ಈ ಟೂರು ಮುಗಿಯದ ಪಯಣ; ಸಂಜೋತಾ ಪುರೋಹಿತ


‘ಪ್ರಯಾಣವೇ ಆಗಲಿ, ಜೀವನದಲ್ಲಿ ಕೈಗೊಳ್ಳಬೇಕಾದ ಯಾವುದೋ ಒಂದು ನಿರ್ಧಾರವೇ ಆಗಲಿ, ಒಂದು ಹೆಜ್ಜೆ ಎತ್ತಿ ಮುಂದಿಡದ ಹೊರತು ಯಾವುದೂ ಸಾಧ್ಯವಾಗದು’ ಎನ್ನುತ್ತಾರೆ ಸಂಜೋತಾ ಪುರೋಹಿತ. ಅವರು ‘ಊರು- ಟೂರು’ ಪ್ರವಾಸ ಲೇಖನಗಳ ಸಂಕಲನ ಕುರಿತು ಬರೆದ ಲೇಖಕರ ಮಾತು ಇಲ್ಲಿದೆ….

2016 ರಲ್ಲಿ ಕೆಲಸದ ಪ್ರಯುಕ್ತ ಇಂಗ್ಲೆಂಡಿನ ಬರ್ಮಿಂಗಹ್ಯಾಮಿಗೆ ಹೋಗಬೇಕಾದಾಗ ನಾನು ತುಸು ಅಧೈರ್ಯಗೊಂಡಿದ್ದೆ. ಅದು ನನ್ನ ಮೊದಲ ವಿಮಾನ ಪಯಣ. ಅದರಲ್ಲೂ ಹದಿನಾರು ಗಂಟೆಗಳ ವಿದೇಶ ಪ್ರಯಾಣ. ಅವತ್ತು ಬೆಂಗಳೂರಿನಿಂದ ಬರ್ಮಿಂಗಹ್ಯಾಮ್ ಬರುವವರೆಗೂ ವಿಮಾನದಲ್ಲಿ ಕೂತು ಕಣ್ಣೀರು ಒರೆಸಿಕೊಳ್ಳುತ್ತಿದ್ದ ಹುಡುಗಿ ನನಗಿನ್ನೂ ನೆನಪಿದ್ದಾಳೆ. ಹೊಸ ನೆಲ, ಜನ, ಭಾಷೆಯ ಲಾಲಿತ್ಯ, ಆಹಾರಪದ್ಧತಿ, ಜೀವನಕ್ರಮಗಳ ಜೊತೆ ಹೊಂದಿಕೊಂಡು ಹೋಗುತ್ತ ನಿಧಾನವಾಗಿ ಎಲ್ಲವೂ ಅರ್ಥವಾಗಿ, ಎಲ್ಲರೂ ನಮ್ಮವರೇ ಎಂದೆನ್ನಿಸಿದಾಗ ಅಷ್ಟು ದೂರ ಬಂದಿದ್ದಕ್ಕೂ ಸಾರ್ಥಕವೆನ್ನಿಸಿದೆ. ಪ್ರಯಾಣವೇ ಆಗಲಿ, ಜೀವನದಲ್ಲಿ ಕೈಗೊಳ್ಳಬೇಕಾದ ಯಾವುದೋ ಒಂದು ನಿರ್ಧಾರವೇ ಆಗಲಿ, ಒಂದು ಹೆಜ್ಜೆ ಎತ್ತಿ ಮುಂದಿಡದ ಹೊರತು ಯಾವುದೂ ಸಾಧ್ಯವಾಗದು. ಆ ವಿಮಾನ ಪಯಣದ ನೆನಪಿಗೆ ಈಗ ಅದೆಷ್ಟು ವರ್ಷಗಳೋ.. ಇಂಗ್ಲೆಂಡ್ ವಾಸ ಮುಗಿದ ಮೇಲೆ ಅಮೇರಿಕಾಕ್ಕೆ ಹೊರಡುವುದು ಎಂದಾದಾಗ ಮೊದಲಿನಷ್ಟು ಭಯವಿರಲಿಲ್ಲ. ಇಲ್ಲಿಯ ಜನರ ಜೀವನಾಡಿಯನ್ನು ಅರಿತು ಅವರೊಳಗೆ ಬೆರೆಯುತ್ತ ನಾವು ಎಮೋಷನಲೀ ಕನೆಕ್ಟ್ ಆಗುವುದಿದೆಯಲ್ಲ ಅದು ಸುಲಭದ ಮಾತಲ್ಲ. ಹೊರನೋಟದಲ್ಲಿ ಬಿನ್ನಾಣವಾಗಿ ಕಾಣುವ ಈ ವಲಸಿಗರ ಜೀವನದ ಪಾಡು ಅವರಿಗೇ ಗೊತ್ತು. ಅತ್ತ ತಾಯ್ಯಾಡನ್ನು ಬಿಟ್ಟು ಹೊರಟವರು ಎಂಬ ಅಪವಾದ. ಇತ್ತ ಇವರು ನಮ್ಮವರಲ್ಲ ಎಂಬ ಓರೆನೋಟ. ಇವೆರಡರ ಮಧ್ಯದಲ್ಲಿರುವ ಬದುಕು ಹೊಯ್ದಾಡುತ್ತಲೇ ಇರುತ್ತದೆ. ಹಬ್ಬಗಳಲ್ಲಿ ಮನಸ್ಸು ಊರಿನ ಬೀದಿಯನ್ನು ಹುಡುಕಿಕೊಂಡು ಹೋಗಿರುತ್ತದೆ. ಮನೆಗಳಲ್ಲಿ ಸಮಾರಂಭಗಳು ನಡೆಯುವಾಗ ಮುದುಡಿಕೊಂಡಿರುತ್ತದೆ. ಫೋಟೋಗಳಲ್ಲಿ ಮನೆಯವರೆಲ್ಲ ಒಟ್ಟಾಗಿ ಸಂತಸದಿಂದ ಇರುವುದನ್ನು ನೋಡಿ ಕಣ್ಣೀರು ಹೊರಬರಲಾಗದೇ ಒದ್ದಾಡುತ್ತದೆ. ಇದು ಎಲ್ಲ ವಲಸಿಗರ ಕತೆ. ಈ ಎಲ್ಲದರಿಂದ ಪಾರಾಗಲು ನಾನು ತಿರುಗಾಟದತ್ತ ಮುಖ ಮಾಡಿದೆ. ರಜೆ ಬಂತೆಂದರೆ ಸಾಕು ಎಲ್ಲಿಗೆ ಹೋಗುವುದು ಎಂದು ಹುಡುಕುತ್ತಿರುವುದೇ ಕಾಯಕ. ಒಂದು ಜಾಗ ನೋಡಿ ಬಂದ ಮೇಲೆ ಮತ್ತೊಂದನ್ನು ನೋಡುವ ತವಕ. ಮತ್ತೆ ಯಾವಾಗ ರಜೆ ಬಂದಿತೋ ಎನ್ನುವ ಕನವರಿಕೆ.

