ಡಂಕಲ್‌ಪೇಟೆಗೆ ಹೊರಡುವ ಮುನ್ನ…….


‘ಈ ಡಂಕಲ್‌ಪೇಟೆ ಎಂಬುದು ನನ್ನ ಕಥೆಗಳಿಗಾಗಿ ನಾನೇ ಸೃಷ್ಟಿಸಿಕೊಂಡಿರುವ ಒಂದು ಪ್ರಾದೇಶಿಕ ಚೌಕಟ್ಟು ಇರುವ ಕಾಲ್ಪನಿಕ ಊರಷ್ಟೇ ಎನ್ನುತ್ತಾರೆ ವೀರೇಂದ್ರ ರಾವಿಹಾಳ್. ಅವರು ‘ಡಂಕಲ್ ಪೇಟೆ’ ಕೃತಿ ಕುರಿತು ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ....

ಗೂಗಲ್‌ನಲ್ಲಾಗಲಿ ಗ್ಲೋಬ್‌ನಲ್ಲಾಗಲಿ ನೀವೆಷ್ಟೇ ಪ್ರಯಾಸಪಟ್ಟು ಹುಡುಕಿದರೂ ಜಗತ್ತಿನ ಯಾವುದೇ ದೇಶದಲ್ಲಾಗಲಿ ಯಾವುದೇ ಖಂಡದಲ್ಲಾಗಲಿ ಅಥವಾ ಇನ್ನಾವುದೇ ಉಪಖಂಡಗಳಲ್ಲಾಗಲಿ ಈ ಡಂಕಲ್‌ಪೇಟೆ ಎಂಬ ವಿಭಿನ್ನ ಹೆಸರಿನ ಪುಟ್ಟ ಪಟ್ಟಣವೊಂದು ನಿಮಗೆ ಖಂಡಿತವಾಗಿಯೂ ಕಾಣಸಿಗದು. ಹಾಗಂತ ನೀವೇನೂ ಅಮೆರಿಕಾವನ್ನು ಕಂಡುಹಿಡಿದ ಕೊಲಂಬಸ್‌ನಂತಾಗಲಿ ಇಂಡಿಯಾವನ್ನು ಇನ್ವೆಂಟ್ ಮಾಡಿದಂಥ ವಾಸ್ಕೋಡಗಾಮನಂತಾಗಲಿ ಸಮುದ್ರಯಾನದ ಸಾಹಸಕ್ಕೆ ಹಾಕಬೇಕಾದ ಅನಿವಾರ್ಯಯತೆಯೇನೂ ಕಟ್ಟಕಡೆಗೆ ರೈಲು ಬಸ್ಸು ಕಾರು ಲಾರಿ ಬೈಕು ಸೈಕಲ್ಲು... ಹೀಗೆ ಯಾವುದನ್ನೂ ಸವಾರಿ ಮಾಡಿ ಪ್ರಯಾಣಿಸಬೇಕಾದ ಅಗತ್ಯವೂ ಇಲ್ಲ. ಹಾಗಾದರೆ ಡಂಕಲ್‌ಪೇಟೆಗೆ ತಲುಪಲು ಬೇಕಾದ ದಾರಿಯಾದರೂ ಯಾವುದು? ಅಲ್ಲಿಗೆ ನಮ್ಮನ್ನು ತಲುಪಿಸುಲು ಇರುವ ಸಾರಿಗೆಯ ಮಾಧ್ಯಮವಾದರೂ ಯಾವುದು ಎಂದು ಕೇಳಬಹುದು... ಬನ್ನಿ ನಿಮ್ಮ ಮುಕ್ತ ಮನಸ್ಸಿನಿಂದ ನೇರ ನನ್ನ ಈ ಕಥೆಗಳ ಲೋಕಕ್ಕೆ, ಇಲ್ಲಿನ ಸನ್ನಿವೇಶಗಳು, ಪ್ರಸಂಗಗಳು, ಪಾತ್ರಗಳು ತಮ್ಮದೇ ಕಥೆಗಳನ್ನು ಹೇಳುತ್ತಾ ಇಡೀ ಡಂಕಲ್ಪೇಟೆ ಎನ್ನುವ ವಿಶಿಷ್ಟ ಲೋಕವನ್ನು ನಿಮಗೆ ಪರಿಚಯಿಸುತ್ತಾ ಹೋಗುತ್ತವೆ.

