ಮನೆಯೊಳಗೆ ಬಾಶಿಕ ಅನುಸಂದಾನ

Date: 02-01-2024

Location: ಬೆಂಗಳೂರು


"ಮೊದಲಿಗೆ ದೇವರಮನೆಗೆ ಹೋಗೋಣ. ಇದು ಸಾಮಾನ್ಯರ ಮನೆಯಲ್ಲಿ ಇದ್ದ ಅತ್ಯವಶ್ಯಕ ಬಾಗವೇನೂ ಆಗಿರಲಿಲ್ಲ. ಇಂದಿಗೂ ದೇವರಮನೆ ಪರಿಕಲ್ಪನೆ ಇಲ್ಲದ ಮನೆಗಳು ಸಾಕಶ್ಟಿವೆ. ಬಹುಶ ಈ ಬರಹದ ಮೊದಲಲ್ಲಿ ಹೇಳಿದಂತೆ ಮನೆಯ ರಚನೆಯಲ್ಲಿ ಕಳೆದೊಂದೆರಡು ಶತಮಾನಗಳಲ್ಲಾದ‌ ಬದಲಾವಣೆಯಲ್ಲಿ ದೇವರಮನೆ ಮನೆಯಲ್ಲಿ ಗಟ್ಟಿಯಾದ ಸ್ತಾನ ಪಡೆದುಕೊಂಡಿರಬೇಕು," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ 'ತೊಡೆಯಬಾರದ ಲಿಪಿಯ ಬರೆಯಬಾರದು' ಅಂಕಣದಲ್ಲಿ ‘ಮನೆಯೊಳಗೆ ಬಾಶಿಕ ಅನುಸಂದಾನ’ ಕುರಿತು ವಿಶ್ಲೇಷಿಸಿದ್ದಾರೆ.

ಮನೆ ಎಂದರೆ ಮನೆಯ ಎಲ್ಲ ಸದಸ್ಯರ ನಡುವಿನ ನಂಟು, ಪ್ರೇಮ, ಜಗಳ ಇವೆಲ್ಲ. ಮನೆಯೊಳಗೆ ಒಂದು ಬಾಶಿಕ ಅನುಸಂದಾನ ಇರುತ್ತದೆ. ಅರೆ, ಇದೇನು ಮನೆಯೊಳಗೆ ಬಾಶಿಕ ಅನುಸಂದಾನ ಎಂದರೇನು ಎಂದು ಹುಬ್ಬೇರಿಸಬಹುದು. ನಿಜ. ನಮಗೆ ಗೊತ್ತಿಲ್ಲದೆ ನಮ್ಮ ಮನೆಯೊಳಗೆ, ಮನದೊಳಗೆ ಈ ಬಾಶಿಕ ಅನುಸಂದಾನ ನಿರಂತರ ನಡೆದಿರುತ್ತದೆ. ಹೀಗೆ ಬಾಶಿಕ ಅನುಸಂದಾನ ನಡೆಯುವುದಕ್ಕೆ ಮಂದಿಯ ಬದುಕಿನಲ್ಲಿ, ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕಾರಣವಾಗಿರುತ್ತವೆ. ಇನ್ನೊಂದೆಡೆ ಮನೆಯೊಳಗಿನ ಬದುಕು ಸಮಾಜದ ಬೆಳವಣಿಗೆಯನ್ನು ಪ್ರಬಾವಿಸುತ್ತಿರುತ್ತದೆ. ಇರಲಿ, ಇಲ್ಲಿ ಮನೆಯೊಳಗೆ ಕಾಣಿಸುವ ಬಾಶಿಕ ಅನುಸಂದಾನ ಹೇಗಿದೆ ಅಂತ ಸೊಲ್ಪ ನೋಡೋಣ.

