ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’

Date: 20-01-2021

Location: ಬೆಂಗಳೂರು


ಕನ್ನಡ ಸಾಹಿತ್ಯಲೋಕದ ಮಹತ್ವದ ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಲೇಖಕ, ವಿಮರ್ಶಕ ಶ್ರೀಧರ ಹೆಗಡೆ ಭದ್ರನ್ ಅವರು ಬರೆಯುತ್ತಿರುವ ಬದುಕಿನ ಬುತ್ತಿ’ ಅಂಕಣದಲ್ಲಿ ಈ ಬಾರಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಸುಬ್ಬಣ್ಣ’ ಕಾದಂಬರಿಯನ್ನು ವಿಶ್ಲೇಷಿಸಿದ ಬರಹವಿದು.

‘ಶ್ರೀನಿವಾಸ’ ಎಂಬ ಕಾವ್ಯನಾಮದಿಂದ ಆಧುನಿಕ ಕನ್ನಡ ಸಾಹಿತ್ಯದ ಬಹುಪ್ರಕಾರಗಳನ್ನು ಶ್ರೀಮಂತಗೊಳಿಸಿದವರು ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು. ಕಥನ ಕ್ಷೇತ್ರದಲ್ಲಿ ಅವರದು ಅದ್ವಿತೀಯ ಸಾಧನೆಯೆಂದೇ ದಾಖಲಾಗಿದೆ. ಸಣ್ಣ ಕತೆಗಳೊಂದಿಗೆ ಕಾದಂಬರಿ ಪ್ರಕಾರದಲ್ಲೂ ಅವರ ಪರಿಶ್ರಮವಿದೆ. ಅವರ ಮೊದಲನೆಯ ಕಾದಂಬರಿಯೆಂದು ಕರೆಯಬಹುದಾದ ಕೃತಿ; ’ಸುಬ್ಬಣ’. ಇದನ್ನು ಕಿರು ಕಾದಂಬರಿಯೆಂದು ಕರೆಯಬೇಕೇ ಅಥವಾ ನೀಳ್ಗತೆ ಎನ್ನಬೇಕೆ ಎಂಬ ಕುರಿತೂ ಸಾಕಷ್ಟು ಚರ್ಚೆಯಾಗಿದೆ. ವಾಸ್ತವವಾದಿ ಕಥನ ಮಾರ್ಗದಲ್ಲಿ ಹಲವು ಕತೆಗಳನ್ನು ಆ ವೇಳೆಗಾಗಲೇ ಪ್ರಕಟಿಸಿದ್ದ ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮವನ್ನು ದಕ್ಕಿಸಿಕೊಟ್ಟ ಕೃತಿ; ಸುಬ್ಬಣ್ಣ.

ಆ ಕಾಲದ ಸುಪ್ರಸಿದ್ಧ ಪತ್ರಿಕೆಯಾಗಿದ್ದ ಪ್ರಬುದ್ಧ ಕರ್ನಾಟಕದಲ್ಲಿ 1927ರಲ್ಲಿ ಪ್ರಕಟವಾಗಿದ್ದ ಇದು; ಮುಂದೆ ಒಂದೇ ವರ್ಷದಲ್ಲಿ (1928) ಪುಸ್ತಕ ರೂಪದಲ್ಲಿ ಹೊರಬಂದಿತು. ಐತಿಹಾಸಿಕವಾಗಿ ಕನ್ನಡದಲ್ಲಿ ಕಾದಂಬರಿ ಪ್ರಕಾರ ಸಮೃದ್ಧಗೊಳ್ಳುತ್ತಿದ್ದ ಕಾಲಘಟ್ಟವೂ ಇದಾಗಿತ್ತು. ಬದುಕಿನ ಚಿತ್ರಣವನ್ನು ವಿಶಾಲವಾದ ಆವರಣದಲ್ಲಿ ಕಟ್ಟಿಕೊಡುತ್ತಿದ್ದ ಕಾದಂಬರಿ ಪ್ರಪಂಚಕ್ಕೆ ಕೇವಲ ಎಂಬತ್ತು ಪುಟಗಳ ವ್ಯಾಪ್ತಿಯಲ್ಲಿ ಒಂದು ಬದುಕನ್ನು ಅಡಗಿಸಿಡುವ ಸಾಧ್ಯತೆಯನ್ನು ಮಾಸ್ತಿ ತೆರೆದು ತೋರಿಸಿದರು.

