ಕವಿತೆ ಕಟ್ಟುತ್ತ ಬಿರಾದಾರ ಸೃಷ್ಟಿಸುವ ರೂಪಕ-ಪ್ರತಿಮೆಗಳು ಚೆಲುವಾಗಿವೆ: ಕೇಶವ ಮಳಗಿ


'ಮಧು ತಮ್ಮ ಕಾವ್ಯದ ನಿಧಾನ ನಡಿಗೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಕವಿತೆಗಳ ದೀರ್ಘತೆ. ವಸ್ತು ಬೆಂಕಿಯಂತೆ ಸುಡುತ್ತಿರುವಾಗಲೂ ಅದರ ಧಗೆಯನ್ನು ಮತ್ತೆ ಮತ್ತೆ ಓದುಗನಿಗೆ ತಲುಪಿಸಬೇಕಾದ ಜೂರೂರಿ ಎಷ್ಟೇ ಇದ್ದರೂ ಮರುಕಳಿಸದಂತೆ, ಆದರೆ ಅತಿ ವಿಶಿಷ್ಟ ಸಂವೇದನೆಯಲ್ಲಿ, ಪರಿಣಾಮಕಾರಿ ಹೇಳುವ ಕುಶಲತೆಯನ್ನು ಪಡೆಯುವ ಬಗೆ ಹೇಗೆ ಎಂಬುದು' ಎನ್ನುತ್ತಾರೆ ಹಿರಿಯ ಸಾಹಿತಿ ಕೇಶವ ಮಳಗಿ. ಅವರು ಮಧು ಬಿರಾದಾರ ಅವರ ʻದೊರೆ ನೆತ್ತಿ ಗರುಡʼ ಕವನ ಸಂಕಲನಕ್ಕೆ ಬರೆದ ಅರ್ಥಪೂರ್ಣ ಮುನ್ನುಡಿ ನಿಮ್ಮ ಓದಿಗಾಗಿ.

ಸಂಕೋಚ, ಅಳೆದು ತೂಗಿ ಆಡುವ ಮೆಲುಮಾತು, ಮೃದುತ್ವ, ಧಾವಂತವಿಲ್ಲದ ನಿಧಾನಗತಿಯ ನಡಿಗೆ... ಇವು ಮಧು ಬಿರಾದಾರರನ್ನು ಅರಿತವರಿಗೆ ಕಾಣುವ ಅವರ ಸ್ವಭಾವ. ಇಂಥ ವ್ಯಕ್ತಿತ್ವದವರನ್ನು ತಾರುಣ್ಯದಲ್ಲಿ ʻಕವಿʼ ಎಂದು ಛೇಡಿಸುತ್ತಾರೆ. ಅದಕ್ಕೆ ಅನ್ವರ್ಥವೆನ್ನುವಂತೆ ಮಧು ಕವಿಯೇ ಆಗಿದ್ದಾರೆ!

ತಮ್ಮ ʻಕಾಲದ ರಸೀದಿ ಪುಟʼ ಕವಿತೆಗಳ ಸಂಗ್ರಹದ ನಂತರ ಆತುರ ತೋರದೆ ಧಾನ್ಯಸ್ಥ ಸ್ಥಿತಿಯ ಅವಲೋಕನದ ಬಳಿಕ ಮಧು ಇದೀಗ ತಮ್ಮ ಎರಡನೆಯ ಸಂಕಲನ ʻದೊರೆ ನೆತ್ತಿ ಗರುಡʼ ಸಂಕಲನ ಹೊರ ತರುತ್ತಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಬರೆದ ನಲ್ವತ್ತಾರು ಕವನಗಳು ಇಲ್ಲಿವೆ. ತಮ್ಮ ಮೊದಲ ಕವಿತಾಗುಚ್ಛಗಳಲ್ಲಿ ತೋರಿದ್ದ ಕಾವ್ಯಪ್ರೀತಿ, ಕಟ್ಟೋಣದ ಶ್ರದ್ಧೆಗಳೊಂದಿಗೆ ಕವಿಗೆ ಅಗತ್ಯವಾದ ಅನೇಕ ಹೊಸ ಕುಶಲತೆಗಳನ್ನು ಬಿರಾದಾರ ಇಲ್ಲಿ ಗಳಿಸಿದ್ದಾರೆ. ಆಧುನಿಕ ಕಾವ್ಯದ ಸತತ ಅಭ್ಯಾಸ ಈ ದಾರಿಯಲ್ಲಿ ಅವರನ್ನು ನಡೆಸುತ್ತಿದೆ.

