ಇಲ್ಲಿ ಪ್ರತೀಪನದ್ದೇ ಮುಖ್ಯ ಪಾತ್ರವೆಂದರೂ.. ಆತನನ್ನು ನಾಯಕನೆಂದು ಒಪ್ಪಿಕೊಳ್ಳಲು ಏಕೋ ನನ್ನ ಮನಸ್ಸು ಅಷ್ಟು ಒಡಂಬಡುತ್ತಿಲ್ಲ. ಹಾಗಾಗಿ, ಆತ ಕಥಾನಾಯಕನೇ ಆದರೂ ಆತನನ್ನು ಕಥೆಯ ಮುಖ್ಯ ಪಾತ್ರವೆಂದೇ ಹೇಳುತ್ತಾ ಸಾಗುತ್ತೇನೆ. ಹಾಗೆಂದು ಈ ಕಾದಂಬರಿ ಕೇವಲ ಪ್ರತೀಪನೊಬ್ಬನ ಕಥೆಯಲ್ಲ. ಮುಖ್ಯವಾಗಿ ಈ ಕಾದಂಬರಿಯಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆರು ಚಿತ್ತವೃತ್ತಿಗಳ ಮಾನವ ಸ್ವರೂಪದ ಕಥೆ," ಎನ್ನುತ್ತಾರೆ ವಿಭಾ ವಿಶ್ವನಾಥ್. ಅವರು ಆಶಾ ರಘು ಅವರ ‘ಆವರ್ತ’ ಕಾದಂಬರಿ ಕುರಿತು ಬರೆದಿರುವ ವಿಮರ್ಶೆ.
ಪೌರಾಣಿಕ ಕಾದಂಬರಿಗಳು ಎಂದರೆ ಮನಸ್ಸಿನಲ್ಲಿ ಮೊದಲಿಗೆ ಪುರಾಣದ ವಾತಾವರಣ ಸೃಷ್ಟಿಯಾಗಿ ಬಿಡುತ್ತದೆ. ಇದು ನಮ್ಮ ರಾಮಾಯಣ ಹಾಗೂ ಮಹಾಭಾರತದಂತಹಾ ಪೌರಾಣಿಕ ಕಥೆಗಳ ಪ್ರಭಾವವೂ ಆಗಿರಬಹುದು. ಆದರೆ, ಇಲ್ಲಿ 'ಆವರ್ತ' ಬೃಹತ್ ಕಾದಂಬರಿಯಾಗಿದ್ದರೂ ಮನಸ್ಸಿನಲ್ಲಿ ಬಹಳ ಕಾಲ ಉಳಿಯುವಂತಹಾ ಪೌರಾಣಿಕ ಕಾದಂಬರಿ. ಇಲ್ಲಿ ಕಥೆಗಳೊಳಗೆ ಕಥೆಗಳಿಲ್ಲದಿದ್ದರೂ.. ಆಗಾಗ ಬರುವ ಗತ ಹಾಗೂ ವಾಸ್ತವಗಳು ಕಥೆಯ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುತ್ತಲೇ ನಮ್ಮ ಕುತೂಹಲವನ್ನು ಬೆಳೆಸುತ್ತಾ ಹೋಗುತ್ತದೆ. ಈ ಕಾದಂಬರಿಯ ಭಾಷೆ ಸಹಾ ಪೌರಾಣಿಕ ಪರಿಸರದಲ್ಲಿದ್ದಂತೆ ಕಟ್ಟಿಕೊಟ್ಟರೂ.. ಓದುಗರಿಗೆ ಸರಳವಾಗಿ ಅರ್ಥವಾಗುವಂತಿದೆ. ಇದು ಲೇಖಕರ ಮೊದಲ ಗೆಲುವು ಎಂದರೂ ತಪ್ಪಾಗಲಾರದು.
ಇಲ್ಲಿ ಪ್ರತೀಪನದ್ದೇ ಮುಖ್ಯ ಪಾತ್ರವೆಂದರೂ.. ಆತನನ್ನು ನಾಯಕನೆಂದು ಒಪ್ಪಿಕೊಳ್ಳಲು ಏಕೋ ನನ್ನ ಮನಸ್ಸು ಅಷ್ಟು ಒಡಂಬಡುತ್ತಿಲ್ಲ. ಹಾಗಾಗಿ, ಆತ ಕಥಾನಾಯಕನೇ ಆದರೂ ಆತನನ್ನು ಕಥೆಯ ಮುಖ್ಯ ಪಾತ್ರವೆಂದೇ ಹೇಳುತ್ತಾ ಸಾಗುತ್ತೇನೆ. ಹಾಗೆಂದು ಈ ಕಾದಂಬರಿ ಕೇವಲ ಪ್ರತೀಪನೊಬ್ಬನ ಕಥೆಯಲ್ಲ. ಮುಖ್ಯವಾಗಿ ಈ ಕಾದಂಬರಿಯಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆರು ಚಿತ್ತವೃತ್ತಿಗಳ ಮಾನವ ಸ್ವರೂಪದ ಕಥೆ.