ಮಾಸ್ತಿ ಕಥನ ಕಲೆಗೆ ವಸ್ತುವಿನ ಬರವಿಲ್ಲ. ಈ ವಸ್ತು ದೊರೆತುದೂ ಒಂದು ಸ್ನೇಹದ ಫಲವಾಗಿ ಎಂದು ಅವರೇ ಹೇಳಿದ್ದಾರೆ. ಸರ್ಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದ ನವರತ್ನ ರಾಮರಾಯರು ತಮಗೆ ಪರಿಚಯವಿದ್ದ ಸಂಗೀತಗಾರ ಶಾಮಣ್ಣ ಎಂಬವರ ವಿಷಯವನ್ನು ಮಾಸ್ತಿಯವರಿಗೆ ಹೇಳಿದ್ದರು. ಅದನ್ನು ಬರೆಯುವಂತೆ ಮಾಸ್ತಿಯವರು ರಾಮರಾಯರನ್ನು ಒತ್ತಾಯಿಸಿದ್ದರು. ಮಾಸ್ತಿ ತಮ್ಮ ಆತ್ಮಕಥನ; ’ಭಾವ’ದಲ್ಲಿ ಈ ವಿಚಾರವನ್ನು ಹೀಗೆ ನಿರೂಪಿಸಿದ್ದಾರೆ; ...ಅವರು ತಮ್ಮ ಪರಿಚಯದ ಒಬ್ಬ ಗಾಯಕ ಶಾಮಣ್ಣ ಎಂಬವರ ವಿಚಾರವನ್ನು ಬರೆಯಲು ಆರಂಭಿಸಿದ್ದರು. ಆ ಕೆಲಸ ಮುಂದುವರಿಯಿತೇ ಎಂದು ನಾನು ಅವರನ್ನು ಕೇಳಿದೆನು. ’ಆರೇಳು ಪುಟ ಬರೆದಿದ್ದು ಕಳೆದು ಹೋಯಿತು. ನಾನು ಮತ್ತೆ ಅದನ್ನು ಬರೆಯಲಾರೆ’ ಎಂದು ಅವರು ತಿಳಿಸಿದರು. ಬಹು ಒಳ್ಳೆಯ ವಿಷಯ; ಅದು ಸಾಹಿತ್ಯವಾಗಬೇಕು; ನೀವು ಬರೆಯುವುದಿಲ್ಲ ಎಂದರೆ ಅದು ಕಳೆದೇ ಹೋಗುತ್ತದಲ್ಲ ರಾಯರೇ; ಎಂದು ನಾನು ಹೇಳಿದೆನು. ಅವರು; ನನ್ನಿಂದ ಆಗುವುದಿಲ್ಲ. ವಿಷಯ ವ್ಯರ್ಥವಾಗಬಾರದು ಎನ್ನುವುದಾದರೆ ನೀವು ಬರೆಯಿರಿ ಎಂದರು. ಮುಂದಿನ ಕೆಲವು ಮಾತಿನಲ್ಲಿ ಇದು ದಿಟವಾಗಿಯೂ ಇವರ ಮನಸ್ಸು ಎನ್ನುವುದು ಸ್ಪಷ್ಟವಾಗಿ ನಾನು; ಆ ವಸ್ತುವನ್ನು ನಾನು ಬಳಸುತ್ತೇನೆ ಎಂದು ಹೇಳಿದೆನು. ಅವರು ಒಪ್ಪಿದರು. ಅದೇ ವಸ್ತು ಆಮೇಲೆ ’ಸುಬ್ಬಣ್ಣ’ ಕತೆ ಆದದ್ದು.- ಹೀಗೆ ಸುಬ್ಬಣ್ಣ ಕೃತಿಯ ವಸ್ತು ತಮಗೆ ದೊರೆತ ವಿಷಯವನ್ನು ಮಾಸ್ತಿಯವರು ತಿಳಿಸಿದ್ದಾರೆ.

