`ಕುದ್ಮಲ್ ಪಿಜ್ಜ' ಹೇಗಿದ್ದರೆಂದು ತಿಳಿಯುವ ಪ್ರೇಮಿ ರಾವ್ ಅವರ ಮುಗ್ಧ ಆಸಕ್ತಿಯೇ ಈ ಪುಸ್ತಕದ “ಮೂಳೆ ಹಂದರ”


"ಕುದ್ಮಲ್ ಅವರ ಮರಿಮೊಮ್ಮಗ ಪ್ರೇಮಿ ಎಂ. ರಾವ್ ಬರೆದ ಪುಸ್ತಕದ ಅನುವಾದ “ನೀವು ಕಂಡರಿಯದ ಕುದ್ಮಲ್ ರಂಗರಾವ್,” ರಂಗರಾವ್ ಅವರ ಮತ್ತು ಅವರ ಕುಟುಂಬದ ಕುರಿತು ಹಲವು ಅಥೆಂಟಿಕ್ ಮಾಹಿತಿಗಳನ್ನು ಸಂಗ್ರಹಿಸಿ ನೀಡಿದೆ. ಯಾವುದೇ “ಫ್ರಿಲ್”ಗಳಿಲ್ಲದ ಕಾರಣಕ್ಕೆ ಈ ಪುಸ್ತಕ ಗಮನ ಸೆಳೆಯುತ್ತದೆ," ಎನ್ನುತ್ತಾರೆ ರಾಜಾರಾಂ ತಲ್ಲೂರು. ಅವರು ಲಕ್ಷ್ಮಣ ಕೊಡಸೆ ಅವರ ‘ಮಹಾತ್ಮರ ಗುರು ಕುದ್ಮಲ್ ರಂಗರಾಯ’ ಹಾಗೂ ಬಿ.ಎ.ವಿವೇಕ ರೈ ಅವರ ಅನುವಾದಿತ "ನೀವು ಕಂಡರಿಯದ ಕುದ್ಮಲ್ ರಂಗರಾವ್" ಕುರಿತು ಬರೆದಿರುವ ವಿಮರ್ಶೆ.

ಕೆಲವು ವರ್ಷಗಳ ಹಿಂದೆ ಕುದ್ಮಲ್ ರಂಗರಾಯರ ಬಗ್ಗೆ ಮಾಹಿತಿಗಾಗಿ ಹುಡುಕಾಡಿದಾಗ ಸಿಕ್ಕಿದ್ದು, ವೆಬ್‌ನಲ್ಲಿ ಲಭ್ಯವಿರುವ ಒಂದು ಪುಟ್ಟ ಲೇಖನ. ಅದನ್ನು ಬರೆದವರು, ಅವರ ಬಗ್ಗೆ ಪಿಎಚ್ಡಿ (ಮಣಿಪಾಲ ವಿವಿ) ಮಾಡಿರುವ ಉಷಾಪ್ರಭಾ ಅವರು. ಅದು ಬಿಟ್ಟರೆ ಹಳೆಯ ಕರಾವಳಿ “ಗೂಗಲ್” ಅನ್ನಿಸಿಕೊಂಡಿರುವ “ಸುದರ್ಶನ”ದಲ್ಲಿ ಡಾ. ಸೂರ್ಯನಾಥ ಕಾಮತರ ಲೇಖನ ಅಥವಾ ನನ್ನ ಗುರುಗಳಾದ ಶೇಖರ ಇಡ್ಯರ ಲೇಖನ “ದಕ್ಷಿಣ ಕನ್ನಡದ ಕೀರ್ತಿಶೇಷರು” ಗಳಲ್ಲಿದ್ದ ಪುಟ್ಟ ಕೆಲವು ವಾಕ್ಯಗಳು ಮಾತ್ರ.