ಈ ಕಾದಂಬರಿ ಯಾವುದೋ ಪುರಾಣ ಕಥೆ ಅಥವಾ ಸಂದರ್ಭದಿಂದ ಪ್ರೇರಿತವಾದ ಕಥೆಯಲ್ಲ. ಬದಲಾಗಿ, ಲೇಖಕಿಯ ಚಿತ್ತಭಿತ್ತಿಯಲ್ಲಿ ಮೂಡಿದ ಪಾತ್ರಗಳು ಹಾಗೂ ಅಲ್ಲಿನ ಪರಿಸರ. ಅವುಗಳನ್ನು ಪೌರಾಣಿಕ ಹಿನ್ನೆಲೆಯಲ್ಲಿ ಕಟ್ಟಿ ಕೊಡುತ್ತಾ ಹೋಗುತ್ತಾರೆ. ಲೇಖಕಿಯೇ ಹೇಳುವಂತೆ ಈ ಕಾದಂಬರಿಯಲ್ಲಿ ಸುಮಾರು 49 ಸ್ಥಳಗಳು ಹಾಗೂ 145ಕ್ಕೂ ಹೆಚ್ಚು ಪಾತ್ರಗಳಿವೆ. ಆದರೆ ಮುಖ್ಯ ಪಾತ್ರಗಳು ಹಾಗೂ ಮುಖ್ಯಸ್ಥಳಗಳ ಉಲ್ಲೇಖ ಮಾತ್ರ ನಾನಿಲ್ಲಿ ಮಾಡುತ್ತಿರುವುದು. ಬೃಹತ್ ಕಾದಂಬರಿಯ ಹರವು ದೊಡ್ಡದಾಗಿಯೇ ಇದ್ದರೂ.. ನಿರೂಪಣಾ ಕ್ರಮ ಮೊದಲಿಗೆ ಹಾಗೂ ಕೆಲವೊಮ್ಮೆ ನನಗೆ ಗೊಂದಲ ಹುಟ್ಟಿಸಿತು.
ಪ್ರತೀಪನ ಅಥವಾ ಕಥೆಯ ಹಿಂದಿನ ಭಾಗವನ್ನು ಹೇಳುವಾಗಲೇ ಹಠಾತ್ತನೆ ಮತ್ತೆ ವಾಸ್ತವಕ್ಕೂ ಬರುತ್ತಾರೆ. ಹಾಗಾಗಿ, ಇದು ಗತದ ಬದುಕು ಅಥವಾ ವಾಸ್ತವದ ಬದುಕು ಎಂದು ತಿಳಿಯಲು ಅವರ ನಿರೂಪಣೆಯ ಭಾಷೆಯಿಂದಲೇ ಅರಿಯಬೇಕು. ಒಂದೆಡೆ ಪ್ರತೀಪ ಎಂದಿದ್ದರೆ ಇನ್ನೊಂದೆಡೆ ನಾನು ಎಂದು ಶುರುವಾಗುತ್ತದೆ. ಹೀಗೆ ಪ್ಯಾರಾಗಳಲ್ಲಿ.. ವಾಸ್ತವಕ್ಕೂ.. ಗತಕ್ಕೂ ಯಾವುದೇ ಪೂರ್ವಪೀಠಿಕೆ ಇಲ್ಲದೆ ಅಥವಾ ತಡೆ ಇಲ್ಲದೆ ಇರುವುದರಿಂದ ಆಗಾಗ ಓದಿನ ಓಘ ಕುಂಟಬಹುದು. ಆದರೆ ಅದು ಕೆಲ ಸೆಕೆಂಡುಗಳಷ್ಟೇ.. ಮತ್ತೆ ಕಥೆಯೊಳಗೆ ಆಳವಾಗಿ ಇಳಿದು ಹೋಗುತ್ತೇವೆ.