ಕಾದಂಬರಿಯ ಕ್ರಿಯೆ ಶುರುವಾಗುವುದು ಮುಮ್ಮಡಿ ಕೃಷ್ಣರಾಜ ಒಡೆಯರ ಬದುಕಿನ ಕಡೆಯ ವರ್ಷಗಳಲ್ಲಿ. ಅವರ ಆಸ್ಥಾನದಲ್ಲಿ ಪುರಾಣದ ಶಾಸ್ತ್ರಿಗಳು ಎಂದೇ ಕರೆಸಿಕೊಳ್ಳುತ್ತಿದ್ದ ಪ್ರಸಿದ್ಧ ಸಂಸ್ಕೃತ ವಿದ್ವಾಂಸರೂ ಆಗಿದ್ದ ನಾರಾಯಣಶಾಸ್ತ್ರಿಗಳ ಒಬ್ಬನೇ ಮಗ-ಸುಬ್ಬಣ್ಣ. ತಂದೆ; ಮಗನೂ ತನ್ನಂತೆಯೇ ಸಂಸ್ಕೃತ ಪಂಡಿತನಾಗಲಿ ಎಂದು ಆಶಿಸಿ ಶ್ಲೋಕಗಳನ್ನು ಹೇಳಿಕೊಡುತ್ತಿದ್ದರೆ; ಹುಡುಗನ ಮನಸ್ಸು ಪೂರ್ತಿಯಾಗಿ ಸಂಗೀತದ ಮೇಲೆ. ತನ್ನ ಇಂಪಾದ ಕಂಠದಿಂದ ಮಹಾರಾಜರ ಗಮನವನ್ನೇ ಸೆಳೆದುಕೊಂಡವ. ಮಹಾರಾಜರು ಹೇಳಿದ್ದರು; ನೀನು ಒಳ್ಳೆಯ ಬುದ್ಧಿವಂತ. ಚೆನ್ನಾಗಿ ಹಾಡುವುದನ್ನು ಕಲಿತುಕೋ; ಖಿಲ್ಲತ್ತು ಕೊಡುತ್ತೇವೆ ಎಂಬ ಮಾತಿನಿಂದ ಪ್ರೇರಿತನಾಗಿ ಸಂಗೀತಗಾರನಾಗುವ ಕನಸು ಕಂಡವನು. ಆದರೆ ತಂದೆಗೆ ಸಂಗೀತವೆಂದರೆ ಆಗದು. ಅದು ವೇಶ್ಯೆಯರಿಗೆ ಮೀಸಲಾದ ಕಲೆ ಎಂಬ ತಾತ್ಸಾರ. ಸುಬ್ಬಣ್ಣನಿಗಾದರೂ ಸಂಗೀತದ ಸ್ವಯಂ ಸಾಧನೆಗೆ ಆಶ್ರಯ ನೀಡುವವಳು ವೇಶ್ಯೆ ನೀಲಾಸಾನಿಯೇ ಆಗಿದ್ದಾಳೆ. ಈ ಮಧ್ಯೆ; ಸುಬ್ಬಣ್ಣನಿಗೆ ಮದುವೆಯೂ ಆಗಿ ತಾವಿಬ್ಬರೂ ತಂದೆಗೆ ಭಾರ ಎಂದುಕೊಳ್ಳುತ್ತಿರುವಾಗ; ಮಹಾರಾಜರು ಮಡಿದು ಇದ್ದ ಆಶ್ರಯದ ಭರವಸೆ ತಪ್ಪಿಹೋಗುತ್ತದೆ. ಇಡೀ ಸಂಸ್ಥಾನದ ಆಶ್ರಯಿತರೆಲ್ಲರೂ ತಲ್ಲಣ ಅನುಭವಿಸುತ್ತಾರೆ.

ಹಲವರು ಆಶ್ರಯವನ್ನು ಕಳೆದುಕೊಳ್ಳುತ್ತಾರೆ. ನಾರಾಯಣ ಶಾಸ್ತ್ರಿಗಳು ಮಾತ್ರ ಅರಮನೆಯನ್ನೇ ನಚ್ಚಿಕೊಂಡು ವರಮಾನ ಕಡಿಮೆಯಾದರೂ ಅಲ್ಲಿಯೇ ಇರುತ್ತಾರೆ. ಸುಬ್ಬಣ್ಣನಿಗೆ ಒಂದು ಗಂಡು ಮಗುವೂ ಆಗಿ ಸಂತಸಕ್ಕಿಂತ ಬೇಸರವೇ ಆಗುತ್ತದೆ. ತಾಯಿಯ ರೂಕ್ಷವಾದ ವರ್ತನೆ; ಹೆಂಡತಿಯು ಆ ಮನೆಯಲ್ಲಿ ಅನುಭವಿಸುವ ವೇದನೆ; ಮಗ ಅನುಭವಿಸುವ ತಾತ್ಸಾರ ಇವೆಲ್ಲವೂ ಸುಬ್ಬಣ್ಣನಲ್ಲಿ ಜಿಗುಪ್ಸೆ ಮೂಡಿಸುತ್ತವೆ.