ಈ ಡಂಕಲ್‌ಪೇಟೆ ಎಂಬುದು ನನ್ನ ಕಥೆಗಳಿಗಾಗಿ ನಾನೇ ಸೃಷ್ಟಿಸಿಕೊಂಡಿರುವ ಒಂದು ಪ್ರಾದೇಶಿಕ ಚೌಕಟ್ಟು ಇರುವ ಕಾಲ್ಪನಿಕ ಊರಷ್ಟೇ. ಅಸಲಿಗೆ ಈ ಹೆಸರು ಹುಟ್ಟಿಕೊಳ್ಳಲು ಕಾರಣವಾದ ಸಂಗತಿಯಾದರೂ ಯಾವುದೆಂದರೆ ನನ್ನ ಊರಾದ ತೆಕ್ಕಲಕೋಯಟೆಯು ನವಶಿಲಾಯುಗದ ನೆಲೆಯಾಗಿದ್ದು ಇಡೀ ಊರನ್ನೇ ಸುತ್ತುವರೆದಿರುವ ವಿಸ್ಮಯಕಾರಿ ಎನ್ನಬಹುದಾದ ಅನೇಕ ಬೆಟ್ಟಗುಡ್ಡಗಳ ವಿಹಂಗಮ ನೋಟಗಳನ್ನು ನಾವಿಲ್ಲಿ ಕಾಣಬಹುದು. ದುಡಿದು ದುಡಿದು ಬಳಲಿದ್ದರಿಂದಾಗಿ ಉಂಟಾದ ದಣಿವನ್ನು ನಿವಾರಿಸಿಕೊಳ್ಳಲೆಂಬಂತೆ ತಮ್ಮ ಅಗಾಧ ದೇಹಗಳನ್ನು ಭೂತಾಯ ಮಡಿಲಲ್ಲಿ ಅರುಹಿಕೊಂಡು ಮಲಗಿರುವವರಂತೆ ಕಂಡುಬರುವ ಇಲ್ಲಿನ ಬೆಟ್ಟಗುಡ್ಡಗಳು ಒಮ್ಮೆ ರೌದ್ರವಾಗಿಯೂ ಮತ್ತೊಮ್ಮೆ ರಮಣೀಯವಾಗಿಯೂ ಮತ್ತು ಚೇತೋಹಾರಿಯಾಗಿಯೂ ಗೋಚರಿಸುವ ಇವುಗಳ ಸೌಂದರ್ಯವು ಎಂಥಹ ಪ್ರಕೃತಿಪ್ರಿಯರ ಚಿತ್ತವನ್ನೂ ಒಮ್ಮೆ ಸೆಳೆದು "ವ್ಹಾ!” ಎನ್ನುವ ಉದ್ಧಾರವನ್ನು ಹೊರಡಿಸದೆ ಇರಲಾರವು. ಅದರಲ್ಲೂ ಸೂರ್ಯೋದಯ ಸೂರ್ಯಾಸ್ತದ ವೇಳೆಗಳಲ್ಲಿ ಈ ಬೆಟ್ಟಗುಡ್ಡಗಳ ಸೌಂದರ್ಯವನ್ನು ಕಣ್ಣುಂಬಿಕೊಳ್ಳುವುದೇ ಒಂದು ವಿಸ್ಮಯಕಾರಿ ಅನುಭವ.

ಬಾಲ್ಯದಲ್ಲಿ ಗೆಳೆಯರೊಡನೆ ಸೇರಿಕೊಂಡು ಈ ಬೆಟ್ಟಗುಡ್ಡಗಳಲ್ಲೆಲ್ಲಾ ಅಲೆದಾಡುವುದೆಂದರೆ ನಮಗೆಲ್ಲಾ ಅದೊಂದು ಉತ್ಸಾಹಭರಿತ ಮತ್ತು ರೋಮಾಂಚನಕಾರಿ ಸಂಗತಿಯೇ ಆಗಿತ್ತು. ಇವುಗಳಲ್ಲಿರುವ ಹಲವಾರು ಗುಡ್ಡಗಳಿಗೆ ತರಹೆವಾರಿ ಹೆಸರುಗಳಿದ್ದು ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಬಹುದಾದರೆ... ಉಡೇದಗುಡ್ಡ, ಜಕ್ಕೇರುಗುಡ್ಡ, ಡಂಕಲ್‌ ಗುಡ್ಡ, ಪಾರಿವಾಳವಟ್ಲ, ಕೆರೆಮಟ್ಟಿಗುಡ್ಡ, ಓಬಳೇಶನಗುಡ್ಡ, ಹಿರೇಹರ್ಲಗುಡ್ಡ... ಹೀಗೆ ಒಂದೊಂದು ಗುಡ್ಡಕ್ಕೂ ಒಂದೊಂದೊ ವಿಚಿತ್ರ ಮತ್ತು ವಿಭಿನ್ನವೆನಿಸಬಹುದಾದಂಥ ಹೆಸರುಗಳಿವೆ. ನನ್ನ ಬಾಲ್ಯದಿಂದಲೂ ಕೇಳುತ್ತಾ ಬಂದಿರುವ ಈ ಹೆಸರುಗಳನ್ನು ಯಾರು ಈ ಗುಡ್ಡಗಳಿಗೆ ನಾಮಕಾರಣ ಮಾಡಿದರೋ ನನಗಂತೂ ಇಂದಿಗೂ ಅಚ್ಚರಿಯ ಸಂಗತಿಯಾಗಿಯೇ ಉಳಿದಿದೆ.