ಮನೆ ಬಹುಕಾಲದಿಂದ ಬವುತಿಕ ರಚನೆಯನ್ನು ಪಡೆದುಕೊಂಡಿದೆ. ತುಸು ಸ್ತಿತಿವಂತರ ಮನೆಯೊಳಗೆ ಒಂದಕ್ಕಿಂತ ಹೆಚ್ಚು ಕೋಣೆಗಳು ಇರುತ್ತವೆ. ತುಸುಕಾಲದ ಹಿಂದೆ ಹೆಚ್ಚಿನ ಕೋಣೆಗಳು, ಬಚ್ಚಲಮನೆ, ದೇವರಮನೆ ಇವೆಲ್ಲ ಸ್ತಿತಿವಂತರಿಗೆ ಮಾತ್ರ ಸಾದ್ಯವಾಗುತ್ತಿತ್ತು. ಮನೆ ಒಂದು ಅಯಿಬೋಗ ಅಂತ ಹಿಂದೆ ಇದ್ದಿರಲಿಕ್ಕಿಲ್ಲ. ಆದರೆ, ಆರ‍್ತಿಕ ಪರಿಸ್ತಿತಿಯಲ್ಲಿ ಕಳೆದೊಂದು-ಎರಡು ನೂರ‍್ಮಾನದಲ್ಲಿ ಆಗಿರುವ ಬೆಳವಣಿಗೆಗಳಿಂದಾಗಿ ಮೂರ‍್ನಾಲ್ಕು ಕೋಣೆಗಳಿರುವ ಮನೆಗಳು ಇಂದು ಸಹಜವಾಗಿವೆ. ಹಾಗಾಗಿ ಮನೆಯ ಬವುತಿಕ ರಚನೆ ಇತ್ತೀಚೆಗೆ ವಿಪರೀತವಾಗಿ ಹೆಚ್ಚು ಬೆಳೆದಿದೆ, ಇದಕ್ಕಿಂತ ವ್ಯಾಪಕವಾಗಿದೆ ಎಂದೆನ್ನಬಹುದು. ಕೆಲವೆ ಕೆಲವರ ಮನೆಗಳಲ್ಲಿ ಇದ್ದಿರಬಹುದಾದ ಈ ರಚನೆ ಇಂದು ವ್ಯಾಪಕವಾಗಿದೆ. ಹಾಗೆಯೆ ಇದು ನಿರಂತರ ಮತ್ತು ತೀವ್ರವಾಗಿ ಬೆಳೆಯುತ್ತಿದೆ.

ಇಂದಿನ, ಮೂರ‍್ನಾಲ್ಕು ಕೋಣೆಗಳು ಇರುವ ಮನೆಯ ರಚನೆಯನ್ನು ಗಮನದಲ್ಲಿ ಇಟ್ಟುಕೊಂಡು ನಮ್ಮ ಮಾತುಕತೆಯನ್ನು ಮುಂದುವರೆಸೋಣ. ಮನೆಯಲ್ಲಿ ಒಂದು ಅಡುಗೆಮನೆ, ಬಚ್ಚಲಮನೆ, ದೇವರಮನೆ ಇರುತ್ತವೆ. ಒಂದೊ ಎರಡೊ ಕೋಣೆಗಳು, ಒಂದು ಪಡಸಾಲಿ ಇರುತ್ತವೆ. ಇಲ್ಲೆಲ್ಲ ಯಾವ ಯಾವ ಬಾಶೆಯ ಪದಗಳು ಎದುರಾಗುತ್ತವೆ ಎಂಬುದು ಬಲು ಮಜವಾದ ಸಂಗತಿ. ಇಲ್ಲಿ, ಮನೆಯ ಒಂದೊಂದು ಬಾಗವನ್ನು ಗಮನಿಸೋಣ.