ಸುಬ್ಬಣ್ಣ ಮನೆಯ ವಾತಾವರಣಕ್ಕೆ ಬೇಸತ್ತು ಒಂದು ಬೆಳಗಿನ ಜಾವ ಹೆಂಡತಿ - ಮಗನನ್ನು ಕಟ್ಟಿಕೊಂಡು ಮನೆಬಿಟ್ಟು ಹೊರಡುತ್ತಾನೆ. ದೂರದ ಕಲಕತ್ತೆ ಸೇರಿ ಸಂಗೀತ ಪಾಠ ಹೇಳಿ ಜೀವನ ನಡೆಸುತ್ತಾನೆ. ಮೂವತ್ತೈದು ವರ್ಷಗಳ ಕಾಲ ಮೈಸೂರಿನ ಸಂಪರ್ಕವೇ ಇಲ್ಲದಂತೆ ಬಾಳುತ್ತಾನೆ. ಇತ್ತ ಮೈಸೂರಿನಲ್ಲಿ ಮಗನ ಕುಟುಂಬವನ್ನು ಕಳೆದುಕೊಂಡು ಕೊರಗಿ ಮೊದಲು ತಂದೆ; ನಂತರ ತಾಯಿ ನಿಧನ ಹೊಂದಿದ್ದಾರೆ. ಸುಬ್ಬಣ್ಣ ಈ ಸಂದರ್ಭದಲ್ಲಿ ಹೆಂಡತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ; ಹೆಂಡತಿಯ ವಿಷಯದಲ್ಲಿ ಬಹಳ ಕನಿಕರ, ಅವಳ ಸ್ವಭಾವ ತಿಳಿದ ಹಾಗೆಲ್ಲಾ ಬಹಳ ಪೂಜ್ಯಭಾವ. ಮಗನೆಂದರೆ ಪಂಚಪ್ರಾಣ, ಹೀಗೆ ಹೃದಯದಲ್ಲಿ ಅತಿಶಯವಾಗಿ ಬೆಳೆದ ಪ್ರೇಮವೇ ಗಾನವಾಗಿ ಬಂದಿತೆಂಬಂತೆ ಇವನ ಗೀತದಲ್ಲಿ ಒಂದು ಅಸಾಧಾರಣವಾದ ಕಳೆ ಬಂದು ಸೇರಿತು.

ಈಗ ಅವರಿಗೆ ಮಗಳೂ ಹುಟ್ಟಿದ್ದಾಳೆ. ಕೆಲವು ಕಾಲ ಹೆಂಡತಿ ಮತ್ತು ಮಕ್ಕಳು ಅಲ್ಲಿ ಸುಖವನ್ನೇ ಕಂಡರು. ಮುಂದೆ ಮಗ ಶೇಷ ವಿಷಮಶೀತ ಜ್ವರದಿಂದ ಸಾವನ್ನಪ್ಪಿದರೆ; ಮಗಳು ಗಂಗಾನದಿಯಲ್ಲಿ ಮುಳುಗಿ ಪ್ರಾಣ ಬಿಡುತ್ತಾಳೆ. ಈ ಮಧ್ಯೆ ಹೆಂಡತಿ ಊರಿಗೆ ಹೋಗೋಣ ಎಂದಾಗ ಸುಬ್ಬಣ್ಣ ನಿರಾಕರಿಸಿದ್ದಾನೆ; ಬರುವಾಗ ಬಂದ ಹುಮ್ಮಸ್ಸೇನು, ಈಗ ಸೋತು ಹಿಂದಕ್ಕೆ ಹೋಗುವುದೆಂದರೇನು, ಅಲ್ಲಿ ಹೋಗಿ ಆಗತಕ್ಕದ್ದೇನು, ಇಲ್ಲೇ ಇರೋಣ, ಕಾಗೆ ಮಳೇಲಿ ನೆನೆದ ಹಾಗೆ ದುಃಖದಲ್ಲಿ ನೆನೆದದ್ದಾಯಿತು, ಎಲ್ಲೋ ಇದ್ದು ಕಣ್ಣು ಮುಚ್ಚಿಕೊಳ್ಳುವುದು ಎಂದಿದ್ದಾನೆ. ಅಮ್ಮನನನ್ನು ಕೊನೆಯ ಬಾರಿಗೆ ಕಾಣುವ ಪುಣ್ಯಕ್ಕಾಗಿ ಹಂಬಲಿಸುತ್ತಲೇ ’ಒಂದು ದಿನ ಅವಳು ಸರ್ವಮಂಗಳೆಯ ಪಾದಾರವಿಂದವನ್ನು ಸೇರಿದಳು’. ಅಲ್ಲಿಗೆ ಸುಬ್ಬಣ್ಣನನ್ನು ಒಬ್ಬಂಟಿಯನ್ನಾಗಿಸಿ ಎಲ್ಲರೂ ತೆರಳಿದಂತಾಯಿತು.