ಈ ಎಲ್ಲ ಹೆಸರುಗಳ ನಡುವೆ ಡಂಕಲ್‌ ಗುಡ್ಡ ಎನ್ನುವ ಕೊಂಚ ವಿಭಿನ್ನವಾದ ಹೆಸರು ಮಾತ್ರ ವಿಶೇಷವಾಗಿ ನನ್ನ ಗಮನವನ್ನು ಸೆಳೆದಿತ್ತು. ಈ ಡಂಕಲ್‌ಗುಡ್ಡದ ತಪ್ಪಲಲ್ಲೇ ಬಹುತೇಕ ಜೀವನ ಕಟ್ಟಿಕೊಂಡಿರುವ ನನಗೆ ಇಲ್ಲಿನ ಕಥೆಗಳಿಗೆ ಒದಗಿದ ಕಾಲ್ಪನಿಕ ಊರಾದ ಈ ಡಂಕಲ್‌ಪೇಟೆಯ ಸೃಷ್ಟಿಗೆ ಕಾರಣವಾಗಿದೆ. ಮತ್ತು ಇಲ್ಲಿನ ಕಥೆಗಳಲ್ಲೆಲ್ಲಾ ಇದು ಹಾಸುಹೊಕ್ಕಾಗಿ ಬರಲು ಸಾದ್ಯವಾಗಿದೆ. ಈ ಗುಡ್ಡದ ನಾಮಾಂಕಿತವು ಇಂದಿಗೂ ಇಲ್ಲಿನ ಹಲವಾರು ಜನಗಳ ನಾಲಿಗೆಯ ಮೇಲೆ ಡಂಕಲ್‌ಗುಡ್ಡವಾಗಿ ಇನ್ನೂ ಕೆಲವರ ಬಾಯಲ್ಲಿ ಡಂಕಲಮ್ಮನ ಗುಡ್ಡವಾಗಿ ನಲಿದಾಡುತ್ತಿರುವುದು ಸದಾ ನನಗೊಂದು ಸೋಜಿಗದ ಸಂಗತಿಯಾಗಿಯೇ ಉಳಿದಿದೆ. ಅಷ್ಟಕ್ಕೂ ಈ ಗುಡ್ಡಕ್ಕೆ ಡಂಕಲ್ ಎಂಬ ಹೆಸರು ಬರಲು ಇರುವ ಕಾರಣವಾದರೂ ಯಾವುದು? ಡಂಕಲ್ ಎನ್ನುವ ಬ್ರಿಟೀಷ್ ಅಧಿಕಾರಿಯೇನಾದರೂ ಇಲ್ಲಿ ಬೀಡು ಬಿಟ್ಟಿದ್ದನೇ? ಯಾವ ಕಾಲಘಟ್ಟದಲ್ಲಿ ಈ ಹೆಸರು ಬಂದಿತು? ಇನ್ನೂ ಮುಂತಾದ ಪ್ರಶ್ನೆಗಳು ಮತ್ತು ಈ ಥರದ ಅನೇಕ ಜಿಜ್ಞಾಸೆಗಳು ಇಂದಿಗೂ ನನ್ನನ್ನು ಕಾಡುವುದು ಬಿಟ್ಟಿಲ್ಲ. ಇದೊಂದು ಸಂಶೋಧನಾತ್ಮಕ ವಿಷಯವಾದ್ದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಚಿಸಲು ನಿರ್ಧರಿಸಿ ಮತ್ತೀಗ ನನ್ನ ಕಥೆಗಳ ಕಡೆಗೆ ಹೊರಳಿಕೊಳ್ಳೋಣ.