ತ್ರಯಂಬಕ ರಾಜ್ಯದ ರಾಜ ಹಿಮಧ್ವಜನಿಗೂ.. ಗಂಧರ್ವನಾಡಿನ ಮಿಥಿಲೆಗೆ ಹುಟ್ಟಿದ ಮಗುವೇ ಪ್ರತೀಪ. ಆದರೆ, ಅಪ್ಪನಿಗೂ ಬೇಡದ ಅಮ್ಮನಿಗೂ ಬೇಡದ ಮಗು ಬೆಳೆದದ್ದು ಮಾತ್ರ ಚೈತ್ಯ ಗುರುಗಳಲ್ಲಿ. ಚೈತ್ರ ಗುರುಗಳು ಆತನನ್ನು ಶಿಷ್ಯನಂತಲ್ಲದೆ, ಮಗನಂತೆ ಕಂಡದ್ದರಿಂದ ಗುರು ಮುಖೇನವೇ ವಿದ್ಯಾಭ್ಯಾಸವಾಗಲಿ ಎಂದು ಬಿಟ್ಟದ್ದು ಫಲ್ಗುಣಾಚಾರ್ಯರ ಬಳಿ. ಫಲ್ಗುಣಾಚಾರ್ಯರು ಹಾಗೂ ಅವರ ಪತ್ನಿ ತಮ್ಮ ಕಳೆದು ಹೋದ ಮಗನನ್ನು ಆತನಲ್ಲಿ ಕಾಣುತ್ತಿದ್ದುದರಿಂದಲೋ.. ಅಥವಾ ಇತರ ವಿದ್ಯಾರ್ಥಿಗಳಿಗಿಂತ ವಿಭಿನ್ನವಾಗಿ, ಚುರುಕಾಗಿ, ಬುದ್ಧಿವಂತನಾಗಿ ಇದ್ದುದರಿಂದಲೋ ಪ್ರತೀಪನಿಗೆ ಹೆಚ್ಚು ಅಕ್ಕರೆ ತೋರುತ್ತಿದ್ದರು. ಆದರೆ, ಅವರ ಆ ಅಕ್ಕರೆಯನ್ನು ಪ್ರದೀಪ ಕಳೆದುಕೊಂಡ. ವಿದ್ಯಾಭ್ಯಾಸ ಪೂರ್ಣವಾಗುವ ಮುನ್ನವೇ ಆತ ಆಶ್ರಮದಿಂದ ಹೊರಕ್ಕೆ ಹಾಕಲ್ಪಟ್ಟ. ಅದಕ್ಕೆ ಕಾರಣಗಳೂ ಇಲ್ಲದ್ದಿಲ್ಲ..
ಮೊದಲಿಗೆ ಆತನ ಬದುಕಲ್ಲಿ ಬಂದ ಹುಡುಗಿ ಪ್ರಮದ್ವರೆ. ಆಕೆ ತನ್ನ ಸೌಂದರ್ಯದಿಂದ ಆತನನ್ನು ಮೋಹಗೊಳಿಸಿದಳು. ಜೊತೆಗೆ ಆಕೆಯ ಗಾಯನದಿಂದಲೂ.. ಆಕೆಯತ್ತ ಸೆಳೆತ ಹೆಚ್ಚಾಗಿ, ವಿದ್ಯಾಭ್ಯಾಸದತ್ತ ಒಲವು ಕಡಿಮೆಯಾಯಿತು. ಪ್ರಮದ್ವರೆಯ ಬದುಕು ವಿಚಿತ್ರ. ಗಾಯನ ಕಲಿಯಲು ಕಾಡಿನಲ್ಲಿ ಒಬ್ಬಂಟಿಯಾಗಿ ಗುರುಗಳ ಜೊತೆ ಕಳೆಯಬೇಕಾಗಿತ್ತು. ಆದರೆ, ನಡೆದ ಕೆಲವು ಘಟನೆಗಳು ಪ್ರಮದ್ವರೆಯನ್ನು ಕಣ್ಮರೆಯಾಗುವಂತೆ ಮಾಡಿದಾಗ ಪ್ರತೀಪ ಗುರುಗಳೊಟ್ಟಿಗೆ ಮತ್ತೆ ಹೆಚ್ಚು ಬೆರೆಯತೊಡಗಿದ. ಆಗ ಗುರುವಿನೊಡನೆ ಪ್ರವೇಶಿಸಿದ್ದು ಮಧುವಂತಿಯ ಭವನವನ್ನು.
ಆತನಲ್ಲಿ ಕಾಮದ ಪರಿಚಯ ಮಾಡಿಸಿದ್ದೇ ಮಧುವಂತಿ. ಗುರುಗಳೇ ಆ ಸೆಳೆತದಲ್ಲಿ ಸಿಕ್ಕಿರುವಾಗ ತನ್ನದೇನು ಎಂಬ ಭಾವ ಆತನಲ್ಲಿ ಇದನ್ನು ಪ್ರೇರೇಪಿಸಿರಬಹುದು. ಆದರೆ, ಗುರುಗಳಿಗೆ ಈ ವಿಚಾರ ತಿಳಿಯಲು ಹೆಚ್ಚು ದಿನಗಳೇನೂ ಬೇಕಿರಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಆಶ್ರಮದಲ್ಲಿ ನಡೆದ ಘಟನೆಯೊಂದು ಕಾರಣವಾಗಿ ಎರಡರ ಸಮ್ಮಿಶ್ರಣದಂತೆ ಆತ ಆಶ್ರಮದಿಂದ ಹೊರಕ್ಕೆ ಹಾಕಲ್ಪಟ್ಟ. ಆಗ ಹುಟ್ಟದ ಕ್ರೋಧ ಆತನಲ್ಲಿ ಮುಂದೆ ಹುಟ್ಟುತ್ತದೆ.