ಸುಬ್ಬಣ್ಣ ಕಲ್ಕತ್ತೆ ಬಿಟ್ಟು ಮುಂಬಯಿ ಸೇರಿಕೊಳ್ಳುತ್ತಾನೆ. ಅಲ್ಲಿಂದ ಊರಿನ ಸೆಳೆತವನ್ನು ತಾಳಲಾರದೆ ಬಂದು; ಅಲ್ಲಿ ’ಪರಸ್ಥಳ’ದವನೆನಿಸಿಕೊಂಡು ಮುಂದೆ ತೊರೆಯಪುರ ಸೇರಿ ಕೆಲವು ವರ್ಷ ಕಳೆದು ಜಗತ್ತನ್ನು ತೊರೆಯುತ್ತಾನೆ. ಸ್ವಲ್ಪ ಎಚ್ಚರ ತಪ್ಪಿದರೂ ಜೀವನ ಚರಿತ್ರೆಯಾಗಿ ಬಿಡಬಹುದಾಗಿದ್ದ, ತೀರಾ ಭಾವುಕವಾದರೆ ಅಳುಬುರುಕು ಕತೆಯಾಗಬಹುದಾಗಿದ್ದ ವಸ್ತುವನ್ನು ಮಾಸ್ತಿ ಪ್ರತಿಭೆ ನಿರ್ವಹಿಸಿರುವ ರೀತಿ ಅನನ್ಯವಾದುದು. ಈ ಹಿನ್ನೆಲೆಯಲ್ಲಿಯೇ ವಿಮರ್ಶಕ ಟಿ. ಪಿ. ಅಶೋಕ ಅವರು; ಸುಬ್ಬಣ್ಣ ನಿಸ್ಸಂದೇಹವಾಗಿ ಆಧುನಿಕ ಕನ್ನಡದ ಒಂದು ಮೈನರ್ ಕ್ಲಾಸಿಕ್ ಎಂದು ಕರೆದಿದ್ದಾರೆ.

ರಚನೆಯಾಗಿ ಶತಮಾನ ಸಮೀಪಿಸುತ್ತಿರುವ ಮಾಸ್ತಿಯವರ ’ಸುಬ್ಬಣ್ಣ’ ಓದುಗರ ಪ್ರೀತಿಯನ್ನು ಮತ್ತು ವಿಮರ್ಶಕರ ಆಹ್ವಾನವನ್ನು ಸಮಾನವಾಗಿ ಸ್ವೀಕರಿಸಿದ ಕೃತಿ. ಆಧುನಿಕ ಕನ್ನಡ ಕಥನ ಸಾಹಿತ್ಯದ ಕುರಿತು ಬರೆದಿರುವ ಎಲ್ಲ ಮುಖ್ಯ ವಿಮರ್ಶಕರೂ ’ಸುಬ್ಬಣ್ಣ’ ಕೃತಿಯನ್ನು ಮುಟ್ಟದೇ ಹೋಗಿಲ್ಲ. ಆಮೂರರು; ಜೀವನ ಮತ್ತು ಕಲೆಗಳ ಅಂದರೆ ವಾಸ್ತವ ಮತ್ತು ಆದರ್ಶಗಳ ಸಂಘರ್ಷವನ್ನಾಗಿ ಕಂಡರೆ; ಕೆ. ವಿ. ನಾರಾಯಣ ಅವರು’ ಸುಬ್ಬಣ್ಣ ಎಷ್ಟು ಅಧಿಕೃತ’ ಎಂಬ ಪ್ರಶ್ನೆಯನ್ನೆತ್ತಿದ್ದಾರೆ. ಟಿ. ಪಿ. ಅಶೋಕ ಅವರಿಗೆ ಇದು; ಪಿತೃ ಪ್ರಧಾನ ವ್ಯವಸ್ಥೆಯ ವಿರುದ್ಧ ಹೆಜ್ಜೆಯಿಟ್ಟ ಮೌಲ್ಯ ಸಂಘರ್ಷದ ಹಾಗೂ ಮೋಹ-ನಿರ್ಮೋಹಗಳ ಸಂಘರ್ಷದ ಕೃತಿಯಾಗಿ ಕಾಣಿಸಿದೆ. ಎಲ್. ಎಸ್. ಶೇಷಗಿರಿರಾಯರಿಗೆ; ವಾಸ್ತವಿಕ ಪರಂಪರೆಯಲ್ಲೇ ಭಿನ್ನವಾಗಿ ನಿಲ್ಲುವ ಕಥನ ಇದು ಎನಿಸಿದೆ. ಮೂರ್ತಿರಾಯರಿಗೆ; ಸುಬ್ಬಣ್ಣ ಉದ್ಧಾರವಾದದ್ದರಿಂದ ಅವನ ಸಂಗೀತ ಉದ್ಧಾರವಾಯಿತು ಎಂದು ಅನ್ನಿಸಿದೆ.

ಅವರು (ನವರತ್ನ ರಾಮರಾಯರು) ಗುರುತು ಮಾಡಿಕೊಟ್ಟ ಜೀವನದ ಸಂಪೂರ್ಣ ಚಿತ್ರವೊಂದನ್ನು ಕಲ್ಪಿಸುವ ಪ್ರಯತ್ನದಲ್ಲಿ ಈ ಪುಸ್ತಕದ ಕತೆ ನಿರ್ಮಾಣವಾಯಿತು ಎಂದು ಮಾಸ್ತಿಯವರು ಪುಸ್ತಕದ ಮೊದಲನೆಯ ಮುದ್ರಣದ ಮುನ್ನುಡಿಯಲ್ಲಿ ಹೇಳಿದ್ದಾರೆ.