ಈ ಸಂಗ್ರಹದ ಕವಿತೆಗಳನ್ನು ಮತ್ತೆ ಮತ್ತೆ ಓದಿದಾಗ ಮುಖಾಮುಖಿಯಾದ ನುಡಿಗಟ್ಟು ಹೀಗಿವೆ: ಅಂತರ್ಮುಖತೆ, ಸ್ವವಿಮರ್ಶೆ, ವರ್ತಮಾನದ ಕುರಿತು ನಿತಾಂತ ಕಳಕಳಿ, ಲೋಕದ ಸೋಗಿನ ಬಗೆಗೆ ಕಳವಳ, ಒಡಲು ತಡೆಯದೇ ಉಕ್ಕುವ ಆಕ್ರಂದನ, ಒಂದು ಅಪ್ಪಟ ಪ್ರೀತಿಗಾಗಿ ಹಾತೊರೆವ ಹಂಬಲ, ದುಗುಡ ತುಂಬಿದ ಭಾವ ಇತ್ಯಾದಿ.

ಕವಿತೆಯಲ್ಲಿ ಇವೆಲ್ಲವನ್ನೂ ಪಡೆವ ಪ್ರಯತ್ನದಲ್ಲಿ ಮಧು ಸಂಕಲನ ಉದ್ದಕ್ಕೂ ಸಾಧಿಸಿರುವ ಸಾತತ್ಯ, ಮುಕ್ತಛಂದದಲ್ಲಿ ಲಯಗಾರಿಕೆ ತರಲು ನಡೆಸಿರುವ ಪ್ರಯೋಗಶೀಲತೆ ಮತ್ತು ರೂಕ್ಷತೆಯನ್ನು ನಯವಾಗಿ ಬಡಿದು, ಸೂಕ್ಷ್ಮ ವ್ಯಂಗ್ಯವನು ಲೇಪಿಸಿ ಮೃದುಗೊಳಿಸುವ ಕುಶಲತೆ ಎದ್ದು ಕಾಣುತ್ತವೆ.

ವರ್ತಮಾನದ ಸಾಮಾಜಿಕ ಆಗುಹೋಗು, ಬೇರೂರಿರುವ ಅಸಮಾನತೆ, ಬಲಹೀನರನ್ನು ನಿರಂತರವಾಗಿ ಕಾಡುವ ದುಷ್ಟತನ ಮತ್ತು ದಾಷ್ಟ್ಯಗಳ ಬಹುಪಾಲು ಕವಿತೆಗಳಲ್ಲಿ ಸ್ಥಾನ ಪಡೆದಿರುವುದು ಕವಿಯ ಕಳಕಳಿ ಮತ್ತು ಆಸ್ಥೆಯಿಂದ. ಎಲ್ಲವೂ ಬದಲಾಗಬೇಕು ಎಂಬ ಹಂಬಲದಿಂದ. ಕವಿತೆ ಕಟ್ಟುತ್ತ ಬಿರಾದಾರ ಸೃಷ್ಟಿಸುವ ರೂಪಕ-ಪ್ರತಿಮೆಗಳು ಚೆಲುವಾಗಿವೆ. ಅಥವ ಅಲುಗಿಸುವಷ್ಟು ಶಕ್ತವಾಗಿವೆ.

ನೆತ್ತರ ಉಂಡವನ ಗಂಗಾಳದಲ್ಲಿ
ಅಂಬಲಿ ಎಂಜಲು ಹುಡುಕುವಿಯಲ್ಲೋ ಮರುಳಾ
(ದೊರೆ ನೆತ್ತಿ ಗರುಡ)

ಬದುಕಿನ ಮರಳುಗಾಡಲಿ ಇಂಗುವ
ನಮ್ಮ ಕಣ್ಣೀರು ಯಾವತ್ತೂ ನಿಂತಿಲ್ಲ
(ನಿನ್ನ ಬೆವರು ಘೋಷವಾಕ್ಯ)

ಸೂರ್ಯನೂ ಸೀರೆ ತೊಟ್ಟಿದ್ದಾನೆ
ಗಾಳಿ ಚಳಿಯ ಜಂಟಿ ಸಹಭಾಗಿತ್ವಕ್ಕೆ
(ರಿಮ್ಯಾಂಡ್‌ಹೋಮಿನ ಅಪರಾಧಿ)

ಪೆನ್ನು ಜಾರಿಬಿದ್ದಂತೆ ಕವಿತೆ
ಋತುಮಾನಕ್ಕೆ ಉರುಳಿ
ಈ ಚಳಿಗೆ ಹಂಸದಂತೆ
ನೀರ ಅಲೆಯ ಸಾಲು
ಕವಿತೆಯಂತೆ ಪ್ರೀತಿ
*