ಫಲ್ಗುಣಾಚಾರ್ಯರು ಕಲಿಸಿದ್ದ ವಿದ್ಯೆಯನ್ನೇ ಮೆಟ್ಟಿಲಾಗಿಸಿಕೊಂಡು ಆತ ಮಕರಕೇತು ರಾಜನ ಆಶ್ರಯದಲ್ಲಿ ನೆಲೆ ನಿಲ್ಲುತ್ತಾನೆ. ಸೇನೆಯಲ್ಲಿ ಉನ್ನತ ಸ್ಥಾನ ಪಡೆಯುತ್ತಾನೆ. ಆದರೆ, ಆತ ಒಮ್ಮೆ ರಾಜಕುಮಾರಿ ಲಾಕ್ಷಿಯ ಅಂಗರಕ್ಷಕನಾಗಿ ಹೋದ ದಿನ ಆತನ ಮನಸ್ಸು ಸರಿಯಿರಲಿಲ್ಲ. ಅದಕ್ಕೆ ಕಾರಣವೂ ಒಂದು ಹೆಣ್ಣು. ಅಂದು ಲಾಕ್ಷಿ ಕೆನ್ನೆಗೆ ಹೊಡೆದ ಪರಿಣಾಮ.. ಈತನೂ ಆಕೆಯ ಕೆನ್ನೆಗೆ ಹೊಡೆದು ಅದು ದೊಡ್ಡ ಹಗರಣವಾಗಿ ರಾಜ್ಯದಿಂದ ಬಹಿಷ್ಕಾರ ಹಾಕಿಸಲ್ಪಟ್ಟುಕೊಂಡು ಅವಮಾನದಿಂದಲೇ ರಾಜ್ಯದಿಂದ ಹೊರ ನಡೆಯುತ್ತಾನೆ. ಆಗಲೇ ಹುಟ್ಟಿದ್ದು ಕ್ರೋಧ.
ಆದರೆ, ಅದೆಲ್ಲವನ್ನು ಮುಚ್ಚಿಟ್ಟು ತನ್ನ ಲೋಭದ ಮೆಟ್ಟಿಲನ್ನೇರಲು ಆತ ರಾಜಕುಮಾರಿ ಸತ್ಯವತಿಯನ್ನು ಬಳಸಿಕೊಳ್ಳುತ್ತಾನೆ. ಮಕರಕೇತು ಕಪ್ಪಕಾಣಿಕೆಗಳನ್ನು ಒಪ್ಪಿಸುತ್ತಿದ್ದ ರಾಜ ಅಭಿಷ್ಯಂತ. ಆತನ ಮಗಳೇ ಸತ್ಯವತಿ. ಆಕೆಗೆ ಮೊದಲು ಲಾಕ್ಷಿಯ ಕುರಿತು ಮನಸ್ಸು ಕೆಡಿಸುವ ವಿಚಾರವನ್ನು ಹೇಳಿದರೂ.. ಬುದ್ಧಿವಂತೆಯಾದ ಆಕೆ ಆತನ ಹಿನ್ನೆಲೆ ತಿಳಿಯಲು ಹೊರಡುತ್ತಾಳೆ. ನಂತರ, ಪ್ರತೀಪನ ಧೈರ್ಯ-ಶೌರ್ಯ ಮುಂದೆ ಸತ್ಯವತಿಯ ಅನುರಾಗಕ್ಕೂ ಕಾರಣವಾಗಿ ಸ್ವಯಂವರದಲ್ಲಿ ಆತನನ್ನೇ ವರಿಸುತ್ತಾಳೆ. ಆದರೆ, ಆ ರಾಜ್ಯದ ರಾಜನಾಗಲು ಆಕೆಯ ತಮ್ಮ ಅಡ್ಡಿಯಾಗಿದ್ದ. ಯಾರಿಗೂ ತಿಳಿಯದಂತೆ ಸುಧನ್ಮನ ಕೊಲೆಯನ್ನು ಮಾಡಿಸಿದ ಪ್ರತೀಪ ರಾಜ್ಯದ ಚಕ್ರವರ್ತಿಯಾದ. ಮುಂದೆ, ಲಾಕ್ಷಿಯನ್ನು ತನ್ನ ದಾಸಿಯರೊಬ್ಬಳನ್ನಾಗಿಸಿಕೊಂಡ.