ರಾಮರಾಯರಿಂದ ಮಾಸ್ತಿಯವರಿಗೆ ಸಿಕ್ಕಿದ ವಿವರಗಳೆಷ್ಟು ಎಂಬ ಸಂಪೂರ್ಣ ಮಾಹಿತಿಯಿಲ್ಲ. ಈ ಬಗ್ಗೆ ರಾಮರಾಯರೂ ತಮ್ಮ ’ಕೆಲವು ನೆನಪುಗಳು’ ಕೃತಿಯಲ್ಲಿ ಬರೆದುಕೊಂಡಿದ್ದಾರೆ. ವೃದ್ಧ ಗಾಯಕನಾಗಿದ್ದ ಅವನೊಬ್ಬ ಅಪರೂಪದ ವ್ಯಕ್ತಿಯಾಗಿದ್ದ ಎಂದು ರಾಮರಾಯರು ವರ್ಣಿಸಿದ್ದಾರೆ. ಮನೆಯಲ್ಲಿ ಹೊಂದಾಣಿಕೆಯಾಗದೆ ಆತ ದೇಶ ಬಿಟ್ಟು ಹೋಗಿ ಮೂವತ್ತೈದು ವರ್ಷ ಕಲ್ಕತ್ತೆಯಲ್ಲಿದ್ದು ಹಿಂದಿರುಗಿದವನು. ವೇಶ್ಯೆಯೊಬ್ಬಳಿಂದ ಅವನ ಪ್ರಯಾಣಕ್ಕೆ ನೂರು ರೂಪಾಯಿ ಸಹಾಯ ದೊರಕಿತ್ತು. ಈ ಕತೆಯ Sadness ಮತ್ತು huble heroism ಮಾಸ್ತಿಯವರ ಮೇಲೆ ಪ್ರಭಾವ ಬೀರಿತ್ತು - ಎಂಬರ್ಥದ ಮಾತುಗಳನ್ನು ರಾಮರಾಯರು ಬರೆದಿದ್ದಾರೆ.

ಈ ಇಬ್ಬರ ಹೇಳಿಕೆಗಳನ್ನೂ ಗಮನಿಸಿದರೆ; ಮಾಸ್ತಿಯವರು ಸುಬ್ಬಣ್ಣನ ಬದುಕನ್ನು ಪ್ರತ್ಯಕ್ಷ ಕಂಡವರಲ್ಲ. ರಾಮರಾಯರಿಂದ ಎಷ್ಟು ವಿವರ ದೊರಕಿದೆ ಎಂಬ ಸ್ಪಷ್ಟನೆಯಿಲ್ಲ. ಇಷ್ಟರ ಆಧಾರದ ಮೇಲೆಯೇ ಮಾಸ್ತಿಯವರು ಸುಬ್ಬಣ್ಣನ ಇಡೀ ಬದುಕನ್ನು ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಹಿನ್ನೆಲೆಗಳಲ್ಲಿ ಚಿತ್ರಿಸಿದ್ದಾರೆ. ಜೊತೆಗೆ ತಮ್ಮ ಜೀವನ ದರ್ಶನವನ್ನೂ ಪಡಿಮೂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಮಾಸ್ತಿಯವರು ಹೇಳಿರುವುದು; ಜೀವನದ ವಾಸ್ತವ ಅದ ಹಾಗೆಯೇ ರಸವತ್ತಾದ, ಚಿತ್ರಗಳನ್ನು ಕೊಡುವುದಷ್ಟೇ ನನ್ನ ಕೆಲಸ. ಅಂದರೆ ಅನುಭವದ ಬೇರೆ ಬೇರೆ ನೆಲೆಗಳಿಂದ ದೊರೆತ ಸಾಮಗ್ರಿಗಳನ್ನು ಹೀಗೆ ಸಂಘಟಿಸಿ ಕೊಡುವುದರ ಬಗ್ಗೆ ಮಾಸ್ತಿಯವರು ಯಾವಾಗಲೂ ಜಾಗೃತರಾಗಿದ್ದಾರೆ. ಈ ಕುರಿತು ಅನೇಕ ಸಂದರ್ಭಗಳಲ್ಲಿ ಅವರು ಹೇಳಿಯೂ ಇದ್ದಾರೆ. ’ಸುಬ್ಬಣ್ಣ’ ಹೀಗೆ ಮೂಡಿಬಂದ ಕಲಾಕೃತಿಯಾಗಿದೆ.

