆ ಮತ್ತು ಸಮಯವನ್ನು ಬೇಡುವ ಕೆಲಸ. ಅದೂ ದಿನ ನಿತ್ಯವೂ ಬರೆಯಬೇಕೆಂದರೆ ಕಷ್ಟದ ಕೆಲಸವೆಂಬ ಅಭಿಪ್ರಾಯವನ್ನು ಅವರಿಗೆ ತಲುಪಿಸಿ ಸುಮ್ಮನಾದೆ. ಹದಿನೈದು ದಿನ ಕಳೆದ ಮೇಲೆ ಮತ್ತೆ ಕರೆ ಮಾಡಿದ ಕೀರ್ತಿ ಪ್ರೀತಿಯಿಂದ ಒತ್ತಾಯಿಸಿ, ಅದರ ಸ್ವರೂಪ ಮತ್ತು ಆಶಯವನ್ನು ಸ್ಥೂಲವಾಗಿ ವಿವರಿಸಿದರು. ಪತ್ರಿಕೆಗಳಲ್ಲಿ ಕಾವ್ಯಕ್ಕಿದ್ದ ಅಲ್ಪಸ್ವಲ್ಪ ಸ್ಥಳಾವಕಾಶವೂ ಕಡಿಮೆಯಾಗುತ್ತಾ, ಕಾವ್ಯ ಓದಲು ಕ್ಯು ಆರ್ ಕೋಡ್ ಅಥವಾ ಬಾರ್ ಕೋಡ್, ಸ್ಕ್ಯಾನಿಂಗುಗಳನ್ನು ಅವಲಂಬಿಸಬೇಕಾಗಿ ಬಂದಿರುವ ಹೊತ್ತಿನಲ್ಲಿ ಪತ್ರಿಕೆಯೊಂದು ನಿತ್ಯವೂ ಕನ್ನಡ ಕಾವ್ಯಕ್ಕೊಂದು ಪುಟ್ಟ ಸ್ಥಳಾವಕಾಶ ಕಲ್ಪಿಸುವ ಮೂಲಕ ಕಾವ್ಯ ಪ್ರೀತಿಯನ್ನು ತೋರಲು ಮುಂದಾಗಿದ್ದು ಕಾವ್ಯಾಸ್ವಾದಕರ ಪಾಲಿನ ಅದೃಷ್ಟವೇ ಸರಿ ಅನ್ನಿಸಿತು. ಈ ಮುಖ್ಯ ಕಾರಣದಿಂದ ಕೀರ್ತಿಯವರು ಎರಡನೆಯ ಸಲ ಒತ್ತಾಯಿಸಿದಾಗ ಬರೆಯಲು ಸಮ್ಮತಿಸಿದೆ. ಭಾನುವಾರ ಮತ್ತು ಕೆಲವು ವಿಶೇಷ ರಜೆಯ ಸಂದರ್ಭಗಳನ್ನು ಹೊರತುಪಡಿಸಿ ನಿತ್ಯವೂ ಪ್ರಕಟವಾಗುತ್ತಿರುವ 'ವಿ.ಕ. ಅನುದಿನ ಕಾವ್ಯ'ದ ಮೊದಲ ಸಂಪುಟವಾದ 'ಮಾಂದಳಿರ ತೊಟ್ಟಿಲು' ಇದೀಗ ನಿಮ್ಮೆದುರಿಗಿದೆ.

ಈ ಅಂಕಣದ ಮುಖ್ಯ ಉದ್ದೇಶ ಓದುಗರು ತಮ್ಮ ಪ್ರತಿದಿನದ ಬೆಳಗನ್ನು ಕಾವ್ಯಾಸ್ವಾದನೆಯೊಂದಿಗೆ ಆರಂಭಿಸಬೇಕು, ಕನ್ನಡ ಕಾವ್ಯದ ಸಕಾರಾತ್ಮಕತೆ ಓದುಗರೆದೆಗೆ ಹಾಯ್ದು ನಿತ್ಯ ಪ್ರಾತಃಕಾಲವನ್ನು ಧನಾತ್ಮಕವಾಗಿ ಆರಂಭಿಸಬೇಕೆಂಬುದು. ಜಾನಪದವಿರಲಿ, ಶಾಸನಗಳಿರಲಿ, ಪ್ರಾಚೀನ ಕಾವ್ಯವಾಗಲಿ, ಆಧುನಿಕ, ಸಮಕಾಲೀನವಾದ ಯಾವುದೇ ಕಾವ್ಯದ ನಾಲ್ಕು ಸಾಲನ್ನು ಆಯ್ದು, ಅದರ ಆಶಯವನ್ನು ಹತ್ತಾರು ವಾಕ್ಯಗಳಲ್ಲಿ ವಿವರಿಸುವುದು, ಆ ಮೂಲಕ ಕಾವ್ಯದ ಮತ್ತು ಕವಿಯ ದನಿಯನ್ನು ಓದುಗರಿಗೆ ಕೇಳಿಸುವುದು, ಆ ಮೂಲಕ ಕಾವ್ಯ ಪ್ರೀತಿಯನ್ನು ಚಾಲ್ತಿಯಲ್ಲಿಡುವುದು, ಕಾವ್ಯದ ಓದಿಗೆ ಒತ್ತಾಸೆಯಾಗುವುದರ ಜೊತೆಗೆ, ಕಾವ್ಯ ಜಾಗೃತಗೊಳಿಸುವ ಅನೇಕ ಭಾವಗಳಿಂದ ಓದುಗರ ಮನಸ್ಸು ಪ್ರಫುಲ್ಲಗೊಳ್ಳುವಂತೆ ಮಾಡುವುದು- ಈ ಎಲ್ಲ ಆಶಯಗಳನ್ನೂ ಅನುದಿನ ಕಾವ್ಯವೆಂಬ ಪುಟ್ಟ ಅಂಕಣ ಒಳಗೊಂಡಿದೆಯೆಂಬುದನ್ನು ಅರಿಕೆ ಮಾಡಿಕೊಳ್ಳ ಬಯಸುವೆ. ಕಾವ್ಯದ ಮುಖ್ಯ ಉದ್ದೇಶವೇ ಮನಸ್ಸನ್ನು ಅರಳಿಸುವುದು ಮತ್ತು ಚಿಂತನೆಯನ್ನು ಕೆರಳಿಸುವುದು. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಈ ಅಂಕಣಕ್ಕಿರುವ ಸ್ಥಳ ಮಿತಿಯಲ್ಲಿ ನನ್ನ ಉದ್ದೇಶ ಮತ್ತು ಆಶಯಗಳನ್ನು ಸಾಧ್ಯವಾದಮಟ್ಟಿಗೆ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದೇನೆ.