ಮೊದಲಿಗೆ ದೇವರಮನೆಗೆ ಹೋಗೋಣ. ಇದು ಸಾಮಾನ್ಯರ ಮನೆಯಲ್ಲಿ ಇದ್ದ ಅತ್ಯವಶ್ಯಕ ಬಾಗವೇನೂ ಆಗಿರಲಿಲ್ಲ. ಇಂದಿಗೂ ದೇವರಮನೆ ಪರಿಕಲ್ಪನೆ ಇಲ್ಲದ ಮನೆಗಳು ಸಾಕಶ್ಟಿವೆ. ಬಹುಶ ಈ ಬರಹದ ಮೊದಲಲ್ಲಿ ಹೇಳಿದಂತೆ ಮನೆಯ ರಚನೆಯಲ್ಲಿ ಕಳೆದೊಂದೆರಡು ಶತಮಾನಗಳಲ್ಲಾದ‌ ಬದಲಾವಣೆಯಲ್ಲಿ ದೇವರಮನೆ ಮನೆಯಲ್ಲಿ ಗಟ್ಟಿಯಾದ ಸ್ತಾನ ಪಡೆದುಕೊಂಡಿರಬೇಕು. ಹಾಗಾಗಿ, ದೇವರಮನೆಯಲ್ಲಿ, ಕುತೂಹಲವೆನಿಸುವಂತೆ ಕನ್ನಡ ಕಡಿಮೆ ಕಾಣಿಸುತ್ತದೆ ಇಲ್ಲವೆ ವಿರಳವಾಗಿ ಕಾಣಿಸುತ್ತದೆ. ದೇವರಮನೆಯ ಕೇಂದ್ರವಾದ 'ದೇವರಿಂ'ದ ಮೊದಲಾಗಿ ಬಹುತೇಕ ಗಟಕಗಳಿಗೆ, ವಸ್ತುಗಳಿಗೆ, ಕೆಲಸಗಳಿಗೆ, ಪ್ರಕ್ರಿಯೆಗಳಿಗೆ ಇರುವ ಹೆಸರುಗಳು ಸಂಸ್ಕ್ರುತ ಬಾಶೆಯವಾಗಿವೆ. ನೋಡಿ, ದೇವರು, ದೀಪ, ಜೋತಿ, ಆರತಿ, ಪ್ರಸಾದ, ತೀರ‍್ತ ಮೊ. ಅದರಂತೆ ಕನ್ನಡದ ಪದಗಳೂ ಇವೆ, ಆದರೆ ಕೆಲವು ಇಲ್ಲವೆ ಕಡಿಮೆ. ಊದಿನಕಡ್ಡಿ ಇಲ್ಲವೆ ಊದುಬತ್ತಿ, ನೀರು, ತಂಬಿಗೆ, ತುಂಬಿದಕೊಡ, ತೆಂಗಿನಕಾಯಿ, ಎಣ್ಣೆ ಮೊ. ಗಮನಿಸಿ, ದಿನಬಳಕೆಯಲ್ಲಿ ಇರುವ ವಸ್ತುಗಳು ದೇವರಮನೆಯಲ್ಲೂ ಇದ್ದಾಗ ಅವು ಕನ್ನಡದ ಪದಗಳನ್ನೆ ಪಡೆದುಕೊಂಡು ಬಳಕೆಯಲ್ಲಿವೆ. ಆದರೆ, ದೇವರಮನೆಯಲ್ಲೆ ಇರುವ ಪದಗಳು ಹೆಚ್ಚಿನವು ಸಂಸ್ಕ್ರುತದವೆ ಆಗಿವೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಕುತೂಹಲದ ಅಂಶವೆಂದರೆ ದೇವರಮನೆಯಲ್ಲಿ ನಡೆಯುವ ಕೆಲಸಗಳು, ಪ್ರಕ್ರಿಯೆಗಳು ಹೆಚ್ಚಾಗಿ ಕನ್ನಡ ಪದಗಳಾಗಿವೆ. ನೋಡಿ, ಬೆಳಗು, ಹಾಡು, ಒಡೆ, ತೊಳೆ ಮೊದಲಾದವು. ಸಾಮಾನ್ಯವಾಗಿ ಒಂದು ಬಾಶೆಯಿಂದ ತೆಗೆದುಕೊಳ್ಳುವ ಪದಗಳಲ್ಲಿ ನಾಮಪದಗಳು ಸಹಜವಾಗಿರುತ್ತವೆ, ಆದರೆ, ಕ್ರಿಯಾಪದಗಳು ಇರುವುದಿಲ್ಲ. ಹಾಗಾಗಿ, ದೇವರಮನೆಯಲ್ಲಿ ಕ್ರಿಯಾಪದಗಳು ಬಂದಿಲ್ಲ.