ಸುಬ್ಬಣ್ಣನ ಬದುಕನ್ನು ನಾಲ್ಕು ಭಾಗಗಳಲ್ಲಿ ಕಾದಂಬರಿ ಚಿತ್ರಿಸುತ್ತದೆ. ಮೈಸೂರಿನ ಮೊದಲಿನ ಇಪ್ಪತ್ತೈದು ವರ್ಷಗಳು, ಕಲಿಕತೆಗೆ ಹೋದ ಮೇಲಿನ ಮೂವತ್ತೈದು ವರ್ಷಗಳ ಬದುಕು, ಅಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡು ಬೊಂಬಾಯಿಯಲ್ಲಿ ಕಳೆದ ಅಲ್ಪಾವಧಿ ಹಾಗೂ ಕೊನೆಯದಾಗಿ ತೊರೆಯಪುರಕ್ಕೆ ಬಂದು ಅಲ್ಲಿ ಹದಿಮೂರು ವರ್ಷ ಬದುಕಿ ಲೋಕ ತ್ಯಜಿಸಿದ್ದು ಹೀಗೆ ಕಾಲಾವಧಿಯಿದೆ. ಇಷ್ಟು ಅವಕಾಶದಲ್ಲಿ ನಿರೂಪಕ ಮಾಸ್ತಿಯವರು ನಿರುದ್ವಿಗ್ನವಾಗಿ ಕತೆ ಹೇಳುತ್ತಾ ಸಾಗಿದ್ದಾರೆ. ಆದರೂ ಕತೆಯ ಪ್ರಾರಂಭದಲ್ಲಿ ನಿವೇದಕರಾಗಿ ಅವರು ಹೇಳುವ ಮಾತುಗಳು ಕೇವಲ ಕತೆಗೆ ಮಾತ್ರವಲ್ಲ; ಇಡೀ ಸೃಜನಶೀಲ ಸಾಹಿತ್ಯ ಪ್ರಪಂಚಕ್ಕೇ ಅನ್ವಯಿಸುವಂತಿವೆ. ...ನಾನು ಹೇಳುವ ಸ್ವಲ್ಪದರಿಂದಲೇ ಸುಬ್ಬಣ್ಣನವರ ಜೀವನ ಚರಿತ್ರೆಯ ಪೂರ್ಣಭಾವನೆ ಉಂಟಾಗದಿರಬಹುದು. ಹೇಗಾದರೂ ಓದುವವರೇ ಊಹಿಸಿ ಸೇರಿಸಿಕೊಳ್ಳಬಹುದಾದ ಬಹುಭಾಗದಿಂದ ಮಾತ್ರ ಸಂಪೂರ್ತಿಯಾಗಬಹುದೇ ಹೊರತು ಇಲ್ಲಿ ಹೇಳುವಷ್ಟರಿಂದ ಮಾತ್ರ ಸಂಪೂರ್ತಿಯಾಗಲಾರದು- ಎಂದು. ಹೇಳಿರುವುದರ ಜೊತೆಗೆ ಹೇಳಲಾರದೆ ಉಳಿದಿರುವುದನ್ನೂ ಸಹೃದಯ ಪೂರೈಸಿಕೊಂಡಾಗ ಸೃಜನಶೀಲ ಕೃತಿಯ ಯಶಸ್ಸು ಸಾಧ್ಯವಾಗುತ್ತದೆ.