ಈ ಅಂಕಣ ಆರಂಭವಾಗಿದ್ದು ಜೇಡರ ದಾಸಿಮಯ್ಯನ ವಚನವೊಂದರ ಮೂಲಕ. ಮುಂದೆ ಪಂಪ, ರನ್ನ, ಜನ್ನ, ಪೊನ್ನ, ಬಸವಣ್ಣ, ಅಲ್ಲಮಪ್ರಭು ಮುಂತಾದ ಕವಿಗಳಿಂದ ಹಿಡಿದು ನಿನ್ನೆ ಮೊನ್ನೆ ಕಾವ್ಯ ರಚನೆಗೆ ಕಾಲಿಟ್ಟಿರುವ ಹೊಸ ಕವಿಯವರೆಗೂ ಧರ್ಮ, ಜಾತಿ, ಲಿಂಗ, ಪ್ರಾಂತ್ಯ, ಪಂಥಗಳ ಭೇದವಿಲ್ಲದಂತೆ ನಮ್ಮ ಕಾವ್ಯ ಪರಂಪರೆಯ ಛಾಯೆಯನ್ನು ಬಿಂಬಿಸುವ ಕ್ರಮವೊಂದನ್ನು ಇಲ್ಲಿ ಗಮನಿಸಬಹುದು. ಇದ್ದಕ್ಕಿದ್ದಂತೆ ಕುಮಾರವ್ಯಾಸನೋ, ಚಾಮರಸನೋ ಅಂಕಣದಲ್ಲಿ ಕಾಣಿಸಿಕೊಂಡರೆ, ಮರುದಿನ ಆರಿಫ್ ರಾಜಾ ಅಥವಾ ವಿಲ್ಸನ್ ಕಟೀಲು ಅವರು ಕಾಣಿಸಿಕೊಳ್ಳುವ ಬಗೆ ಇಲ್ಲಿಯದಾದ್ದರಿಂದ ಕವಿಗಳ ಕಾಲ, ಹಿರಿತನಗಳ ಅನುಕ್ರಮಣಿಕೆಯನ್ನು ಇಲ್ಲಿ ಅನುಸರಿಸಿಲ್ಲ. ಕ್ರಮಬದ್ಧತೆಯನ್ನು ಕಾಯ್ದುಕೊಂಡರೆ ಇಂದಿನ ಅನೇಕ ಪ್ರತಿಭಾವಂತರ ಕಾವ್ಯ ತುಣುಕುಗಳನ್ನು ಕನ್ನಡದ ಓದುಗರೆದುರು ತೆರೆದಿಡಲು ವರ್ಷಗಟ್ಟಲೇ ಕಾಯಬೇಕಾಗುವುದು. ಈ ಮುಖ್ಯ ಉದ್ದೇಶದಿಂದಲೇ ಕಾಲಾನುಕ್ರಮದ ಕ್ರಮವನ್ನು ಮೀರಿದ್ದೇನೆ. ಇದರ ಮತ್ತೊಂದು ಪಾರ್ಶ್ವಿಕ ಲಾಭವೆಂದರೆ ಕಾವ್ಯದ ವಸ್ತುಗಳಲ್ಲಿ ಭಿನ್ನ ದನಿಯನ್ನು ಕಾಣುವುದು. ಹಿರಿಕಿರಿಯರ ಕಾವ್ಯದ ತುಣುಕನ್ನು ಓದುವಾಗ ಬೇರೆ ಬೇರೆ ವಸ್ತು, ಬೇರೆ ಬೇರೆ ಭಾವ, ನಿಲುವು, ಕಾವ್ಯಭಾಷೆಯ ಭಿನ್ನತೆ, ಶೈಲಿಯ ಭಿನ್ನತೆ, ರೂಪಕಗಳ ಭಿನ್ನತೆ ಮುಂತಾದ ಕಾವ್ಯ ಪರಿಕರಗಳನ್ನು ಬಿಡಿ ಬಿಡಿಯಾಗಿ ಗಮನಿಸುತ್ತಲೇ ಇಡಿಯ ಕಾವ್ಯ ಪರಂಪರೆಯನ್ನು ಕಣ್ಣೆದುರಿಗೆ ತಂದುಕೊಳ್ಳಬಹುದೆಂಬ ಸಂಶ್ಲೇಷಣಾ ಮಾದರಿಯೊಂದನ್ನು ಅರಿಯುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಈ ಕ್ರಮವು ಹೊಸ ಕಾವ್ಯ ಚರಿತ್ರೆಯೊಂದನ್ನು ಕಟ್ಟುವ ದಾರಿಯನ್ನು ತೆರೆಯುತ್ತದೆಂಬ ನಂಬಿಕೆಯನ್ನೂ ಅಲಕ್ಷಿಸುವಂತಿಲ್ಲ.