ಅಶ್ವಮೇಧ ಮಾಡುವ ಮಹತ್ವಾಕಾಂಕ್ಷೆಯಿಂದ ಹೊರಟಾಗ ಆತನಿಗೆ ಸವಾಲಾದ ಹಂಸದ್ವಾರ ನಗರದ ರಾಣಿ ಶ್ಲಾಘ್ಯದೇವಿಗೆ ಸಿಕ್ಕಿದ್ದ ನಿಗೂಢ ಸಂಪತ್ತು ಹಾಗೂ ಆಕೆಯಲ್ಲಿ ಆಕೆಯ ಕೆಚ್ಚು ಆತನಲ್ಲಿ ಮತ್ಸರದ ಭಾವ ಉಂಟು ಮಾಡಿತ್ತು. ನಂತರ ಪರಿಸ್ಥಿತಿಯನ್ನು ತನಗೆ ಅನುಕೂಲವಾಗುವಂತೆ ಸೃಷ್ಟಿಸಿಕೊಂಡು, ಆಕೆಯನ್ನು ನಿಗೂಢವಾಗಿ ವಿವಾಹವಾಗುತ್ತಾನೆ. ಹಾಗೆಂದು ಶ್ಲಾಘ್ಯದೇವಿ ಎಂದಿಗೂ ಈತನ ಹಿಡಿತಕ್ಕೆ ಸಿಕ್ಕವಳಲ್ಲ. ತಪ್ಪು ಮಾಡಿದ ತನ್ನ ಗಂಡನನ್ನೇ ವಧಿಸಿ, ವಿಧವೆಯಾಗಿ ರಾಜ್ಯದ ಪಟ್ಟ ಹಿಡಿದಿದ್ದವಳು ಮಗಳಿಗೆ ಮೊದಲ ಆದ್ಯತೆ ನೀಡುವುದು ಹಾಗೂ ಮುಂದೆ ಅವಳಿಗೆ ಪಟ್ಟ ಕಟ್ಟುವುದು ಕೂಡಾ ನಡೆಯುತ್ತದೆ.
ಮದದಿಂದ ಉನ್ಮಥನಾಗಿ ಗಂಧರ್ವ ನಾಡಿನ ಒಬ್ಬನನ್ನು ಕೆಣಕಿ ಪಣವಾಗಿ ಹೆಣ್ಣನ್ನೇ ಇಟ್ಟು ಸೋತ ಆತನನ್ನು ವಧಿಸಿ ಆಕೆಯನ್ನು ತನ್ನ ಆಸ್ಥಾನಕ್ಕೆ ಎಳೆತಂದು ದಿಗ್ವಿಜಯದ ಕಿರೀಟವನ್ನೀಸಿಕೊಳ್ಳುತ್ತಾನೆ ಆಕೆ ಕಾಂತಲತೆ.
ಇದಿಷ್ಟು ಆತನ ಬದುಕಿನ ಏರುಗತಿಗಳಾದರೂ.. ಆತನ ಮೋಹ, ಕುತ್ಸಿತ ಬುದ್ಧಿ ಹಾಗೂ ಅತಿ ಬುದ್ಧಿವಂತಿಕೆಯ ನಡೆಗಳು ಆತನನ್ನು ನನ್ನ ಪಾಲಿಗಂತೂ ನಾಯಕನನ್ನಾಗಿಸಲಿಲ್ಲ. ಯುದ್ಧ ಹಾಗೂ ಪ್ರೇಮದಲ್ಲಿ ಎಲ್ಲವೂ ಸರಿ ಎಂಬ ಮಾತಿದ್ದರೂ.. ಅದಕ್ಕೂ ಮೀರಿದ ಮನುಷ್ಯತ್ವದಿಂದ ಕೆಲವರು ಇಷ್ಟವಾಗುತ್ತಾರೆ. "ಏರಿದವನು ಎಂದಿಗೂ ಇಳಿಯಲೇಬೇಕು". ಮುಂದೆ ಆತನ ಅವನತಿ ಶುರುವಾಗುತ್ತದೆ.
ಲಾಕ್ಷಿಯ ಕುತಂತ್ರದಿಂದ ಕಾಂತಲತೆ ಮುನಿಗಳ ಎದುರಿಗೆ ನಡೆದುಕೊಂಡ ರೀತಿಯಿಂದ ಕೌತ್ಸಮುನಿಯ ಕೋಪಕ್ಕೆ ಗುರಿಯಾಗುತ್ತಾನೆ. ಅಷ್ಟೇ ಅಲ್ಲದೆ.. ಮುನಿಯನ್ನು ಒದ್ದು ತನ್ನ ಅಹಂಕಾರವನ್ನು ಪ್ರದರ್ಶಿಸಿ, ಶಾಪಕ್ಕೂ ಗುರಿಯಾಗುತ್ತಾನೆ. ಆ ಶಾಪವೇನು ?
ಅಷ್ಟರಲ್ಲಾಗಲೇ ಮತ್ತೆ ಪ್ರಮದ್ವರೆ ದೊರೆತು, ಉತ್ಕಲೇ5 ಹುಟ್ಟಿ ಆಕೆ ದೂರಾಗಿರುವ ಸಂಗತಿ ಜರುಗಿರುತ್ತದೆ. ಸತ್ಯವತಿ ಮುಖ್ಯವಾಗಿ ರಾಜ್ಯದ ಚುಕ್ಕಾಣಿ ಹಿಡಿಯುತ್ತಾಳೆ. ಸತ್ಯವತಿಯ ಮಗಳು ಸುಗುಣೆಗೂ ಅಪ್ಪನಲ್ಲಾಗಲೇ ತಿರಸ್ಕಾರ ಹುಟ್ಟಿಯಾಗಿರುತ್ತದೆ. ಕಾಂತಲತೆಯ ಮೋಹ ಇಳಿದಿರುತ್ತದೆ. ಶ್ಲಾಘ್ಯದೇವಿಗೆ ಹುಟ್ಟಿದ ಮಗ ನಿಯೋಗ ಪದ್ಧತಿಯಿಂದ ಹುಟ್ಟಿರುವುದಿಲ್ಲ. ಹಾಗಾಗಿ, ಆ ಮಗು ವೃಷನಿಗೆ ಪಟ್ಟ ದೊರಕುವುದಿಲ್ಲ. ಇದ್ದಿದ್ದರಲ್ಲಿ ಸತ್ಯವತಿಯ ಮಗ ಜಯಂತನಿಗೆ ಅಪ್ಪನ ಕುರಿತು ಕೊಂಚ ಒಳ್ಳೆಯ ಭಾವ.