ಲಂಡನ್ನಿನ ಬ್ರಿಡ್ಜ್, ಸ್ಕಾಟಲ್ಯಾಂಡಿನ ಭೂದೃಶ್ಯ, ಐರ್ಲ್ಯಾಂಡಿನ ಟೈಟಾನಿಕ್ ಮ್ಯೂಸಿಯಂ, ಹವಾಯಿಯಲ್ಲಿರುವ ಶಿವನ ದೇವಸ್ಥಾನ, ಅಮೇರಿಕಾದ ವೈಟ್ ಹೈಸ್, ಸುಪ್ರೀಂ ಕೋರ್ಟ್, ನ್ಯೂಯಾರ್ಕ್ ಸ್ಟ್ಯಾಚ್ಯೂ ಆಫ್ ಲಿಬರ್ಟಿ, ನಯಾಗರ ಜಲಪಾತ, ಲಾಸ್ ವೇಗಾಸಿನ ಕಸಿನೋಗಳು, ಪೆಸಿಫಿಕ್ ಕಡಲತೀರ, ಕ್ಯಾಲಿಫೋರ್ನಿಯಾದ ರೆಡ್ ವುಡ್ ಮರಗಳು, ಕೆಂಪು ಬಣ್ಣದ ಗೋಲ್ಡನ್ ಗೇಟ್ ಬ್ರಿಡ್ಜ್, ಕ್ಯಾನಿಯನ್ ಗಳು, ಡಿಸ್ನಿ ಲ್ಯಾಂಡ್, ಯುನಿವರ್ಸಲ್ ಸ್ಟುಡಿಯೋಸ್, ಹನ್ನೊಂದು ರಾಷ್ಟ್ರೀಯ ಉದ್ಯಾನವನಗಳು. ಈ ಎಲ್ಲವನ್ನು ನೋಡಿದ್ದೇನೆ. ಹೋಗಬೇಕು ಎಂದು ಗುರುತು ಹಾಕಿಕೊಂಡಿರುವ ಇನ್ನೂ ಅನೇಕ ಸ್ಥಳಗಳು ನನ್ನ ಬರುವಿಕೆಗಾಗಿ ಕಾಯುತ್ತಿವೆ. ಅವುಗಳನ್ನು ಹೆಚ್ಚು ಕಾಯಿಸಬಾರದು ಎಂದು ನನಗನ್ನಿಸುತ್ತಿರುತ್ತದೆ. ಆದ್ದರಿಂದ ಈ ಟೂರು ಮುಗಿಯದ ಪಯಣ.