ಈ ಅಂಕಣಕ್ಕಿದ್ದ ಮಿತಿಯಲ್ಲಿ ಕೆಲವೊಮ್ಮೆ ಕವಿತೆಯ ಆಶಯವನ್ನು ಪೂರ್ಣವಾಗಿಸಲು ಸಾಧ್ಯವಾಗಿಲ್ಲ. ಅಲ್ಲದೆ ಹೊಸಗನ್ನಡದ ಒಂದು ಕವಿತೆಯಲ್ಲಿ ನಾಲ್ಕು, ಕೆಲವೊಮ್ಮೆ ಐದಾರು ಸಾಲುಗಳನ್ನು ಮಾತ್ರ ಅಂಕಣದಲ್ಲಿ ಕಾಣಿಸಲು ಅವಕಾಶವಿರುವುದರಿಂದ ನನ್ನ ವಿವರಣೆಯನ್ನು ಆಯ್ದ ಸಾಲುಗಳಿಗಷ್ಟೇ ಸೀಮಿತಗೊಳಿಸಿ ಕೊಳ್ಳಬೇಕಾದ ಅನಿವಾರ್ಯತೆಗಳಿರುತ್ತವೆ. ಕವಿತೆಯೊಂದರ ಪೂರ್ಣ ಆಶಯವನ್ನು ಇಲ್ಲಿ ವಿವರಿಸಲು ಸಾಧ್ಯವಾಗಿಲ್ಲವೆಂಬ ಕೊರತೆ ಮತ್ತು ಅಸಮಾಧಾನ ನನ್ನನ್ನು ಬಲವಾಗಿ ಬಾಧಿಸಿದೆ. ಆದರೆ ಕವಿಯ 'ಬದುಕಿನ ತಮ್ಮ ಮೀಮಾಂಸೆ'ಯ ನಾಡಿ ಹಿಡಿದು ಅದನ್ನು ಕಾವ್ಯ ರಸಿಕರಿಗೆ ತಲುಪಿಸುವ ಚಿಕ್ಕ ಪ್ರಯತ್ನವೊಂದನ್ನು ಇಲ್ಲಿ ಮಾಡಲಾಗಿದೆ. ಬಿಡಿ ಬಿಡಿಯಾದ ಹೂವುಗಳನ್ನು ದಾರದಿಂದ ಪೋಣಿಸಿ ಮಾಲೆ ಮಾಡುವಂತೆ, ಬಿಡಿ ಬಿಡಿ ರಚನೆಗಳನ್ನು ಜೋಡಿಸುವ ಮುಖೇನ ಕನ್ನಡ ಕಾವ್ಯ ಪರಂಪರೆಯ ಬನಿಯನ್ನು ಪರಿಚಯಿಸುವ ಪ್ರಯತ್ನ ಈ ಅಂಕಣದ್ದು. ಪ್ರತಿಯೊಬ್ಬ ಕವಿಯ ಕಾವ್ಯದ ಸಾಲುಗಳನ್ನು ಆಯುವಾಗ ಆ ಸಾಲುಗಳೇ ಅವರ ಶ್ರೇಷ್ಠ ರಚನೆಗಳಾಗಿವೆಯೆಂದು ಭಾವಿಸುವ ಅಗತ್ಯವಿಲ್ಲ. ಅಂಕಣಕಾರನ ಗಮನ ಸೆಳೆದ, ಕೆಲವೊಮ್ಮೆ ಅಂದಿನ ತುರ್ತಿಗೆ ಒದಗಿ ಬಂದ ರಚನೆಗಳು ಇಲ್ಲಿ ಹೆಚ್ಚಿವೆ. ನನ್ನ ಓದಿನ ಮಿತಿಯನ್ನು ನನ್ನ ಆಯ್ಕೆಗಳು ಆಧರಿಸಿವೆಯೆಂಬುದನ್ನು ವಿನಮ್ರತೆಯಿಂದ ಸೂಚಿಸ ಬಯಸುತ್ತೇನೆ.

ಸಮಕಾಲೀನ ಕವಿಗಳ ಕವಿತೆಯ ಸಾಲುಗಳನ್ನು ಓದುವಾಗ ಅಂಕಣದಲ್ಲಿ ಕಾಣಿಸುವುದು ನಾಲ್ಕು ಸಾಲುಗಳನ್ನಾದರೂ ಅವರ ಹತ್ತು ಕವಿತೆಗಳನ್ನಾದರೂ ಓದಿದ್ದೇನೆ. ಇದರಿಂದ ಅನೇಕ ಸಫಲ ರಚನೆಗಳಿಗೆ ಮುಖಾಮುಖಿಯಾಗುವ ಸದಾವಕಾಶ ನನ್ನದಾಗಿದೆ. ನಮ್ಮ ಪ್ರಾಚೀನ ಕವಿಗಳನ್ನು, ಆಧುನಿಕ ಕನ್ನಡದ ಧ್ರುವತಾರೆಗಳ ಕಾವ್ಯವನ್ನು ಓದಿ ತಣಿದಷ್ಟೇ ಸಾರ್ಥಕತೆಯನ್ನು ಹೊಸ ತಲೆಮಾರಿನ ಕವಿಗಳನ್ನೂ ಓದುವಾಗಲೂ ಅನುಭವಿಸಿದ್ದೇನೆ. ಹಿರಿಯ ಕವಿಗಳ ಕುರಿತಾಗಿ ಪ್ರತಿಕ್ರಿಯೆಗಳ ದೊಡ್ಡ ಒಟ್ಟಿಲೇ ನಮ್ಮೆದುರಿಗಿರುವುದರಿಂದ ಹೊಸ ತಲೆಮಾರಿನ ಪ್ರತಿಭಾವಂತರಿಗೆ ಅಂಕಣದಲ್ಲಿ ಪ್ರಾಶಸ್ತ್ರ ಹೆಚ್ಚಾಗಿರುವುದನ್ನು ಓದುಗರು ಗಮನಿಸಬಹುದು. ಈ ಅಂಕಣಕಾರನ ಗಮನಕ್ಕೆ ಬರೆದ ಅನೇಕ ಪ್ರತಿಭಾಶಾಲಿ ಸಮರ್ಥ ಕವಿಗಳೂ ಇದ್ದಾರೆಂಬುದರ ಅರಿವಿದೆ. ಅವರ ಕೃತಿಗಳನ್ನು ಓದಿ, ಅವರನ್ನು ಈ ಅಂಕಣದಲ್ಲಿ ತರುವ ಸಂಕಲ್ಪವಿರುವುದರಿಂದ ಮುಂದಿನ ಸಂಪುಟಗಳಲ್ಲಿ ಅವರೆಲ್ಲರೂ ಒಳಗೊಳ್ಳುವರೆಂಬ ಸದಾಶಯ ನನ್ನದು.