ಇನ್ನು ಇಲ್ಲಿನ ಕಥೆಗಳ ಬಗ್ಗೆ ನಾನಂತೂ ಏನನ್ನೂ ಹೇಳಲಾರೆ. ನಾನು ಕಂಡು ಕೇಳಿ ಅನುಭವಿಸಿದ ಮತ್ತು ಬದುಕಿನಲ್ಲಿ ನನಗೆ ದಕ್ಕಿದ ಹಲವಾರು ಅನುಭವಗಳು ಸಂಗತಿಗಳು ಮತ್ತು ಕೆಲವೊಂದು ಪ್ರಾದೇಶಿಕ ವಿವರಗಳು ಕಾಲ್ಪನಿಕ ಎಳೆಗಳೊಂದಿಗೆ ಬೆರೆತುಕೊಂಡು ಇಲ್ಲಿನ ಕಥೆಗಳಾಗಿ ರೂಪುಗೊಂಡಿವೆ. ಹಾಗಂತ ಇವು ಯಾರನ್ನೋ ಉದ್ದೇಶವಾಗಿಟ್ಟುಕೊಂಡು ಮಾಡಿದ ರಚನೆಗಳಲ್ಲ. ಒಂದೊಮ್ಮೆ ಯಾರಿಗಾದರೂ ಹೋಲಿಕೆಯಾದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ, ಮೂಲತಃ ವ್ಯವಹಾರಿಕ ವಲಯದ ನಾನು ಸಾಹಿತ್ಯ ಕ್ಷೇತ್ರಕ್ಕೆ ಅಡಿಗಾಲನಿಟ್ಟಿದ್ದು ಆಕಸ್ಮಿಕವೇನೂ ಅಲ್ಲ. ನನ್ನ ಪ್ರೌಢಶಾಲಾ ದಿನಗಳಿಂದಲೆ ಕನ್ನಡನಾಡು ನುಡಿಯ ಬಗ್ಗೆ ಅಪಾರ ಅಭಿಮಾನ ಪ್ರೀತಿ ಉಳ್ಳವನು ಮತ್ತು ನನ್ನ ವ್ಯಾಸಂಗದ ದಿನಗಳಲ್ಲಿ ನನಗೆ ದೊರೆತ ಕನ್ನಡದ ಗುರುಗಳು ನನ್ನೊಳಗಿನ ಸಾಹಿತ್ಯದ ಬೀಜಕ್ಕೆ ಪೋಷಣೆಯನ್ನೊದಗಿಸಿದರು. ಮತ್ತು ಪಠ್ಯಗಳನ್ನು ಬೋಧಿಸುವ ಅವರ ವೈಖರಿಯು ಎಂಥವರನ್ನೂ ಕನ್ನಡದ ತೆಕ್ಕೆಗೆ ಸೆಳೆದುಕೊಳ್ಳುವಂತಿರುತ್ತಿತ್ತು. ಒಂದು ಲೆಕ್ಕದಲ್ಲಿ ಅಂಥಾ ಗುರುಗಳನ್ನು ಪಡೆದದ್ದು ನಮ್ಮಗಳ ಪುಣ್ಯವೇ ಇರಬೇಕು. ಇಲ್ಲಿನ ನನ್ನ ಕಥೆಗಳಿಗೆ ಬಹುಮುಖ್ಯ ಪ್ರೇರಣೆಯೆಂದರೆ ಬಳ್ಳಾರಿ ಜಿಲ್ಲೆಯ ಸಾಹಿತ್ಯದ ಮೇರು ಪರ್ವತವೆಂದೇ ಉಲ್ಲೇಖಿಸಬಹುದಾದ ಮತ್ತು ಮೂಲತ: ನನ್ನ ಊರಿನವರೇ ಆಗಿರುವರೆಂಬ ಹೆಮ್ಮೆಯನ್ನೂ ನಾನು ಸದಾ ಹೊಂದುವಂತೆ ಮಾಡಿರುವ ಕುಂ.ವೀರಭದ್ರಪ್ಪನರು ಎಂದು ಹೇಳಿಕೊಳ್ಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಅದು ಎರಡು ಸಾವಿರದ ಹನ್ನೆರಡನೇ ಇಸವಿಯ ದಿನಗಳು. ನನ್ನ ಮೊದಲ ಕವನ ಸಂಕಲನ "ಕಲ್ಲುಗಳು ಬೇಕು ಗೆಳೆಯ"ಕ್ಕೆ ಮುನ್ನುಡಿ ಬರೆದುಕೊಟ್ಟು ಅದರ ಬಿಡುಗಡೆಗೂ ಆಗಮಿಸಿದ ಕುಂವೀಯವರು, ಆದಾವ ಘಳಿಗೆಯಲ್ಲಿ fiction try ಮಾಡು ಅಂತ ಹೇಳಿದರೋ ಆ ಮಾತು ನನ್ನಲ್ಲಿ ಆಳವಾಗಿ ಬೇರೂರಿಬಿಟ್ಟಿತು. ಅದರ ಫಲವೇ ಇಂದು ನಿಮ್ಮಗಳ ಕೈಯ್ಯಲ್ಲಿರುವ ಈ "ಡಂಕಲ್‌ಪೇಟೆ" ಕಥಾ ಸಂಕಲನ. ನನ್ನ ಸ್ವರಚಿತ ಎರಡನೆಯ ಕೃತಿಯಾಗಿ ಪ್ರಕಟಗೊಳ್ಳುತ್ತಿದೆ. ಇನ್ನು ತಮ್ಮ ಅದ್ಭುತವಾದ ಕತೆಗಳ ಮೂಲಕವೂ ಮತ್ತು ಅನುವಾದ ಸಾಹಿತ್ಯ ಮತ್ತು ಸಂಶೋಧನಾತ್ಮಕ ಬರವಣಿಗೆಗಳಿಂದಲೂ ನಮ್ಮನ್ನು ಸದಾ ಪ್ರೇರಿಪಿಸುತ್ತಲೂ ಮತ್ತು ಪ್ರಭಾವಿಸುತ್ತಲೂ ಇರುವ ನನ್ನ ಮತ್ತೊಬ್ಬ ಅಚ್ಚುಮೆಚ್ಚಿನ ಲೇಖಕರಾದ ಕೇಶವ ಮಳಗಿಯವರನ್ನು ಈ ಸಂದರ್ಭದಲ್ಲಿ ನೆನೆಯುವುದು ಅತ್ಯಂತ ಔಚಿತ್ಯಪೂರ್ಣವಾದದ್ದೆಂದೇ ಭಾವಿಸುತ್ತೇನೆ.