ನಿನ್ನ ವಿರಹದ ಚಡಪಡಿಕೆ
ಒಂದಿಷ್ಟು ಮುಂದುವರೆಯಲಿ
ಮಾಗಿ ಮಾಗುವತನಕ
ಈ ಹೊಸ ಕಾಲ ಮುಗಿದು
ಮೂಡಲ ದಿಕ್ಕಿಗೆ ಬೆಳ್ಳಿ ಚುಕ್ಕಿ ಮೂಡುವ ತನಕ
(ಹಿಮ)

ಇಲ್ಲಿ ಸೂಚಿಸಿದ ಕೆಲವು ಸಾಲುಗಳು ಮತ್ತು ಉಲ್ಲೇಖಿಸದ ಕವಿತೆಗಳ ಒಟ್ಟಾರೆ ಧ್ವನಿ ಮತ್ತು ಉದ್ದೇಶ ಸ್ವಸ್ಥ ಸಮಾಜ, ನಿಷ್ಕಲ್ಮಶ ಪ್ರೀತಿ, ಇಬ್ಬಗೆಯಿಲ್ಲದ ಬದುಕನ್ನು ಕನಸುವುದೇ ಆಗಿದೆ.

ಮಧು ತಮ್ಮ ಕಾವ್ಯದ ನಿಧಾನ ನಡಿಗೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಕವಿತೆಗಳ ದೀರ್ಘತೆ. ವಸ್ತು ಬೆಂಕಿಯಂತೆ ಸುಡುತ್ತಿರುವಾಗಲೂ ಅದರ ಧಗೆಯನ್ನು ಮತ್ತೆ ಮತ್ತೆ ಓದುಗನಿಗೆ ತಲುಪಿಸಬೇಕಾದ ಜೂರೂರಿ ಎಷ್ಟೇ ಇದ್ದರೂ ಮರುಕಳಿಸದಂತೆ, ಆದರೆ ಅತಿ ವಿಶಿಷ್ಟ ಸಂವೇದನೆಯಲ್ಲಿ, ಪರಿಣಾಮಕಾರಿ ಹೇಳುವ ಕುಶಲತೆಯನ್ನು ಪಡೆಯುವ ಬಗೆ ಹೇಗೆ ಎಂಬುದು.

ಇದು ಮಧು ಬಿರಾದರ ಅವರಿಗೆ ಮಾತ್ರ ಸಂಬಂಧಿಸಿದಲ್ಲ. ಈ ಯುಗಧರ್ಮದ ಕಾವ್ಯ ಕೇಳಿಕೊಳ್ಳಬೇಕಾದ ಅಥವ ಕಟ್ಟೋಣದಲ್ಲಿ ಸಾಧಿಸಬೇಕಾದ ಅಂಶವಾಗಿದೆ. ಅದಕ್ಕೆ ಕಾರಣವಿಷ್ಟೆ: ವರ್ತಮಾನದ ಕಾವು ಹುಟ್ಟು ಹಾಕುವ ಬೇಗುದಿ, ತನ್ನ ಕಾಲಘಟ್ಟದಲ್ಲಿ ಒಂದು ಸಾಮಾನ್ಯ ಸಹಜ ಸಂಗತಿಯಾಗಿ, ಅಭಿವ್ಯಕ್ತಿಯ ಮುಂಚೂಣಿಯಲ್ಲಿರುವ ವಸ್ತುವಿಷಯವು ಕವಿಯಲ್ಲಿ ಆತಂಕ ಮತ್ತು ಒತ್ತಡವನ್ನು ಹುಟ್ಟು ಹಾಕುತ್ತಿದೆಯೆ? ಕವಿಯ ತನ್ನ ವಿಶಿಷ್ಟ ಅನುಭವವನ್ನು ಹೇಳಬೇಕೆಂದಿದ್ದರೂ, ಸಮೂಹಗಾನಕ್ಕೆ ತನ್ನ ದನಿಯನ್ನು ಸೇರಿಸಬೇಕಾದ ನೈತಿಕ ಸಂದಿಗ್ಧತೆಯನ್ನು ಅನುಭವಿಸುತ್ತಿದ್ದಾನೆಯೇ? ಅಥವ ಕವಿಯ ಅಂತರಂತದ ಭಾವನೆಯೂ ಅದೇ ಆಗಿದ್ದರೂ ತನ್ನ ನುಡಿಗಟ್ಟಿಗೆ ಬದಲಾಗಿ ಚಲಾವಣೆಯಲ್ಲಿರುವ, ಬಲುಬೇಗ ಸವಕಲಾಗುವ ಪದಗಳನ್ನು ಹೆಕ್ಕುವ ಧಾವಂತಕ್ಕೆ ಒಳಗಾಗುತ್ತಿದ್ದಾನೆಯೆ? ಸದ್ಯ ಕಾವ್ಯ ಕಟ್ಟೋಣದಲ್ಲಿ ನಿರತರಾದ ತಲೆಮಾರಿನ ಕವಿಗಳೇ ಕಂಡುಕೊಳ್ಳಬೇಕಾದ ಉತ್ತರಗಳು.