ಒಂದು ವರ್ಷದ ಅವಧಿಯಲ್ಲಿ ಅಂಕಣದಲ್ಲಿ ಉಲ್ಲೇಖಗೊಂಡಿರುವ ಕವಿಗಳನ್ನು ಈ ಮೊದಲ ಸಂಪುಟ ಒಳಗೊಂಡಿದೆ. ಕೆಲವು ಕವಿಗಳು ಮತ್ತೆ ಮತ್ತೆ ಕಾಣಿಸಿಕೊಂಡಿರುವುದು ಆಕಸ್ಮಿಕವಲ್ಲ. ಅಂಕಣ ಪ್ರಕಟವಾಗುವ ದಿನದ ಮಹತ್ತ್ವವನ್ನು ಆಧರಿಸಿ ಹಬ್ಬ, ರಾಜ್ಯೋತ್ಸವ, ಕವಿಯ ಹುಟ್ಟುಹಬ್ಬ, ವಿಶ್ವ ಪರಿಸರ ದಿನ, ಮಹಿಳಾ ದಿನಾಚರಣೆ, ಮಕ್ಕಳ ದಿನಾಚರಣೆ, ಬಜೆಟ್ ಮಂಡನೆ ಮುಂತಾದವುಗಳ ಮಹತ್ವವಿರುವ ಸಾಲುಗಳು ಮುನ್ನೆಲೆಗೆ ಬಂದಿವೆ. ಅಲ್ಲದೆ ಕೆಲವರನ್ನು ಮತ್ತೆ ಮತ್ತೆ ಓದುತ್ತಲೇ ಇರಬೇಕಾದ ಸುರುಳಿ ಓದು ಕಾವ್ಯಾಭ್ಯಾಸಿಗಳಿಗೆ ಅನಿವಾರ್ಯ ಕೂಡ. ಸದ್ಯಕ್ಕೆ ಇದು ಈಗಲೂ ಪ್ರಕಟವಾಗುತ್ತಿರುವ ಅಂಕಣವಾದ್ದರಿಂದ ಪತ್ರಿಕೆ ಅವಕಾಶ ನೀಡುವಷ್ಟು ದಿನವೂ ನಮ್ಮ ಕವಿಗಳ ಕಾವ್ಯಕ್ಕೆ ಎದುರಾಗುತ್ತಾ ಮತ್ತೊಂದು ಸಂಪುಟದ ಕನಸನ್ನು ಎದೆಯಲ್ಲಿರಿಸಿ ಕೊಂಡಿದ್ದೇನೆ. ಇದು ಪೊಳ್ಳು ಭರವಸೆಯಂತೆ ಹುಸಿ ಹೋಗದಿರಲೆಂದು ಸಂಕಲ್ಪಿಸುವೆ.