ಇನ್ನು ನಾವು ಮುಂದಕ್ಕೆ ಮನೆಯ ಇನ್ನೊಂದು ಕೋಣೆಗೆ ಹೋಗೋಣ. ಒಂದರ ಬಗೆಗೆ ತಿಳಿದುಕೊಳ್ಳಬೇಕೆಂದರೆ ಅದನ್ನ ಇನ್ನೊಂದರ ಜೊತೆಗೆ ಹೋಲಿಸಿ ನೋಡಲೇಬೇಕು. ಆಗಲೆ ಒಂದನ್ನು ಅರ‍್ತ ಮಾಡಿಕೊಳ್ಳಲು ಸಹಾಯಕವಾಗುವುದು. ಹಾಗಾಗಿ ದೇವರಮನೆಯನ್ನು ಇನ್ನಶ್ಟು ಸರಿಯಾಗಿ ತಿಳಿದುಕೊಳ್ಳೋದಕ್ಕೆ ಅದರೊಟ್ಟಿಗೆ ಮನೆಯ ಬೇರೆ ಕೋಣೆಗಳನ್ನು ತಿಳಿದುಕೊಳ್ಳೋದಕ್ಕೆ ಇನ್ನೊಂದು ಕೋಣೆಗೆ ಹೋಗೋಣ. ಸರಿ, ನಾವಿನ್ನು ಅಡುಗೆಮನೆಗೆ ಹೋಗೋಣ. ಅಡುಗೆಮನೆಯಲ್ಲಿ ಹಲವು, ಸಂಕೀರ‍್ಣ ಕೆಲಸಗಳು ನಡೆಯುತ್ತಿರುತ್ತವೆ. ಹಾಗಾಗಿ, ಅಡುಗೆಮನೆ ಕನ್ನಡ ಸಹಜವಾಗಿಯೆ ಹೆಚ್ಚು ಸಂಕೀರ‍್ಣತೆಯನ್ನು ಪಡೆದುಕೊಳ್ಳುತ್ತದೆ. ಅಡುಗೆಮನೆಯಲ್ಲಿ ಯಾವೆಲ್ಲ ತರದ ವಸ್ತುಗಳು ಇರುತ್ತವೆ ಎಂಬುದನ್ನ ತುಸುವೆ, ಸ್ತೂಲವಾಗಿ ನೋಡೋಣ. ಅಡುಗೆ, ಅಡುಗೆ ಮಾಡಲು ಬಳಸುವ ವಿವಿದ ಬಗೆಯ ವಸ್ತುಗಳು, ಅಡುಗೆ ಮಾಡುವ ಸಾದನಗಳು, ಅಡುಗೆ ಮಾಡಿದ ನಂತರ ಅದರ ಬಳಕೆಗೆ ಸಂಬಂದಿಸಿದ ಪದಗಳು, ಅಡುಗೆ ಮಾಡುವ ಮತ್ತು ಸಂಬಂದಿತ ಕೆಲಸಗಳು. ಇವೆಲ್ಲವೂ ಇರುವುದರಿಂದ ಇವೆಲ್ಲವುಗಳಿಗೂ ಪದಗಳಿರುತ್ತವೆ. ಇಲ್ಲೆಲ್ಲ ಹೆಚ್ಚು ಪದಗಳು ಕನ್ನಡದವೆ ಆಗಿವೆ. ಈ ಮೇಲೆ ಮಾಡಿದ ಅಡುಗೆಮನೆಯ ವಸ್ತುಗಳ ವಿಬಾಗೀಕರಣವನ್ನು ಗಮನಿಸಿದಾಗಲೂ ಎಲ್ಲ ಕಡೆ ಕನ್ನಡ ಪದಗಳು ತುಂಬಿಕೊಂಡಿರುವುದು ಕಾಣಿಸುತ್ತದೆ. ಅಡುಗೆಮನೆಯಲ್ಲಿ, ಈ ಮೇಲೆ ನೋಡಿದಂತೆ ದೇವರಮನೆಯಲ್ಲಿ ಕಾಣಿಸುವಂತೆ ಸಂಸ್ಕ್ರುತ ಪದಗಳು ವೆಗ್ಗಳವಾಗಿ ಕಾಣಿಸುವುದಿಲ್ಲ. ಇದು ಗಮನೀಯ. ಅಡುಗೆಮನೆಯಲ್ಲಿ ಇಂದಿನ ಆದುನಿಕತೆ ಕಾರಣವಾಗಿ ಇಂಗ್ಲೀಶು ವ್ಯಾಪಕವಾಗಿ ಆವರಿಸಿಕೊಳ್ಳುತ್ತಿದೆ, ಆವರಿಸಿಕೊಂಡಿದೆ. ಇಂದು ಅಡುಗೆಮನೆಯಲ್ಲಿ ಕಾಣಿಸುವ ವಸ್ತುಗಳು, ಹೊಸ ವಸ್ತುಗಳ ಮೂಲಕ ಮಾಡುವ ಕ್ರಿಯೆಗಳು ಎಲ್ಲವೂ ಹೊಸತಾಗಿವೆ. ಹಾಗಾಗಿ, ಹೊಸ ವಸ್ತುಗಳು ಇಡಿಯಾಗಿ ಇಂಗ್ಲೀಶಿನ ಪದಗಳು ಇವೆ. ನೋಡಿ, ಕುಕ್ಕರ್, ಮಿಕ್ಸರ್, ಗ್ರಯಿಂಡರ್ ಮೊ. ಇವುಗಳ ಜೊತೆಗೆ ಕೆಲಸಗಳನ್ನು ಸೂಚಿಸುವ ಪದಗಳಲ್ಲಿಯೂ ಬದಲಾವಣೆ ಕಾಣಿಸುತ್ತದೆ. ಉರಿ, ಕರಿ, ಸುಡು ಮೊದಲಾದ ಪ್ರಕ್ರಿಯೆಗಳು ಕನ್ನಡದಲ್ಲಿ ಇವೆ. ಈ ಪ್ರಕ್ರಿಯೆಗಳು ಈಗ ಹೊಸ ಸಾದನಗಳಿಂದಾಗಿ ಹೊಸತಾದ ರೀತಿಯಲ್ಲಿ ನಡೆಯುತ್ತಿರುವುದರಿಂದ ಈ ಎಲ್ಲ ಪದಗಳು ಅಡುಗೆಮನೆಯಿಂದ ಕಾಲು ಕಿತ್ತುತ್ತಿವೆ. ಈ ಜಾಗದಲ್ಲಿ ಮಿಕ್ಸಿಗೆ ಹಾಕುವುದು ಎಂಬ ಒಂದು ಪ್ರಕ್ರಿಯೆಯ ಬಂದಿದೆ. ಇಲ್ಲಿ ಪದಗಳ ಪಲ್ಲಟವನ್ನೂ ಅವಲೋಕಿಸುವುದಕ್ಕೆ ಸಾದ್ಯವಿದೆ. ಹೀಗೆ ಅಡುಗೆಮನೆಯಲ್ಲಿ ಇಂಗ್ಲೀಶು ವ್ಯಾಪಕವಾಗಿ ಆವರಿಸಿಕೊಳ್ಳುತ್ತಿದೆ.