ಹೀಗೆ ಶುರುವಾದ ನನ್ನ ಕಥಾಯಾನದಿಂದ 2012ರಲ್ಲಿ ಉತ್ಪನನ ಕಥೆಗೆ ಸಂಕ್ರಮಣ ಸಣ್ಣ ಕಥಾ ಪುರಸ್ಕಾರ ಮತ್ತು 2021ರಲ್ಲಿ ದೊರೆ ಕಥೆಗೆ ಉತ್ಥಾನ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳು ಸಂದು ನನ್ನ ಖುಷಿಯ ಕ್ಷಣಗಳನ್ನು ಇಮ್ಮಡಿಗೊಳಿಸಿವೆ. ಆದರೂ ಇಷ್ಟು ವರ್ಷಗಳ ಅವಧಿಯಲ್ಲಿ ನಾನು ಬರೆದದ್ದು ತುಂಬಾ ಕಡಿಮೆಯೇ. ಈ ಬಗ್ಗೆ ನನ್ನಲ್ಲಿ ನನಗೇ ತುಂಬಾ ಅಸಮಾಧಾನ ಅಸಂತೃಪ್ತಿ ಇದೆಯಾದರೂ ಮುಂದಿನ ದಿನಗಳಲ್ಲಿ ಮತ್ತಷ್ಟು ಮಗದಷ್ಟು ಬರೆಯಬೇಕೆನ್ನುವ ಹಂಬಲವನ್ನು ಮಾತ್ರ ಸದಾ ಕಾಪಿಟ್ಟುಕೊಂಡಿರುವೆ.

ಆಗಾಗ್ಗೆ ಇಲ್ಲಿನ ಕಥೆಗಳನ್ನು ಓದಿ ತಮ್ಮ ಅಮೂಲ್ಯ ಮತ್ತು ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ನನ್ನ ಸಾಹಿತ್ಯದ ಅರಿವನ್ನು ಹೆಚ್ಚಿಸಿಕೊಳ್ಳಲು ಕಾರಣರೂ ಮತ್ತು ಬಳ್ಳಾರಿಯ ಸಾಹಿತ್ಯಕ ವಲಯದಲ್ಲಿ ಈ ಕಾರಣಕ್ಕಾಗೇ ಒದಗಿ ಬಂದ ಒಡನಾಡಿಗಳಾದ ಶಿವಲಿಂಗಪ್ಪ ಹಂದಿಹಾಳು, ಅಜಯ ಬಣಕಾರ ಅವರ ಸಹಕಾರ ಮತ್ತು ಪ್ರೀತಿಯನ್ನು ಅಲ್ಲದೆ ಸದಾ ನನ್ನ ಬರಹಗಳನ್ನು ಓದಿ ಅದರ ಓರೆಕೋರೆಗಳನ್ನು ತಿದ್ದಿಕೊಳ್ಳಲು ಸಹಕರಿಸುವ ಅತ್ಯಂತ ಸರಳ ಸ್ನೇಹಜೀವಿ ಮತ್ತು ಈ ಹೊತ್ತಿನ ಕನ್ನಡದ ಮಹತ್ವದ ಕವಿಯಾದ ಮಿತ್ರ ಆರಿಫ್ ರಾಜ ಅವರನ್ನೂ ಈ ಸಂದರ್ಭದಲ್ಲಿ ಸ್ಮರಿಸುವುದು ನನ್ನ ಕರ್ತವ್ಯವೆಂದೇ ಭಾವಿಸುತ್ತೇನೆ.

ಬೇಗ ಕಥಾ ಸಂಕಲನವನ್ನು ತರುವಂತೆ ಭೇಟಿಯಾದಾಗಲೆಲ್ಲಾ ಪ್ರೀತಿಯಿಂದ ಉರಿದುಂಬಿಸುವ ಗೌರವಾನ್ವಿತ ವೆಂಕಟಗಿರಿ ದಳವಾಯಿ ಅವರಿಗೆ ಮತ್ತು ಫೋನಾಯಿಸಿದಾಗಲೆಲ್ಲಾ ಒಡಹುಟ್ಟಿದ ಸಹೋದರನಂತೆ ತುಂಬು ಪ್ರೀತಿಯಿಂದಲೂ ಆಪ್ಯಾಯತೆಯಿಂದಲೂ "ಹೇಳು ವೀರೂ..." ಎಂದೇ ಮಾತು ಶುರು ಮಾಡುವ ನನ್ನ ನೆಚ್ಚಿನ ಕತೆಗಾರ ಮಹಾಂತೇಶ ನವಲಕಲ್ ಅವರಿಗೆ ಮತ್ತು ಕಂಡಾಗಲೆಲ್ಲಾ ತಮ್ಮ ನಿಷ್ಕಲ್ಮಷ ನಗುವಿನಿಂದಲೇ “ಕವಿಗಳೇ ಕಥಾ ಸಂಕಲನ ಯಾವಾಗ ಕೈಗೆ ಕೊಡ್ತೀರಿ? ಅಥವಾ ಕೈ ಕೊಡ್ತೀರೋ" ಎಂಬ ಸಲಿಗೆಯ ಮಾತುಗಳಿಂದಲೇ ನನ್ನ ಸೋಮಾರಿತನವನ್ನು ಜಾಗೃತಗೊಳಿಸುವ ಗೆಳೆಯ ಜಾಜಿ ದೇವೇಂದ್ರಪ್ಪ ಅವರ ಪ್ರೀತಿಗೆ ಪ್ರತಿಯಾಗಿ ಪ್ರೀತಿಯನಲ್ಲದೇ ಮತ್ತೇನನ್ನು ಕೊಡಲು ಸಾಧ್ಯ?