ಈ ಅಂಕಣದ ಬರವಣಿಗೆಯಿಂದ ನನಗಾದ ವೈಯಕ್ತಿಕ ಲಾಭ ಹಿರಿದು. ಕಾವ್ಯದೊಡನಿನ ನಿರಂತರ ಒಡನಾಟದಿಂದ ಲಭ್ಯವಾದ ಕಾವ್ಯಜ್ಞತೆಯದು ಒಂದು ಪಾಲಾದರೆ, ಅಂಕಣದ ನೆಪದಲ್ಲಿ ಅನೇಕ ಹೊಸ ಕವಿಗಳ, ಕಾವ್ಯ ರಸಿಕರ ಗೆಳೆತನದ ಭಾಗ್ಯ ಲಭಿಸಿದ್ದು ಮತ್ತೊಂದು ಪಾಲು. ಸ್ವಭಾವತಃ ಸ್ನೇಹ ಜೀವಿಯಾದ ನನಗೆ ಗೆಳೆತನದ ವರ್ತುಲ ವಿಸ್ತರಿಸಿದ್ದು ಹಿಗ್ಗು ಅಭಿಮಾನಗಳನ್ನು ಹೆಚ್ಚಿಸಿವೆ. ಈ ಅಂಕಣವನ್ನು ಅನೇಕರು ಮೆಚ್ಚಿ ಬರೆದಿದ್ದಾರೆ. ಪ್ರತಿ ನಿತ್ಯವೂ ಹಲವು ಗೆಳೆಯರು ವಾಟ್ಸಾಪ್ ಸ್ಟೇಟಸುಗಳಲ್ಲಿ ಅಂದಂದಿನ ಅಂಕಣವನ್ನು ಹಾಕಿಕೊಂಡು ಇತರರಿಗೂ ರವಾನಿಸಿದ್ದಾರೆ. ಆಸಕ್ತ ಗುಂಪುಗಳಲ್ಲಿ, ಕನ್ನಡ ಉಪನ್ಯಾಸಕರ ಸಂಶೋಧಕರ ಗುಂಪುಗಳಲ್ಲಿ ಹಂಚಿಕೊಳ್ಳುವ ಮೂಲಕ ಕಾವ್ಯಾಸಕ್ತರ ಮನೆಮನೆಗೂ ತಲುಪಿಸಿದ್ದಾರೆ. ಪತ್ರಿಕೆಯ ಓದುಗರದ್ದು ಒಂದು ಬಗೆಯ ಬಳಗವಿದ್ದರೆ, ವಾಟ್ಸಾಪ್ ಫೇಸ್ಟುಕ್, ಇನ್ಸಾ ಗ್ರಾಂ ಮುಂತಾದ ಮಾಧ್ಯಮಗಳ ಮೂಲಕ ಓದುವ ವರ್ಗದ್ದು ಮತ್ತೊಂದು ಬಗೆಯ ಬಳಗ. ನಾನು ಮಾಡುತ್ತಿರುವ ಈ ಪುಟ್ಟ ಕೆಲಸವನ್ನೂ ತೋಚಿದ ಬಗೆಯ ಅಮಾಯಕ ವಿವರಣೆಯನ್ನೂ ಅನೇಕರು ಮೆಚ್ಚಿಕೊಂಡು ಪ್ರತಿಕ್ರಿಯಿಸಿರುವುದು ಇದರ ಲೇಖಕನಾದ ನನಗೆ ಅತೀವ ಸಂತಸವನ್ನು ತಂದಿದೆ. ಜೊತೆಗೆ ನನ್ನ ಅನೇಕ ಮಿತ್ರರು ತಮಗೆ ಮುಖ್ಯವೆನಿಸಿದ ಕವಿಗಳನ್ನು ನನಗೆ ಪರಿಚಯ ಮಾಡಿಕೊಟ್ಟು, ಅವರ ರಚನೆಗಳನ್ನು ನನಗೆ ಒದಗಿಸುವ ಉದಾರತೆ ಮೆರೆದಿದ್ದಾರೆ. ಮತ್ತೆ ಕೆಲವರು ಪ್ರತಿನಿತ್ಯ ಈ ಅಂಕಣವನ್ನು ಓದಿ ತಕ್ಷಣವೇ ತಮ್ಮ ಅಭಿಪ್ರಾಯ, ಭಿನ್ನಾಭಿಪ್ರಾಯಗಳನ್ನು ನನಗೆ ತಿಳಿಸುವ ಹೃದಯವಂತಿಕೆ ತೋರಿದ್ದಾರೆ. ಪ್ರತಿದಿನವೂ ಪ್ರತಿಕ್ರಿಯಿಸಲಾರದ ಹಲವರು ಒಟ್ಟಿಗೇ ಒಂದು ವಾರದ ಅಂಕಣಗಳ ಬಗ್ಗೆ ಬರೆದು ಕಳಿಸಿದ್ದೂ ಇದೆ. ಎಲ್ಲ ಬಗೆಯ ಅಭಿಪ್ರಾಯಗಳನ್ನೂ ಸಮಚಿತ್ತದಿಂದ ಬರಮಾಡಿಕೊಂಡಿದ್ದೇನೆ. ಲೇಖಕನೊಬ್ಬನ ಬರವಣಿಗೆಯನ್ನು ಜೀವಂತವಾಗಿರಿಸುವ, ಜಡವಾಗದಂತೆ ಎಚ್ಚರಿಸುವ ಎಲ್ಲ ಬಗೆಯ ಅಭಿಪ್ರಾಯಗಳಿಗೂ ನಾನು ಸದಾ ಋಣಿಯಾಗಿರುವೆ. ಈ ಅಂಕಣ ಬರಹಕ್ಕೆ ಬಂದಿರುವ ಬಗೆ ಬಗೆಯ ಪ್ರತಿಕ್ರಿಯೆಗಳನ್ನು ಗಮನಿಸಿ ನಮ್ಮ ಜನ ಕಾವ್ಯವನ್ನು ಇಷ್ಟೊಂದು ಆದರಿಸುತ್ತಾರೆಂದು ತಿಳಿದು ನಿಜಕ್ಕೂ ಸಂತೋಷಪಟ್ಟಿದ್ದೇನೆ. ಓದುಗರ ಮೆಚ್ಚುಗೆ, ಪ್ರೋತ್ಸಾಹಗಳೇ ಲೇಖಕರಿಗೆ ನಿಜವಾದ ಪ್ರಶಸ್ತಿ ಮತ್ತು ಬಲವನ್ನು ತುಂಬುವ ಶಕ್ತಿ. ಹಾಗಾಗಿ, ಓದಿ ಪ್ರೋತ್ಸಾಹಿಸಿದ ಎಲ್ಲರನ್ನೂ ಹೃತ್ತೂರ್ವಕವಾಗಿ ವಂದಿಸುವೆ.