ಈಗ ದೇವರಮನೆ ಮತ್ತು ಅಡುಗೆಮನೆ ಇವುಗಳ ನಡುವೆ ತುಲನಾತ್ಮಕವಾಗಿ ಒಂದೆರಡು ಮಾತುಗಳನ್ನು ಆಡಬಹುದು. ದೇವರಮನೆಯಲ್ಲಿ ಸಂಸ್ಕ್ರುತಕ್ಕೆ ದೊಡ್ಡ ಜಾಗವಿದೆ. ಆದರೆ ಅಂತಾ ದೊಡ್ಡ ಜಾಗ ಅಡುಗೆಮನೆಯಲ್ಲಿ ಇಂಗ್ಲೀಶಿಗಿದೆ. ಕುತೂಹಲವೆಂದರೆ ದೇವರಮನೆಯಲ್ಲಿ ಇಂಗ್ಲೀಶಿಗೆ ಪ್ರವೇಶವಿಲ್ಲ, ಅದರಂತೆಯೆ ಸಂಸ್ಕ್ರುತಕ್ಕೆ ಅಡುಗೆಮನೆಯಲ್ಲಿ ಪ್ರವೇಶವಿಲ್ಲ. ಇದು ನಮ್ಮ ಬದುಕು ಮತ್ತು ಬಾವುಕತೆಯನ್ನು ತೋರಿಸುತ್ತದೆ. ದಿನಜೀವನಕ್ಕೆ ಇಂಗ್ಲೀಶು ಹೇಗೆ ಮನೆಯಲ್ಲಿ ಸಹಜವಾಗಿ ಬಂದೊದಗಿದೆ ಎಂಬುದು ಇಲ್ಲಿ ಸ್ಪಶ್ಟವಾಗಿದೆ. ಸಂಸ್ಕ್ರುತ ಬಾಶೆಯನ್ನು ಯುರೋಪಿನ ಕಾಲದಲ್ಲಿ ಅತಿಯಾಗಿ ಅಪ್ಪಿಕೊಂಡಿರುವುದು, ದೇವರು ಮೊದಲಾದ ವಿಚಾರಗಳಲ್ಲಿ ಸಂಸ್ಕ್ರುತವನ್ನು ಹೆಚ್ಚು ಮೊದಲಿನಿಂದಲೂ ಹೊಂದಿಕೊಂಡಿರುವುದು ಇದರಲ್ಲಿ ಕಾಣಿಸುತ್ತದೆ.