ಸುಬ್ಬಣ್ಣ ಒಂದು ಸಂಸ್ಕೃತಿಯ ತಿರುಳನ್ನು ಚಿತ್ರಿಸುವ ಕಲಾಕೃತಿ. ಸುಬ್ಬಣ್ಣನ ಆಂತರಿಕ ಬೆಳವಣಿಗೆಯೇ ಇಲ್ಲಿ ಮುಖ್ಯವಾಗುತ್ತದೆ. ಆಧುನಿಕತೆಗೆ ಒಲಿದು ಸಾಂಪ್ರದಾಯಿಕತೆಯಿಂದ ಹೊರಬರುವ ಸುಬ್ಬಣ್ಣನ ಬದುಕು ಅನುಭವಿಸುವ ಸಂಕಟಗಳು ಚಿತ್ರಿಸುವ ಸಂಘರ್ಷ ವಿಶೇಷವಾದುದು. ’ಕಾಠಿಣ್ಯದಿಂದ ಮೃದುತ್ವದತ್ತ, ನಿರಾಕರಣೆಯಿಂದ ಸ್ವೀಕಾರದತ್ತ, ಸಂಸಾರದಿಂದ ಮುಕ್ತಿಯೆಡೆಗೆ’ ಸಾಗುವ ಸುಬ್ಬಣ್ಣನ ಕಠಿಣ ದಾರಿಯನ್ನು ಕಾದಂಬರಿ ನಮ್ಮೆದುರು ತೆರೆದಿಡುತ್ತದೆ. ಕೃತಿಯ ಕೊನೆಯ ಭಾಗವನ್ನು ಗಮನಿಸಿ ಎ. ಎನ್. ಮೂರ್ತಿರಾಯರು; ಈ ಕತೆಯ ನಿಜವಾದ ವಸ್ತು ಸಂಗೀತವಲ್ಲ, ಸುಬ್ಬಣ್ಣನ ಮೋಕ್ಷ ಎಂದಿದ್ದಾರೆ. ಸ್ವತಃ ಮಾಸ್ತಿಯವರೇ ಈ ಸಂದರ್ಭವನ್ನು ಕುರಿತು; ಸುಬ್ಬಣ್ಣನ ಕೊನೆಯ ದಿನಗಳ ಮನೋಧರ್ಮ ಒಂದು ಆದರ್ಶ ಮನೋಧರ್ಮ ಎಂದು ನನ್ನ ತಿಳಿವಳಿಕೆ. ಎಂದು ಬರೆದಿದ್ದಾರೆ. ನಿರೂಪಕರಾಗಿ ಸ್ವತಃ ಅವರ ಕೇಂದ್ರೀಕರಣವೂ ಅಲ್ಲಿಯೇ ಇದೆ. ಸುಬ್ಬಣ್ಣನ ಊರ್ಧ್ವಮುಖೀ ಪಯಣದ ಕತೆಯನ್ನು ನಿರೂಪಕನ ಒಂದು ಮಾತು ಹಿಡಿದುಕೊಟ್ಟಿದೆ; ಮೊದಲಲ್ಲಿ ಕಠಿಣತೆಯಿಂದ ಕೂಡಿದ್ದ ಇವರ ಮನಸ್ಸು ದೇವರ ಕೃಪೆಯಿಂದ ನಯವಾಗುತ್ತ ಆಗುತ್ತ ಪೂರ್ಣವಾದ ಸಂಸ್ಕಾರ ಪಡೆದು ಕೊನೆಗೆ ಅಪರಂಜಿಯಾಯಿತು.

ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳೂ ಸುಬ್ಬಣ್ಣನ ಚೇತನದ ಪಕ್ವತೆಯ ಹಾದಿಯಲ್ಲಿ ಭಾಗಿಗಳಾಗಿದ್ದಾರೆ. ಹೆಂಡತಿಯಾದ ಲಲಿತೆಯ ಸಹನೆ, ವಿವೇಕ, ಭಕ್ತಿಗಳು; ತಾಯಿಯ ಹಟ, ಕಠಿಣ ಬುದ್ಧಿ, ಪಕ್ಷಪಾತಗಳು; ಶಾಸ್ತ್ರಿಗಳ ತೂಕಬದ್ಧವಾದ ನಡವಳಿಕೆಗಳು; ನೀಲಾಸಾನಿಯ ಸ್ನಿಗ್ಧ ಪ್ರೇಮ, ಔದಾರ್ಯಗಳು; ವೆಂಕಟರಮಣನ ತಾರುಣ್ಯ, ಉತ್ಸಾಹಗಳು; ಸಾಹುಕಾರನ ಧರ್ಮಬುದ್ಧಿ, ಸಂಗೀತ ಪ್ರೀತಿ ಇವೆಲ್ಲವೂ ಸಾವಯವವಾಗಿ ಕೃತಿಯಲ್ಲಿ ಬೆರೆತು ಬಂದಿವೆ. ಜೊತೆಗೆ ಕಾದಂಬರಿಯ ಅರ್ಥವ್ಯಾಪ್ತಿಯನ್ನೂ ಹೆಚ್ಚಿಸಿವೆ. ಇದಾದ ನಂತರ ಕನ್ನಡದಲ್ಲಿ ಬಂದ ಅನಕೃ ಅವರ ’ಸಂಧ್ಯಾರಾಗ’, ತರಾಸು ಅವರ ’ಹಂಸಗೀತೆ’, ಬಿ. ಎಲ್. ವೇಣು ಅವರ ’ಹೃದಯರಾಗ’ ಮುಂತಾದ ಸಂಗೀತಗಾರರ ಬದುಕನ್ನು ಚಿತ್ರಿಸಿರುವ ಕಾದಂಬರಿಗಳೊಡನೆ ಹೋಲಿಸಿದಾಗಲೂ ಸುಬ್ಬಣ್ಣ ಕಾದಂಬರಿಯ ಯಶಸ್ಸು ಎದ್ದು ಕಾಣಿಸುತ್ತದೆ.

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...