ಲಾಕ್ಷಿಯನ್ನು ಕುತಂತ್ರದಿಂದ ಸೆರೆಗೆ ತಳ್ಳಿಯಾಗಿರುತ್ತದೆ. ನಂತರ, ಸತ್ಯವತಿ ಆಕೆಯನ್ನು ಬಿಡುಗಡೆ ಮಾಡುತ್ತಾಳೆ. ಲಾಕ್ಷಿಯ ಕಣ್ಮರೆ, ಅಷ್ಟು ಮೆರೆದಿದ್ದ ಪ್ರದೀಪನಿಗೆ ಅರಮನೆಯ ಬಂಧನ ಇವೆಲ್ಲವೂ ಮನಸ್ಸಿಗೆ ಬಂದು ನಂತರ ಆತ ಎಲ್ಲದರಿಂದ ವಿಮುಖನಾಗಿ, ವಿರಾಗಿಯಾಗಿ ಅರಮನೆಯಿಂದ ಹೊರಡುತ್ತಾನೆ. ಆದರೆ, ಆತ ಸಂಪೂರ್ಣ ವಿರಾಗಿಯೂ ಆಗುವುದಿಲ್ಲ. ವಿರಾಗಿಯಾಗಿ ಹೊರಡುವ ಆ ಪಯಣದಲ್ಲಿ ನಡೆಯುವ ಘಟನೆಗಳು ಹಾಗೂ ನಂತರ ಸಿಕ್ಕ ಗುರುಗಳು ಆತನ ಪರಿಪಕ್ವತೆಯನ್ನು ಆತನಿಗೆ ಕನ್ನಡಿ ಹಿಡಿಯುವಂತೆ ಮಾಡುತ್ತಾರೆ. ಆತ ಮತ್ತೆ ಗೃಹಸ್ಥ ಬದುಕಿನತ್ತ ನಡೆಯುತ್ತಾನೆ. ಹಾಗೆ ಕಾರಣವಾಗುವಂತೆ ಮಾಡುವ ಘಟನೆಗಳೇನು ಓದಿ ನೋಡಿ.
ಕಳೆದುಕೊಂಡಂತಿರುವ ಸಂಬಂಧಗಳು ಆತನಿಗೆ ಮತ್ತೆ ಎದುರಾಗುತ್ತವೆ. ಹಾಗಾದಾಗ ಮೊದಲಿನ ಪ್ರತೀಪನಿಗೂ ಈಗಿನ ಪ್ರತೀಪನಿಗೂ ಇರುವ ವ್ಯತ್ಯಾಸಗಳ ಅರಿವು ಮೂಡುತ್ತದೆ. ಇಲ್ಲಿನ ಸ್ತ್ರೀ ಪಾತ್ರಗಳ ಕುರಿತು ಹೆಚ್ಚಿನ ಗೌರವ ಮೂಡುತ್ತದೆ. ಆತನಲ್ಲಿ ಮೋಹ, ಲೋಭ, ಮದ, ಮತ್ಸರ, ಕಾಮ, ಕ್ರೋಧಗಳನ್ನು ಹುಟ್ಟಿಸುವ ಹೆಣ್ಣುಗಳಲ್ಲಿ ಈ ಗುಣಗಳು ಕಂಡದ್ದಲ್ಲ. ಈ ಸ್ತ್ರೀ ಪಾತ್ರಗಳು ಅವುಗಳ ಪ್ರತಿನಿಧಿಗಳೂ ಅಲ್ಲ. ಬದಲಾಗಿ, ಆ ಪಾತ್ರಗಳ ಪ್ರಭಾವದಿಂದ ಪ್ರತೀಪನಲ್ಲಿ ಹುಟ್ಟಿದ ಗುಣಗಳು ಅವು.