ಸರಿ, ಇನ್ನು ಮನೆಯ ಬೇರೆ ಬಾಗಗಳ ಕಡೆ ತುಸು ಗಮನ ಹರಿಸೋಣ. ಸುಮ್ಮನೆ ಕುತೂಹಲಕ್ಕೆ ಬಚ್ಚಲಮನೆಯ ಕಡೆ ಹೋಗೋಣ. ಇಲ್ಲಿ ಇನ್ನೊಂದು ಅಚ್ಚರಿ ಕಾಣಿಸುತ್ತದೆ. ಬಚ್ಚಲಮನೆಯಲ್ಲಿ ಸಂಸ್ಕ್ರುತಕ್ಕೆ ಜಾಗವೆ ಇಲ್ಲ, ಪ್ರವೇಶವೆ ಇಲ್ಲ. ಬಚ್ಚಲಮನೆಯಲ್ಲಿ ಬಚ್ಚಲ, ನೀರು, ನಳ ಇಂತ ಕೆಲವು ಪದಗಳು, ತೊಳೆ ಮೊದಲಾದ ಕ್ರಿಯಾಪದಗಳು ಕನ್ನಡದವು ಇವೆ. ಆದರೆ, ಬಚ್ಚಲಮನೆಯಲ್ಲಿ ಇಡಿಯಾಗಿ ಇಂಗ್ಲೀಶು ತುಂಬಿಕೊಂಡಿದೆ. ನೋಡಿ, ಬಕೇಟು, ಬ್ರಶ್ಶು, ಪೇಸ್ಟು ಮೊದಲಾದವು. ಅಲ್ಲದೆ ವಾಶ್ ಮಾಡು, ಕ್ಲೀನ್ ಮಾಡು ಮೊದಲಾದ ಕ್ರಿಯೆಗಳನ್ನು ಸೂಚಿಸುವ ಪದಗಳೂ ಇಂಗ್ಲೀಶಿನಿಂದ ಬಂದಿವೆ. ಇದರೊಟ್ಟಿಗೆ ಸಾಬೂನು ಮೊದಲಾದ ಪೋರ್ಚುಗೀಸಿನ ಪದಗಳೂ ಇವೆ. ಆದರೆ, ಬಚ್ಚಲಮನೆಯ ಇನ್ನೊಂದು ಗಮನ ಸೆಳೆಯುವ ಅಂಶವೊಂದು ಕಾದಿದೆ. ದೇವರಮನೆಯಲ್ಲಿ, ಅಡುಗೆಮನೆಯಲ್ಲಿ ಅಪ್ಪಿತಪ್ಪಿಯೂ ಕಾಣದ ಪರ‍್ಶಿಯನ್ ಪದಗಳು ಬಚ್ಚಲಮನೆಯಲ್ಲಿ ಕಾಣಿಸುತ್ತವೆ. ನೋಡಿ, ಜಗ್ಗು ಮೊ.