ಎಷ್ಟೋ ಕವಿಗಳು ಎಲೆಮರೆಯ ಕಾಯಂತಿದ್ದವರು ಈ ಅಂಕಣದ ಮೂಲಕ ಓದುಗರ ಗಮನಕ್ಕೆ ಬಂದಿದ್ದಾರೆಂಬುದೂ ನಿಜ. ಇದು ಅವರ ಕವಿತಾ ಶಕ್ತಿಯ ಗುಣವೇ ಹೊರತು, ಅಂಕಣಕಾರನ ಹೆಚ್ಚುಗಾರಿಕೆಯೇನಲ್ಲ. ಹಲವು ಓದುಗರು ಹೊಸ ಬರಹಗಾರರ ಬಗೆಗೆ ತೋರಿದ ಕುತೂಹಲವನ್ನು ನಾನು ಉದ್ದಕ್ಕೂ ಗಮನಿಸಿರುವುದ ರಿಂದ ಈ ಮಾತನ್ನು ಹೇಳುತ್ತಿರುವೆ. ಕವಿಗಳಿಗೆ ಓದುಗರನ್ನೂ ಓದುಗರಿಗೆ ಕವಿಗಳನ್ನೂ ಪರಿಚಯಿಸಿದ ಸೇತುವಿನಂತೆ ಈ ಅಂಕಣ ಕೆಲಸ ಮಾಡಿರುವುದು ಅಂಕಣದ ಆಶಯಕ್ಕೆ ಪೂರಕವಾಗಿಯೇ ಇದೆ. ಮರೆಯದೆ ಹೇಳಬೇಕಾದ ಮುಖ್ಯವಾದ ಮಾತೆಂದರೆ ಇದು ವ್ಯಾಖ್ಯಾನವೇ ಹೊರತು, ಇದಮಿತ್ತಂ ಎಂಬ ವಿಮರ್ಶಾತ್ಮಕ ಬರಹವಲ್ಲ. ಕಟು ವ್ಯಾಖ್ಯಾನ ಅಥವಾ ವಿಮರ್ಶೆಯ ಚೌಕಟ್ಟನ್ನು ಮೀರಿದ, ಒಂದು ಬಗೆಯ ಭಾವಸ್ಪಂದನವೆಂದು ಕರೆಯಬಹುದಾದ ಈ ವ್ಯಾಖ್ಯಾನ ಕೂಡ ಕೆಲವೊಮ್ಮೆ ಕವಿತೆಗೆ ನ್ಯಾಯ ಒದಗಿಸಿಲ್ಲವೆಂಬುದನ್ನು ಅನೇಕರು ಗಮನಕ್ಕೆ ತಂದು ನನ್ನನ್ನು ಎಚ್ಚರಿಸಿರುವುದನ್ನು ನಾನು ಮರೆಯಲಾರೆ. ಕೆಲವರು "ಏನು ನಮ್ಮ ಕಾವ್ಯ ಕಣ್ಣಿಗೆ ಬಿದ್ದಿಲ್ಲವೆ?" ಎಂದೂ ಮತ್ತೆ ಕೆಲವರು ತಾವೇ ವ್ಯಾಖ್ಯಾನವನ್ನೂ ಬರೆದು “ನಿಮ್ಮ ಗಮನಕ್ಕೆ" ಎಂದೂ ಮತ್ತೊಂದಿಬ್ಬರು "ನನ್ನ ಕವಿತಾ ಸಂಕಲನಗಳು ನಿಮ್ಮ ಬಳಿ ಇಲ್ಲ ಎನ್ನಿಸುತ್ತದೆ, ಇದ್ದರೂ ಉಲ್ಲೇಖಕ್ಕೆ ಅರ್ಹವಾದುವಲ್ಲವೇನೋ!" ಎಂದು ಚುಚ್ಚಿದವರೂ ಇದ್ದಾರೆ. ಮತ್ತೆ ಕೆಲವರು ರಾಶಿ ರಾಶಿ ಕವನ ಸಂಕಲನಗಳನ್ನೇ ಪೋಸ್ಟ್ ಮಾಡಿದ್ದಾರೆ. ಕೆಲವರನ್ನು ನಾನೇ ಕಾಡಿ ಬೇಡಿ ತರಿಸಿಕೊಂಡ ಉದಾಹರಣೆಗಳೂ ಇಲ್ಲದಿಲ್ಲ. ಹಾಗೆಯೇ ಕೆಲವೊಮ್ಮೆ ಕೆಲವೊಂದು ಕವಿತೆಯ ಸಾಲುಗಳು ತೀರ ಸರಳವಾಗಿದ್ದಾಗ, ದುರ್ಬಲವಾಗಿದ್ದಾಗ "ಕನ್ನಡಿಗರು ಇನ್ನೂ ಉತ್ತಮ ಕಾವ್ಯಕ್ಕೆ ಅರ್ಹರು" ಎಂದು ಕಟಕಿಯಾಡಿದವರೂ ಇಲ್ಲದಿಲ್ಲ. ಉತ್ತಮ ಕಾವ್ಯ ಎಂಬ ಮಾತು ಅವರವರ ಅಭಿರುಚಿಗೆ, ಆಯ್ಕೆಗೆ ಸಂಬಂಧಿಸಿದ್ದಾದರೂ ಈ ಉತ್ತಮ, ಶ್ರೇಷ್ಠ ಎಂಬವುಗಳ ಮಾನದಂಡವಾದರೂ ಯಾವುದು? ಎಲ್ಲ ಬಗೆಯ ದನಿಗಳೂ ಕೇಳಲೆಂಬ ಉದ್ದೇಶ ನನ್ನ ಬರಹದ ಹಿಂದಿನ ಒತ್ತಾಸೆಯಾಗಿರುವುದರಿಂದ ಒಳ್ಳೆಯ, ಏನೂ ಅಲ್ಲದ ಎಲ್ಲ ಬಗೆಯ ದನಿಗೂ ಇಲ್ಲಿ ಜಾಗವಿದೆ. ನಮ್ಮ ಎಷ್ಟೋ ಮಹತ್ತ್ವದ ಲೇಖಕರು ಕಾವ್ಯದಲ್ಲಿ ಪರಿಣಾಮಕಾರಿಯಾದ ಯಶಸ್ಸನ್ನು ಕಾಣದೆ ಹೋಗಿದ್ದಾರೆ. ಹಾಗಾಗಿ, ಕವಿಗಳೆಂದು ಮನ್ನಣೆ ಪಡೆಯದ ಅನೇಕ ಹಿರಿಯರ, ವಿದ್ವಾಂಸರ ರಚನೆಗಳನ್ನೂ ಕುತೂಹಲಕ್ಕೆಂದು ಈ ಅಂಕಣದಲ್ಲಿ ಕಾಣಿಸುವ ಯತ್ನ ಮಾಡಿರುವೆ. ಇದರಿಂದಾಗಿ ಸಾಮಾನ್ಯವೆನಿಸುವ ಕವಿತೆಯ ಸಾಲುಗಳೂ ಇಲ್ಲಿ ಕಾಣಬರುವುದು ಅನಿವಾರ್ಯ.