ಸುಮೇರುವಿನ ಪಾತ್ರ ಬಹಳ ಮೇರು ಪಾತ್ರವೆನಿಸಿತು. ಆತ ಬಡತನದ ಅಥವಾ ಮಧ್ಯಮ ವರ್ಗದ ಕುಟುಂಬದ ರಾಯಭಾರಿಯಾಗಿ ರಾಯಭಾರಿಯಂತಿದ್ದಾನೆ. ಪ್ರತೀಪನು ಎಷ್ಟೋ ಬಾರಿ ಮರೆಯಲ್ಲಿ ನಿಂತು ಆ ಕುಟುಂಬದ ಸಂತಸವನ್ನು ನೋಡಿ ಸಂತಸಪಟ್ಟದ್ದಿದೆ. ಪ್ರತೀಪನಿಗಿಂತ ನನಗೆ ಸುಮೇರುವೇ ನಾಯಕನಂತೆನಿಸಿದನು. ಈ ಕುಟುಂಬದ ಪಾತ್ರಗಳು ಹೆಚ್ಚು ಬಾರಿ ಉಲ್ಲೇಖವಾಗಿಲ್ಲ ಹಾಗೂ ಕಥೆಯ ಹೆಚ್ಚಿನಂಶದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ, ತೆರೆಮರೆಯಂತಿರುವ ಇವು ಬೀರುವ ಪ್ರಭಾವ ಅತ್ಯಂತ ಪ್ರಭಾವಶಾಲಿಯಾದದ್ದು.
1. ಪೌರಾಣಿಕ ಕಾದಂಬರಿಯ ಪರಿಸರ ಎಂದರೆ ಆಶ್ರಮ, ಗಂಧರ್ವ ಲೋಕ, ಕಾಡು, ಗುರುಕುಲ, ವಿದ್ಯಾಭ್ಯಾಸ, ಯುದ್ಧ ಎಲ್ಲದರ ಚಿತ್ರಣವೂ ಸಮರ್ಥವಾಗಿ ಮೂಡಿಬಂದಿದೆ.
2. ಇಲ್ಲಿನ ರಾಜರ ಬಹುಪತ್ನಿತ್ವ ಕಾದಂಬರಿಯ ರಾಜರುಗಳಲ್ಲಿ ಕಂಡುಬರುತ್ತದೆ. ಗಂಧರ್ವ ಲೋಕದಲ್ಲಿ ಬಹುಪತ್ನಿತ್ವ, ಬಹುಪತಿತ್ವ ಹಾಗೂ ಗುಂಪಿನಲ್ಲಿ ಎಲ್ಲರ ಮಕ್ಕಳನ್ನೂ ಎಲ್ಲರೂ ಸಮಾನವಾಗಿ ನೋಡುವ ಚಿತ್ರಣವಿದೆ.
3. ಭೂಮಿಯ ಮೇಲಿನ ರಾಜರು ಹಾಗೂ ಗಂಧರ್ವಲೋಕದ ಸಮಾಗಮ ಮಾಯೆಯಲ್ಲಿ ನಡೆದು ವಾಸ್ತವದ ಅರಿವಾದಾಗ ಪರಿತಪಿಸುವಂತಿದ್ದರೂ.. ಅಲ್ಲಿ ಮಾನವ ಶಿಶುವಿನ ಜನನವಾಗಿರುತ್ತದೆ. ಅದು ತಂದೆ ಅಥವಾ ತಾಯಿ ಇಬ್ಬರ ಜವಾಬ್ದಾರಿಯೂ ಆಗದೇ ಹೋದದ್ದು ವಿಪರ್ಯಾಸ.
4. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸಲು ಗುರುವಿನ ಪಾತ್ರ ಎಷ್ಟು ಮುಖ್ಯವೋ.. ತಂದೆ-ತಾಯಿಯ ಪಾತ್ರವೂ ಮುಖ್ಯವಾಗುತ್ತದೆ. ಪ್ರತೀಪನ ಗುಣ-ಸ್ವಭಾವ ಅದನ್ನು ತೋರುತ್ತದೆ. ಗಂಧರ್ವ ಲೋಕದಲ್ಲಿ ಸೌಂದರ್ಯ ಮುಖ್ಯವಾಗುತ್ತದೆ. ಪ್ರತೀಪನ ನಡೆಯಲ್ಲಿ ಅಂದರೆ ಕೊಳದಲ್ಲಿ ಮುಖ ನೋಡಿಕೊಳ್ಳುವುದು, ಕನ್ನಡಿಗಳ ಸ್ವಚ್ಛತೆಗೆ ಆದ್ಯತೆ ಎಲ್ಲವೂ ಅದನ್ನು ಸೂಚ್ಯವಾಗಿ ತೋರುತ್ತದೆ.
5. ವಿವಿಧ ವಿವಾಹ ಪದ್ದತಿಗಳು ಅಂದರೆ ಸ್ವಯಂವರ, ಗಾಂಧರ್ವ ವಿವಾಹ, ರಾಕ್ಷಸ ವಿವಾಹಗಳು ಕಾಣಸಿಗುತ್ತವೆ.
6. ಗಂಧರ್ವ ಕನ್ಯೆಯ ಮಗನಾಗಿದ್ದರೂ.. ಆತನಿಗೆ ಹೆಚ್ಚಿನ ಶಕ್ತಿಗಳೇನನ್ನೂ ಧಾರೆ ಎರೆದಿಲ್ಲ. ಬದಲಾಗಿ ಎಲ್ಲವನ್ನೂ ಆತ ಸ್ವಯಂ ಶಕ್ತಿಯಿಂದ ಗಳಿಸಿಕೊಂಡದ್ದು.