ಇನ್ನು ಪ್ರಕಟಣೆಯ ಕುರಿತಂತೆ ಹೇಳಿಕೊಳ್ಳಬಹುದಾದ ಎರಡು ಮಾತುಗಳು ಉಳಿದುಕೊಂಡಿವೆ. ಹೊಸಬರ ಪುಸ್ತಕಗಳನ್ನು ಪ್ರಕಟಿಸುವ ಧೈರ್ಯ ಮಾಡದೇ ಇರುವ ಪ್ರಕಾಶನ ಸಂಸ್ಥೆಗಳಿರುವ ಈ ಕಾಲದಲ್ಲಿ ಪುಸ್ತಕ ಪ್ರಕಟಣೆ ಎನ್ನುವುದು ತುಂಬಾ ಶ್ರಮದಾಯಕವಾಗಿ ಪರಿಣಮಿಸಿದೆ. ಪುಸ್ತಕ ಪ್ರಕಟಣೆ ಎಂಬುದು ನಷ್ಟದ ಬಾಬತ್ತೇ ಎಂದು ಗೊತ್ತಿದ್ದರೂ ಅನಿವಾರ್ಯವಾಗಿ ನನ್ನ ಬಾಳಸಂಗಾತಿಯೇ ಈ ಕಾರ್ಯಕ್ಕೆ ಈಡಾಗಬೇಕಿದೆ. ಈ ವಿಷಯದಲ್ಲಿ ಅವಳ ಧೈರ್ಯ ಸಾಹಸಗಳನ್ನು ಮೆಚ್ಚಬೇಕಾದದ್ದೇ! ನಿಜವಾಗಿಯೂ ಓದುಗ ಮಹಶಯರೊಂದೇ ನಮ್ಮನ್ನು ಗೆಲುವಿನ ಹೊಸ್ತಿಲಿಗೆ ತಲುಪಿಸಬಲ್ಲರೆಂಬ ಅಧಮ್ಯ ಆಕಾಂಕ್ಷೆಯೊಂದಿಗೆ ನಮ್ಮದೇ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿಕೊಂಡು "ವಿಜಯ ಬುಕ್ಸ್" ಹೆಸರಿನಡಿಯಲ್ಲಿ ಪುಸ್ತಕ ಬೆಳಕು ಕಾಣುತ್ತಿದೆ. ಇಲ್ಲಿನ ಕಥೆಗಳು ಓದುಗರನ್ನು ಖಂಡಿತವಾಗಿಯೂ ನಿರಾಸೆಗೊಳಿಸುವುದಿಲ್ಲವೆಂಬ ಭರವಸೆಯಂತೂ ನನಗಿದೆ. ಕೊಂಡು ಓದಿ ಪ್ರೋತ್ಸಾಹಿಸುತ್ತೀರೆಂಬ ಆಕಾಂಕ್ಷೆಯೂ ನನ್ನದಾಗಿದೆ.