ಉತ್ತರದ ಗೊಡವೆ ಹೇಗೂ ಇರಲಿ. ಇಷ್ಟಕ್ಕೂ ಎಲ್ಲ ಸಂದೇಹಗಳಿಗೂ ಖಚಿತ ಉತ್ತರ ಲಭ್ಯವಿದೆ ಎಂಬ ಭರವಸೆಯೂ ಅಲ್ಲಿಯೇ ಇರಲಿ. ತನ್ನೆಲ್ಲ ಆತಂಕಗಳ ನಡುವೆಯೇ ಹೊಸ ತಲೆಮಾರಿನ ಕನ್ನಡ ಕಾವ್ಯ ಪ್ರಯೋಗಶೀಲತೆಯಲ್ಲಿ ನಿರತವಾಗಿದೆ. ನಡೆಯುತ್ತ ಸಂದೇಹಗಳಿಗೆ ಸಮಾಧಾನವನ್ನು ಕಂಡುಕೊಳ್ಳಬಹುದು. ಇಲ್ಲವೆ, ಹೊಸ ಪ್ರಶ್ನೆಗಳನ್ನೇ ಕೇಳಿಕೊಳ್ಳಬಹುದು. ಮಧು ಬಿರಾದರ ಈ ಎರಡೂ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಕವಿತೆಗಳನ್ನು ಸಮಾಧಾನಚಿತ್ತದಿಂದ, ಗಂಭೀರವಾಗಿ ಓದಬೇಕಾದ ಅಗತ್ಯವಿದೆ. ʻದೊರೆ ನೆತ್ತಿಯ ಗರುಡʼ ಸಹೃದಯರ ಮೆಚ್ಚುಗೆಯನ್ನು ಪಡೆಯಲಿ.

ಕೇಶವ ಮಳಗಿ

 

MORE FEATURES

ಜೀವ ಜಾತ್ರೆಯಲ್ಲಿ 'ಜೀನಿ'ಯ ಜೀನು ಹಿಡಿದು..

08-07-2024 ಬೆಂಗಳೂರು

"ಅಲ್ಲಾವುದ್ದೀನನ ದೀಪದಿಂದ ಹೊರಬಂದ 'ಜೀನಿ' ಬಯಸಿದ್ದನ್ನೆಲ್ಲಾ ನೀಡುತ್ತದಂತೆ. ಹಾಗಾದರೆ ನನ್ನ ಸಣ್ಣ ಕಥೆ...

ಓದುತ್ತಿರುವ ಸಾಲನ್ನೇ ಮತ್ತೆ ಮೊದಲಿನಿಂದ ಓದಿಸುತ್ತವೆ...

08-07-2024 ಬೆಂಗಳೂರು

"ಕಲೆ ಮತ್ತು ಕಾಲದ ಸೌಂದರ್ಯವಿರುವುದೇ ಅಲ್ಲಿ. ಅದು ಎಂದಿಗೂ ನವನವೀನ ಮತ್ತು ಅತ್ಯಂತ ಪುರಾತನ. ಈ‌ ಸಂಕಲನದಲ್ಲ...

‘ಕುಣಿಗಲ್ ಟು ಕಂದಹಾರ್’ ಕೃತಿ ಒಂದು ತರಹ ಹಾಲಿವುಡ್ನ ನಿರೂಪಣಾ ಚಿತ್ರದಂತಿದೆ: ಪ್ರಸಾದ್

07-07-2024 ಬೆಂಗಳೂರು

‘ಸೈನ್ಯಾಸ್ತ್ರಗಳ ಬಹಳ ಹತ್ತಿರದಿಂದ ಕಾಲ ಕಳೆದು ಕೆಲಸದವಧಿ ಮುಗಿಸಿ ಮರಳಿ ತಮ್ಮ ಮನೆಗೆ ಬಂದು ಈ ಕೃತಿ ಬರೆದಿದ್ದಾರ...