ಆದರೆ ಕಳೆದ ವರ್ಷ, ಲಡಾಯಿ ಪ್ರಕಾಶನದವರು ಕುದ್ಮಲ್ ರಂಗರಾಯರ ಬಗ್ಗೆ ಒಂದು ಪುಸ್ತಕ (ಲೇ: ಲಕ್ಷ್ಮಣ ಕೊಡಸೆ) ಪ್ರಕಟಿಸಿದ ಬೆನ್ನಿಗೇ, ಈಗ ಸ್ವತಃ ಕುದ್ಮಲ್ ಕುಟುಂಬಿಕರ ಒಂದು ಪುಸ್ತಕವನ್ನು ಬಹುರೂಪಿ ಪ್ರಕಾಶನ (ಇದರ ಅನುವಾದ: ಪ್ರೊ. ಬಿ ಎ. ವಿವೇಕ ರೈ) ಪ್ರಕಟಿಸಿದೆ. ಎರಡೂ ಪುಸ್ತಕಗಳನ್ನು ಬೆನ್ನು ಬೆನ್ನಿಗೆ ಓದಿ ಮುಗಿಸುವ ಅವಕಾಶ ಸಿಕ್ಕಿತು. ಒಂದು ಪುಸ್ತಕ ಮೂಳೆಯಾದರೆ ಇನ್ನೊಂದು ಪುಸ್ತಕ ಮಾಂಸ! ಎರಡೂ ಪುಸ್ತಕಗಳು ಒಟ್ಟಾಗಿ, ಲಭ್ಯವಿರುವ ಸೀಮಿತ ಮಾಹಿತಿಗಳ ಆಧಾರದಲ್ಲಿ ರಂಗರಾಯರ ಕುರಿತು ಒಂದು ಅಚ್ಚುಕಟ್ಟಾದ ಚಿತ್ರಣವನ್ನು ಒದಗಿಸುತ್ತವೆ.

ತಾನು ಸನ್ಯಾಸಿಯಾಗಹೊರಟು, ತನ್ನ ಬದುಕಿನ ಕುರಿತ ಎಲ್ಲ ದಾಖಲೆಗಳೂ ಅನಗತ್ಯ ಎಂದು ಅವನ್ನೆಲ್ಲ ಸುಟ್ಟು ಹಾಕಿದ ಕುದ್ಮಲ್ ರಂಗರಾಯರ ಕುರಿತ ಅಳಿದುಳಿದ ಕೆಲವು ದಾಖಲೆಗಳು, ಯಾರೋ ವಕೀಲರೊಬ್ಬರ ಮನೆಯಲ್ಲಿ, ಅವರ ಪತ್ನಿಗೆ ಅವುಗಳ ಮಹತ್ವ ಗೊತ್ತಿಲ್ಲದೆ ರದ್ದಿಗೆ ಹೋಗುವುದರೊಂದಿಗೆ ಸಂಪೂರ್ಣವಾಗಿ ಇಲ್ಲದಾಗಿವೆಯಂತೆ. ಹಾಗಾಗಿ “ಮಾಹಿತಿ ಯುಗ”ದ ನಮಗೆ ಇಲ್ಲಿ ಸಿಗುವುದು ಬಹಳ ಸೀಮಿತ ಸಂಗತಿಗಳು.