ಮತ್ತು ನನ್ನ ಈ ಸಹಯಾನದಲ್ಲಿ ಜೊತೆಗೂಡಿದ ಮತ್ತು ಆಷ್ಟರಾದಂತಹ ಎಸ್ ಎಸ್ ಬಳಿಗಾರ್, ವೆಂಕಟಪ್ಪ ಗಿರಿಯಪ್ಪ, ಡಾ.ಅರವಿಂದ ಪಟೇಲ್, ಚಂದ್ರಕಾಂತ ವಡ್ಡು, ನಿಷ್ಠಿ ರುದ್ರಪ್ಪ, ಸಿದ್ದರಾಮ ಕಲ್ಮಠ, ವೆಂಕಟೇಶ ಉಪ್ಪಾರ, ಚೋರನೂರು ಕೊಟ್ರಪ್ಪ, ಕೆ. ವಿ. ನಾಗರೆಡ್ಡಿ, ಈ. ಗೋವರ್ಧನ ರೆಡ್ಡಿ, ಸೃಜನ್, ವಿ. ಬಿ. ಮಲ್ಲಪ್ಪ, ಟಿ. ಎಸ್ .ಗೊರವರ, ಮುದಿರಾಜ ಬಾಣದ, ಸುಮಿತ್ ಮೇತ್ರಿ, ಶ್ರೀಧರ ಬನವಾಸಿ, ಪ್ರವೀಣಕುಮಾರ ಜಿ., ಪ್ರವೀಣಕುಮಾರ್ ದೈವಜ್ಞಾಚಾರ್ಯ, ಶಾಂತಿ. ಕೆ. ಅಪ್ಪಣ್ಣ, ಸ್ವಾಮಿ ಪೊನ್ನಾಚಿ, ಹನುಮಂತ ಹಾಲಿಗೇರಿ, ಪಿ.ಆ‌ರ್.ವೆಂಕಟೇಶ್, ಅಬ್ದುಲ್ ಹೈ, ದಸ್ತಗೀರ್‌ಸಾಬ್ ದಿನ್ನಿ, ಚಾಂದ್ ಪಾಷ, ಎಸ್.ಅನ್ಸರ್ ಬಾಷಾ, ಪಿ.ನಾರಾಯಣ ರೆಡ್ಡಿ, ಕೋಳೂರು ಚಂದ್ರಶೇಖರ ಗೌಡ, ಡಾ.ಸಂಪಿಗೆ ನಾಗರಾಜ್, ಹುಲಿಕಟ್ಟಿ ಚನ್ನಬಸಪ್ಪ, ಎಂ.ಪಂಪಾಪತಿ, ದಿವಾಕರನಾರಾಯಣ, ಚಾಗಿ ರಾಘವೇಂದ್ರ ಶೆಟ್ಟಿ, ಮಂಜುನಾಥ ಯಾಡ್ತಿ, ಹರಿನಾಥ ಬಾಬು, ನಿರ್ಮಲಾ ಶೆಟ್ಟರ್ ಮತ್ತು ತೆಕ್ಕಲಕೋಟೆಯ ಎಂ.ಅರ್.ಬದರಿನಾಥ, ಟಿ.ಎಂ.ಆರ್.ಶ್ರೀನಿವಾಸ, ಶ್ರೀಪಾದ ಶಾಬಾದಿ, ಸುಧೀರ್ ಸಾಲಿಮಠ ಅಲ್ಲದೆ ನನ್ನೂರಿನ ಶಿಲಾಯುಗದ ನೆಲೆಗಳ ಬಗ್ಗೆ ಸ್ವತಃ ವಿಶೇಷ ಆಸಕ್ತಿವಹಿಸಿ ಕ್ಷೇತ್ರಕಾರ್ಯದಲ್ಲಿ ತೊಡಗಿರುವ ಕಿರಿಯ ಸ್ನೇಹಿತ ಸಿ.ಎಂ. ಮನೋಹರ, ಇತ್ತೀಚೆಗೆ ನಮ್ಮನ್ನಗಲಿದ ಆತೀಯ ಕ್ರಿಯಾಶೀಲ ಗೆಳೆಯ ಟಿ.ಎಂ.ಪಂಪಾಪತಿ, ಮತ್ತು ಪ್ರೀತಿಯ ಸಹೋದರಿಯರಾದ ಪಿ.ಅನಂತಲಕ್ಷ್ಮಿ, ಶೋಭಾ ಎಸ್.ಆರ್, ತಾರಾದೇವಿ ನಾಯಕ್, ವಾಣಿ ಬಣಕಾರ, ಕೀರ್ತಿ ಹಂದಿಹಾಳು, ಬಿಸಾ ಐಶ್ವರ್ಯಲಕ್ಷ್ಮಿ ಮತ್ತು ಮಗಳ ಸಮವಲ್ಲ ಸಾಕ್ಷಾತ್ ಮಗಳೇ ಆಗಿರುವ ಬೆಂಗಳೂರಿನ ಕುಮಾರಿ ಡಾ. ಶ್ವೇತಾ... ಹಾಗೇ ನನ್ನ ಇನ್ನಿತರ ಎಲ್ಲ ಸಾಹಿತ್ಯಕ ಮತ್ತು ಸಾಂಸ್ಕೃತೀಕ ಚಟುವಟುಕೆಗಳಿಗೆಲ್ಲ ಸದಾ ಬೆಂಗಾವಲಂತಿದ್ದು ಪೊರೆಯುತ್ತಿದ್ದ ನನ್ನೂರಿನ ದಿವಂಗತ ಬಿ. ಮಾರುತಿ ಅಣ್ಣನವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದೂ ನನ್ನ ಆದ್ಯಕರ್ತವ್ಯವೆಂದೇ ಭಾವಿಸುವೆ. ನನ್ನ ಆರ್ಥಿಕ ಬೆಳವಣಿಗೆಗೆ ಸದಾ ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿದ್ದ ದಿವಂಗತ ಎಂ. ರಾಮಮೂರ್ತಿ ಶೆಟ್ಟಿಯವರನ್ನೂ ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತೇನೆ. ಮತ್ತಿತರ ಅನೇಕ ಗೆಳೆಯರ ಹೆಸರುಗಳನ್ನು ಸ್ಥಳಾಭಾವದಿಂದಾಗಿ ಇಲ್ಲಿ ಉಲ್ಲೇಖಿಸಲು ಸಾದ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ.