ಇನ್ನು, ಇನ್ನೂ ಕುತೂಹಲಕ್ಕೆ ಮಲಗುವ ಕೋಣೆಗೆ ಮತ್ತು ಪಡಸಾಲಿಗೆ ಇಲ್ಲವೆ ಹಾಲಿಗೆ ಹೋಗೋಣ. ಇಲ್ಲಿ ಗಾದಿ, ದಿವಾನ ಮೊದಲಾದ ಪರ‍್ಶಿಯನ್ ಪದಗಳು ಕಾಣಿಸುತ್ತವೆ. ಇಲ್ಲೆಲ್ಲ ಇಂಗ್ಲೀಶಿನ ಪದಗಳು ವೆಗ್ಗಳವಾಗಿ ತುಂಬಿಕೊಳ್ಳುತ್ತಿವೆ. ಅಲ್ಲದೆ, ಹಲವೆಡೆ ಪರ‍್ಶಿಯನ್ ಪದಗಳನ್ನು ಬದಲಿಸಿ ಇಂಗ್ಲೀಶಿನ ಪದಗಳು ಬರುತ್ತಿವೆ. ಅಂದರೆ, ದಿನಜೀವನದ ಬದುಕಿನ ಬಾಗವಾಗಿ ಈ ಬಾಶೆಗಳು ನಮ್ಮೊಂದಿಗೆ ಇರುವುದು ಕಾಣಿಸುತ್ತದೆ.

ಸಂಸ್ಕ್ರುತ, ಪರ‍್ಶಿಯನ್ ಮತ್ತು ಇಂಗ್ಲೀಶು ಇವು ಮೂರೂ ಕನ್ನಡ ಬಾಶೆಯ ಸಾಮಾನ್ಯರ ಬದುಕನ್ನು ತೀವ್ರವಾಗಿ ತಾಕಿದವುಗಳು. ಬದುಕಿನ ಮತ್ತು ಸಮಾಜದ ಒಳಗೆ ಆಳಕ್ಕೆ ಇಳಿದವುಗಳು. ಕಾಲಾಂತರದಲ್ಲಿ ಇವು ಬಿನ್ನವಾಗಿ ಬಂದು, ವಿಬಿನ್ನವಾಗಿ ಬೆಳೆದಿವೆ. ಇಂದಿನ ದಿನದಲ್ಲಿ ಈ ಬಾಶೆಗಳು ನಮ್ಮ ಮನೆಗಳಲ್ಲಿ ಹೇಗೆ ಆವರಿಸಿಕೊಂಡಿವೆ ಎಂಬುದನ್ನು ನಾವು ಈ ಮೇಲಿನ ಮಾತುಕತೆಯಲ್ಲಿ ಗಮನಿಸಬಹುದು. ಇದು ಕನ್ನಡ ಸಾಮಾನ್ಯರ ಬದುಕು. ಇಲ್ಲಿ ಯಾವ ಬಾಶೆಗೆ ಎಲ್ಲಿ ಜಾಗ ಎನ್ನುವುದು ಸಾಮಾಜಿಕ ಕಾರಣಗಳಿಂದಾಗಿ, ಬದುಕಿನ ಅವಶ್ಯಕತೆಗಳಿಂದಾಗಿ ರೂಪುಗೊಳ್ಳುತ್ತದೆ. ಇದು ಮನೆಯೊಳಗಿನ ಬಾಶಿಕ ಅನುಸಂದಾನ.

ಈ ಅಂಕಣದ ಹಿಂದಿನ ಬರೆಹಗಳು:
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...