ವ್ಯಾಪಕವಾದ ಕಾವ್ಯ ಸೃಷ್ಟಿಯ ನಡುವೆ ಓದುಗನೊಬ್ಬನ ಆಯ್ಕೆಗೆ ಹಲವು ಮಿತಿಗಳಿರುತ್ತವೆಂಬುದನ್ನು ಓದುಗರು ಸಹಾನುಭೂತಿಯಿಂದ ಕಾಣುವರೆಂಬ ನಿರೀಕ್ಷೆ ಕೂಡ ನನ್ನದಾಗಿದೆ. ರಾಜಕೀಯ ವಿಡಂಬನೆಗಳು ಅಪರೂಪಕ್ಕೆ ಕಂಡು ಬಂದಿದ್ದರೂ ಸಮಕಾಲೀನ ಬದುಕು ಮತ್ತು ಸಂಸ್ಕೃತಿಗೆ ಬೇಕಾದ ವಸ್ತುವನ್ನಾಯ್ದು ಬರೆದ ಕವಿತೆಗಳಿಗೆ ಇಲ್ಲಿ ಹೆಚ್ಚಿನ ಗಮನವಿರುವುದನ್ನು ಲಕ್ಷಿಸಬಹುದು. ಕನ್ನಡದ ಕವಿ ಸಮುದಾಯದ ಸಮಷ್ಟಿ ಮನಕ್ಕೊಂದು ಕಾವ್ಯ ತೊರೆಯ ಹಿಂದೆ ಸೃಷ್ಟಿಶೀಲ ರಚನೆಯಲ್ಲಿ ತೊಡಗಿಕೊಂಡಿದೆ. ಕನ್ನಡ ಕವಿಗಳ ಆಲೋಚನಾ ಕ್ರಮ ಮತ್ತು ಭಾವತೊರೆ ಸಾವಿರಾರು ಓದುಗರೆದೆಯಲ್ಲೂ ಮರುಸೃಷ್ಟಿಗೊಳ್ಳುತ್ತಾ ಹೋಗುತ್ತದೆ. ನೂರಾರು ತೊರೆಗಳು ನಾಡಿನ ನಾನಾ ಮೂಲೆಗಳಿಂದ ಹರಿದು ಮುಖ್ಯವಾಹಿನಿಯಲ್ಲಿ ಸಂಗಮಗೊಂಡಿರುವುದ ರಿಂದ ಇದೊಂದು ಅಪೂರ್ವ ಕಾವ್ಯ ಸಂಗಮವಾಗಿದೆ.