ಕುದ್ಮಲ್ ಅವರ ಮರಿಮೊಮ್ಮಗ ಪ್ರೇಮಿ ಎಂ. ರಾವ್ ಬರೆದ ಪುಸ್ತಕದ ಅನುವಾದ “ನೀವು ಕಂಡರಿಯದ ಕುದ್ಮಲ್ ರಂಗರಾವ್,” ರಂಗರಾವ್ ಅವರ ಮತ್ತು ಅವರ ಕುಟುಂಬದ ಕುರಿತು ಹಲವು ಅಥೆಂಟಿಕ್ ಮಾಹಿತಿಗಳನ್ನು ಸಂಗ್ರಹಿಸಿ ನೀಡಿದೆ. ಯಾವುದೇ “ಫ್ರಿಲ್”ಗಳಿಲ್ಲದ ಕಾರಣಕ್ಕೆ ಈ ಪುಸ್ತಕ ಗಮನ ಸೆಳೆಯುತ್ತದೆ. ತನ್ನ “ಕುದ್ಮಲ್ ಪಿಜ್ಜ” ಹೇಗಿದ್ದರೆಂದು ತಿಳಿಯುವ ಪ್ರೇಮಿ ರಾವ್ ಅವರ ಮುಗ್ಧ ಆಸಕ್ತಿಯೇ ಈ ಪುಸ್ತಕದ “ಮೂಳೆ ಹಂದರ.” ಕರಾವಳಿಯ ಅಂದಿನ ಬದುಕು, ಸಾರಸ್ವತ ಸಮಾಜ, ಕೊರಗ ಸಮುದಾಯದ ದಯನೀಯ ಸ್ಥಿತಿ, ಕುದ್ಮಲ್ ಕುಟುಂಬದ ಕುಡಿಗಳು ದೇಶದ ಮಹತ್ವದ ಸ್ಥಾನಗಳಿಗೆ ತಲುಪಿದ್ದು… ಇವೆಲ್ಲದರ ಕುರಿತು ನಿಖರ ಚಿತ್ರಣಗಳು ಇಲ್ಲಿವೆ.

ಲಕ್ಷ್ಮಣ ಕೊಡಸೆ ಅವರ ಪುಸ್ತಕ, “ಮಹಾತ್ಮರ ಗುರು ಕುದ್ಮಲ್ ರಂಗರಾವ್” ಕುದ್ಮಲ್ ಅವರ ಕುರಿತು ಒಂದು ಹೊರನೋಟವನ್ನೂ, ಕುದ್ಮಲ್ ಅವರ ಚಟುವಟಿಕೆಗಳ ಕುರಿತು ಸುತ್ತ ಇರುವ ಸಮಾಜದ ಪ್ರತಿಕ್ರಿಯೆಗಳನ್ನೂ, ಕರಾವಳಿ ಕುದ್ಮಲ್ ಅವರನ್ನು ಗ್ರಹಿಸಿದ ಬಗೆಯನ್ನೂ ಚಿತ್ರಿಸುತ್ತದೆ. ಇಲ್ಲಿ ಸೇವೆಯಲ್ಲಿದ್ದ, ಈಗ ನಿವೃತ್ತ ಸಾರಿಗೆ ಅಧಿಕಾರಿ ಕೇಶವ ಧರಣಿ ಅವರು ಮಂಗಳೂರಿನಲ್ಲಿ ಕುದ್ಮಲ್ ರಂಗರಾಯರ ಸ್ಮರಣೆಗೆ ವಹಿಸಿದ ಪಾತ್ರದ ಬಗ್ಗೆ ಪುಸ್ತಕ ಉಲ್ಲೇಖಿಸುತ್ತದೆ. ಪುಸ್ತಕ ಕುದ್ಮಲ್ ಅವರ ಕುರಿತು ಒಂದು “ಮಾಂಸದ ಹಂದರ”ವನ್ನು ಅರ್ಪಿಸುತ್ತದೆ. ಇವೆರಡೂ ಪುಸ್ತಕಗಳು ಒಟ್ಟು ಸೇರಿ, ಹಿಂದಿನಷ್ಟು ಮಸುಕಿರದ ಒಂದು ಚಿತ್ರಣ ಕುದ್ಮಲ್ ರಂಗರಾಯರ ಕುರಿತು ಸಿಗುತ್ತದೆ.

ಈ ಪುಸ್ತಕಗಳ ನಡುವೆ ನನ್ನ ಕಣ್ಣಿಗೆ ಬಿದ್ದ ಒಂದು ಮಾಹಿತಿ ವ್ಯತ್ಯಾಸ ಎಂದರೆ, ವಿವೇಕ ರೈ ಅವರ ಅನುವಾದದಲ್ಲಿ, ಉಳ್ಳಾಲ ರಘುನಾಥಯ್ಯನವರು ಕುದ್ಮಲ್ ರಂಗರಾಯರ ಕಿರಿಯ ತಂಗಿಯನ್ನು ಮದುವೆ ಆದರು ಎಂದು ಹೇಳಿದ್ದರೆ, ಕೊಡಸೆ ಅವರ ಪುಸ್ತಕವು, ರಘುನಾಥಯ್ಯನವರು ರಂಗರಾಯರ ಪತ್ನಿಯ ಸಹೋದರ ಎಂದು ಹೇಳುತ್ತದೆ. ಹೆಚ್ಚಿನಂಶ, ಕುಟುಂಬದ್ದೇ ಸರಿಯಾದ ವರ್ಷನ್ ಇರಬಹುದು.