ಈ ಪಯಣದಲ್ಲಿ ನನ್ನೊಂದಿಗೆ ಸದಾ ಇದ್ದು, ಜೊತೆಯಾದ, ಎಲ್ಲವೂ ಸುಲಭವಾಗುವಂತೆ ನೋಡಿಕೊಂಡ, ಈಗಲೂ ನೋಡಿಕೊಳ್ಳುತ್ತಿರುವ ಗಂಡ ಸಮರ್ಥ ಅವರಿಗೆ ಧನ್ಯವಾದ. ಇಲ್ಲಿ ನಾನು ಎಲ್ಲೇ ಹೋದರೂ ಅಲ್ಲಿ ಭಾರತದಲ್ಲಿ ಕೂತು ಕಾಳಜಿ ಮಾಡುವ, ಮತ್ತೆ ಮತ್ತೆ ಫೋನ್ ಮಾಡಿ ವಿಚಾರಿಸಿಕೊಳ್ಳುವ ಅಮ್ಮನಿಗೆ, ಅವಳ ಕಾಳಜಿಗೆ ಯಾವತ್ತೂ ಋಣಿ. NRI ಆವೃತ್ತಿಯಲ್ಲಿ ಊರುಟೂರು ಅಂಕಣಗಳನ್ನು ನಿಯಮಿತವಾಗಿ ಪ್ರಕಟಿಸಿದ ಉದಯವಾಣಿ ದೇಸಿಸ್ವರದ ಉಪಸಂಪಾದಕರಾಗಿದ್ದ ವಿದ್ಯಾ ಮತ್ತು ವಿಧಾತ್ರಿ ಅವರಿಗೆ ವಂದನೆ. ಪುಸ್ತಕವನ್ನು ಬಹಳ ಜವಾಬ್ದಾರಿಯಿಂದ, ಕಾಳಜಿಯಿಂದ ಪ್ರಕಟಿಸಿದ ಹರಿವು ಪ್ರಕಾಶನಕ್ಕೆ ಧನ್ಯವಾದಗಳು. ಬಹಳ ಸುಂದರವಾಗಿ ಪುಸ್ತಕದ ಮುಖಪುಟವನ್ನು ಚಿತ್ರಿಸಿ ಕೊಟ್ಟಿರುವ ಮದನ್ ಸಿ ಪಿ ಅವರಿಗೆ ಧನ್ಯವಾದ. ಈ ಪುಸ್ತಕವನ್ನು ಓದಲೆಂದು ಕೈಗೆತ್ತಿಕೊಂಡಿರುವ ನಿಮಗೆ ವಿಶೇಷ ವಂದನೆ. ಪುಸ್ತಕದ ಬಗ್ಗೆ ಏನೇ ಅನಿಸಿಕೆ, ಅಭಿಪ್ರಾಯಗಳಿದ್ದರೂ ನನ್ನ ಇಮೇಲ್ ಅಥವಾ ವಾಟ್ಸಪ್ ಮೂಲಕ ಹಂಚಿಕೊಳ್ಳಬಹುದು. ಪಯಣದ ಸುಖ ಓದಿನ ಮೂಲಕ ನಿಮ್ಮದಾಗಲಿ.

- ಸಂಜೋತಾ ಪುರೋಹಿತ

MORE FEATURES

ಡಂಕಲ್‌ಪೇಟೆಗೆ ಹೊರಡುವ ಮುನ್ನ…….

05-07-2024 ಬೆಂಗಳೂರು

‘ಈ ಡಂಕಲ್‌ಪೇಟೆ ಎಂಬುದು ನನ್ನ ಕಥೆಗಳಿಗಾಗಿ ನಾನೇ ಸೃಷ್ಟಿಸಿಕೊಂಡಿರುವ ಒಂದು ಪ್ರಾದೇಶಿಕ ಚೌಕಟ್ಟು ಇರುವ ಕಾ...

`ಕುದ್ಮಲ್ ಪಿಜ್ಜ' ಹೇಗಿದ್ದರೆಂದು ತಿಳಿಯುವ ಪ್ರೇಮಿ ರಾವ್ ಅವರ ಮುಗ್ಧ ಆಸಕ್ತಿಯೇ ಈ ಪುಸ್ತಕದ “ಮೂಳೆ ಹಂದರ”

05-07-2024 ಬೆಂಗಳೂರು

"ಕುದ್ಮಲ್ ಅವರ ಮರಿಮೊಮ್ಮಗ ಪ್ರೇಮಿ ಎಂ. ರಾವ್ ಬರೆದ ಪುಸ್ತಕದ ಅನುವಾದ “ನೀವು ಕಂಡರಿಯದ ಕುದ್ಮಲ್ ರಂಗರಾವ್,...

ಕವಿತೆ ಕಟ್ಟುತ್ತ ಬಿರಾದಾರ ಸೃಷ್ಟಿಸುವ ರೂಪಕ-ಪ್ರತಿಮೆಗಳು ಚೆಲುವಾಗಿವೆ: ಕೇಶವ ಮಳಗಿ

05-07-2024 ಬೆಂಗಳೂರು

'ಮಧು ತಮ್ಮ ಕಾವ್ಯದ ನಿಧಾನ ನಡಿಗೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಕವಿತೆಗಳ ದೀರ್ಘತೆ. ವಸ್ತು ಬೆಂಕಿಯಂತೆ ಸುಡುತ್ತಿ...