ಹೆಚ್ಚ ಕಡಿಮೆ ನಿತ್ಯವೂ ಈ ಕಾವ್ಯದ ಅಂಕಣ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದೆಯಾದ್ದರಿಂದ ಪತ್ರಿಕೆಯವರೇ "ವಿ.ಕ. ಅನುದಿನ ಕಾವ್ಯ" ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ನನಗೆ ಮಾತ್ರವಲ್ಲದೆ, ಪ್ರತಿಯೊಬ್ಬರಿಗೂ ಈ ಶೀರ್ಷಿಕೆ ಪ್ರಿಯವಾಯಿತು. ಈ ಕಾವ್ಯಾಂಕಣಕ್ಕೆ ಅವಕಾಶ ಕಲ್ಪಿಸಿಕೊಟ್ಟು ಹುರಿದುಂಬಿಸಿದ ಮತ್ತು ಪುಸ್ತಕ ರೂಪದಲ್ಲಿ ಪ್ರಕಟಿಸಲು ಅನುಮತಿಯಿತ್ತು ಸಹಕರಿಸಿದ ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯ ಸಂಪಾದಕರಾದ ಶ್ರೀ ಸುದರ್ಶನ ಚನ್ನಂಗಿಹಳ್ಳಿ ಮತ್ತವರ ಸಂಪಾದಕ ಮಂಡಳಿ ಹಾಗೂ ಆಡಳಿತ ಮಂಡಳಿಯವರೆಲ್ಲರನ್ನೂ ಹೃತ್ತೂರ್ವಕವಾಗಿ ನೆನೆದು, ಧನ್ಯವಾದಗಳನ್ನು ಸಮರ್ಪಿಸುವೆ. ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವಾಗ ಬೇರೊಂದು ತಲೆಬರಹ ಸೂಕ್ತ ಎಂದು ಹಲವರು ಸಲಹೆ ಮಾಡಿದ್ದರಿಂದ ಆ ಬಗ್ಗೆ ಯೋಚಿಸಬೇಕಾಯ್ತು. ಹಿರಿಯ ಕವಯಿತ್ರಿ ಶ್ರೀಮತಿ ಎಂ.ಆರ್. ಕಮಲ ಅವರು "ಮಾಂದಳಿರ ತೊಟ್ಟಿಲು" ಎಂದು ಸೂಚಿಸಿದ್ದು ಆಪ್ಯಾಯಮಾನವಾಗಿ ಕಂಡಿದ್ದರಿಂದ ಅದೇ ಹೆಸರನ್ನು ಉಳಿಸಿಕೊಂಡಿದ್ದೇನೆ ಮತ್ತು ಅವರಿಗೆ ಅನಂತ ನಮನಗಳನ್ನು ಸಲ್ಲಿಸುತ್ತೇನೆ. ಈ ಅಂಕಣವನ್ನು ಆರಂಭದಿಂದಲೂ ಮೆಚ್ಚಿ ಪ್ರೋತ್ಸಾಹಿತ್ತಾ ಬಂದ ನಮ್ಮ ನಡುವಿನ ಪ್ರಸಿದ್ಧ ವಿಮರ್ಶಕರಾದ ಡಾ. ರಾಜಶೇಖರ ಹಳೇಮನೆಯವರು ಪ್ರೀತಿಯಿಂದ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಅವರ ಮಾತುಗಳಿಂದ ನನ್ನ ಈ ಅಂಕಣ. ಬರಹವು ಪಡೆದ ಕಸುವು ಬೆಲೆಕಟ್ಟಲಾಗದ್ದು. ಅವರಿಗೆ ನಾನು ಆಭಾರಿಯಾಗಿದ್ದೇನೆ. ನನ್ನ ಪ್ರಿಯ ಗೆಳೆಯರಾದ ಡಾ. ಬೆಳವಾಡಿ ಮಂಜುನಾಥ ಮತ್ತು ಆರ್. ದಿಲೀಪಕುಮಾರ ಅವರು ಅನುದಿನ ಕಾವ್ಯಕ್ಕೆ ನೂರುದಿನ ತುಂಬಿದಾಗ ಮೆಚ್ಚಿ ಬರೆದ ಪತ್ರಗಳನ್ನು ರಕ್ಷಾಪುಟದ ಎರಡೂ ಬದಿಗಳಲ್ಲಿ ಬಳಸಿಕೊಂಡಿದ್ದೇನೆ. ಈ ಇಬ್ಬರು ಸ್ನೇಹಿತರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಎಂದಿನಂತೆಯೇ ಮಾಲೂರಿನ ಅಲಂಪು ಪ್ರಕಾಶನದ ಗೆಳೆಯರು ಈ ಕೃತಿಯ ಪ್ರಕಟಣೆಗೆ ಮುಂದಾಗಿದ್ದಾರೆ. ನನ್ನ ವಿಚಾರದಲ್ಲಿ ಅವರು ತೋರುತ್ತ ಬಂದಿರುವ ವಿಶ್ವಾಸ ಹಿರಿದು. ಈ ಎಲ್ಲ ಗೆಳೆಯರಿಗೂ ನನ್ನ ನೆನೆಕೆಗಳು ಸಲ್ಲುತ್ತವೆ. ಕನ್ನಡದ ಕಾವ್ಯ ರಸಿಕರ ಮೆಚ್ಚುಗೆ, ಪ್ರೋತ್ಸಾಹಗಳಿಂದಾಗಿಯೇ ಎಡೆಬಿಡದೆ ಈ ಅಂಕಣದ ಬರಹ ಸಾಧ್ಯವಾಗಿದೆ. ಎಲ್ಲ ಓದುಗರಿಗೂ ನನ್ನ ನಮಸ್ಕಾರಗಳನ್ನು ತಿಳಿಸುತ್ತೇನೆ. 'ಮಾಂದಳಿರ ತೊಟ್ಟಿಲು' ಎಲ್ಲರ ಓದಿನ ಸಂಗಾತಿಯಾಗಲೆಂದು ಆಶಿಸುತ್ತೇನೆ. ಎಂದಿನಂತೆ ಓದುವ ಎಲ್ಲರ ಹಾರೈಕೆ ನನ್ನ ಪಾಲಿಗಿರಲಿ ಮತ್ತು ಕಾವ್ಯದ ಒಡನಾಟ ಎಲ್ಲರ ಹೃದಯವನ್ನು ಹಿಗ್ಗಿಸಿ, ಸದಾ ವಿಕಸಿಸುವಂತೆ ಮಾಡಲೆಂದು ಹಾರೈಸುತ್ತಾ ನನ್ನ ಈ ಎರಡು ಮಾತುಗಳಿಗೆ ವಿರಾಮ ಹೇಳುತ್ತೇನೆ.

-ಡಾ. ಎಚ್.ಎಸ್. ಸತ್ಯನಾರಾಯಣ

MORE FEATURES

ಡಂಕಲ್‌ಪೇಟೆಗೆ ಹೊರಡುವ ಮುನ್ನ…….

05-07-2024 ಬೆಂಗಳೂರು

‘ಈ ಡಂಕಲ್‌ಪೇಟೆ ಎಂಬುದು ನನ್ನ ಕಥೆಗಳಿಗಾಗಿ ನಾನೇ ಸೃಷ್ಟಿಸಿಕೊಂಡಿರುವ ಒಂದು ಪ್ರಾದೇಶಿಕ ಚೌಕಟ್ಟು ಇರುವ ಕಾ...

`ಕುದ್ಮಲ್ ಪಿಜ್ಜ' ಹೇಗಿದ್ದರೆಂದು ತಿಳಿಯುವ ಪ್ರೇಮಿ ರಾವ್ ಅವರ ಮುಗ್ಧ ಆಸಕ್ತಿಯೇ ಈ ಪುಸ್ತಕದ “ಮೂಳೆ ಹಂದರ”

05-07-2024 ಬೆಂಗಳೂರು

"ಕುದ್ಮಲ್ ಅವರ ಮರಿಮೊಮ್ಮಗ ಪ್ರೇಮಿ ಎಂ. ರಾವ್ ಬರೆದ ಪುಸ್ತಕದ ಅನುವಾದ “ನೀವು ಕಂಡರಿಯದ ಕುದ್ಮಲ್ ರಂಗರಾವ್,...

ಕವಿತೆ ಕಟ್ಟುತ್ತ ಬಿರಾದಾರ ಸೃಷ್ಟಿಸುವ ರೂಪಕ-ಪ್ರತಿಮೆಗಳು ಚೆಲುವಾಗಿವೆ: ಕೇಶವ ಮಳಗಿ

05-07-2024 ಬೆಂಗಳೂರು

'ಮಧು ತಮ್ಮ ಕಾವ್ಯದ ನಿಧಾನ ನಡಿಗೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಕವಿತೆಗಳ ದೀರ್ಘತೆ. ವಸ್ತು ಬೆಂಕಿಯಂತೆ ಸುಡುತ್ತಿ...