ಇನ್ನೂ ಒಂದು ಕುತೂಹಲಕರ ಅಂಶ ಎಂದರೆ, ಎರಡೂ ಪುಸ್ತಕಗಳ ರೂವಾರಿಗಳು (ಒಂದರ ಲೇಖಕರು, ಇನ್ನೊಂದರ ಕಾರಣಕರ್ತರು) ಪ್ರಜಾವಾಣಿ ಬಳಗಕ್ಕೆ ಮಂಗಳೂರಿನಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದವರು, ಅಲ್ಲಿನ ಸುದ್ದಿ ವಿಭಾಗದ ಮುಖ್ಯಸ್ಥರಾಗಿದ್ದವರು! ಒಬ್ಬರು ಗೆಳೆಯ ಜಿ ಎನ್ ಮೋಹನ್ (G N Mohan) ಇನ್ನೊಬ್ಬರು ಲಕ್ಷ್ಮಣ ಕೊಡಸೆ.

ಕುದ್ಮಲ್ ರಂಗರಾಯರ 156ನೇ ಜನ್ಮದಿನ ಬರುವ ವಾರದಲ್ಲಿದೆ. (ಜೂನ್ 29). ಆಸಕ್ತರಿಗೆ ಈ ಪುಸ್ತಕಗಳನ್ನು ಓದಲು, ಅವರನ್ನು ನೆನಪಿಸಿಕೊಳ್ಳಲು, ಇದೊಂದು ಸಕಾರಣ.

MORE FEATURES

ಜೀವ ಜಾತ್ರೆಯಲ್ಲಿ 'ಜೀನಿ'ಯ ಜೀನು ಹಿಡಿದು..

08-07-2024 ಬೆಂಗಳೂರು

"ಅಲ್ಲಾವುದ್ದೀನನ ದೀಪದಿಂದ ಹೊರಬಂದ 'ಜೀನಿ' ಬಯಸಿದ್ದನ್ನೆಲ್ಲಾ ನೀಡುತ್ತದಂತೆ. ಹಾಗಾದರೆ ನನ್ನ ಸಣ್ಣ ಕಥೆ...

ಓದುತ್ತಿರುವ ಸಾಲನ್ನೇ ಮತ್ತೆ ಮೊದಲಿನಿಂದ ಓದಿಸುತ್ತವೆ...

08-07-2024 ಬೆಂಗಳೂರು

"ಕಲೆ ಮತ್ತು ಕಾಲದ ಸೌಂದರ್ಯವಿರುವುದೇ ಅಲ್ಲಿ. ಅದು ಎಂದಿಗೂ ನವನವೀನ ಮತ್ತು ಅತ್ಯಂತ ಪುರಾತನ. ಈ‌ ಸಂಕಲನದಲ್ಲ...

‘ಕುಣಿಗಲ್ ಟು ಕಂದಹಾರ್’ ಕೃತಿ ಒಂದು ತರಹ ಹಾಲಿವುಡ್ನ ನಿರೂಪಣಾ ಚಿತ್ರದಂತಿದೆ: ಪ್ರಸಾದ್

07-07-2024 ಬೆಂಗಳೂರು

‘ಸೈನ್ಯಾಸ್ತ್ರಗಳ ಬಹಳ ಹತ್ತಿರದಿಂದ ಕಾಲ ಕಳೆದು ಕೆಲಸದವಧಿ ಮುಗಿಸಿ ಮರಳಿ ತಮ್ಮ ಮನೆಗೆ ಬಂದು ಈ ಕೃತಿ ಬರೆದಿದ್ದಾರ...