7. ಸಂತಾನದ ವಿಚಾರದಲ್ಲಿ ನಿಯೋಗದ ರೂಢಿ ತಪ್ಪಲ್ಲವೆನ್ನುತ್ತಾರೆ. ಶ್ಲಾಘ್ಯದೇವಿ ವೃಷನಿಗೆ ಜನ್ಮ ನೀಡುವುದನ್ನು ನಿಯೋಗವೆಂದು ಬಿಂಬಿಸುವ ಪ್ರಯತ್ನ ಮಾಡಿದರೂ ಅದು ಸಫಲವಾಗುವುದಿಲ್ಲ. ತಾಯಿಯ ಇಚ್ಛೆಯಂತೆ ಗುಟ್ಟಾಗಿ ಪ್ರತೀಪನನ್ನು ವರಿಸುತ್ತಾಳೆ. ರಾಣಿಯ ಮೂಲಕ ವಿಧವಾ ಮರುವಿವಾಹದ ವಿಭಿನ್ನ ಕಲ್ಪನೆ ಕಾಣಸಿಗುತ್ತದೆ.
8. ಶ್ಲಾಘ್ಯಯದೇವಿಯ ಸಾಮ್ರಾಜ್ಯ ಪ್ರಮೀಳಾ ಆಡಳಿತ. ನಂತರ, ಮಗಳಿಗೆ ಪಟ್ಟ ಕಟ್ಟಿ ಕಾಳಿಕಾ ದೇವಿಯಂತೆ ಹೆಣ್ಣು ಎನ್ನುವ ಮೂಲಕ ಹೆಣ್ಣನ್ನು ದೈವತ್ವಕ್ಕೇರಿಸುವ ನಡೆಯೂ ಗೋಚರವಾಗುತ್ತದೆ.
9. ನಿಗೂಢ ಸಂಪತ್ತನ್ನು ದೊರೆಕಿಸಿಕೊಳ್ಳುವ, ನಿಧಿಯ ಕುರಿತು ಹೇಳುವಾಗ ಕಣ್ಣಿಗೆ ಪಟ್ಟಿ ಕಟ್ಟಿ ಕರೆದೊಯ್ಯುವ, ಸುಳಿವು ನೀಡುವ, ಸರ್ಪದ ಉಲ್ಲೇಖದ ಸುಳಿವು ಎಲ್ಲವೂ ನಿಧಿಯ ರೂಪುರೇಷೆಯನ್ನು ಬೇರೆಲ್ಲಾ ಪರಿಕಲ್ಪನೆಯಂತೆಯೇ ತೋರಿದೆ.
10. ಋಷಿಗೂ.. ಆಚಾರ್ಯರಿಗೂ ಇರುವ ಅಂತರವನ್ನು ಫಲ್ಗುಣಾಚಾರ್ಯರು ಮಧುವಂತಿಯ ಭವನಕ್ಕೆ ಹೋಗುವ ಮೂಲಕ ಮೋಹವನ್ನು ಬಿಟ್ಟವರಲ್ಲ ಎಂಬುದನ್ನು ಸೂಚಿಸುತ್ತಾರೆ.
ಮನುಷ್ಯ ತನ್ನ ಬದುಕಿನಲ್ಲಿ ಯಾವುದನ್ನು ಎಷ್ಟು ಮಿತಿಯಲ್ಲಿಟ್ಟುಕೊಳ್ಳಬೇಕು ಹಾಗೂ ಹೇಗೆ ವರ್ತಿಸಬೇಕು ಎಂದು ಪಾಠ ಕಲಿಸುವಂತಿದೆ ಈ ಕಾದಂಬರಿ.
- ವಿಭಾ ವಿಶ್ವನಾಥ್
"ಸಾಹಿತಿ ಶರೀಫ ಗಂಗಪ್ಪ ಚಿಗಳ್ಳಿ ಇವರು ಈ ಪುಸ್ತಕದಲ್ಲಿ 15 ಲೇಖನ ಬರೆದಿದ್ದಾರೆ. ಬಹುತೇಕ ಕನ್ನಡಿಗರು ಕೇಳಬಲ್ಲ, ನ...
“ನನ್ನ ಆತ್ಮವೃತ್ತಾಂತದ ಈ ತುಣುಕುಗಳು ಡಾ. ಎ ಓ ನರಸಿಂಹಮೂರ್ತಿಯವರ ಪುಸ್ತಕದೊಡನೆ ತಳುಕು ಹಾಕಿಕೊಳ್ಳುತ್ತಿರುವುದು...
“ವ್ಯಂಗ್ಯ-ಕುಹಕಗಳ ಸೋಂಕಿಲ್ಲದಂತೆ ತಾವು ನಡೆದುಬಂದ ಹಾದಿಯಲ್ಲಿ ದಾರಿದೀಪಗಳಂತಿದ್ದ ಗುರು-ಹಿರಿಯರಿಗೆ ನುಡಿಗೌರವ ಸ...
©2025 Book Brahma Private Limited.