ಇಲ್ಲಿನ ಕಥೆಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದಂಥ ನಾಡಿನ ಪತ್ರಿಕೆಗಳಾದ ಮಯೂರ, ಸಂಕ್ರಮಣ, ಕರವೇ ನಲ್ನುಡಿ, ಉತ್ಥಾನ ಪತ್ರಿಕೆಗಳಿಗೆ ನನ್ನ ಅನಂತ ಕೃತಜ್ಞತೆಗಳು ಸಲ್ಲುತ್ತವೆ. ಹಾಗೂ ಈ ಕಥಾ ಸಂಕಲನಕ್ಕೆ ಮುನ್ನುಡಿಯೆಂಬ ನಾಲ್ಕು ಮಾತುಗಳನ್ನು ಬರೆದು ಹಾರೈಸಿದ ನಾಡಿನ ಹಿರಿಯ ಬರಹಗಾರರಾದ ಶ್ರೀಜಿ.ಪಿ.ಬಸವರಾಜು ಸರ್ ಅವರ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಮತ್ತು ತಮ್ಮ ಬೆನ್ನುಡಿಯ ಮಾತುಗಳಿಂದ ನನ್ನಲ್ಲಿ ಮತ್ತಷ್ಟು ಹುರುಪು ತುಂಬಿದ. ಲೇಖಕರು ಕಥೆಗಾರರೂ ಆದ ಶ್ರೀಕೇಶವ ಮಳಗಿ ಇವರಿಗೂ ಸಹ ನನ್ನ ಹೃತ್ತೂರ್ವಕ ಕೃತಜ್ಞತೆಗಳು ಸಲ್ಲುತ್ತವೆ. ಅಲ್ಲದೆ ಅಂದವಾದ ಮತ್ತು ಅರ್ಥಪೂರ್ಣವಾದ ಮುಖಪುಟವನ್ನು ಮತ್ತು ಒಳಚಿತ್ರಗಳನ್ನು ರಚಿಸಿಕೊಟ್ಟುದಲ್ಲದೇ ಪೇಜ್ ಲೇಔಟ್ ಮಾಡಿಕೊಟ್ಟು ಪುಸ್ತಕವು ಇಷ್ಟೊಂದು ಅಂದವಾಗಿ ಮೂಡಿ ಬರಲು ಕಾರಾಣರಾದ ನಾಡಿನ ಖ್ಯಾತ ಕಲಾವಿದರಾದ ಶ್ರೀ ಮುರುಳೀಧರ ರಾಥೋಡ್ ಇವರನ್ನೂ ಸಹ ಈ ಸಂದರ್ಭದಲ್ಲಿ ನೆನೆಯ ಬಯಸುತ್ತೇನೆ. ಜೊತೆಗೆ ಆಂದವಾದ ಭಾವಚಿತ್ರವನ್ನು ಒದಗಿಸಿಕೊಟ್ಟ ಪುರುಷೋತ್ತಮ ಹಂದ್ಯಾಳ್‌ ಅಣ್ಣನವರನ್ನು ಸಹ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ.

ಜೀವನ ಸಂಗಾತಿಯೂ ಮತ್ತು ಪ್ರಕಾಶಕಿಯಾಗಿಯೂ ಪೊರೆಯುತ್ತಿರುವ ಅರ್ಧಾಂಗಿ ಜಯಶ್ರೀ, ಮಗ ರಾಹುಲ್, ಮಗಳು ಸ್ವಾತಿಬಿಂದು ಮತ್ತಿತರ ಕುಟುಂಬದ ಸದಸ್ಯರೆಲ್ಲರನ್ನೂ ಈ ಸಂದರ್ಭಲ್ಲಿ ಸ್ಮರಿಸಿಕೊಳ್ಳುತ್ತಾ... ಡಂಕಲ್‌ಪೇಟೆಯ ಅಗಸೆ ಬಾಗಿಲಿನವರೆಗೂ ನಿಮ್ಮನ್ನು ಕರೆತಂದಿರುವೆ ಇನ್ನು ಇಲ್ಲಿಂದ ಒಳಗಡೆ ನಿಮ್ಮದೇ ಪ್ರವೇಶ... ನಮಸ್ತೆ, ಹೋಗಿ ಬನ್ನಿ. ಶುಭವಾಗಲಿ.

-ವೀರೇಂದ್ರ ರಾವಿಹಾಳ್

MORE FEATURES

ಜೀವ ಜಾತ್ರೆಯಲ್ಲಿ 'ಜೀನಿ'ಯ ಜೀನು ಹಿಡಿದು..

08-07-2024 ಬೆಂಗಳೂರು

"ಅಲ್ಲಾವುದ್ದೀನನ ದೀಪದಿಂದ ಹೊರಬಂದ 'ಜೀನಿ' ಬಯಸಿದ್ದನ್ನೆಲ್ಲಾ ನೀಡುತ್ತದಂತೆ. ಹಾಗಾದರೆ ನನ್ನ ಸಣ್ಣ ಕಥೆ...

ಓದುತ್ತಿರುವ ಸಾಲನ್ನೇ ಮತ್ತೆ ಮೊದಲಿನಿಂದ ಓದಿಸುತ್ತವೆ...

08-07-2024 ಬೆಂಗಳೂರು

"ಕಲೆ ಮತ್ತು ಕಾಲದ ಸೌಂದರ್ಯವಿರುವುದೇ ಅಲ್ಲಿ. ಅದು ಎಂದಿಗೂ ನವನವೀನ ಮತ್ತು ಅತ್ಯಂತ ಪುರಾತನ. ಈ‌ ಸಂಕಲನದಲ್ಲ...

‘ಕುಣಿಗಲ್ ಟು ಕಂದಹಾರ್’ ಕೃತಿ ಒಂದು ತರಹ ಹಾಲಿವುಡ್ನ ನಿರೂಪಣಾ ಚಿತ್ರದಂತಿದೆ: ಪ್ರಸಾದ್

07-07-2024 ಬೆಂಗಳೂರು

‘ಸೈನ್ಯಾಸ್ತ್ರಗಳ ಬಹಳ ಹತ್ತಿರದಿಂದ ಕಾಲ ಕಳೆದು ಕೆಲಸದವಧಿ ಮುಗಿಸಿ ಮರಳಿ ತಮ್ಮ ಮನೆಗೆ ಬಂದು ಈ ಕೃತಿ ಬರೆದಿದ್ದಾರ...